HomeಅಂಕಣಗಳುSIRSIR ಏಕಪಕ್ಷೀಯ ತೀರ್ಮಾನ ಖಂಡಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಿರುದ್ಧ ಸಿಡಿದೆದ್ದ...

SIR ಏಕಪಕ್ಷೀಯ ತೀರ್ಮಾನ ಖಂಡಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು

- Advertisement -
- Advertisement -

ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದ (ECI) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರಿ ಸ್ವರೂಪದ ಬಿರುಕು ಮೂಡಿದೆ. ಎಸ್‌ಐಆರ್ (Special Intensive Revision – SIR / ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ಕುರಿತು ತಮಗೆ ಯಾವುದೇ ಮಾಹಿತಿ ನೀಡದೆ, ಕತ್ತಲಲ್ಲಿಟ್ಟು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಇಬ್ಬರು ಚುನಾವಣಾ ಆಯುಕ್ತರು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಬಹಿರಂಗವಾಗಿಯೇ ಸಿಡಿದೆದ್ದಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರ (CEC) ಈ ಧೋರಣೆಯನ್ನು ಖಂಡಿಸಿ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕಳೆದ 10 ತಿಂಗಳಲ್ಲಿ ಬರೋಬ್ಬರಿ 14 ಬಾರಿ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದು, ಒಂದೇ ದಿನದಲ್ಲಿ ನಾಲ್ಕು ಬಾರಿ ತಮ್ಮ ವಿರೋಧ ದಾಖಲಿಸಿದ್ದಾರೆ ಎಂಬ ಆಘಾತಕಾರಿ ಸತ್ಯವನ್ನು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಹಿರಿಯ ಪತ್ರಕರ್ತೆ ರಿತಿಕಾ ಚೋಪ್ರಾ ತಮ್ಮ ವಿಶೇಷ ತನಿಖಾ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.

ಜೂನ್ 2025ರಲ್ಲಿ ಬಿಹಾರದಿಂದ ಆರಂಭವಾದ ಈ ಎಸ್‌ಐಆರ್ ಪ್ರಕ್ರಿಯೆಯಲ್ಲಿ ದೇಶದ 30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 13 ಕೋಟಿಗೂ ಹೆಚ್ಚು ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ತೆರವುಗೊಳಿಸಲಾಗಿತ್ತು. ಯಾರನ್ನು ಪಟ್ಟಿಯಲ್ಲಿಡಬೇಕು ಮತ್ತು ಯಾರನ್ನು ಹೊರಹಾಕಬೇಕು ಎಂಬಿತ್ಯಾದಿ ನಿರ್ಧಾರಗಳು ತೀವ್ರ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ, ಆಯೋಗದ ಒಳಗಿರುವ ಮೂವರ ಪೈಕಿ ಇಬ್ಬರು ಆಯುಕ್ತರು ಈ ನಿರ್ಧಾರಗಳನ್ನೇ ಪ್ರಶ್ನಿಸಿದ್ದಾರೆ. ಹೊಸ ಮತದಾರರ ಸೇರ್ಪಡೆ, ಸಾಫ್ಟ್‌ವೇರ್ ನಿಯಂತ್ರಣ, ದತ್ತಾಂಶದ ಭದ್ರತೆ ಹಾಗೂ ಹೆಸರು ಅಳಿಸುವಿಕೆಯಂತಹ ಪ್ರಮುಖ ವಿಚಾರಗಳಲ್ಲಿ ತಮ್ಮ ಒಪ್ಪಿಗೆಯಿಲ್ಲದೆ ಅನಧಿಕೃತವಾಗಿ ನಿರ್ಧಾರಗಳನ್ನು ಜಾರಿಗೊಳಿಸಲಾಗಿದೆ ಎಂದು ಸಂಧು ಮತ್ತು ಜೋಶಿ ಆರೋಪಿಸಿದ್ದು, ಪರಿಸ್ಥಿತಿ ಮಿತಿಮೀರಿದಾಗ ನೇರವಾಗಿ ಕ್ಯಾಬಿನೆಟ್ ಕಾರ್ಯದರ್ಶಿಗೂ ದೂರು ನೀಡಿದ್ದಾರೆ.

