Homeಸಾಹಿತ್ಯ-ಸಂಸ್ಕೃತಿಸಾಹಿತಿ ಸಂದರ್ಶನಡಿಜಿಟಲ್ ಲೋಕಾಂತದಲ್ಲಿ ಕಾವ್ಯ ಮತ್ತು ಅನುಭಾವ

ಡಿಜಿಟಲ್ ಲೋಕಾಂತದಲ್ಲಿ ಕಾವ್ಯ ಮತ್ತು ಅನುಭಾವ

- Advertisement -
- Advertisement -

ಮಂಡ್ಯದಲ್ಲಿ ಕಾಮರ್ಸ್ ಓದಿದ ರಾಜೇಂದ್ರ ಪ್ರಸಾದ್, ಇಂಡಸ್ಟ್ರಿಯಲ್ ಗ್ಯಾಸಸ್ ಅಂಗಡಿಯಿಟ್ಟುಕೊಂಡಿದ್ದಾರೆ. ಕಾಲೇಜಿನಲ್ಲಿದ್ದಾಗಲೇ (2006) ಮೊದಲ ಕವನ ಸಂಕಲನ ಭೂಮಿಗಂಧ ಪ್ರಕಟವಾಗಿತ್ತು. ಆ ನಂತರದ ನಾಲ್ಕು ಕವನ ಸಂಕಲನಗಳ ನಂತರ, ಇದೀಗ ಬ್ರೆಕ್ಟ್ ನ ಪರಿಣಾಮ ಬಿಡುಗಡೆಗೆ ಸಿದ್ಧವಾಗಿದೆ. ಫೇಸ್‍ಬುಕ್ ಶುರುವಾದ ನಂತರ ತನ್ನ ಕವಿತೆಗಳನ್ನು ಅಲ್ಲಿ ಹಂಚಲು ಹಿಂಜರಿಯದ ಆರ್‍ಪಿ, ಸೋಷಿಯಲ್ ಮೀಡಿಯಾ ಶುರುವಾದ ನಂತರ ಬಹಳಷ್ಟು ಜನರ ಮೆಚ್ಚುಗೆಗೆ ಕಾರಣರಾದರು. ಕಾವ್ಯ, ಕೀಟಲೆಯ ಜೊತೆಗೆ ಬಾಯಲ್ಲಿ ನೀರೂರಿಸುವ ವಿವಿಧ ಮಾಂಸಭಕ್ಷ್ಯಗಳ ಫೋಟೋ ವಿವರಣೆಯೊಂದಿಗೆ ನಿತ್ಯವೂ ಫೇಸ್‍ಬುಕ್‍ನಲ್ಲಿ ಹಾಜರು. ಕನ್ನಡ ಸಾಹಿತ್ಯ ಲೋಕವು ಗಂಭೀರವಾಗಿ ಪರಿಗಣಿಸಬೇಕಾದ ಪ್ರಮುಖರಲ್ಲಿ ಒಬ್ಬರು.

ರಾಜೇಂದ್ರ ಪ್ರಸಾದ್ ಮತ್ತು ನಾಗೇಗೌಡ ಕೀಲಾರ

ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಅಸೋಸಿಯೇಟ್ ಪ್ರೊಫೆಸರ್ ಡಾ.ನಾಗೇಗೌಡ ಅವರು ನಾಗೇಗೌಡ ಕೀಲಾರ ಶಿವಲಿಂಗಯ್ಯ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಿಗರಿಗೆ ಬಹುಪರಿಚಿತರು. ಅಪಾರ ಓದು, ಕೂಲ್ ಆಗಿ ಸಂವಾದಿಸುವ ತಾಳ್ಮೆ ಮತ್ತು ಕಿಡಿಗೇಡಿತನಗಳಿಂದಾಗಿ ಎಲ್ಲರಿಗೂ ಅಚ್ಚುಮೆಚ್ಚು. ಇವರ ಬರಹಗಳು ಯಾರಿಗೆ ಉರಿ ತರಿಸಬಹುದೋ ಅವರನ್ನೂ ಸಂವಾದಕ್ಕೆ ಪಳಗಿಸಿಕೊಳ್ಳುವ ಕೌಶಲ್ಯಮತಿ. `ಕಠೋರ ದೇಶಭಕ್ತ ಹಿಂದೂಹುಲಿ ಕರಿಗೌಡ’ ಎಂಬ ಡಿಜಿಟಲ್ ಕಾಲದ ಕ್ಯಾತ ಇವರ ಸೃಷ್ಟಿ.
ಮಂಡ್ಯ ಮೂಲದ ಈ ಇಬ್ಬರು ಯುವ ಬರಹಗಾರರು ‘ಪತ್ರಿಕೆ’ಗಾಗಿ ನಡೆಸಿರುವ ಪರಸ್ಪರ ಸಂವಾದದ ಪೂರ್ಣ ರೂಪ ಇಲ್ಲಿದೆ.

*************************************************

1. ನಾಗೇಗೌಡ: ಜಗತ್ತನ್ನು ಪ್ರಾಮಾಣಿಕವಾಗಿ ನೋಡಿ ಗ್ರಹಿಸಬೇಕಾದರೆ `ಕಲಾವಿದ, ವಿದೂಷಕ ಮತ್ತು ಕವಿಗಳು ಜಗತ್ತನ್ನು ಹೇಗೆ ನೋಡುತ್ತಾರೆ ಅನ್ನುವುದನ್ನು ನೋಡಿ’ ಅನ್ನುವ ಒಂದು ಮಾತು ಚಾಲ್ತಿಯಲ್ಲಿದೆ. ಅಂತಹ ಏನನ್ನ ನೀವು ನಿಮ್ಮ ಕವಿತೆಗಳ ಮೂಲಕ ನೋಡುತ್ತಿರಿ?

ರಾಜೇಂದ್ರ: ಸಮಾಜವನ್ನ! `ಕಾವ್ಯ ಬರಿಯ ಆತ್ಮಸಂತೋಷಕ್ಕೆ ಹುಟ್ಟುವ ಮಾತು’ ಎಂಬುದು ಎಲ್ಲೋ ಕೆಲವರದ್ದು ಮಾತ್ರ. ಅದು ಸಮಾಜಕ್ಕಾಗಿ ಹುಟ್ಟುತ್ತದೆ. ದೇಶ-ರಾಜ್ಯ- ಪ್ರಾಂತ್ಯಗಳೆನ್ನುವ ಸಂಘಟಿತ ಸಮಾಜದಲ್ಲಿ ಕಾವ್ಯವನ್ನು ಬರಿಯ ಆತ್ಮ ಸಂತೋಷಕ್ಕೆ ಹಾಡಲಾಗುವುದಿಲ್ಲ. ಅರಿವಿಗೆ, ಪ್ರತಿಭಟನೆಗೆ, ಪ್ರತಿಸ್ಪಂದನೆಗೆ ಕೂಡ ಕಾವ್ಯ ಕೊರಳಾಗುತ್ತದೆ. ಸಂಘಟಿತ ಸಮಾಜದ ಎಲ್ಲಾ ವೃತ್ತಿ -ಪ್ರವೃತ್ತಿಗಳೂ ಸಂಪಾದನೆಯ ಮಾರ್ಗದಲ್ಲಿರುವಾಗ ಕವಿ ಮತ್ತು ಕಲಾವಿದ ಅರಿವನ್ನು ವಿಸ್ತರಿಸುವ ಕೆಲಸದಲ್ಲಿ ತೊಡಗಿರುತ್ತಾನೆ. ಅರಿವು ನಮ್ಮಲ್ಲಿ ಪ್ರಾಮಾಣಿಕತೆಯನ್ನು ಉಳಿಸುತ್ತದೆಯೆಂಬ ನಂಬುಗೆಯಿಂದಲೇ ಕವಿ-ಕಲಾವಿದನ ನೋಟವನ್ನು ಜಗತ್ತು ಪುರಸ್ಕರಿಸಲು ಸಾಧ್ಯವಾಗಿದ್ದು. ಕವಿ-ಕಲಾವಿದನ ಅಪ್ರಾಮಾಣಿಕತೆ ಸೋತ ಸಮಾಜಕ್ಕೊಂದು ನಿದರ್ಶನ.

2. ನಾಗೇಗೌಡ: `ವಿಜ್ಞಾನ’ವೂ ಮೊದಲಿಗೆ ಒಂದು `ಸೃಜನಶೀಲ ಕಲ್ಪನೆ’ಯೇ (fiction) ಆಗಿದೆ. ವಿಜ್ಞಾನಿಯೊಬ್ಬ ಪರಿಕಲ್ಪನೆಯನ್ನು ಮುಂದಿಟ್ಟು ಅದನ್ನು ಪ್ರಾಯೋಗಿಕವಾಗಿ ಸಾಬೀತು ಪಡಿಸಿದ ಮೇಲೆ ‘ಸತ್ಯ’ ಎಂದು ಒಪ್ಪಿಕೊಳ್ಳಲಾಗುತ್ತದೆ. ಮುಂದೆ ಯಾರಾದರೂ ಬಂದು ಅದನ್ನು ಪ್ರಾಯೋಗಿಕವಾಗಿ ತಪ್ಪು ಎಂದು ಮರು ಸಾಬೀತು ಪಡಿಸಿದರೆ ಅದು ಮತ್ತೆ ಸೃಜನಶೀಲ ಕಲ್ಪನೆಯಾಗಿಯೇ ಉಳಿದುಹೋಗುತ್ತದೆ. ಆದರೆ ಇದು ಒಬ್ಬ ಕವಿ, ಕಲಾವಿದನ ಕಾವ್ಯ ಮತ್ತು ಕಲೆಗೆ ಯಾಕೆ ಅನ್ವಯವಾಗುವುದಿಲ್ಲ?

