ಸಿಲಿಕಾನ್ ಸಿಟಿಯ ಬ್ರೂಕ್ಫೀಲ್ಡ್ನಲ್ಲಿರುವ ಪ್ರಮುಖ ಐಟಿ ಸಂಸ್ಥೆ ‘ಕ್ಯಾಪ್ಜೆಮಿನಿ’ ಕ್ಯಾಂಪಸ್ನ ಡೇ-ಕೇರ್ ಸೆಂಟರ್ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್ರೂಮ್ ಹಾಗೂ ವಾಷಿಂಗ್ ಮೆಷಿನ್ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ವಿಜಯಲಕ್ಷ್ಮಿ ಮತ್ತು ಮಂಜುಳಾ ಎಂಬ ಇಬ್ಬರು ಮಹಿಳಾ ಸಿಬ್ಬಂದಿಯನ್ನು ಪೊಲೀಸರು ಈಗ ಬಂಧಿಸಿದ್ದಾರೆ.
ಬಂಧಿತ ಇಬ್ಬರ ವಿರುದ್ಧವೂ ಬಲವಾದ ಸಾಕ್ಷ್ಯಾಧಾರಗಳು ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದು, ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳ ಬಂಧನವೂ ಶೀಘ್ರದಲ್ಲೇ ನಡೆಯಲಿದೆ ಎಂದಿದ್ದಾರೆ. ಇಷ್ಟೇ ಅಲ್ಲದೆ, ಈ ಇಡೀ ಪ್ರಕರಣದಲ್ಲಿ ಕ್ಯಾಪ್ಜೆಮಿನಿ ಸಂಸ್ಥೆ ಹಾಗೂ ಈ ಡೇ-ಕೇರ್ ನಡೆಸುತ್ತಿದ್ದ ‘ಲಿಟಲ್ ಸ್ಕಾಲರ್’ (Little Scholar) ಎಂಬ ಏಜೆನ್ಸಿಯ ಪಾತ್ರ ಮತ್ತು ಜವಾಬ್ದಾರಿಗಳ ಕುರಿತೂ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ವಿಡಿಯೋದಲ್ಲಿದೆ ಮೈ ಜುಂ ಎನಿಸುವ ದೃಶ್ಯ!
ಈ ವಾರ ದೂರುದಾರರು ಹಂಚಿಕೊಂಡಿರುವ ವಿಡಿಯೋಗಳು ಎಂಥವರನ್ನೂ ಕಣ್ಣೀರು ಹಾಕಿಸುವಂತಿವೆ. ಕೇವಲ ಎರಡು ವರ್ಷದ ಪುಟ್ಟ ಕಂದಮ್ಮಗಳನ್ನು ಫ್ರಂಟ್-ಲೋಡಿಂಗ್ (ಮುಂಭಾಗದಿಂದ ಮುಚ್ಚುವ) ವಾಷಿಂಗ್ ಮೆಷಿನ್ನ ಡ್ರಮ್ ಒಳಗೆ ಕೂರಿಸಲಾಗಿದೆ. ಅಷ್ಟೇ ಅಲ್ಲದೆ, ಅಮಾನವೀಯ ಕೇರ್ಟೇಕರ್ಗಳು ಆ ಮಕ್ಕಳ ಮೇಲೆ ಜೆಟ್ ಸ್ಪ್ರೇಯರ್ನಿಂದ ನೀರು ಹೊಡೆಯುತ್ತಿರುವುದು ವಿಡಿಯೋದಲ್ಲಿದೆ. ಮತ್ತೊಂದು ವಿಡಿಯೋದಲ್ಲಿ ಮಕ್ಕಳನ್ನು ಬಾತ್ರೂಮ್ ಒಳಗೆ ಹಾಕಿ ಲಾಕ್ ಮಾಡಿರುವುದು ಸ್ಪಷ್ಟವಾಗಿ ಕಂಡಿದೆ.
ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ಪ್ರತ್ಯೇಕ ದೂರು ಸಲ್ಲಿಕೆಯಾಗಿತ್ತು. ಸದ್ಯ ಐವರು ಕೇರ್ಟೇಕರ್ಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಳಬಾರದು ಅಂತ ವಾಷಿಂಗ್ ಮೆಷಿನ್ಗೆ ಹಾಕ್ತಿದ್ರು
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈ ಜಾಗತಿಕ ಐಟಿ ಸಂಸ್ಥೆಯ ಉದ್ಯೋಗಿಗಳು ತಮ್ಮ ಮಕ್ಕಳನ್ನು ನಂಬಿ ಇಲ್ಲಿ ಬಿಟ್ಟು ಹೋಗುತ್ತಿದ್ದರು. ಆದರೆ ಇಲ್ಲಿನ ಸಿಬ್ಬಂದಿ ವ್ಯವಸ್ಥಿತವಾಗಿ ಕಂದಮ್ಮಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದರು. ಈ ಕೇಂದ್ರದಲ್ಲಿ ಸುಮಾರು 50 ರಿಂದ 60 ಮಕ್ಕಳು ನೋಂದಾಯಿಸಿಕೊಂಡಿದ್ದು, ಪ್ರತಿದಿನ 15 ರಿಂದ 20 ಮಕ್ಕಳು ಬರುತ್ತಿದ್ದರು.
“ಇದು ನಿನ್ನೆ ಮೊನ್ನೆಯ ಕಥೆಯಲ್ಲ, ಬಹಳ ದಿನಗಳಿಂದಲೂ ನಡೆಯುತ್ತಿತ್ತು. ಈ ಹಿಂದೆ ಇಲ್ಲಿನ ಮೇಲ್ವಿಚಾರಕರಿಗೆ (Supervisor) ಯಾರೋ ಒಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಘೋರ ಕೃತ್ಯವನ್ನು ಮೊದಲು ಜಗತ್ತಿಗೆ ತಿಳಿಸಲು ಯತ್ನಿಸಿದ ‘ವಿಸ್ಲ್ ಬ್ಲೋವರ್’ (ಮಾಹಿತಿದಾರ) ಅನ್ನು ಕೆಲಸದಿಂದಲೇ ವಜಾ ಮಾಡಲಾಗಿತ್ತು” ಎಂದು ಪ್ರೊಬೇಷನ್ ಅಧಿಕಾರಿ ತಿಲಕೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
“ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾದವರೇ ಈ ರೀತಿ ಮಾಡಿದ್ದಾರೆ. ಮಕ್ಕಳು ಅತ್ತರೆ ಅಥವಾ ಗಲಾಟೆ ಮಾಡಿದರೆ, ಅವರ ಬಾಯಿ ಮುಚ್ಚಿಸಲು ಬಾತ್ರೂಮ್ನಲ್ಲಿ ಕೂಡಿಹಾಕುತ್ತಿದ್ದರು, ಇಲ್ಲವೇ ವಾಷಿಂಗ್ ಮೆಷಿನ್ ಒಳಗೆ ಹಾಕಿ ಲಾಕ್ ಮಾಡುತ್ತಿದ್ದರು ಎಂಬ ದೂರು ನಮಗೆ ಬಂದಿದೆ” ಎಂದು ಅವರು ವಿವರಿಸಿದ್ದಾರೆ.
ಸಂಸ್ಥೆ ಹೇಳಿದ್ದೇನು?
ಈ ವಿವಾದದ ಬೆನ್ನಲ್ಲೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕ್ಯಾಪ್ಜೆಮಿನಿ ಸಂಸ್ಥೆ, “ನಮ್ಮ ಉದ್ಯೋಗಿಗಳು ಮತ್ತು ಅವರ ಕುಟುಂಬದ ಆರೋಗ್ಯ, ಸುರಕ್ಷತೆ ಹಾಗೂ ಯೋಗಕ್ಷೇಮಕ್ಕೆ ನಾವು ಮೊದಲ ಆದ್ಯತೆ ನೀಡುತ್ತೇವೆ. ಈ ಘಟನೆಗೆ ಸಂಬಂಧಿಸಿದಂತೆ ನಾವು ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಮತ್ತು ಸತ್ಯಾಸತ್ಯತೆಯನ್ನು ಹೊರತರಲು ನೆರವಾಗುತ್ತಿದ್ದೇವೆ” ಎಂದು ತಿಳಿಸಿದೆ. ಸದ್ಯಕ್ಕೆ ಕ್ಯಾಂಪಸ್ನಲ್ಲಿರುವ ಈ ಡೇ-ಕೇರ್ ಸೌಲಭ್ಯವನ್ನು ಕಂಪನಿ ತಾತ್ಕಾಲಿಕವಾಗಿ ಮುಚ್ಚಿದೆ.


