ಅರ್ನಬ್ ಚಂಡಮಾರುತವು ಆಂಧ್ರಪ್ರದೇಶದಲ್ಲಿ ಭಾರೀ ಹಾನಿಯನ್ನುಂಟುಮಾಡಿದೆ. ಚಂಡಮಾರುತದಿಂದಾಗಿ ಮೂವರು ಮೃತಪಟ್ಟಿದ್ದು, 31 ಮನೆಗಳು ಹಾನಿಗೀಡಾಗಿವೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್)ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಚಂಡಮಾರುತವು ಪುದುಚೇರಿಯ ಯಾನಂ ಸಮೀಪದ ಭೂಭಾಗವನ್ನು ಪ್ರವೇಶಿಸಿದ್ದು, ಅತ್ಯಂತ ತೀವ್ರ ಸ್ವರೂಪದಿಂದ ಸ್ಥಿತಿಯಿಂದ ತೀವ್ರ ಸ್ಥಿತಿಗೆ ದುರ್ಬಲಗೊಂಡಿದೆ. ಸಂಜೆಯ ವೇಳೆಗೆ ಇದು ಕ್ರಮೇಣ ಮತ್ತಷ್ಟು ದುರ್ಬಲಗೊಂಡು ಚಂಡಮಾರುತದ ಸ್ಥಿತಿಗೆ ತಲುಪಲಿದೆ. ಬಳಿಕ ತೀವ್ರ ವಾಯುಭಾರ ಕುಸಿತವಾಗಿ ಬದಲಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
“ಆಂಧ್ರಪ್ರದೇಶದ ಉತ್ತರ ಭಾಗ ಮತ್ತು ಒಡಿಶಾದ ದಕ್ಷಿಣ ಭಾಗಗಳು ಅರ್ನಬ್ ಚಂಡಮಾರುತದಿಂದ ಹೆಚ್ಚು ಬಾಧಿತವಾಗಿವೆ. ಎರಡೂ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಬಲವಾದ ಗಾಳಿ ಮತ್ತು ಮಳೆಯಾಗುತ್ತಿದೆ” ಎಂದು ಎನ್‌ಡಿಆರ್‌ಎಫ್ ಅಧಿಕಾರಿ ಬುಂಡೇಲಾ ಹೇಳಿದ್ದಾರೆ.
“ಆಂಧ್ರಪ್ರದೇಶದಲ್ಲಿ ಹೆಚ್ಚು ಹಾನಿಯಾಗಿದೆ. ಮರಗಳು ಧರೆಗುರುಳಿದ್ದು, ವಿವಿಧ ಮಾದರಿಯ 31 ಮನೆಗಳು ಹಾನಿಗೀಡಾಗಿವೆ ಹಾಗೂ ಮೂವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಒಡಿಶಾದಲ್ಲಿ ಅಷ್ಟೊಂದು ಗಂಭೀರ ಪರಿಣಾಮ ಉಂಟಾಗಿಲ್ಲ” ಎಂದು ಅವರು ತಿಳಿಸಿದ್ದಾರೆ.
ಚಂಡಮಾರುತದ ಪರಿಣಾಮವಾಗಿ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಗಂಟೆಗೆ ಗರಿಷ್ಠ 135 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದೆ.
ಚಂಡಮಾರುತದ ಭೂಪ್ರವೇಶದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೀವ್ರಗೊಳಿಸಿವೆ. ಸುಮಾರು 4,000 ಚಂಡಮಾರುತ ಆಶ್ರಯ ಕೇಂದ್ರಗಳನ್ನು ಸಿದ್ಧಪಡಿಸಲಾಗಿದ್ದು, ಅಪಾಯದಂಚಿನಲ್ಲಿರುವ ಪ್ರದೇಶಗಳಿಂದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಎರಡೂ ರಾಜ್ಯಗಳಲ್ಲಿ ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಚಂಡಮಾರುತದ ಪರಿಣಾಮ ಎದುರಿಸಲು ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ.
ಆಂಧ್ರಪ್ರದೇಶ ಸರ್ಕಾರವು 20 ಜಿಲ್ಲೆಗಳಲ್ಲಿ 2,131 ಚಂಡಮಾರುತ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಿದೆ. ಚಂಡಮಾರುತದಿಂದ ಹೆಚ್ಚು ಬಾಧಿತವಾಗುವ ಸಾಧ್ಯತೆಯಿರುವ ಪ್ರದೇಶಗಳಲ್ಲಿ 1,087 ವೈದ್ಯಕೀಯ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇದರ ಜೊತೆಗೆ, 8,281 ತುರ್ತು ಹಾಸಿಗೆಗಳು ಮತ್ತು 1,274 ಆಂಬುಲೆನ್ಸ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


