ಅಸ್ಸಾಂನ ಬಿಜೆಪಿ ಸರ್ಕಾರದಲ್ಲಿ ಸಚಿವೆಯಾಗಿದ್ದ ನಂದಿತಾ ಗರ್ಲೋಸಾ ಅವರು ಭಾನುವಾರ (ಮಾ.22) ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ವಿಧಾನಸಭೆ ಚುನಾವಣೆಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ನಂದಿತಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ನಂದಿತಾ ಅವರು ಪ್ರತಿನಿಧಿಸುತ್ತಿದ್ದ ದಿಮಾ ಹಸಾವೊ ಜಿಲ್ಲೆಯ ಹಾಫ್ಲಾಂಗ್ ಕ್ಷೇತ್ರದ ಟಿಕೆಟ್ ಈ ಬಾರಿ ರೂಪಾಲಿ ಲಾಂಗ್ಥಾಸಾ ಅವರಿಗೆ ನೀಡಲಾಗಿದೆ.
ಕಾಂಗ್ರೆಸ್ ಹಾಫ್ಲಾಂಗ್ ಕ್ಷೇತ್ರದ ಟಿಕೆಟ್ ಅನ್ನು ನಂದಿತಾ ಅವರಿಗೆ ನೀಡಲಿದೆ ಎಂದು ವರದಿಯಾಗಿದೆ. ಈ ಮೊದಲು ಕಾಂಗ್ರೆಸ್ ಈ ಕ್ಷೇತ್ರಕ್ಕೆ ನಿರ್ಮಲ್ ಲಾಂಗ್ಥಾಸಾ ಅವರ ಹೆಸರನ್ನು ಘೋಷಿಸಿತ್ತು. ಈಗ ಅವರ ಬದಲಾಗಿ ಬಿಜೆಪಿಯಿಂದ ಬಂದಿರುವ ನಂದಿತಾ ಅವರಿಗೆ ಮಣೆ ಹಾಕಿದೆ.
ನಂದಿತಾ ಅವರು ಹಿಮಂತ ಬಿಸ್ವಾ ಶರ್ಮಾ ಅವರ ಸಂಪುಟದಲ್ಲಿ ಕ್ರೀಡೆ, ಯುವ ಕಲ್ಯಾಣ, ಗಣಿ ಮತ್ತು ಖನಿಜ ಇಲಾಖೆಗಳ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಾರ್ಚ್ 22ರಂದು ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದಾಗಿ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಅಸ್ಸಾಂನ ಎಲ್ಲಾ 126 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9, 2026 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.


