ಶಿವಮೊಗ್ಗ ಸಮೀಪ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಎಡೂರಪ್ಪನವರ ಹೆಸರಿಡಲು ಮುಖ್ಯಮಂತ್ರಿ ಬೊಮ್ಮಾಯಿ ತೀರ್ಮಾನಿಸಿದ್ದಾರಂತಲ್ಲಾ. ಕಾರಣ ಹುಡುಕಿದರೆ ಎಡೂರಪ್ಪನ ಆಡಳಿತದ ವೈಖರಿಯಿಂದಲೇ ತಮಗೆ ಮುಖ್ಯಮಂತ್ರಿ ಪಟ್ಟಸಿಕ್ಕಿತು. ಒಂದು ವೇಳೆ ಅವರು ಹೈಕಮಾಂಡ್ ಮೆಚ್ಚುವಂತಹ ಆಡಳಿತ ನೀಡಿದ್ದರೆ ಈ ಜನ್ಮದಲ್ಲಿ ನಾನು ಮುಖ್ಯಮಂತ್ರಿಯಾಗುವಂತಿರಲಿಲ್ಲ. ಈ ಜನ್ಮದಲ್ಲಿ ತೀರಿಸಲಾಗದಂತಹ ಉಪಕಾರ ಮಾಡಿರುವ ಎಡೂರಪ್ಪನವರಿಗೆ ತಕ್ಕ ಉಪಕಾರ ಎಂದರೆ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವುದು. ಎಡೂರಪ್ಪನವರ ಇನ್ನೊಂದು ಸಾಧನೆಯೂ ಇಲ್ಲಿ ಪರಿಗಣಿತವಾಗುತ್ತದೆ. ಎಂತಹವರನ್ನೇ ಆಗಲಿ ಮುಖ್ಯಮಂತ್ರಿ ಮಾಡುವುದರಲ್ಲಿ ಅವರು ಎತ್ತಿದ ಕೈ. ಅವರು ಮನಸ್ಸು ಮಾಡಿದ್ದರಿಂದಲೇ ಕುಮಾರಸ್ವಾಮಿ ಮುಖ್ಯಮಂತ್ರಿಯಾದದ್ದು, ಅವರಿಂದಲೇ ಅಲ್ಲವೆ ಸದಾನಂದಗೌಡ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಮತ್ತೆ ನನ್ನಂಥವನು ಮುಖ್ಯಮಂತ್ರಿಯಾಗಿ ಹೆಲಿಕಾಪ್ಟರಿನಲ್ಲಿ ಹಾರಾಡುವಂತಾದದ್ದು. ಅದಕ್ಕೆ ವಿಮಾನ ನಿಲ್ದಾಣಕ್ಕೆ ಎಡೂರಪ್ಪನ ಹೆಸರಿಟ್ಟದ್ದದು ಎಂದರಂತಲ್ಲಾ, ಥೂತ್ತೇರಿ.
