Homeಅಂಕಣಗಳುಲೋಕಸಭಾ ಚುನಾವಣೆಯ ಫಲಿತಾಂಶ ಸ್ಪಷ್ಟ : ಬಹುಮತ ಅಸ್ಪಷ್ಟ

ಲೋಕಸಭಾ ಚುನಾವಣೆಯ ಫಲಿತಾಂಶ ಸ್ಪಷ್ಟ : ಬಹುಮತ ಅಸ್ಪಷ್ಟ

- Advertisement -
- Advertisement -

|  ನೀಲಗಾರ |

2019ರ ಲೋಕಸಭೆ ಚುನಾವಣೆಯ ಫಲಿತಾಂಶದ ದಿಕ್ಕು ಸ್ಪಷ್ಟವಾಗಿದೆ. ಪ್ರಧಾನಿ ಯಾರೇ ಆದರೂ, ಖಿಚಡಿಯಂತೂ ಇದ್ದೇ ಇರುತ್ತದೆ. ಜನವರಿಯಲ್ಲೊಮ್ಮೆ ಮತ್ತು ಮಾರ್ಚ್‍ನಲ್ಲೊಮ್ಮೆ ಸಮೀಕ್ಷೆ ನಡೆಸಿರುವ ಟೈಮ್ಸ್ ನೌ ಹಾಗೂ ವಿಎಂಆರ್ ಸಂಸ್ಥೆಗಳು ನಿನ್ನೆಯಷ್ಟೇ ತಮ್ಮ ‘ಫಲಿತಾಂಶ’ವನ್ನು ಪ್ರಕಟಿಸಿವೆ. ಅದರ ಪ್ರಕಾರ ಜನವರಿಯಲ್ಲಿ ಬಹುಮತಕ್ಕಿಂತ ಇಪ್ಪತ್ತು ಸೀಟುಗಳು ಕಡಿಮೆ ಬರುತ್ತಿದ್ದರೆ, ಈಗ ಬಹುಮತಕ್ಕಿಂತ ಹತ್ತು ಸೀಟುಗಳು ಹೆಚ್ಚೇ ದೊರೆಯಲಿವೆ. ಯಾರೂ ಊಹಿಸಬಹುದಾದಂತೆ ಈ ಹೆಚ್ಚಳಕ್ಕೆ ಪುಲ್ವಾಮಾ ದಾಳಿ ಮತ್ತು ಪಾಕಿಸ್ತಾನದ ಮೇಲೆ ಭಾರತದ ಸೈನ್ಯವು ನಡೆಸಿದ ದಾಳಿಯೇ ಇದಕ್ಕೆ ಕಾರಣವಂತೆ. ಈ ಸಮೀಕ್ಷೆಗೆ ಮುಂಚೆ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯ ಪ್ರಕಾರವೂ ಮಾರ್ಚ್‍ನಲ್ಲಿ ಮೋದಿ ಪರವಾಗಿ ಒಂದಷ್ಟು ಅಲೆ ಬೀಸಿದೆ. ಆ ವಾಹಿನಿಯು ವಿವಿಧ ಸಮುದಾಯಗಳ ಪ್ರತ್ಯೇಕ ಸಮೀಕ್ಷೆಯನ್ನೂ ನಡೆಸಿತ್ತು. ಮೇಲ್ಜಾತಿಗಳು ಮತ್ತು ಓಬಿಸಿ ಸಮುದಾಯಗಳು ಹಿಂದಿಗಿಂತ ಮೋದಿ ಪರವಾದ ಒಲವನ್ನು ಹೆಚ್ಚಾಗಿಸಿಕೊಂಡಿದ್ದರೆ, ಎಸ್‍ಸಿ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಒಲವು ಹಿಂದಿಗಿಂತ ಕಡಿಮೆಯಾಗಿದೆ!

