Homeಮುಖಪುಟ'ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ವಿಧಿಸಿದ್ದ ತಡೆಯಾಜ್ಞೆ ತೆರವು

‘ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ವಿಧಿಸಿದ್ದ ತಡೆಯಾಜ್ಞೆ ತೆರವು

- Advertisement -
- Advertisement -

‘ದಿ ಕೇರಳ ಸ್ಟೋರಿ-2 : ಗೋಸ್ ಬಿಯಾಂಡ್’ ಚಿತ್ರದ ಬಿಡುಗಡೆಗೆ ವಿಧಿಸಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕೇರಳ ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ (ಫೆ.27) ತೆರವುಗೊಳಿಸಿದೆ.

‘ಕೋಮು ಸಾಮರಸ್ಯ ಕದಡುವ ಸಾಧ್ಯತೆ’ಯನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಏಕಸದಸ್ಯ ಪೀಠ ಗುರುವಾರ (ಫೆ.26) ಚಿತ್ರದ ಬಿಡುಗಡೆಗೆ 15 ದಿನಗಳ ಮಧ್ಯಂತರ ತಡೆಯನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕ ವಿಪುಲ್ ಶಾ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ತುರ್ತು ವಿಚಾರಣೆ ಕೋರಿದ್ದರು.

ಶುಕ್ರವಾರ (ಫೆ.27) ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ಪಿ.ವಿ. ಬಾಲಕೃಷ್ಣನ್ ಅವರ ವಿಭಾಗೀಯ ಪೀಠ, ತಡೆಯಾಜ್ಞೆ ತೆರವುಗೊಳಿಸಿ ಚಿತ್ರದ ಬಿಡುಗಡೆ ಅವಕಾಶ ನೀಡಿದೆ.

“ಏಕಸದಸ್ಯ ಪೀಠದ ನ್ಯಾಯಾಧೀಶರು ಚಿತ್ರವನ್ನು ವೀಕ್ಷಿಸದೆಯೇ ಅದು ಬೀರಬಹುದಾದ ಪರಿಣಾಮಗಳ ಬಗ್ಗೆ ಹೇಗೆ ತೀರ್ಮಾನ ತೆಗೆದುಕೊಂಡರು? ಎಂದು ಮೇಲ್ಮನವಿ ವಿಚಾರಣೆಯ ವೇಳೆ ವಿಭಾಗೀಯ ಪೀಠ ಪ್ರಶ್ನಿಸಿದೆ. ಚಿತ್ರವನ್ನು ನೇರವಾಗಿ ನೋಡದೆ ಇಂತಹ ದೊಡ್ಡ ತೀರ್ಪು ನೀಡುವುದು ಸರಿಯಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ. ಚಿತ್ರದ ವಿರುದ್ದ ಸಲ್ಲಿಕೆಯಾದ ಅರ್ಜಿಗಳು ವೈಯಕ್ತಿಕವೇ ಅಥವಾ ಸಾರ್ವಜನಿಕ ಹಿತಾಸಕ್ತಿಯದ್ದೇ (ಪಿಐಎಲ್)..ಅದನ್ನು ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದು ಸರಿಯೇ? ಅಥವಾ ಹೈಕೋರ್ಟ್‌ನ ರೋಸ್ಟರ್ ನಿಯಮಗಳ ಪ್ರಕಾರ ವಿಭಾಗೀಯ ಪೀಠದ ಮುಂದೆ ಇಡಬೇಕಿತ್ತೇ?” ಎಂದು ಕೇಳಿದೆ.

ಚಿತ್ರದ ನಿರ್ಮಾಪಕರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್, ಸೆನ್ಸಾರ್ ಮಂಡಳಿಯಿಂದ ಈಗಾಗಲೇ ಪ್ರಮಾಣಪತ್ರ ಪಡೆದಿರುವ ಚಿತ್ರವನ್ನು ತಡೆಯುವುದು ಸರಿಯಲ್ಲ ಎಂದಿದ್ದಾರೆ.

