“ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ; ತನ್ನದೇ ನಾಗರಿಕರ ವಿರುದ್ಧ ಯುದ್ಧ ಸಾರಿದೆ” ಎಂದು ಪೊಲೀಸರ ಬಂಧನದಿಂದ ಬಿಡುಗಡೆಯಾದ ತಕ್ಷಣ ಮಾಧ್ಯಮಗಳೊಂದಿಗೆ ನಡೆಸಿದ ತಮ್ಮ ಮೊದಲ ಸಂವಾದದಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ಆರೋಪಿಸಿದ್ದಾರೆ.
ಇಂದು ನವದೆಹಲಿಯಲ್ಲಿ ನಡೆದ ಸುದ್ದಿಕಾಗೋಷ್ಠಿಯಲ್ಲಿ ಮಾತನಾಡಿದ ರಾಂಕಾ, “ಪ್ರಧಾನಮಂತ್ರಿಯವರು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸಲು ನಿರ್ಧರಿಸಿದ್ದಾರೆ. ನರೇಂದ್ರ ಮೋದಿ ಭಾರತದ ಅತಿ ದೊಡ್ಡ ಹೇಡಿ, ಭಾರತಕ್ಕೆ ಭಾರಿ ಮುಜುಗರ” ಎಂದು ಕಿಡಿಕಾರಿದ್ದಾರೆ.
ಅಭಿಜೀತ್ ದಿಪ್ಕೆ ಅವರಿಗೆ ಅವರ ಅಜ್ಜಿಯ ಮರಣದ ಬಗ್ಗೆ ಮಾಹಿತಿ ನೀಡಲಾಗಿತ್ತು, ಪ್ರಯಾಣದ ನೆರವು ನೀಡಲಾಗಿತ್ತು, ಆದರೆ ಅದನ್ನು ಅವರು ನಿರಾಕರಿಸಿದರು ಎಂಬ ದೆಹಲಿ ಪೊಲೀಸರ ಪ್ರತಿಪಾದನೆಯ ಬಗ್ಗೆ ಪ್ರತಿಕ್ರಿಯಿಸಿದ ರಾಂಕಾ, “ಅಭಿಜೀತ್‌ಗೆ ಅವರ ಅಜ್ಜಿಯ ಮರಣದ ಸುದ್ದಿ ತಲುಪಿಸಿದಾಗ ದೆಹಲಿ ಪೊಲೀಸರು ಅತ್ಯಂತ ಅಮಾನವೀಯವಾಗಿ ವರ್ತಿಸಿದರು. ಅವರಿಗೆ ಅಜ್ಜಿಯ ಸಾವು ತಿಳಿಸುವಾಗಲೂ ದೆಹಲಿ ಪೊಲೀಸ್ ಸಿಬ್ಬಂದಿ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗಳೊಂದಿಗೆ ಅಲ್ಲಿ ನಿಂತಿದ್ದರು. ಅವರು ಈ ದುಃಖದ ಘಟನೆಯನ್ನೂ ಒಂದು ತಮಾಷೆಯ ಪ್ರದರ್ಶನವನ್ನಾಗಿ ಮಾಡಲು ಯತ್ನಿಸಿದರ. ಇದನ್ನೆಲ್ಲಾ ನೋಡಿ ನನಗೆ ನಾಚಿಕೆಯಾಗುತ್ತಿದೆ” ಎಂದು ಹೇಳಿದರು.
