Homeಮುಖಪುಟಗ್ಯಾನೇಶ್ ಕುಮಾರ್ ಕಾರ್ಯವೈಖರಿ ಪ್ರಶ್ನಿಸಿ ಅರ್ಜಿ : ಚುನಾವಣಾ ಆಯೋಗದ ಉತ್ತರಕ್ಕೆ ಪ್ರತಿಕ್ರಿಯಿಸಲು 10 ದಿನಗಳ...

ಗ್ಯಾನೇಶ್ ಕುಮಾರ್ ಕಾರ್ಯವೈಖರಿ ಪ್ರಶ್ನಿಸಿ ಅರ್ಜಿ : ಚುನಾವಣಾ ಆಯೋಗದ ಉತ್ತರಕ್ಕೆ ಪ್ರತಿಕ್ರಿಯಿಸಲು 10 ದಿನಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್

- Advertisement -
- Advertisement -

ಭಾರತೀಯ ಚುನಾವಣಾ ಆಯೋಗದ (ಇಸಿಐ) ಕಾರ್ಯವೈಖರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು (ಅ.27) ಮುಂದೂಡಿದೆ. ನಿನ್ನೆ ಇಸಿಐ ಸಲ್ಲಿಸಿರುವ ಆಕ್ಷೇಪಣಾ ಅಫಿಡವಿಟ್‌ಗೆ (ಕೌಂಟರ್ ಅಫಿಡವಿಟ್) ಪ್ರತ್ಯುತ್ತರ (ರಿಜಾಯಿಂಡರ್) ಸಲ್ಲಿಸಲು ಅರ್ಜಿದಾರರಿಗೆ ನ್ಯಾಯಾಲಯವು 10 ದಿನಗಳ ಕಾಲಾವಕಾಶ ನೀಡಿದೆ.

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿ ಹಾಗೂ ಭಾರತೀಯ ಚುನಾವಣಾ ಆಯೋಗದ (ಇಸಿಐ) ಹಲವು ನಿರ್ಧಾರಗಳನ್ನು (ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ನಿರ್ಧಾರಗಳೂ ಸೇರಿದಂತೆ) ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ನಡೆಸಿದೆ.

ಸಂಕ್ಷಿಪ್ತ ವಿಚಾರಣೆಯ ವೇಳೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿಯಾ ಒಕ್ಕೂಟದ ನಾಯಕರು ಸಲ್ಲಿಸಿರುವ ಅರ್ಜಿಯ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಚುನಾವಣಾ ಆಯೋಗದ ನಿರ್ಧಾರಗಳು ಸರ್ವಾನುಮತದಿಂದ ಕೂಡಿದ್ದವೇ ಅಥವಾ ಏಕಪಕ್ಷೀಯವಾಗಿದ್ದವೇ ಎಂಬುದನ್ನು ನಿರ್ಧರಿಸಲು ಇದು ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಆಯೋಗದ ಫೈಲ್-ನೋಟಿಂಗ್ಸ್ (ಕಡತದ ಟಿಪ್ಪಣಿಗಳು) ಮತ್ತು ಆಂತರಿಕ ಸಂವಹನಗಳನ್ನು ಸುರಕ್ಷಿತವಾಗಿ ಕಾಯ್ದಿರಿಸಲು ಆದೇಶ ಹೊರಡಿಸಬೇಕೆಂದು ಅವರು ಸುಪ್ರೀಂ ಕೋರ್ಟ್‌ಗೆ ವಿನಂತಿಸಿದ್ದಾರೆ.

ಈ ಇಡೀ ವಿಷಯವು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ, ಸಮಾಲೋಚನೆ ಮತ್ತು ಆ ನಿರ್ಧಾರವು ಸರ್ವಾನುಮತದಿಂದ ಕೂಡಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಕಡತದ ಟಿಪ್ಪಣಿಗಳನ್ನು ಮತ್ತು ಮತ್ತಿತರ ದಾಖಲೆಗಳನ್ನು ಸುರಕ್ಷಿತವಾಗಿ ಕಾಯ್ದಿರಿಸಲು ಅನುಮತಿಸಬೇಕು ಎಂದು ಸಿಂಘ್ವಿ ಕೋರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ನಮಗೆ ಎಲ್ಲವೂ ತಿಳಿದಿದೆ, ನಾವು ಪರಿಶೀಲಿಸುತ್ತೇವೆ” ಎಂದು ಉತ್ತರಿಸಿದ್ದಾರೆ.