******
ವಿಮಾನ ನಿಲ್ದಾಣಕ್ಕೆ ಎಡೂರಪ್ಪನ ಹೆಸರಿಡಲು ಮುಖ್ಯ ಕಾರಣ ಕೊಡುವ ಅವರ ಭಕ್ತರ ಪ್ರಕಾರ, “ನೋಡಿ ಸಾರ್ ಎಡೂರಪ್ಪ ಬೂಕನಕೆರೆಯಿಂದ ಬರಿಗೈಲಿ ಶಿಕಾರಿಪುರಕ್ಕೆ ಬಂದು ಶಿಕಾರಿ ಶುರುಮಾಡಿಕೊಂಡ್ರು; ಶಿಕಾರಿಪುರದ ಮುನಿಸಿಪಾಲಿಟಿಯಿಂದ ವಿಧಾನಸೌಧಕ್ಕೆ ಹೋದ್ರು. ವಿರೋಧಪಕ್ಷದ ನಾಯಕರಾದ್ರು; ಒಂದಲ್ಲ ಅಂತ ಮೂರುಸಲ ಮುಖ್ಯಮಂತ್ರಿಯಾದ್ರು. ಬೇಕಾದಷ್ಟು ಹಣ ಆಸ್ತಿ ಮಾಡಬಹುದಿತ್ತು ಮಾಡಲಿಲ್ಲ. ಕಾಲೇಜು, ಕಾಲೇಜಿಗೆ ಹಾಸ್ಟಲು, ಸ್ಟಾರ್ ಹೋಟ್ಲು ಕಟ್ಟಬಹುದಿತ್ತು, ಕಟ್ಟಲಿಲ್ಲ. ಯಾವನೋ ಚೆಕ್ ಮುಖಾಂತರ ಲಂಚಕೊಡಕ್ಕೆ ಬಂದ, ತಗಳ್ಳಿಲ್ಲ. ಪರಿಣಾಮ ಇವುರೇ ಜೈಲಿಗೋಗುವ ಸ್ಥಿತಿ ಬಂತು, ಹೆದರಲಿಲ್ಲ. ಹೋಗಿ ಬಂದ್ರು. ನಮ್ಮ ಶೋಭಕ್ಕನ್ನ ಬೆಳೆಸಿದ್ರು, ಕೈ ಬಿಡಲಿಲ್ಲ. ಇವತ್ತು ಯಾವುದೇ ನಾಯಕನಿಗೆ ನಮ್ಮ ಎಡೂರಪ್ಪನೋರ ಹೋಲಸಂಗೇಯಿಲ್ಲ. ಅದ್ಕೆ ವಿಮಾನ ನಿಲ್ದಾಣಕ್ಕೆ ಅವರೆಸರೇ ಸೂಕ್ತ ಸಾರು” ಅಂದನಲ್ಲ, ಥೂತ್ತೇರಿ.

******
ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಸೂಕ್ತ ಎಂಬ ಚರ್ಚೆ ನಡೆದಿರುವ ಸಮಯದಲ್ಲಿ, ಹಲವಾರು ದಿಕ್ಕಿನಿಂದ ಸಲಹೆ ಸೂಚನೆ ಬರತೊಡಗಿವೆಯೆಲ್ಲಾ. ಸಾಹಿತಿಗಳ ದಿಕ್ಕಿನಿಂದ “ನೋಡಿ ಸಾರ್ ನಮ್ಮ ಕುವೆಂಪು ಕಾವ್ಯ ಬರೀಬೇಕಾದ್ರೆ ಲೌಖಿಕ ಜೀವನದಿಂದ ಶುರುಮಾಡಿ ಪಾರಮಾರ್ಥಿಕಕ್ಕೆ ಹೋಗತಿದ್ರು. ಉದಾಹರಣೆಗೆ: ’ನಾನಿನಗೆ ನೀನನಗೆ ಜೇನಾಗುವ, ರಸದೇವಗಂಗೆಯಲ್ಲಿ ಮೀನಾಗುವ’ ಅಂತ ಎರಡನೇ ಜಿಗಿತಕ್ಕೆ ಆಕಾಶಕ್ಕೆ ಹಾರತಿದ್ರು, ಜೊತೆಗೆ ಎತ್ತರದ ಕನಸು ಕಾಣತಿದ್ರು, ಅವರು ಯಾವಾಗಲೂ ಊರ್ದ್ವಮುಖಿ. ’ನಾನೇರುವೆತ್ತರಕೆ ನೀನೇರಬಲ್ಲೆಯ’ ಅಂತಿದ್ರು. ’ಮನುಜಮತ ವಿಶ್ವಪಥ’ ಅಂತಿದ್ರು” ಅನ್ನುವ ವಾದ ಬಂತಂತೆಲ್ಲಾ. ಅವುರೆಸರು ಸೂಕ್ತ ಅನ್ನುವುದಾದರೆ ಅಳಿದುಳಿದ ರಾಜಕಾರಣಿಗಳ ಪ್ರಕಾರ, ಈ ದೇಶಕಂಡ ಅಪ್ರತಿಮ ರಾಜಕಾರಣಿ