ರಾಜೇಂದ್ರ: ಅನಿರೀಕ್ಷಿತವಾದ ಒಳ್ಳೆಯ ಪ್ರಶ್ನೆ. ಈ ತರದ ಅಂತರಶಿಸ್ತೀಯ ಆಲೋಚನೆಗಳೇ ನಮ್ಮಲ್ಲಿ ಕಡಿಮೆ. ನೀವು ಹೇಳಿದ ಹಾಗೆ ವಿಜ್ಞಾನ ಮತ್ತು ಸಾಹಿತ್ಯ, ಕಲೆ ಇವೆಲ್ಲವೂ ವಾಸ್ತವವನ್ನ ತಮ್ಮದೇ ಆದ ನೆಲೆಯಲ್ಲಿ ನಿವರ್ಚಿಸ್ತಾ ಬಂದಿವೆ. ಆದರೆ ವಿಜ್ಞಾನಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಸಾಹಿತ್ಯಕ್ಕೆ ಕೊಡಲಾಗಿಲ್ಲ. ನಾವು `ಸತ್ಯ’ವನ್ನು ವಿಜ್ಞಾನದಲ್ಲಿ ಕರಾರುವಕ್ಕಾಗಿ ಗುರುತಿಸಿದ ಹಾಗೆ ಸಾಹಿತ್ಯದಲ್ಲಿ ಗುರುತಿಸಲು ಪ್ರಯತ್ನಪಡಲಿಲ್ಲ. ಅಲ್ಲದೆ ಪಶ್ಚಿಮದ ಕೈಗಾರಿಕಾ ಕ್ರಾಂತಿ ನಮ್ಮನ್ನು ಯಾವ ಪರಿಯಲ್ಲಿ ಆವರಿಸಿಕೊಂಡಿತು ಅಂದರೆ ಆ ಕಾಲಾನಂತರದಲ್ಲಿ ನಾವು ಬೇರೆ ಬೇರೆ ವಿಷಯಗಳತ್ತ ಹೆಚ್ಚು ಮುತುವರ್ಜಿ ವಹಿಸಲು ಸಾಧ್ಯವೇ ಆಗಿಲ್ಲ. ಅಧುನಿಕ ಕಾಲದಲ್ಲಿ ಕಾವ್ಯ, ಕಲೆ, ತತ್ವ ಇತ್ಯಾದಿ ಮಾನವಿಕ ವಿಷಯಗಳು ಸಂಪಾದನೆಯ ಮಾರ್ಗಕ್ಕೆ ಸರಿಹೊಂದದೇ ಇರುವುದರಿಂದ ಅವು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕವಿಯೂ ವಿಜ್ಞಾನಿಯಂತೆಯೇ ಯೋಚಿಸುತ್ತಾನೆ ಮತ್ತು ಪರಿಕಲ್ಪನೆಯನ್ನು ಕಟ್ಟುತ್ತಾನಾದರೂ ಭಾರತೀಯ ಸಮಾಜವು ಅದನ್ನು ಆಧ್ಯಾತ್ಮ ಮತ್ತು ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಪರಿಗಣಿಸಿಬಿಡುತ್ತದೆ. ಉಪನಿಷತ್‍ನಿಂದ ಕಾವ್ಯಮೀಮಾಂಸೆವರೆಗೆ ಕಾವ್ಯದ ನೆಲೆಯಲ್ಲಿ `ರಸ’ದ ಮೂಲದಲ್ಲಿ ನೋಡಲಾಗುತ್ತದೆ. `ರಸೋ ವೈ ಸಃ’ (ಪರಮಾತ್ಮನೇ ರಸ) ಮುಂತಾಗಿ. ಆಮೇಲೆ ಒಂದು ಹಂತಕ್ಕೆ ಕಾವ್ಯ ಮನರಂಜನೆಯ ಸಂಗತಿಯೂ ಆಗಿಬಿಟ್ಟಿದೆ.

ಕಾವ್ಯ ಒಂದು ವಾಸ್ತವ ಸತ್ಯದ ಎಳೆಯ ಆಧಾರದ ಮೇಲೆ ತನ್ನಷ್ಟಕ್ಕೆ ತಾನು ಕಲ್ಪಿತವಾಸ್ತವವನ್ನು (fantasy) ಬೆಳೆಸುತ್ತಾ ಹೋಗುತ್ತದೆ. ಆದರೆ ಅದನ್ನು ಎಲ್ಲಿಯೂ ಸತ್ಯ -ಅಸತ್ಯವೆಂದು ಸಾಬೀತುಪಡಿಸಲು ಹೋಗುವುದಿಲ್ಲ. ಬದಲು ತತ್ವವಾಗಿ ಉಳಿಸಲಾಗತ್ತೆ. ಇಲ್ಲಿ ಸತ್ಯವನ್ನು ಹುಡುಕಬೇಕಾದ್ದು ಓದುಗ ಮತ್ತು ವಿಮರ್ಶಕ. ಸತ್ಯ ಮತ್ತು ತತ್ವಗಳನ್ನ ಯಾಕೆ ಹುಡುಕಬೇಕು, ಅದರಿಂದ ಸಿಗುವ ಪ್ರಯೋಜನವೇನು ಎಂಬುದರ ಬಗ್ಗೆ ಯಾವ ಚರ್ಚೆಯೂ ನಮ್ಮ ನಡುವೆ ನಡೆಯುತ್ತಿಲ್ಲ. ಹಾಗಾಗಿ ಕಾವ್ಯ, ವಿಜ್ಞಾನ ಮಟ್ಟದಲ್ಲಿ ಬೆಳೆಯಲು ಹರಡಲು ಮತ್ತು ಮುಖ್ಯವಾಗಲು ಸಾಧ್ಯವಾಗಿಲ್ಲ. ಗಮನಿಸಿ ವಿಜ್ಞಾನದಲ್ಲಿ ಇಂತಹ ಚರ್ಚೆ ಸಾದ್ಯಂತವಾಗಿ ನಡೆಯುತ್ತಲೇ ಇದೆ. ಇವಾಗ ನಾವು ಇಂತಹ ಚರ್ಚೆಯನ್ನು ಹುಟ್ಟಿಸಿ ಕಾವ್ಯದತ್ತ ಜನರ ಚಿತ್ತವನ್ನು ತಿರುಗಿಸಬೇಕು. ಕಾವ್ಯವೂ ವಿಜ್ಞಾನದಂತೆ ವಾಸ್ತವವನ್ನು ಕುರಿತು ಮಾತಾಡುತ್ತಿದೆ.. ಅದನ್ನು ಹೇಗೆ ಗಮನಿಸಬೇಕು? ಎಂಬುದನ್ನು ತೋರಲು ಪ್ರಯತ್ನಿಸಬೇಕು.

3. ನಾಗೇಗೌಡ: ಕಾವ್ಯದಲ್ಲಿ ಬ್ಲ್ಯಾಕ್‍ಹೋಲ್ (ಕಪ್ಪು ರಂಧ್ರ) ಯಾಕೆ ಬರಲ್ಲ..?

ರಾಜೇಂದ್ರ: ಬಂದೇ ಇಲ್ಲ ಅನ್ನೋದು ತಪ್ಪಾಗತ್ತೆ. ಬಹುತೇಕ ನಾವು ಗಮನಿಸಿಲ್ಲ. ಅದೆಷ್ಟೋ ಜನ ತಮ್ಮ ಅನುಭವ, ಓದು ಇತ್ಯಾದಿಗಳನ್ನೂ ಕಾವ್ಯದ ಮೂಲಕ ಮಾತಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಅಲ್ಲಿ ಇತಿಹಾಸ -ವಿಜ್ಞಾನ – ಭೂಗೋಳ ಇತ್ಯಾದಿ ವಿಷಯಸಮುದ್ರಗಳೇ ಇವೆ. ಆದರೆ ಅವಕ್ಕೆ ಹೆಚ್ಚು ಪ್ರಚಾರ -ಪ್ರಸಾರ ಸಿಕ್ಕಿಲ್ಲ. ನೀವು ಬ್ಲ್ಯಾಕ್‍ಹೋಲ್ ಅಂದಾಗ ನೆನಪಾಯಿತು. ಪ್ರವರ ಕೊಟ್ಟೂರು ಇದೇ ಬ್ಲ್ಯಾಕ್‍ಹೋಲ್‍ನ ಸುತ್ತ ಒಂದು ಪ್ರೇಮದ್ಯ ಕಟ್ಟಿದ್ದಾನೆ.
ನಾವಿಲ್ಲಿ ಎರಡು ರೀತಿಯ ಮಡಿವಂತಿಕೆಯಲ್ಲಿ ಸಿಕ್ಕಿಕೊಂಡಿದ್ದಿವಿ. ಒಂದು: ವಿಜ್ಞಾನದಷ್ಟು ಪ್ರಾಮುಖ್ಯತೆಯನ್ನು ಸಾಹಿತ್ಯವೂ ಸೇರಿದಂತೆ ಬೇರೆಯ ಪರಿಕಲ್ಪನೆಗಳಿಗೆ ಕೊಡದಿರುವುದು. ಎರಡು: ಸಾಹಿತ್ಯವು ವಿಜ್ಞಾನದ ಬರಹಗಳನ್ನು ಸೇರಿದಂತೆ ಬೇರೆ ಬೇರೆ ವಸ್ತು ವಿಷಯಗಳನ್ನು `ಸಾಹಿತ್ಯ’ ಎಂದು ಪರಿಗಣಿಸದೇ ಇರುವುದು.
ಗಮನಿಸಿ ನೋಡಿ; ವಿಜ್ಞಾನ ಬರಹ ಎಂದರೆ ಇವತ್ತಿಗೂ ಬಿಜಿಎಲ್ ಸ್ವಾಮಿ ಅವರ ಹೆಸರು ಬಿಟ್ಟರೆ ನಾಗೇಶ ಹೆಗಡೆ, ಟಿ ಆರ್ ಅನಂತ ರಾಮು, ಎನ್. ವಾಸುದೇವ್ (ಪ್ರಜಾವಾಣಿ ಸಾಪ್ತಾಹಿಕ ಪುರವಣಿ) ನೆನಪಾಗುವುದು ಬಿಟ್ಟರೆ ಉಳಿದಂತೆ ಹೆಸರುಗಳೇ ನಮಗೆ ಗೊತ್ತಿಲ್ಲ. ಯಾಕಂದರೆ ವಿಜ್ಞಾನದ ಬರಹಗಳನ್ನು ಸೃಜನಶೀಲ ಸಾಹಿತ್ಯದ ಪಟ್ಟಿಗೆ ಸಾಕ್ಷರರೂ ಸೇರಿಸಿಕೊಂಡಿಲ್ಲ! ಇಲ್ಲಿ ಎರಡೂ ಕಡೆಯಿಂದ ಅನುಸಂಧಾನ ಸಾಧ್ಯವಾಗಬೇಕಿದೆ. ಹೊಸ ಪೀಳಿಗೆಯ ಯುವಜನ ಮುಂದಾಗಬೇಕಷ್ಟೇ!