ಇವುಗಳಿಗಿಂತ ಸ್ವಾರಸ್ಯಕರವಾದ ಇನ್ನೊಂದು ಸಮೀಕ್ಷೆಯೂ ಇತ್ತೀಚೆಗೆ ಪ್ರಕಟವಾಯಿತು. ಅದು ಸಮೀಕ್ಷೆಗಳ ಸಮೀಕ್ಷೆ. ನೀಲಕಾಂತ ಮಿಶ್ರಾ ಮತ್ತು ಪ್ರತೀಕ್ ಸಿಂಗ್ ಎಂಬಿಬ್ಬರು ಮಾಡಿರುವ ಈ ಸಂಶೋಧನೆಯು 1999ರ ನಂತರ ಚುನಾವಣಾ ಸಮೀಕ್ಷೆಗಳು ಹೆಚ್ಚೆಚ್ಚು ವಾಸ್ತವದಿಂದ ದೂರ ಸರಿಯುತ್ತಿವೆ ಎಂಬುದನ್ನು ಸಾಬೀತುಪಡಿಸುತ್ತದೆ. ಅದರಲ್ಲೂ 2014ರ ನಂತರದ ರಾಜ್ಯ ವಿಧಾನಸಭಾ ಚುನಾವಣಾ ಸಮೀಕ್ಷೆಗಳಲ್ಲಿ ಶೇ.85ರಷ್ಟು ತಪ್ಪಾಗಿವೆ. 2014ರವರೆಗೆ ಕಾಂಗ್ರೆಸ್ಸಿಗೆ ಹೆಚ್ಚಿನ ಸೀಟುಗಳನ್ನು ಊಹಿಸುತ್ತಿದ್ದ ಸಮೀಕ್ಷೆಗಳು, ಆ ನಂತರ ಹೆಚ್ಚು ಬಿಜೆಪಿಯ ಪರವಾಗಿರುವ ‘ಆಕಸ್ಮಿಕ’ವೂ ನಡೆದಿರುವುದನ್ನು ಕಾಣುತ್ತೇವೆ.

ಇಂತಹ ಸಮೀಕ್ಷೆಗಳಲ್ಲಿ ಸಾಮಾನ್ಯವಾಗಿ ಆಗುವ ಒಂದು ಸಮಸ್ಯೆಯೆಂದರೆ, ಮೇಲ್ಜಾತಿಗಳ ಮತ್ತು ‘ಸುಶಿಕ್ಷಿತ’ ವಿಭಾಗಗಳು ತಮ್ಮ ಅನಿಸಿಕೆಗಳನ್ನು ಧೈರ್ಯವಾಗಿ ಮುಂದಿಡುತ್ತಾರೆ; ಶೋಷಿತ ಸಮುದಾಯಗಳ ಮತ್ತು ಗಟ್ಟಿಯಾಗಿ ಸಾರ್ವಜನಿಕರಿಗೆ, ಅಪರಿಚಿತರಿಗೆ ತಮ್ಮ ಅಭಿಪ್ರಾಯ ಹೇಳಲು ಹಿಂಜರಿಯುವ ಜನರ ಅಭಿಪ್ರಾಯಗಳು ಸರಿಯಾಗಿ ದಾಖಲಾಗುವುದಿಲ್ಲ. ಇದ್ದುದರಲ್ಲಿ ಚುನಾವಣಾಪೂರ್ವ ಸಮೀಕ್ಷೆಗಳಿಗಿಂತ, ಮತಗಟ್ಟೆ ಸಮೀಕ್ಷೆಗಳು ಹೆಚ್ಚು ವಾಸ್ತವಕ್ಕೆ ಹತ್ತಿರವಾಗಿರುತ್ತವೆ. ಆದರೆ, ಇವೂ ಸಹಾ ಕೆಲವೊಮ್ಮೆ ‘ಅಲೆ’ಗಳನ್ನು ಸರಿಯಾಗಿ ಅಂದಾಜಿಸದೇ ಹೋಗಿರುವುದೂ ಇದೆ.

