ಬೆಂಗಳೂರು ನಗರದ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅಹೋರಾತ್ರಿ ಸುಗಮವಾಗಿ ನಿರ್ವಹಿಸುವ BWSSB ಜಲಮಂಡಳಿಯ ಸಾವಿರಾರು ಗುತ್ತಿಗೆ ಕಾರ್ಮಿಕರು ತಮ್ಮ ಜೀವಭದ್ರತೆ ಹಾಗೂ ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸಿ ಇಂದು (ಸೆಪ್ಟೆಂಬರ್ 23) ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

‘BWSSB ಗುತ್ತಿಗೆ ಕಾರ್ಮಿಕರ ಸಂಘ (ರಿ)’ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು, “ಜಲಮಂಡಳಿಗೆ ಗುತ್ತಿಗೆ ಕಾರ್ಮಿಕರ ದುಡಿಮೆ ಬೇಕು, ಆದರೆ ಗುತ್ತಿಗೆ ಕಾರ್ಮಿಕರ ಬದುಕು ಬೇಡವೇ?” ಎಂದು ಜಲಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರ, ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗುಣಿ, ತಿಪ್ಪಗೊಂಡನಹಳ್ಳಿ, ಎಸ್‌ಟಿಪಿ, ಡಬ್ಲ್ಯೂಟಿಪಿ, ಸಬ್‌ಲೈನ್, ಪಂಪ್‌ಹೌಸ್ ಸೇರಿದಂತೆ ವಿವಿಧ ಭಾಗಗಳಲ್ಲಿ ಸ್ಯಾನಿಟರಿ ವರ್ಕರ್ಸ್, ಡ್ರೈವರ್ಸ್, ಡೇಟಾ ಎಂಟ್ರಿ ಆಪರೇಟರ್ಸ್, ವಾಲ್ವ್‌ಮ್ಯಾನ್, ಹೆಲ್ಪರ್ಸ್, ಎಟಿಎಂ ಆಪರೇಟರ್ಸ್ ಹಾಗೂ ಸೆಕ್ಯುರಿಟಿ ಸಿಬ್ಬಂದಿಯಾಗಿ ಸುಮಾರು 4,100ಕ್ಕೂ ಹೆಚ್ಚು ಕಾರ್ಮಿಕರು ಕಳೆದ 25 ವರ್ಷಗಳಿಂದಲೂ ಹೊರಗುತ್ತಿಗೆ ಆಧಾರದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ದಶಕಗಳಿಂದ ಶಾಶ್ವತ ಸ್ವರೂಪದ ಕೆಲಸ ಮಾಡುತ್ತಿದ್ದರೂ, ಅವರನ್ನು ಕಾಯಂಗೊಳಿಸದೆ ಗುತ್ತಿಗೆ ವ್ಯವಸ್ಥೆಯಲ್ಲೇ ಉಳಿಸಿಕೊಂಡು ಉದ್ಯೋಗ ಅಭದ್ರತೆ, ವೇತನ ಅನ್ಯಾಯ ಹಾಗೂ ಸುರಕ್ಷತಾ ಕೊರತೆಯಿಂದ ಶೋಷಿಸಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಇತ್ತೀಚೆಗೆ ಆರ್‌ಟಿ ನಗರದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 52 ವರ್ಷದ ವಾಲ್ವ್‌ಮ್ಯಾನ್ ಸುಧೀರ್ ಅವರು ಕೆಲಸದ ವೇಳೆ ಸಂಭವಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಹಾಗೆಯೇ ಬೆಳ್ಳಂದೂರಿನ ಎಸ್‌ಟಿಪಿ (STP) ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಈ ಸರಣಿ ಸಾವುಗಳು ಜಲಮಂಡಳಿಯಲ್ಲಿ ಕಾರ್ಮಿಕರ ಸುರಕ್ಷತೆ ಎಷ್ಟರಮಟ್ಟಿಗೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬುದನ್ನು ಎತ್ತಿಹಿಡಿದಿವೆ. “ಕೆಲಸದ ವೇಳೆ ಕಾರ್ಮಿಕನ ಜೀವಕ್ಕೆ ರಕ್ಷಣೆ ನೀಡುವ ಜವಾಬ್ದಾರಿ ಯಾರದ್ದು? ಅಪಘಾತದ ನಂತರ ಕೇವಲ ಪರಿಹಾರ ನೀಡುವುದು ಸಾಲದು, ಸುರಕ್ಷತಾ ಕ್ರಮಗಳನ್ನು ಕಡೆಗಣಿಸಿದ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸಬೇಕು” ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರ ಮುಂದೆ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಈ ಹೋರಾಟ ಅನಿವಾರ್ಯವಾಗಿದೆ. ಕಾರ್ಮಿಕರ ಶ್ರಮವನ್ನು ಬಳಸಿಕೊಂಡು ಬದುಕಿನ ಹಕ್ಕನ್ನು ಕಸಿಯುವ ನೀತಿ ತಕ್ಷಣ ಕೊನೆಗೊಳ್ಳಬೇಕು; ಸುರಕ್ಷಿತ ಕೆಲಸ, ಸಾಮಾಜಿಕ ಭದ್ರತೆ ಹಾಗೂ ನ್ಯಾಯಯುತ ವೇತನ ಖಾತರಿಯಾಗದಿದ್ದರೆ ಹೋರಾಟ ಮತ್ತಷ್ಟು ಉಗ್ರರೂಪ ಪಡೆಯಲಿದೆ ಎಂದು ಸಂಘಟನೆಯ ನಾಯಕರು ಎಚ್ಚರಿಸಿದ್ದಾರೆ. ಹೋರಾಟದ ನೇತೃತ್ವವನ್ನು ಕೆವಿ ಭಟ್, ನೂರ್ ಶ್ರೀಧರ್, ರವಿ ಮೋಹನ್, ಸುಷ್ಮಾ ವರ್ಮ, ವರದರಾಜೇಂದ್ರ ವಹಿಸಿದ್ದರು.
