ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದ್ದಾರೆ. ತ್ರಿವಳಿ ತಲಾಖ್ ರದ್ದತಿಯನ್ನು ಉಲ್ಲೇಖಿಸಿದ ಅವರು, ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಒದಗಿಸುವ ಸರ್ಕಾರದ ಪ್ರಯತ್ನದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಅಯೋಧ್ಯೆಯ ರಾಮಮಂದಿರ ನಿರ್ಮಾಣ ಮತ್ತು ವಿಧಿ 370 ರದ್ದತಿಯ ನಂತರ ಬಿಜೆಪಿಯ ಸೈದ್ಧಾಂತಿಕ ಕಾರ್ಯಸೂಚಿಯಲ್ಲಿ ಉಳಿದಿದ್ದ ಏಕೈಕ ಪ್ರಮುಖ ಭರವಸೆ ಎಂದರೆ ಅದು ಯುಸಿಸಿ. ಗುಜರಾತ್ ಅಸೆಂಬ್ಲಿಯಲ್ಲಿ ಮಾರ್ಚ್‌ನಲ್ಲಿ ಯುಸಿಸಿ ವಿಧೇಯಕ ಅಂಗೀಕಾರಗೊಂಡಾಗಲೂ ಅಮಿತ್ ಶಾ, ಪ್ರತಿಯೊಬ್ಬ ಪ್ರಜೆಗೂ ಒಂದೇ ಕಾನೂನು ಇರಬೇಕು ಎಂಬುದು ಪಕ್ಷದ ಸ್ಥಾಪನೆಯಾದಾಗಿನ ದಿನದ ಬದ್ಧತೆಯಾಗಿದೆ ಎಂದು ಹೇಳಿದ್ದರು.
ಯುಸಿಸಿಯು ಆರ್‌ಎಸ್ಎಸ್ ಚಿಂತನೆಯಲ್ಲೇ ಬೇರೂರಿದ್ದರೂ, ಅದರ ಅನುಷ್ಠಾನದ ವಿಧಾನ ಮತ್ತು ಸಮಯದ ಕುರಿತು ಸಂಘವು ಆರಂಭದಲ್ಲಿ ಜಾಗರೂಕತೆಯ ನಿಲುವು ತಳೆದಿತ್ತು. ಪ್ರತಿಯೊಂದು ವರ್ಗಕ್ಕೂ ಇದು ಅನ್ವಯಿಸುವುದರಿಂದ ಆಳವಾದ ಅಧ್ಯಯನ ಮತ್ತು ವ್ಯಾಪಕ ಸಮಾಲೋಚನೆ ಅಗತ್ಯ ಎಂದು 2023ರಲ್ಲಿ ಆರ್‌ಎಸ್‌ಎಸ್ ಮೂಲಗಳು ತಿಳಿಸಿದ್ದವು. ಕೇಂದ್ರ ಸರ್ಕಾರವು ದೇಶಾದ್ಯಂತ ಒಂದೇ ಬಾರಿಗೆ ಕಾನೂನು ತರುವುದಕ್ಕಿಂತ ಮೊದಲು ಬಿಜೆಪಿ ಆಡಳಿತವಿರುವ ರಾಜ್ಯಗಳು ಸ್ವತಂತ್ರ ಕೋಡ್‌ಗಳನ್ನು ಜಾರಿಗೆ ತರಲಿ ಎಂಬುದು ಸಂಘದ ಆದ್ಯತೆಯಾಗಿತ್ತು.
