‘ಸಾಮಾನ್ಯವಾಗಿ ಆತ್ಮಕಥನಗಳು ಅಂದರೆ ಒಬ್ಬ ವ್ಯಕ್ತಿಯ ವಿವರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಆದರೆ ‘ನಮ್ಮ ಹಟ್ಟಿ’ ಆತ್ಮಕಥಾನಕದಲ್ಲಿ ಒಂದು ಹಟ್ಟಿಯ ವಿವರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅಲ್ಲಿರುವ ಅನೇಕ ಕುಶಲ ಕರ್ಮಿಗಳು, ಹಾಗೂ ವಿಶಿಷ್ಟ ಲೋಕವೇ ಬಿಚ್ಚಿಕೊಳ್ಳುತ್ತವೆ. ಹಾಗಾಗಿ ಈ ಪುಸ್ತಕ ಬಹಳ ಮುಖ್ಯವಾಗುತ್ತದೆ’ ಎಂದು ಸಾಂಸ್ಕೃತಿಕ ಚಿಂತಹ, ಹಿರಿಯ ದಲಿತ ಮುಖಂಡ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ ಪಟ್ಟರು.
2026 ಫೆಬ್ರವರಿ 7ರಂದು, ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕೆ. ದೊರೈರಾಜ್ ಅವರ ‘ನಮ್ಮ ಹಟ್ಟಿ’ ಆತ್ಮಕಥಾನಕ ಬಿಡುಗಡೆ ಸಂದರ್ಭದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ‘ಸಂಯುಕ್ತ ಹೋರಾಟಗಳನ್ನು ಕಟ್ಟುವಾಗ, ಆ ಕಟ್ಟುವಿಕೆಯಲ್ಲಿಯೇ ಬೇರೆ ಬೇರೆಯಾಗುವುದನ್ನ ನೋಡಿದ್ದೇವೆ. ಅದು ಒಗ್ಗಟ್ಟಾಗುವುದು ತುಂಬಾ ಕಡಿಮೆ, ಕ್ರಾಂತಿಯ ಬಿರುಗಾಳಿಯಲ್ಲಿ ಚದುರಿ ಹೋಗಿ, ಇನ್ನೇನೋ ಆಗಿ ಹೋಗಿರುವ ಈ ಹೊತ್ತಿನಲ್ಲಿ, ಇಂತಹ ಸಂಗಮವನ್ನ ನಾನು ಈ ಕಾರ್ಯಕ್ರಮದಲ್ಲಿ ನೋಡುತ್ತಿದ್ದೇನೆ. ದಲಿತ ಚಳವಳಿಯ ಬಣಗಳ ಒಡಕಿನ ಕಾಲಘಟ್ಟದಲ್ಲಿ ಪ್ರೀತಿಯಿಂದ, ಒಳಗಿನ ತುಡಿತದಿಂದ ಒಂದಾಗುವುದನ್ನು ಕಾಣುತ್ತಿದ್ದೇನೆ ಇದು ಹೊಸ ಭರವಸೆಯಾಗಿ ನನಗೆ ಕಾಣುತ್ತಿದೆ’ ಎಂದರು.
