ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದ (ECI) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರಿ ಸ್ವರೂಪದ ಬಿರುಕು ಮೂಡಿದೆ. ಎಸ್ಐಆರ್ (Special Intensive Revision – SIR / ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ಕುರಿತು ತಮಗೆ ಯಾವುದೇ ಮಾಹಿತಿ ನೀಡದೆ, ಕತ್ತಲಲ್ಲಿಟ್ಟು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಇಬ್ಬರು ಚುನಾವಣಾ ಆಯುಕ್ತರು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಬಹಿರಂಗವಾಗಿಯೇ ಸಿಡಿದೆದ್ದಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ (CEC) ಈ ಧೋರಣೆಯನ್ನು ಖಂಡಿಸಿ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕಳೆದ 10 ತಿಂಗಳಲ್ಲಿ ಬರೋಬ್ಬರಿ 14 ಬಾರಿ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದು, ಒಂದೇ ದಿನದಲ್ಲಿ ನಾಲ್ಕು ಬಾರಿ ತಮ್ಮ ವಿರೋಧ ದಾಖಲಿಸಿದ್ದಾರೆ ಎಂಬ ಆಘಾತಕಾರಿ ಸತ್ಯವನ್ನು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯ ಹಿರಿಯ ಪತ್ರಕರ್ತೆ ರಿತಿಕಾ ಚೋಪ್ರಾ ತಮ್ಮ ವಿಶೇಷ ತನಿಖಾ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.
ಜೂನ್ 2025ರಲ್ಲಿ ಬಿಹಾರದಿಂದ ಆರಂಭವಾದ ಈ ಎಸ್ಐಆರ್ ಪ್ರಕ್ರಿಯೆಯಲ್ಲಿ ದೇಶದ 30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 13 ಕೋಟಿಗೂ ಹೆಚ್ಚು ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ತೆರವುಗೊಳಿಸಲಾಗಿತ್ತು. ಯಾರನ್ನು ಪಟ್ಟಿಯಲ್ಲಿಡಬೇಕು ಮತ್ತು ಯಾರನ್ನು ಹೊರಹಾಕಬೇಕು ಎಂಬಿತ್ಯಾದಿ ನಿರ್ಧಾರಗಳು ತೀವ್ರ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ, ಆಯೋಗದ ಒಳಗಿರುವ ಮೂವರ ಪೈಕಿ ಇಬ್ಬರು ಆಯುಕ್ತರು ಈ ನಿರ್ಧಾರಗಳನ್ನೇ ಪ್ರಶ್ನಿಸಿದ್ದಾರೆ. ಹೊಸ ಮತದಾರರ ಸೇರ್ಪಡೆ, ಸಾಫ್ಟ್ವೇರ್ ನಿಯಂತ್ರಣ, ದತ್ತಾಂಶದ ಭದ್ರತೆ ಹಾಗೂ ಹೆಸರು ಅಳಿಸುವಿಕೆಯಂತಹ ಪ್ರಮುಖ ವಿಚಾರಗಳಲ್ಲಿ ತಮ್ಮ ಒಪ್ಪಿಗೆಯಿಲ್ಲದೆ ಅನಧಿಕೃತವಾಗಿ ನಿರ್ಧಾರಗಳನ್ನು ಜಾರಿಗೊಳಿಸಲಾಗಿದೆ ಎಂದು ಸಂಧು ಮತ್ತು ಜೋಶಿ ಆರೋಪಿಸಿದ್ದು, ಪರಿಸ್ಥಿತಿ ಮಿತಿಮೀರಿದಾಗ ನೇರವಾಗಿ ಕ್ಯಾಬಿನೆಟ್ ಕಾರ್ಯದರ್ಶಿಗೂ ದೂರು ನೀಡಿದ್ದಾರೆ.