ಮಾರ್ಚ್ 2024ರಲ್ಲಿ ಆರ್‌ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಉತ್ತರಾಖಂಡ ಮಾದರಿಯನ್ನು ಸ್ವಾಗತಿಸಿ, ವ್ಯಾಪಕ ಸಮಾಲೋಚನೆಯೊಂದಿಗೆ ಇದನ್ನು ದೇಶಾದ್ಯಂತ ಅಧ್ಯಯನ ಮಾಡಿ ಜಾರಿಗೆ ತರಬೇಕು ಎಂದಿದ್ದರು. ಶಾ ಅವರ ಪ್ರಸ್ತುತ ಹೇಳಿಕೆಯು, ಈವರೆಗೆ ಹಂತ ಹಂತವಾಗಿ ಸಾಗುತ್ತಿದ್ದ ರಾಜ್ಯ ಮಟ್ಟದ ತಂತ್ರವನ್ನು ನಿಗದಿತ ಕಾಲಮಿತಿಯ ರಾಜಕೀಯ ಕಾರ್ಯಕ್ರಮವಾಗಿ ಪರಿವರ್ತಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕೇಂದ್ರ ಸರ್ಕಾರವು ದೇಶಾದ್ಯಂತ ಒಂದೇ ರಾಷ್ಟ್ರೀಯ ಕಾನೂನನ್ನು ತರುವ ಬದಲಿಗೆ ರಾಜ್ಯಗಳ ಮೂಲಕ ಯುಸಿಸಿ ಜಾರಿಗೆ ಮುಂದಾಗಿರುವುದರ ಹಿಂದೆ ಸಾಂವಿಧಾನಿಕ ಹಾಗೂ ರಾಜಕೀಯ ತರ್ಕ ಅಡಗಿದೆ. ಸಂವಿಧಾನದ ಸಮವರ್ತಿ ಪಟ್ಟಿಯ (Concurrent List) 5ರ ಅಡಿಯಲ್ಲಿ ವಿವಾಹ, ವಿಚ್ಛೇದನ, ದತ್ತು ಸ್ವೀಕಾರ, ಆಸ್ತಿ ಹಕ್ಕು ಮುಂತಾದ ವಿಚಾರಗಳು ಬರುವುದರಿಂದ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳೆರಡಕ್ಕೂ ಶಾಸನ ರಚಿಸುವ ಅಧಿಕಾರವಿದೆ.
ಆದರೆ ಇದರ ಹಿಂದಿರುವ ರಾಜಕೀಯ ಕಾರಣವೇ ಅತ್ಯಂತ ಪ್ರಮುಖವಾದುದು. ಒಂದೇ ರಾಷ್ಟ್ರೀಯ ಕೋಡ್ ಜಾರಿಗೆ ತರಬೇಕಾದರೆ ಭಾರತದಲ್ಲಿರುವ ಅಪಾರ ಸಾಂಸ್ಕೃತಿಕ ವೈವಿಧ್ಯತೆ, ವೈಯಕ್ತಿಕ ಕಾನೂನುಗಳು ಮತ್ತು ವಿಶೇಷವಾಗಿ ಬುಡಕಟ್ಟು ಸಮುದಾಯಗಳು ಹಾಗೂ ಈಶಾನ್ಯ ರಾಜ್ಯಗಳ ಆಚರಣೆಗಳೊಂದಿಗೆ ಸಂಘರ್ಷಕ್ಕೆ ಇಳಿಯಬೇಕಾಗುತ್ತದೆ. ಉದಾಹರಣೆಗೆ ಉತ್ತರಾಖಂಡ ಅಥವಾ ಹಿಮಾಚಲ ಪ್ರದೇಶದ ಬುಡಕಟ್ಟು ಆಚರಣೆಗಳಿಗೂ, ಛತ್ತೀಸ್‌ಗಢ ಅಥವಾ ಈಶಾನ್ಯ ರಾಜ್ಯಗಳ ಆಚರಣೆಗಳಿಗೂ ದೊಡ್ಡ ವ್ಯತ್ಯಾಸವಿದೆ. ಹೀಗಾಗಿ ರಾಜ್ಯಗಳ ಮೂಲಕ ಕಾನೂನು ತರುವುದರಿಂದ ವಿವಿಧ ಮಾದರಿಗಳನ್ನು ಪರೀಕ್ಷಿಸಲು, ಸ್ಥಳೀಯ ಆಚರಣೆಗಳನ್ನು ನಿರ್ವಹಿಸಲು ಮತ್ತು ಇಡೀ ದೇಶದ ಸಾಂವಿಧಾನಿಕ ತೊಂದರೆಗಳನ್ನು ಎದುರಿಸದೆ ಜಾರಿಗೆ ತರಲು ಬಿಜೆಪಿಗೆ ಸಾಧ್ಯವಾಗುತ್ತದೆ. ಜೊತೆಗೆ, ಇದನ್ನು ಸಾಮಾಜಿಕ ಸುಧಾರಣೆ ಮತ್ತು ಸಮಾನ ಹಕ್ಕಿನ ಕ್ರಮ ಎಂದು ಬಿಂಬಿಸುತ್ತಾ ರಾಜಕೀಯವಾಗಿಯೂ ಜೀವಂತವಾಗಿಡಲು ಸಾಧ್ಯವಾಗುತ್ತದೆ.
