ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ.
ವಿಧಾನಸೌಧದಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಂದಾಯ ಇಲಾಖೆಯ ಸುದೀರ್ಘ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರಾಜ್ಯದಾದ್ಯಂತ ಪ್ರಸ್ತುತ 43.81 ಲಕ್ಷ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಬಾಕಿ ಇರುವುದನ್ನು ಉಲ್ಲೇಖಿಸಿದರು. ಹೆಸರು ತಿದ್ದುಪಡಿ ಸೇರಿದಂತೆ ಹಲವು ತಾಂತ್ರಿಕ ವಿಚಾರಗಳಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದ್ದು, ಯಾವುದೇ ಅರ್ಹ ಮತದಾರನ ಹಕ್ಕು ಕಸಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಶಾಶ್ವತ ನಿವಾಸಿಗಳ ಪ್ರಮಾಣಪತ್ರ (PRC) ನೀಡುವಲ್ಲಿ ಅನಗತ್ಯ ವಿಳಂಬ ಧೋರಣೆ ಅನುಸರಿಸಬಾರದು ಎಂದು ಸೂಚಿಸಿದ ಸಚಿವರು, ಅರ್ಜಿ ನಮೂನೆ 6ರ ಪ್ರಕ್ರಿಯೆಗೆ ವಿಶೇಷ ಆದ್ಯತೆ ನೀಡಬೇಕಿದೆ ಎಂದರು. ವರ್ಷಗಳಿಂದ ಊರು ತೊರೆದು ಬೇರೆಡೆ ವಾಸಿಸುತ್ತಿರುವವರ ಅಗತ್ಯ ಮಾಹಿತಿಯನ್ನು ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ತಪ್ಪದೇ ದಾಖಲಿಸಬೇಕು ಮತ್ತು ಈ ವಿಷಯದಲ್ಲಿ ಯಾವುದೇ ತರಹದ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಇದೇ ವೇಳೆ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಭಾರತ್ ಜೋಡೋ ಯುವ ಸಂಘ’ಗಳ ನೋಂದಣಿ ಕಾರ್ಯವನ್ನು ತಕ್ಷಣವೇ ಚುರುಕುಗೊಳಿಸುವಂತೆ ಆದೇಶಿಸಿದರು. ತಾಂತ್ರಿಕ ಕಾರಣಗಳಿಂದಾಗಿ ಮಧ್ಯದಲ್ಲಿ ಸ್ಥಗಿತಗೊಂಡಿದ್ದ ಈ ಪ್ರಕ್ರಿಯೆಗೆ ಮರುಜೀವ ನೀಡಲು ತಕ್ಷಣವೇ ಅರ್ಜಿ ನಮೂನೆಗಳನ್ನು ವಿತರಿಸಿ ಭರ್ತಿ ಮಾಡಿಸಿಕೊಳ್ಳಲು ಸೂಚಿಸಿದರು. ದೇಶದಲ್ಲೇ ಮೊದಲ ಬಾರಿಗೆ ಜಾರಿಯಾಗುತ್ತಿರುವ ಈ ಯೋಜನೆಗೆ ಮೆಂಟರ್‌ಗಳ ನೇಮಕ ಸೇರಿದಂತೆ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಲು ತಿಳಿಸಿದರು.
ಮತ್ತೊಂದೆಡೆ, ‘ಪ್ರಜಾಸೇವಾ’ ಅಭಿಯಾನದಡಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳಲ್ಲಿ ಬಹುತೇಕ ಕಂದಾಯ ಇಲಾಖೆಗೆ ಸಂಬಂಧಿಸಿದ ಪಹಣಿ (RTC) ತಿದ್ದುಪಡಿ, ಪೋಡಿ ಹಾಗೂ ಪಿಂಚಣಿ ಸಮಸ್ಯೆಗಳೇ ಆಗಿವೆ. ಈ ಅರ್ಜಿಗಳನ್ನು ವಿಳಂಬ ಮಾಡದೆ ತ್ವರಿತವಾಗಿ ವಿಲೇವಾರಿ ಮಾಡಬೇಕು. ಆಡಳಿತವನ್ನು ಸರಳೀಕರಣಗೊಳಿಸಲಾಗಿದ್ದರೂ ಸ್ಥಳೀಯವಾಗಿ ಗೊಂದಲಗಳಿದ್ದರೆ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಇತ್ಯರ್ಥಪಡಿಸಬೇಕು ಎಂದರು.
ಬಡವರಿಗೆ ಉಚಿತ ನಿವೇಶನ ನೀಡುವ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಆದರೆ, ಕೆಲ ಜಿಲ್ಲೆಗಳಲ್ಲಿ ಇನ್ನೂ ಸರ್ಕಾರಿ ಭೂಮಿ ಗುರುತಿಸುವ ಕಾರ್ಯ ಮಂದಗತಿಯಲ್ಲಿದೆ. ಈ ತಿಂಗಳಾಂತ್ಯದ ವೇಳೆಗೆ ನಿವೇಶನ ಸಿದ್ಧಪಡಿಸಲು ಅಗತ್ಯವಿರುವ ಜಾಗವನ್ನು ಸಂಪೂರ್ಣವಾಗಿ ಗುರುತಿಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಅಂತಿಮ ಗಡುವು ನೀಡಿದರು.
ಈ ಉನ್ನತ ಮಟ್ಟದ ಸಭೆಯಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಕಂದಾಯ ಆಯುಕ್ತೆ ಮೀನಾ ನಾಗರಾಜ್ ಹಾಗೂ ಭೂ ಮಾಪನ ಇಲಾಖೆ ಆಯುಕ್ತ ವೆಂಕಟರಾಜ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