ಕೃತಿಯ ಕುರಿತು ಮಾತನಾಡಿದ ಅವರು ‘ಕಳೆದ ಹದಿನೈದು ವರ್ಷಗಳಿಂದೀಚೆಗೆ, ಅನೇಕ ಜನರು ಆತ್ಮಕಥೆಗಳ ರೀತಿಯಲ್ಲಿ ಚಳವಳಿಯ ಜೊತೆಗೆ ತಮ್ಮ ಅನುಭವಗಳನ್ನ ದಾಖಲಿಸುತ್ತಿದ್ದಾರೆ. ಸುಮಾರು ದಾಖಲೆಗಳು ಕಾಣುತ್ತಿವೆ. ಇವು ಒಂದು ರೀತಿ ಮೇಗಾ ನರೆಟೀವ್ಸ್ ತರಹ ಕಾಣುತ್ತವೆ. ಅಂದರೆ ಒಂದು ಸೆಲ್ಫಿಯ ತರ ಕಾಣುತ್ತವೆ. ನಾನು ಡಿಎಸ್ಎಸ್ ಜೊತೆ ಹೇಗಿದ್ದೆ, ಅನ್ನುವ ಸೆಲ್ಫಿಯಾಗಿ ಈ ಅನುಭವಕಥನಗಳು ಇವೆ. ಆದರೆ ಈ ನಡುವೆ ಒಂದು ಗ್ರೂಫ್ ಫೋಟೋ ಕಾಣುತ್ತದೆಯೇ ಅಂದರೆ, ಅಲ್ಲಿ ನಿಜಕ್ಕೂ ಗ್ರೂಫ್ ಫೋಟೋ ಕಾಣುವುದಿಲ್ಲ. ಯಾಕೆಂದರೆ ಅದು ಬರೆದ ವ್ಯಕ್ತಿಯ ಕೇಂದ್ರಿತವಾಗಿರುತ್ತದೆ. ಆದರೆ ದೊರೈರಾಜ್ ಅವರ ‘ನಮ್ಮ ಹಟ್ಟಿ’ ಕೃತಿ ಒಂದು ಸಮೂಹ ಧ್ವನಿಯಾಗಿ ಕಾಣುತ್ತದೆ. ಇದು ಕೇವಲ ದೊರೈರಾಜ್ ಅವರ ಕಥೆಯಲ್ಲ, ಓದುತ್ತಾ ಓದುತ್ತಾ ಒಂದು ಸಾಂಸ್ಕೃತಿಕ ಲೋಕವನ್ನೇ ಈ ಕೃತಿ ಕಟ್ಟಿಕೊಡುತ್ತದೆ ಹಾಗಾಗಿ ಇದು ಬಹಳ ಮುಖ್ಯವಾದ ಕೃತಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದ ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರು ಮಾತನಾಡಿ, ದೊರೈರಾಜು ಅವರ ಆತ್ಮಕಥನ ಅವರ ಆತ್ಮಕಥನವೂ ಹೌದು, ಅನೇಕ ಜನರ ಆತ್ಮಕಥನವೂ ಹೌದು, ಆಟೋಬಯೋಗ್ರಫಿ ಅಂದರೆ ಒಬ್ಬರ ವಿವರ, ಇದು ಮಲ್ಟಿ ಆಟೋಬಯೋಗ್ರಫಿ. ಕಮ್ಯೂನಿಟಿ ಹಂತದಲ್ಲಿ ಮಾತಾಡುವ ಒಂದು ಧ್ವನಿ ಈ ಕೃತಿಯಲ್ಲಿದೆ ಎಂದರು.
ದೊರೈರಾಜು ಅವರು ಒಂದಿಡೀ ಹಟ್ಟಿಯನ್ನ ತಮ್ಮ ವೈಯಕ್ತಿಕ ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ದೊರೈರಾಜು ಕಟ್ಟಿಕೊಟ್ಟಿರುವ ಫಾರ್ಮೆಟ್ ಸ್ವಲ್ಪ ಹೆಚ್ಚು ಕಡಿಮೆಯಾದರೇ, ಅದೊಂದು ಅಭಿನಂದನಾ ಗ್ರಂಥವಾಗುವ ಸಾಧ್ಯತೆಗಳಿವೆ. ಈ ಪುಸ್ತಕದಲ್ಲಿ ಸುಮಾರು ಜನ ದೊರೈರಾಜು ಅವರ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆಗಳನ್ನು ಸೂಚಿಸಿ ಬರೆದಿದ್ದಾರೆ. ಆದರೆ ಈ ಕೃತಿ ತುಮಕೂರಿತ ಸಾಂಸ್ಕೃತಿಕ ಚರಿತ್ರೆಯ ಭಾಗವಾಗಿ ಕಥನವನ್ನು ಕಟ್ಟಿಕೊಡುತ್ತದೆ ಎಂದು ಹೇಳಿದರು.
ಕೃತಿಯ ನಿರೂಪಕರಾದ ಜಿ.ವಿ. ಆನಂದಮೂರ್ತಿ ಅವರು ಮಾತನಾಡುತ್ತಾ ‘ಈ ಕೃತಿ ಒಂದು ಸಾಮೂಹಿಕ ಕೃತಿ ಎಂದು ನಟರಾಜು ಬೂದಾಳು ತಿಳಿಸಿದ್ದರು. ಈ ಕೃತಿ ತುಮಕೂರಿನ ಸಾಂಸ್ಕೃತಿಕ ಚರಿತ್ರೆಯ ಭಾಗವಾಗಿ ಹೊರಹೊಮ್ಮಿದೆ ಎಂದರು.
