ದ್ವೇಷ ಭಾಷಣಕ್ಕೆ (Hate Speech) ಸಂಬಂಧಿಸಿದ ಪ್ರಕರಣದಲ್ಲಿ ಪದೇ ಪದೆ ಸಮನ್ಸ್ ನೀಡಿದ್ದರೂ ನ್ಯಾಯಾಲಯಕ್ಕೆ ಗೈರುಹಾಜರಾದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪಶ್ಚಿಮ ಬಂಗಾಳದ ಕೃಷ್ಣನಗರ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ (Arrest Warrant) ಹೊರಡಿಸಿದೆ. ಕೃಷ್ಣನಗರ ನ್ಯಾಯಾಲಯದ 3ನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ತಕ್ಷಣವೇ ವಾರಂಟ್ ಜಾರಿಗೊಳಿಸುವಂತೆ ಮತ್ತು ಆಗಸ್ಟ್ 28ರೊಳಗೆ ವರದಿ ಸಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.
ಮಹುವಾ ಮೊಯಿತ್ರಾ ಅವರಿಗೆ ಬುಧವಾರವೇ ಕೋರ್ಟ್ಗೆ ಹಾಜರಾಗುವಂತೆ ಮಂಗಳವಾರವೇ ಸೂಚನೆ ನೀಡಲಾಗಿತ್ತು. ಆದರೆ ಅವರು ಗೈರುಹಾಜರಾಗಿದ್ದರು. ನ್ಯಾಯಾಲಯದ ಅವರ ವಕೀಲರು, ‘ಕೋರ್ಟ್ ಆವರಣದ ಹೊರಗೆ ತಮ್ಮ ಕಕ್ಷಿದಾರರಿಗೆ ಬೆದರಿಕೆ ಭೀತಿಯಿದೆ, ಹೀಗಾಗಿ ಅವರು ಯಾವುದೇ ಕಾರಣಕ್ಕೂ ಹಾಜರಾಗುವುದಿಲ್ಲ’ ಎಂದು ತಿಳಿಸಿದ್ದರು.
ಸಂಸದೆಯ ಈ ನಿಲುವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ನ್ಯಾಯಾಲಯದ ಆದೇಶಗಳನ್ನು ಪಾಲಿಸುವಲ್ಲಿ ಅವರ ಉಡಾಫೆಯ ನಡವಳಿಕೆಯನ್ನು ಎತ್ತಿಹಿಡಿದರು. ನ್ಯಾಯಾಲಯದ ಆದೇಶವನ್ನು ಸರಣಿ ರೂಪದಲ್ಲಿ ಉಲ್ಲಂಘಿಸುತ್ತಿರುವುದು ಆರೋಪಿಗೆ ಕಾನೂನಿನ ಮೇಲೆ ಗೌರವವಿಲ್ಲದಿರುವುದನ್ನು ತೋರಿಸುತ್ತದೆ. ಹೀಗಾಗಿ ವಾರಂಟ್ ಹೊರಡಿಸುವುದನ್ನು ಬಿಟ್ಟು ನ್ಯಾಯಾಲಯಕ್ಕೆ ಬೇರೆ ದಾರಿಯಿಲ್ಲ ಎಂದು ಪೀಠವು ಖಾರವಾಗಿ ಹೇಳಿದೆ.
ಪ್ರಕರಣ ಹಿನ್ನೆಲೆ:
ಕೃಷ್ಣನಗರ ಸಂಸದೆ ಮಹುವಾ ಮೊಯಿತ್ರಾ ಅವರು ಕೋರ್ಟ್ಗೆ ಬರಲಿದ್ದಾರೆ ಎಂಬ ಸುದ್ದಿ ತಿಳಿದು, ಈ ಹಿಂದೆ ಮಹಿಳೆಯರ ಗುಂಪೊಂದು ಮೊಟ್ಟೆಗಳನ್ನು ಹಿಡಿದು ನ್ಯಾಯಾಲಯದ ಹೊರಗೆ ಜಮಾಯಿಸಿತ್ತು. ಈ ಘಟನೆಯ ನಂತರ ಮಹುವಾ ಮೊಯಿತ್ರಾ ವೀಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿ, ಆ ಮಹಿಳೆಯರಿಗೆ ‘ಮುಸುಕು (Veil) ಧರಿಸಿ ಕಾರ್ಯಕ್ರಮಗಳನ್ನು ಆಯೋಜಿಸಿ’ ಎಂದು ಸಲಹೆ ನೀಡಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಮಹುವಾ ಅವರ ಈ ಹೇಳಿಕೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಹಾಗೂ ಪ್ರಚೋದನಕಾರಿಯಾಗಿದೆ ಎಂದು ಆರೋಪಿಸಿ ಜೂನ್ 17, 2026 ರಂದು ಕೃಷ್ಣನಗರ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಕೃಷ್ಣನಗರ ಪೊಲೀಸ್ ಜಿಲ್ಲೆಯ ಹಿರಿಯ ಅಧಿಕಾರಿಯ ಪ್ರಕಾರ, ಸಂಸದೆಯ ವಿರುದ್ಧ ಮಹಿಳೆಯ ಗೌರವಕ್ಕೆ ಧಕ್ಕೆ, ಗುಂಪುಗಳ ನಡುವೆ ಶತ್ರುತ್ವ ಉತ್ತೇಜನ, ಧಾರ್ಮಿಕ ಭಾವನೆ ಕೆರಳಿಸುವುದು, ಕ್ರಿಮಿನಲ್ ಬೆದರಿಕೆ ಹಾಗೂ ದ್ವೇಷ ಭಾಷಣಕ್ಕೆ ಸಂಬಂಧಿಸಿದ ವಿವಿಧ ಪ್ರಕರಣ ದಾಖಲಿಸಲಾಗಿದೆ.
ನ್ಯಾಯಾಲಯವು ಹಾಜರಾಗಲು ಹಲವು ಅವಕಾಶಗಳನ್ನು ನೀಡಿದ್ದರೂ ಹಾಗೂ ಬುಧವಾರ ಸಂಜೆ 5 ಗಂಟೆಯವರೆಗೆ ಕಾಲಾವಕಾಶ ನೀಡಿದ್ದರೂ ಮಹುವಾ ಅವರು ಬಾರದ ಕಾರಣ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದ್ದು, ಆಗಸ್ಟ್ 28 ರೊಳಗೆ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ.


