Homeಅಂಕಣಗಳುಸತ್ಯವ ನುಡಿಯುವ ದಿಟ್ಟತೆಗೆ ಪ್ರತೀಕವಾದ ಗೌರಿ ಲಂಕೇಶ್

ಸತ್ಯವ ನುಡಿಯುವ ದಿಟ್ಟತೆಗೆ ಪ್ರತೀಕವಾದ ಗೌರಿ ಲಂಕೇಶ್

- Advertisement -
- Advertisement -

| ವಾಸು.ಎಚ್.ವಿ |

ಒಂದುವೇಳೆ ಅಂದು ಪತ್ರಿಕೆಯ ತಯಾರಿಯ ಕೆಲಸ ಇರದೇ ಇದ್ದಿದ್ದರೆ, ನೋಟು ರದ್ದತಿಯ ಒಂದು ವರ್ಷದ ಪರಿಣಾಮಗಳ ಕುರಿತಂತೆ ಕಾರ್ಯಕ್ರಮ ರೂಪಿಸಲು ನಾವು ಬಸವನಗುಡಿಯ ಕಚೇರಿಯಲ್ಲೇ ಸಭೆ ಸೇರಬೇಕಾಗಿತ್ತು. ಮೇಡಂ (ಗೌರಿ ಲಂಕೇಶ್) ಹಿಂದಿನ ದಿನವೇ ‘ಮರೀ, ನಾಳೆ ಆಫೀಸಿನಲ್ಲಿ ಆಗಲ್ಲ, ಗುರುವಾರದ ನಂತರವಾದರೆ ಇಲ್ಲೇ ಮಾಡಿಕೊಳ್ಳಬಹುದು’ ಎಂದಿದ್ದರು. ಅಂದಿನ ಸಭೆಯಲ್ಲಿ ದಕ್ಷಿಣ ಬೆಂಗಳೂರಿನ ಕೆಲವರು ಇರಲೇಬೇಕಿದ್ದುದರಿಂದ, ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಸೇರಿಕೊಂಡಿದ್ದೆವು. ಸಭೆ ಮುಗಿಸಿ ಹೊರಡುವ ಹೊತ್ತಿಗೆ ಮೇಡಂ ಹತ್ಯೆಯ ಷಾಕಿಂಗ್ ಸುದ್ದಿ ಗೊತ್ತಾಯಿತು.

ಭಾರೀ ದುಃಖ ಹಾಗೂ ಆತಂಕದಿಂದ ದೊಡ್ಡಿಪಾಳ್ಯ ನರಸಿಂಹಮೂರ್ತಿ ಮತ್ತು ನಾನು ಮೇಡಂ ಮನೆಯ ಕಡೆಗೆ ಹೊರಟೆವು. ನಮ್ಮ ಮುಂದಿನ ಸಾರ್ವಜನಿಕ ಕೆಲಸದ ಜವಾಬ್ದಾರಿಯ ಪ್ರಯಾಣವೂ ಇನ್ನು ಮುಂದೆ ಬೇರೆಯಾಗುತ್ತದೆಂಬ ಕಲ್ಪನೆ ಆಗ ನಮ್ಮಿಬ್ಬರಿಗೂ ಇರಲಿಲ್ಲ. ರಾಜರಾಜೇಶ್ವರಿ ನಗರದ ಮನೆಯ ಮುಂದೆ ಕಳೆದ ಕೆಲವು ಗಂಟೆಗಳಲ್ಲೇ ಮುಂದಿನ ಜವಾಬ್ದಾರಿ ಅರ್ಥವಾಗತೊಡಗಿತು. ಕಚೇರಿಯ ಸಿಬ್ಬಂದಿ ಅಲ್ಲಿಗೆ ಬಂದು ತಲುಪಿದಾಗ ಮರುದಿನ ಪತ್ರಿಕೆ ಮುದ್ರಣಕ್ಕೆ ಹೋಗಬೇಕೆಂಬುದು ನೆನಪಾಯಿತು.

ಅಲ್ಲಿಂದ ಆಚೆಗೆ ಹಲವು ಬೆಳವಣಿಗೆಗಳು ನಡೆದವು. ಅದುವರೆಗಿನ ನಮ್ಮ ಇತರ ಜವಾಬ್ದಾರಿಗಳಿಂದ ಸ್ವಲ್ಪ ಸ್ವಲ್ಪ ಬಿಡಿಸಿಕೊಂಡು, ಇದೀಗ ಪತ್ರಿಕೆಯ ನೊಗಕ್ಕೆ ಹೆಗಲು ಕೊಡುವ ಕೆಲಸವನ್ನು ಪತ್ರಿಕೆಯ ಹಿಂದಿನ ಸಿಬ್ಬಂದಿಯ ಜೊತೆಗೆ ನಾವೂ ಮಾಡುತ್ತಿದ್ದೇವೆ.

