Homeಕರ್ನಾಟಕಮೈಕ್ರೋ ಫೈನಾನ್ಸ್ ಭಯೋತ್ಪಾದನೆ

ಮೈಕ್ರೋ ಫೈನಾನ್ಸ್ ಭಯೋತ್ಪಾದನೆ

- Advertisement -
- Advertisement -

ನಾನು ಎರಡು ವರ್ಷದ ಹಿಂದೆ ಶಿಗ್ಗಾವಿಯಲ್ಲಿ ವಾಸವಾಗಿದ್ದೆ. ನನ್ನ ಮನೆಯ ಪಕ್ಕದ ಮನೆಯನ್ನು ಮೈಕ್ರೋ ಫೈನಾನ್ಸ್ ಕಂಪನಿಯವರಿಗೆ ಬಾಡಿಗೆ ಕೊಡಲಾಗಿತ್ತು. ಅಲ್ಲಿ ಪ್ರತಿ ರಾತ್ರಿ ಕನಿಷ್ಟ 15ರಿಂದ 20 ಜನ ಮೈಕ್ರೋ ಫೈನಾನ್ಸ್ ಏಜಂಟರುಗಳು ಉಳಿಯುತ್ತಿದ್ದರು. ಇದನ್ನೆ ಕಚೇರಿಯನ್ನಾಗಿಯೂ ಬಳಸುತ್ತಿದ್ದರು. ಅನೇಕ ಹಳ್ಳಿಯ ಜನರು ಈ ಕಚೇರಿ ಕೇಳಿಕೊಂಡು ಬರುತ್ತಿದ್ದರು. ದಿನಬೆಳಗಿನ ಜಾವ ಐದು ಗಂಟೆಗೆ ಎದ್ದು ಹಳ್ಳಿಗಳಿಗೆ ಹೊರಡುತ್ತಿದ್ದರು. ಹೀಗೆ ಹೊರಡುವ ಮುನ್ನ ಯಾರಯಾರ ಬಳಿ ಇಂದು ಸಾಲ ವಸೂಲಿ ಮಾಡಬೇಕು? ಯಾರಿಗೆ ಎಷ್ಟು ಹೊಸತಾಗಿ ಸಾಲ ಕೊಡಬೇಕು ಇತ್ಯಾದಿ ಚರ್ಚೆ ನಡೆಯುತ್ತಿತ್ತು. ಈ ಫೈನಾನ್ಸ್‌ನ ಮ್ಯಾನೇಜರ್ ಇವರಿಗೆಲ್ಲಾ ಮಾರ್ಗದರ್ಶನ ಕೊಡುತ್ತಿದ್ದನು. ಮನೆಯ ಮಲಗುವ ಕೋಣೆಗೆ ಈ ಮೀಟಿಂಗ್ ಹಾಲ್ ಮೂರು ಅಡಿಗಳ ಅಂತರದಲ್ಲಿರುವ ಕಾರಣ ಸ್ಪಷ್ಟವಾಗಿ ನಿರ್ದೇಶನಗಳು ಕೇಳುತ್ತಿದ್ದವು.

