ಮಧ್ಯಪ್ರದೇಶದ ನಗರಾಡಳಿತ ಇಲಾಖೆಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮ ಖರೀದಿ ಪ್ರಕರಣವು ಈಗ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ. ವಿವಿಧ ನಗರ ಸ್ಥಳೀಯ ಸಂಸ್ಥೆಗಳು (ULBs) ಮತ್ತು ಪುರಸಭೆಗಳಲ್ಲಿ ಅತ್ಯಗತ್ಯ ವಸ್ತುಗಳನ್ನು ಮಾರುಕಟ್ಟೆ ದರಕ್ಕಿಂತ ನೂರಾರು ಪಟ್ಟು ಹೆಚ್ಚಿನ ಬೆಲೆಗೆ ಖರೀದಿಸಿ ಸರ್ಕಾರಿ ಖಜಾನೆಗೆ ಕನ್ನ ಹಾಕಿರುವ ಘಟನೆ ಇಲಾಖೆಯ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ನಡೆಸಿದ ಪರಿಶೀಲನಾ ಸಭೆಯಲ್ಲಿ ಜಗಜ್ಜಾಹೀರಾಗಿದೆ.
ಮಧ್ಯಪ್ರದೇಶ ನಗರಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS) ಸಂಜಯ್ ದುಬೆ ಅವರು ಇಲಾಖೆಯ ಉನ್ನತಾಧಿಕಾರಿಗಳ ಸಭೆಯಲ್ಲಿ ಆಂತರಿಕ ತನಿಖೆಯ ವರದಿಯೊಂದನ್ನು ಪ್ರದರ್ಶಿಸುವಾಗ ಈ ಆಘಾತಕಾರಿ ಸತ್ಯಗಳು ಜಗಜ್ಜಾಹೀರಾಗಿವೆ. ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM) ಪೋರ್ಟಲ್ ಮೂಲಕ ಕಳೆದ 3 ವರ್ಷಗಳಲ್ಲಿ ಒಟ್ಟು 1,134 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಿವಿಧ ವಾರ್ಡ್ ಮತ್ತು ಪುರಸಭೆಗಳು ಖರೀದಿಸಿದ್ದು, ಕೇವಲ ಸಾಧಾರಣ ಮಾರುಕಟ್ಟೆ ನಿಯಮಗಳನ್ನು ಪಾಲಿಸಿದ್ದರೂ ಕನಿಷ್ಠ 250 ಕೋಟಿ ರೂ. ಸಾರ್ವಜನಿಕ ಹಣ ಉಳಿತಾಯವಾಗುತ್ತಿತ್ತು ಎಂದು ಅಧಿಕಾರಿ ನೇರವಾಗಿ ಬೆಟ್ಟು ಮಾಡಿದ್ದಾರೆ.
ಸಭೆಯಲ್ಲಿ ಪ್ರಸೆಂಟೇಷನ್ ನೀಡಿದ ಮತ್ತೊಬ್ಬ ಅಧಿಕಾರಿ ಅಂಶುಮನ್ ರಾಜ್, ಖರೀದಿ ಪ್ರಕ್ರಿಯೆಯಲ್ಲಿ ನಡೆದಿರುವ ದರ ವ್ಯತ್ಯಾಸಗಳನ್ನು ಬಿಚ್ಚಿಟ್ಟಿದ್ದಾರೆ. ಕೇವಲ 5 ರೂ.ಗೆ ಸಿಗುವ ಒಂದು ಲೀಟರ್ ಫಿನೈಲ್ ಪಾಕೇಟ್‌ಗೆ ಕೆಲ ನಗರ ಸಂಸ್ಥೆಗಳು ಬರೋಬ್ಬರಿ 33,500 ರೂ. ನೀಡಿದ್ದರೆ, ಸಾಮಾನ್ಯ ಮಾರುಕಟ್ಟೆಯಲ್ಲಿ 306 ರೂ.ಗೆ ಸಿಗುವ 60-ವಾಟ್ ಎಲ್‌ಇಡಿ ಲೈಟ್‌ಗೆ ಭೋಪಾಲ್‌ನಲ್ಲಿ 11,800 ರೂ. ಪಾವತಿಸಲಾಗಿದೆ. ಇಷ್ಟೇ ಅಲ್ಲದೆ, 200 ಎಲ್‌ಇಡಿ ಬಲ್ಬ್‌ಗಳಿಗೆ 60 ಲಕ್ಷ ರೂ. ವೆಚ್ಚ ಮಾಡಿರುವ ಆಘಾತಕಾರಿ ಉದಾಹರಣೆಯೂ ಸಭೆಯಲ್ಲಿ ಬಯಲಾಗಿದೆ. ಕಸದ ಟ್ರಕ್ ಒಂದಕ್ಕೆ ಸಾಮಾನ್ಯ ಪಾಲಿಕೆ 2 ಲಕ್ಷ ರೂ. ನೀಡಿದ್ದರೆ, ಮತ್ತೊಂದು ಪಾಲಿಕೆಯು ಕೇವಲ 4 ಕಸದ ಡಬ್ಬಿಗಳನ್ನು ಸೇರಿಸಿ ಅದೇ ಟ್ರಕ್‌ಗೆ 6 ಲಕ್ಷ ರೂ. ಬಿಲ್ ಮಾಡಿದೆ.
ಈ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿ ಬಿಜೆಪಿ ಸರ್ಕಾರದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ‘ಟೈಮ್ಸ್ ನೌ ನವಭಾರತ್’ ಮಾಧ್ಯಮದ ಜೊತೆ ಮಾತನಾಡಿದ ಮಧ್ಯಪ್ರದೇಶದ ನಗರಾಡಳಿತ ರಾಜ್ಯ ಸಚಿವೆ ಪ್ರತಿಮಾ ಬಾಗ್ರಿ ಇಲಾಖೆಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. “ನಾವು ಪ್ರಿನ್ಸಿಪಲ್ ಸೆಕ್ರೆಟರಿ ಸಂಜಯ್ ದುಬೆ ಅವರ ವೀಡಿಯೋವನ್ನು ಪರಿಶೀಲಿಸುತ್ತಿದ್ದೇವೆ. ಇದು ಹಣಕಾಸಿನ ಅಕ್ರಮವೋ ಅಥವಾ ತಾಂತ್ರಿಕ ದೋಷವೋ (Technical glitch) ಎಂಬುದನ್ನು ಮೊದಲು ಪತ್ತೆಹಚ್ಚಬೇಕಿದೆ. ಒಂದು ವೇಳೆ ಇದು ಹಣಕಾಸಿನ ಅಕ್ರಮವಾಗಿದ್ದರೆ, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ತಿಳಿಸಿದ್ದಾರೆ.