ಮಂಟೇಸ್ವಾಮಿ

4. ನಾಗೇಗೌಡ: ನೀವು ಮಂಟೇಸ್ವಾಮಿ ಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಿರುವವರು, ಮಂಟೇಸ್ವಾಮಿಯ ಲೋಕಗ್ರಹಿಕೆ ಇವತ್ತಿಗೂ ಎಷ್ಟು ಪ್ರಸ್ತುತ ಮತ್ತು ಅವನ ಪ್ರಭಾವ ನಿಮ್ಮ ಕವಿತೆಗಳ ಮೇಲೆ ಎಷ್ಟಿದೆ.?

ರಾಜೇಂದ್ರ: ನನಗೆ ಮಂಟೇಸ್ವಾಮಿ ಕಾವ್ಯದ ಬಗ್ಗೆ ತಿಳಿದಿರುವುದು ಸ್ವಲ್ಪವೇ ಸ್ವಲ್ಪ. ಒಂದು ದಶಕದಿಂದ ಪ್ರತಿದಿನ ಆ ಕಾವ್ಯದ ಬಗ್ಗೆ ಓದುತ್ತ ಕೇಳುತ್ತ ಆಲೋಚಿಸುತ್ತಾ ಸಾಗುತ್ತಲೇ ಇದ್ದೇನೆ. ಈ ಮೊದಲು ನನ್ನ ಮೇಲೆ ಮುಖ್ಯವಾಗಿ ಪ್ರಭಾವಿಸಿದ್ದು ವಚನ ಸಾಹಿತ್ಯ. ನನ್ನ ಕಾವ್ಯದ ಭಾಷೆಯನ್ನು ನಾನು ವಚನಗಳಿಂದಲೇ ಕಟ್ಟಿಕೊಂಡಿದ್ದೇನೆ. ಆದರೆ ತತ್ವವನ್ನು ಮಂಟೇಸ್ವಾಮಿ ಕಾವ್ಯದಿಂದ ರೂಪಿಸಿಕೊಂಡಿದ್ದೀನಿ. ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿದ ವಚನ ಸಾಹಿತ್ಯ ಕೂಡ ಮಾಂಸಾಹಾರ, ಮದ್ಯ ಕುರಿತಾಗಿ ಮಡಿವಂತಿಕೆಯನ್ನು ತೋರಿಸುತ್ತದೆ ಮತ್ತು ಆಚಾರಗಳಲ್ಲಿ ಶಿಷ್ಟತೆಯನ್ನು ಪಾಲಿಸಲು ಹೇಳುತ್ತದೆ. ಆದರೆ ಮಂಟೇಸ್ವಾಮಿ ಕಾವ್ಯ ಈ ಮಡಿವಂತಿಕೆ ಮತ್ತು ಶಿಷ್ಟತೆಯನ್ನು ಒಡೆದು ಅವೆರಡರ ಶ್ರೇಷ್ಟತೆಯನ್ನು ನಿರಾಕರಿಸುತ್ತದೆ. ಆಹಾರ ಮತ್ತು ಆಚಾರಗಳಲ್ಲಿ ನಿರ್ಬಂಧ ವಿಧಿಸದೇ `ಉದಾರವಾದಿ ದರ್ಶನ’ವನ್ನು ನಮಗೊದಗಿಸುತ್ತದೆ. `ಎಲ್ಲವನ್ನು ನಮ್ಮದಂತೆ ಕಾಣುವುದು, ಎಲ್ಲವುದರೊಳಗೆ ನಾವೂ ಒಂದಾಗುವುದು’ ಮಂಟೇಸ್ವಾಮಿ ಕಾವ್ಯದ ಮೂಲ ತತ್ವ. ಆ ತತ್ವವೇ ಅರಿವು, ಆ ಅರಿವೇ ಗುರು!
ನನ್ನ ಕಾವ್ಯದ ಮೇಲೆ ಮಂಟೇಸ್ವಾಮಿ ಕಾವ್ಯ ಮಾತ್ರವಲ್ಲ ತಾವೋ, ಬೌದ್ದ ತತ್ವ ಮತ್ತು ಅವೈದಿಕ ದರ್ಶನಗಳ ಪ್ರಭಾವ ಬಹಳಷ್ಟು ಇದೆ.

5. ನಾಗೇಗೌಡ: ಕುವೆಂಪು ವಾಲ್ಮೀಕಿ ರಾಮಾಯಣವನ್ನು ಮತ್ತೊಮ್ಮೆ ತಮ್ಮ ಕಾವ್ಯದಲ್ಲಿ ಬರೆದರು. ಅದೇ ರೀತಿಯಲ್ಲಿ ಮೌಖಿಕ ಮಹಾಕಾವ್ಯವಾಗಿರುವ ಮಂಟೇಸ್ವಾಮಿ ಕಾವ್ಯವನ್ನು ಮತ್ತೊಮ್ಮೆ ಹೊಸ ರೀತಿಯ ಕಾವ್ಯದಲ್ಲಿ ಬರೆಯಬೇಕು ಅಂತ ನಿಮಗೆ ಅನ್ನಿಸುತ್ತದೆಯೇ. ಬರೆಯಬೇಕು ಎಂದು ಅನ್ನಿಸಿದರೆ ಆ ಹೊಸ ಕಾವ್ಯದ ಪ್ರಸ್ತುತತೆ ಏನು?

ರಾಜೇಂದ್ರ: ಯಾವಾಗಲೂ ಸಾಕ್ಷರರು ಮಾಡಿದ್ದು ಅಕ್ಷರಗಳಲ್ಲಿ ಉಳಿದುಹೋಗುತ್ತದೆ. ಆದರೆ ಅನಕ್ಷರಸ್ತರು ಮಾಡಿದ್ದು ಗಾಳಿ ನೀರು ಮಳೆ ಮಣ್ಣಿನಲ್ಲಿ ಬೆರೆತುಹೋಗುತ್ತದೆ. ಕಳೆದ ಶತಮಾನದ ಕಡೆಯವರೆಗೂ ಯಾವ ಸಾಕ್ಷರರೂ ನಮ್ಮ ಮೌಖಿಕ ಮಹಾಕಾವ್ಯಗಳನ್ನು `ಕಾವ್ಯ’ ಎಂದು ಪರಿಗಣಿಸಿರಲಿಲ್ಲ. ಯಾಕೆಂದರೆ ಅವು ಸಾಕ್ಷರರು ನಿರೂಪಿಸಿದ್ದ ರಸಸೂತ್ರಗಳನ್ನು, ಅಷ್ಟಾದಶ ವರ್ಣನೆಗಳನ್ನು, ಕಾವ್ಯ ಮೀಮಾಂಸೆಯ ಕಟ್ಟಳೆಗಳನ್ನ ಅನುಸರಿಸಿ ಕಟ್ಟಿದ ಕಾವ್ಯಗಳು ಆಗಿರಲಿಲ್ಲ. ಅವನ್ನು ಸಮಾಜದ ಸ್ಥಿತಿವಂತರು, ವಿದ್ಯಾವಂತರು ಹೆಚ್ಚು ಪ್ರಚಾರ ಮಾಡಲಿಲ್ಲ. ಅದನ್ನು ಜನಪದವೆಂದು ಕರೆದು ಸುಮ್ಮನಾಗಿ ಬಿಟ್ಟಿದ್ದರು. (ಹಂಪಿಯ ಕನ್ನಡ ವಿವಿ ಬಂದ ಮೇಲೆ ಈ ಮೌಖಿಕ ಕಾವ್ಯಗಳ ಮೇಲೆ ಬಹಳ ದೊಡ್ಡ ಕೆಲಸ ನಡೆದು, ಇವೆಲ್ಲವೂ ನಮಗೆ ಸಿಗುವಂತಾಯಿತು.) ಹಾಗಾಗಿ ವೈದಿಕ, ಜೈನ ಮತ್ತು ಜನಪದ ಮಹಾಭಾರತ ರಾಮಾಯಣ ಕಾವ್ಯಗಳು ನೂರಾರು ಹೊಸ ಹೊಸ ರೂಪಗಳಲ್ಲಿ ಅವತಾರವೆತ್ತಿದುವು. ಆದರೆ ಈ ಅವಕಾಶ ಮೌಖಿಕ ಮಹಾಕಾವ್ಯಗಳಿಗೆ ಒದಗಿ ಬರಲಿಲ್ಲ.