ಇದಲ್ಲದೇ ಚುನಾವಣಾಪೂರ್ವ ಸಮೀಕ್ಷೆಗಳೂ ಸಹಾ ಒಂದು ರೀತಿಯ ಪ್ರಚಾರವೇ ಆಗಿರುತ್ತವೆ. ಮುಂಚೂಣಿಯಲ್ಲಿವೆ ಎಂದು ಬಿಂಬಿಸಲಾಗುವ ಪಕ್ಷಗಳ ಕಾರ್ಯಕರ್ತರಿಗೆ ಅದು ಹುಮ್ಮಸ್ಸನ್ನು ಹೆಚ್ಚಿಸುತ್ತವೆ. ಇಂತಹ ಸಮೀಕ್ಷೆ ನಡೆಸುವ ಸಂಸ್ಥೆಗಳ ಮೇಲೂ ನಡೆದ ‘ಕುಟುಕು ಕಾರ್ಯಾಚರಣೆ’ಯು ಇವರನ್ನೂ ಕೊಳ್ಳಬಹುದು ಎಂಬುದನ್ನೂ ಸಾಬೀತುಪಡಿಸಿತು. ಈ ಎಲ್ಲಾ ಕಾರಣಗಳಿಂದ ಸಮೀಕ್ಷೆಗಳ ಮೇಲೆ ವಿಶ್ವಾಸ ಕಡಿಮೆಯಾಗುತ್ತಾ ಇದೆ.

ಆದರೆ, ಸಂಪೂರ್ಣ ಬಿಜೆಪಿಯ ಜೊತೆಗಿರುವ ಟೈಂಸ್ ನೌನವರು ಜನವರಿಯಲ್ಲಿ ನಡೆಸಿದ ಸಮೀಕ್ಷೆಯು ಎನ್‍ಡಿಎಗೆ ಬಹುಮತ ಬರುವುದಿಲ್ಲ ಎಂದು ಹೇಳಿತ್ತು. ವಾಸ್ತವವನ್ನು ಸಂಪೂರ್ಣ ಮರೆಮಾಚುವುದು ಸಾಧ್ಯವೇ ಇಲ್ಲವಾದ್ದರಿಂದ ಅವರು ಅಷ್ಟನ್ನು ಹೇಳಲೇಬೇಕಿತ್ತು. ಇದು ಕೆಲವರಿಗೆ ಆಶ್ಚರ್ಯವನ್ನು ತರಬಹುದು. ಆದರೆ, ವಾಸ್ತವವೇನೆಂದರೆ 2014ರಲ್ಲಿ ನಡೆದದ್ದು ಒಂದು ಆಕಸ್ಮಿಕ ಅಷ್ಟೇ. ಇದನ್ನು ‘ಕಪ್ಪು ಹಂಸ (black swan)’ ಘಟನೆ ಎನ್ನುತ್ತಾರೆ. ಅಂದರೆ, ನೂರಾರು ವರ್ಷಗಳಿಗೊಮ್ಮೆ ವಿಶ್ವ ಪರ್ಯಟನಕಾರರಿಗೆ ಎಲ್ಲೋ ಕಪ್ಪು ಹಂಸ ಕಂಡರೆ, ಎಲ್ಲೆಡೆ ಕಪ್ಪು ಹಂಸಗಳು ಇವೆ ಎಂಬ ತೀರ್ಮಾನಕ್ಕೆ ಬರಲಾಗುವುದಿಲ್ಲ; ಮತ್ತೆ ಎಲ್ಲೋ ನೂರಾರು ವರ್ಷಗಳ ನಂತರ ಅಂತಹುದೇ ಕಪ್ಪು ಹಂಸ ಕಾಣಬಹುದು ಅಷ್ಟೇ. 2014ರಲ್ಲಿ ನಡೆದದ್ದು ಕಪ್ಪುಹಂಸ ಘಟನೆ ಏಕೆ?

