ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ‘ದೂರಾಲೋಚನೆ’ಯಲ್ಲ, ಬದಲಿಗೆ ಅದು ಸಿಎಎ-ಎನ್‌ಅರ್‌ಸಿಯನ್ನು ಜಾರಿಗೊಳಿಸುವ ‘ದುರಾಲೋಚನೆ’ಯನ್ನು ತನ್ನ ಒಡಲಲ್ಲಿಟ್ಟಿಕೊಂಡಿದೆ. ಮೊಕದ್ದಮೆಗಳ ವಿಚಾರಣೆಯು ಸುಪ್ರೀಂ ಕೋರ್ಟಿನಲ್ಲಿರುವಾಗ ಕರ್ನಾಟಕದಲ್ಲಿ ತರಾರುರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸಬಾರದು ಎಂದು ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯಾತೀತ ಪಕ್ಷಗಳ ಮುಖಂಡರು ಆಗ್ರಹಿಸಿದರು.
ಸೋಮವಾರ (ಮಾ.23) ಬೆಂಗಳೂರಿನ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಬಿ.ಟಿ ಲಲಿತಾ ನಾಯಕ್, ಎನ್ ವೆಂಕಟೇಶ್, ತಾರಾ ರಾವ್, ಕೆ.ಎಲ್ ಅಶೋಕ್, ಎಚ್.ಆರ್ ಬಸವರಾಜಪ್ಪ, ನೂರ್ ಶ್ರೀಧರ್, ಯೂಸುಫ್ ಕನ್ನಿ,ಕೆ.ವಿ ಭಟ್, ವಿನಯ್ ಶ್ರೀನಿವಾಸ್, ಹೈದರ್ ಬೇಗ್, ರಿಯಾಝ್ ಅಹ್ಮದ್, ನಾಗೇಶ್ವ ಅರಳಕುಪ್ಪೆ, ಕಾತ್ಯಾಯಿನಿ, ಸ್ವಾತಿ ಸುಂದರೇಶ್, ಮರಿಯಪ್ಪ, ಅಮ್ಜದ್ ಪಾಷಾ, ರಮೇಶ್ ಬೆಲ್ಲಮಕೊಂಡ ಸೇರಿದಂತೆ ಹಲವರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಎಸ್‌ಐಆರ್ ಸಂವಿಧಾನದಲ್ಲಿ ಇಲ್ಲದ, ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸುವ, ತರಾತುರಿಯಲ್ಲಿ ನಡೆಸುವ, ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸುವ, ಮಹಿಳೆಯರು, ಅಲೆಮಾರಿಗಳು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲ ಜಾತಿಯ ಬಡವರು ದೊಡ್ಡ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಕಾರಣವಾಗುತ್ತಿರುವ ಮತಪಟ್ಟಿಯ ಪರಿಷ್ಕರಣಾ ಪದ್ಧತಿ. ದಾಖಲೆಗಳ ಕಾರಣ ನೀಡಿ ಅರ್ಹ ಪ್ರಜೆಗಳ ಮತದಾನದ ಹಕ್ಕನ್ನು ಜೀವಂತ ಕಾಲದಲ್ಲಿಯೇ ನಿರಾಕರಿಸುವುದು ಪ್ರಜಾತಂತ್ರ ವ್ಯವಸ್ಥೆಯ ದುರಂತ ಅಂತ್ಯವಾಗಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಐಆರ್ ನಡೆದ ರಾಜ್ಯಗಳಲ್ಲಿ 20 ಲಕ್ಷದಿಂದ ಆರಂಭಿಸಿ 3 ಕೋಟಿಯ ತನಕ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕರ್ನಾಟಕ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ರಾಜ್ಯವಾಗಿದೆ. ಶೇ.2ರಷ್ಟು ಮತಗಳು ರಾಜ್ಯದ ಚುನಾವಣಾ ಭವಿಷ್ಯವನ್ನೇ ಏರುಪೇರು ಮಾಡಲಿವೆ. ಈ ಕಾರಣದಿಂದಾಗಿ ನಾವು ಅಸಂವಿಧಾನಿಕವಾದ ಮತ್ತು ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರದಬ್ಬುವ ಮತಪಟ್ಟಿಯನ್ನು ಒಪ್ಪುವುದಿಲ್ಲ ಮತ್ತು ಮನಬಂದಂತೆ ವಕ್ರೀಕರಿಸುವುದನ್ನು ಸಹಿಸುವುದಿಲ್ಲ ಎಂದು ಅವರು ತಿಳಿಸಿದರು.
