ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜೊತೆಗಿನ ತನ್ನ ಸೆಟಲ್‌ಮೆಂಟ್ ಖಾತೆಯಿಂದ ರೂ 13.97 ಕೋಟಿ ಹಣವನ್ನು ಅನಧಿಕೃತವಾಗಿ ವರ್ಗಾಯಿಸಲಾಗಿದೆ (ಸೈಫನ್ ಮಾಡಲಾಗಿದೆ) ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಆರೋಪಿಸಿದೆ.
ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಅಪರಿಚಿತ ವ್ಯಕ್ತಿಗಳು ತನ್ನ ಕೋರ್ ಬ್ಯಾಂಕಿಂಗ್ ಸಿಸ್ಟಮ್‌ನ ಸ್ಟ್ರಕ್ಚರ್ಡ್ ಫೈನಾನ್ಷಿಯಲ್ ಮೆಸೇಜಿಂಗ್ ಸಿಸ್ಟಮ್ (ಎಸ್‌ಎಫ್‌ಎಮ್‌ಎಸ್) ಸರ್ವರ್ ಮೂಲಕ ಆರ್‌ಬಿಐ ಒಡೆತನದ ಇಂಡಿಯನ್ ಫೈನಾನ್ಶಿಯಲ್ ಟೆಕ್ನಾಲಜಿ ಅಂಡ್ ಅಲೈಡ್ ಸರ್ವೀಸಸ್ (ಇಫ್ತಾಸ್-ಐಎಫ್‌ಟಿಎಸ್) ಸಂಸ್ಥೆಯ ಕೇಂದ್ರೀಯ ಸರ್ವರ್ ಅನ್ನು ಹ್ಯಾಕ್ ಮಾಡಿ, ಅಕ್ಟೋಬರ್ 15 ರಿಂದ 17ರ ನಡುವೆ 187 ಅನಧಿಕೃತ ವಹಿವಾಟುಗಳ ಮೂಲಕ ಹಣವನ್ನು ದೋಚಿದ್ದಾರೆ ಎಂದು ಬ್ಯಾಂಕ್ ಪೊಲೀಸರಿಗೆ ತಿಳಿಸಿದೆ.
ಸರಳವಾಗಿ ಹೇಳುವುದಾದರೆ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಬ್ಯಾಂಕಿಂಗ್ ವ್ಯವಸ್ಥೆಯು (ಕೋರ್ ಬ್ಯಾಂಕಿಂಗ್ ಸಿಸ್ಟಮ್) ಹಣ ವರ್ಗಾವಣೆಗಾಗಿ ಆರ್‌ಬಿಐನ ಅಂಗಸಂಸ್ಥೆಯಾದ ಇಫ್ತಾಸ್ ನಿರ್ವಹಿಸುವ ಕೇಂದ್ರೀಯ ಹಣಕಾಸು ಸಂದೇಶ ವ್ಯವಸ್ಥೆಯ (ಎಸ್‌ಎಫ್‌ಎಮ್‌ಎಸ್) ಸರ್ವರ್‌ಗೆ ಸಂಪರ್ಕ ಹೊಂದಿರುತ್ತದೆ. ಹ್ಯಾಕರ್‌ಗಳು ಈ ಸಂಪರ್ಕ ವ್ಯವಸ್ಥೆಯೊಳಗೆ ಅಕ್ರಮವಾಗಿ ನುಗ್ಗಿದ್ದಾರೆ. ಹೀಗೆ ಸರ್ವರ್ ನಿಯಂತ್ರಣ ಪಡೆದ ಅಪರಿಚಿತರು, ಅಕ್ಟೋಬರ್ 15 ಮತ್ತು 17 ರ ನಡುವೆ ಕೇವಲ ಮೂರು ದಿನಗಳಲ್ಲಿ ಒಟ್ಟು 187 ಬಾರಿ ಬ್ಯಾಂಕಿಗೆ ತಿಳಿಯದಂತೆ ಹಣವನ್ನು ವರ್ಗಾಯಿಸಿದ್ದಾರೆ ಎನ್ನಲಾಗಿದೆ.