ವರ್ತಮಾನದಲ್ಲೂ ಈ ಮೌಖಿಕಗಳು ಕಾವ್ಯಗಳನ್ನ ರಚಿಸುವ ಗೊಡವೆಗೆ ಕವಿಗಳು ಮುಂದಾಗಲಿಲ್ಲ. ಬಹುಶಃ ಈಗಲೂ ಈ ಮೌಖಿಕಗಳನ್ನು ಹೇಗೆ ಮರು ಕಟ್ಟುವುದು ಎಂಬುದರ ಬಗ್ಗೆ ಕವಿಗಳಿಗೆ ಬಹಳ ಗೊಂದಲವಿರುವ ಹಾಗಿದೆ. ಆದರೆ ನೀಲಗಾರರು ಪ್ರತಿ ಬಾರಿ ಹಾಡುವ ಮಂಟೇಸ್ವಾಮಿ ಕಾವ್ಯವು ಬೇರೆಯದೇ ಆಗಿರುತ್ತದೆ. ದೇಶ-ಕಾಲಗಳಿಗೆ ತಕ್ಕಂತೆ ಕಥೆ, ನಿರೂಪಣೆ ಮತ್ತು ಪ್ರಸ್ತುತಿಗಳು ಬದಲಾಗುತ್ತಲೇ ಇರುತ್ತವೆ. ಆದರೆ ಕಥೆಯ ಒಟ್ಟು ಸಾರ ಮಾತ್ರ ಹಾಗೆಯೇ ಇರುತ್ತದೆ. ಕಾವ್ಯ ಅನ್ನುವುದು ಸಾರ್ವಕಾಲೀನ ಸತ್ಯ. ಪ್ರತಿ ಕಾಲಕ್ಕೂ ಅದು ಸತ್ಯ ಸ್ವರೂಪವನ್ನು ಹೊಂದಿಸಿಕೊಳ್ಳುತ್ತದೆ. ಹಾಗೆಯೇ ಮಂಟೇಸ್ವಾಮಿ ಕಾವ್ಯ. ಬದುಕಿನ ಆಹಾರ ಮತ್ತು ಆಚಾರಗಳೆಲ್ಲದರಲ್ಲೂ ನಿರ್ಬಂಧ ವಿಧಿಸದ, ಸೃಷ್ಟಿಸಹಜವಾಗಿ ಸಮನ್ವತೆ, ಸಹಬಾಳ್ವೆ, ಸೋದರತೆ, ಸಾಮರಸ್ಯದಿಂದ ಬದುಕುವುದನ್ನು ಬೋಧಿಸುವ ಕಾವ್ಯ ಎಲ್ಲಾ ಕಾಲಕ್ಕೂ ಬೇಕು. ಮತ್ತು ಧರ್ಮವನ್ನು ಕೆಟ್ಟ ಕುರುಡು ನಂಬಿಕೆಯಾಗಿ ಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಖಂಡಿತ ಮಂಟೇಸ್ವಾಮಿ ಕಾವ್ಯ ಬೇಕು ಅಂತ ನನಗನ್ನಿಸುತ್ತದೆ. ಇಂತಹ ಮೌಖಿಕ ಮಹಾಕಾವ್ಯವನ್ನು ಶಿಷ್ಟ ರೂಪದಲ್ಲಿ ಬರೆಯುವುದಕ್ಕಿಂತ ಈಗಾಗಲೇ ಇರುವ ಹಾಡುವ ಶೈಲಿಯಲ್ಲಿಯೇ ಮತ್ತೆ ಮತ್ತೆ ಕಟ್ಟಿ, ಅದು ಹೆಚ್ಚು ಹೆಚ್ಚು ಹರಡಿಕೊಳ್ಳಬೇಕು.

6. ನಾಗೇಗೌಡ: ಮಂಡ್ಯದಲ್ಲಿ ವಾಸವಿರುವ ನಿಮಗೆ ಜಿಲ್ಲೆಯಲ್ಲಿ ತಾಂಡವಾಡುತ್ತಿರುವ agrarian crisis ನಿಮ್ಮ ಕವಿತೆಗಳಲ್ಲಿ ಯಾವ ರೀತಿಯಲ್ಲಿ ಅಭಿವ್ಯಕ್ತಿಗೊಂಡಿದೆ. ಈ ಪ್ರಶ್ನೆ ಏಕೆ ಕೇಳುತ್ತಿದ್ದೇನೆ ಅಂದರೆ ಕವಿ ತನ್ನದೇ ವಾಸ್ತವ ಸೃಷ್ಟಿಸಿಕೊಳ್ಳುವುದು ಸಹಜ. ಆದರೆ ಅದೇ ಕವಿ ತನ್ನ ಕವಿತೆಯ ಮೂಲಕ ತನ್ನ ಸುತ್ತಲಿನ ಹಳ್ಳಿಗಾಡಿನ ವಾಸ್ತವಕ್ಕೆ ಹೇಗೆ ಸ್ಪಂದಿಸುತ್ತಾನೆ ಅನ್ನುವುದನ್ನು ತಿಳಿದುಕೊಳ್ಳಲು ಈ ಪ್ರಶ್ನೆ ಕೇಳುತ್ತಿದ್ದೇನೆ.

ರಾಜೇಂದ್ರ: ನನ್ನ ಕುಟುಂಬ ಕೃಷಿಯಿಂದ ದೂರವುಳಿದು ದಶಕಗಳೇ ಆಗಿವೆ. ವ್ಯಾಪಾರ ವಹಿವಾಟುಗಳು ಕೂಡ ಕೃಷಿಯ ಆದಾಯ ಮತ್ತು ನಷ್ಟದ ಆಧಾರದ ಮೇಲೆ ನಡೆಯುತ್ತದೆ. ಹಾಗಾಗಿ ಕೃಷಿಯ ಆತಂಕಗಳಿಗೆ ನಾನು ಮೂರನೆಯ ವ್ಯಕ್ತಿ. ಅದಕ್ಕೆ ನನ್ನ ನೇರ ಪ್ರತಿಸ್ಪಂದನೆ ಕಡಿಮೆ. ಕರಾರುವಕ್ಕಾಗಿ ಬರೆದಿಲ್ಲವಾದರೂ ಅಂತರಾಳದಲ್ಲಿ ಕೃಷಿಯ ಉಸಿರು ಇದ್ದೇ ಇದೆ. ನೀವು ಹೇಳಿದಂತೆ ವಾಸ್ತವವನ್ನು ಬಿಟ್ಟು ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ. ಕಲ್ಪನೆಯೇ ಆದರೂ ಅದು ವಾಸ್ತವದ ಅಡಿಪಾಯದಲ್ಲೇ ಬೆಳೆದುಬರಬೇಕು. ನನ್ನ ಸುತ್ತಮುತ್ತಲ ಕೃಷಿಯ ಜಗತ್ತು `ನೀರು ಮತ್ತು ಹಸಿರಿನ’ ರೂಪಕದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಆದರೆ `ಹೀಗೆ, ಇದಕ್ಕೆ’ ಪ್ರತಿಸ್ಪಂದಿಸಬೇಕಿತ್ತು ಎಂದು ಹೇಳಿಕೊಳ್ಳಲು ಬರುವುದಿಲ್ಲ.. ಕವಿಯ ಮನಸ್ಸು ಯಾವುದರತ್ತ ಆರ್ದ್ರವಾಗಿರತ್ತೋ ಅದು ಸಹಜವಾಗಿ ಕಾವ್ಯದಲ್ಲಿ ಮೂಡಿಬರತ್ತೆ. `ಕೃಷಿಕ ಮತ್ತು ಹೆಣ್ಣು’ ನಮ್ಮ ಕವಿಗಳಿಗೆ ಬಹುದೊಡ್ಡ ಕಾವ್ಯಸ್ಪೂರ್ತಿಗಳು! ನನಗನ್ನಿಸುವುದು ಇದಕ್ಕೆ ಕಾವ್ಯಕ್ಕಿಂತಲೂ `ಕಥನ’ ಒಳ್ಳೆಯ ಮಾಧ್ಯಮ. ಬೆಸಗರಹಳ್ಳಿ ರಾಮಣ್ಣ, ಚದುರಂಗ, ಕೃಷ್ಣ ಆಲನಹಳ್ಳಿ, ಸುಧಾಕರ ಮುಂತಾದ ಹಿರಿಯ ಕಥೆಗಾರರು ಗ್ರಾಮೀಣ ಪ್ರದೇಶದ ಕೃಷಿ ಬಿಕ್ಕಟ್ಟುಗಳ ಬಗ್ಗೆ ಒಳ್ಳೆಯ ಕಥನವನ್ನು ಕಟ್ಟಿಕೊಟ್ಟಿದ್ದಾರೆ. ಹೊಸ ತಲೆಮಾರಿನ ಕಥನಕಾರರು ಹಳ್ಳಿ ಮತ್ತು ನಗರದ ಮಧ್ಯೆ ಸಿಲುಕಿಕೊಂಡಿದ್ದಾರೆ.

7. ನಾಗೇಗೌಡ: ನೀವು ಡಿಜಿಟಲ್ ಯುಗದ ಕವಿಗಳು, ಈ ಸೋಷಿಯಲ್ ಮೀಡಿಯಾ ಅನ್ನುವುದು ಹೇಗೆ ಒಬ್ಬ ಕವಿಯ ವ್ಯಕ್ತಿತ್ವವನ್ನು ರೂಪುಗೊಳಿಸುತ್ತಿದೆ. ಹಿಂದೆ ಸಾಧ್ಯವಾಗಿರದ ಯಾವೆಲ್ಲ ಸಾಧ್ಯತೆಗಳನ್ನು ಕವಿ ಈ ಸೋಷಿಯಲ್ ಮೀಡಿಯಾಗಳಲ್ಲಿ ಕಂಡುಕೊಳ್ಳಬಲ್ಲ?