ನೀವು ಸಾಲ ವಸೂಲಿ ಮಾಡದಿದ್ದರೆ ಆ ಮೊತ್ತವನ್ನು ನಿಮ್ಮ ಸಂಬಳದಿಂದ ತೆಗೆದುಕೊಳ್ಳುತ್ತೇವೆ. ನಿಮಗೆ ಸರಿಯಾಗಿ ತಿಂಗಳ ಸಂಬಳ ಬರಬೇಕೆಂದರೆ ಕಡ್ಡಾಯವಾಗಿ ಸಾಲ ವಸೂಲಿ ಮಾಡಲೇಬೇಕು. ಎಂಥದ್ದೇ ಕಾರಣ ಇರಲಿ ಕಂತಿನ ಹಣ ವಸೂಲಿ ಆಗುವತನಕ ಎದ್ದು ಬರುವಂತಿಲ್ಲ. ಮಳೆಯಿರಲಿ, ಬಿಸಿಲಿರಲಿ ಮನೆಯ ಮುಂದೆಯೇ ಸಾಲ ವಸೂಲಿ ಆಗುವ ತನಕ ಕೂರಬೇಕು. ಯಾವುದೇ ರೀತಿಯ ಸಬೂಬುಗಳನ್ನು ಒಪ್ಪಿಕೊಳ್ಳುವಂತಿಲ್ಲ. ಒಂದು ದಿನಕ್ಕೆ ಇಂತಿಷ್ಟು ಸಾಲ ಕೊಡಲೇಬೇಕು. ಮೊದಲಿಗೆ ಸಾಲ ಕೊಡುವ ಆಸೆ ಹುಟ್ಟಿಸಬೇಕು. ಸಾಲ ವಸೂಲಾತಿಯಲ್ಲಿ ಯಾವುದೇ ಮಾನವೀಯತೆ ತೋರುವಂತಿಲ್ಲ- ಎಂದೆಲ್ಲಾ ಮಾರ್ಗದರ್ಶನ ಮಾಡಲಾಗುತ್ತಿತ್ತು. ಹೀಗೆ ಮಾರ್ಗದರ್ಶನ ಪಡೆದು ಬೆಳಗಿನ 6.30ರ ಒಳಗೆ ಏಜೆಂಟರುಗಳು ಸೈನಿಕರ ಹಾಗೆ ಬೈಕ್ ಏರಿ ಬರ್ರನೆ ಹೊರಡುತ್ತಿದ್ದರು. ಈ ಎಲ್ಲಾ ಯುವಕರು ಬಹುಪಾಲು ಶೋಷಿತಜಾತಿ/ಕೆಳವರ್ಗದಿಂದ ಮತ್ತು ಬಡ ರೈತಾಪಿ ಮನೆಗಳಿಂದಲೇ ಬಂದವರು. ಅವರನ್ನೇ ಸಾಲ ವಸೂಲಿಯ ಹುರಿಯಾಳುಗಳನ್ನಾಗಿ ಸಿದ್ಧಗೊಳಿಸಲಾಗುತ್ತದೆ.

ಅಸೋಸಿಯೇಷನ್ ಆಫ್ ಮೈಕ್ರೋ ಫೈನಾನ್ಸ್ ಇನ್‌ಸ್ಟಿಟೂಷನ್ಸ್ (ಎ.ಕೆ.ಎಮ್.ಐ/ಅಕ್ಮಿ) 2023ರಲ್ಲಿ ಕರ್ನಾಟಕದಲ್ಲಿ ಕಿರು ಹಣಕಾಸಿನ ಬೆಳವಣಿಗೆ ಎನ್ನುವ ವರದಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ 89% ಜನರು ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆಯಲು ಇಚ್ಛಿಸುತ್ತಾರೆ ಎಂದು ವರದಿ ಹೇಳುತ್ತದೆ. ಈ ವರದಿಯು ಮೈಕ್ರೋ ಫೈನಾನ್ಸ್‌ನ ಸಾಹಸಗಾಥೆಯನ್ನು ಮಂಡಿಸುತ್ತದೆ. ಅಂತೆಯೇ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದು ಚಿಕ್ಕಪುಟ್ಟ ವ್ಯಾಪಾರ ಮಾಡಿ ಜೀವನವನ್ನು ಸುಧಾರಿಸಿಕೊಂಡವರೂ ಇದ್ದಾರೆ. ಆದರೆ ಮೈಕ್ರೋ ಫೈನಾನ್ಸ್‌ಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಒಂದು ದಶಕದ ಬೆಳವಣಿಗೆಗಳನ್ನು ಗಮನಿಸಿದರೆ ಮೈಕ್ರೋ ಫೈನಾನ್ಸ್‌ಗಳು ಗ್ರಾಮೀಣ ಭಾಗದಲ್ಲಿ ಒಂದು ರೀತಿಯ ಭಯೋತ್ಪಾದನೆಯನ್ನು ಹುಟ್ಟುಹಾಕಿವೆ. ಸಾಲದ ಕಂತುಗಳನ್ನು ಕಟ್ಟುವ ಒತ್ತಡಕ್ಕೆ ಬಿದ್ದ ಎಷ್ಟೋ ಜನರು ಊರು ಮನೆಗಳನ್ನು ತೊರೆಯುತ್ತಿದ್ದಾರೆ. ಸಾಲ ಮರುಪಾವತಿಯ ಒತ್ತಡದಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಅಂತಕೆ ಕೆಲವು ಪ್ರಕರಣಗಳನ್ನು ಗಮನಿಸೋಣ.