ಸೌರವ್ ದಾಸ್ ಮಾತನಾಡಿ, “ಪೊಲೀಸ್ ಸಿಬ್ಬಂದಿಗೆ ಅವರ ನೇಮ್ ಟ್ಯಾಗ್ (ಹೆಸರಿನ ಪಟ್ಟಿ) ತೋರಿಸುವಂತೆ ಕೇಳಿದ್ದಕ್ಕಾಗಿ ಸ್ವತಂತ್ರ ವರದಿಗಾರರನ್ನು ವಶಕ್ಕೆ ಪಡೆಯಲಾಗಿದೆ. ಇಡೀ ದೇಶವೇ ಈ ಕ್ರೂರತೆಯನ್ನು ವೀಕ್ಷಿಸುತ್ತಿದೆ. ಪ್ರತಿಭಟನಾನಿರತ ಯುವಕರ ವಿರುದ್ಧ ತೆಗೆದುಕೊಂಡ ಕ್ರಮಗಳಿಗೆ ಸಾರ್ವಜನಿಕ ಪ್ರತಿಕ್ರಿಯೆ ಹೇಗಿರಬಹುದು ಎಂಬುದನ್ನು ಈ ಸರ್ಕಾರ ತಪ್ಪಾಗಿ ಅಂದಾಜಿಸಿದೆ” ಎಂದು ಹೇಳಿದರು.
ರಾಷ್ಟ್ರ ರಾಜಧಾನಿಯಲ್ಲಿ ಕಲ್ಪಿಸಲಾದ ಭದ್ರತಾ ವ್ಯವಸ್ಥೆಯನ್ನು ಟೀಕಿಸಿದ ಸಿಜೆಪಿ ನಾಯಕರು, “ಗಡಿ ಪ್ರದೇಶಗಳಿಂದ ಕರೆತರಲಾದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ನಕ್ಸಲ್ ಪೀಡಿತ ಪ್ರದೇಶಗಳ ಪಡೆಗಳು ಸೇರಿದಂತೆ ಸುಮಾರು 30,000 ರಿಂದ 40,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ” ಎಂದು ಪ್ರತಿಪಾದಿಸಿದರು.
“ಸರ್ಕಾರವು ತನ್ನದೇ ನಾಗರಿಕರ ವಿರುದ್ಧ ಯುದ್ಧ ಸಾರಿದೆ. ತಮ್ಮ ಕುಂದುಕೊರತೆಗಳನ್ನು ಎತ್ತಿಹಿಡಿಯಲು ಯತ್ನಿಸಿದ ಜನರ ಧ್ವನಿಯನ್ನು ಅಡಗಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಅಭಿಜೀತ್, ಸೌರವ್ ದಾಸ್, ಅಶುತೋಷ್ ರಾಂಕಾ ಬಿಡುಗಡೆಗೆ ಷರತ್ತು
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗಾಗಿ ರಾಷ್ಟ್ರ ರಾಜಧಾನಿಗೆ ಆಗಮಿಸಿದ ತಕ್ಷಣ ದೆಹಲಿ ಪೊಲೀಸರಿಂದ ವಶಕ್ಕೆ ಪಡೆಯಲ್ಪಟ್ಟ ಸುಮಾರು 24 ಗಂಟೆಗಳ ನಂತರ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ಭಾನುವಾರ ಬಿಡುಗಡೆ ಮಾಡಲಾಯಿತು. ಅವರೊಂದಿಗೆ ಸಿಜೆಪಿಯ ಸಹ ಸಂಚಾಲಕ ಸೌರವ್ ದಾಸ್ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ ಅವರನ್ನು ಬಿಡುಗಡೆ ಮಾಡಲಾಗಿದೆ.
ಮುನ್ನೆಚ್ಚರಿಕಾ ಬಂಧನದಲ್ಲಿದ್ದ ಈ ಮೂವರನ್ನು, ಮುಂಬರುವ ಒಂದು ವರ್ಷದವರೆಗೆ ದೇಶದಲ್ಲಿ “ಶಾಂತಿ ಮತ್ತು ಸೌಹಾರ್ದತೆಗೆ” ಭಂಗ ತರುವ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಷರತ್ತಿನ ಮೇಲೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್ಇಎಂ) ಬಿಡುಗಡೆ ಮಾಡಿದ್ದಾರೆ.