ಗೋಪಾಲಗೌಡ ಹೆಸರಿಡಲು ಕೊಡುವ ಕಾರಣವೆಂದರೆ: “ಗೋಪಾಲಗೌಡ ಗುಡಿಸಲಿಂದ ಬಂದವರು. ಮೂರುಬಾರಿ ಶಾಸಕರಾದರೂ ಮನೆ ಇರಲಿಲ್ಲ, ಸೈಟ್ ಇರಲಿಲ್ಲ. ಬ್ಯಾಂಕ್‌ನ ಅಕೌಂಟೇ ಇರಲಿಲ್ಲ. ಇದ್ದ ಎರಡು ಮೂರು ಜುಬ್ಬ ಅಜೀಜ್ ಸೇಠ್ ಹೊಲಿಸಿಕೊಟ್ಟಿದ್ದು. ಇಂತಹ ವ್ಯಕ್ತಿಯ ನೆನಪನ್ನು ಹಸಿರಾಗಿಡಬೇಕಾದರೆ ಅಕಾಶದಲ್ಲಿ ಹಾರಾಡುವ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡಬೇಕೆಂದರಲ್ಲಾ”, ಥೂತ್ತೇರಿ.

*****
ಅಜೀಜ್ ಸೇಠ್ ಎಂದಕೂಡಲೇ ನೆನಪಾಯ್ತು. ಗೋಪಾಲಗೌಡರ ಹರಿದ ಜುಬ್ಬ ನೋಡಿ ಮನಕರಗಿದ ಸೇಠ್ ಜುಬ್ಬ ಹೊಲಿಸಿಕೊಟ್ಟಂತೆ, ನಮ್ಮ ನಡುವಿನ ಸಾಬರು ಹಳ್ಳಿಗಾಡಿನ ರೈತನ ಪಾಡಿನಲ್ಲಿ ಅನಾದಿಕಾಲದಿಂದ ಭಾಗಿಯಾಗುತ್ತ ಬಂದಿರುವುದು ಸಂಘಿಗಳ ಗಮನಕ್ಕೆ ಬಂದಿಲ್ಲವಂತಲ್ಲಾ. ಈಗ ಸಾಬರ ಬಳಿ ಮಾವಿನ ಹಣ್ಣು ಕೊಳ್ಳಬೇಡಿ ಎಂದು ಫತ್ವಾ ಹೊರಡಿಸಿರುವುದರ ಪರಿಣಾಮ ಮಾವಿನ ಹಣ್ಣಿನ ಕಂಟ್ರಾಕ್ಟಿಗೆ ಸಾಬರು ಬರುತ್ತಿಲ್ಲವಲ್ಲಾ. ಈ ಪುರೋಹಿತಶಾಹಿಗಳ ತಲೆಯಿಂದ ಮಂತ್ರಗಳು ಮಾಯವಾಗಿ ಮುಸ್ಲಿಂ ದ್ವೇಷ ತುಂಬಿಕೊಂಡ ಫಲವಾಗಿ ರೈತ ಬೆಳೆದ ಮಾವಿನಹಣ್ಣು, ವಾಣಿಜ್ಯ ಬೆಳೆಗಳಾದ ಹೊಂಗೆಬೀಜ, ಇಪ್ಪೆ ಅಳ್ಳು, ಬೇವಿನಬೀಜ, ಹಲಸಿನಹಣ್ಣು ಕೊಳ್ಳುವವರಿಲ್ಲವಾಗಿದೆಯಂತಲ್ಲಾ. ಇದಿನ್ನೂ ದೊಡ್ಡದಾಗಿ ಬೆಳೆದು, ಸದ್ಯದಲ್ಲೇ ದೇಶ ದಿವಾಳಿ ಎದ್ದು ಶ್ರೀಲಂಕಾದಂತಾಗುವ ಎಲ್ಲಾ ಸೂಚನೆಗಳು ಕಾಣುತ್ತಿವೆಯಲ್ಲಾ. ಅದಕ್ಕಿಂತ ಮುಖ್ಯ ಎತ್ತಿಗೆ ಲಾಳ ಕಟ್ಟುತ್ತಿದ್ದ ಸಾಬರು ಹಳ್ಳಿಕಡೆ ಬಾರದೆಯಿರುವುದರಿಂದ ಎತ್ತುಗಳ ಗೊರಸು ಸವೆದು ಕುಂಟತೊಡಗಿವೆ. ಇದೀಗ ರೈತರು ಎಚ್ಚೆತ್ತು “ಬಾರೊ ನಮ್ಮ ಎತ್ತಿಗೆ ಲಾಳ ಕಟ್ಟು” ಅಂದರೆ ಸಂಘಿಗಳ ಕತೆಯೇನೆಂದು ಉದ್ಘಾರ ತೆಗೆದರಲ್ಲಾ, ಥೂತ್ತೇರಿ.