ಏಕೆಂದರೆ, 2014ರಲ್ಲಿ ದೇಶದ ಒಟ್ಟೂ ಲೋಕಸಭಾ ಕ್ಷೇತ್ರಗಳ ಪೈಕಿ ಶೇ.60 ಕ್ಷೇತ್ರಗಳಿರುವ 11 ರಾಜ್ಯಗಳಲ್ಲಿ ಶೇ.90ರಷ್ಟನ್ನು ಬಿಜೆಪಿಯೇ ಗೆದ್ದಿತ್ತು. ಅದರಿಂದ ಹೊರಗಿರುವ ಶೇ.40ರಷ್ಟು ರಾಜ್ಯಗಳಲ್ಲಿ ಬಿಜೆಪಿ ಗೆದ್ದ ಕ್ಷೇತ್ರಗಳು ಬೆರಳೆಣಿಕೆಯಷ್ಟೇ. ಈಗ ಬಿಜೆಪಿಯು ಮತ್ತೆ ಸಂಪೂರ್ಣ ಮೆಜಾರಿಟಿ ಪಡೆದುಕೊಳ್ಳಬೇಕಿದ್ದರೆ ಆಗಬೇಕಿದ್ದೇನು? ಶೇ.40ರಷ್ಟು ಇತರ ರಾಜ್ಯಗಳಲ್ಲೂ ತನ್ನ ಪ್ರಭಾವ ಬೆಳೆಸಿಕೊಳ್ಳುವುದು. ಅದು ಸಾಧ್ಯವಾಗಿದೆಯೇ? ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ಪ.ಬಂಗಾಳ, ಒರಿಸ್ಸಾದಂತಹ ದೊಡ್ಡ ರಾಜ್ಯಗಳಲ್ಲಿ ಅದಾಗಬೇಕಿತ್ತು. ಇವುಗಳಲ್ಲಿ ಕೇರಳ ಮತ್ತು ಪ.ಬಂಗಾಳಗಳಲ್ಲಿ ಹಿಂದಿಗಿಂತ ಹೆಚ್ಚಿನ ಮತ ಬರುತ್ತದಾದರೂ, ಸೀಟುಗಳಲ್ಲಿ ಗಣನೀಯ ಭಾಗ ಹೆಚ್ಚಾಗುವ ಸಾಧ್ಯತೆ ಇಲ್ಲ.

ಅದೇ ಸಂದರ್ಭದಲ್ಲಿ ಶೇ.90ರಷ್ಟು ಸೀಟುಗಳನ್ನು ಪಡೆದುಕೊಂಡ ರಾಜ್ಯಗಳಲ್ಲಿ ಅದೇ ರೀತಿಯ ಸಾಧನೆ ಸಾಧ್ಯವಿಲ್ಲ. ಏಕೆಂದರೆ, ಅವುಗಳಲ್ಲಿ 7 ರಾಜ್ಯಗಳಲ್ಲಿ ಶೇ.100ರಷ್ಟು ಸೀಟುಗಳು ಬಿಜೆಪಿ ಪಾಲಾಗಿದ್ದವು!! ಈ ರಾಜ್ಯಗಳಲ್ಲಿ ಕೆಲವದ್ದರಲ್ಲಿ ಲೋಕಸಭಾ ಚುನಾವಣೆ ನಡೆದ ತಕ್ಷಣದಲ್ಲೇ ವಿಧಾನಸಭೆ ಚುನಾವಣೆಯೂ ನಡೆದು ಬಿಜೆಪಿ ಅಧಿಕಾರಕ್ಕೆ ಬಂದಿತು. ಅಲ್ಲಿ ಆಡಳಿತ ವಿರೋಧಿ ಅಲೆಯು ಸ್ಥಳೀಯವಾಗಿಯೂ ಅದರ ವಿರುದ್ಧ (ಉ.ಪ್ರದೇಶ, ಮಹಾರಾಷ್ಟ್ರ, ಹರಿಯಾಣ ಇತ್ಯಾದಿ) ಕೆಲಸ ಮಾಡುವ ಸಾಧ್ಯತೆ ಹೆಚ್ಚು. ಇನ್ನು ಉಳಿದ ಕೆಲವು ರಾಜ್ಯಗಳಲ್ಲಿ ತೀರಾ ಇತ್ತೀಚೆಗೆ ಚುನಾವಣೆ ನಡೆದು ಅಲ್ಲೆಲ್ಲಾ ಬಿಜೆಪಿ ಸೋತಿದೆ (ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‍ಗಢ). ಮೋದಿಯವರ ಸ್ವಂತ ರಾಜ್ಯ ಗುಜರಾತಿನಲ್ಲಿ ನಿರಂತರವಾಗಿ ಪ್ರತಿ ಚುನಾವಣೆಯಲ್ಲೂ ಬಿಜೆಪಿಯ ಮತ ಪ್ರಮಾಣ ಕಡಿಮೆಯಾಗುತ್ತಿದೆ. ಕಪ್ಪುಹಂಸ ವಿದ್ಯಮಾನ ಈ ರಾಜ್ಯಗಳಲ್ಲಿ ಪುನರಾವರ್ತನೆಯಾಗದಿರಲು ಈ ರೀತಿಯಾದ ಹಲವು ಕಾರಣಗಳಿವೆ.

