Homeಮುಖಪುಟಮತ್ತೆ ಮುನ್ನೆಲೆಗೆ ಬಂದ ಸಿಎಂ ಬದಲಾವಣೆ ಚರ್ಚೆ: ರೆಕ್ಕೆ ಪುಕ್ಕ ಒದಗಿಸಿದ ಈ ಎರಡು ಹೇಳಿಕೆಗಳು

ಮತ್ತೆ ಮುನ್ನೆಲೆಗೆ ಬಂದ ಸಿಎಂ ಬದಲಾವಣೆ ಚರ್ಚೆ: ರೆಕ್ಕೆ ಪುಕ್ಕ ಒದಗಿಸಿದ ಈ ಎರಡು ಹೇಳಿಕೆಗಳು

ಇನ್ನು ಬಾಕಿ ಉಳಿದಿರುವ ಒಂದು ವರ್ಷದ ಸಿಎಂ ಗಾದಿಗೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ದೊಡ್ಡ ದಂಡೇ ನೆರೆದಿದೆ.

- Advertisement -
- Advertisement -

ಕರ್ನಾಟಕ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತು ರಾಜ್ಯದ ಉನ್ನತ ಶಿಕ್ಷಣ ಹಾಗೂ ಐಟಿ ಬಿಟಿ ಸಚಿವ ಅಶ್ವಥ್ ನಾರಾಯಣ್‌ರವರು ನೀಡಿದ ಹೇಳಿಕೆಗಳು ಈ ಚರ್ಚೆಗೆ ಮತ್ತಷ್ಟು ರೆಕ್ಕೆ ಪುಕ್ಕ ಒದಗಿಸಿವೆ. ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಮಂತ್ರಿ ಅಮಿತ್ ಶಾರವರು ರಾಜ್ಯಕ್ಕೆ ಆಗಮಿಸಿದ ದಿನವೇ ಈ ಚರ್ಚೆ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ.

ಕಳೆದ 4-5 ತಿಂಗಳಿನಿಂದಲೂ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಕೆಳಗಿಳಿಸಿ ಮತ್ತೊಬ್ಬರಿಗೆ ಆ ಹುದ್ದೆ ನೀಡಲಾಗುತ್ತದೆ ಎಂಬ ಚರ್ಚೆ ನಡೆಯುತ್ತಲೇ ಇದೆ. ಆದರೆ ಐದು ರಾಜ್ಯಗಳಲ್ಲಿ ನಡೆದ ಚುನಾವಣೆ ಕಾರಣಕ್ಕೆ ಅದು ಸಾಧ್ಯವಾಗಿಲ್ಲ ಎಂಬ ಮಾತೂ ಸಹ ಕೇಳಿಬರುತ್ತಿದೆ. ಆದರೆ ಸಚಿವ ಸಂಪುಟ ವಿಸ್ತರಣೆಗೆ ಇದುವರೆಗೂ ಬಿಜೆಪಿ ಹೈಕಮಾಂಡ್ ಅನುಮತಿ ನೀಡದಿರುವುದು ಮೇಲಿನ ಊಹಾಪೋಹಗಳಿಗೆ ಪುಷ್ಟಿ ನೀಡುವಂತಿದೆ.

ಗುಜರಾತ್ ಮತ್ತು ದೆಹಲಿಯ ಸ್ಥಳೀಯ ಚುನಾವಣೆಗಳನ್ನು ಉಲ್ಲೇಖಿಸಿ ಮಾತನಾಡಿದ ಬಿ.ಎಲ್ ಸಂತೋಷ್ “ಒಂದು ರಾಜ್ಯದ ನಾಯಕತ್ವವನ್ನು ಹೋಲ್‌ ಸೇಲ್ ಆಗಿ ಬದಲಿಸುವ ತಾಕತ್ತು ಮತ್ತು ಧೈರ್ಯ ಬಿಜೆಪಿ ಹೈಕಮಾಂಡ್‌ಗಿದೆ” ಎಂದು ಹೇಳಿಕೆ ನೀಡಿದ್ದಾರೆ.