ಇದು ಹಿಂದಿನ ಗೌರಿ ಲಂಕೇಶ್ ಪತ್ರಿಕೆಯ ಯಥಾರೂಪವಲ್ಲ. ಸ್ವತಃ ಮೇಡಂ ಈಗ ಭೌತಿಕವಾಗಿ ಇಲ್ಲ. ಅವರ ಬದಲಿಗೆ ರಾಜ್ಯ ಮತ್ತು ದೇಶಗಳ ಗಡಿ ದಾಟಿ ಸತ್ಯ ನುಡಿಯುವ ದಿಟ್ಟತೆಗೆ ಪ್ರತೀಕವಾಗಿರುವ ಗೌರಿಯವರ ನೆನಪು ಹಾಗೂ ಬಲಿದಾನದ ಔನ್ನತ್ಯ ಇಲ್ಲೇ ನಮ್ಮೊಂದಿಗಿದೆ.

ಸೆಪ್ಟೆಂಬರ್ 12ರಂದು ನಡೆದ ಪ್ರತಿರೋಧ ಸಮಾವೇಶದ ಹೊತ್ತಿಗೇ ಅದು ಸ್ಪಷ್ಟವಾಗತೊಡಗಿತ್ತು. ಗೌರಿಯವರ ರೇಖಾಚಿತ್ರವೊಂದನ್ನು ಕಲಾವಿದ ವಿಜಯ್ ಮತ್ತು ಗೆಳೆಯರು ತಯಾರಿಸಿದ್ದರು. ಆ ಚಿತ್ರ ಎಲ್ಲೆಡೆ ಕಾಣತೊಡಗಿತ್ತು. ಬ್ಯಾನರ್, ಎದೆಬಿಲ್ಲೆ, ತಲೆಪಟ್ಟಿ ಹೀಗೆ. ಸಾವಿರಗಟ್ಟಲೇ ಸಂಖ್ಯೆಯಲ್ಲಿ ಬಂದವರೆಲ್ಲರ ಹೃದಯದಲ್ಲಿ, ಮನಸ್ಸಿನಲ್ಲಿ ಮಾತ್ರವಲ್ಲದೇ ಭೌತಿಕವಾಗಿಯೂ ಗೌರಿಯವರ ಫೋಟೋ ಎದ್ದು ಕಾಣುತ್ತಿತ್ತು. ಆ ದಿನದ ಮಟ್ಟಿಗಂತೂ ಎಲ್ಲೆಲ್ಲೂ ಕಾಣುವ ಚೆಗೆವಾರನ ಫೋಟೋದಂತೆ ಗೌರಿಯವರ ಚಿತ್ರ ಕಾಣುತ್ತಿತ್ತು. ಅಲ್ಲಿಂದಾಚೆಗೆ ದೇಶದ ಮತ್ತು ಪ್ರಪಂಚದ ನೂರಾರು ಕಡೆ ಗೌರಿಯವರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆದವು. ಎಲ್ಲೆಡೆ ಬೆಳೆಯುತ್ತಿದ್ದ ಬಲಪಂಥೀಯ ದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದ ಪ್ರಜಾತಂತ್ರವಾದಿಗಳಿಗೆ ಗೌರಿ ತಮ್ಮ ಪ್ರತಿನಿಧಿ ಎನಿಸಿತು.

