ಮಲಯಾಳಂ ಸುದ್ದಿ ವಾಹಿನಿ ‘ರಿಪೋರ್ಟರ್ ಟಿವಿ’ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ ಆರೋಪಿಸಿದೆ.
ಪೊಲೀಸ್ ಸಿಬ್ಬಂದಿ ಪತ್ರಕರ್ತರು ಮತ್ತು ಇತರ ಉದ್ಯೋಗಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವಾಹಿನಿ ಆರೋಪಿಸಿರುವುದಾಗಿ deccanherald.com ವರದಿ ಮಾಡಿದೆ.
ಶೋಧ ಕಾರ್ಯದ ನೇತೃತ್ವ ವಹಿಸಿರುವ ತ್ರಿಕ್ಕಾಕರದ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ), ವಾಹಿನಿಯು ತನಿಖಾ ಪ್ರಕ್ರಿಯೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಚೇರಿಯಲ್ಲಿದ್ದ ವಾಹಿನಿಯ ಸಿಬ್ಬಂದಿಯು ಆಡಳಿತ ವಿಭಾಗವನ್ನು ಶೋಧಿಸಲು ನೀಡಿದ ನೋಟಿಸ್ ಅನ್ನು ಸ್ವೀಕರಿಸಿಲ್ಲ ಮತ್ತು ಈ ಕುರಿತಾದ ಮೌಖಿಕ ವಿನಂತಿಗಳಿಗೂ ಒಪ್ಪಿಗೆ ನೀಡಿಲ್ಲ ಎಂದು ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ವಾಹಿನಿಯ ಹಿರಿಯ ಅಧಿಕಾರಿಯೊಬ್ಬರು ತಾವು ಶೀಘ್ರದಲ್ಲೇ ಕಚೇರಿಗೆ ತಲುಪುವುದಾಗಿ ಭರವಸೆ ನೀಡಿದ್ದರು, ಆದರೆ ಸ್ವಲ್ಪ ಸಮಯದ ನಂತರ ಅವರು ಪೊಲೀಸರ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ವಾಹಿನಿಯ ಪ್ರಕಾರ, ಸಾಮಾನ್ಯವಾಗಿ ಪತ್ರಕರ್ತರು ಮತ್ತು ತಾಂತ್ರಿಕ ಸಿಬ್ಬಂದಿ ಮಾತ್ರ ಕೆಲಸ ಮಾಡುವ ಸುದ್ದಿ ವಿಭಾಗದಲ್ಲಿ ಈ ಶೋಧ ಕಾರ್ಯವನ್ನು ನಡೆಸಲಾಗಿದೆ.
ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯದ ಉದ್ದೇಶ ಅಥವಾ ಇತರ ಯಾವುದೇ ವಿವರಗಳನ್ನು ನೀಡದೆ ಅರ್ಧ ಗಂಟೆಗೂ ಹೆಚ್ಚು ಕಾಲ ಕಚೇರಿಯಲ್ಲಿಯೇ ಉಳಿದುಕೊಂಡಿದ್ದರು ಮತ್ತು ಕರ್ತವ್ಯಕ್ಕೆ ಹಾಜರಾಗಿದ್ದ ಪತ್ರಕರ್ತರು ವೈಯಕ್ತಿಕವಾಗಿ ಬಳಸುತ್ತಿದ್ದ ಮೊಬೈಲ್ ಫೋನ್‌ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ ಎಂದು ವಾಹಿನಿ ಆರೋಪಿಸಿದೆ.
ಕಳೆದ ಎಡರಂಗ (ಎಲ್‌ಡಿಎಫ್) ಸರ್ಕಾರದ ಆಡಳಿತಾವಧಿಯಲ್ಲಿ ಕೇರಳದಲ್ಲಿ ಆಯೋಜಿಸಲಾಗಿದ್ದ ಮೆಸ್ಸಿ-ಅರ್ಜೆಂಟೀನಾ ಫುಟ್‌ಬಾಲ್ ಪಂದ್ಯಾವಳಿ ವಿಫಲಗೊಂಡ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ಉಂಟಾಗಿದೆ ಎನ್ನಲಾದ ನಷ್ಟದ ತನಿಖೆಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಲಯವು ಹೊರಡಿಸಿದ ವಾರಂಟ್ ಆಧಾರದ ಮೇಲೆ ಈ ಶೋಧ ಕಾರ್ಯವನ್ನು ಕೈಗೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಎಸಿಪಿ ಹೇಳಿದ್ದಾರೆ.
ಅಧಿಕಾರಿ ಚಾನೆಲ್ ಕಚೇರಿಗೆ ತಲುಪಿ ಶೋಧ ಕಾರ್ಯಕ್ಕಾಗಿ ಆಡಳಿತ ವಿಭಾಗವನ್ನು ತೆರೆದಿರುವುದನ್ನು ಚಾನೆಲ್ ತೋರಿಸಿದೆ ಎಂದು deccanherald.com ವರದಿ ಉಲ್ಲೇಖಿಸಿದೆ.