ಟಿಎಂಸಿ ಸಂಸದೆ ಡೋಲಾ ಸೇನ್ ಸಲ್ಲಿಸಿರುವ ರಿಟ್ ಅರ್ಜಿಯ ಪರವಾಗಿ ಹಾಜರಾದ ಹಿರಿಯ ವಕೀಲೆ ಡಾ. ಮೇನಕಾ ಗುರುಸ್ವಾಮಿ ಇಸಿಐ ಸಲ್ಲಿಸಿರುವ ಅಫಿಡವಿಟ್ ಅರ್ಜಿದಾರರು ಮಂಡಿಸಿದ ವಾದಗಳನ್ನು ದೃಢೀಕರಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಚುನಾವಣಾ ಆಯೋಗವು ‘ಫಾರಂ 6’ ಅನ್ನು ತಿರುಚಿದೆ ಮತ್ತು ಸುಪ್ರೀಂ ಕೋರ್ಟ್ ಅದಕ್ಕೆ ಅನುಮೋದನೆ ನೀಡಿದೆ ಎಂದು ಸುಳ್ಳು ಪ್ರತಿಪಾದಿಸಿ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿದೆ ಎಂದು ಅವರು ವಾದಿಸಿದ್ದಾರೆ.

ಇಸಿಐ ಪರವಾಗಿ ಹಾಜರಾದ ಹಿರಿಯ ವಕೀಲರಾದ ಡಾ. ಮಣಿಂದರ್ ಸಿಂಗ್ ಅವರು ಈ ವಾದವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಅಲ್ಲದೆ, ಇದು ಕೇವಲ ಹೊರಗಿನವರಿಗಾಗಿ (ಸಾರ್ವಜನಿಕ ಪ್ರಚಾರಕ್ಕಾಗಿ) ಮಾಡಿದ “ಅಲಂಕಾರಿಕ ಮಾತುಗಳು” (rhetoric) ಎಂದು ಹೇಳಿದ್ದಾರೆ.

ಮುಖ್ಯ ಅರ್ಜಿದಾರ ರಾಕೇಶ್ ಸಿಂಗ್ ಪರವಾಗಿ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು, ಪ್ರತಿಕ್ರಿಯೆ (rejoinder) ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ.

ವಿಚಾರಣೆಯನ್ನು ಮುಂದೂಡಿದ ನ್ಯಾಯಪೀಠವು, ಈ ವಿಷಯವನ್ನು ತಾತ್ಕಾಲಿಕವಾಗಿ ನವೆಂಬರ್ 17ಕ್ಕೆ ಪಟ್ಟಿ ಮಾಡಿದೆ.

ರಾಕೇಶ್ ಕುಮಾರ್ ಸಿಂಗ್ ಅಲಿಯಾಸ್ ರಾಕೇಶ್ ಸಿಂಗ್ V/s ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು ಎಂಬ ಪ್ರಮುಖ ಪ್ರಕರಣದಲ್ಲಿ, ಗ್ಯಾನೇಶ್ ಕುಮಾರ್ ಅವರ ಅಮಾನತಿಗೆ ಕೋರಿದ್ದ ಏಕಪಕ್ಷೀಯ ಮಧ್ಯಂತರ ಆದೇಶವನ್ನು ನೀಡಲು ನಿರಾಕರಿಸಿದ್ದ ನ್ಯಾಯಾಲಯವು, ಅಕ್ಟೋಬರ್ 5ರಂದು ನೋಟಿಸ್ ಜಾರಿ ಮಾಡಿತ್ತು. ಇತ್ತೀಚೆಗೆ ತನ್ನ ಆಕ್ಷೇಪಣಾ ಅಫಿಡವಿಟ್‌ನಲ್ಲಿ ಈ ಆರೋಪಗಳನ್ನು ನಿರಾಕರಿಸಿರುವ ಇಸಿಐ, ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಆಯೋಗವು ಸರ್ವಾನುಮತದಿಂದಲೇ ತೆಗೆದುಕೊಂಡಿದೆ ಎಂದು ವಾದಿಸಿದೆ.

ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ಬಳಸುವ ‘ಫಾರಂ- 6’ ಅನ್ನು ತಿದ್ದುಪಡಿ ಮಾಡಿಲ್ಲ ಎಂದೂ ಸಮರ್ಥಿಸಿಕೊಂಡಿದೆ. ಅಷ್ಟೇ ಅಲ್ಲದೆ, ಗ್ಯಾನೇಶ್ ಕುಮಾರ್ ಅವರು ಸಿಇಸಿ ಆಗಿ ಕಾರ್ಯನಿರ್ವಹಿಸದಂತೆ ತಡೆಯಲು ಕೋರಿ ಸಲ್ಲಿಸಿರುವ ಮನವಿಯು ಕಾನೂನುಬದ್ಧವಾಗಿ ಮಾನ್ಯವಲ್ಲ ಎಂದು ಆಯೋಗವು ವಾದಿಸಿದೆ. ಇದಕ್ಕೆ ಪೂರಕವಾಗಿ ಸಂವಿಧಾನದ 324(5) ನೇ ವಿಧಿಯನ್ನು ಉಲ್ಲೇಖಿಸಿರುವ ಆಯೋಗವು, ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ವಜಾಗೊಳಿಸುವ ವಿಧಾನ ಮತ್ತು ಆಧಾರಗಳ ಮೇಲೆಯೇ ಮುಖ್ಯ ಚುನಾವಣಾ ಆಯುಕ್ತರನ್ನೂ ಹುದ್ದೆಯಿಂದ ತೆಗೆದುಹಾಕಲು ಸಂವಿಧಾನದಲ್ಲಿ ಅವಕಾಶವಿದೆಯೇ ಹೊರತು, ಈ ರೀತಿಯ ಅರ್ಜಿಗಳ ಮೂಲಕ ಅಲ್ಲ ಎಂದು ಪ್ರತಿಪಾದಿಸಿದೆ.

ಈ ಅರ್ಜಿಗಳು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದವು ಎಂಬುವುದು ಇಲ್ಲಿ ನೆನಪಿಸಿಕೊಳ್ಳಬಹುದು. ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ದಾಖಲಿಸಿದ್ದ ಆಕ್ಷೇಪಣೆಗಳ ಹೊರತಾಗಿಯೂ, ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಕನಿಷ್ಠ 14 ಪ್ರಮುಖ ನಿರ್ಧಾರಗಳನ್ನು ಇಸಿಐ ಹೆಸರಿನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಆ ವರದಿಯಲ್ಲಿ ಪ್ರತಿಪಾದಿಸಲಾಗಿತ್ತು.

ರಾಕೇಶ್ ಕುಮಾರ್ ಸಿಂಗ್ ಅವರಲ್ಲದೆ ಇತರ ಅರ್ಜಿದಾರರಲ್ಲಿ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿಯಾ ಒಕ್ಕೂಟದ ಇತರ ನಾಯಕರು, ಹ್ಯೂಮನ್ ಜಸ್ಟಿಸ್ ಆರ್ಗನೈಸೇಶನ್, ಪ್ರಿಯಾ ಮಿಶ್ರಾ, ಎಐಎಂಐಎಂ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ, ಮಾಜಿ ಸಂಸದ ದಿಗ್ವಿಜಯ್ ಸಿಂಗ್ ಮತ್ತು ಪಶ್ಚಿಮ ಬಂಗಾಳದ ಸಂಸದರಾದ ಡೋಲಾ ಸೇನ್ ಸೇರಿದ್ದಾರೆ.