ಲೈವ್ ಲಾ ವರದಿಯ ಪ್ರಕಾರ, ಒಮ್ಮೆ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕ ಮೇಲೆ, ಅತ್ಯಂತ ಅಪರೂಪದ ಅಥವಾ ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ಅದರ ಬಿಡುಗಡೆಗೆ ಅಡ್ಡಿಪಡಿಸಬಾರದು ಎಂಬ ನಿಯಮವನ್ನು ನ್ಯಾಯಾಲಯಗಳು ಈ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿವೆ ಎಂದು ಅವರು ವಾದಿಸಿದ್ದಾರೆ.

ಚಿತ್ರದ ಟೀಸರ್ ಬಿಡುಗಡೆಯಾಗಿ ಎರಡು ವಾರಗಳಿಗಿಂತ ಹೆಚ್ಚು ಸಮಯ ಕಳೆದ ನಂತರ ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ವಿಳಂಬವನ್ನು ಸ್ವತಃ ಏಕಸದಸ್ಯ ಪೀಠವೇ ‘ಕೊನೆಯ ಕ್ಷಣದ’ ಧಾವಂತ ಎಂದು ಕರೆದಿದೆ. ಟೀಸರ್ ಬಿಡುಗಡೆಯಾದ ಈ 16 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆಯ ಧಕ್ಕೆ ಅಥವಾ ಅಹಿತಕರ ಘಟನೆಗಳು ವರದಿಯಾಗಿಲ್ಲ. ಇಷ್ಟು ದಿನಗಳ ಕಾಲ ಯಾವುದೇ ಸಮಸ್ಯೆ ಇಲ್ಲದಿರುವಾಗ, ಈಗ ಏಕಾಏಕಿ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡುವಂತಹ ತುರ್ತು ಪರಿಸ್ಥಿತಿ ಏನಿದೆ? ಎಂದು ನಿರ್ಮಾಪಕರ ಪರ ವಕೀಲ ಕೌಲ್ ಪ್ರಶ್ನಿಸಿದ್ದಾರೆ.