“ಇದು ಎಲ್ಲಾ ಕಡೆ ನಡೆಯುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ ಇತರ ರಾಜಕೀಯ ಪಕ್ಷಗಳು ಊಹಿಸಲೂ ಸಾಧ್ಯವಾಗದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಜೆಪಿ ಸಮರ್ಥವಾಗಿದೆ. ಆ ಆತ್ಮವಿಶ್ವಾಸ ಇದ್ದ ಕಾರಣಕ್ಕಾಗಿಯೇ ಗುಜರಾತ್ ಸಿಎಂ ಬದಲಿಸಿ ಸಂಪೂರ್ಣ ಸಂಪುಟವನ್ನು ಪುನರ್‌ರಚಿಸಲಾಗಿದೆ. ಯಾವುದೇ ದೂರುಗಳು ಇಲ್ಲದಿದ್ದರೂ ಸಹ ಹೊಸತನವನ್ನು ತರುವುದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ರಾಜಕೀಯದಲ್ಲಿ ಬದಲಾವಣೆ ಎಂಬುದು ಅನಿವಾರ್ಯ. ಎರಡನೇ ಬಾರಿಗೆ ಅಧಿಕಾರಕ್ಕೆ ಬರುವುದು ಸುಲಭ ಸಂಗತಿಯಲ್ಲ. ಆಡಳಿತ ವಿರೋಧಿ ಅಲೆ ದಟ್ಟವಾಗಿದ್ದಾಗ ಎರಡನೇ ಬಾರಿ ಚುನಾವಣೆಗಳನ್ನು ಗೆಲ್ಲುವುದು ಸುಲಭವಲ್ಲ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ ಎಂದು ಬಿ.ಎಲ್ ಸಂತೋಷ್ ಹೇಳಿದ್ದಾರೆ. ಅದು ಬೊಮ್ಮಾಯಿಯವರನ್ನು ಇಳಿಸುವ ಚರ್ಚೆಗೆ ಇಂಬು ಕೊಟ್ಟಿದೆ.

ಕಳೆದ ವರ್ಷ ಡಿಸೆಂಬರ್ 18ರಂದು ಬೆಂಗಳೂರಿನಲ್ಲಿ ನಡೆದ ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಇದೇ ಬಿ.ಎಲ್ ಸಂತೋಷ್, “ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿಎಂ ಬೊಮ್ಮಾಯಿಯವರು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಚರ್ಚೆಯಾಗ್ತಿದೆ. ಕೆಲವು ಪತ್ರಕರ್ತರು ಸಹ ಹಾಗೆಯೇ ಭಾವಿಸಿರಬಹುದು. ಆದರೆ ವೀರ ಸಾವರ್ಕರ್ ಬಗ್ಗೆ ಸಿಎಂ ಆಡಿದ ಮಾತುಗಳನ್ನು ಕೇಳಿದರೆ ಅದ್ಯಾವುದು ಇಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾಗುತ್ತದೆ” ಎಂದು ಹೇಳಿದ್ದರು. ಆ ವೇದಿಕೆಯಲ್ಲಿ ಆ ಮಾತುಗಳು ಬೇಕಿಲ್ಲದಿದ್ದರೂ ಉದ್ದೇಶಪೂರ್ವಕವಾಗಿ ಹೇಳಿದ್ದರು.

ಇನ್ನು ರಾಜ್ಯದ ಉನ್ನತ ಶಿಕ್ಷಣ ಹಾಗೂ ಐಟಿ ಬಿಟಿ ಸಚಿವ ಅಶ್ವಥ್ ನಾರಾಯಣ್‌ರವರು ಸಹ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಸಚಿವ ಅಶ್ವಥ್ ನಾರಾಯಣ್‌ರವರ ತಮ್ಮ ಸತೀಶ್‌ರವರು ಮಾಗಡಿಯ ದರ್ಶನ್ ಎಂಬುವವರಿಂದ ಹಣ ಪಡೆದು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ದೂರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಥ್ ನಾರಾಯಣ್, “ನಾನು ಸಿಎಂ ಆಗಿಬಿಡುತ್ತೇನೆ ಎನ್ನವ ಭಯ ಡಿ.ಕೆ ಶಿವಕುಮಾರ್‌ರವರನ್ನು ಕಾಡುತ್ತಿದೆ. ಒಬ್ಬ ನಾಯಕನ ಬೆಳವಣಿಗೆ ಸಹಿಸದೆ ಹೀಗೆಲ್ಲಾ ಪಿತೂರಿ ಮಾಡುತ್ತಿದ್ದಾರೆ. ಹೀಗಾಗಿ ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಿ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ” ಎಂದು ಕಿಡಿಕಾರಿದ್ದಾರೆ.