ಇನ್ನು ಈ ಕೃತಿಯಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಈ ಕೃತಿಯಲ್ಲಿ ಸುಮಾರು 454ಕ್ಕೂ ಹೆಚ್ಚು ಹೆಸರುಗಳು ಪ್ರಸ್ತಾಪವಾಗುತ್ತವೆ. ಇಷ್ಟೊಂದು ಪಾತ್ರಗಳು, ಹೆಸರುಗಳು ‘ಮಲೆಗಳಲ್ಲಿ ಮದುಮಗಳು’ ಕೃತಿಯಲ್ಲೂ ಇಲ್ಲ. ನಾವು ಈ ಕೃತಿಯನ್ನ, ಮೇಲು ಸಮಾಜದಿಂದ ಬಂದಿರುವ ಆತ್ಮಕಥೆಗಳ ಜೊತೆ ಇಟ್ಟು ನೋಡಬೇಕಾಗುತ್ತದೆ. ಆಗ ಮಾತ್ರ ಇದರ ಪ್ರಸ್ತುತತೆ, ಇದರ ಸಾಂಸ್ಕೃತಿಕ ಅನನ್ಯತೆ, ಇದರ ಸಾಮಾಜಿಕ ಅನನ್ಯತೆ ತಿಳಿಯುತ್ತಾ ಹೋಗುತ್ತದೆ. ಇದನ್ನೇ ಒಂದು ಪ್ರತ್ಯೇಕ ಘಟಕವಾಗಿ ನೋಡಿದರೆ ನಮ್ಮ ನೋಟವೇ ಮಿತಿಯಾಗುತ್ತದೆ ಎಂದರು.
ಪುಸ್ತಕದ ಕುರಿತು ಮಾತನಾಡಿದ ಡಾ. ರವಿಕುಮಾರ್ ಬಾಗಿ, ‘ನಮ್ಮ ಹಟ್ಟಿ’ ಕಥನ ಇದೊಂದು ಆತ್ಮಕಥೆ ಅಲ್ಲ, ಇದೊಂದು ಹಟ್ಟಿಯ ಕಥೆ ಹಾಗಾಗಿ ಇದು ಬೇರೆ ಆತ್ಮಕಥೆಗಳಿಗಿಂತ ಭಿನ್ನವಾಗಿ ನಿಲ್ಲುವ ಆತ್ಮಕಥೆ ಎಂದರು. ಇದರ ಒಳಗಡೆ ದೊರೈರಾಜು ಒಬ್ಬರ ಕಥೆಗಳಿಲ್ಲ, ಹನ್ನೊಂದು ಜನರ ಕಥೆಗಳಿವೆ. ಅದರಲ್ಲಿ ಹನುಮಂತಯ್ಯ, ಗಂಗಮ್ಮ, ಪ್ರಕಾಶ್, ಶ್ರೀನಿವಾಸು, ಕೆಂಪಯ್ಯ, ಮೂರ್ತಿ, ನರಸಿಂಹಯ್ಯ, ಆಂಜಿನಮ್ಮ, ಮಸಿಯಮ್ಮಾ ಎಲ್ಲರು ಇದ್ದಾರೆ. ಅವರವರು ಅವರ ಕಥನವನ್ನ ಹೇಳುತ್ತಾ ಹೋಗುತ್ತಾರೆ. ಹಾಗಾಗಿ ಇದೊಂದು ರೀತಿ ಬಾಳ ವಿಶಿಷ್ಟವಾಗಿ ಇರುವಂತ ಒಂದು ಕೃತಿಯಾಗಿ ಕಂಡುಬರುತ್ತದೆ. ಅನೇಕರು ಇಲ್ಲಿ ದೊರೈರಾಜು ಅವರ ಬಗ್ಗೆ ಮಾತನಾಡುತ್ತಾರೆ. ಅವರ ಚಳವಳಿಯ ಬಗ್ಗೆ ಮಾತಾಡ್ತಾರೆ, ಹಟ್ಟಿಯ ಕಥನಗಳನ್ನ ಹೇಳುತ್ತಾರೆ. ತಮ್ಮ ಬಗ್ಗೆಯೂ ಹೇಳುತ್ತಾರೆ ಹಾಗಾಗಿ ಇದೊಂದು ವಿಭಿನ್ನವಾಗಿರುವ ಅಂಶಗಳನ್ನ ಒಳಗೊಂಡಿರುವ ಪುಸ್ತಕ ಅಂತಾ ನನಗನ್ನಿಸುತ್ತದೆ ಎಂದು ವಿವರಿಸಿದರು.