ರಾಜೇಂದ್ರ: ಎಲ್ಲ ದೇಶಕಾಲಗಳು ಸೃಷ್ಟಿಯಾದಂತೆ ಅವಕ್ಕೆ ತಕ್ಕ ರೀತಿ ಕವಿಯ ವ್ಯಕ್ತಿತ್ವವೂ ರೂಪಗೊಳ್ಳುತ್ತದೆ. ಹಾಗೆಯೇ ಡಿಜಿಟಲ್ ಕಾಲದ ಕವಿಯೂ ಅಷ್ಟೇ! `ಸೋಷಿಯಲ್ ಮೀಡಿಯಾ’ ಬಹಳಷ್ಟು ಹೊಸ ಬರಹಗಾರ ಮತ್ತು ಓದುಗರನ್ನು ಹುಟ್ಟುಹಾಕುತ್ತಿದೆ. ಹಾಗೆಯೆ ಸುಮ್ಮನೆ ಪುಸ್ತಕದಂಗಡಿಗಳಲ್ಲಿ ವಿಚಾರಿಸಿರಿ.. ಈಚೆಗೆ ಚೂರು ಪುಸ್ತಕಗಳ ಕೊಳ್ಳುವಿಕೆ ಕೂಡ ಹೆಚ್ಚಾಗಿದೆ. ಕವಿತೆಗಳನ್ನು ಕದ್ದು ಹಾಕಿಕೊಳ್ಳುವವರು, ಕೆಟ್ಟದಾಗಿ ಬರೆಯುವವರು ಅಂತ ನೂರೆಂಟು ದೂರುಗಳನ್ನು ಹೇಳುವವರು ಇರಬಹುದು, ಆದರೆ ಭಾಷೆಯೊಂದರಲ್ಲಿ ಇಷ್ಟು ಬರವಣಿಗೆ ಸಾಗುವುದು ಒಳ್ಳೆಯ ಆರೋಗ್ಯಕರ ಲಕ್ಷಣ. ಕವಿ ಬರೆದ ಪದ್ಯಕ್ಕೆ ಇವಾಗ ಪತ್ರಿಕೆ/ ಸಂಪಾದಕನ ಹಂಗು ಇಲ್ಲ. ನೇರವಾಗಿ ಪ್ರಕಟಿಸಿ ಆತ ಓದುಗನನ್ನು ತಲುಪಬಹುದು. ಮತ್ತು ಓದುಗನ ಮೆಚ್ಚುಗೆ, ಚರ್ಚೆ, ಸಲಹೆ ಮತ್ತಷ್ಟು ಒಳ್ಳೆಯ ಬರಹಗಳನ್ನು ಬರೆಯಲು ಪ್ರೇರೇಪಿಸಬಹುದು. ಸಮಾನ ಮನಸ್ಕ ಗೆಳೆಯರು ಒಂದಾಗಿ ಸೇರಬಹುದು. ಇಂತಹ ಹತ್ತು ಹಲವು ಅನುಕೂಲ ಇವೆ. ಹಾಗೆಯೆ ಲೈಕು ಕಾಮೆಂಟುಗಳ ಹಂಗಿಗೆ ಬಿದ್ದು ಬರೆಯುವ ಚಟ ಅಂಟಿಕೊಳ್ಳಬಹುದು. ಒಂದು ಹಂತದಲ್ಲಿ ವಾಸ್ತವದ ಬದುಕಿಗಿಂತಲೂ ಈ ಸೋಷಿಯಲ್ ಮೀಡಿಯಾದಲ್ಲಿನ ಬದುಕು ಅಸಹನೀಯ ಕೂಡ ಆಗಬಹುದು.
ಆದರೆ ಸೋಷಿಯಲ್ ಮೀಡಿಯಾ ಬಂದ ಮೇಲೆ ಬ್ಯಾಂಕ್ವೆಟ್‍ನ ಕವಿಗಳಿಗೆ ಹಾರ ತುರಾಯಿ ಚೂರು ಕಡಿಮೆಯಾಗಿರುವುದು ನಿಜ. ಪ್ರತಿಭಾವಂತ ಬರಹಗಾರ ಓದುಗನನ್ನು ಸುಲಭವಾಗಿ ತಲುಪಬಲ್ಲ.

8. ನಾಗೇಗೌಡ: ಫೇಸ್ ಬುಕ್ ಅಂತಹ ಮಾಧ್ಯಮದಲ್ಲಿ ಪ್ರತಿ ಕ್ಷಣವೂ ಒಬ್ಬರಲ್ಲ ಒಬ್ಬರು ತಮ್ಮ ಕವಿತೆಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ ಮತ್ತು ಅವರಿಗೆ ಆದ ಓದುವ ಒಂದು ಗುಂಪು ಕೂಡ ಇರುತ್ತದೆ. ಆದ್ದರಿಂದ ಇವತ್ತಿನ ದಿನಗಳಲ್ಲಿ ಶ್ರೇಷ್ಠ ಕವಿ ಅನ್ನುವ ಪರಿಕಲ್ಪನೆ ಅಪ್ರಸ್ತುತ ಆಗಿದೆಯೆ. ಆಗಿದೆ ಅನ್ನುವುದಾದರೆ ಆಗಿರುವುದು ಸರಿಯೇ?

ರಾಜೇಂದ್ರ: ಶ್ರೇಷ್ಠ ಕವಿ ಅನ್ನುವ ಪರಿಕಲ್ಪನೆಯೇ ದರಿದ್ರವಾದುದು. ಕವಿಯೊಬ್ಬ ಕವಿಯಾಗಿದ್ದರೆ ಸಾಕು. ಜನಸಾಮಾನ್ಯರಿಗೆ ಅವರ ನೋವು-ನಲಿವುಗಳಿಗೆ ಹತ್ತಿರವಾದ ಕವಿಯನ್ನು ಜನ ಮರೆಯುವುದಿಲ್ಲ. ಪದ ಪ್ರೌಢಿಮೆಯಲ್ಲಿ ಮೆರೆಯುವ ಕವಿಯನ್ನು ಜನ ನೆನಪಿಟ್ಟುಕೊಳ್ಳುವುದು ಬಹಳ ಕಷ್ಟ. ಈ ಕಾಲವೇ ಧಾವಂತದ ಕಾಲ. ಅದಕ್ಕೆ ಸಾವಧಾನವಿಲ್ಲ. ಎಲ್ಲ ಕೆಲಸ ಕಾರ್ಯಗಳೂ ಈಗ ಪಟಾಫಟ್ ಮುಗಿದುಹೋಗುತ್ತವೆ. ಫೇಸ್ಬುಕ್ಕಿನಲ್ಲಿ ಸಾವಿರಾರು ಗುಂಪುಗಳಿವೆ. ಅವೆಲ್ಲಾ ಜಾತಿ-ಮತ -ಸಿದ್ಧಾಂತಗಳಲ್ಲಿ ಹರಿದು ಹಂಚಿಹೋಗಿವೆ. ಪ್ರತಿಯೊಂದು ಗುಂಪು ತನ್ನದೇ ಆದ ಜಾತೀಯ, ಸಿದ್ಧಾಂತದ ಅಜೆಂಡಾಗಳನ್ನ ಇಟ್ಟುಕೊಂಡಿವೆ. ಹಾಗೆಯೇ ತಮಗೆ ಮುಖ್ಯವಾದ ಕವಿ/ ಕಾದಂಬರಿಕಾರ/ ಕಥೆಗಾರ ಮುಂತಾದ ಬರಹಗಾರರನ್ನು `ಶ್ರೇಷ್ಠ’ ವಾಗಿಸಲು ಪ್ರಯತ್ನ ಪಡುತ್ತಲೇ ಇರುತ್ತವೆ. ನನ್ನನ್ನು ಕೇಳಿದ್ರೆ ಇದೊಂದು `ಅಪ್ಪಟ ದರಿದ್ರ ಪ್ರಯತ್ನ’.

9. ನಾಗೇಗೌಡ: ಲಾವೋ ತ್ಸು, ಅಲ್ಲಮ ಮತ್ತು ಮಂಟೇಸ್ವಾಮಿಯಂತ ಅನುಭಾವಿಗಳ ಅನುಭಾವ ನಿಮ್ಮ ಕವಿತೆಗಳನ್ನು ಪ್ರಭಾವಿಸಿರುವುದನ್ನು ನಿಮ್ಮ ಕವಿತೆಗಳ ಓದುಗನಾಗಿ ಗಮನಿಸಿದ್ದೇನೆ. ಇಂತಹ ಕವಿತೆಗಳನ್ನು ಹಿರಿಯರಾದ ಎಚ್. ಎಸ್. ಶಿವಪ್ರಕಾಶರಾದಿ ಹಲವರು ಬರೆದಿದ್ದಾರೆ. ಯುರೋಪ್ ಕಾವ್ಯ ಪ್ರಭಾವದಿಂದ ಆಚೆ ಬಂದು ನಮ್ಮದೇ ಪರಂಪರೆಯಿಂದ ಸ್ಪೂರ್ತಿ ಪಡೆದು ಕವಿತೆ ಬರೆಯುತ್ತಿರುವ ಅನುಭಾವ ಹೇಗಿದೆ?

ರಾಜೇಂದ್ರ : ಶಿವಪ್ರಕಾಶರ ಕಾವ್ಯ ನನಗೆ ಬಹಳ ಇಷ್ಟ. ಅವರ ಕಾವ್ಯದ ಪ್ರಭಾವವೂ ನನ್ನ ಮೇಲೆ ಇದೆ. ಅನುಭಾವದ ದೃಷ್ಟಿಯಲ್ಲಿ ಪಶ್ಚಿಮಕ್ಕಿಂತಲೂ ಪೂರ್ವ ಬಹಳ ಆಸಕ್ತಿಕರವಾಗಿದೆ. ಮತ್ತು ಭಾರತೀಯ ಸಮಾಜಕ್ಕೆ ಹತ್ತಿರವಾಗಿದೆ. ಯಾಕಂದರೆ ಬೌದ್ದ ಮತ ಇಲ್ಲಿ ಹುಟ್ಟಿ ಪೂರ್ವದ ಎಲ್ಲಾ ದೇಶಗಳನ್ನು ವ್ಯಾಪಿಸಿಕೊಂಡಿದೆ. ಪಶ್ಚಿಮದ ಕಾವ್ಯ ಪ್ರಯೋಗದಿಂದ ತಪ್ಪಿಸಿಕೊಂಡು ನಮ್ಮದೇ ಪರಂಪರೆಯನ್ನು ಕಟ್ಟಿಕೊಳ್ಳುವುದು ಚೂರು ಕಷ್ಟವಿದೆ. ಯಾಕಂದರೆ ಇಲ್ಲಿ ಬಹಳ ನಿರ್ಬಂಧಗಳಿವೆ. ಅವುಗಳನ್ನು ಅಧುನಿಕಕಾಲದ ಎಲ್ಲ ಕವಿಗಳು ಬಹುತೇಕ ಮೀರಿಯೇ ಕಾವ್ಯ ಕಟ್ಟಿದ್ದಾರೆ. ಅದಕ್ಕೆ ಪಶ್ಚಿಮದ ಕಾವ್ಯ ಪ್ರೇರಣೆಯೇ ಕಾರಣವಾಗಿದೆ. ನಮ್ಮದೇ ನೆಲಮೂಲ ಪರಂಪರೆಯನ್ನು ಮತ್ತು ಪೂರ್ವಾತ್ಯ ದೇಶಗಳ ಕಾವ್ಯವನ್ನು ಓದಲು ಇದು ಸೂಕ್ತ ಸಮಯ. ಇನ್ನು ಅನುಭಾವದ ಮಾತು ಅರ್ಧದಲ್ಲಿಯೇ ಕೈ ಬಿಡುವುದು ಉತ್ತಮ. ಅನುಭಾವವನ್ನು ದಕ್ಕಿಸಿಕೊಳ್ಳಲು ಯತ್ನಿಸಿದಷ್ಟೂ ಅದು ಕೈಗೆಟುಕುವುದಿಲ್ಲ. ಕಾಯಕವೊಂದೇ ಅನುಭಾವವನ್ನು ದಕ್ಕಿಸಿಕೊಳ್ಳುವ ಮಾರ್ಗ. ಈಚಿಗಿನ ನನ್ನ ಓದು ತುಂಬಾ ಮಿತಿಯದ್ದು. ಹಾಗಾಗಿ ಅನುಭಾವದ ಹಿನ್ನೆಲೆಯಲ್ಲಿ ಕವಿತೆ ಕಟ್ಟಿದವರು ತಕ್ಷಣಕ್ಕೆ ನೆನೆಪಾಗುತ್ತಿಲ್ಲ, ಆದರೆ ಚಳುವಳಿಗಳ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಕವಿತೆ ಕಟ್ಟಿದ್ದಾರೆ.
ಒಂದು ನೆನೆಪಿನಲ್ಲಿ ಇಡಬೇಕು, ಪೂರ್ಣ ಪ್ರಮಾಣದ ಆಲೋಚನಾ ಸ್ವಾತಂತ್ರ್ಯದಲ್ಲಿ ಕಂಡುಕೊಂಡ ಸತ್ಯವೇ, ಈ ಅನುಭಾವ ಅಥವಾ ಆಧ್ಯಾತ್ಮ. ಇದು ಯಾವುದೇ ಒಂದು ಮತಧರ್ಮಕ್ಕೆ ಸೀಮಿತವಾಗಿಲ್ಲ.