ವರದಿಗಳ ಪ್ರಕಾರ, ವಿಶೇಷ ತನಿಖಾ ತಂಡವು (ಎಸ್‌ಐಟಿ) ಐದು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಇದರಲ್ಲಿ ರಿಪೋರ್ಟರ್ ಬ್ರಾಡ್‌ಕಾಸ್ಟಿಂಗ್ ಕಂಪನಿಯ ಮಾಲೀಕರಾದ ಅಗಸ್ಟಿನ್ ಸಹೋದರರ ಕೊಚ್ಚಿ ನಿವಾಸಗಳು, ಕಂಪನಿಯ ಕಚೇರಿ ಮತ್ತು ವಯನಾಡಿನಲ್ಲಿರುವ ಅವರ ಕುಟುಂಬದ ಮನೆ ಸೇರಿವೆ.
ತನ್ನ ಸುದ್ದಿ ಪ್ರಸಾರಕ್ಕೆ ಅಡ್ಡಿಪಡಿಸುವ ಉದ್ದೇಶದಿಂದಲೇ ಈ ಶೋಧ ಕಾರ್ಯವನ್ನು ನಡೆಸಲಾಗಿದೆ ಎಂದು ಚಾನೆಲ್ ಆರೋಪಿಸಿದೆ.
ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಅವರು ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಸುದ್ದಿ ವಿಭಾಗಕ್ಕೆ ಬಲವಂತವಾಗಿ ಪ್ರವೇಶಿಸಿರುವುದು ಮತ್ತು ಪತ್ರಕರ್ತರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿರುವುದು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಹೇಳಿದ್ದಾರೆ.
ಪಿಣರಾಯಿ ವಿಜಯನ್ ಅವರು ತಮ್ಮ ಹೇಳಿಕೆಯಲ್ಲಿ, ಪೊಲೀಸ್ ಸಿಬ್ಬಂದಿ ಮುಂಜಾನೆಯ ಅವಧಿಯಲ್ಲಿ ಸುದ್ದಿ ವಿಭಾಗಕ್ಕೆ ‘ನುಗ್ಗಿದ್ದಾರೆ’ ಮತ್ತು ಸುಮಾರು ಒಂದೂವರೆ ಗಂಟೆಗಳ ಕಾಲ ಅಲ್ಲಿ ಗೊಂದಲದ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಪೊಲೀಸರು ಪತ್ರಕರ್ತರ ವಿಡಿಯೋ ಚಿತ್ರೀಕರಣವನ್ನು ಸಹ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ವಿಜಯನ್ ಅವರು ಪೊಲೀಸ್ ಕ್ರಮವನ್ನು ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಮಾಧ್ಯಮ ಸಂಸ್ಥೆಗಳ ಮೇಲೆ ನಡೆದ ಘಟನೆಗಳಿಗೆ ಹೋಲಿಸಿದ್ದಾರೆ. ಅಲ್ಲದೆ, ಈ ಕುರಿತು ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಪ್ರತಿಕ್ರಿಯಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಮತ್ತು ಪಕ್ಷದ ಶಾಸಕಾಂಗ ಪಕ್ಷದ ನಾಯಕ ಕೆ. ರಾಜನ್ ಅವರು ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಪತ್ರಿಕಾ ಸ್ವಾತಂತ್ರ್ಯ ಹಾಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ, ಜೊತೆಗೆ ವಾಹಿನಿ ಮತ್ತು ಅದರ ವರದಿಗಾರರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.
“ಮುಖ್ಯಮಂತ್ರಿ ಸಂವಿಧಾನವನ್ನು ಓದಬೇಕು” ಎಂದು ವಿಶ್ವಂ ಹೇಳಿದ್ದಾರೆ.
ಸಿಎಂ ವಿ.ಡಿ ಸತೀಶನ್ ಅವರು ತಕ್ಷಣವೇ ಮಧ್ಯಪ್ರವೇಶಿಸಬೇಕು ಮತ್ತು ಈ ಬೆಳವಣಿಗೆಯ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ರಾಜನ್ ಹೇಳಿದ್ದಾರೆ.