ಪ್ರಕರಣ-1

ಇದೇ ಆಗಸ್ಟ್ 14ರಂದು ಪ್ರಜಾವಾಣಿಯ ಮುಖಪುಟದಲ್ಲಿ ಒಂದು ಆತಂಕಕಾರಿ ವರದಿ ಪ್ರಕಟವಾಗಿತ್ತು. ವಿಜಯಪುರ ಜಿಲ್ಲೆಯ ದೇವನಹಳ್ಳಿಯ ಜಯಲಕ್ಷ್ಮಮ್ಮ (65 ವರ್ಷ) ಹಾಗೂ ಎಂಟನೆ ತರಗತಿ ಓದುತ್ತಿರುವ ಅವರ ಮೊಮ್ಮಗಳನ್ನು ಜನ ಸ್ಮಾಲ್ ಫೈನಾನ್ಸ್‌ನವರು ಮನೆಯಿಂದ ಹೊರಹಾಕಿ ಬೀಗ ಜಡಿದಿದ್ದಾರೆ. ಹಾಗೆ ಮನೆಗೆ ಬೀಗ ಜಡಿಯುವಾಗ ಅವರ ಕುರಿ ಮೇಕೆಯನ್ನು ಒಳಗೆ ಬಿಟ್ಟಿದ್ದಾರೆ. ಮನೆಯೊಳಗೆ ಕುರಿಮೇಕೆ ಅರೆಚಾಟ ಶುರುವಾದಾಗ, ಆ ಮನೆಯವರು ಏಣಿಹಾಕಿಕೊಂಡು ಮನೆ ಮೇಲಿನ ಛಾವಣಿಯಿಂದ ಇಳಿದು ಕುರಿಮೇಕೆಗೆ ಮೇವು ನೀರು ಹಾಕುತ್ತಿದ್ದಾರೆ. ಮೊಮ್ಮಗಳನ್ನು ಮೊರಾರ್ಜಿ ಶಾಲೆಗೆ ಕಳಿಸಿ ಅಜ್ಜಿ ತಾನೊಂದೆ ಮನೆ ಹೊರಗಿನ ಕೋಣೆಯಲ್ಲಿ ಜೀವಿಸುತ್ತಿದೆ. ಕುರಿಮೇಕೆಯನ್ನು ಹೊರತರಲಾದರೂ ಬೀಗ ತೆಗೆಯಿರಿ ಎಂದರೆ ಫೈನಾನ್ಸ್ ಸಿಬ್ಬಂದಿ ಸಹಕರಿಸಿಲ್ಲ. 2021ರಲ್ಲಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಜಯಲಕ್ಷ್ಮಮ್ಮನ ಪತಿ ನಾಗಪ್ಪನ ಆರೋಗ್ಯ ಹದಗೆಟ್ಟ ಕಾರಣ 2.50 ಲಕ್ಷವನ್ನು ಜನ ಸ್ಮಾಲ್ ಫೈನಾನ್ಸ್‌ನಿಂದ ಸಾಲ ಪಡೆದಿದ್ದರು. ಈತನಕ ರೂ 2.30 ಲಕ್ಷ ಸಾಲ ತೀರಿಸಿದರೂ, ಬಡ್ಡಿ ಸೇರಿ ಇನ್ನು 3 ಲಕ್ಷ ಬಾಕಿ ಇದೆ ಎಂದು, ಈ ಬಾಕಿ ಹಣ ಕಟ್ಟದ ಕಾರಣಕ್ಕೆ ಮನೆಗೆ ಬೀಗ ಹಾಕಿದ್ದರು ಎಂದು ವರದಿ ಮಾಡಲಾಗಿದೆ. ಜಯಲಕ್ಷ್ಮಮ್ಮ ಅಕ್ಕಪಕ್ಕದ ಮನೆಗಳಲ್ಲಿ ಊಟ ಮಾಡಿ, ಬೇರೆಯವರ ಮನೆಗಳಲ್ಲಿ ಸ್ನಾನ ಮಾಡಿ ಮನೆ ಮುಂದಣ ಕೋಣೆಯಲ್ಲಿ ಜೀವಿಸುತ್ತಿದ್ದಾರೆ.