10. ನಾಗೇಗೌಡ: ಅನುಭಾವ ಅನ್ನುವುದು ವೈಚಾರಿಕತೆಗೆ ನಿಲುಕದ್ದು, ಒಬ್ಬ ಕವಿಯಾಗಿ ಈ ದ್ವಂದ್ವವನ್ನು ಹೇಗೆ ನಿಭಾಯಿಸುತ್ತಿದ್ದೀರಿ?

ರಾಜೇಂದ್ರ: ಮೊದಲಿಗೆ ಇವೆರಡೂ ಬೇರ್ಪಟ್ಟಿದ್ದು ಯಾವಾಗ ಅಂತ? ಅನುಭಾವ ಮತ್ತು ವೈಚಾರಿಕತೆ ತದ್ವಿರುದ್ದ ನೆಲೆಯವು ಅಂತ ಈಚೆಗೆ ಬಹುವಾಗಿ ನಂಬಿಸಲಾಗಿದೆ. ಅಸಲಿಗೆ ಇವೆರಡೂ ಒಟ್ಟಿಗೆ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿವೆ. ನಮಗೆ ಸಿಗುವ ಮೊದಲ ನಿದರ್ಶನ ಬುದ್ದ. ಜನರ ಮೂಢ ಆಚರಣೆಗಳ, ನಂಬುಗೆಗಳನ್ನು ನಿರಾಕರಿಸಿ, ಸರಳ ತತ್ವಗಳನ್ನ ಬೋಧಿಸಿದ. ಆಚರಣೆಗಳನ್ನು ಪ್ರಶ್ನಿಸಿದ ಬುದ್ದ ಅನುಭಾವ, ಅಧ್ಯಾತ್ಮಗಳನ್ನು ನಿರಾಕರಿಸಲಿಲ್ಲ. ಯಾಕೆಂದರೆ ಅದೊಂದು ಪ್ರಬಲವಾದ ಸಾಮಾಜಿಕ ಮಾಧ್ಯಮವಾಗಿತ್ತು. ಮುಂದೆ ನಮ್ಮ ಉಪಖಂಡದಲ್ಲಿ ಕಾಣಿಸಿಕೊಂಡ ಎಲ್ಲ ಸಮಾಜ ಸುಧಾರಕರೂ ಮಾಡಿದ್ದು ಇದನ್ನೇ! 12ನೇ ಶತಮಾನದ ಶರಣ ಚಳುವಳಿಯಲ್ಲಿ ಅಲ್ಲಮ, ಬಸವಣ್ಣ, ಅಕ್ಕ ಮಹಾದೇವಿ ಮುಂತಾದವರು ವೈಚಾರಿಕತೆಯ ಎಷ್ಟು ಉತ್ತುಂಗದಲ್ಲಿದ್ದರೋ ಅಷ್ಟೇ ಎತ್ತರದ ಅರಿವನ್ನು ಅನುಭಾವದಲ್ಲಿಯೂ ಸಾಧಿಸಿದ್ದರು. ಆಧುನಿಕ ಪೂರ್ವದಲ್ಲಿ ಕಬೀರ, ಸೂರದಾಸ, ಮೀರಾ, ಮಂಟೇಸ್ವಾಮಿ ಆದಿಯಾಗಿ ಅವೈದಿಕ ಮತ್ತು ಸೂಫಿ ಪರಂಪರೆಗಳು ಅಧುನಿಕ ಕಾಲದಲ್ಲಿ ಸ್ವಾಮಿ ವಿವೇಕಾನಂದರಿಂದ ಶುರುವಾಗಿ ಮಹಾತ್ಮಾ ಗಾಂಧೀ, ಅರವಿಂದೋ, ರಮಣ ಮಹರ್ಷಿ, ಕುವೆಂಪು ಅವರವರೆಗೂ ವೈಚಾರಿಕತೆ ಮತ್ತು ಅನುಭಾವಗಳು ಜೊತೆಯಾಗಿ ಬಂದಿರುವುದನ್ನ ನಾವು ಕಾಣಬಹುದು. ನಾನಿಲ್ಲಿ ಕೊಟ್ಟ ಉದಾಹರಣೆಗಳು ಕೆಲವೇ ಕೆಲವು. ಈ ತರದ ಅದೆಷ್ಟೋ ಜನರು ಮತ್ತು ಪರಂಪರೆಗಳು ನಮ್ಮ ನಡುವೆ ಇವೆ. ಆದರೆ ಇಂತಹ ಪರಂಪರೆಗಳಿಗೆ ಬೆಂಕಿ ಇಟ್ಟು ಚಳಿ ಕಾಯಿಸಿಕೊಂಡಿದ್ದು `ಹಿಂದುತ್ವ ರಾಜಕಾರಣ’! ಈ ಕಾರಣದಿಂದಲೇ ವೈಚಾರಿಕತೆ ಮತ್ತು ಅನುಭಾವಗಳನ್ನು ಪ್ರತ್ಯೇಕವಾಗಿ ಅಥವಾ ತದ್ವಿರುದ್ಧವಾಗಿ ಕಾಣುವ ಪ್ರಕ್ರಿಯೆಗಳು ಶುರುವಾದುವು.

ಅಲ್ಲಮ ಪ್ರಭು

ಆಧ್ಯಾತ್ಮ – ಅನುಭಾವಗಳನ್ನು ಮತ-ಧರ್ಮದ ಒಳಕ್ಕೆ ಸೀಮಿತಗೊಳಿಸಿದ ಸಂಕಥನಗಳನ್ನು ಬಲ ಪಂಥೀಯರು ಕಟ್ಟುತ್ತಾ ಬರುವಾಗ ಬರಹಗಾರರು- ಬುದ್ದಿಜೀವಿಗಳು ಇಂತಹ ಸಂಕಥನಗಳು ಸುಳ್ಳು ಮತ್ತು ಅಪಾಯಕಾರಿ ಎಂದು ಹೇಳುವ ಜೊತೆಗೆ ಅದನ್ನು ತಾತ್ವಿಕವಾಗಿ ಒಡೆದುಹಾಕಬೇಕಿತ್ತು. ಅರ್ಥಾತ್ ಹಿಂದುತ್ವ ರಾಜಕಾರಣಕ್ಕೆ ಪರ್ಯಾಯವಾದ `ಸಮತಾ ರಾಜಕಾರಣ’ವನ್ನು ಬೆಳೆಸಬೇಕಿತ್ತು. ಆದರೆ ಅಂತಹ ಪ್ರಯತ್ನವನ್ನು ಪ್ರಾಮಾಣಿಕವಾಗಿ ಕಳೆದ ಐದು ದಶಕಗಳಲ್ಲಿ ಮಾಡಲಿಲ್ಲ. ಇಂದು ಮಾಡಲು ಯತ್ನಿಸುತ್ತಿರುವುದು ಕೂಡ ಅಷ್ಟು ಬಲವಾಗಿಲ್ಲ. ಕಡೆಗೆ ಈ `ಹಿಂದುತ್ವ ರಾಜಕಾರಣ’ವು ಬುದ್ದಿಜೀವಿಗಳನ್ನೇ ಪ್ರಭಾವಿಸಿ ಆಧ್ಯಾತ್ಮ ಅನುಭಾವಗಳ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿ.. ಅನುಭಾವ – ಆಧ್ಯಾತ್ಮಗಳಿಗೆ ದೇವರು ಧರ್ಮದ ಹಂಗಿಲ್ಲ ಎಂಬುದನ್ನು ಮರೆತು ಧರ್ಮಾಂಧತೆ, ನಾಸ್ತಿಕತೆಯ ಭಾಷಣಗಳಲ್ಲಿ ನಿರತರಾಗುವಂತೆ ಮಾಡಿದ್ದನ್ನು ನಾವೀಗ ನೋಡುತ್ತಲೇ ಇದ್ದೀವಿ. ಕೆಲವರು ವೈಚಾರಿಕತೆ ಶ್ರೇಷ್ಠವೆಂದೂ ಇನ್ನು ಕೆಲವರು ಅನುಭಾವ ದೊಡ್ಡದು ಎಂದೂ ವೈಭವಿಕರಿಸಿಕೊಂಡು ನಿಂತುಬಿಟ್ಟರು. ಇವೆರಡರ ನಡುವೆ ಆಳವಾದ ಕಂದಕ ನಿರ್ಮಿತವಾಗಿಬಿಟ್ಟಿತು. ಮತ್ತೆ ವೈಚಾರಿಕತೆ ಮತ್ತು ಅನುಭಾವದ ನಡುವೆ ಸೇತು ನಿರ್ಮಿಸಿ ಮುನ್ನಡೆದಲ್ಲಿ ಈ `ಹಿಂದುತ್ವ ರಾಜಕಾರಣ’ವು ಖಂಡಿತ ವಿಫಲಗೊಳ್ಳುವುದು.