ಹೀಗಾಗಿ ಬಿಜೆಪಿಗೆ ಬಹುಮತ ಬರಲು ಸಾಧ್ಯವೇ ಇಲ್ಲ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿಯೇ ಸಮೀಕ್ಷೆಗಳಲ್ಲೂ ಎನ್‍ಡಿಎಗೆ ಬಹುಮತ ಸಿಗುತ್ತದೋ ಇಲ್ಲವೋ ಎಂಬ ಚರ್ಚೆಯೇ ಇದೆ. ಬಿಜೆಪಿಯ ಮೈತ್ರಿ ಪಕ್ಷಗಳಲ್ಲೂ ಶಿವಸೇನೆ, ಜೆಡಿಯು ಬಿಟ್ಟರೆ, ಪಂಜಾಬಿನ ಅಕಾಲಿದಳ ಹಾಗೂ ತ.ನಾಡಿನ ಅಣ್ಣಾ ಡಿಎಂಕೆಗಳು ಈ ಸಾರಿ ಸಂಪೂರ್ಣ ಮಕಾಡೆ ಮಲಗಿಬಿಟ್ಟಿವೆ. ಇನ್ನುಳಿದಂತೆ ಬಿಜೆಪಿಗೆ ಬೇರೆ ದೊಡ್ಡ ಮೈತ್ರಿ ಪಕ್ಷಗಳು ಇಲ್ಲ.

ಇವೆಲ್ಲದರ ಆಧಾರದ ಮೇಲೆ ಟೈಮ್ಸ್ ನೌ ಸಮೀಕ್ಷೆಯನ್ನು ಸಮೀಕ್ಷಿಸೋಣ. ಜನವರಿಯ ಸಮೀಕ್ಷೆಗೆ ಹೋಲಿಸಿದರೆ ಮಾರ್ಚ್‍ನಲ್ಲಿ ಎಲ್ಲಾ ರಾಜ್ಯಗಳಲ್ಲೂ ಒಂದೆರಡು ಸೀಟುಗಳು ಹೆಚ್ಚು ಬರುತ್ತವೆಂದೂ, ಉತ್ತರ ಪ್ರದೇಶದಲ್ಲಿ 15 ಸೀಟುಗಳು ಹೆಚ್ಚಾಗುತ್ತವೆಂದೂ ಸಮೀಕ್ಷೆ ಹೇಳುತ್ತಿದೆ. ಜನವರಿಯ ಸಮೀಕ್ಷೆಯಂತೆ ಎನ್‍ಡಿಎಗೆ 252, ಯುಪಿಎಗೆ 147 ಮತ್ತು ಇತರ ಪಕ್ಷಗಳಿಗೆ 144 ಸೀಟುಗಳು ಬರುತ್ತವೆಂದು ಹೇಳಲಾಗಿತ್ತು. ಮಾರ್ಚ್‍ನ ಸಮೀಕ್ಷೆಯಂತೆ ಎನ್‍ಡಿಎಗೆ 283, ಯುಪಿಎಗೆ 135 ಮತ್ತು ಇತರ ಪಕ್ಷಗಳಿಗೆ 125 ಸೀಟುಗಳು ಬರುತ್ತವೆಂದು ಹೇಳಲಾಗಿದೆ.