ಆಯೋಗದ ಕಾರ್ಯವೈಖರಿಯು ಸಂವಿಧಾನದ 324ನೇ ವಿಧಿಯ ಅಡಿಯ ಸಾಂವಿಧಾನಿಕ ಚೌಕಟ್ಟು ಮತ್ತು ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023’ ರ ಸೆಕ್ಷನ್ 18 ರ ಅಡಿಯಲ್ಲಿ ಸೂಚಿಸಲಾದ ಶಾಸನಬದ್ಧ ಕಾರ್ಯವಿಧಾನಕ್ಕೆ ಬದ್ಧವಾಗಿದೆಯೇ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಅಕ್ಟೋಬರ್ 5 ರಂದು ನಡೆದ ವಿಚಾರಣೆಯ ವೇಳೆ, ಅರ್ಜಿದಾರ ರಾಕೇಶ್ ಕುಮಾರ್ ಸಿಂಗ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು, ಈ ಆರೋಪಗಳು ಚುನಾವಣಾ ಸಂಸ್ಥೆಯ ಕಾರ್ಯವೈಖರಿ ಮತ್ತು ಮತದಾನದ ಹಕ್ಕುಗಳ ರಕ್ಷಣೆಯ ಕುರಿತು ಗಂಭೀರ ಕಳವಳವನ್ನು ಉಂಟುಮಾಡುತ್ತವೆ ಎಂದು ವಾದಿಸಿ, ಮಧ್ಯಂತರ ಪರಿಹಾರ ನೀಡುವಂತೆ ನ್ಯಾಯಾಲಯಕ್ಕೆ ಒತ್ತಾಯಿಸಿದ್ದರು. “ನ್ಯಾಯಾಲಯವು ಕೆಲವು ಮಧ್ಯಂತರ ಆದೇಶಗಳನ್ನು ಹೊರಡಿಸಲೇಬೇಕು, ಇಲ್ಲದಿದ್ದರೆ ದೇಶವೇ ಹೊತ್ತಿ ಉರಿಯುತ್ತದೆ” ಎಂದು ಸಿಂಗ್ ಅವರು ನ್ಯಾಯಪೀಠದ ಮುಂದೆ ಪ್ರತಿಪಾದಿಸಿದ್ದರು.

ಪ್ರತಿವಾದಿಗಳ ವಾದವನ್ನು ಆಲಿಸದೆಯೇ ಸಿಇಸಿ ಅಮಾನತುಗೊಳಿಸುವ ಬಗ್ಗೆ ನ್ಯಾಯಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇಂತಹ ಆದೇಶವು ಚುನಾವಣಾ ಆಯೋಗದ ಒಟ್ಟಾರೆ ಕಾರ್ಯವೈಖರಿಯನ್ನೇ ಸ್ಥಗಿತಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಪೀಠವು, “ಹಾಗಾದರೆ ಚುನಾವಣೆಗಳನ್ನು ಯಾರು ನಡೆಸುತ್ತಾರೆ?” ಎಂದು ಪ್ರಶ್ನಿಸಿತ್ತು.

ಮಧ್ಯಂತರ ಅವಧಿಯಲ್ಲಿ ಉಳಿದ ಇಬ್ಬರು ಚುನಾವಣಾ ಆಯುಕ್ತರೇ ಆಯೋಗದ ಕಾರ್ಯಕಲಾಪಗಳನ್ನು ನಿರ್ವಹಿಸಬಹುದು ಎಂದು ಸಿಂಗ್ ಸಲಹೆ ನೀಡಿದ್ದರು. ಇದರೊಂದಿಗೆ, ಜಾರಿಯಲ್ಲಿರುವ ಶಾಸನಬದ್ಧ ಚೌಕಟ್ಟಿಗೆ ಅನುಗುಣವಾಗಿ ಚುನಾವಣಾ ಆಯೋಗವು ಎಲ್ಲಾ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಬೇಕು ಅಥವಾ ಸರ್ವಾನುಮತ ಸಾಧ್ಯವಾಗದಿದ್ದಲ್ಲಿ ಬಹುಮತದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶಿಸುವಂತೆ ಅವರು ನ್ಯಾಯಾಲಯವನ್ನು ಕೋರಿದ್ದರು. ಆದರೆ ನ್ಯಾಯಾಲಯವು ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸಿಲ್ಲ.

ಹಿರಿಯ ವಕೀಲರ ವಾದಗಳಿಗೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯ ಕಾಂತ್ ಅವರು, ಚುನಾವಣಾ ಆಯೋಗದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ನಿಯಂತ್ರಿಸುವ ಕಾನೂನು ಕಡ್ಡಾಯವಾಗಿದ್ದು, ಕಾನೂನಿನ ಉಲ್ಲಂಘನೆ ಕಂಡುಬಂದಲ್ಲಿ ನ್ಯಾಯಾಲಯವು ಅಂತಹ ಯಾವುದೇ ಕ್ರಮವನ್ನು ರದ್ದುಗೊಳಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಇದೇ ವೇಳೆ ನ್ಯಾಯಮೂರ್ತಿ ಬಾಗ್ಚಿ ಅವರು, ಸಂಬಂಧಿತ ದಾಖಲೆಗಳನ್ನು ಪರಿಶೀಲಿಸದೆ ಮತ್ತು ಪ್ರತಿವಾದಿಗಳ ವಾದವನ್ನು ಆಲಿಸದೆ, ವಿವಾದಿತ ನಿರ್ಧಾರಗಳು ಏಕಪಕ್ಷೀಯವಾಗಿವೆ ಎಂದು ತೀರ್ಮಾನಿಸಿ ನ್ಯಾಯಾಲಯವು ಏಕಪಕ್ಷೀಯ ಮಧ್ಯಂತರ ಆದೇಶವನ್ನು ಹೊರಡಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು.