ಪ್ರಕರಣ-2

ತಿಪಟೂರು ತಾಲೂಕಿನ ಅರಳಗುಪ್ಪೆ ಗ್ರಾಮದಲ್ಲಿ 33 ಮೈಕ್ರೋ ಫೈನಾನ್ಸ್‌ಗಳು ಸಾಲ ಕೊಟ್ಟಿವೆ. ಒಬ್ಬ ಮಹಿಳೆ 17 ರಿಂದ 20 ಫೈನಾನ್ಸ್‌ಗಳಲ್ಲಿ 12 ಲಕ್ಷದಷ್ಟು ಸಾಲ ಪಡೆದಿದ್ದಾಳೆ. ಹೀಗೆ ಫೈನಾನ್ಸ್‌ಗಳ ಸಾಲ ವಸೂಲಿ ಒತ್ತಡಕ್ಕೆ ಈ ಊರಿನ ಒಂಬತ್ತು ಜನರು ಊರುಬಿಟ್ಟಿದ್ದಾರೆ. ಅರಳಗುಪ್ಪೆಯ ಭಾಗ್ಯಮ್ಮ 17 ಸಂಸ್ಥೆಗಳಿಂದ 9.50 ಲಕ್ಷ ಸಾಲ ಪಡೆದಿದ್ದಾರೆ. ಭಾಗ್ಯಮ್ಮ ಬೇರೆ ಊರಿಗೆ ಹೋದ ದಿನ ಸಾಲದ ಕಂತುಗಳನ್ನು ಕಟ್ಟದ ಕಾರಣ ಸಂಘದವರು ಬಂದು ಬಾಯಿಗೆ ಬಂದಂತೆ ಬೈದು ರಂಪಾಟ ಮಾಡಿರುತ್ತಾರೆ.

ಪ್ರಕರಣ-3

ಕೊಪ್ಪಳ ಜಿಲ್ಲೆಯ ಹಳೆಬಂಡಿ ಹರ್ಲಾಪುರ ಗ್ರಾಮದಲ್ಲಿ ಗೋದಾವರಿ ಮೈಕ್ರೋ ಪೈನಾನ್ಸ್‌ನ ಯಮನೂರಪ್ಪ ಎಂಬಾತನು ವಿವಾಹಿತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ನಾಗಮ್ಮ ಎನ್ನುವ ಮಹಿಳೆ ಆತನನ್ನು ಚೆನ್ನಾಗಿ ಥಳಿಸಿದ್ದಳು. ಈ ವೀಡಿಯೋ ವೈರಲ್ ಆಗಿತ್ತು. ಕಂಪನಿ ಮಂಜೂರು ಮಾಡಿದ ಲೋನ್ ತಡೆಹಿಡಿದು, ತನ್ನೊಂದಿಗೆ ಒಂದು ರಾತ್ರಿ ಕಳೆದರೆ ಲೋನ್ ಕೊಡಿಸುವುದಾಗಿ ಯಮನೂರಪ್ಪ ಹೇಳಿದ್ದನು. ಇದರಿಂದ ಕೋಪಗೊಂಡ ನಾಗಮ್ಮ ಚಪ್ಪಲಿಯಿಂದ ಹೊಡೆದಿದ್ದಳು.

ಪ್ರಕರಣ-4

ದೊಡ್ಡಬಳ್ಳಾಪುರದ ಮೌಲಾಖಾನ್ ನಗರದ ಇಸ್ಲಾಂಪುರ ನಿವಾಸಿಗಳಾದ ನೇಕಾರಿಕೆ ಮಾಡುತ್ತಿದ್ದ ಮೌಲಾಖಾನ್ ಮತ್ತು ಸಮೀನಾ ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೆ ಮುತ್ತೂರು ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಇದರಲ್ಲಿ ಮೌಲಾಖಾನ್ ಸಾವನ್ನಪ್ಪಿ ಮಡದಿ ಸಮೀನಾ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ದಂಪತಿಗಳು ಬಂಧನ, ಎಸ್.ಕೆ.ಎಸ್, ಬಜಾಜ್ ಫೈನಾನ್ಸ್‌ನಲ್ಲಿ 1.50 ಲಕ್ಷ ಸಾಲ ಪಡೆದಿದ್ದರು. ಸಾಲ ಮರುಪಾವತಿಗೆ ಈ ಕಂಪನಿಗಳು ವಿಪರೀತ ಕಿರುಕುಳ ಕೊಟ್ಟ ಕಾರಣ ದಂಪತಿಗಳು ಆತ್ಮಹತ್ಯೆಗೆ (ಜುಲೈ 6, 2022) ಮುಂದಾಗಿದ್ದರು.