ಉತ್ತರ ಪ್ರದೇಶದಲ್ಲಿ ಹಾಗೂ ಉತ್ತರ ಭಾರತದ ಇನ್ನಿತರ ರಾಜ್ಯಗಳಲ್ಲಿ ಕಾಶ್ಮೀರ ಘಟನೆಯ ನಂತರ ಬಿಜೆಪಿಯ ಪರವಾದ ಅಲೆ ಬೀಸಿರುವುದರಿಂದ 31 ಸೀಟುಗಳು ಹೆಚ್ಚಾಗುತ್ತದೆಂಬುದು ಈ ಸಮೀಕ್ಷೆಯ ‘ನಿರೀಕ್ಷೆ’. ಬಿಜೆಪಿ ಪರವಾದ ಮಾಧ್ಯಮಗಳ ಇಂತಹ ನಿರೀಕ್ಷೆಗಳು ಅಷ್ಟು ನಿಜವಲ್ಲ ಎನಿಸಲು ಕಾರಣಗಳಿವೆ. ಗುಜರಾತ್‍ನಲ್ಲಿ ಈ ಸಾರಿಯೂ 26ರಲ್ಲಿ 24 ಸೀಟುಗಳನ್ನೂ, ಮಧ್ಯಪ್ರದೇಶದಲ್ಲಿ 29ರಲ್ಲಿ 22ನ್ನೂ, ರಾಜಸ್ತಾನದಲ್ಲಿ 25ರಲ್ಲಿ 20ನ್ನು ಬಿಜೆಪಿಯೇ ಗೆಲ್ಲುತ್ತದೆ ಎಂದು ಟೈಮ್ಸ್ ನೌ ನಿರೀಕ್ಷೆಯಾಗಿದೆ. ಅಂದರೆ ಹೆಚ್ಚು ಕಡಿಮೆ ಕಳೆದ ಸಾರಿಯದ್ದೇ ಪುನರಾವರ್ತನೆ. ಗುಜರಾತ್‍ನಲ್ಲಿ ಬಿಜೆಪಿ ಏದುಸಿರುಬಿಡುತ್ತಿದೆ ಮತ್ತು ಉಳಿದೆರಡು ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ಬಿಜೆಪಿ ಸೋತು ಕಾಂಗ್ರೆಸ್ ಗೆದ್ದಿದೆ ಎಂಬುದನ್ನು ಅವರೂ ಮರೆತು, ಮತದಾರರೂ ಮರೆತುಬಿಡಲಿ ಎಂದು ಇವರುಗಳು ಬಯಸುತ್ತಾರೆ.

