ತಮ್ಮ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ನಿರ್ಧರಿಸಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್, “ಮತಗಳಿಗಾಗಿ ವಿರೋಧ ಪಕ್ಷವು ಹೊಸ ಮುಸ್ಲಿಂ ಲೀಗ್ ಆಗಿದೆ” ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ನವೀನ್, “ಭಾರತ ಮಾತೆಯ ಪವಿತ್ರ ಆಹ್ವಾನಕ್ಕೆ ಮಾಡಿದ ಈ ಅವಮಾನವು, ಈ ಗೀತೆಯನ್ನೇ ತಮ್ಮ ಪ್ರಜ್ಞೆಯಲ್ಲಿಟ್ಟುಕೊಂಡು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಾವಿರಾರು ಹುತಾತ್ಮರಿಗೆ ಎಸಗಿದ ಅಪಮಾನವಾಗಿದೆ” ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ 1937ರ ನಿರ್ಣಯಕ್ಕೆ ಬದ್ಧವಾಗಿರಲು ಬುಧವಾರ (ಆಗಸ್ಟ್ 19) ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ನಿರ್ಧರಿಸಿದ ನಂತರ ಬಿಜೆಪಿ ಅಧ್ಯಕ್ಷರ ಈ ಪ್ರತಿಕ್ರಿಯೆ ಬಂದಿದೆ. “ಇನ್ಮುಂದೆ ಎಲ್ಲಾ ಪಕ್ಷದ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು” ಎಂದು ಕಾಂಗ್ರೆಸ್ ಹೇಳಿತ್ತು.
“ಕಾಂಗ್ರೆಸ್ ಈಗ (ವಂದೇ ಮಾತರಂಗೆ ಮಾಡಿದ) ತನ್ನ ಅವಮಾನವನ್ನು ನಿರ್ಣಯದ ರೂಪದಲ್ಲಿ ಅಧಿಕೃತಗೊಳಿಸಿದೆ. ಕಾಂಗ್ರೆಸ್ ವೇದಿಕೆಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಅದರ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಕಾಂಗ್ರೆಸ್ ಇಂದು ಹೊಸ ಮುಸ್ಲಿಂ ಲೀಗ್ ಆಗಿದೆ” ಎಂದು ಅವರು ಆರೋಪಿಸಿದ್ದಾರೆ.
“‘ಭಾರತ ಮಾತೆ’ಯ ಪವಿತ್ರ ಗೀತೆಗೆ ಮಾಡಿದ ಈ ಅವಮಾನವು, ಈ ಗೀತೆಯನ್ನೇ ತಮ್ಮ ಪ್ರಜ್ಞೆಯಲ್ಲಿಟ್ಟುಕೊಂಡು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಾವಿರಾರು ಹುತಾತ್ಮರಿಗೆ ಎಸಗಿದ ಅಪಮಾನವಾಗಿದೆ” ಎಂದು ಅವರು ಪುನರುಚ್ಚರಿಸಿದ್ದಾರೆ.
ಆಗಸ್ಟ್ 15 ರಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡುವ ಕುರಿತು ಉಂಟಾದ ವಿವಾದವನ್ನು ಪರೋಕ್ಷವಾಗಿ ಉಲ್ಲೇಖಿಸಿದ ನವೀನ್, ರಾಷ್ಟ್ರೀಯ ಗೀತೆಗೆ ಆದ ಇದೇ ರೀತಿಯ ಅವಮಾನವು ಕೆಲವು ದಿನಗಳ ಹಿಂದೆ “ವ್ಯಕ್ತಿಯೊಬ್ಬರ ನಡವಳಿಕೆಯಲ್ಲಿ” ವ್ಯಕ್ತವಾಗಿತ್ತು, ಆದರೂ ಕಾಂಗ್ರೆಸ್ ಅದನ್ನು ಕಾಕತಾಳೀಯ ಎಂದು ತಳ್ಳಿಹಾಕಿತ್ತು ಎಂದಿದ್ದಾರೆ.
“ಇಂದು ಅದೇ ಅವಮಾನವು ಕಾಂಗ್ರೆಸ್‌ನ ನೀತಿಯಾಗಿದೆ, ಇದು ಕೇವಲ ರಾಜಕೀಯ ಸಮರ್ಥನೆಯಲ್ಲ, ಬದಲಿಗೆ ಆ ಮತಬ್ಯಾಂಕ್‌ನ ಹಸಿವಿನ ಸಾಕ್ಷಿಯಾಗಿದೆ. ಇದರ ಬಲಿಪೀಠದಲ್ಲಿ ಕಾಂಗ್ರೆಸ್ ದೇಶದ ಸ್ವಾಭಿಮಾನವನ್ನು ಪದೇ ಪದೇ ಅಡವಿಟ್ಟಿದೆ” ಎಂದು ಕಿಡಿಕಾರಿದೆ.