*******
ಈ ಬಿಜೆಪಿಗಳು ಆಡಳಿತ ನಡೆಸಲು ಅಳವಡಿಸಿಕೊಂಡಿರುವುದು ಗೋಳವಲಕರನ ಅರ್ಥ ವ್ಯವಸ್ಥೆಯಂತಲ್ಲಾ. ಆತನ ಅರ್ಥಶಾಸ್ತ್ರದ ಪ್ರಕಾರ ನಾವು ಸುಖವಾಗಿ ಭೋಜನ ಬಾರಿಸುತ್ತ ಗರ್ಭಗುಡಿಯಲ್ಲಿರಬೇಕಾದರೆ ಈ ದೇಶದಲ್ಲಿ ಬಡವರಿರಬೇಕು ಅವರು ಆಸ್ತಿವಂತರಾಗಬಾರದು, ಅಕಸ್ಮಾತ್ ಆದರೆ ನಮ್ಮ ಮಾತನ್ನ ಕೇಳುವುದಿಲ್ಲ; ನಾವೇಳಿದ ಕೆಲಸ ಮಾಡುವುದಿಲ್ಲ; ಆದ್ದರಿಂದ ಅವರು ಆಸ್ತಿವಂತರಾಗದಂತೆ ನೋಡಿಕೊಳ್ಳಬೇಕು; ಅದರಲ್ಲೂ ಮುಸ್ಲಿಮರು ಆರ್ಥಿಕವಾಗಿ ಮುಂದೆ ಬರಲೇಬಾರದು ಎಂದಿದೆಯಂತಲ್ಲಾ. ಅದರ ಫಲವಾಗಿ ಚರ್ಮೋದ್ಯಮ ನಾಶವಾಯ್ತು. ಹಳ್ಳಿಗಳ ಕಡೆ ಹಬ್ಬವಾದರೆ ಚರ್ಮ ಕೊಳ್ಳಲು ಸಾಬರು ಬರುತ್ತಿದ್ದರು. ಈಗ ಗುಂಡಿ ತೆಗೆದು ಚರ್ಮವನ್ನೂ ಹೂಳುತ್ತಿದ್ದಾರೆ. ಇಲ್ಲಿಂದ ಶುರುವಾದ ಮುಸ್ಲಿಮರ ಆರ್ಥಿಕ ಅವನತಿ, ರೈತರ ಕಡೆಗೂ ತಿರುಗಿ ಸದ್ಯದಲ್ಲೇ ರೈತರ ಪತನವಾಗಿ ಅವರೆಲ್ಲಾ ಇನ್ನೂ ಬಡವರಾಗುವುದರಲ್ಲಿ ಯಾವ ಸಂಶಯವೂ ಇಲ್ಲವಂತಲ್ಲಾ, ಥೂಥೂ ಥೂತ್ತೇರಿ.
ಇದನ್ನೂ ಓದಿ: ಈಶ್ವರಪ್ಪ ಪರಸೆಂಟೇಜಲ್ಲಿ ಜಗದ್ಗುರುಗಳ ಪಾಲಿತ್ತಂತಲ್ಲಾ