ಇದರ ಅರ್ಥವೇನು? ಕಾಂಗ್ರೆಸ್‍ಗೆ ಬಹುಮತ ಬರುತ್ತದೆಂದೇ? ಮ್ಯಾಜಿಕ್ ಮಾಡಿದರೂ ಅದು ಸಾಧ್ಯವಿಲ್ಲ. ಯುಪಿಎಗೆ ಬಹುಮತ ಬರುತ್ತದೆಯೇ? ಅದು ಅಸಾಧ್ಯ. ಇನ್ನು ಇವೆರಡನ್ನೂ ಬಿಟ್ಟು ಉಳಿದ ಪಕ್ಷಗಳು ಒಟ್ಟು ಸೇರಿದರೂ ಮೂರನೆಯ ಸ್ಥಾನವನ್ನಷ್ಟೇ ಪಡೆದು ಕೊಳ್ಳುವುದು ಸಾಧ್ಯ. ‘ಇತರ ಪಕ್ಷಗಳ’ ಸಾಧ್ಯತೆಯ ಕುರಿತು ಇದುವರೆಗಿನ ಎಲ್ಲಾ ಸಮೀಕ್ಷೆಗಳೂ ಅದನ್ನೇ ಹೇಳುತ್ತವೆ.

ಹಾಗಾದರೆ ಸಾಧ್ಯತೆ ಏನು? ಇದುವರೆಗೆ ಬಂದಿರುವ ಸಮೀಕ್ಷೆಗಳು ಮತ್ತು ‘ವಾಸ್ತವ’ವನ್ನು ಆಧರಿಸಿ ಹೇಳುವುದಾದರೆ, ಮುಂದಿನ ಒಂದು ತಿಂಗಳಲ್ಲಿ ಹೆಚ್ಚೇನು ಸಂಭವಿಸದಿದ್ದರೆ, ಎನ್‍ಡಿಎಗೆ 230+ ಸ್ಥಾನಗಳೂ, ಯುಪಿಎಗೆ 160+ ಸ್ಥಾನಗಳೂ, ಇತರ ಪಕ್ಷಗಳಿಗೆ 150+ ಸ್ಥಾನಗಳು ಬರುವುದು ಸಾಧ್ಯ. 150 ಸ್ಥಾನಗಳನ್ನು ಪಡೆದುಕೊಳ್ಳುವ ಪಕ್ಷಗಳಲ್ಲಿ 95 ಸ್ಥಾನಗಳವರು (ಎಸ್‍ಪಿ, ತೃಣಮೂಲ, ಎಡಪಕ್ಷಗಳು ಇತ್ಯಾದಿ) ಬಿಜೆಪಿಯ ಜೊತೆಗೆ ಹೋಗುವುದು ಸಾಧ್ಯವಿಲ್ಲ. ಸರ್ಕಾರ ರಚನೆಯಿಂದ ಹೊರಗೂ ಉಳಿಯದೇ ಕಾಂಗ್ರೆಸ್ ಜೊತೆಗಿನ ಒಂದು ಮೈತ್ರಿಗೆ ಮುಂದಾದರೂ ಸರ್ಕಾರ ರಚನೆ ಸಾಧ್ಯವಾಗದು.