ಪ್ರತಿಭಟನಾ ನಿರತ BWSSB ಗುತ್ತಿಗೆ ನೌಕರರ ಪ್ರಮುಖ ಬೇಡಿಕೆಗಳು:
- ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ಪದ್ಧತಿಯನ್ನು ತಕ್ಷಣ ರದ್ದುಪಡಿಸಿ, ಪೌರಕಾರ್ಮಿಕರ ಮಾದರಿಯಲ್ಲಿ ‘ನೇರ ವೇತನ (DPS)’ ಪದ್ಧತಿಯನ್ನು ಜಾರಿಗೆ ತರಬೇಕು.
- ರಾಜ್ಯ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸಬೇಕು.
- ಮೂಲಭೂತ ಹಕ್ಕಿನಂತಿರುವ ಬೋನಸ್, ಡಿಎ (DA) ಹಾಗೂ ಅರಿಯರ್ಸ್ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು.
- “ಜಲಮಂಡಳಿ ಅನ್ನಪೂರ್ಣ ಯೋಜನೆ” ಅಡಿಯಲ್ಲಿ ಹೊರಗುತ್ತಿಗೆ ಹಾಗೂ ಖಾಯಂ ಸಿಬ್ಬಂದಿಗೆ ಪ್ರೀ-ಪೇಯ್ಡ್ ಕಾರ್ಡ್ ವಿತರಿಸಬೇಕು.
- ಪ್ರತಿ ತಿಂಗಳ 1 ರಿಂದ 7 ನೇ ತಾರೀಖಿನ ಒಳಗಾಗಿ ಕಾರ್ಮಿಕರ ಖಾತೆಗೆ ವೇತನ ಜಮೆ ಮಾಡಬೇಕು.
- ಮಹಿಳಾ ಕಾರ್ಮಿಕರಿಗೆ 6 ತಿಂಗಳ ಸಂಬಳ ಸಹಿತ ರಜೆ ಕಡ್ಡಾಯಗೊಳಿಸಿ, ರಜೆಯ ನಂತರ ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು.
- ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿ ಮೇಲಿನ ಮಾನಸಿಕ ಕಿರುಕುಳ ಸಂಪೂರ್ಣವಾಗಿ ನಿಲ್ಲಬೇಕು.
- ರಜೆ ದಿನಗಳು, ಕೆಲಸದ ಅವಧಿ ಹಾಗೂ ಹೆಚ್ಚುವರಿ ಕೆಲಸದ (OT) ನಿಯಮಗಳನ್ನು ಸ್ಪಷ್ಟವಾಗಿ ನಿಗದಿಪಡಿಸಬೇಕು.
- ಗ್ರಾಮೀಣ ಭಾಗದ ನೌಕರರಿಗೆ ಮೂರು ತಿಂಗಳಿಗೊಮ್ಮೆ ನೀಡುವ ‘ರಿಸ್ಕ್ ಅಲೋಯನ್ಸ್’ ಅನ್ನು ಪ್ರತಿ ತಿಂಗಳ ವೇತನದೊಂದಿಗೆ ಸೇರಿಸಿ ನೀಡಬೇಕು.
- ಎಲ್ಲಾ ಕಾರ್ಮಿಕರಿಗೆ ಇಎಸ್‌ಐ (ESI) ಕಾರ್ಡ್ ನೀಡಿ, ದಾಖಲಾತಿಗಳಲ್ಲಿರುವ ತಪ್ಪುಗಳನ್ನು ಸರಿಪಡಿಸಬೇಕು. ಪಿಎಫ್ (PF) ಸೇರಿದಂತೆ ಎಲ್ಲಾ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕು.
- ಕೆಲಸದ ವೇಳೆ ಸಂಭವಿಸುವ ಸಾವಿಗೆ ಜವಾಬ್ದಾರಿ ನಿಗದಿಪಡಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಕೆಲಸದ ಸ್ಥಳಗಳಲ್ಲಿ ಕಡ್ಡಾಯ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು.
- ಪ್ರತಿ 6 ತಿಂಗಳಿಗೊಮ್ಮೆ ಕುಂದುಕೊರತೆಗಳ ಪರಿಹಾರಕ್ಕಾಗಿ ಜಲಮಂಡಳಿ ಹಾಗೂ ಕಾರ್ಮಿಕ ಸಂಘಟನೆಯ ಜಂಟಿ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು.
- ಕೆಲಸದ ವೇಳೆ ಮೃತಪಟ್ಟ, ಅಪಘಾತಕ್ಕೊಳಗಾದ ಅಥವಾ ಹೃದಯಾಘಾತಕ್ಕೆ ಒಳಗಾದವರ ಕುಟುಂಬಸ್ಥರಿಗೆ ಹಾಗೂ ಏಕಾಏಕಿ ಕೆಲಸದಿಂದ ತೆಗೆದುಹಾಕಲಾದ ಕಾರ್ಮಿಕರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಪುನಃ ಕೆಲಸ ನೀಡಬೇಕು