ಚಿತ್ರವು ಸಮಾಜದ ಕೋಮು ಸೌಹಾರ್ದತೆಯನ್ನು ಕದಡುವ ಸಾಧ್ಯತೆಯಿದೆ ಎಂದು ಏಕಸದಸ್ಯ ಪೀಠ ನೀಡಿದ ತೀರ್ಪು, ಚಿತ್ರವನ್ನು ವೀಕ್ಷಿಸದೆಯೇ ಕೈಗೊಂಡ ನಿರ್ಧಾರವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ಪೀಠ, ಇಂತಹ ಗಂಭೀರವಾದ ತೀರ್ಮಾನಗಳನ್ನು ಅಥವಾ ಆರೋಪಗಳನ್ನು ಮಾಡುವ ಮೊದಲು ಸಾಮಾನ್ಯವಾಗಿ ಚಿತ್ರದ ವಿಷಯವನ್ನು ನೇರವಾಗಿ ಪರಿಶೀಲಿಸುವುದು ಅಗತ್ಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಚಿತ್ರದ ವಿರುದ್ದ ಸಲ್ಲಿಕೆಯಾದ ಅರ್ಜಿಗಳನ್ನು ಏಕಸದಸ್ಯ ಪೀಠ ವಿಚಾರಣೆಗೆ ತೆಗೆದುಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಪ್ರಶ್ನೆ ಎತ್ತಿದ ನಿರ್ಮಾಪಕರ ಪರ ವಕೀಲರು, ಅರ್ಜಿಯು ಮೂಲಭೂತವಾಗಿ ಪಿಐಎಲ್‌ ರೂಪದಲ್ಲಿದೆ ಎಂದು ವಾದಿಸಿದ್ದಾರೆ. ಹೈಕೋರ್ಟ್‌ನ ರೋಸ್ಟರ್ ನಿಯಮಗಳ ಪ್ರಕಾರ, ಇಂತಹ ಸಾರ್ವಜನಿಕ ವಿಷಯದ ಅರ್ಜಿಗಳನ್ನು ಏಕ ಸದಸ್ಯ ಪೀಠದ ನ್ಯಾಯಾಧೀಶರು ವಿಚಾರಣೆ ನಡೆಸುವಂತಿಲ್ಲ; ಇವುಗಳನ್ನು ಇಬ್ಬರು ನ್ಯಾಯಾಧೀಶರಿರುವ ವಿಭಾಗೀಯ ಪೀಠವೇ ವಿಚಾರಣೆ ನಡೆಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಚಿತ್ರ ಬಿಡುಗಡೆಗೆ ಕೊನೆಯ ಕ್ಷಣದಲ್ಲಿ ನೀಡುವ ತಡೆಯಾಜ್ಞೆಗಳು ಚಿತ್ರರಂಗಕ್ಕೆ ಭಾರೀ ಆರ್ಥಿಕ ನಷ್ಟವನ್ನು ಉಂಟುಮಾಡುತ್ತವೆ. ಇದು ಕೇವಲ ಹಣದ ನಷ್ಟವಲ್ಲದೆ, ಆರ್ಥಿಕ ಹಾನಿಯ ಮೂಲಕ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದಂತಾಗುತ್ತದೆ. ಚಿತ್ರವು ವಿಶ್ವಾದ್ಯಂತ ಸುಮಾರು 1,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿತ್ತು. ಆದರೆ ಈ ತಡೆಯಾಜ್ಞೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಚಿತ್ರದ ಪ್ರದರ್ಶನ ಸ್ಥಗಿತಗೊಂಡಿದೆ ಎಂದು ವಿಭಾಗೀಯ ಪೀಠಕ್ಕೆ ತಿಳಿಸಿದ್ದಾರೆ.

ಈ ವಾದಗಳಿಗೆ ಉತ್ತರಿಸಿದ ಮೂಲ ಅರ್ಜಿದಾರರ ಪರ ವಕೀಲರಾದ ಮೈತ್ರೇಯಿ ಹೆಗ್ಡೆ ಅವರು, ಈ ಪ್ರಕರಣವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ ಎಂದು ಪ್ರತಿಪಾದಿಸಿದ್ದಾರೆ. ತಾವು ವೈಯಕ್ತಿಕವಾಗಿ ಈ ಅರ್ಜಿಯನ್ನು ಸಲ್ಲಿಸಿರುವುದಾಗಿ ತಿಳಿಸಿದ ಅವರು, ಚಿತ್ರದಲ್ಲಿ ಕೇರಳವನ್ನು ಚಿತ್ರಿಸಿರುವ ರೀತಿ ಸಂವಿಧಾನದ 21ನೇ ವಿಧಿಯಡಿ ತನಗೆ ಇರುವ ಗೌರವದ ಮೂಲಭೂತ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ವಾದಿಸಿದ್ದಾರೆ.

ಒಬ್ಬ ವ್ಯಕ್ತಿಯ ಗುರುತು ಅವನ ಹುಟ್ಟಿದ ಸ್ಥಳವನ್ನೂ ಒಳಗೊಂಡಿರುತ್ತದೆ. ಕೇರಳವನ್ನು ತಪ್ಪು ರೀತಿಯಲ್ಲಿ (ಉದಾಹರಣೆಗೆ ಮತಾಂತರದ ಕೇಂದ್ರವೆಂಬಂತೆ) ಚಿತ್ರಿಸುವುದು ಆ ರಾಜ್ಯದ ಜನರಿಗೆ ಮಾಡಿದ ಅವಮಾನವಾಗಿದೆ. ಏಕಸದಸ್ಯ ಪೀಠವು ಚಿತ್ರವನ್ನು ವೀಕ್ಷಿಸಲು ಸಿದ್ಧವಿತ್ತಾದರೂ, ನಿರ್ಮಾಪಕರು ಅದನ್ನು ಪ್ರದರ್ಶಿಸಲು ನಿರಾಕರಿಸಿದ್ದರು. ಒಂದು ವೇಳೆ ಚಿತ್ರವನ್ನು ನ್ಯಾಯಾಲಯಕ್ಕೆ ತೋರಿಸಿದ್ದರೆ ತೀರ್ಪು ಬೇರೆಯೇ ಇರುತ್ತಿತ್ತು ಎಂದು ಹೇಳಿದ್ದಾರೆ.