ಭಾರತವೆಂಬ ದೇಶದ ಕಲ್ಪನೆಗೇ ಅಪಾಯ ತಂದೊಡ್ಡಿದ್ದವರು ಸರ್ಕಾರ ಮತ್ತು ಸಮಾಜದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಬದಲಾಗುತ್ತಿದ್ದ ಕಾಲಘಟ್ಟವದು. ಅಂತಹ ಹೊತ್ತಿನಲ್ಲಿ ಸಾಮಾನ್ಯ ಜನರನ್ನೆಲ್ಲಾ ತಲುಪಬಹುದಾದ ಮಾಧ್ಯಮ, ಕಥನ, ಭಾಷೆ ಹಾಗೂ ಭಾವ ಏನಿರಬೇಕು ಎಂದು ಯೋಚಿಸುವ ನಿಟ್ಟಿನಲ್ಲಿ ಗೌರಿಯವರ ಪ್ರಯತ್ನ ಇರಲಿಲ್ಲ. ಅವರಷ್ಟೇ ಅಲ್ಲದೇ, ದೇಶದ ಬಹುತೇಕ ಪ್ರಜಾತಂತ್ರವಾದಿಗಳು ಅಂತಹ ಹುಡುಕಾಟಕ್ಕೆ ತೊಡಗಿರಲಿಲ್ಲ. ಭಾರತದ ಪ್ರಜಾತಂತ್ರ ವಿಸ್ತಾರಗೊಂಡ 60, 70, 80ರ ದಶಕದ ಪರಿಭಾಷೆಯೇ ಚಾಲ್ತಿಯಲ್ಲಿತ್ತು. ಆದರೆ, ಎಷ್ಟೋ ‘ದೊಡ್ಡವರು’ ಪ್ರತಿರೋಧದ ಗಟ್ಟಿ ದನಿಯನ್ನೂ ಮೊಳಗಿಸದೇ ಇದ್ದಾಗ ಗೌರಿ ಲಂಕೇಶ್ ಒಂದಿನಿತೂ ಹಿಂಜರಿಯಲಿಲ್ಲ. ಅದಕ್ಕಾಗಿ ಅವರೆಂದಿಗೂ ನಮಗೆ ಮಾದರಿಯಾಗಿ ನಿಲ್ಲುತ್ತಾರೆ. ಎರಡು ವರ್ಷದ ನಂತರವೂ ನಮ್ಮೆದೆಯೊಳಗೆ ಪ್ರತಿರೋಧದ ಪ್ರತೀಕ ಗೌರಿಯವರು ಮಾಸದೇ ಉಳಿದಿರುವುದೇ ಅದಕ್ಕೆ ಸಾಕ್ಷಿ.

‘ನಿನ್ನನ್ನು ಕೊಲ್ಲಬೇಕು’ ಎಂದು ಫೇಸ್‍ಬುಕ್‍ನಲ್ಲಿ ಬರೆದ ಯುವಕನಿಗೆ, ‘ಮಗೂ, ನನ್ನನ್ನು ಕೊಲ್ಲುವ ಮಾತನಾಡುತ್ತಿರುವ ನೀನೂ ನನ್ನ ಮಗನೇ. ಆದರೆ, ನಿನಗೆ ನಿನ್ನ ಚಿಂತನೆ ದೇಶವನ್ನು ಎಲ್ಲಿಗೆ ಕರೆದುಕೊಂಡು ಹೋಗಬಹುದು ಎಂಬ ವಾಸ್ತವದ ಅರಿವಿಲ್ಲ’ ಎಂದು ಪ್ರೀತಿಯಿಂದ ಬರೆದಿದ್ದ ಗೌರಿಯವರ ನಡೆ ಬಹುಶಃ ನಮಗೆ ದಾರಿ ತೋರಬಹುದು.
ಪತ್ರಿಕಾ ಸಂಸ್ಥೆಯ ಆರ್ಥಿಕ ಸ್ಥಿತಿ ಅತ್ಯಂತ ಸುಸ್ಥಿತಿಯಲ್ಲಿ ಎಂದೂ ಇಲ್ಲದಿದ್ದರೂ, ನಿರಂತರ ಶ್ರಮ ಹಾಗೂ ನೈತಿಕವಾದ ರೀತಿಯಲ್ಲಿಯೇ ಸಂಪನ್ಮೂಲ ಹೊಂದಿಸುವ ಒದ್ದಾಟದಲ್ಲೇ ಸಂಸ್ಥೆಯನ್ನು ನಡೆಸುತ್ತಾ ಬಂದ ಅವರ ನಿಲುವು ನಮ್ಮನ್ನು ಎಚ್ಚರಿಸುತ್ತಿರುತ್ತದೆ. ಜೂನ್ 2016ರಲ್ಲಿ ಮೇಡಂ ಇದ್ದಾಗಲೇ ತೀರ್ಮಾನಿಸಿದಂತೆ, ಪತ್ರಿಕೆಯೊಂದಿಗೆ ಇಂದಿನ ಅಗತ್ಯಕ್ಕೆ ತಕ್ಕಂತೆ ವೆಬ್ ಮತ್ತು ಇನ್ನಿತರ ಸಾಧ್ಯತೆಗಳಿಗೆ ಅಪ್‍ಡೇಟ್ ಆಗುವ ನಿಟ್ಟಿನಲ್ಲಿ ನಾವು ಸತತವಾಗಿ ಮುನ್ನಡೆಯುತ್ತಿರಬೇಕಿದೆ.