“ಇದು ಆಡಳಿತಾತ್ಮಕ ಭಯೋತ್ಪಾದನೆಯಾಗಿದೆ. ಇದಕ್ಕೆ ಏನೂ ಮಾಡದಿದ್ದರೆ, ಇದೊಂದು ಕೆಟ್ಟ ಪೂರ್ವನಿದರ್ಶನವಾಗಿ ಮಾರ್ಪಡುತ್ತದೆ. ಈ ರೀತಿ ವಾಹಿನಿಯೊಂದರ ಪ್ರಸಾರವನ್ನು ಅಡ್ಡಿಪಡಿಸುವುದು ಸ್ವೀಕಾರಾರ್ಹವಲ್ಲ ಮತ್ತು ಹಿಂದೆಂದೂ ಕೇಳರಿಯದ ಸಂಗತಿಯಾಗಿದೆ ಎಂದು ರಾಜನ್ ಕಿಡಿಕಾರಿದ್ದಾರೆ.
“ನ್ಯಾಯಾಲಯ ಹೊರಡಿಸಿದ ಶೋಧ ವಾರಂಟ್ ಆಧಾರದ ಮೇಲೆ ಕಾನೂನುಬದ್ಧವಾಗಿಯೇ ಈ ದಾಳಿ ನಡೆಸಲಾಗಿದೆ ಎಂದು ಕೇರಳ ಡಿಜಿಪಿ ರವಾಡ ಎ. ಚಂದ್ರಶೇಖರ್ ತಿಳಿಸಿದ್ದಾರೆ. ಶೋಧ ಕಾರ್ಯ ನಡೆಸುವ ನಿರ್ಧಾರ ವಿಶೇಷ ತನಿಖಾ ತಂಡದ್ದೇ (ಎಸ್‌ಐಟಿ) ಆಗಿತ್ತು. ವಾಹಿನಿಯ ಪ್ರಸಾರ ನಿರಂತರವಾಗಿ ನಡೆಯುತ್ತಿದ್ದ ಕಾರಣ, ಅದಕ್ಕೆ ಯಾವುದೇ ಅಡ್ಡಿಯಾಗಿರುವುದು ನನಗೆ ಕಂಡುಬಂದಿಲ್ಲ” ಎಂದು ಹೇಳಿದ್ದಾರೆ.
ಕೇರಳದ ಇತಿಹಾಸದಲ್ಲೇ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ. ಇದು ಪತ್ರಕರ್ತರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ಅವರು ಆಡಳಿತ ವಿಭಾಗಕ್ಕೆ ಪ್ರವೇಶಿಸಬೇಕಿತ್ತೇ ಹೊರತು, ಸುದ್ದಿ ವಿಭಾಗಕ್ಕಲ್ಲ ಎಂದು ಬ್ರಿಟ್ಟಾಸ್ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ರಿಪೋರ್ಟರ್ ಟಿವಿ ಚಾನೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದು ಯಾಕೆ?
ಕಳೆದ ಎಲ್‌ಡಿಎಫ್ ಸರ್ಕಾರದ ಅಧಿಯಲ್ಲಿ, ವಿಶ್ವಪ್ರಸಿದ್ಧ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ ಕರೆತಂದು ಕೊಚ್ಚಿಯಲ್ಲಿ ಪ್ರದರ್ಶನ ಪಂದ್ಯವೊಂದನ್ನು ಆಯೋಜಿಸಲು ಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಿಪೋರ್ಟರ್ ಬ್ರಾಡ್‌ಕಾಸ್ಟಿಂಗ್ ಕಂಪನಿ (ಆರ್‌ಬಿಸಿ) ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಆದರೆ, ಈ ಪಂದ್ಯಾವಳಿ ಆಯೋಜನೆಗೊಳ್ಳದೆ ವಿಫಲವಾಯಿತು.
ಪಂದ್ಯಾವಳಿ ವಿಫಲಗೊಂಡ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ಕ್ರೀಡಾ ಇಲಾಖೆಯ ಪ್ರಾಥಮಿಕ ವರದಿ ತಿಳಿಸಿತ್ತು. ಅಲ್ಲದೆ, ಸಾರ್ವಜನಿಕರನ್ನು ಹಾಗೂ ಫುಟ್‌ಬಾಲ್ ಅಭಿಮಾನಿಗಳನ್ನು ವಂಚಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪೋರ್ಟರ್ ಬ್ರಾಡ್‌ಕಾಸ್ಟಿಂಗ್ ಕಂಪನಿಯು ಸುಮಾರು ₹25.78 ಕೋಟಿ ಜಿಎಸ್‌ಟಿ ವಂಚನೆ ಮಾಡಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಈ ಆರ್ಥಿಕ ಅಕ್ರಮಗಳು ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು (ಎಸ್‌ಐಟಿ) ಇತ್ತೀಚೆಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿತ್ತು. ಈ ಎಫ್‌ಐಆರ್ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಪಡೆದ ಅಧಿಕೃತ ಶೋಧ ವಾರಂಟ್ (Search Warrant) ಮೂಲಕ ಪೊಲೀಸರು ಚಾನೆಲ್ ಮೇಲೆ ದಾಳಿ ನಡೆಸಿ ಶೋಧ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.