ಪ್ರಕರಣ-5

ಕಡೂರು ತಾಲೂಕಿನ ತಂಗಲಿ ಗ್ರಾಮದ ರೈತ ಮಹಿಳೆ ದೇವೀರಮ್ಮ (64) ಕಡೂರಿನ ಗ್ರಾಮೀಣ ಕೂಟ ಫೈನಾನ್ಸ್‌ನಲ್ಲಿ 78,000 ರೂ ಸಾಲ ಪಡೆದಿದ್ದರು. ಬೆಳೆ ಕೈಕೊಟ್ಟ ಕಾರಣಕ್ಕೆ ಹಣ ವಾಪಸಾತಿ ಮಾಡಲು ಆಗಿರಲಿಲ್ಲ. ಹೀಗಿರುವಾಗ ಫೈನಾನ್ಸ್‌ನವರ ಕಿರುಕುಳ ಹೆಚ್ಚಾಗಿ (6.10.2023) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಗಂಗಾವತಿ ತಾಲೂಕಿನ ಗುಂಡೂರು ಗ್ರಾಮದ 38 ವರ್ಷದ ಮಹಿಳೆಯೊಬ್ಬರು ಫ್ಯೂಚರ್ ಮೈಕ್ರೋ ಫೈನಾನ್ಸ್‌ನಿಂದ ಸಾಲ ವಸೂಲಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ (2.3.2017) ಮಾಡಿಕೊಂಡಿದ್ದರು. ತೀರಾ ಈಚೆಗೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಟ್ನಿಹಳ್ಳಿ ಗ್ರಾಮದಲ್ಲಿ ಶಬ್ಬೀರ್ ಎನ್ನುವಾತ ಇದೇ ಮೈಕ್ರೋ ಫೈನಾನ್ಸ್ ಹಾವಳಿಗೆ ನೊಂದು ನೇಣಿಗೆ ಶರಣಾಗಿದ್ದಾರೆ. ಸರಿಯಾದ ಪರಿಶೀಲನೆ ಮಾಡಿದರೆ ಕಳೆದ ದಶಕದಲ್ಲಿ ಅಂದಾಜು 100ಕ್ಕಿಂತ ಹೆಚ್ಚಿನ ಜನರು ಮೈಕ್ರೋ ಫೈನಾನ್ಸ್ ಶೋಷಣೆಗೆ ಜೀವಕಳೆದುಕೊಂಡಿರುವುದು ತಿಳಿದುಬರುತ್ತದೆ.

ಇದೀಗ ಕರ್ನಾಟಕದ ಬಹುಪಾಲು ಹಳ್ಳಿಗಳಲ್ಲಿ ಮನೆಮನೆಗಳಿಗೆ ಮೈಕ್ರೋ ಫೈನಾನ್ಸ್‌ಗಳು ಲಗ್ಗೆ ಇಟ್ಟಿವೆ. ಕೋಟ್ಯಂತರ ಜನರಿಗೆ ಸಾಲ ಕೊಟ್ಟು ಮರುಪಾವತಿ ಮಾಡಿಸಿಕೊಳ್ಳುತ್ತಿವೆ. ಹೀಗೆ ಸಾಲಕೊಡುವ ಆಮಿಷಗಳು ಹೆಚ್ಚಿದಂತೆಲ್ಲಾ ಗ್ರಾಮೀಣ ಭಾಗದಲ್ಲಿ ಜನ ಅಗತ್ಯಕ್ಕಿಂತಲೂ ಹೆಚ್ಚು ಸಾಲ ಮಾಡುತ್ತಿದ್ದಾರೆ. ತದನಂತರ ಈ ಸಾಲಗಳ ಮರುಪಾವತಿಯ ಹಿಂಸೆ ಶುರುವಾಗುತ್ತದೆ. ಕರ್ನಾಟಕದಲ್ಲಿ ಈಗಾಗಲೆ ಪತ್ರಿಕೆಗಳಲ್ಲಿ ವರದಿಯಾದಂತೆ ಕಳೆದ ಕೆಲವು ವರ್ಷಗಳಲ್ಲಿ ಹತ್ತಕ್ಕಿಂತ ಹೆಚ್ಚು ಜನರು ಮೈಕ್ರೋ ಫೈನಾನ್ಸ್ ದಾಳಿಗೆ ಬಲಿಯಾಗಿದ್ದಾರೆ.