11. ನಾಗೇಗೌಡ: ನೀವು ಇನ್ನೂ ಯುವಕರು, ನಿಮ್ಮನ್ನು, ನನ್ನನ್ನು ಸೇರಿದಂತೆ ನಾವುಗಳು ಹೆಚ್ಚಿನ ಸಮಯ ಆನ್‍ಲೈನ್‍ನಲ್ಲಿ ಕಳೆಯುತ್ತೇವೆ. ಇದೊಂದು ರೀತಿಯ ಡಿಜಿಟಲ್ ಲೋಕಾಂತ. ಇಂತಹ ಡಿಜಿಟಲ್ ಲೋಕಾಂತದಲ್ಲಿ ಏಕಾಂತವನ್ನು ನೀವು ಹೇಗೆ ಸೃಷ್ಟಿಸಿಕೊಳ್ಳುತ್ತಿರಿ?

ರಾಜೇಂದ್ರ: ಏಕಾಂತದಲ್ಲಿ ಅತ್ಮರತಿಯನ್ನು ಬರೆದುಕೊಳ್ಳಬಹುದೇ ಹೊರತು ಕಾವ್ಯವನ್ನಲ್ಲ! ಲೋಕಾಂತವೇ ಕಾವ್ಯದ ಬಹುದೊಡ್ಡ ಕ್ಯಾನ್ವಾಸ್ ಆಗಿದೆ. ಕಾಲ ಬದಲಾದಂತೆ ಅದರ ಮಾಧ್ಯಮವೂ ಬದಲಾಗಿದೆ. ಇಂದಿನ ಕಾವ್ಯಕ್ಕೆ ಏಕಾಂತ ಮತ್ತು ಲೋಕಾಂತ ಎಂಬ ಹಂಗುಗಳು ಕಡಿಮೆಯಾಗತೊಡಗಿ ಹೊಸ ಹೊಸ ಸಾಧ್ಯತೆಗಳು ತೆರೆದುಕೊಂಡಿವೆ. ವರ್ತಮಾನದ ಧಾವಂತದ ಬದುಕಿನಲ್ಲಿ ನಾವು ಪರಸ್ಪರ ಭೇಟಿಯಾಗಿ ಮಾತನಾಡುತ್ತ, ಚರ್ಚಿಸುತ್ತಾ ಕೂರಲು ನಮ್ಮಲ್ಲಿ ಸಮಯವಿಲ್ಲ. ಈ ಕಾಲಕ್ಕೆ `ಸಂಪಾದನೆ’ ಮುಖ್ಯ. ಸಂಪಾದನೆ ಇಲ್ಲವಾದರೆ ಹೀಗೆ ನಾವಿಬ್ಬರು ಮಾತನಾಡುವುದೂ ಕೂಡ ಕಷ್ಟವಾಗುತ್ತದೆ. ಹಾಗಿದ್ದಾಗ ಅವನ ಸಂಪಾದನೆಯ ಕಾಯಕದ ನಡುವಿನ ಬಿಡುವಿನ ಸಮಯದಲ್ಲಿ ಈ `ಡಿಜಿಟಲ್ ಲೋಕಾಂತ’ ನಮ್ಮ ಕೈಗೆಟುಕುತ್ತಿದೆ. ಇಲ್ಲವಾದರೆ ನಾವು ಇನ್ನಷ್ಟು ಒಬ್ಬಂಟಿಗರಾಗಿ ಮನೋರೋಗಿಗಳಾಗಿ ಬಿಡುತ್ತಿದ್ದೇವೇನೋ, ತಿಳಿಯದು. ಈ ಡಿಜಿಟಲ್ ಲೋಕಾಂತಕ್ಕೆ ಅದರದೇ ಆದ ಸೀಮಿತ ವ್ಯಾಪ್ತಿ ಇದೆ. ಅಲ್ಲಿ ಅನುಕೂಲದಷ್ಟೇ.. ಅನಾನುಕೂಲವೂ ಇದೆ. ಇವೆಲ್ಲ ಬದುಕಿನ ಭಾಗಗಳು ಅಷ್ಟೇ! ಈಗಾಗಲೇ ಮನುಷ್ಯ ಇದೆಲ್ಲಾ ಸಾಕಾಗಿ ಮತ್ತೆ ಹಳೆಯ ದಾರಿಯನ್ನು ಹುಡುಕುತ್ತಿರುವುದು ನಿಮಗೆ ತಿಳಿಯದ ವಿಷಯವೇನಲ್ಲ.

12. ನಾಗೇಗೌಡ: ನೀವು ಮನುಷ್ಯನ ಎಲ್ಲ ರೀತಿಯ ಭಾವನೆಗಳ ಮೇಲೆ ಕಾವ್ಯವನ್ನು ಬರೆದಿದ್ದೀರಿ, ಈಗ ನೀವು ಪ್ರಕಟಿಸುತ್ತಿರುವ ‘ಬ್ರೆಕ್ಟ್ ಪರಿಣಾಮ” ಕವನ ಸಂಕಲನದ ಹಿನ್ನೆಲೆಯಲ್ಲಿ ಪ್ರಶ್ನೆ ಕೇಳುವುದಾದರೆ ಈ ಶತಮಾನವೇ ರಾಜಕೀಯ ಯುಗಧರ್ಮದ್ದು, ಇಂತಹ ಯುಗಧರ್ಮಕ್ಕೆ ಇವತ್ತಿನ ಕವಿಗಳು ಪ್ರತಿಸ್ಪಂದಿಸುತ್ತಿದ್ದಾರೆಯೇ?

ರಾಜೇಂದ್ರ: ರಾಜಕೀಯ ಎಲ್ಲಾ ಕಾಲದ ಯುಗಧರ್ಮದ ಒಂದು ಅವಿಭಾಜ್ಯ ಭಾಗ. ಈ ಕಾಲದಲ್ಲಂತೂ ಅಮೂಲ್ಯ ಭಾಗ. ಯಾಕೆಂದರೆ ಈಗ ಪ್ರಭುತ್ವ, ಪ್ರಜೆಗಳಿಂದ ನಡೆಸಲ್ಪಡುತ್ತಿದೆ. ಹೀಗೆ ತಮ್ಮ ಪ್ರಭುತ್ವವನ್ನು ಸಾಮಾನ್ಯ ಜನ ತಾವೇ ಆರಿಸಿಕೊಳ್ಳುವ ಅಮೂಲ್ಯ ಭಾಗವಾಗಿ ರಾಜಕಾರಣವಿದೆ. ಹೀಗೆ ಆರಿಸಲ್ಪಟ್ಟ ಪ್ರಭುತ್ವ ಅಥವಾ ಸರಕಾರ ಈ ನೆಲದ ಎಲ್ಲಾ ಆಗುಹೋಗುಗಳಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣವಾಗಿರುತ್ತದೆ. ಎಂತಹುದೇ ಆದರ್ಶಮಯ ಪ್ರಭುತ್ವ ಅಥವಾ ಸರಕಾರ ಆಡಳಿತದಲ್ಲಿದ್ದರೂ ಕವಿ ಅಥವಾ ಕಲಾವಿದ ಅಂತಹ ಪ್ರಭುತ್ವ ಅಥವಾ ಸರಕಾರದ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಇವನದ್ದು ಸದಾ ವಿರೋಧ ಪಕ್ಷದ ಸ್ಥಾನ. ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಅದರ ಲೋಪದೋಷಗಳನ್ನು ಹುಡುಕಿ ಟೀಕಿಸುತ್ತಾ, ಅನ್ಯಾಯವನ್ನು ಪ್ರತಿಭಟಿಸುತ್ತಾ ಸಾಗಬೇಕು. ಕವಿಗಳು ಒಂಥರಾ ರಾಜಕೀಯ ಕಾರ್ಯಕರ್ತರು! ಎಲ್ಲ ಕಾಲದ ರಾಜಕೀಯ ಮೀಮಾಂಸೆ ನಮಗೆ ಸಿಕ್ಕುತ್ತಿರುವುದೇ ಕವಿಗಳ ಕಾವ್ಯಗಳಿಂದ. ರಾಮಾಯಣ, ಮಹಾಭಾರತ, ಮಂಟೇಸ್ವಾಮಿ ಕಾವ್ಯಗಳು ಕೂಡ ರಾಜಕೀಯವನ್ನೇ ಮಾತಾಡುತ್ತಿವೆ. ಹಾಗಿರುವಾಗ ಕವಿಯು ರಾಜಕಾರಣವನ್ನು ಮಾತಾಡುವುದು ಆತನ ಕಾವ್ಯ ಧರ್ಮವೇ ಆಗಿದೆ.