“ಅಭಿಜೀತ್ ದಿಪ್ಕೆ, ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು 10.10.2026 ರಂದು ಬಿಎನ್‌ಎಸ್‌ಎಸ್ ನ ಸೆಕ್ಷನ್ 126/170 ಅಡಿಯಲ್ಲಿ ಮುನ್ನೆಚ್ಚರಿಕಾ ಬಂಧನಕ್ಕೆ ಒಳಪಡಿಸಲಾಗಿತ್ತು. ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಅವರನ್ನು 11.10.2026 ರಂದು ದೆಹಲಿ ಕಾಂಟ್‌ನ ಎಸ್ಇಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು” ಎಂದು ದೆಹಲಿ ಪೊಲೀಸ್ ಎಕ್ಸ್ ನಲ್ಲಿ ತಿಳಿಸಿದೆ.
“ಶಾಂತಿ ಮತ್ತು ಉತ್ತಮ ನಡತೆಯನ್ನು ಕಾಯ್ದುಕೊಳ್ಳಲು ಒಂದು ವರ್ಷದ ಅವಧಿಗೆ ರೂ. 50,000 ಮೊತ್ತದ ಶ್ಯೂರಿಟಿ ಬಾಂಡ್ ಸಲ್ಲಿಸಲಾಯಿತು, ನಂತರ ಅವರನ್ನು ಎಸ್‌ಇಎಂ ನ್ಯಾಯಾಲಯವು ಬಿಡುಗಡೆ ಮಾಡಿದೆ” ಎಂದು ಅದು ಸೇರಿಸಿದೆ.
ತಮ್ಮ ನಾಯಕರ ಬಿಡುಗಡೆಯನ್ನು ಸ್ವಾಗತಿಸಿರುವ ಸಿಜೆಪಿ, ದಿನದ ನಂತರ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಶಪಥ ಮಾಡಿದೆ. ಗ್ಯಾನೇಶ್ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವವರೆಗೆ ತಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಪುನರುಚ್ಚರಿಸಿದೆ.
ಮತದಾರರ ಪಟ್ಟಿಯ ದೇಶವ್ಯಾಪಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಶನಿವಾರ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಅವರಿಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿದ್ದರು.
ಪ್ರತಿಭಟನೆ ಪ್ರಾರಂಭವಾಗುವ ಮುನ್ನವೇ ದೆಹಲಿಯನ್ನು ಭದ್ರತಾ ಕೋಟೆಯನ್ನಾಗಿ ಪರಿವರ್ತಿಸಲಾಯಿತು. ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಮತ್ತು ಪಿಣರಾಯಿ ವಿಜಯನ್ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರನ್ನು ವಶಕ್ಕೆ ಪಡೆಯಲಾಯಿತು. ಆದರೆ, ಅವರೆಲ್ಲರನ್ನೂ ರಾತ್ರಿಯ ವೇಳೆಗೆ ಬಿಡುಗಡೆ ಮಾಡಲಾಯಿತು.
ವಿದೇಶದಲ್ಲಿ ನೆಲೆಸಿರುವ, ಸರ್ಕಾರದ ಟೀಕಕಾರರಾದ ಯೂಟ್ಯೂಬರ್ ಧ್ರುವ ರಾಠಿ ಅವರನ್ನು ಸಹ ವಶಕ್ಕೆ ಪಡೆಯಲಾಗಿತ್ತು. ಆದರೆ ಅವರನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಸಾಮೂಹಿಕ ಬಂಧನಗಳು ದೊಡ್ಡ ಗೊಂದಲಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಎಲ್ಲರ ಬಿಡುಗಡೆಗೆ ಆಗ್ರಹಿಸಿದ್ದಾರೆ. ಆದರೆ, ಇಂಡಿಯಾ ಕೂಟದ ನಾಯಕರಿಗೆ ತಿರುಗೇಟು ನೀಡಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ), ಶನಿವಾರದ ಪ್ರತಿಭಟನೆ ವಿಫಲವಾಗಿದೆ ಮತ್ತು ಇದು ಪ್ರಜಾಪ್ರಭುತ್ವದ ಗೆಲುವು ಎಂದು ಕರೆದಿದೆ, ಹಾಗೂ ದೇಶದಲ್ಲಿ ಅಶಾಂತಿಯನ್ನು ಎಬ್ಬಿಸುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದೆ.