ಅಂದರೆ ಸಿಎಂ ಬದಲಾವಣೆಯಾಗಲಿದ್ದು, ತಾನೂ ಕೂಡ ಆ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಅವರು ಬಹಿರಂಗವಾಗಿಯೇ ಸಾರಿದ್ದಾರೆ. ಇನ್ನೊಂದು ವರ್ಷದಲ್ಲಿ ಚುನಾವಣೆ ಎದುರಾಗಲಿದ್ದು, ರಾಜ್ಯದಲ್ಲಿ ಸದ್ಯ ಬಿಜೆಪಿ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಬಿಟ್ ಕಾಯಿನ್ ಹಗರಣದ ಬೆನ್ನಿಗೆ 40% ಕಮಿಷನ್ ಹಗರಣ ಮತ್ತು ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಬಿಜೆಪಿ ಕೊರಳಿಗೆ ಸುತ್ತಿಕೊಂಡಿದೆ. ಇನ್ನು ಪಿಎಸ್‌ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಬಿಜೆಪಿ ನಾಯಕಿಯ ಬಂಧನವಾಗಿರುವುದರ ಜೊತೆಗೆ ಸಚಿವರ ಹೆಸರುಗಳು ಸಹ ಕೇಳಿ ಬರುತ್ತಿವೆ. ಇನ್ನೊಂದೆಡೆ ಬೊಮ್ಮಾಯಿಯವರು ಸಿಎಂ ಆಗಿ ವರ್ಷವಾಗುತ್ತ ಬಂದರೂ ಹೇಳಿಕೊಳ್ಳುವ ಸಾಧನೆಯೇನು ಮಾಡಿಲ್ಲ. ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳಲ್ಲಿನ ಸೋಲಿನ ಜೊತೆಗೆ ಬಿಟ್‌ ಕಾಯಿನ್ ಹಗರಣದಲ್ಲಿ ಅವರೆ ನಂಬರ್ ಓನ್ ಆರೋಪಿಯಾಗಿದ್ದಾರೆ. ಹಾಗಾಗಿ ಸಿಎಂ ಬದಲಾವಣೆ ಕೇವಲ ಊಹಾಪೋಹವಾಗಿ ಉಳಿದಿಲ್ಲ.

ಇನ್ನು ಬಾಕಿ ಉಳಿದಿರುವ ಒಂದು ವರ್ಷದ ಸಿಎಂ ಗಾದಿಗೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ದೊಡ್ಡ ದಂಡೇ ನೆರೆದಿದೆ. ಬ್ರಾಹ್ಮಣ ಸಮುದಾಯದಿಂದ ಪ್ರಹ್ಲಾದ್ ಜೋಶಿ, ಬಿ.ಎಲ್ ಸಂತೋಷ್ ಇದ್ದರೆ, ಲಿಂಗಾಯತ ಸಮುದಾಯದ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಮಂತ್ರಿ ಮುರುಗೇಶ್ ನಿರಾಣಿ ಮತ್ತು ಶಾಸಕ ಅರವಿಂದ್ ಬೆಲ್ಲದ್ ಹೆಸರು ಚಾಲ್ತಿಯಲ್ಲಿದೆ. ಒಕ್ಕಲಿಗ ಸಮುದಾಯಕ್ಕೆ ಈ ಬಾರಿ ಚಾನ್ಸ್ ನೀಡುವುದಾದರೆ ಶೋಭಾ ಕರಂದ್ಲಾಜೆ, ಅಶ್ವಥ್ ನಾರಾಯಣ್ ಮತ್ತು ಸಿ.ಟಿ ರವಿ ಪೈಪೋಟಿ ನಡೆಸುತ್ತಿದ್ದಾರೆ.

ಗುಜರಾತ್, ಉತ್ತರಖಂಡ ರಾಜ್ಯಗಳಲ್ಲಿ ಯಶಸ್ವಿಯಾಗಿ ಸಿಎಂ ಬದಲಾವಣೆ ಮಾಡಿರುವ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿಯೂ ಅದನ್ನು ಮಾಡುತ್ತದೆಯೇ ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇನ್ನುಳಿದ ವರುಷದಲ್ಲಿ ಹತ್ತು ಮಂದಿ ಮುಖ್ಯಮಂತ್ರಿಯಾದರೂ ೨೦೨೩ ನಲ್ಲಿ ಭಾಜಪ ಮಣ್ಣು ಮುಕ್ಕುವುದು ಗ್ಯಾರ೦ಟಿ… ಅಮಿತ್ ಷಾ ಅವರಿಗೆ ಗೊತ್ತಿಲ್ಲ. ಇದು ಗುಜರಾತ್ ಅಲ್ಲಾ ಕರ್ನಾಟಕ ಅಂತಾ…. ಗುಜರಾತಿಗಳ ಆಟ ಇಲ್ಲಿ ನಡೆಯೊಲ್ಲಾ…

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...