ಕೃತಿಯ ಕುರಿತು ಮಾತನಾಡಿದ ಮತ್ತೊಬ್ಬ ಯುವ ಚಿಂತಕ, ವಿ.ಎಲ್. ನರಸಿಂಹಮೂರ್ತಿ ಅವರು ‘ಈ ಪುಸ್ತಕ ಓದುವುದಕ್ಕೆ ಆರಂಭಿಸಿದಾಗಲೇ ನನಗೆ ಅರ್ಥವಾಯಿತು. ಇಲ್ಲಿ ಕೇವಲ ದೊರೈರಾಜು ಅವರ ಕಥನಗಳಿಲ್ಲ, ಇಡೀ ಹಟ್ಟಿಯ ಕಥನಗಳು ಇಲ್ಲಿವೆ ಎಂಬುದು, ಹಾಗಾಗಿ ಇದು ಒಂದು ಸಾಮೂಹಿಕ ಪ್ರಜ್ಞೆಯ ಕೃತಿ’ ಎಂದರು.
ಹಾಗೇ ಸಾಹಿತ್ಯದಲ್ಲಿ ಆತ್ಮಕಥೆಗಳಷ್ಟು ಡೇಂಜರಸ್ ಪ್ರಕಾರ ಬೇರೆ ಇಲ್ಲ, ಅಷ್ಟು ಸುಳ್ಳು ವ್ಯಕ್ತಿತ್ವವನ್ನು ಆರೋಪಿಸಿಕೊಳ್ಳುತ್ತಾರೆ. ಅಂದರೆ ಆತ್ಮಕಥೆಗಳು ಹೆಚ್ಚು ಸೆಲ್ಫ್ ಗ್ಲೋರಿಫಿಕೇಶನ್ (ಸ್ವ-ವೈಭವೀಕರಣ) ಆಗಿರುತ್ತವೆ. ಇದನ್ನು ಸುಳ್ಳಾಗಿಸಿದ್ದು, ದಲಿತರ ಆತ್ಮಕಥೆಗಳು. ಮುಖ್ಯವಾಗಿ ಮರಾಠಿಯಲ್ಲಿ ಬಂದಿರುವ, ಕನ್ನಡದಲ್ಲಿ ಬಂದಿರುವ, ಮತ್ತು ಕಳೆದ ಹತ್ತು ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬರುತ್ತಿರುವ ಆತ್ಮಕಥನಗಳು ಈ ಆರೋಪವನ್ನು ಬದಲಿಸಿದ್ದಾವೆ.
‘ನಮ್ಮ ಹಟ್ಟಿ’ ಆತ್ಮಕಥೆ ಒಂದು ವ್ಯಕ್ತಿಯ ಸುತ್ತಾ ಇರುವುದಲ್ಲ, ಒಂದು ಸಮುದಾಯದ ಸುತ್ತಾ ಇರುವ ಪುಸ್ತಕ. ಇದು ಒಂದು ಒಳ್ಳೆಯ ಸಮಾಜಶಾಸ್ತ್ರೀಯ ದಾಖಲೆಯಾಗಬಲ್ಲ ಪುಸ್ತಕ ಎಂದು ವಿ.ಎಲ್. ನರಸಿಂಹಮೂರ್ತಿ ಅಭಿಪ್ರಾಯ ಪಟ್ಟರು.