ಆಯುಕ್ತರು ಪ್ರಮುಖವಾಗಿ ನಾಲ್ಕು ಗಂಭೀರ ಅಕ್ರಮಗಳನ್ನು ಬೆಟ್ಟು ಮಾಡಿದ್ದಾರೆ. ಮೊದಲನೆಯದಾಗಿ, ಮತದಾರರ ಸೇರ್ಪಡೆಯ ‘ನಮೂನೆ 6’ (Form-6) ಅರ್ಜಿಯಲ್ಲಿ ಸಂವಿಧಾನಾತ್ಮಕ ನಿಯಮಗಳಿಗೆ ತಿದ್ದುಪಡಿ ತರದೆ “ಪೋಷಕರ ಅಥವಾ ಅಜ್ಜ-ಅಜ್ಜಿಯರ ಹೆಸರು ಎಸ್‌ಐಆರ್ ಪಟ್ಟಿಯಲ್ಲಿತ್ತೇ?” ಎಂಬ ಪ್ರಶ್ನೆಯನ್ನು ಕಡ್ಡಾಯಗೊಳಿಸಿ ಸೇರಿಸಿರುವುದು ಸಂಪೂರ್ಣ ಬೇಜವಾಬ್ದಾರಿ ಹಾಗೂ ಕಾನೂನುಬಾಹಿರ ಎಂದು ವಿವೇಕ್ ಜೋಶಿ ಮೇ ತಿಂಗಳಿನಲ್ಲೇ ಎಚ್ಚರಿಸಿದ್ದರೂ ಆಗಸ್ಟ್ 13ರವರೆಗೂ ಅದನ್ನು ಮುಂದುವರಿಸಲಾಗಿತ್ತು. ಎರಡನೆಯದಾಗಿ, ಕ್ಷೇತ್ರ ಮಟ್ಟದ ಶಾಸನಬದ್ಧ ಅಧಿಕಾರಿಯಾದ ERO ನಿರ್ವಹಿಸಬೇಕಾದ ERONet ದತ್ತಾಂಶವನ್ನು ದೆಹಲಿಯಿಂದಲೇ ಸಂಪೂರ್ಣವಾಗಿ ನಿಯಂತ್ರಿಸುವ (Centralisation) ಪ್ರಯತ್ನ ನಡೆದಿದ್ದು, ಯಾವುದೇ ಶಾಸನಬದ್ಧ ಅಧಿಕಾರವಿಲ್ಲದ ದೆಹಲಿಯ ಐಟಿ ವಿಭಾಗದ ಮಹಾನಿರ್ದೇಶಕಿ ಸೀಮಾ ಖನ್ನಾ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮೂರನೆಯದಾಗಿ, ಪಶ್ಚಿಮ ಬಂಗಾಳದಲ್ಲಿ ಸುಪ್ರೀಂ ಕೋರ್ಟ್ ಸೂಚನೆಯಂತೆ ನ್ಯಾಯಾಂಗ ಅಧಿಕಾರಿಗಳು ಪರಿಶೀಲಿಸಿ ಪಟ್ಟಿಗೆ ಸೇರಿಸಿದ್ದ ಲಕ್ಷಾಂತರ ಮತದಾರರ ವಿರುದ್ಧವೇ ಚುನಾವಣಾ ಆಯೋಗ ಮೇಲ್ಮನವಿ ಪ್ರಾಧಿಕಾರಕ್ಕೆ (Tribunals) ಅರ್ಜಿ ಸಲ್ಲಿಸಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿಗಾಗಲಿ ಅಥವಾ ಇಬ್ಬರು ಆಯುಕ್ತರಿಗಾಗಲಿ ತಿಳಿಸದೆ ಈ ರೀತಿ ಆಯೋಗದ ಹೆಸರಿನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿದವರು ಯಾರು ಎಂದು ಸಂಧು ಪ್ರಶ್ನಿಸಿದ್ದಾರೆ. ನಾಲ್ಕನೆಯದಾಗಿ, ಗೋವಾದಲ್ಲಿ ತಾಂತ್ರಿಕ ದೋಷದಿಂದ ಕೈಬಿಡಲಾಗಿದ್ದ 97 ಅರ್ಹ ಮತದಾರರನ್ನು ಮತ್ತೆ ಸೇರಿಸಲು ಸ್ಥಳೀಯ ERO ಅಧಿಕಾರಿಗಳು ನಿರ್ಧರಿಸಿದ್ದರೂ, ಸಾಫ್ಟ್‌ವೇರ್‌ನ ಕೇಂದ್ರೀಕರಣದ ದುಷ್ಟತನದಿಂದಾಗಿ ಅವರಿಗೆ ಮತದಾನದ ಹಕ್ಕೇ ಸಿಗದಂತೆ ಮಾಡಲಾಗಿದೆ. ಗೋವಾ ಸಿಇಒ 8 ಬಾರಿ ದೆಹಲಿಗೆ ಪತ್ರ ಬರೆದರೂ ಐಟಿ ವಿಭಾಗ ಸ್ಪಂದಿಸದೆ ಪ್ರಜಾಪ್ರಭುತ್ವದ ಮೌಲ್ಯವನ್ನೇ ಗಾಳಿಗೆ ತೂರಿದೆ.

