‘ವಂದೇ ಮಾತರಂ’ ಹಾಡದಿದ್ದರೆ ಒಬ್ಬ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಸಂವಿಧಾನಾತ್ಮಕ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸ್ವಾಗತಿಸಿದ್ದಾರೆ.
ಧಾರ್ಮಿಕ ನಂಬಿಕೆ ಅಥವಾ ಆತ್ಮಸಾಕ್ಷಿಯ ಕಾರಣದಿಂದ ಯಾರಾದರೂ ಹಾಡಲು ನಿರಾಕರಿಸಿದರೆ ಅವರನ್ನು ಕ್ರಿಮಿನಲ್ ಕ್ರಮಕ್ಕೆ ಒಳಪಡಿಸಬಾರದು ಎಂಬ ದೇಶದ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯವು ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳು ಎಷ್ಟು ಗಟ್ಟಿಯಾಗಿವೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಬಿಜೆಪಿಯ ನಕಲಿ ದೇಶಭಕ್ತಿಯನ್ನು ಟೀಕಿಸಿರುವ ಅವರು, “ಎಲ್ಲಕ್ಕಿಂತ ಮುಖ್ಯವಾಗಿ ಸುಪ್ರೀಂ ಕೋರ್ಟ್‌ನ ಈ ಆದೇಶದಿಂದಾಗಿ ವಂದೇ ಮಾತರಂ ಸರಿಯಾಗಿ ಹಾಡಲು ಬಾರದ ಬಿಜೆಪಿಗರು ಇದೀಗ ಕನಿಷ್ಠ ಒಂದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು ನನಗಂತೂ ಸಮಾಧಾನ ತಂದಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಎಐಸಿಸಿ ಕಾರ್ಯಕಾರಿ ಸಮಿತಿಯಲ್ಲಿ ಹಾಗೂ ಕರ್ನಾಟಕದ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಹಾಡುವ ನಿರ್ಧಾರವನ್ನು ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ದೇಶಭಕ್ತಿ ಎಂಬುದು ಯಾರನ್ನಾದರೂ ಒಂದು ಹಾಡನ್ನು ಕಡ್ಡಾಯವಾಗಿ ಹಾಡುವಂತೆ ಬಲವಂತವಾಗಿ ಒತ್ತಾಯಿಸುವುದರಲ್ಲಿ ಇಲ್ಲ, ಬದಲಿಗೆ ಸಂವಿಧಾನವನ್ನು, ದೇಶದ ವೈವಿಧ್ಯತೆಯನ್ನು ಗೌರವಿಸುವುದು ಮತ್ತು ಪ್ರತಿಯೊಬ್ಬ ನಾಗರಿಕನ ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ರಕ್ಷಿಸುವುದೇ ನೈಜ ದೇಶಭಕ್ತಿಯಾಗಿದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲೇ ಈ ಕುರಿತು ಸುದೀರ್ಘ ಚರ್ಚೆ ನಡೆಸಿ, ದೇಶದ ಬಹುತ್ವವನ್ನು ಎತ್ತಿಹಿಡಿಯುವ ಮಾರ್ಗವನ್ನು ಹಿರಿಯ ನಾಯಕರು ಕಂಡುಕೊಂಡಿದ್ದರು. ಆದರೆ ಆ ಐತಿಹಾಸಿಕ ಒಮ್ಮತವನ್ನು ಬದಿಗಿಟ್ಟು, ಇಡೀ ಆರು ಚರಣಗಳನ್ನು ಅಧಿಕೃತವಾಗಿ ಹಾಡಿಸುವ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು ಜನರ ಮೇಲೆ ಬಲವಂತವಾಗಿ ಹೇರಲು ಹೊರಟಿದೆ ಎಂದು ಹರಿಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ನಡೆದ ಘಟನೆಯನ್ನು ನೆನಪಿಸಿದ ಹರಿಪ್ರಸಾದ್, ಬಿಜೆಪಿಯವರ ರಾಜಕೀಯ ನಿಲುವಿನ ಅಸ್ಪಷ್ಟತೆ ಮತ್ತು ಬೂಟಾಟಿಕೆಯನ್ನು ಬಹಿರಂಗಪಡಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನು ಹಾಡುವ ನಿರ್ಧಾರವನ್ನು ವಿರೋಧಿಸಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಪೂರ್ಣ ಗೀತೆ ಹಾಡಲು ಮುಂದಾಗಿದ್ದರು.
ಆಡಳಿತ ಪಕ್ಷದ ಸದಸ್ಯರು ಎರಡು ಚರಣಗಳ ನಂತರ ನಿಂತು ಸಂವಿಧಾನದ ಪೀಠಿಕೆಯನ್ನು ಓದಿದಾಗ, ಪ್ರತಿಪಕ್ಷದ ಸದಸ್ಯರು ಪೂರ್ಣ ಹಾಡನ್ನು ಮುಂದುವರಿಸಿದರು. ಆದರೆ, ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡಲೇಬೇಕು ಎಂದು ಸದನದಲ್ಲಿ ರಾದ್ಧಾಂತ ಮಾಡಿದ ಬಿಜೆಪಿಯವರಿಗೆ ಹಾಡಿನ ಸಂಪೂರ್ಣ ಸಾಹಿತ್ಯವೇ ಬಾಯಿಪಾಠವಿರಲಿಲ್ಲ. ಕೈಯಲ್ಲಿ ಮುದ್ರಿತ ಪ್ರತಿಗಳನ್ನು ಹಿಡಿದು, ನಾಲಗೆಯೂ ಹೊರಳದೆ ತಪ್ಪು ತಪ್ಪಾಗಿ ಹಾಡಿದರು. ವಂದೇ ಮಾತರಂ ಅನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಮೆರೆಯುವ ಬಿಜೆಪಿಗೆ ಅದೇ ಹಾಡನ್ನು ಸರಿಯಾಗಿ ಹಾಡಲು ಬಾರದಿರುವುದಕ್ಕಿಂತ ದೊಡ್ಡ ರಾಜಕೀಯ ವೈರುಧ್ಯ ಮತ್ತೊಂದಿಲ್ಲ ಎಂದು ಅವರು ತಿವಿದಿದ್ದಾರೆ.