ಉಳಿದ 55 ಸ್ಥಾನಗಳವರು ಜೊತೆ ಸೇರಿದರೆ ಎನ್‍ಡಿಎ ಸರ್ಕಾರ ರಚನೆ ಸಾಧ್ಯವಿದೆ. ಇವರಲ್ಲಿ ಬಿಜೆಡಿ, ಟಿಆರ್‍ಎಸ್, ವೈಎಸ್‍ಆರ್‍ಸಿಪಿ, ಬಿಎಸ್‍ಪಿ ಇರುತ್ತವೆ. ನಾಲ್ಕೂ ಪಕ್ಷಗಳು ಒಬ್ಬೊಬ್ಬ ವ್ಯಕ್ತಿ ಕೇಂದ್ರಿತವಾಗಿರುವ ಪಕ್ಷಗಳಾಗಿದ್ದು ಸ್ವತಃ ತಾವೇ ಸರ್ವಾಧಿಕಾರಿ ಗುಣವುಳ್ಳವರೂ ಇದ್ದಾರೆ. ಹಾಗಾಗಿ ಈ ಗುಂಪು ಯಾರಿಗೆ ಬೆಂಬಲ ಕೊಟ್ಟರೂ ಪ್ರಧಾನಿ ಸ್ಥಾನದಲ್ಲಿರುವವರನ್ನು ಮುಳ್ಳಿನ ಮೇಲೆ ಕೂರಿಸಿರುತ್ತಾರೆ. ಒಂದರ್ಥದಲ್ಲಿ ಪ್ರಜಾಪ್ರಭುತ್ವಕ್ಕೆ ಅದು ಒಳ್ಳೆಯದನ್ನು ಮಾಡುತ್ತದೆ. ಬಿಜೆಡಿಗೆ ಕಾಂಗ್ರೆಸ್ ಪ್ರತಿಪಕ್ಷವಾಗಿ ಉಳಿದಿಲ್ಲ. ಅಲ್ಲಿ ದಿನೇ ದಿನೇ ವೃದ್ಧಿಯಾಗುತ್ತಿರುವ ಬಿಜೆಪಿಯೇ ಬಿಜೆಡಿಗೆ ಪ್ರತಿಪಕ್ಷವಾಗಿದೆ. ಬಿಎಸ್‍ಪಿಗೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಶತ್ರುಗಳೇ. ಉಳಿದೆರಡು ಪಕ್ಷಗಳಿಗೆ ಈ ಸದ್ಯ ಬಿಜೆಪಿಯೇ ಅಪ್ಯಾಯಮಾನವಾಗಿರಲು ಸಾಧ್ಯ. ಒಂದು ವೇಳೆ 20ರಿಂದ 40 ಸೀಟುಗಳಲ್ಲಿ ಸರ್ಕಾರದ ಬಹುಮತ ನಿರ್ಧಾರವಾಗುವುದಾದಲ್ಲಿ ಈ ಪಕ್ಷಗಳು ಸರ್ಕಾರವನ್ನು ಆಟ ಆಡಿಸುತ್ತಲೇ ಇರುತ್ತಾರೆ.

ಇದನ್ನು ಮೀರಿ ಬಿಜೆಪಿಯು ಇನ್ನೂ ಹೆಚ್ಚು ಸೀಟುಗಳನ್ನು ಅಥವಾ ಕಾಂಗ್ರೆಸ್ 150ಕ್ಕೂ ಹೆಚ್ಚು ಸೀಟುಗಳನ್ನು ಪಡೆದುಕೊಳ್ಳುವ ಸಾಧ್ಯತೆಯೇ ಇಲ್ಲವೇ? ಮುಂದಿನ ಒಂದು ತಿಂಗಳ ರಾಜಕೀಯ ವಿದ್ಯಮಾನಗಳು ಅಂತಹ ಸಾಧ್ಯತೆಗಳನ್ನು ತಮ್ಮೊಳಗೆ ಹುದುಗಿಸಿಕೊಂಡಿರಬಹುದು. ಅದರಿಂದ ಬಿಜೆಪಿಗೆ ಬಹುಮತವೂ ದಕ್ಕಿಬಿಡಬಹುದು. ಅಂತಹ ವಿಶೇಷ ವಿದ್ಯಮಾನಗಳೇನೂ ಇಲ್ಲದಿದ್ದಲ್ಲಿ, ಮುಂದಿನ ಚುನಾವಣೆಯ ನಂತರ ಎಲ್ಲಾ ಅರ್ಥದಲ್ಲಿ ಖಿಚಡಿ ಸರ್ಕಾರವು ಬರಲಿದೆ. ಅದು ಎನ್‍ಡಿಎ + ಖಿಚಡಿಯೋ ಅಥವಾ ಯುಪಿಎ + ಖಿಚಡಿಯೋ ಎಂಬುದು ಅಂತಿಮವಾಗಿ ಫಲಿತಾಂಶದ ಅಂಕಗಣಿತದ ಮೇಲೆ ನಿರ್ಧಾರವಾಗಲಿದೆ.

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...