ಸುಮಾರು 17 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು 22 ವರ್ಷದ ಆರೋಪಿ ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಯ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಂಗಳವಾರ (ಮಾ.3) ಬೆಳಗಿನ ಜಾವ 1 ಗಂಟೆ ಸುಮಾರಿಗೆ ಆರೋಪಿ ಸಂತ್ರಸ್ತೆಯ ಮನೆಯ ಹಿಂಬಾಗಿಲಿನಿಂದ ಪ್ರವೇಶಿಸಿ ತನ್ನ ಸಹೋದರನ ಪಕ್ಕದಲ್ಲಿ ಮಲಗಿದ್ದ ಬಾಲಕಿಯ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಬಾಲಕಿಯ ಸಹೋದರನ ಮೇಲೂ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾನೆ. ಹೊರಗಡೆ ಮಲಗಿದ್ದ ತಾಯಿ ಆರೋಪಿಯನ್ನು ತಡೆದಾಗ ಆಕೆಗೂ ತಾಯಿಗೂ ಗುಂಡು ಹಾರಿಸಿ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಈ ಬಗ್ಗೆ ಬಸ್ತಿ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ (ಎಎಸ್‌ಪಿ) ಶ್ಯಾಮಕಾಂತ್ ಪ್ರತಿಕ್ರಿಯೆ ನೀಡಿದ್ದು, “ಕುಟುಂಬವು ಆರೋಪಿಯನ್ನು ಗುರುತಿಸಿದೆ. ಆತನನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ” ಎಂದು ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರೋಪಿ ಬಾಲಕಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದ. ತನ್ನ ದುಷ್ಕತ್ಯದ ಫೋಟೋ, ವಿಡಿಯೋಗಳನ್ನು ತೆಗೆದಿಟ್ಟು, ಅದನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೆ, ಕಳೆದ ಡಿಸೆಂಬರ್ 16ರಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಎಂದು ಎಎಸ್‌ಪಿ ಶ್ಯಾಮಕಾಂತ್ ತಿಳಿಸಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಾಗ ಸಂತ್ರಸ್ತೆಯ ಕುಟುಂಬಸ್ಥರು ದೂರು ದಾಖಲಿಸಿದ್ದರು. ಪೊಲೀಸರು ಡಿಸೆಂಬರ್ 17ರಂದು ಕಲ್ವಾರಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ಅಂದಿನಿಂದ ಆರೋಪಿ ಪರಾರಿಯಾಗಿದ್ದ ಎಂದು ಹೇಳಿದ್ದಾರೆ.
ಬಾಲಕಿಯ ತಂದೆ ಪಂಜಾಬ್‌ನಲ್ಲಿ ಕೆಲಸ ಮಾಡುತ್ತಿದ್ದು, ಆಕೆ ತನ್ನ ತಾಯಿ ಮತ್ತು ಸಹೋದರನೊಂದಿಗೆ ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಯುಪಿ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.