ಆಯುಕ್ತರು ಪ್ರಮುಖವಾಗಿ ನಾಲ್ಕು ಗಂಭೀರ ಅಕ್ರಮಗಳನ್ನು ಬೆಟ್ಟು ಮಾಡಿದ್ದಾರೆ. ಮೊದಲನೆಯದಾಗಿ, ಮತದಾರರ ಸೇರ್ಪಡೆಯ ‘ನಮೂನೆ 6’ (Form-6) ಅರ್ಜಿಯಲ್ಲಿ ಸಂವಿಧಾನಾತ್ಮಕ ನಿಯಮಗಳಿಗೆ ತಿದ್ದುಪಡಿ ತರದೆ “ಪೋಷಕರ ಅಥವಾ ಅಜ್ಜ-ಅಜ್ಜಿಯರ ಹೆಸರು ಎಸ್ಐಆರ್ ಪಟ್ಟಿಯಲ್ಲಿತ್ತೇ?” ಎಂಬ ಪ್ರಶ್ನೆಯನ್ನು ಕಡ್ಡಾಯಗೊಳಿಸಿ ಸೇರಿಸಿರುವುದು ಸಂಪೂರ್ಣ ಬೇಜವಾಬ್ದಾರಿ ಹಾಗೂ ಕಾನೂನುಬಾಹಿರ ಎಂದು ವಿವೇಕ್ ಜೋಶಿ ಮೇ ತಿಂಗಳಿನಲ್ಲೇ ಎಚ್ಚರಿಸಿದ್ದರೂ ಆಗಸ್ಟ್ 13ರವರೆಗೂ ಅದನ್ನು ಮುಂದುವರಿಸಲಾಗಿತ್ತು. ಎರಡನೆಯದಾಗಿ, ಕ್ಷೇತ್ರ ಮಟ್ಟದ ಶಾಸನಬದ್ಧ ಅಧಿಕಾರಿಯಾದ ERO ನಿರ್ವಹಿಸಬೇಕಾದ ERONet ದತ್ತಾಂಶವನ್ನು ದೆಹಲಿಯಿಂದಲೇ ಸಂಪೂರ್ಣವಾಗಿ ನಿಯಂತ್ರಿಸುವ (Centralisation) ಪ್ರಯತ್ನ ನಡೆದಿದ್ದು, ಯಾವುದೇ ಶಾಸನಬದ್ಧ ಅಧಿಕಾರವಿಲ್ಲದ ದೆಹಲಿಯ ಐಟಿ ವಿಭಾಗದ ಮಹಾನಿರ್ದೇಶಕಿ ಸೀಮಾ ಖನ್ನಾ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮೂರನೆಯದಾಗಿ, ಪಶ್ಚಿಮ ಬಂಗಾಳದಲ್ಲಿ ಸುಪ್ರೀಂ ಕೋರ್ಟ್ ಸೂಚನೆಯಂತೆ ನ್ಯಾಯಾಂಗ ಅಧಿಕಾರಿಗಳು ಪರಿಶೀಲಿಸಿ ಪಟ್ಟಿಗೆ ಸೇರಿಸಿದ್ದ ಲಕ್ಷಾಂತರ ಮತದಾರರ ವಿರುದ್ಧವೇ ಚುನಾವಣಾ ಆಯೋಗ ಮೇಲ್ಮನವಿ ಪ್ರಾಧಿಕಾರಕ್ಕೆ (Tribunals) ಅರ್ಜಿ ಸಲ್ಲಿಸಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿಗಾಗಲಿ ಅಥವಾ ಇಬ್ಬರು ಆಯುಕ್ತರಿಗಾಗಲಿ ತಿಳಿಸದೆ ಈ ರೀತಿ ಆಯೋಗದ ಹೆಸರಿನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿದವರು ಯಾರು ಎಂದು ಸಂಧು ಪ್ರಶ್ನಿಸಿದ್ದಾರೆ. ನಾಲ್ಕನೆಯದಾಗಿ, ಗೋವಾದಲ್ಲಿ ತಾಂತ್ರಿಕ ದೋಷದಿಂದ ಕೈಬಿಡಲಾಗಿದ್ದ 97 ಅರ್ಹ ಮತದಾರರನ್ನು ಮತ್ತೆ ಸೇರಿಸಲು ಸ್ಥಳೀಯ ERO ಅಧಿಕಾರಿಗಳು ನಿರ್ಧರಿಸಿದ್ದರೂ, ಸಾಫ್ಟ್ವೇರ್ನ ಕೇಂದ್ರೀಕರಣದ ದುಷ್ಟತನದಿಂದಾಗಿ ಅವರಿಗೆ ಮತದಾನದ ಹಕ್ಕೇ ಸಿಗದಂತೆ ಮಾಡಲಾಗಿದೆ. ಗೋವಾ ಸಿಇಒ 8 ಬಾರಿ ದೆಹಲಿಗೆ ಪತ್ರ ಬರೆದರೂ ಐಟಿ ವಿಭಾಗ ಸ್ಪಂದಿಸದೆ ಪ್ರಜಾಪ್ರಭುತ್ವದ ಮೌಲ್ಯವನ್ನೇ ಗಾಳಿಗೆ ತೂರಿದೆ.