ಆರ್‌ಬಿಐನ ಆರ್‌ಟಿಜಿಎಸ್ ಮತ್ತು ನೆಫ್ಟ್ ವ್ಯವಸ್ಥೆಗಳ ಮೂಲಕ ಬ್ಯಾಂಕುಗಳು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪಾವತಿ ಸಂದೇಶಗಳನ್ನು ಎಸ್‌ಎಫ್‌ಎಮ್‌ಎಸ್ ಹೊತ್ತೊಯ್ಯುತ್ತದೆ.
ಬ್ಯಾಂಕ್ ದಾಖಲಿಸಿದ ಎಫ್‌ಐಆರ್ ಪ್ರಕಾರ, ಹಣವು 36 ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ; ಇದರಲ್ಲಿ ಅಕ್ಟೋಬರ್ 15 ರಂದು ಆರು ಬಾರಿ, ಅಕ್ಟೋಬರ್ 16 ರಂದು 88 ಬಾರಿ ಮತ್ತು ಅಕ್ಟೋಬರ್ 17 ರಂದು 93 ಬಾರಿ ಹಣ ವರ್ಗಾವಣೆ ನಡೆದಿದೆ.
ಬ್ಯಾಂಕಿನ ದೂರಿನ ಪ್ರಕಾರ, ಈ 187 ವಹಿವಾಟುಗಳಲ್ಲಿ ಹಣ ಕಳುಹಿಸಿದವರು ಎಂದು ನಮೂದಿಸಲಾದ ಖಾತೆಗಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸೇರಿದ್ದಲ್ಲ. ಅಲ್ಲದೆ, ಬ್ಯಾಂಕಿನ ಆಂತರಿಕ ತನಿಖಾ ತಂಡವು ಯಾವುದೇ ಶಾಖೆಯಲ್ಲಿ, ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಅಥವಾ ಯಾವುದೇ ಇತರ ಚಾನೆಲ್‌ಗಳಲ್ಲಿ ಈ 187 ವಹಿವಾಟುಗಳ ವಿವರಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ವರದಿಯಲ್ಲಿ ಹೆಸರು ಹೇಳಲು ಇಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಲಾಗಿದ್ದು, ಈ ವಹಿವಾಟುಗಳ ಬಗ್ಗೆ ಸದ್ಯಕ್ಕೆ ತೀರಾ ಕಡಿಮೆ ಮಾಹಿತಿ ಲಭ್ಯವಿರುವುದರಿಂದ ‘ಹಣವನ್ನು ಹೇಗೆ ದೋಚಲಾಗಿದೆ ಎಂಬುದನ್ನು ಪತ್ತೆಹಚ್ಚುವುದು ತುಂಬಾ ಕಷ್ಟಕರವಾಗಿದೆ’ ಎಂದು ಅವರು ಹೇಳಿದ್ದಾಗಿ ತಿಳಿಸಲಾಗಿದೆ.
ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ಈ ಘಟನೆ ಬಂದ ತಕ್ಷಣ, ಬ್ಯಾಂಕ್ ತಕ್ಷಣವೇ ಆರ್‌ಬಿಐ, ಇಫ್ತಾಸ್, ದಕ್ಷ್ ಪೋರ್ಟಲ್, ರಾಷ್ಟ್ರೀಯ ನಿರ್ಣಾಯಕ ಮಾಹಿತಿ ಮೂಲಸೌಕರ್ಯ ಸಂರಕ್ಷಣಾ ಕೇಂದ್ರ (ಎನ್‌ಸಿಐಐಪಿಸಿ) ಮತ್ತು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಗೆ ಮಾಹಿತಿ ನೀಡಿದೆ ಎಂದು ವರದಿ ಉಲ್ಲೇಖಿಸಿದೆ.
ಮುಂಬೈ ಪೊಲೀಸರು ವಂಚನೆ ಮತ್ತು ಗುರುತು ಮರೆಮಾಚಿ ಬೇರೊಬ್ಬರಂತೆ ನಟಿಸಿದ ಆರೋಪದ ಮೇಲೆ, ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದೆ.