ನ್ಯಾಯಪೀಠವು ಅಂತಿಮವಾಗಿ ಕೇಂದ್ರ ಸರ್ಕಾರ, ಭಾರತೀಯ ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ, ಉಪ ಚುನಾವಣಾ ಆಯುಕ್ತ ಮನೀಶ್ ಗರ್ಗ್ ಹಾಗೂ ಐಟಿ ವಿಭಾಗದ ಮಹಾನಿರ್ದೇಶಕಿ ಸೀಮಾ ಖನ್ನಾ ಅವರಿಗೆ ನೋಟಿಸ್ ಜಾರಿ ಮಾಡಿದೆ.

Courtesy :livelaw.in
































 








ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘Declaration not a part of Form-6’ : ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದ ಚುನಾವಣಾ ಆಯೋಗ?

ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ಸೋಮವಾರ (ಅ.26) ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೊಸ ಮತದಾರರನ್ನು ಸೇರಿಸುವ 'ಫಾರಂ-6ರ' ಜೊತೆ ಸಲ್ಲಿಸುವಂತೆ ಸೂಚಿಸಲಾಗಿದ್ದ 'ಘೋಷಣಾ ಪತ್ರ' ಫಾರಂ-6ರ ಭಾಗವಾಗಿರಲಿಲ್ಲ (Declaration not a part of...

‘ತಪ್ಪು ಗ್ರಹಿಕೆ, ಅಶಾಂತಿ’ ನೆಪದಲ್ಲಿ ಉಮರ್ ಖಾಲಿದ್ ಅವರ ಸಂಶೋಧನಾ ಕೃತಿಯನ್ನು ಗ್ರಂಥಾಲಯದಿಂದ ತೆಗೆದ ಐಐಎಸ್‌ಇಆರ್ ಪುಣೆ

ಪುಣೆ: ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರು ಬರೆದ ಪುಸ್ತಕವೊಂದನ್ನು ಗ್ರಂಥಾಲಯಕ್ಕೆ ಹೊಸದಾಗಿ ಸೇರ್ಪಡೆ ಮಾಡಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ...

ತಮಿಳುನಾಡು: ಥೇಣಿ ಉಪಜೈಲಿನಿಂದ 17 ವಿಚಾರಣಾಧೀನ ಕೈದಿಗಳ ಪರಾರಿ; ನಾಲ್ವರು ಪುನಃ ಬಂಧನ

ತಮಿಳುನಾಡಿನ ಆಂಡಿಪಟ್ಟಿ ಸಮೀಪದ ತೆಕ್ಕಂಪಟ್ಟಿ ಉಪಜೈಲಿನಲ್ಲಿ ಜೈಲು ಸಿಬ್ಬಂದಿಯನ್ನು ಥಳಿಸಿ 17 ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದಾರೆ ಎಂದು ಮಂಗಳವಾರ (ಅ.27) ಪೊಲೀಸರು ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಜೈಲಿನಿಂದ ಪರಾರಿಯಾದವರ ಪೈಕಿ...

ಕರ್ನಾಟಕ ಎಸ್ಐಆರ್: ಅಂತಿಮ ಮತದಾರರ ಪಟ್ಟಿಯಿಂದ 99.32 ಲಕ್ಷ ಹೆಸರುಗಳು ಹೊರಕ್ಕೆ; ಮತದಾರರ ಸಂಖ್ಯೆ 4.55 ಕೋಟಿಗೆ ಕುಸಿತ: ವರದಿ

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯಿಂದ ಬರೋಬ್ಬರಿ 99.32 ಲಕ್ಷ ಮತದಾರರ ಹೆಸರುಗಳು ಹೊರಗುಳಿದಿವೆ. ಮಂಗಳವಾರ ಪ್ರಕಟವಾಗಲಿರುವ ಅಂತಿಮ ಪಟ್ಟಿಯಲ್ಲಿ ರಾಜ್ಯದ...