ಈವರೆಗೆ ಬಿಜೆಪಿ ಆಡಳಿತದ ನಾಲ್ಕು ರಾಜ್ಯಗಳಲ್ಲಿ – ಉತ್ತರಾಖಂಡ, ಗುಜರಾತ್, ಅಸ್ಸಾಂ ಮತ್ತು ಮಧ್ಯಪ್ರದೇಶಗಳಲ್ಲಿ ಯುಸಿಸಿ ಮಸೂದೆ ಅಂಗೀಕಾರಗೊಂಡಿದ್ದು, ಉತ್ತರಾಖಂಡದಲ್ಲಿ ಮಾತ್ರ ಜನವರಿ 2025 ರಿಂದ ಜಾರಿಯಲ್ಲಿದೆ. ಉತ್ತರಾಖಂಡದ ಕಾನೂನು ವಿವಾಹ, ವಿಚ್ಛೇದನ, ಆಸ್ತಿ ಹಕ್ಕುಗಳಲ್ಲಿ ಸಮಾನ ನಿಯಮಗಳನ್ನು ಒದಗಿಸುತ್ತದೆ, ಬಹುಪತ್ನಿತ್ವವನ್ನು ನಿಷೇಧಿಸುತ್ತದೆ ಮತ್ತು ವಿವಾಹದ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ‘ಲಿವ್-ಇನ್’ ಸಂಬಂಧಗಳ ನಿಯಂತ್ರಣ; ಇಂತಹ ಸಂಬಂಧಗಳನ್ನು ಹಾಗೂ ಅವುಗಳ ಅಂತ್ಯವನ್ನು ನೋಂದಾಯಿಸುವುದು ಕಡ್ಡಾಯವಾಗಿದ್ದು, ಈ ಸಂಬಂಧದಲ್ಲಿ ಜನಿಸುವ ಮಕ್ಕಳಿಗೆ ಸಿಂಧುತ್ವ ಮತ್ತು ಹಕ್ಕುಗಳನ್ನು ನೀಡಲಾಗಿದೆ.
