ನಿರ್ಬಂಧಗಳ ನಡುವೆ ಜಂತರ್ ಮಂತರ್ ಪ್ರವೇಶಿಸಿದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್, ಅಶುತೋಷ್ ರಾಂಕಾ, ಅಜಿಂಕ್ಯ ಶಿಂದೆ ಮತ್ತು ಇತರರನ್ನು ದೆಹಲಿ ಪೊಲೀಸರು ಮಂಗಳವಾರ (ಅ.13) ವಶಕ್ಕೆ ಪಡೆದಿದ್ದಾರೆ.
ಜಂತರ್ ಮಂತರ್ ಪ್ರತಿಭಟನೆಗೆ ನಿಗದಿಪಡಿಸಿದ ಸ್ಥಳವಲ್ಲ ಎಂದು ದೆಹಲಿ ಪೊಲೀಸರು ಆದೇಶ ಹೊರಡಿಸಿದ ಮರುದಿನವೇ ಸಿಜೆಪಿ ನಾಯಕರು ಅಲ್ಲಿಗೆ ಪ್ರವೇಶಿಸಿ, ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಹಾಗೂ ಧರಣಿಗಳನ್ನು ನಡೆಸಲು ಜಂತರ್ ಮಂತರ್‌ಗೆ ಪರ್ಯಾಯ ಸ್ಥಳಗಳಾಗಿ ಪೂರ್ವ ದೆಹಲಿಯ ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ ಮೈದಾನಗಳನ್ನು ಪೊಲೀಸರು ಹೆಸರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, “ತ್ರಿವರ್ಣ ಧ್ವಜ ಹಿಡಿದ ಕಾಕ್ರೋಚ್‌ಗಳು ಇಂದು ಬೆಳಿಗ್ಗೆ ಜಂತರ್ ಮಂತರ್‌ಗೆ ನುಗ್ಗಿದ್ದು, ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
ಸೌರವ್ ದಾಸ್, ಅಶುತೋಷ್ ರಾಂಕಾ, ಅಜಿಂಕ್ಯ ಶಿಂದೆ ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ದೀಪ್ಕೆ ತಿಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ, “ಪ್ರತಿರೋಧವನ್ನು ನೀವು ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.
ಸಿಜೆಪಿ ಸದಸ್ಯರು ಜಂತರ್ ಮಂತರ್ ಗೇಟ್ ಹಾರಿ ಒಳ್ಳನುಗ್ಗಿ, “ಭಾರತ್ ಮಾತಾ ಕಿ ಜೈ” ಎಂದು ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ಒಂದನ್ನು ಸಹ ದಿಪ್ಕೆ ಹಂಚಿಕೊಂಡಿದ್ದಾರೆ. ಇದೇ ವೇಳೆ ಪೊಲೀಸ್ ಸಿಬ್ಬಂದಿ ಓಡಿ ಬಂದು ಅವರನ್ನು ಹಿಡಿಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ಯಲ್ಲಿ (ಎಸ್‌ಐಆರ್) ನಡೆದ ಅಕ್ರಮಗಳನ್ನು ವಿರೋಧಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಈ ಬಿಗಿ ಭದ್ರತೆಯ ನಡುವೆಯೇ ಹೋರಾಟಗಾರರು ವಿವಿಧ ರೀತಿಯಲ್ಲಿ ಪ್ರತಿರೋಧ ಒಡ್ಡುತ್ತಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ದೆಹಲಿ ಪೊಲೀಸರು ನಗರದಾದ್ಯಂತ ಭಾರಿ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.