ಸಂವಿಧಾನದ 324ನೇ ವಿಧಿ ಮತ್ತು 2023ರ ಚುನಾವಣಾ ಆಯುಕ್ತರ ಕಾಯ್ದೆಯ (ಸೆಕ್ಷನ್ 18) ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರು (CEC) ಕೇವಲ ‘ಸಮಾನರಲ್ಲಿ ಮೊದಲಿಗರು’ (First among equals) ಮಾತ್ರವೇ ಹೊರತು ಏಕಾಂಗಿಯಾಗಿ ತೀರ್ಮಾನ ತೆಗೆದುಕೊಳ್ಳುವ ಸರ್ವಾಧಿಕಾರಿಯಲ್ಲ. ಆಯೋಗದ ನಿರ್ಧಾರಗಳು ಸರ್ವಾನುಮತದಿಂದ ಅಥವಾ ಬಹುಮತದ ಆಧಾರದ ಮೇಲೆ ನಡೆಯಬೇಕು. ಆದರೆ, ಮೂವರಲ್ಲಿ ಇಬ್ಬರು ಆಯುಕ್ತರು ತೀವ್ರವಾಗಿ ವಿರೋಧಿಸುತ್ತಿದ್ದರೂ ಸಿಇಸಿ ಕಚೇರಿಯಿಂದ ಏಕಪಕ್ಷೀಯವಾಗಿ ಆದೇಶಗಳು ಹೊರಬೀಳುತ್ತಿರುವುದು ಆತಂಕಕಾರಿಯಾಗಿದೆ.

ಹಾಲಿ ಇರುವ ಮೂವರೂ ಆಯುಕ್ತರನ್ನು ಎನ್‌ಡಿಎ ಸರ್ಕಾರವೇ ನೇಮಿಸಿದ್ದು, ಸಿಇಸಿ ಗ್ಯಾನೇಶ್ ಕುಮಾರ್ ಮತ್ತು ಜೋಶಿ ನೇಮಕದ ವೇಳೆಯೂ ವಿಪಕ್ಷ ನಾಯಕರಾದ ಅಧೀರ್ ರಂಜನ್ ಚೌಧರಿ ಹಾಗೂ ರಾಹುಲ್ ಗಾಂಧಿ ಅಸಮ್ಮತಿ (Dissent) ದಾಖಲಿಸಿದ್ದರು. ಮಾಧ್ಯಮಗಳ ಪ್ರಶ್ನೆಗೆ ಆಯೋಗ ಹಾಗೂ ಆಯುಕ್ತರು ಯಾವುದೇ ಅಧಿಕೃತ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದು, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕಾದ ಆಯೋಗದ ಘನತೆ ಹಾಗೂ ಪಾರದರ್ಶಕತೆಗೇ ಧಕ್ಕೆ ತಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BWSSB ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ: ಜಲಮಂಡಳಿ ಗುತ್ತಿಗೆ ಕಾರ್ಮಿಕರ ಸರಣಿ ಸಾವಿಗೆ ಆಕ್ರೋಶ, ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅಹೋರಾತ್ರಿ ಸುಗಮವಾಗಿ ನಿರ್ವಹಿಸುವ BWSSB ಜಲಮಂಡಳಿಯ ಸಾವಿರಾರು ಗುತ್ತಿಗೆ ಕಾರ್ಮಿಕರು ತಮ್ಮ ಜೀವಭದ್ರತೆ ಹಾಗೂ ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸಿ ಇಂದು (ಸೆಪ್ಟೆಂಬರ್ 23)...

