“ನನ್ನ ವಿರುದ್ಧ ದೇಶಾದ್ಯಂತ ಮಾನನಷ್ಟ ಪ್ರಕರಣಗಳು ಸೇರಿದಂತೆ 45ಕ್ಕೂ ಹೆಚ್ಚು ಕೇಸ್‌ಗಳಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಬಂಧಿಸಿದ ವಿಷಯಗಳ ಮೇಲೂ ಮೊಕದ್ದಮೆಗಳಿವೆ. ಆದರೆ, ನಾನು ದೇಶದ ಪ್ರತಿಯೊಂದು ರಾಜ್ಯಕ್ಕೂ ತೆರಳಿ ‘ನರೇಂದ್ರ ಮೋದಿ ಅವರು ವೋಟ್ ಚೋರ್, ಮತ ಕಳ್ಳರು ಎಂದು ಬಹಿರಂಗವಾಗಿ ಹೇಳಿದರೂ, ಈ ವಿಚಾರವಾಗಿ ನನ್ನ ಮೇಲೆ ಯಾರೂ ಯಾವುದೇ ಪ್ರಕರಣ ದಾಖಲಿಸುತ್ತಿಲ್ಲ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗೋವಾದ ಮಡಗಾಂವ್‌ನಲ್ಲಿ ಅಕ್ಟೋಬರ್ 18 ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ‘ಗೋಯ್ ರಾಖೋನ್ ಯಾತ್ರೆ’ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ, ರಾಹುಲ್ ಗಾಂಧಿ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಸುಮಾರು 2 ಕಿಲೋಮೀಟರ್ ದೂರ ಪಾದಯಾತ್ರೆ ನಡೆಸಿದರು. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮತದಾರರ ಪಟ್ಟಿ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಉನ್ನತ ಹುದ್ದೆಗಳಲ್ಲಿರುವವರ ಪಾತ್ರದ ಕುರಿತು ಮಾತನಾಡಿದ ರಾಹುಲ್ ಗಾಂಧಿ, “ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ವೋಟ್ ಚೋರಿಯನ್ನು ಅನುಷ್ಠಾನಗೊಳಿಸುತ್ತಿದ್ದಾರೆ, ಅಮಿತ್ ಶಾ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ ಮತ್ತು ನರೇಂದ್ರ ಮೋದಿ ಅವರು ತೆರೆಮರೆಯಲ್ಲಿ ನಿಂತು ಇಡೀ ಯೋಜನೆಯ ಸಂಚು ರೂಪಿಸುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
ತಮ್ಮ ಮೇಲಿರುವ ಇತರ ಪ್ರಕರಣಗಳ ಉದಾಹರಣೆ ನೀಡಿ, ‘ಮೋದಿ ವೋಟ್ ಚೋರ್’ ಎಂಬ ಬಹಿರಂಗ ಆರೋಪಕ್ಕೆ ಬಿಜೆಪಿ ಸರ್ಕಾರ ಯಾಕೆ ಕಾನೂನು ಕ್ರಮ ಜರುಗಿಸುತ್ತಿಲ್ಲ ಎಂಬುದನ್ನು ವಿವರಿಸಿದ ಅವರು, “ಒಂದು ವೇಳೆ ಈ ವಿಷಯದ ಮೇಲೆ ಕೇಸ್ ದಾಖಲಿಸಿದರೆ, ‘ಮತ ಕಳ್ಳತನ’ದ ಸಮಗ್ರ ವಿಚಾರವು ಕಾನೂನಾತ್ಮಕವಾಗಿ ಕೋರ್ಟ್ ಮೆಟ್ಟಿಲೇರುತ್ತದೆ ಹಾಗೂ ಇಡೀ ವ್ಯವಸ್ಥೆಯೇ ಇದರ ತನಿಖೆಯಲ್ಲಿ ಸಿಲುಕಿಕೊಳ್ಳುತ್ತದೆ ಎಂಬ ಭಯ ಸರ್ಕಾರವನ್ನು ಕಾಡುತ್ತಿದೆ. ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆದರೆ ತಮ್ಮ ಎಲ್ಲ ಅಕ್ರಮಗಳ ಬಣ್ಣ ಬಯಲಾಗುತ್ತದೆ ಎಂಬ ಕಾರಣಕ್ಕೇ ಆಡಳಿತ ಪಕ್ಷವು ಮೌನ ವಹಿಸಿದೆ” ಎಂದು ಅವರು ಟೀಕಿಸಿದ್ದಾರೆ. ಮುಂದುವರಿದು ಮಾತನಾಡಿದ ಅವರು, ಈ ವ್ಯವಸ್ಥಿತ ಮತ ಕಳ್ಳತನದ ಕೃತ್ಯಗಳಿಂದಾಗಿ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರಿಗೆ ‘ರಾತ್ರಿ ನಿದ್ರೆ ಇಲ್ಲದಂತಾಗಿದೆ’ ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ಪಕ್ಷವು ಇವರನ್ನು ಕಾನೂನಿನ ಮುಂದೆ ತಂದು ನ್ಯಾಯ ಒದಗಿಸುವುದಾಗಿ ಎಚ್ಚರಿಕೆ ನೀಡಿದರು.
ಇದೇ ವೇಳೆ ಸ್ಥಳೀಯ ಭ್ರಷ್ಟಾಚಾರದ ವಿರುದ್ಧವೂ ಗುಡುಗಿದ ರಾಹುಲ್ ಗಾಂಧಿ, ಗೋವಾದಲ್ಲಿ ಬಿಜೆಪಿ ಸರ್ಕಾರವು ಭೂ ಹಗರಣಗಳು ಮತ್ತು ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಪ್ರಸ್ತುತ ಗೋವಾ ರಾಜ್ಯವು “ದೇಶದ ಅತ್ಯಂತ ಭ್ರಷ್ಟ ರಾಜ್ಯ” ಎಂದು ಟೀಕಿಸಿದರು. ಜನರ ಮತಗಳನ್ನು ಕದಿಯುವ ಮೂಲಕ ಮತ್ತು ಆಡಳಿತ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಮೂಲ ಅಸ್ಥಿತ್ವದ ಮೇಲೆಯೇ ದಾಳಿ ಮಾಡಲಾಗುತ್ತಿದ್ದು, ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಧರ್ಮವಾಗಿದೆ ಎಂದು ರಾಹುಲ್ ಗಾಂಧಿ ಕರೆ ನೀಡಿದರು.