ಮಾರ್ಚ್ 2026 ರಲ್ಲಿ ವಿಧೇಯಕ ಅಂಗೀಕರಿಸಿದ ಗುಜರಾತ್, ಮೇ ತಿಂಗಳಲ್ಲಿ ಅಂಗೀಕರಿಸಿದ ಅಸ್ಸಾಂ ಮತ್ತು ಜುಲೈನಲ್ಲಿ ಅಂಗೀಕರಿಸಿದ ಮಧ್ಯಪ್ರದೇಶ ರಾಜ್ಯಗಳು ಸಹ ಉತ್ತರಾಖಂಡ ಮಾದರಿಯನ್ನೇ ಅನುಸರಿಸಿವೆ. ಮಧ್ಯಪ್ರದೇಶವು ಹೆಚ್ಚುವರಿಯಾಗಿ ದತ್ತು ಸ್ವೀಕಾರ, ತ್ರಿವಳಿ ತಲಾಖ್ ಮತ್ತು ನಿಕಾಹ್ ಹಲಾಲಾಗೆ ಸಂಬಂಧಿಸಿದ ನಿಬಂಧನೆಗಳನ್ನು ಸೇರಿಸಿದೆ. ಈ ಎಲ್ಲಾ ನಾಲ್ಕೂ ರಾಜ್ಯಗಳ ಕಾಯ್ದೆಗಳಲ್ಲಿ ಕಡ್ಡಾಯವಾಗಿ ಪರಿಶಿಷ್ಟ ಪಂಗಡಗಳನ್ನು (Scheduled Tribes) ಹೊರಗಿಡಲಾಗಿದೆ. ಅಂದರೆ, ಈ ನಾಲ್ಕು ಕಾನೂನುಗಳು ಒಂದಕ್ಕೊಂದು ಹೋಲುತ್ತಿದ್ದರೂ ಸಂಪೂರ್ಣವಾಗಿ ಒಂದೇ ರೀತಿಯಾಗಿಲ್ಲ ಮತ್ತು ಯಾವುದೂ ಪೂರ್ಣ ಪ್ರಮಾಣದಲ್ಲಿ ‘ಸಾರ್ವತ್ರಿಕ’ವಾಗಿಲ್ಲ.
ವಿರೋಧ ಪಕ್ಷಗಳು ಮತ್ತು ಬಿಜೆಪಿಯ ಮಿತ್ರಪಕ್ಷಗಳು ಈ ವಿಷಯದಲ್ಲಿ ವಿಭಿನ್ನ ನಿಲುವುಗಳನ್ನು ಹೊಂದಿವೆ. ಬಿಜೆಪಿಯ ಯುಸಿಸಿಯು ನಿಜವಾದ ಲಿಂಗ ಸಮಾನತೆಯ ಸುಧಾರಣೆಯೇ ಅಥವಾ ಬಹುಸಂಖ್ಯಾತ ಚೌಕಟ್ಟಿನ ಮೂಲಕ ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನುಗಳನ್ನು ಬದಲಾಯಿಸುವ ಯತ್ನವೇ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ. ಕಾಂಗ್ರೆಸ್ ಪಕ್ಷವು ಗುಜರಾತ್ ಮಸೂದೆಯನ್ನು ‘ಮುಸ್ಲಿಂ ವಿರೋಧಿ’ ಎಂದು ಹಾಗೂ ಮಧ್ಯಪ್ರದೇಶದ ಕಾಯ್ದೆಯನ್ನು ಆರ್‌ಎಸ್‌ಎಸ್ ಕಾರ್ಯಸೂಚಿ ಎಂದು ಟೀಕಿಸಿದೆ.
ಅಸ್ಸಾಂನ ವಿಪಕ್ಷಗಳು ಬುಡಕಟ್ಟು ವಿನಾಯಿತಿ ಮತ್ತು ಲಿವ್-ಇನ್ ನಿಯಂತ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಇತ್ತ ಬಿಜೆಪಿಯ ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿಯು (JDU) ಮತ್ತು ಟಿಡಿಪಿ (TDP) ಕಠಿಣ ಸವಾಲನ್ನು ಎದುರಿಸುತ್ತಿವೆ. ಜೆಡಿಯು ಪಕ್ಷವು ತಾನು ಯುಸಿಸಿಗೆ ವಿರೋಧಿಯಲ್ಲ, ಆದರೆ ಬಲವಂತವಾಗಿ ಹೇರುವ ಬದಲು ಸಮ್ಮತಿಯ ಮೂಲಕ ಇದು ರೂಪುಗೊಳ್ಳಬೇಕು ಎಂದು ಹೇಳಿದೆ. ನಿತೀಶ್ ಕುಮಾರ್ ಅವರು ವಿವಿಧ ಧಾರ್ಮಿಕ ಮತ್ತು ಜನಾಂಗೀಯ ಗುಂಪುಗಳ ನಡುವಿನ ಭಾರತದ “ಸೂಕ್ಷ್ಮ ಸಮತೋಲನ”ವನ್ನು ಯುಸಿಸಿ ಗೌರವಿಸಬೇಕು ಎಂದು ಕಾನೂನು ಆಯೋಗಕ್ಕೆ ತಿಳಿಸಿದ್ದರು. ಟಿಡಿಪಿ ಕೂಡ ಚರ್ಚೆ ಮತ್ತು ಸರ್ವಸಮ್ಮತಿಗೆ ಕರೆ ನೀಡಿದ್ದು, ಮುಸ್ಲಿಂ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಹೇಳಿದೆ.
