ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು ‘ಶುದ್ಧೀಕರಣ’ ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್‌ನೊಂದಿಗೆ ಗುರುತಿಸಿಕೊಂಡಿರುವ ವಿನೋದ್ ಕುಮಾರ್ ಆರ್ಯ ಮತ್ತು ಅಮಿತ್ ಕುಮಾರ್ ನೀಡಿದ ದೂರಿನ ಮೇರೆಗೆ ಹಲ್ದ್ವಾನಿ ಕೋತ್ವಾಲಿಯಲ್ಲಿ ಪ್ರಕರಣ ದಾಖಲಾಗಿದೆ.
ಶುದ್ದೀಕರಣ ಘಟನೆಯ ಕುರಿತು ಪ್ರತಿಕ್ರಿಯಿಸುವಾಗ ರಾಹುಲ್ ಗಾಂಧಿಯವರು ಪರಿಶಿಷ್ಟ ಜಾತಿ ಸಮುದಾಯವನ್ನು ಉಲ್ಲೇಖಿಸಿ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 196 ಮತ್ತು 299 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(q) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಆರೋಪಗಳು ಇನ್ನೂ ಸಾಬೀತಾಗಿಲ್ಲ ಮತ್ತು ಈ ವಿಷಯವು ಪ್ರಸ್ತುತ ತನಿಖೆಯ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸರ್ಕಲ್ ಆಫೀಸರ್ (ವೃತ್ತ ನಿರೀಕ್ಷಕ) ಅಮಿತ್ ಕುಮಾರ್ ಸೈನಿ ಅವರಿಗೆ ಒಪ್ಪಿಸಲಾಗಿದೆ.
ನೈನಿತಾಲ್‌ನ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಎಸ್‌ಪಿ) ಮಂಜುನಾಥ್ ಟಿ. ಸಿ. ಅವರು, “ರಾಹುಲ್ ಗಾಂಧಿಯವರ ಹೇಳಿಕೆಗಳು ಮತ್ತು ಪತ್ರಿಕಾಗೋಷ್ಠಿಯು ತಮಗೆ ಮತ್ತು ತಮ್ಮ ದಲಿತ ಸಮುದಾಯದ ಸದಸ್ಯರಿಗೆ ನೋವುಂಟು ಮಾಡಿದೆ ಎಂದು ದೂರುದಾರರು ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.
ಹೇಳಿಕೆಗಳನ್ನು ನೀಡುವ ಮುನ್ನ ದಲಿತ ಸಮುದಾಯದ ಸದಸ್ಯರಿಂದ ಯಾವುದೇ ಮಾಹಿತಿ ಅಥವಾ ವಿವರಣೆಯನ್ನು ಪಡೆದಿರಲಿಲ್ಲ ಎಂದೂ ಅವರು ಆರೋಪಿಸಿದ್ದಾರೆ.
ಈ ವಿವಾದವು ಆಗಸ್ಟ್ 8 ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ರ್‍ಯಾಲಿಗೆ ಸಂಬಂಧಿಸಿದ್ದಾಗಿದೆ. ಈ ರ್‍ಯಾಲಿಯನ್ನು ಉದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದರು.
ಈ ಕಾರ್ಯಕ್ರಮದ ನಂತರ, ಹಿಂದುತ್ವ ಸಂಘಟನೆಯೊಂದರ ಸದಸ್ಯರು ಆ ಸ್ಥಳದಲ್ಲಿ “ಶುದ್ಧೀಕರಣ ಯಜ್ಞ” ಅಥವಾ ಶುದ್ಧೀಕರಣದ ವಿಧಿವಿಧಾನವನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿ ವಿರುದ್ಧ ದೂರು ನೀಡಿರುವ ಅಮಿತ್ ಕುಮಾರ್ ಅವರು ಶುದ್ದೀಕರಣವು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ. ರ್‍ಯಾಲಿಯ ನಂತರ ಮೈದಾನದಲ್ಲಿ ಕಸವನ್ನು ಹಾಗೆಯೇ ಬಿಟ್ಟು ಹೋಗಿದ್ದರಿಂದ, ತಮ್ಮ ಸಂಸ್ಥೆಯು ಸ್ವಚ್ಛತಾ ಅಭಿಯಾನ ಮತ್ತು ಶುದ್ಧೀಕರಣ ಸಮಾರಂಭವನ್ನು ಹಮ್ಮಿಕೊಂಡಿತ್ತು ಎಂದು ಅವರು ತಿಳಿಸಿದ್ದಾರೆ.
“ರಾಹುಲ್ ಗಾಂಧಿ ಅವರು ಶುದ್ಧೀಕರಣ ಕಾರ್ಯಕ್ರಮದ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ,” ಎಂದು ಕುಮಾರ್ ಆರೋಪಿಸಿದ್ದಾರೆ. “ನಾವು ಸಮುದಾಯದ ಸದಸ್ಯರೊಂದಿಗೆ ಸೇರಿ ನಿಷ್ಪಕ್ಷಪಾತ ತನಿಖೆ ಮತ್ತು ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರನ್ನು ಸಲ್ಲಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಈ ಬೆಳವಣಿಗೆಯು ರಾಜಕೀಯ ವಾಕ್ಸಮರವನ್ನು ಮತ್ತಷ್ಟು ತೀವ್ರಗೊಳಿಸಿದೆ. ದಲಿತ ಸಮುದಾಯಕ್ಕೆ ಸೇರಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುದ್ದೀಕರಣದ ಮೂಲಕ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಉತ್ತರಾಖಂಡದ ಕಾಂಗ್ರೆಸ್ ಮುಖ್ಯ ವಕ್ತಾರೆ ಗರಿಮಾ ಮಹರಾ ದಸೌನಿ ಅವರು, ಆಡಳಿತಾರೂಢ ಬಿಜೆಪಿ ಈ ವಿಷಯವನ್ನು ವಿರೋಧ ಪಕ್ಷದ ವಿರುದ್ಧವೇ ತಿರುಗಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
“ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಲಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳುವುದು ಬಿಟ್ಟು, ಕಾಂಗ್ರೆಸ್ ನಾಯಕರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ” ಎಂದು ದಸೌನಿ ಹೇಳಿದ್ದಾರೆ.