ಆದರೆ ಈಚೆಗೆ ರಾಜಕೀಯವನ್ನು ಕವಿ-ಕಲಾವಿದರು ಮಾತನಾಡಬಾರದು ಎನ್ನುವ ಕೆಟ್ಟ ಸಂಪ್ರದಾಯವನ್ನು ಕೆಲವರು ಹುಟ್ಟುಹಾಕುತ್ತಿದ್ದಾರೆ. ಅಂತಹ ಪ್ರಕ್ರಿಯೆ ಕೂಡ ರಾಜಕಾರಣದ ಒಂದು ತಂತ್ರವೇ ಆಗಿದೆ ಎಂಬುದನ್ನು ನಾವು ಮರೆಯಬಾರದು. ನೀನು ಒಳ್ಳೆಯ ಕವಿ, ಒಳ್ಳೆಯ ಸಂಗೀತಗಾರ, ಒಳ್ಳೆಯ ಫೋಟೋಗ್ರಾಫರ್, ಹೀಗಿರುವಾಗ ನಿನಗೇಕೆ ರಾಜಕೀಯ ಎನ್ನುತ್ತಾ ಫೋನು ಮಾಡುವ, ಮೆಸೇಜು ಮಾಡುವ ಮಂದಿ ಈಚೆಗೆ ಹೆಚ್ಚಾಗಿದ್ದಾರೆ. ಇಂತಹ ಮಾತು ಅವರಿಂದ ಹೊರಬರುತ್ತಿರುವುದಕ್ಕೆ ಕಾರಣ `ನಾವು ಅವರ ರಾಜಕೀಯ ಅಭಿಪ್ರಾಯಕ್ಕೆ ವಿರುದ್ದವಾದ ಅಭಿಪ್ರಾಯವನ್ನು ಮಂಡಿಸುತ್ತಿದ್ದೇವೆ’ ಎಂಬುದಷ್ಟೇ ಕಾರಣ. ಅದರಲ್ಲೂ ಕೆಲವು ನಿರ್ದಿಷ್ಟ ಮೇಲ್ವರ್ಗದ ಸಮುದಾಯಗಳು ಉಳಿದವರಲ್ಲಿ ಈತರದ ರಾಜಕೀಯ ನಿರ್ಲಿಪ್ತತೆಯನ್ನು ಹುಟ್ಟುಹಾಕಲು ಸತತ ಪ್ರಯತ್ನ ಮಾಡುತ್ತಿರುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಆದರೆ ವರ್ತಮಾನದಲ್ಲಿ `ರಾಜಕೀಯ ನಿರ್ಲಿಪ್ತತೆ’ ಎಂಬುದೊಂದು ಬಹುಅಪಾಯಕಾರಿ ಮನೋಬೆಳವಣಿಗೆ. ಅಕ್ಷರಸ್ತ ಸಮುದಾಯವನ್ನು ಬಳಸಿಕೊಂಡು ರಾಜಕೀಯ ಮನೋವಿಕಾರತೆಯನ್ನು ಸೃಷ್ಟಿಸಲಾಗುತ್ತಿದೆ. ಇದು ಎಲ್ಲಾ ದೇಶಗಳನ್ನೂ ಈಗ ಸಾಮಾನ್ಯವಾಗಿಬಿಟ್ಟಿದೆ. ಆದರೆ ಭಾರತದಂತಹ ದೇಶದಲ್ಲಿ ಇದರ ಪ್ರಭಾವ ಹೆಚ್ಚು. ಸುಳ್ಳು ಸುದ್ದಿಗಳು, ತಿದ್ದಿದ ಫೋಟೋಗಳು, ಸಮಾಜ ಸುಧಾರಕರ ಮಾತುಗಳ ತಿರುಚುವಿಕೆ, ಮತ ವೈಷಮ್ಯ ಇತ್ಯಾದಿಗಳು ಶರವೇಗದಲ್ಲಿ ಜನರನ್ನು ತಲುಪಿ ಅವರ ಮನಸ್ಸನ್ನು ಕ್ಷುದ್ರಗೊಳಿಸುವ ಕಾರ್ಯವನ್ನು ಮಾಡುತ್ತಿವೆ. ಅವು ಗೋರಕ್ಷಣೆ ಹೆಸರಿನ ಹಿಂಸಾಚಾರ, ಪ್ರಗತಿಪರ ಬರಹಗಾರರ ಕೊಲೆ, ಕೋಮು ಗಲಭೆಗಳು, ದಲಿತರ ಮೇಲಿನ ದೌರ್ಜನ್ಯ, ಅಧಿಕಾರದ ದುರುಪಯೋಗ, ಆರ್ಥಿಕ ಕುಸಿತ, ನಿರುದ್ಯೋಗದ ಬವಣೆ, ಬಡಜನರಿಗೆ ಕೊಡುವ ಪಡಿತರದ ಸಬ್ಸಿಡಿ ಕಡಿತಗೊಳಿಸುವುದು ಇತ್ಯಾದಿಗಳು ಈಗ ಸಾವಕಾಶ ನಡೆಯುತ್ತಿವೆ. ಹೀಗೆ ಜನಸಾಮಾನ್ಯನ ಬದುಕು ಮೂರಾಬಟ್ಟೆಯಾಗುತ್ತಿರುವಾಗ ಕವಿಯೊಬ್ಬ ಕುಳಿತು ಸೇವಂತಿಗೆಯ ಕವಿತೆ ಬರೆಯುವುದು ಹೇಗೆ ಕಾಣುತ್ತದೆ?! ಅದಾಗಲೇ ನಾವು ಮಾತಾಡಿದಂತೆ ಕವಿ ವಾಸ್ತವದ ಮೇಲೆ ಕಲ್ಪಿತವಾಸ್ತವವನ್ನು ಕಟ್ಟಬಲ್ಲ.. ಆದರೆ ಅವನು ಕಲ್ಪನಾ ವಿಲಾಸದಲ್ಲೇ ಮುಳುಗಿಬಿಟ್ಟರೆ ಹೇಗೆ?! ವಾಸ್ತವವನ್ನು ಮರೆಮಾಚಿ ಎಷ್ಟು ಗಾಳಿಗೋಪುರಗಳನ್ನ ಕಟ್ಟಿ ಏನು ಪ್ರಯೋಜನ? ಹಾಗಾಗಿ ಕವಿ ಅಥವಾ ಕಲಾವಿದ ಇಂದು ರಾಜಕಾರಣವನ್ನು ಮಾತಾಡಬೇಕು. ಹೆಚ್ಚು ಹೆಚ್ಚು ಮಾತನಾಡುತ್ತಾ ಆಳುವ ವರ್ಗವು ಅನ್ಯಾಯವೆಸಗಲು ಹೆದರುವಷ್ಟು ಮಾತನಾಡಬೇಕು. ಆದರೆ ಯಾವುದೇ ಪಕ್ಷದ ವಕ್ತಾರರಾಗಬಾರದು. ಅಂತಹ ಮಾತು ಬರಿಯ ಮಾತಾದರೆ ಕಾಲದಲ್ಲಿ ಕಳೆದುಹೋಗುತ್ತದೆ. ಅದು ಕಾವ್ಯವಾಗಿಯೂ ಉಳಿಯಬೇಕು.

ರಾಜೇಂದ್ರ ಪ್ರಸಾದರ ನೂತನ ಕವನ ಸಂಕಲನ

ಇವತ್ತಿನ ಕಾಲದ ಕವಿ ರಾಜಕಾರಣವನ್ನು ಬರೆಯಲು ಹೆದರುತ್ತಿದ್ದಾನೆ. ಅವನನ್ನು ಎಲ್ಲ ರೀತಿಯಿಂದಲೂ ಹೆದರಿಸುತ್ತಿದ್ದಾರೆ. ಒಂದೆಡೆ ಸರಕಾರದೊಳಗಿರುವ ಪುಡಾರಿಗಳು ಮತ್ತೊಂದೆಡೆ ಮೊಂಡು ಧಾರ್ಮಿಕ ಪಂಗಡಗಳ ಬಾಲಬಡುಕರು. ಕವಿಗೆ ಈಗ ಕಾನೂನಿನ ರಕ್ಷಣೆ ಇರಲಿ ನೈತಿಕ ರಕ್ಷಣೆ ಕೂಡ ಇಲ್ಲ. ರಾಜಕಾರಣವನ್ನು ಬರೆಯುವವನನ್ನು, ಹೆಚ್ಚು ಟೀಕಿಸುತ್ತಾ ಮಾತನಾಡುವವನನ್ನು `ದೇಶದ್ರೋಹಿ’ ಎಂದು ಕರೆಯಲಾಗುತ್ತಿದೆ. ಮತ್ತೊಂದೆಡೆ ಮೃದುವಾಗಿ ಭಾಷಣ ಮತ್ತು ಹಿತೋಪದೇಶಗಳ ಮೂಲಕ ರಾಜಕಾರಣವನ್ನು ಮಾತನಾಡದಂತೆ ತಡೆಹಿಡಿಯಲಾಗುತ್ತಿದೆ. ಹಾಗಾಗಿ ಹೊಸಕಾಲದ ಕವಿಗಳ ರಾಜಕಾರಣ ಪ್ರತಿಸ್ಪಂದನೆಯು ತೃಪ್ತಿಕರವಾಗಿಲ್ಲ ಎಂದು ಹೇಳಬಹುದು ಅಷ್ಟೇ! .

`ಬ್ರೆಕ್ಟ್ ಪರಿಣಾಮ’ ಈ ನಿಟ್ಟಿನಲ್ಲಿ ಒಂದು ಪ್ರಯೋಗ. ಹಿಟ್ಲರ್ ಕಾಲದ ಜರ್ಮನಿಯ ಪ್ರಸಿದ್ದ ನಾಟಕಕಾರ ಮತ್ತು ಕವಿ ಬರ್ಟೋಲ್ಟ್ ಬ್ರೆಕ್ಟ್! ಹಿಟ್ಲರನ ದುರಾಡಳಿತವನ್ನು, ಆತನ ನೀತಿಗಳನ್ನು ಕಟುವಾಗಿ ಟೀಕಿಸುತ್ತಿದ್ದ ಬ್ರೆಕ್ಟ್ ಆತನನ್ನು ಬಣ್ಣಗಾರ ಎಂದು ಮೂದಲಿಸುತ್ತಾ ಆ ಹೊತ್ತಿನ ತಲ್ಲಣಗಳನ್ನು ಕವಿತೆಯಾಗಿಸಿದ. ರಾಜಕಾರಣವನ್ನು ತನ್ನದೇ ಆದ ಧಾಟಿಯಲ್ಲಿ ಮಾತನಾಡುತ್ತಾ ಇವತ್ತಿನವರೆಗೂ ಜನರನ್ನು ತಲುಪುತ್ತಲೇ ಇದ್ದಾನೆ. ಅವನ ಕಾವ್ಯಮಾರ್ಗ ನನ್ನನ್ನು ರಾಜಕೀಯವಾಗಿ ಹೆಚ್ಚು ಪ್ರಭಾವಿಸಿತು. ಹಾಗಾಗಿ ಕಳೆದೊಂದು ದಶಕದಲ್ಲಿ ಬರೆದ ರಾಜಕಾರಣದ ದೃಷ್ಟಿಕೋನದ ಕವಿತೆಗಳನ್ನು ಒಟ್ಟು ಸೇರಿಸಿ `ಬ್ರೆಕ್ಟ್ ಪರಿಣಾಮ’ ಎಂದು ಹೆಸರಿಟ್ಟಿದ್ದೇನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...