ಸಂವಿಧಾನದ ವಿಧಿ 44 ರಲ್ಲಿ “ಭಾರತದ ಇಡೀ ಭೂಪ್ರದೇಶದಲ್ಲಿ ಪ್ರಜೆಗಳಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಒದಗಿಸಲು ರಾಜ್ಯವು ಶ್ರಮಿಸಬೇಕು” ಎಂದು ಹೇಳಲಾಗಿದೆಯಾದರೂ, ಇದು ‘ರಾಜ್ಯ ನೀತಿಯ ನಿರ್ದೇಶಕ ತತ್ತ್ವಗಳ’ (DPSP) ಭಾಗವಾಗಿದೆಯೇ ಹೊರತು ಹಕ್ಕುಗಳ ಭಾಗವಾಗಿಲ್ಲ. ವಿಧಿ 37ರ ಪ್ರಕಾರ, ಈ ನಿರ್ದೇಶಕ ತತ್ತ್ವಗಳು ಆಡಳಿತಕ್ಕೆ ಮೂಲಭೂತವಾದರೂ ಯಾವುದೇ ನ್ಯಾಯಾಲಯದಿಂದ ಜಾರಿಗೊಳಿಸಲು ಸಾಧ್ಯವಿಲ್ಲ. Constituent Assembly (ಸಂವಿಧಾನ ರಚನಾ ಸಭೆ) ಯಲ್ಲೇ ಯುಸಿಸಿ ಸ್ವರೂಪದ ಬಗ್ಗೆ ಸರ್ವಸಮ್ಮತಿ ಇರಲಿಲ್ಲ, ಹೀಗಾಗಿ ಇದನ್ನು ನಿರ್ದೇಶಕ ತತ್ತ್ವಗಳಲ್ಲಿ ಇರಿಸಲಾಗಿತ್ತು.
2018ರಲ್ಲಿ 21ನೇ ಕಾನೂನು ಆಯೋಗವು ತನ್ನ ವರದಿಯಲ್ಲಿ, ಈ ಹಂತದಲ್ಲಿ ಯುಸಿಸಿ “ಅಗತ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ” ಎಂದು ಹೇಳಿತ್ತು. ಸಂಪೂರ್ಣ ಏಕರೂಪತೆಯನ್ನು ಹೇರುವ ಬದಲು, ಭಾರತದ ವೈವಿಧ್ಯತೆಯನ್ನು ಕಾಯ್ದುಕೊಂಡು ವಿವಿಧ ವೈಯಕ್ತಿಕ ಕಾನೂನುಗಳಲ್ಲಿರುವ ತಾರತಮ್ಯದ ನಿಯಮಗಳನ್ನು ತಿದ್ದುಪಡಿ ಮಾಡುವುದು ಸೂಕ್ತ ಎಂದು ಆಯೋಗ ಅಭಿಪ್ರಾಯಪಟ್ಟಿತ್ತು. ಆದರೆ, 2023ರಲ್ಲಿ 22ನೇ ಕಾನೂನು ಆಯೋಗವು ಸಾರ್ವಜನಿಕರು ಮತ್ತು ಧಾರ್ಮಿಕ ಸಂಸ್ಥೆಗಳಿಂದ ಮರು ಅಭಿಪ್ರಾಯಗಳನ್ನು ಕೋರುವ ಮೂಲಕ ಈ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.