ಕೋಲ್ಕತ್ತಾ: ಟಿಎಂಸಿ ಐಟಿ ಸೆಲ್ ಮುಖ್ಯಸ್ಥೆ ಉಪಾಸನಾ ಚೌಧರಿ ಮನೆ ಮೇಲೆ ಕಲ್ಲುತೂರಾಟ, ಮಾಜಿ ಶಾಸಕ ಹುಮಾಯೂನ್ ಕಬೀರ್ ಮೇಲೂ ಹಲ್ಲೆ!

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಮುಕುಂದಪುರದಲ್ಲಿ ಮಂಗಳವಾರ (ಸೆ. 22) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ ನಡೆದಿದೆ. ಘಟನೆಯಲ್ಲಿ ಟಿಎಂಸಿ ಐಟಿ ಸೆಲ್ ಮುಖ್ಯಸ್ಥೆ ಹಾಗೂ ವಕ್ತಾರೆ...

‘ವಂದೇ ಮಾತರಂ’ ಹಾಡಲು ಬಾರದ ಬಿಜೆಪಿಗರಿಗೆ ಕೋರ್ಟ್ ಆದೇಶ ನೆಮ್ಮದಿ ತಂದಿದೆ: ಬಿ.ಕೆ. ಹರಿಪ್ರಸಾದ್ ವ್ಯಂಗ್ಯ

'ವಂದೇ ಮಾತರಂ' ಹಾಡದಿದ್ದರೆ ಒಬ್ಬ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಸಂವಿಧಾನಾತ್ಮಕ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸ್ವಾಗತಿಸಿದ್ದಾರೆ. ಧಾರ್ಮಿಕ...

ರಾಯಚೂರು ದಲಿತ ದೌರ್ಜನ್ಯ: ಪ್ರಕರಣಗಳನ್ನು CIDಗೆ ಒಪ್ಪಿಸುವಂತೆ ಆಗ್ರಹಿಸಿ ಗೃಹ ಸಚಿವರನ್ನು ಭೇಟಿಯಾದ ನಿಯೋಗ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ದಲಿತರ ಮೇಲೆ ಸಾಲು ಸಾಲು ದೌರ್ಜನ್ಯ, ಕೊಲೆ ಹಾಗೂ ಅತ್ಯಾಚಾರದಂತಹ ಭೀಕರ ಕೃತ್ಯಗಳು ಹೆಚ್ಚಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಿ, ದಲಿತ ಹಕ್ಕುಗಳ ಹೋರಾಟಗಾರರ ಹಾಗೂ ಪ್ರಮುಖ ಮುಖಂಡರ ನಿಯೋಗವು ಗೃಹ...

ಶಾರ್ಜೀಲ್ ಇಮಾಮ್‌ಗೆ 7 ದಿನಗಳ ಮಧ್ಯಂತರ ಜಾಮೀನು ಮಂಜೂರು

ವಿದ್ಯಾರ್ಥಿ ಹೋರಾಟಗಾರ ಶಾರ್ಜೀಲ್ ಇಮಾಮ್‌ಗೆ ಅವರ ಸೋದರಸಂಬಂಧಿಯ ಮದುವೆಯಲ್ಲಿ ಪಾಲ್ಗೊಳ್ಳಲು ದೆಹಲಿ ನ್ಯಾಯಾಲಯವು ಏಳು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಜಾಮೀನು ಅಕ್ಟೋಬರ್ 4 ರಿಂದ ಅಕ್ಟೋಬರ್ 10 ರವರೆಗೆ ಇರಲಿದೆ...

