ಐಐಟಿ ಬಾಂಬೆ ಬಳಿಯ ಪ್ರತಿಭಟನಾ ಸ್ಥಳವನ್ನು ಪೊಲೀಸರು ಭಾನುವಾರ (ಅ.18) ಧ್ವಂಸಗೊಳಿಸಿದ್ದಾರೆ ಮತ್ತು ಅದೇ ಸಂಸ್ಥೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ಪೋಷಕರು ಮತ್ತು ಹಲವಾರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ದಬ್ಬಾಳಿಕೆ ಮತ್ತು ಕ್ರೌರ್ಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಹಲವು ಪೋಸ್ಟ್ಗಳು ಬೆಟ್ಟು ಮಾಡಿ ತೋರಿಸಿವೆ ಎಂದು thewire.in ಸೋಮವಾರ (ಅ.19) ವರದಿ ಮಾಡಿದೆ.
ಸಾಹಿಲ್ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರನ್ನು ಪೊಲೀಸರು ಎಳೆದಾಡಿದ್ದಾರೆ, ಅವರ ಖಾಸಗಿ ಅಂಗಗಳನ್ನು ಮುಟ್ಟಿದ್ದಾರೆ ಮತ್ತು ಅವರಿಗೆ ಥಳಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾಗಿ ವರದಿ ಉಲ್ಲೇಖಿಸಿದೆ.
ಅಕ್ಟೋಬರ್ 18ಕ್ಕೆ ಸಾಹಿಲ್ ಸಾವಿಗೀಡಾಗಿ ಒಂದು ತಿಂಗಳಾಗಿದೆ.
‘ದಿ ಹಿಂದೂ’ ಪತ್ರಿಕೆಯ ವರದಿಯ ಪ್ರಕಾರ, ಭಾನುವಾರ ಪೊಲೀಸರು ಆರಂಭದಲ್ಲಿ 10 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದರು. ತದನಂತರ ಸಾಹಿಲ್ ಅವರ ಪೋಷಕರಾದ ರವೀಂದ್ರ ಮತ್ತು ಸೋನಾಲಿ ವಾಕೋಡೆ ಅವರು ಸಂಸ್ಥೆಯನ್ನು ತಲುಪಿ, ರಿಜಿಸ್ಟ್ರಾರ್ಗೆ ಪತ್ರವೊಂದನ್ನು ಸಲ್ಲಿಸಿದ್ದಾರೆ ಮತ್ತು ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ಅವರನ್ನು ಭೇಟಿಯಾಗಿದ್ದಾರೆ. ವರ್ಷಾ ಗಾಯಕ್ವಾಡ್ ಅವರು ಅಲ್ಲಿಂದ ಹೊರಟ ನಂತರ, ವಾಕೋಡೆ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದು ಆಝಾದ್ ಮೈದಾನ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಹಿಂದೂ ಪತ್ರಿಕೆಯ ಪ್ರಕಾರ, ಆಗ ಹದಿನಾರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿತ್ತು. ‘ಕ್ಯಾರವಾನ್’ ಈ ಸಂಖ್ಯೆ 22 ಎಂದು ತಿಳಿಸಿದೆ. ಸಂಜೆ 6 ಗಂಟೆಯ ನಂತರ ಅವರೆಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಯವತ್ಮಾಲ್ನ ದಲಿತ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿದ ಸಾಹಿಲ್, ಸೆಪ್ಟೆಂಬರ್ 18ರಂದು ತಮ್ಮ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.
‘ದಿ ವೈರ್’ ವರದಿ ಮಾಡಿರುವಂತೆ, ಸಾಹಿಲ್ ಅವರು ಮಧ್ಯಾವಧಿ ಪರೀಕ್ಷೆಯ ವೇಳೆ ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿತ್ತು ಮತ್ತು ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಂಡಿರಲಿಲ್ಲ ಎಂದು ಐಐಟಿ ಬಾಂಬೆ ಆರಂಭದಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. ಆದರೆ, “ಸಾಹಿಲ್ ನಿಜವಾಗಿಯೂ ನಕಲು ಮಾಡುತ್ತಿದ್ದರೇ ಎಂಬುದನ್ನು ಖಚಿತಪಡಿಸಿಕೊಳ್ಳದೆ ನಾವು ಈ ಹೇಳಿಕೆಯನ್ನು ನೀಡಿದ್ದೆವು” ಎಂದು ಒಪ್ಪಿಕೊಂಡಿರುವ ಸಂಸ್ಥೆ, ನಂತರ ಈ ಕುರಿತು ಕ್ಷಮೆಯಾಚಿಸಿದೆ. ಸಂಸ್ಥೆಯು ಸಾಹಿಲ್ ಅವರಿಗೆ ಜಾತಿ ಆಧಾರಿತ ತಾರತಮ್ಯ ಎಸಗಿದೆ ಮತ್ತು ಅವರನ್ನು ತೀವ್ರವಾಗಿ ಅವಮಾನಿಸಿದೆ, ಅದೇ ಅವರ ಸಾವಿಗೆ ಕಾರಣವಾಗಿದೆ ಎಂದು ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಸಂಸ್ಥೆಯು ಹೊಣೆಗಾರಿಕೆಯನ್ನು ಹೊರಬೇಕು ಮತ್ತು ಈ ಘಟನೆಯ ಕೇಂದ್ರಬಿಂದುವಾಗಿರುವ ಹಾಗೂ ಜಾತಿ ತಾರತಮ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ಒಂದು ತಿಂಗಳಿನಿಂದ ಈ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.