ಒಬ್ಬ ವ್ಯಕ್ತಿಯ ಗುರುತು ಅಥವಾ ಅಸ್ಮಿತೆಯು ಅವರು ಹುಟ್ಟಿದ ಸ್ಥಳವನ್ನೂ ಒಳಗೊಂಡಿರುತ್ತದೆ. ಆದ್ದರಿಂದ, ಕೇರಳವನ್ನು ಬಲವಂತದ ಅಥವಾ ಪ್ರೇಮದ ಹೆಸರಿನ ಮತಾಂತರಗಳ ಕೇಂದ್ರ ಎಂಬಂತೆ ಚಿತ್ರಿಸುವುದು ಆ ರಾಜ್ಯದ ಜನರಿಗೆ ಮಾಡಿದ ಅವಮಾನವಾಗಿದೆ. ತಾನು ಇಡೀ ಕೇರಳದ ಜನರ ಪರವಾಗಿ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿಲ್ಲ, ಬದಲಿಗೆ ಒಬ್ಬ ವ್ಯಕ್ತಿಯಾಗಿ ರಾಜ್ಯಕ್ಕೆ ಆಗುತ್ತಿರುವ ಅವಹೇಳನದಿಂದ ತಮಗೆ ಉಂಟಾಗಿರುವ ವೈಯಕ್ತಿಕ ನೋವು ಮತ್ತು ಅಸಮಾಧಾನವನ್ನು ನ್ಯಾಯಾಲಯದ ಮುಂದೆ ಮಂಡಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಚಲನಚಿತ್ರ ಕಾಯ್ದೆಗೆ ತಿದ್ದುಪಡಿ ತಂದ ನಂತರ, ಮೇಲ್ಮನವಿ ಸಲ್ಲಿಸುವ ಅಥವಾ ಮರುಪರಿಶೀಲಿಸುವ ಅಧಿಕಾರಗಳ ಬಗ್ಗೆ ಅಸ್ಪಷ್ಟತೆ ಇರುವುದನ್ನು ಒಪ್ಪಿಕೊಂಡ ಮೈತ್ರೇಯಿ ಹೆಗ್ಡೆ, ಇಂತಹ ಅಸ್ಪಷ್ಟತೆಯ ನಡುವೆಯೂ, ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟಾದಾಗ ಹೈಕೋರ್ಟ್ ತನ್ನ ಅಸಾಧಾರಣ ಅಧಿಕಾರ ವ್ಯಾಪ್ತಿಯನ್ನು (ವಿಧಿ 226) ಬಳಸಬಹುದು ಎಂದು ವಾದಿಸಿದ್ದಾರೆ. ಅನ್ಯಾಯ ನಡೆದಾಗ ನ್ಯಾಯಾಲಯವು ಕೇವಲ ತಾಂತ್ರಿಕ ಕಾರಣಗಳಿಗಾಗಿ ಸುಮ್ಮನಿರಬಾರದು, ಬದಲಿಗೆ ಸಂವಿಧಾನವು ನೀಡಿರುವ ವಿಶೇಷ ಅಧಿಕಾರದ ಅಡಿಯಲ್ಲಿ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದಿದ್ದಾರೆ.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಕೆಲ ಹೊತ್ತು ಆದೇಶವನ್ನು ಕಾಯ್ದಿರಿಸಿತ್ತು. ಬಳಿಕ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿ ಆದೇಶಿಸಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...