ಇಂದು ಒಂದೊಂದು ಊರುಗಳಲ್ಲಿಯೂ 30-40ಕ್ಕಿಂತ ಹೆಚ್ಚಿನ ಫೈನಾನ್ಸ್ ಕಂಪನಿಗಳು ಲಗ್ಗೆ ಇಟ್ಟಿವೆ. ಸಾಲ ಪಡೆಯುವುದನ್ನು ಸಾಧ್ಯವಾದಷ್ಟು ಸರಳಗೊಳಿಸಲಾಗಿದೆ. ಕೇವಲ ಆಧಾರ್ ಕಾರ್ಡ್ ಮಾಹಿತಿ ಇಟ್ಟುಕೊಂಡು ಒಂದೆರಡು ದಿನಗಳಲ್ಲಿ ಸಾಲ ಕೊಡಲಾಗುತ್ತದೆ. ಒಬ್ಬರು ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚಿನ ಫೈನಾನ್ಸ್‌ಗಳಿಂದ ಸಾಲ ಪಡೆಯುತ್ತಾರೆ. ಒಂದು ಫೈನಾನ್ಸ್ ಸಾಲ ತೀರಿಸಲು ಮತ್ತೊಂದರಲ್ಲಿ ಸಾಲ, ಅದನ್ನು ತೀರಿಸಲು ಮತ್ತೊಂದರಲ್ಲಿ ಸಾಲ ಹೀಗೆ ಒಂದರೊಳಗೊಂದು ಬೆರೆತು ಏಕಕಾಲಕ್ಕೆ ಹತ್ತಾರು ಫೈನಾನ್ಸುಗಳ ಹಣ ಕಟ್ಟಬೇಕಾಗುತ್ತದೆ. ಬಡ್ಡಿ ದರ ಕೂಡ ಒಂದೊಂದು ಕಂಪನಿಗಳು ಒಂದೊಂದು ರೀತಿ ವಿಧಿಸುತ್ತಿವೆ. ಗುಂಪು ಸಾಲದಲ್ಲಿ ಯಾರಾದರು ಒಬ್ಬರು ಸಾಲ ಪಡೆದರೆ ಆಯಾ ಗುಂಪಿನ ಎಲ್ಲರೂ ಅದಕ್ಕೆ ಹೊಣೆಗಾರರಾಗಬೇಕಾಗುತ್ತದೆ. ಹೀಗಾಗಿ ಜನರು ಸಾಲ ಪಡೆಯುವುದು ಮಾತ್ರವಲ್ಲ, ಆಯಾ ಗುಂಪಿನಲ್ಲಿ ಸಾಲ ಪಡೆದವರ ಮರುಪಾವತಿಗೆ ಕೂಡ ಇವರೇ ಹೊಣೆಗಾರರಾಗಿರುತ್ತಾರೆ.

ಹತ್ತು ಜನರ ಗುಂಪಿನಲ್ಲಿ ಒಬ್ಬರು ಸಾಲ ಪಡೆದು ಅವರು ಮರು ಪಾವತಿ ಮಾಡದಿದ್ದರೆ ಉಳಿದ ಒಂಬತ್ತು ಜನರು ಅವರ ಮನೆಯ ಮುಂದೆ ನಿಂತು ಸಾಲ ವಸೂಲಿ ಮಾಡಬೇಕಾಗುತ್ತದೆ. ಹೀಗೆ ಸಾಲ ವಾಪಸಾತಿ ಕಿರುಕುಳ ಶುರುವಾಗುತ್ತದೆ.

