ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರ 10 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಅಪಾರ್ಟ್‌ಮೆಂಟ್‌ಗೆ ಹೊಂದಿಕೊಂಡ 6 ಬ್ಲಾಕ್‌ಗಳನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದೆ.
1,500 ನಿವಾಸಿಗಳೊಂದಿಗೆ ಒಂಬತ್ತು ಬ್ಲಾಕ್‌ಗಳನ್ನು ಹೊಂದಿರುವ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ 10 ಕೋವಿಡ್ ಪ್ರಕರಣಗಳು ಫೆಬ್ರವರಿ 15 ಮತ್ತು 22 ರ ನಡುವೆ ಕಂಡುಬಂದಿವೆ ಎಂದು ಬಿಬಿಎಂಪಿಯ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ 10 ದಿನದ ಹಿಂದೆ ಬೆಂಗಳೂರಿನ ಮತ್ತೊಂದು ಅಪಾರ್ಟ್ಮೆಂಟ್ ಸಂಕೀರ್ಣವನ್ನು 113 ಪಾಸಿಟಿವ್ ಕೇಸ್ ಕಂಡು ಬಂದ ನಂತರ ಕಂಟೇನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿತ್ತು.
ಕೋವಿಡ್ ಸುರಕ್ಷತಾ ನಿರ್ಬಂಧಗಳನ್ನು ಅನುಸರಿಸುವಲ್ಲಿ ಜನರು ನಿರ್ಲಕ್ಷ್ಯ ಮಾಡುವುದನ್ನು ಮುಂದುವರೆಸಿದರೆ, ಲಾಕ್‌ಡೌನ್ ಹೇರುವುದು ಮಾತ್ರ ಉಳಿದಿರುವ ಆಯ್ಕೆಯಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಳು, ವೈದ್ಯರು ಮತ್ತು ಜಂಟಿ ಮತ್ತು ವಿಶೇಷ ಆಯುಕ್ತರು ಭಾಗವಹಿಸಿದ್ದ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಬಿಬಿಎಂಪಿ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಒಂದು ನರ್ಸಿಂಗ್ ಕಾಲೇಜ್ ಮತ್ತು ಇನ್ನೆರಡು ವಸತಿ ಸಂಕೀರ್ಣಗಳು ಸೇರಿ ಒಟ್ಟು ಮೂರು ಕೋವಿಡ್ ಕ್ಲಸ್ಟರ್‌ಗಳನ್ನು ಗುರುತಿಸಿದೆ.
ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ಕರ್ನಾಟಕದಲ್ಲಿ ಮತ್ತೊಂದು ಲಾಕ್‌ಡೌನ್ ಹಾಕುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು, “ಕೋವಿಡ್ ಪ್ರೋಟೋಕಾಲ್‌ಗಳನ್ನು ಮೇಲ್ವಿಚಾರಣೆ ಮಾಡಲು ಹೆಚ್ಚಿನ ಸಂಖ್ಯೆಯ ಮಾರ್ಷಲ್‌ಗಳನ್ನು ತೊಡಗಿಸಿಕೊಳ್ಳಲು ನಾನು ನಮ್ಮ ಎಲ್ಲ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ಪಾಸಿಟಿವ್ ದರದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಇದು ಶೇಕಡಾ 1.27 ರಷ್ಟಿದೆ, ಇದು ಆತಂಕಕಾರಿಯಲ್ಲ ಈ ಸಮಯದಲ್ಲಿ, ಕರ್ನಾಟಕದ ಯಾವುದೇ ಭಾಗದಲ್ಲಿ ಲಾಕ್ ಡೌನ್ ಅಗತ್ಯವಿಲ್ಲ” ಎಂದಿದ್ದಾರೆ.
ಕೊವಿಡ್-19 ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದರೆ ಬೆಂಗಳೂರು ಮತ್ತೆ ತೊಂದರೆಗೆ ಒಳಗಾಗಬಹುದು ಎಂದು ಬಿಬಿಎಂಪಿ ಆಯುಕ್ತ ಸೋಮವಾರ ಎನ್‌ಡಿಟಿವಿಗೆ ತಿಳಿಸಿದ್ದಾರೆ.
“ನಗರದಲ್ಲಿ 1 ಕೋಟಿ 30 ಲಕ್ಷ ಜನಸಂಖ್ಯೆಯಿದ್ದು, ನಾವು ದಿನಕ್ಕೆ 200 ರಿಂದ 300 ರಷ್ಟು ಪ್ರಕರಣಗಳ ಏರಿಕೆಯನ್ನು ನೋಡುತ್ತಿದ್ದೇವೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಪ್ರಕರಣಗಳಲ್ಲಿ ಹೆಚ್ಚಳವಿದೆ ಮತ್ತು ಈ ಎರಡು ರಾಜ್ಯಗಳೊಂದಿಗೆ ನಾವು ಗಡಿಗಳನ್ನು ಹಂಚಿಕೊಂಡಿದ್ದೇವೆ” ಎಂದು ಪ್ರಸಾದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗಣನೀಯ ಸಂಖ್ಯೆಯಲ್ಲಿ ಗಡಿ ಪ್ರದೇಶಗಳಿಂದ ಬಂದವರಿದ್ದಾರೆ. ನಗರದ ಜನರು ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿಲ್ಲ. ಜನರು ಕೋವಿಡ್-ಸೂಕ್ತವಾದ ನಡವಳಿಕೆಯನ್ನು ಅನುಸರಿಸದಿದ್ದರೆ, ಮುಂದಿನ ಕೆಲವು ದಿನಗಳಲ್ಲಿ ನಾವು ತೊಂದರೆಯಲ್ಲಿರಲಿದ್ದೇವೆ ಎಂದು ನಾವು ಒತ್ತಿ ಹೇಳುತ್ತಿದ್ದೇವೆ “ಎಂದು ಅವರು ಹೇಳಿದರು.
ಫೆಬ್ರವರಿ 16 ರಂದು ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳಲ್ಲಿ ಶೇ 70 ರಷ್ಟು ಏರಿಕೆ ಕಂಡಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭಾರಿ ಸ್ಫೋಟ- 6 ಕಾರ್ಮಿಕರು ಸಾವು; ಮೂವರು ಗಂಭೀರ