ಮಾರ್ಚ್ 2ರಿಂದ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 2,020 ಜನರು ಸಾವನ್ನಪ್ಪಿದ್ದಾರೆ ಮತ್ತು 6,436 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಾವನ್ನಪ್ಪಿದವರಲ್ಲಿ 165 ಮಕ್ಕಳು, 248 ಮಹಿಳೆಯರು ಮತ್ತು 85 ವೈದ್ಯರು ಸೇರಿದ್ದಾರೆ. ಶನಿವಾರ (ಏ.11) ಇಸ್ರೇಲಿ ಪಡೆಗಳು 97 ಜನರನ್ನು ಕೊಂದು 133 ಜನರನ್ನು ಗಾಯಗೊಳಿಸಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಭಾನುವಾರ ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಅಲ್-ಜಝೀರಾ ವರದಿ ಮಾಡಿರುವ ಪ್ರಕಾರ, ಲೆಬನಾನ್‌ನ ದಕ್ಷಿಣ ಪಟ್ಟಣವಾದ ಕಾನಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳಾಂತರಿಸಲು ಮತ್ತು ಹತ್ತಿರದ ಟೈರ್ ನಗರದ ಆಸ್ಪತ್ರೆಗಳಿಗೆ ಸಾಗಿಸಲು ನಾಗರಿಕ ರಕ್ಷಣಾ ತಂಡಗಳು ಕೆಲಸ ಮಾಡುತ್ತಿವೆ ಎಂದು ಸುದ್ದಿ ಸಂಸ್ಥೆ ಎನ್ಎನ್‌ಎ ತಿಳಿಸಿದೆ.
ಇಸ್ರೇಲ್ ಟೈರ್ ಜಿಲ್ಲೆಯಾದ್ಯಂತ ಪ್ರತ್ಯೇಕ ದಾಳಿಗಳನ್ನು ನಡೆಸಿದೆ. ಮರಾಕಾದಲ್ಲಿ ನಡೆಸಿದ ದಾಳಿಯಿಂದ ಕನಿಷ್ಠ ಮೂರು ಜನರು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ.
1996 ಮತ್ತು 2006 ಸೇರಿದಂತೆ ಕಾನಾ ಪಟ್ಟಣವು ಈ ಹಿಂದೆ ಹಲವು ಬಾರಿ ಇಸ್ರೇಲಿ ಹತ್ಯಾಕಾಂಡಗಳಿಗೆ ಸಾಕ್ಷಿಯಾಗಿತ್ತು.