‘ನ್ಯೂಸ್‌ರೂಮ್‌ಗಳೇ ಮುಚ್ಚಿಹೋಗಲಿವೆ’ : ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿಎನ್‌ಪಿಎ; ಕೇಂದ್ರ ಸರ್ಕಾರಕ್ಕೆ ನೋಟಿಸ್

ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ, 2023ರ (DPDP Act) ನಿಬಂಧನೆಗಳನ್ನು ಪ್ರಶ್ನಿಸಿ ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (DNPA) ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಅ.27) ನೋಟಿಸ್...

ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದ್ದಕ್ಕೂ ಗ್ಯಾನೇಶ್ ಕುಮಾರ್ ಮೇಲೆ ಕ್ರಮ ಕೈಗೊಳ್ಳಬೇಕು : ಪ್ರಶಾಂತ್ ಭೂಷಣ್

ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದ್ದಕ್ಕೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಕೈಗೊಂಡ...

SIR ವಿವಾದ: ಎಲ್ಲಾ ಆದೇಶಗಳು ಒಮ್ಮತದಿಂದಲೇ ಎಂದು ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ಅಫಿಡವಿಟ್!

ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR)ಗೆ ಸಂಬಂಧಿಸಿದ ಎಲ್ಲಾ ಆದೇಶಗಳು ಸಂಪೂರ್ಣ ಒಮ್ಮತದಿಂದಲೇ ಹೊರಬಂದಿವೆ ಎಂದು ಭಾರತೀಯ...

ಎಸ್‌ಸಿ-ಎಸ್‌ಟಿ ಮತ್ತು ಮುಸ್ಲಿಮರ ಇತಿಹಾಸ, ಸಂಕಟ ಒಂದೇ, ಸಮಸಮಾಜ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಶೋಷಿತ ಸಮುದಾಯಗಳು ಒಂದಾಗಬೇಕಿದೆ: ರಿಜ್ವಾನ್ ಅರ್ಷದ್

ಸಮಾಜದಲ್ಲಿ ತಾರತಮ್ಯ ಮತ್ತು ಶೋಷಣೆಗೆ ಒಳಗಾದ ಸಮುದಾಯಗಳು ಒಗ್ಗಟ್ಟಾಗಿ ನಿಂತಾಗ ಮಾತ್ರ ಸಾಮಾಜಿಕ ನ್ಯಾಯ ಮತ್ತು ಸಮಾನ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್...

ಮಹಾರಾಷ್ಟ್ರ ಎಸ್‌ಐಆರ್‌ನಲ್ಲಿ ಹೆಸರು ಅಳಿಸಿದ ಬಳಿಕ ಮರು ನೋಂದಣಿ: ಮತದಾರರ ವಿರುದ್ಧ ಕ್ರಮವಿಲ್ಲ ಎಂದ ಸುಪ್ರೀಂ ಕೋರ್ಟ್ 

ನವದೆಹಲಿ: ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವೇಳೆ ಹೆಸರುಗಳನ್ನು ಅಳಿಸಿರುವ ಪ್ರಕರಣದಲ್ಲಿ, ಮರು ನೋಂದಣಿಗೆ ಅರ್ಜಿ ಸಲ್ಲಿಸುವ ಮತದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಸುಪ್ರೀಂ...

ಖಾಸಗಿ ಶಾಲೆಗಳಿಗೆ ಸಂಬಂಧಿಸಿದ 100 ಕೋಟಿ ರೂಪಾಯಿ ಹಗರಣ: ತಮಿಳುನಾಡು ಮಾಜಿ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ

ಖಾಸಗಿ ಶಾಲೆಗಳಿಗೆ ಸಂಬಂಧಿಸಿದ 100 ಕೋಟಿ ರೂಪಾಯಿ ಮೌಲ್ಯದ ಹಗರಣವೊಂದಕ್ಕೆ ಸಂಬಂಧಿಸಿದಂತೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಹಾಗೂ ತಮಿಳುನಾಡಿನ ಮಾಜಿ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರನ್ನು...