ಎಸ್‌ಐಆರ್ ಪ್ರಕ್ರಿಯೆ ವ್ಯವಧಾನದ ಜೊತೆ ‘ಹೊರ ತಳ್ಳುವುದಲ್ಲ’, ‘ಒಳ ಸೇರಿಸಿಕೊಳ್ಳಬೇಕು’ ಎಂಬ ಧೋರಣೆಯ ಜೊತೆ ನಡೆಯಬೇಕು. ಚುನಾವಣಾ ಆಯೋಗದ ಮ್ಯಾನ್ಯುಯಲ್‌ನಲ್ಲಿ ಇರುವಂತೆ ಕರಡು ಪಟ್ಟಿಯನ್ನು ಗ್ರಾಮ ಮತ್ತು ವಾರ್ಡ್ ಸಭೆಗಳಲ್ಲಿ ಬಹಿರಂಗವಾಗಿ ಅಂಟಿಸಿ, ಓದಿ, ಮುಕ್ತವಾಗಿ ತಿದ್ದುಪಡಿಗಳನ್ನು, ತಕರಾರುಗಳನ್ನು ಸ್ವೀಕರಿಸಿ, ಅವೆಲ್ಲವನ್ನೂ ಪರಿಶೀಲಿಸಿದ ನಂತರವೇ ಅಂತಿಮಗೊಳಿಸಬೇಕು. ಗ್ರಾಮ ಸಭೆಯಲ್ಲಿ ಮತ ಪಟ್ಟಿಯ ಪರಿಶೀಲನೆ ಕಡ್ಡಾಯವಾಗಬೇಕು.
ಸುಪ್ರೀಂಕೋರ್ಟ್‌ನ ಆದೇಶದಂತೆ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಪರಿಗಣಿಸಬೇಕು. ಆಧಾರ್ ಕಾರ್ಡ್ ಇದ್ದವರನ್ನು ಯಾವುದೇ ಕಾರಣದಿಂದಲೂ ಮತಪಟ್ಟಿಯಿಂದ ಹೊರಗಿಡಬಾರದು ಭಾರತೀಯರಲ್ಲದ ಅನುಮಾನಗಳು ಬಂದಲ್ಲಿ ಅದನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪ್ರಕ್ರಿಯೆ ನಡೆದು ದೃಢೀಕರಣಗೊಂಡ ನಂತರ ಅಷ್ಟೇ ಮತ ಪಟ್ಟಿಯಿಂದ ತೆಗೆಯಬೇಕು. ದಾಖಲೆಗಳಿಲ್ಲದಿದ್ದಲ್ಲಿ ಸಿದ್ಧಪಡಿಸಿಕೊಂಡು ಹಾಗೂ ಅಪೀಲು ಸಲ್ಲಿಸಲು ಆರು ತಿಂಗಳ ಸಮಯ ನೀಡಬೇಕು ಎಂದರು.
ರಾಜ್ಯದ ವಯಸ್ಕರ ಜನ ಸಂಖ್ಯೆಗಿಂತ ಹಾಗೂ ಸ್ಥಳೀಯ ಚುನಾವಣೆಗಳಿಗಾಗಿ ರಾಜ್ಯ ಚುನಾವಣಾ ಆಯೋಗ ಸಿದ್ಧಪಡಿಸುವ ಮತದಾರರ ಪಟ್ಟಿಯ ಸಂಖ್ಯೆಗಿಂತ ಶೇ.1ಕ್ಕಿಂತ ಹೆಚ್ಚು ವ್ಯತ್ಯಾಸವಿರಬಾರದು. ಲಕ್ಷಾಂತರ ಸಂಖ್ಯೆಯಲ್ಲಿ ಮತದಾರರನ್ನು ಹೊರದಬ್ಬಿ ಚುನಾವಣೆ ನಡೆಸಲು ಅವಕಾಶ ನೀಡುವುದಿಲ್ಲ. ನಮ್ಮ ಚುನಾವಣೆಗಳನ್ನು ನಾವೇ ನಡೆಸಿಕೊಳ್ಳುತ್ತೇವೆ, ಕೇಂದ್ರದ ಮಧ್ಯ ಪ್ರವೇಶ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜನರು ತೀವ್ರತರನಾದ ಗೊಂದಲ, ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರ ಜನರ ನೆರವಿಗೆ ಧಾವಿಸಬೇಕು. ಇದಕ್ಕಾಗಿ ಮೂರು ರೀತಿಯ ಜನಸ್ನೇಹಿ ಕ್ರಮಗಳಿಗೆ ಮುಂದಾಗಬೇಕು. ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಸರ್ಕಾರ ಮಾಡಿದಂತೆ ಎಲ್ಲ ಗ್ರಾಮ ಪಂಚಾಯತ್ ಮತ್ತು ವಾರ್ಡುಗಳಲ್ಲಿ ಮತದಾರರ ನೆರವು ಕೇಂದ್ರಗಳನ್ನು ಸ್ಥಾಪಿಸಬೇಕು. ಕೇರಳದಲ್ಲಿ ಮಾಡಿದಂತೆ ದಾಖಲೆಗಳಿಲ್ಲದ ಜನರಿಗೆ ಸತಾಯಿಸದೆ ಸುಲಭವಾಗಿ, ತ್ವರಿತವಾಗಿ ವಾಸದ ಹಾಗೂ ಜಾತಿಯ ಪ್ರಮಾಣ ಪತ್ರಗಳನ್ನು ಒದಗಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಸುತ್ತೋಲೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ತಮಿಳುನಾಡಿನಲ್ಲಿ ಮಾಡಿದಂತೆ ಬಿಎಲ್‌ಒಗಳಿಗೆ ಯುದ್ದೋಪಾದಿಯಲ್ಲಿ ಪರಿಣಾಮಕಾರಿಯಾದ ತರಬೇತಿ ನೀಡಿ, ಅವರು ಪ್ರತಿ ಮನೆಗೂ ತಲುಪಿ ಒಬ್ಬರೂ ಹೊರಗುಳಿಯದಂತೆ ಎಚ್ಚರಿಕೆವಹಿಸುತ್ತಾ ನೊಂದಾವಣಿ ಪ್ರಕ್ರಿಯೆ ನಡೆಸುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಸ್ಥಳೀಯ ಚುನಾವಣೆಗಳು ಬರುತ್ತಿರುವುದರಿಂದ ಮತ್ತು ಜನರಲ್ಲಿ ಆತಂಕ ಇರುವುದರಿಂದ ಮಾಸ್ಟರ್ ರೋಲಿನ ಸುಧಾರಣೆಯನ್ನು ಪರಿಣಾಮಕಾರಿಯಾಗಿ ಮಾಡಿಸಲು ವಿಶೇಷ ಗಮನ ನೀಡಬೇಕು. ಚುನಾವಣಾ ಆಯೋಗದ ಮ್ಯಾನ್ಯುಯಲ್‌ನಲ್ಲಿ ಇರುವಂತೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮುನ್ನ ಗ್ರಾಮ ಸಭೆಗಳನ್ನು ಹಾಗೂ ವಾರ್ಡ್ ಸಭೆಗಳನ್ನು ಕರೆದು ತಿದ್ದುಪಡಿಗಳನ್ನು ಸ್ವೀಕರಿಸಿ, ಸಾರ್ವಜನಿಕವಾಗಿ ಪರಿಶೀಲಿಸಿ, ಅಗತ್ಯ ತಿದ್ದುಪಡಿ ಮಾಡಿಯೇ ಅಂತಿಮಗೊಳಿಸಬೇಕು.
ಈ ಗ್ರಾಮ/ ವಾರ್ಡ್ ಸಭೆಗಳನ್ನು ಸಿಎಜಿ ರೂಪಿಸಿರುವ ಸಾಮಾಜಿಕ ಪರಿಶೀಲನೆಯ ಮಾನದಂಡಗಳನ್ನು ಅನ್ವಯಿಸಿ ನಡೆಸಬೇಕು. ಆ ಮೂಲಕ ರಾಜ್ಯ ಚುನಾವಣಾ ಆಯೋಗದ ಪಟ್ಟಿಗೆ ಹೆಚ್ಚಿನ ಖಚಿತತೆ ಹಾಗೂ ಮಾನ್ಯತೆ ಬರುವಂತೆ ನೋಡಿಕೊಳ್ಳಬೇಕು. ಸಾರಾಂಶದಲ್ಲಿ ರಾಜ್ಯ ತನ್ನದೇ ಆದ ಖಚಿತ ಮತ ಮಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು.
ಸಂವಿಧಾನದ ಮೌಲ್ಯಗಳಿಗಿಂತ, ಪ್ರಜಾತಂತ್ರದ ಬುನಾದಿಗಿಂತ ಮೇಲಿನದು ಯಾವುದೂ ಇಲ್ಲ. ಚುನಾವಣಾ ಆಯೋಗ ಅಸಂವಿಧಾನಿಕವಾಗಿ, ಅಪ್ರಜಾತಾಂತ್ರಿಕವಾಗಿ ನಡೆದುಕೊಂಡರೆ ಕರ್ನಾಟಕ ಅದನ್ನು ಸಹಿಸುವುದಿಲ್ಲ ಮತ್ತು ಬಲವಂತವಾಗಿ ನಮ್ಮ ಮೇಲೆ ಹೇರಲು ಬಿಡುವುದಿಲ್ಲ. ನಮ್ಮ ಹಕ್ಕೊತ್ತಾಯಗಳನ್ನು ಕೇಂದ್ರ ಚುನಾವಣಾ ಅಯೋಗ, ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಸರಕಾರಕ್ಕೆ ಇಂದೇ ಮನವಿ, ಎಚ್ಚರಿಕೆಯ ಆಗ್ರಹಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.


