ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಆಯೋಜಿಸಿರುವ ಅಮೆರಿಕ-ಇರಾನ್ ನಡುವಿನ ಮಹತ್ವದ ಶಾಂತಿ ಮಾತುಕತೆ ವಿಫಲವಾದಂತೆ ಗೋಚರಿಸುತ್ತಿದೆ. ಅಮೆರಿಕದ ಪರವಾಗಿ ಮಾತುಕತೆಗೆ ಆಗಮಿಸಿದ್ದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ನಿಯೋಗ, ಇರಾನ್ ಜೊತೆ ಯಾವುದೇ ಒಪ್ಪಂದ ಸಾಧ್ಯವಾಗದೆ ವಾಪಸ್ ತೆರಳಿದೆ ಎಂದು ವರದಿಯಾಗಿದೆ.
“ಪಾಕಿಸ್ತಾನದಲ್ಲಿ 21 ಗಂಟೆಗಳ ಕಾಲ ನಡೆದ ಮಾತುಕತೆಗಳ ನಂತರವೂ, ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಅಮೆರಿಕದ ನಿಯೋಗ ವಿಫಲವಾಗಿದೆ. ನಾವು ಯುಎಸ್‌ಗೆ ವಾಪಸ್ ಹೋಗುತ್ತಿದ್ದೇವೆ” ಎಂದು ಸ್ವತಃ ಜೆಡಿ ವ್ಯಾನ್ಸ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಸಣ್ಣ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ವ್ಯಾನ್ಸ್, “ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪಿಕೊಳ್ಳದಿರಲು ನಿರ್ಧರಿಸಿದೆ” ಎಂದು ತಿಳಿಸಿದ್ದಾರೆ.
“ಇದು ಅಮೆರಿಕಕ್ಕೆ ಬ್ಯಾಡ್ ನ್ಯೂಸ್ (ಕೆಟ್ಟ ಸುದ್ದಿ), ಅದಕ್ಕಿಂತಲೂ ಹೆಚ್ಚಾಗಿ ಇರಾನ್‌ಗೆ ಬ್ಯಾಡ್ ನ್ಯೂಸ್. ನಾವು ನಮ್ಮ ಕೆಂಪು ರೇಖೆ (ರೆಡ್ ಲೈನ್) ಏನು, ನಾವು ಏನನ್ನು ಒಪ್ಪಿಕೊಳ್ಳುತ್ತೇವೆ, ಏನನ್ನು ಒಪ್ಪಿಕೊಳ್ಳುವುದಿಲ್ಲ ಎಂಬುವುದನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ” ಎಂದಿದ್ದಾರೆ.
ಅಲ್-ಜಝೀರಾ ವರದಿಯ ಪ್ರಕಾರ, “ಪರಮಾಣು ವಿಷಯಕ್ಕೆ ಸಂಬಂಧಿಸಿದಂತೆ ಇರಾನ್‌ನಿಂದ ಇನ್ನೂ ಯಾವುದೇ ಬದ್ಧತೆ ಕಂಡುಬಂದಿಲ್ಲ. ನಾವು ನಮ್ಮ ಕಡೆಯಿಂದ ಅತ್ಯುತ್ತಮ ಮತ್ತು ಅಂತಿಮ ಪ್ರಸ್ತಾಪ ಮುಂದಿಟ್ಟಿದ್ದೇವೆ” ಎಂದು ವ್ಯಾನ್ಸ್ ಹೇಳಿದ್ದಾರೆ.
ಈ ನಡುವೆ, “ಐತಿಹಾಸಿಕ ಶಾಂತಿ ಮಾತುಕತೆ ಎರಡನೇ ದಿನವೂ ಮುಂದುವರಿಯಲಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಈ ಚರ್ಚೆಯಲ್ಲಿ ಹಾರ್ಮುಝ್ ಜಲಸಂಧಿಯ ವಿಷಯವು ಪ್ರಮುಖ ಅಡೆತಡೆಯಾಗಿ ಅಥವಾ ತೀವ್ರ ಭಿನ್ನಾಭಿಪ್ರಾಯದ ವಿಷಯವಾಗಿ ಪರಿಣಮಿಸಿದೆ” ಎಂದಿವೆ.
ಮಾತುಕತೆಗಳು ಹೇಗೆ ಕೊನೆಗೊಂಡರೂ ಅಮೆರಿಕ ಇರಾನ್ ವಿರುದ್ಧದ ಯುದ್ಧವನ್ನು ಗೆದ್ದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ತನ್ನ ಎರಡು ಹಡಗುಗಳು ಹಾರ್ಮುಝ್ ಜಲಸಂಧಿಯ ಮೂಲಕ ಸಾಗಿವೆ ಎಂಬ ಅಮೆರಿಕದ ಹೇಳಿಕೆಯನ್ನು ಇರಾನ್ ನಿರಾಕರಿಸಿದೆ ಮತ್ತು ಮಿಲಿಟರಿ ಹಡಗುಗಳು ಜಲಮಾರ್ಗದ ಮೂಲಕ ಹಾದುಹೋಗಲು ಮಾಡುವ ಯಾವುದೇ ಪ್ರಯತ್ನಕ್ಕೆ ‘ಬಲವಾದ ಪ್ರತಿಕ್ರಿಯೆ’ ನೀಡಲಾಗುವುದು ಎಂದು ಎಚ್ಚರಿಸಿದೆ.
ಇವೆಲ್ಲದರ ನಡುವೆ, ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರೆಸಿದೆ, ಟೆಫಾಹ್ತಾ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್-ಜಝೀರಾ ವರದಿ ಮಾಡಿದೆ.