ನಿಂದಿಸುವ, ಅಪಪ್ರಚಾರಗಳನ್ನು ಮಾಡುವ, ದ್ವೇಷಿಸುವ ಜನರು, ಹಿತಶತ್ರುಗಳು ಅಂದೂ ಇದ್ದರು; ಮುಂದೆಯೂ ಇರುತ್ತಾರೆ. ಆದರೆ, ಅದು ಉನ್ನತ ಆಶಯದತ್ತ ಸಾಗಬೇಕಾದ ನಮ್ಮ ಸಂಕಲ್ಪವನ್ನು ಅಲುಗಾಡಿಸಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಬದಲಾದ ಕಾಲಘಟ್ಟದಲ್ಲಿ ಬದಲಾಗಬೇಕಾದ ಮಾಧ್ಯಮದ ಸ್ವರೂಪ, ಪರಿಭಾಷೆಗಳು ಮತ್ತು ಕಥನದ ಕುರಿತು ಗಂಭೀರವಾಗಿ ಆಲೋಚಿಸಿ ಆ ನಿಟ್ಟಿನಲ್ಲಿ ಮುಂದಡಿಯಿಡಬೇಕಿದೆ. ಆ ದಿಕ್ಕಿನಲ್ಲಿ ನಮ್ಮಲ್ಲಿರುವ ಆಲೋಚನೆಗಳನ್ನು ನಿಮ್ಮೆಲ್ಲರಲ್ಲಿ ಹಂಚಿಕೊಳ್ಳುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಮಾಲೋಚನಾ ಸಭೆಗಳು, ಚರ್ಚಾಗೋಷ್ಠಿಗಳನ್ನು ಆಯೋಜಿಸಲು ಗೆಳೆಯರು ಉತ್ಸುಕತೆ ತೋರಿದ್ದಾರೆ. ಖುದ್ದಾಗಿ ಇಲ್ಲವೇ ಪತ್ರದ ಮುಖಾಂತರ ನಿಮ್ಮೆಲ್ಲರ ಜೊತೆ ನಡೆಯುವ ಸಂವಾದದಲ್ಲಿ, ನಿಮ್ಮ ಆಲೋಚನೆಗಳನ್ನೂ ಒಳಗೊಂಡು ನಮ್ಮ ಕರ್ತವ್ಯವನ್ನು ನಿಭಾಯಿಸುತ್ತೇವೆಂಬ ಭರವಸೆ ನೀಡಬಯಸುತ್ತೇವೆ.

ಮೇಡಂ ಇಲ್ಲವಾದ ಎರಡು ವರ್ಷದ ಈ ದಿನದಂದು ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿರುವುದನ್ನು ಅರ್ಥ ಮಾಡಿಕೊಂಡಿದ್ದೇವೆಂದು ತಂಡದ ಪರವಾಗಿ ಹೇಳಬಯಸುತ್ತೇನೆ. ನಾವು ನೀವೆಲ್ಲರೂ ಜೊತೆಗೂಡಿ ಸಾಗಬೇಕಾದ ದಾರಿ ಇದು. ಜೊತೆಗೂಡಿದರೆ ಮಾತ್ರ ಸಾಗುವ ದಾರಿಯೂ ಹೌದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಿಜವಾಗಿ ಆ ಕೆಲಸವನ್ನು ನಾವು ನಮ್ಮ ನೀವುಗಳು ಕೂಡಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಮಾನಮನಸ್ಕರ ಸಮಾನತೆಯ ಸಭೆ ಮಾಡಬೇಕಿರುವದು.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಆಡಳಿತದ 10 ವರ್ಷಗಳಲ್ಲಿ ‘ED’ ದಾಳಿಗಳಲ್ಲಿ ಹೆಚ್ಚಳ: ವರದಿ

0
ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಮತ್ತು, ಆಸ್ತಿಮುಟ್ಟುಗೋಲು ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬಿಜೆಪಿ ಸರಕಾರ 'ಇಡಿ' ಮತ್ತು ಸಿಬಿಐಯಂತಹ ಸರಕಾರಿ ಸಂಸ್ಥೆಗಳನ್ನು ಪ್ರತಿಪಕ್ಷಗಳ...