ಎಬಿವಿಪಿ ಒತ್ತಡಕ್ಕೆ ಮುಸ್ಲಿಂ ಪ್ರಾಧ್ಯಾಪಕಿ ರಾಜೀನಾಮೆ; ಕಾಲೇಜು ಆವರಣ ‘ಶುದ್ಧೀಕರಣ’ ಮಾಡಿದ ಬಲಪಂಥೀಯ ಗುಂಪು

ಕೋಲ್ಕತ್ತಾದ ಸುರೇಂದ್ರನಾಥ ಕಾಲೇಜಿನ ಮುಸ್ಲಿಂ ಪ್ರಾಧ್ಯಾಪಕಿ ಮೊಹಮ್ಮದಿ ತರನ್ನುಮ್ ಅವರನ್ನು ಹಾಜರಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 11ರಂದು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ. ಇದಾದ ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು...

SIR ಪರಿಶೋಧ ಹಾಗೂ ಪ್ರತಿರೋಧ ಪ್ರವಾಸಕ್ಕೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಚಾಲನೆ: ಸಿಪಿಐ(ಎಂ) ಬೆಂಬಲ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 'SIR ವಿರೋಧಿ ಕರ್ನಾಟಕ', ನಾಗರಿಕ ಮತಕಾವಲು ಸಮಿತಿ, ಜಾತ್ಯತೀತ ಪಕ್ಷಗಳು ಹಾಗೂ ವಿವಿಧ ನಾಗರಿಕ ಸಂಘಟನೆಗಳ...

ಪಶ್ಚಿಮ ಬಂಗಾಳ: ಸರ್ಕಾರದ ಜೊತೆ ಇರಬೇಕಾದರೆ ಎಲೆಕ್ಷನ್ ‘ಟೆಸ್ಟ್’ನಲ್ಲಿ ಗೆಲ್ಲಿ, ಮುಸ್ಲಿಮರಿಗೆ ಸುವೇಂದು ಅಧಿಕಾರಿ ಎಚ್ಚರಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಮತ್ತು ರೆಜಿನಗರ ಕ್ಷೇತ್ರಗಳ ಮುಂಬರುವ ಉಪಚುನಾವಣೆಯನ್ನು ಅಲ್ಪಸಂಖ್ಯಾತರಿಗೆ ಒಂದು ‘ಪರೀಕ್ಷೆ’ ಎಂದು ಕರೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹಾಗೂ ಕಳವಳಕ್ಕೆ ಕಾರಣವಾಗಿದೆ....

ಮಹಿಳೆಯರ ಮೇಲಿನ ದಾಳಿಗಳು ಮತ್ತಷ್ಟು ಹಿಂಸಾತ್ಮಕವಾಗುತ್ತಿವೆ: ಪ್ರಿಯಾಂಕಾ ಗಾಂಧಿ

ದೆಹಲಿ ಮತ್ತು ಬಿಹಾರದಲ್ಲಿ ಮಹಿಳೆಯರ ಮೇಲೆ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಳವಳ ವ್ಯಕ್ತಪಡಿಸಿದ್ದು, ಇಂತಹ ದಾಳಿಗಳು ಹೆಚ್ಚಾಗುತ್ತಿರುವುದು ಮಾತ್ರವಲ್ಲದೆ ಇನ್ನಷ್ಟು ಹಿಂಸಾತ್ಮಕವಾಗುತ್ತಿವೆ...

ಜಮುಯಿ ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣ: ಎನ್‌ಕೌಂಟರ್ ಬಳಿಕ ಪ್ರಮುಖ ಆರೋಪಿ ನಂದನ್ ಯಾದವ್ ಬಂಧನ; 7 ಮಂದಿಯಲ್ಲಿ 5 ಮಂದಿ ವಶಕ್ಕೆ

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಕೋಚಿಂಗ್‌ ತರಗತಿಯಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಬಾಲಕಿ ಮತ್ತು ಬಾಲಕನನ್ನು ತಡೆದು ಹಲ್ಲೆ ಮಾಡಿ, ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ....