Homeಕರ್ನಾಟಕಕರ್ನಾಟಕ SIR : ಚುನಾವಣಾ ಅಧಿಕಾರಿಗಳಿಂದಲೇ 61,000ಕ್ಕೂ ಹೆಚ್ಚು ಫಾರಂ-7 ಅರ್ಜಿ ಸಲ್ಲಿಕೆ; ಒಂದರಲ್ಲೂ ಕಾರಣ...

ಕರ್ನಾಟಕ SIR : ಚುನಾವಣಾ ಅಧಿಕಾರಿಗಳಿಂದಲೇ 61,000ಕ್ಕೂ ಹೆಚ್ಚು ಫಾರಂ-7 ಅರ್ಜಿ ಸಲ್ಲಿಕೆ; ಒಂದರಲ್ಲೂ ಕಾರಣ ಉಲ್ಲೇಖಿಸಿಲ್ಲ-ವರದಿ

- Advertisement -
- Advertisement -

ಕರ್ನಾಟಕದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವಂತೆ ಕೋರಿ ಕನಿಷ್ಠ 61,059 ಫಾರಂ-7 ಅರ್ಜಿಗಳನ್ನು ಸ್ವತಃ ಚುನಾವಣಾ ಅಧಿಕಾರಿಗಳೇ ಸಲ್ಲಿಸಿದ್ದು, ಅವುಗಳಲ್ಲಿ ಒಂದೇ ಒಂದು ಅರ್ಜಿಯಲ್ಲೂ ಹೆಸರು ಕೈಬಿಡಲು ಕಾರಣವನ್ನು ನಮೂದಿಸಿಲ್ಲ. ಮತದಾರರ ನೋಂದಣಿ ನಿಯಮಗಳು, 1960ರ ಅಡಿಯಲ್ಲಿ ಹೆಸರು ಕೈಬಿಡುವುದಕ್ಕೆ ಕಾರಣವನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ ಎಂದು thehindu.com ಸೋಮವಾರ (ಅ.26) ವರದಿ ಮಾಡಿದೆ.

ಈ ಅರ್ಜಿಗಳಲ್ಲಿ ಆಕ್ಷೇಪಣಾದಾರರೆಂದು ಪಟ್ಟಿ ಮಾಡಲಾದ ಚುನಾವಣಾ ನೋಂದಣಾಧಿಕಾರಿಗಳು (EROs) ಮತ್ತು ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು (AEROs), ಮ್ಯಾಪಿಂಗ್ ಮಾಡದಿರುವುದಕ್ಕೆ ಅಥವಾ ತಾರ್ಕಿಕ ವ್ಯತ್ಯಾಸಗಳಿಗಾಗಿ ನೀಡಲಾದ ನೋಟಿಸ್‌ಗಳ ವಿಚಾರಣೆಯ ಸಮಯದಲ್ಲಿ ಮತದಾರರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ವ್ಯವಸ್ಥೆಯು (system) ಅವರ ಡಿಜಿಟಲ್ ಸಹಿಯೊಂದಿಗೆ ಫಾರಂಗಳನ್ನು ‘ಸ್ವಯಂಚಾಲಿತವಾಗಿ ಸೃಷ್ಟಿಸಿದೆ’ (auto-generated). ಆದ್ದರಿಂದ ಆ ಮತದಾರರನ್ನು ‘ಅನರ್ಹರು’ ಎಂದು ಗುರುತಿಸಲಾಗಿದೆ ಎಂಬುವುದಾಗಿ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಇದರರ್ಥ ಮತದಾರರ ಹೆಸರುಗಳ ವಿರುದ್ಧ ಆಕ್ಷೇಪಣೆಗಳನ್ನು ಎತ್ತುವುದು ಮತ್ತು ಆ ಹೆಸರುಗಳು ಮತದಾರರ ಪಟ್ಟಿಯಲ್ಲಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ಎರಡನ್ನೂ ಒಂದೇ ಚುನಾವಣಾ ವ್ಯವಸ್ಥೆಯು ಮಾಡುತ್ತಿತ್ತು ಎಂದಾಗುತ್ತದೆ. ಮತದಾರರ ನೋಂದಣಿ ನಿಯಮಗಳು, 1960ರ ಅಡಿಯಲ್ಲಿ, ಕಾರಣವನ್ನು ನಮೂದಿಸುವುದು ಸೇರಿದಂತೆ ನಿಗದಿತ ನಮೂನೆಯಲ್ಲಿ ಸಲ್ಲಿಕೆಯಾಗದ ಆಕ್ಷೇಪಣೆಯನ್ನು ತಿರಸ್ಕರಿಸಬೇಕಾಗುತ್ತದೆ.

ಮತದಾರರು ಬೇರೆಡೆಗೆ ವಲಸೆ ಹೋಗಿದ್ದರೆ, ಅವರ ಹೆಸರು ಮತ್ತೊಂದು ಕಡೆ ನಕಲಾಗಿ ನಮೂದಾಗಿದ್ದರೆ, ಅಪ್ರಾಪ್ತ ವಯಸ್ಕರಾಗಿದ್ದರೆ, ಮರಣ ಹೊಂದಿದ್ದರೆ ಅಥವಾ ಭಾರತದ ನಾಗರಿಕರಲ್ಲದಿದ್ದರೆ ಫಾರಂ-7 ಅರ್ಜಿಗಳನ್ನು ಸಲ್ಲಿಸುವಂತೆ ತಮಗೆ ಸೂಚನೆ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಫಾರಂಗಳು ಸ್ವಯಂಚಾಲಿತವಾಗಿ ಸೃಷ್ಟಿಯಾಗಿದ್ದರಿಂದ (auto-generated), ಹೆಸರು ಕೈಬಿಡಲು ಕೋರುವ ಕಾರಣದ ಕಾಲಂ ಅನ್ನು ಖಾಲಿ ಬಿಡಲಾಗಿತ್ತು ಎಂದು ಹೇಳಿದ್ದಾರೆ.

ಯಾವುದೇ ಕಾರಣವನ್ನು ದಾಖಲಿಸದ ಕಾರಣ, ಒಬ್ಬ ನಿರ್ದಿಷ್ಟ ಮತದಾರನ ಹೆಸರನ್ನು ಏಕೆ ಕೈಬಿಡಲು ಗುರುತಿಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಅಥವಾ ಆ ಹೆಸರನ್ನು ತೆಗೆದುಹಾಕಿರುವುದು ಸಮರ್ಥನೀಯವೇ ಎಂಬುದನ್ನು ಪರಿಶೀಲಿಸಲು ಮತದಾರನಿಗಾಗಲಿ ಅಥವಾ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಇತರ ಯಾರಿಗೇ ಆಗಲಿ ಸಾಧ್ಯವಾಗುವುದಿಲ್ಲ.

ಇದಲ್ಲದೆ, ಈ ವರ್ಗದ ಮತದಾರರನ್ನು (ಎಎಸ್‌ಡಿಡಿಒ-ಗೈರುಹಾಜರು, ಸ್ಥಳಾಂತರಗೊಂಡವರು, ನಕಲಿ, ಮೃತಪಟ್ಟವರು ಮತ್ತು ಇತರರು) ಈಗಾಗಲೇ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಗಣತಿಯ ಹಂತದಲ್ಲಿ ಪರಿಶೀಲಿಸಲಾಗಿತ್ತು. ಇದು ಕರ್ನಾಟಕದ ಕರಡು ಮತದಾರರ ಪಟ್ಟಿಯಿಂದ 1.07 ಕೋಟಿಗೂ ಹೆಚ್ಚು ಹೆಸರುಗಳನ್ನು ಕೈಬಿಡಲು ಕಾರಣವಾಗಿತ್ತು. ಇವುಗಳಲ್ಲಿ ಹೆಚ್ಚಿನ ಹೆಸರುಗಳನ್ನು ಮತದಾರರು ಕಾಯಂ ಆಗಿ ಸ್ಥಳಾಂತರಗೊಂಡಿದ್ದಾರೆ ಎಂಬ ಆಧಾರದ ಮೇಲೆ ತೆಗೆದುಹಾಕಲಾಗಿದ್ದರೆ, ಆ ನಂತರದ ಸ್ಥಾನದಲ್ಲಿ ಗೈರುಹಾಜರಾಗಿದ್ದಾರೆ ಎಂದು ಗುರುತಿಸಲಾದವರ ಹೆಸರುಗಳಿದ್ದವು ಎಂದು ವರದಿ ವಿವರಿಸಿದೆ.

ಆಕ್ಷೇಪಣೆಗಳ ಅವಧಿ ಮುಗಿದ ನಂತರ ಏರಿಕೆ

ಸೆಪ್ಟೆಂಬರ್ 23, 2026ರಂದು ಹಕ್ಕುಗಳು ಮತ್ತು ಆಕ್ಷೇಪಣೆಗಳ ಸಲ್ಲಿಕೆಯ ಅವಧಿ ಮುಗಿದ ನಂತರ, ಚುನಾವಣಾ ಅಧಿಕಾರಿಗಳು ಸಲ್ಲಿಸಿದ ಫಾರಂ-7 ಅರ್ಜಿಗಳ ಸಂಖ್ಯೆಯು ತೀವ್ರವಾಗಿ ಏರಿಕೆಯಾಗಿದೆ. ಆಗಸ್ಟ್ 24 ರಿಂದ ಸೆಪ್ಟೆಂಬರ್ 23ರ ನಡುವೆ ಇಂತಹ ಕೇವಲ 192 ಅರ್ಜಿಗಳು ಮಾತ್ರ ಸ್ವೀಕೃತವಾಗಿದ್ದವು. ಆದರೆ ಹಕ್ಕುಗಳು ಮತ್ತು ಆಕ್ಷೇಪಣೆಗಳ ಅವಧಿಯ ನಂತರ, ಅಂದರೆ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 22ರ ನಡುವೆ 60,800ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ಗಡುವು ಹತ್ತಿರ ಬರುತ್ತಿದ್ದಂತೆ ಅರ್ಜಿಗಳ ಸಲ್ಲಿಕೆಯು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಂದುವರಿದಿದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ಕೊನೆಯ ದಿನವಾಗಿದ್ದ ಅಕ್ಟೋಬರ್ 22ರಂದು, ಚುನಾವಣಾ ಅಧಿಕಾರಿಗಳು 10,105 ಫಾರಂ-7 ಅರ್ಜಿಗಳನ್ನು ಸಲ್ಲಿಸಿದ್ದರು. ಅದರ ಹಿಂದಿನ ದಿನವಾದ ಅಕ್ಟೋಬರ್ 21ರಂದು ಮತ್ತೊಂದು 10,314 ಅರ್ಜಿಗಳು ಸಲ್ಲಿಕೆಯಾಗಿದೆ. ಇನ್ನು ಅಕ್ಟೋಬರ್ 17 ಮತ್ತು 19 ರಂದು ಅಧಿಕಾರಿಗಳು ಕ್ರಮವಾಗಿ 11,132 ಮತ್ತು 11,760 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ವರದಿ ವಿವರಿಸಿದೆ.

ಹೆಸರುಗಳು ಈಗಾಗಲೇ ಡಿಲೀಟ್ ಆಗಿವೆ

ಚುನಾವಣಾ ಅಧಿಕಾರಿಗಳು ಫಾರಂ-7 ಅರ್ಜಿಗಳನ್ನು ಸಲ್ಲಿಸಿದ್ದ ಹಲವಾರು ಮತದಾರರ ಎಪಿಕ್ ಸಂಖ್ಯೆಗಳನ್ನು ‘ದಿ ಹಿಂದೂ’ ಪತ್ರಿಕೆಯು ಭಾರತೀಯ ಚುನಾವಣಾ ಆಯೋಗದ ಪೋರ್ಟಲ್‌ನಲ್ಲಿ ಪರಿಶೀಲಿಸಿದೆ. ಪರಿಶೀಲಿಸಿದ ಎಲ್ಲಾ ಪ್ರಕರಣಗಳಲ್ಲಿ, ಸೆಪ್ಟೆಂಬರ್ 23ರ ನಂತರ ಅರ್ಜಿ ಸಲ್ಲಿಸಿದವರ ಹೆಸರುಗಳು ಸೇರಿದಂತೆ ಎಲ್ಲರ ಹೆಸರುಗಳನ್ನು ಈಗಾಗಲೇ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವರದಿ ಹೇಳಿದೆ.

ಇದರರ್ಥ, ಇದು ನಿಗದಿತ ಅವಧಿಯೊಳಗೆ ಅಥವಾ ನಿಗದಿತ ನಮೂನೆ ಮತ್ತು ವಿಧಾನದಲ್ಲಿ ಸಲ್ಲಿಕೆಯಾಗದ ಯಾವುದೇ ಹಕ್ಕು ಅಥವಾ ಆಕ್ಷೇಪಣೆಯನ್ನು “ನೋಂದಣಾಧಿಕಾರಿಯು ತಿರಸ್ಕರಿಸತಕ್ಕದ್ದು” ಎಂದು ತಿಳಿಸುವ ಮತದಾರರ ನೋಂದಣಿ ನಿಯಮಗಳು, 1960 ರ ನಿಯಮ 17ಕ್ಕೆ ಇದು ತದ್ವಿರುದ್ಧವಾಗಿದೆ. ಅಷ್ಟೇ ಅಲ್ಲದೆ, ಹೆಸರುಗಳನ್ನು ಕೈಬಿಡುವ ಮುನ್ನ ಕಡ್ಡಾಯವಾಗಿ ನೀಡಬೇಕಾದ ವಿಚಾರಣಾ ನೋಟಿಸ್‌ಗಳು ಅಥವಾ ಆದೇಶಗಳನ್ನು ಈ ಪ್ರಕರಣಗಳಲ್ಲಿ ನೀಡಲಾಗಿದೆಯೇ ಅಥವಾ ಯಾವ ಆಧಾರದ ಮೇಲೆ ಹೆಸರುಗಳನ್ನು ಕೈಬಿಡಲಾಗಿದೆ ಎಂಬುದು ಸಹ ಅಸ್ಪಷ್ಟವಾಗಿಯೇ ಉಳಿದಿದೆ, ಏಕೆಂದರೆ ಸಂಬಂಧಿತ ವಿವರಗಳ ಕಾಲಂ ಅನ್ನು ಖಾಲಿ ಬಿಡಲಾಗಿತ್ತು.

ಚುನಾವಣಾ ಅಧಿಕಾರಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಫಾರಂ-7 ಅರ್ಜಿಗಳನ್ನು ಸಲ್ಲಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಕ್ಷಿಣ ಜಿಲ್ಲೆಯಲ್ಲಿ, ಅಧಿಕಾರಿಗಳು ಸಲ್ಲಿಸಿದ ಅರ್ಜಿಗಳ ಸಂಖ್ಯೆಯು ಮತದಾರರು ಅಥವಾ ಮೂರನೇ ವ್ಯಕ್ತಿಗಳು ಸಲ್ಲಿಸಿದ ಅರ್ಜಿಗಳಿಗಿಂತ ಹೆಚ್ಚಾಗಿತ್ತು. ಈ ಜಿಲ್ಲೆಯಲ್ಲಿ ಸಲ್ಲಿಕೆಯಾದ ಒಟ್ಟು 17,491 ಅರ್ಜಿಗಳಲ್ಲಿ 10,374 ಅರ್ಜಿಗಳನ್ನು ಸ್ವತಃ ಅಧಿಕಾರಿಗಳೇ ಸಲ್ಲಿಸಿದ್ದರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ಸಲ್ಲಿಕೆಯಾದ 5,757 ಅರ್ಜಿಗಳ ಪೈಕಿ 4,095 ಅರ್ಜಿಗಳನ್ನು ಅಧಿಕಾರಿಗಳೇ ಸಲ್ಲಿಸಿದ್ದಾರೆ.

ಮತದಾರರು ಅಥವಾ ಮೂರನೇ ವ್ಯಕ್ತಿಗಳಿಗಿಂತ ಚುನಾವಣಾ ನೋಂದಣಾಧಿಕಾರಿಗಳು (EROs) ಮತ್ತು ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು (AEROs) ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಅರ್ಜಿಗಳನ್ನು ಸಲ್ಲಿಸಿರುವ ಈ ಪ್ರವೃತ್ತಿಯು ಕನಿಷ್ಠ 26 ವಿಧಾನಸಭಾ ಕ್ಷೇತ್ರಗಳಲ್ಲಿ ಕಂಡುಬಂದಿದೆ ಎಂದು ವರದಿ ಹೇಳಿದೆ.

ಕರ್ನಾಟಕದ ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 27ರಂದು ಪ್ರಕಟಗೊಳ್ಳಲು ನಿಗದಿಯಾಗಿದೆ. ಸೆಪ್ಟೆಂಬರ್ 23ರೊಳಗೆ ಸ್ವೀಕೃತವಾದ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಮಾತ್ರ ಅಂತಿಮ ಪಟ್ಟಿಗೆ ಪರಿಗಣಿಸಬೇಕಾಗಿತ್ತು. ಗಡುವಿನ ನಂತರ ಸಲ್ಲಿಕೆಯಾದ ಅರ್ಜಿಗಳನ್ನು ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಬಳಿಕ ಬರುವ ಪೂರಕ ಪಟ್ಟಿಗೆ (supplementary roll) ಮಾತ್ರ ಪರಿಗಣಿಸಬೇಕಾಗಿತ್ತು. ಆದಾಗ್ಯೂ, ‘ದಿ ಹಿಂದೂ’ ನಡೆಸಿದ ಮಾದರಿ ಪರಿಶೀಲನೆಗಳಲ್ಲಿ, ಗಡುವು ಮುಗಿದ ನಂತರ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿನ ಮತದಾರರ ಹೆಸರುಗಳನ್ನು ಸಹ ಈಗಾಗಲೇ ಪಟ್ಟಿಯಿಂದ ಕೈಬಿಟ್ಟಿರುವುದು ಪತ್ತೆಯಾಗಿದೆ ಎಂದಿದೆ.

ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ತೋರಿಸುವ ಅರ್ಜಿಗಳ ಸಂಖ್ಯೆಗೂ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ನೀಡುವ ಲೆಕ್ಕಕ್ಕೂ ಹೊಂದಾಣಿಕೆಯಾಗುತ್ತಿಲ್ಲ. ವೆಬ್‌ಸೈಟ್‌ಗಿಂತ ಅಧಿಕಾರಿಗಳ ಹೇಳಿಕೆಯಲ್ಲಿ ಹೆಚ್ಚಿನ ಸಂಖ್ಯೆಯಿದೆ. ಹಾಗಾಗಿ, ನಿಯಮ ಮೀರಿ ತೆಗೆದುಹಾಕಲಾದ ಮತದಾರರ ಹೆಸರುಗಳ ನಿಜವಾದ ಸಂಖ್ಯೆ ವರದಿಯಲ್ಲಿ ಹೇಳಿರುವುದಕ್ಕಿಂತಲೂ ಇನ್ನೂ ಹೆಚ್ಚಿರಬಹುದು. ಈ ಗೊಂದಲವನ್ನು ‘ದಿ ಹಿಂದೂ’ ಪತ್ರಿಕೆ ಈಗಾಗಲೇ ಬಯಲಿಗೆಳೆದಿದೆ.

ಸೆಪ್ಟೆಂಬರ್ 24ರಿಂದ ಅಕ್ಟೋಬರ್ 22ರ ನಡುವೆ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ (ಸಿಇಒ) ಕಚೇರಿಯು 1,70,442 ಫಾರಂ-7 ಅರ್ಜಿಗಳು ಬಂದಿರುವುದಾಗಿ ವರದಿ ಮಾಡಿದೆ. ಆದರೆ, ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್‌ನಲ್ಲಿರುವ ಕ್ರೋಡೀಕೃತ ಫಾರಂ-10 ದಾಖಲೆಗಳಲ್ಲಿ ಕೇವಲ 1,56,634 ಅರ್ಜಿಗಳು ಮಾತ್ರ ಲಭ್ಯವಿದ್ದವು. ಇದರಿಂದಾಗಿ ಎರಡು ದಾಖಲೆಗಳ ನಡುವೆ 13,808 ಅರ್ಜಿಗಳ ವ್ಯತ್ಯಾಸ ಕಂಡುಬಂದಿದೆ ಎಂದು ವರದಿ ಹೇಳಿದೆ.

Courtesy : thehindu.com



























 




















ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖಾಸಗಿ ಶಾಲೆಗಳಿಗೆ ಸಂಬಂಧಿಸಿದ 100 ಕೋಟಿ ರೂಪಾಯಿ ಹಗರಣ: ತಮಿಳುನಾಡು ಮಾಜಿ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ

ಖಾಸಗಿ ಶಾಲೆಗಳಿಗೆ ಸಂಬಂಧಿಸಿದ 100 ಕೋಟಿ ರೂಪಾಯಿ ಮೌಲ್ಯದ ಹಗರಣವೊಂದಕ್ಕೆ ಸಂಬಂಧಿಸಿದಂತೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಹಾಗೂ ತಮಿಳುನಾಡಿನ ಮಾಜಿ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರನ್ನು...

‘ಉತ್ತರ ಪ್ರದೇಶ ಪೊಲೀಸರಿಗೆ ತನಿಖೆಯ ಸೂಕ್ತ ತರಬೇತಿ ಅಗತ್ಯ’: 6 ವರ್ಷ ಅನಗತ್ಯವಾಗಿ ಜೈಲಿನಲ್ಲಿದ್ದ ವ್ಯಕ್ತಿಯನ್ನು ಖುಲಾಸೆಗೊಳಿಸಿ ₹6 ಲಕ್ಷ ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಆದೇಶ!

ಅಪಹರಣ ಮತ್ತು ಕೊಲೆ ಪ್ರಕರಣವೊಂದರಲ್ಲಿ ಯಾವುದೇ ಆಧಾರವಿಲ್ಲದೆ ಸುದೀರ್ಘ 6 ವರ್ಷಗಳ ಕಾಲ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಾಲ ಕಳೆದ ಅರುಣ್ ಅಲಿಯಾಸ್ ದೀಪಕ್ ಎಂಬ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ನಿರಪರಾಧಿ...

ನವದೆಹಲಿ| ರಾಷ್ಟ್ರಪತಿ ಭವನ ಸಮೀಪದ ನಾರ್ತ್ ಬ್ಲಾಕ್‌ನಲ್ಲಿ ಬೆಂಕಿ ಅವಘಡ; ದಟ್ಟ ಹೊಗೆ

ನವದೆಹಲಿಯ ರಾಷ್ಟ್ರಪತಿ ಭವನದ ಸಮೀಪವಿರುವ ನಾರ್ತ್ ಬ್ಲಾಕ್ ಪ್ರದೇಶದಲ್ಲಿ ಸೋಮವಾರ ಸಣ್ಣ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ...

ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನಗಳ ಡಿಕ್ಕಿ; ಎಸ್‌ಐಟಿ ತನಿಖೆಗೆ ಆದೇಶ

ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗಾಗಿ ಸುಲ್ತಾನ್‌ಪುರ ನ್ಯಾಯಾಲಯಕ್ಕೆ ತೆರಳುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆಯಲ್ಲಿದ್ದ ಹಲವು ವಾಹನಗಳು 'ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ'ನಲ್ಲಿ ಪರಸ್ಪರ ಡಿಕ್ಕಿ...

ಮಹಾರಾಷ್ಟ್ರ ಮತದಾರರ ಪಟ್ಟಿ ಪರಿಷ್ಕರಣೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್, ತಡೆ ನೀಡಲು ನಿರಾಕರಣೆ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಭಾರತೀಯ ಚುನಾವಣಾ ಆಯೋಗಕ್ಕೆ...

ಮತದಾರರನ್ನು ಪ್ರಭಾವಿಸಲು ಬಿಜೆಪಿ ಹಣ – ಬೆದರಿಕೆ ಬಳಸುತ್ತಿದೆ: ಮಮತಾ ಆರೋಪ

ಬಿಜೆಪಿ ಹಣ ಮತ್ತು ಬೆದರಿಕೆಯನ್ನು ಬಳಸಿ ಜನರನ್ನು ಪ್ರಭಾವಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. "ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರ ದೌರ್ಜನ್ಯಗಳು ಹೆಚ್ಚಾಗಿವೆ, ಸರ್ಕಾರಿ ಅಧಿಕಾರಿಗಳು...

ಬ್ರೆಜಿಲ್ ಚುನಾವಣೆ: ಟ್ರಂಪ್ ಬೆಂಬಲಿತ ಬಲಪಂಥೀಯ ಬೋಲ್ಸೊನಾರೊಗೆ ಸೋಲು; ನಾಲ್ಕನೇ ಬಾರಿಗೆ ಎಡಪಂಥೀಯ ಲುಲಾಗೆ ಗೆಲುವು 

ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ತೀವ್ರ ಬಲಪಂಥೀಯ ಎದುರಾಳಿ ಫ್ಲಾವಿಯೊ ಬೋಲ್ಸೊನಾರೊ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶ ಬ್ರೆಜಿಲ್‌ನ...

ಭಾರತ-ಚೀನಾ ಗಡಿ ಸಮಸ್ಯೆಗಳ ಕುರಿತ 26 ರೆಡ್ಡಿಟ್ ಪೋಸ್ಟ್‌ಗಳಿಗೆ ನಿರ್ಬಂಧ: ಕೇಂದ್ರದ ರಹಸ್ಯ ಆದೇಶದ ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಐಎಫ್‌ಎಫ್

ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದ ಚರ್ಚೆಗಳು, ಸೇನಾ ದೃಶ್ಯಗಳ ಪರಿಶೀಲನೆ, ಉಪಗ್ರಹ ಚಿತ್ರಗಳ ವರದಿ ಮತ್ತು ಅರುಣಾಚಲ ಪ್ರದೇಶದ ಮೇಲಿನ ಚೀನಾದ ಹಕ್ಕುಗಳ ಕುರಿತು ಪ್ರಕಟವಾಗಿದ್ದ 26 ರೆಡ್ಡಿಟ್ ಪೋಸ್ಟ್‌ಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ....

ಅಮಿತ್ ಶಾ ಕುರಿತ ಹೇಳಿಕೆಗಳಿಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದಿಂದ ರಾಹುಲ್ ಗಾಂಧಿ ಖುಲಾಸೆ

ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ಸಂಸದರು/ಶಾಸಕರ ವಿಶೇಷ ನ್ಯಾಯಾಲಯವು, ಹಿರಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಾಗಿದ್ದ 2018ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸುವ ಮೂಲಕ ಅವರಿಗೆ ದೊಡ್ಡ ನಿರಾಳತೆಯನ್ನು ನೀಡಿದೆ....

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾಗದಂತೆ ತಡೆಯಲು ಎಐಎಂಐಎಂ ಶ್ರಮಿಸಲಿದೆ: ಅಸದುದ್ದೀನ್ ಓವೈಸಿ

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾಗದಂತೆ ನೋಡಿಕೊಳ್ಳಲು ತಮ್ಮ ಪಕ್ಷವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸದುದ್ದೀನ್ ಓವೈಸಿ ಭಾನುವಾರ (ಅ.25) ಹೇಳಿದ್ದಾರೆ. ಶಮ್ಲಿ...