ಕೆ. ದೊರೈರಾಜು ಮಾತನಾಡಿ, ‘ಈ ಕೃತಿ ಒಮ್ಮೆಗೆ ಅರ್ಥವಾಗುವುದಿಲ್ಲ, ನಿಮಗೆ ಇಷ್ಟವಾಗುವ ವರೆಗೆ ಓದುತ್ತಾ ಹೋಗಿ, ಹೀಗೆ ಓದುತ್ತಾ ಹೋದಂತೆ ನನಗೆ ಅರ್ಥವಾಗಿದ್ದು, ಮುಖ್ಯವಾಗಿ ನನಗೆ ಅನ್ನಿಸಿದ್ದು, ಅಸ್ಪೃಶ್ಯತೆಯನ್ನ ಅನುಭವಿಸಿದ ನಾವು, ಇವತ್ತು ಅಸ್ಪೃಶ್ಯರನ್ನ ಎಷ್ಟು ಅವಮಾನಿತರಾಗಿ, ಅವನ ಆತ್ಮವಿಶ್ವಾಸವನ್ನು ಕೊಲ್ಲುತ್ತಾರೋ. ಹಾಗೇ ಈ ಅಸ್ಪೃಶ್ಯರ ಹಟ್ಟಿಗಳು, ಅವು ಸಮಾಜದಿಂದ ಹೊರಗಿಡಲ್ಪಟ್ಟವು, ಆದರೆ ಆ ಇಡೀ ಸಮಾಜವನ್ನು ಕಟ್ಟುವವರು, ಪೋಷಣೆ ಮಾಡುವವರು ಎಲ್ಲಾ ಅವರೇನೆ ಎಂದರು. ಇಂತಹ ಆರ್ಥಿಕ ಸಂಪನ್ಮೂಲವನ್ನ ಉತ್ಪಾದನೆ ಮಾಡುವ ಕೌಶಲ್ಯವಿರುವ ಈ ಜನಾಂಗ ಆರ್ಥಿಕವಾಗಿ ಏನೂ ಆಗಲಿಲ್ಲ, ಎಲ್ಲಿದ್ದಾರೆಯೋ ಅಲ್ಲೇ ಇದ್ದಾರೆ. ಯಾಕೆ ಅವರಿಗೆ ಈ ಚಲನೆ ಸಾಧ್ಯವಾಗಲಿಲ್ಲ ಅನ್ನೋದನ್ನ ಯೋಚಿಸಬೇಕಿದೆ ಎಂದರು.
‘ಬಹಳ ಮುಖ್ಯವಾಗಿ ಒಬ್ಬ ಅಸ್ಪೃಶ್ಯ ಹೇಗೆ ಅವಮಾನಿತನಾಗುತ್ತಾನೋ ಆ ಹಟ್ಟಿಯಲ್ಲಿ ಹುಟ್ಟಿದ ಎಲ್ಲರೂ ಅದೇ ಅವಮಾನಗಳನ್ನ ಅನುಭವಿಸುತ್ತಾರೆ. ಇಡೀ ಸಮಾಜ ಸಾಂಸ್ಥಿಕವಾಗಿ ಈ ಜನಗಳ ಮೇಲೆ ಮಾಡಿದ ದೌರ್ಜನ್ಯ ಅಂತಾದ್ದು, ಈ ದೌರ್ಜನ್ಯದಿಂದ ಆ ಜನ ನಲುಗಿ ಹೋಗಿದ್ದಾರೆ’ ಎಂದರು.
‘ಸಾಂಸ್ಥಿಕ ದೌರ್ಜನ್ಯ ನಿರಂತರವಾಗಿ ಹಟ್ಟಿಯ ಮೇಲೆ ನಡೆದಿರುವುದರಿಂದ ಆ ಹಟ್ಟಿಯ ಸ್ಥಿತಿ ಆರ್ಥಿಕವಾಗಿ ಚಲನೆ ಕಾಣದ ಸ್ಥಿತಿಗೆ ತಲುಪಿದೆ. ನಮ್ಮ ಹಟ್ಟಿಯ ಜನ ಸ್ವಾಭಿಮಾನಿಗಳು, ಆ ಸ್ವಾಭಿಮಾನದ ಬದುಕು, ಅಲ್ಲಿನ ಮಹಿಳೆಯರ ಧೈರ್ಯ, ಸ್ಥೈರ್ಯ ಬೇರೆ ಕಡೆ ಸಾಧ್ಯವಾಗುವುದಿಲ್ಲ. ಇಂತಹ ಎಷ್ಟೋ ಹಟ್ಟಿಗಳು ಸಾಂಸ್ಥಿಕ ದೌರ್ಜನ್ಯಕ್ಕೆ ತತ್ತಿರಿಸಿ, ಇವತ್ತು ಆಳುವ ಸರ್ಕಾರಗಳ ಕೈಗೆ ಅಸ್ತ್ರವಾಗಿ ಸಿಕ್ಕಿವೆ’ ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಸಾಮಾಜಿಕ ಹೋರಾಟಗಾರ, ಹಿರಿಯ ದಲಿತ ಮುಖಂಡ ಬಸವರಾಜ ಕೌತಾಳ್ ಅವರು ‘ನಮ್ಮ ಹಟ್ಟಿ’ ಪುಸ್ತಕದ ಬಿಡುಗಡೆಯ ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಪುಸ್ತಕ ಬಿಡುಗಡೆ ಆಗುತ್ತಿದೆ. ಈಗಾಗಲೇ ತುಮಕೂರಿನಲ್ಲಿ ಬಿಡುಗಡೆಯಾಗಿರುವ ಈ ಕೃತಿ, ಹೆಚ್ಚಿನ ಚರ್ಚೆಗೆ ಒಳಗಾಗಬೇಕು, ಈ ಪುಸ್ತಕ ಹೊಸ ಪೀಳಿಗೆಗಳ ಮಧ್ಯೆ, ಹೊಸ ಯುವಸಮುದಾಯಗಳ ಮಧ್ಯೆ ಹೆಚ್ಚು ತಲುಪಬೇಕು, ಚರ್ಚೆಗಳು ನಡೆಯಬೇಕು ಅನ್ನುವ ಆಲೋಚನೆಯಲ್ಲಿ ಇಂದು ಬೆಂಗಳೂರಿನಲ್ಲಿ ಸಾಂಕೇತಿಕವಾಗಿ ಬಿಡುಗಡೆಯಾಗುತ್ತಿದೆ ಎಂದರು. ಎಲ್ಲಾ ಹಿರಿಯ, ಯುವ ಸಾಹಿತಿಗಳು, ಚಿಂತಕರು ಬರಹಗಾರರು ಈ ಸಾಂಕೇತಿಕ ಕಾರ್ಯಕ್ರಮವನ್ನು ಮಾಡಿದ್ದಾರೆ. ಇದು ಬಹಳ ವಿಶೇಷವಾದಂತಹ ಚಲನಶೀಲವಾದ ಹೊಸ ಆಲೋಚನೆಗಳನ್ನ ಹುಟ್ಟಿಸುವ ಕೆಲಸವನ್ನು ಈ ಕೃತಿ ಮಾಡಿದೆ ಎಂದರು.
ವೇದಿಕೆಯಲ್ಲಿದ್ದ ಗಂಗಮ್ಮ ಕೆಂಪಮ್ಮ ಅವರು ದಲಿತ ಸಂಘರ್ಷ ಸಮಿತಿ, ಮತ್ತು ಮಹಿಳಾ ಒಕ್ಕೂಟದ ಅನುಭವವನ್ನು ಹಂಚಿಕೊಂಡರು. ದೊಡ್ಡಟ್ಟಿ ನಿವಾಸಿಯಾದ, ದಸಂಸ ಕಾರ್ಯಕರ್ತರೂ ಆದ ಮಸಿಯಮ್ಮ ಅವರು ದಲಿತ ಸಂಘರ್ಷ ಸಮಿತಿಯ ಒಡನಾಟವನ್ನು ನೆನೆದರು.
ನಟ, ರಂಗಕರ್ಮಿ ಮಹೇಶ್ ಕಾರ್ಯಕ್ರಮವನ್ನು ನಿರೂಪಿಸಿದರು, ಬಿ.ಎಲ್. ಬಾಲು ಅವರು ಸ್ವಾಗತ ಕೋರಿದರು, ಪತ್ರಕರ್ತ ರವಿಕುಮಾರ್ ಈಚಲಮರ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕೆ. ದೊರೈರಾಜು, ನಿರೂಪಕ ಜಿ.ವಿ. ಆನಂದಮೂರ್ತಿ, ಅಗ್ರಹಾರ ಕೃಷ್ಣಮೂರ್ತಿ, ಬಸವರಾಜ ಕೌತಾಳ್, ರವಿಕುಮಾರ್ ಬಾಗಿ, ವಿ.ಎಲ್. ನರಸಿಂಹಮೂರ್ತಿ, ಗಂಗಮ್ಮ ಕೆಂಪಣ್ಣ, ಮಸಿಯಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