ಹೀಗೆ ಮೈಕ್ರೋ ಫೈನಾನ್ಸ್‌ಗಳ ಕಿರುಕುಳದ ದಾಳಿಯ ಕಾರಣಕ್ಕೆ ಕರ್ನಾಟಕದಲ್ಲಿ ಹಲವು ನೆಲೆಯ ಹೋರಾಟಗಳು ಶುರುವಾಗಿವೆ. ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಕಪ್ಪುಹಣವನ್ನು ವೈಟ್ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿವೆ ಎಂದು ಚಳವಳಿಗಾರರು ದೂರುತ್ತಿದ್ದಾರೆ. ಅದಾನಿ ಫೈನಾನ್ಸ್, ಬಜಾಜ್ ಫೈನಾನ್ಸ್ ಒಳಗೊಂಡಂತೆ ಕಾರ್ಪೊರೇಟ್ ಸಂಸ್ಥೆಗಳು ಮೈಕ್ರೋ ಫೈನಾನ್ಸ್ ಘಟಕಗಳನ್ನು ತೆರೆದು ಹಳ್ಳಿಗಳಿಗೆ ಲಗ್ಗೆ ಇಡುತ್ತಿವೆ. 2010ರಲ್ಲಿ ಆಂಧ್ರ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿ ಸರಣಿ ಆತ್ಮಹತ್ಯೆಗಳಾದ ಕಾರಣ, ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್‌ಗಳ ನಿಯಂತ್ರಣ ಕಾಯ್ದೆಯನ್ನು ತರಲಾಯಿತು. ಈ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನದಿಂದಾಗಿ ದೊಡ್ಡಮಟ್ಟದಲ್ಲಿ ಮೈಕ್ರೋ ಫೈನಾನ್ಸ್‌ಗಳು ಆಂಧ್ರದಿಂದ ಕಾಲ್ಕಿತ್ತವು. ಅಂತಹ ಅನೇಕ ಮೈಕ್ರೋ ಫೈನಾನ್ಸ್‌ಗಳು ಕರ್ನಾಟಕದಲ್ಲಿ ತಮ್ಮ ಅಂಗಡಿಗಳನ್ನು ತೆರೆದಿವೆ. ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿಯೂ ಮೈಕ್ರೋ ಫೈನಾನ್ಸ್ ಕಾರಣಕ್ಕೆ ಸರಣಿ ಆತ್ಮಹತ್ಯೆಗಳು ನಡೆಯುವ ದಿನಗಳು ದೂರವಿಲ್ಲ. ಹಾಗಾಗಿ ಕೂಡಲೆ ಕರ್ನಾಟಕ ಸರಕಾರವು ಈ ಫೈನಾನ್ಸ್‌ಗಳ ಮೇಲೆ ಆಂಧ್ರ ಸರಕಾರವು ಜಾರಿಗೊಳಿಸಿದ 2010ರ ಮೈಕ್ರೋ ಫೈನಾನ್ಸ್ ನಿಯಂತ್ರಣ ಕಾಯ್ದೆಯ ಮಾದರಿಯಲ್ಲಿ ನಿಯಂತ್ರಣ ಹೇರಬೇಕಿದೆ.

ಅರುಣ್ ಜೋಳದಕೂಡ್ಲಿಗಿ

ಅರುಣ್ ಜೋಳದಕೂಡ್ಲಿಗಿ
ಬಳ್ಳಾರಿ ಜಿಲ್ಲೆಯ ಜೋಳದಕೂಡ್ಲಿಗಿಯವರು. ಸದ್ಯಕ್ಕೆ ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಜನಪದ ಕವಿಗಳ ಕುರಿತು ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ. ನೆರಳು ಮಾತನಾಡುವ ಹೊತ್ತು, ಸಂಡೂರು ಭೂಹೋರಾಟ, ಅವ್ವನ ಅಂಗನವಾಡಿ, ಕನ್ನಡ ಜಾನಪದ ತಾತ್ವಿಕ ನೆಲೆಗಳು ಪ್ರಮುಖ ಕೃತಿಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...