ಸಂವಿಧಾನದ 324ನೇ ವಿಧಿ ಮತ್ತು 2023ರ ಚುನಾವಣಾ ಆಯುಕ್ತರ ಕಾಯ್ದೆಯ (ಸೆಕ್ಷನ್ 18) ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರು (CEC) ಕೇವಲ ‘ಸಮಾನರಲ್ಲಿ ಮೊದಲಿಗರು’ (First among equals) ಮಾತ್ರವೇ ಹೊರತು ಏಕಾಂಗಿಯಾಗಿ ತೀರ್ಮಾನ ತೆಗೆದುಕೊಳ್ಳುವ ಸರ್ವಾಧಿಕಾರಿಯಲ್ಲ. ಆಯೋಗದ ನಿರ್ಧಾರಗಳು ಸರ್ವಾನುಮತದಿಂದ ಅಥವಾ ಬಹುಮತದ ಆಧಾರದ ಮೇಲೆ ನಡೆಯಬೇಕು. ಆದರೆ, ಮೂವರಲ್ಲಿ ಇಬ್ಬರು ಆಯುಕ್ತರು ತೀವ್ರವಾಗಿ ವಿರೋಧಿಸುತ್ತಿದ್ದರೂ ಸಿಇಸಿ ಕಚೇರಿಯಿಂದ ಏಕಪಕ್ಷೀಯವಾಗಿ ಆದೇಶಗಳು ಹೊರಬೀಳುತ್ತಿರುವುದು ಆತಂಕಕಾರಿಯಾಗಿದೆ.
ಹಾಲಿ ಇರುವ ಮೂವರೂ ಆಯುಕ್ತರನ್ನು ಎನ್ಡಿಎ ಸರ್ಕಾರವೇ ನೇಮಿಸಿದ್ದು, ಸಿಇಸಿ ಗ್ಯಾನೇಶ್ ಕುಮಾರ್ ಮತ್ತು ಜೋಶಿ ನೇಮಕದ ವೇಳೆಯೂ ವಿಪಕ್ಷ ನಾಯಕರಾದ ಅಧೀರ್ ರಂಜನ್ ಚೌಧರಿ ಹಾಗೂ ರಾಹುಲ್ ಗಾಂಧಿ ಅಸಮ್ಮತಿ (Dissent) ದಾಖಲಿಸಿದ್ದರು. ಮಾಧ್ಯಮಗಳ ಪ್ರಶ್ನೆಗೆ ಆಯೋಗ ಹಾಗೂ ಆಯುಕ್ತರು ಯಾವುದೇ ಅಧಿಕೃತ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದು, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕಾದ ಆಯೋಗದ ಘನತೆ ಹಾಗೂ ಪಾರದರ್ಶಕತೆಗೇ ಧಕ್ಕೆ ತಂದಿದೆ.


