ತೀವ್ರ ವಿರೋಧದ ನಡುವೆಯೂ ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಸಿದ ಚುನಾವಣಾ ಆಯೋಗ, 2026ರ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿ ಕೈತೊಳೆದುಕೊಂಡಿದೆ.
ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು, ಎಸ್ಐಆರ್ ಪ್ರಕ್ರಿಯೆ ಬಹಳ ಅಚ್ಚುಕಟ್ಟಾಗಿ ನಡೆದಿದೆ. ಒಬ್ಬರೇ ಒಬ್ಬರು ಅರ್ಹ ಮತದಾರರು ಅಂತಿಮ ಮತದಾರರ ಪಟ್ಟಿಯಿಂದ ಹೊರಬಿದ್ದಿಲ್ಲ ಎಂದು ತಮಗೆ ತಾವೇ ಷರಾ ಬರೆದು ಸುಮ್ಮನಾಗಿದ್ದಾರೆ.
ಆದರೆ, ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ಎಸ್ಐಆರ್ನಲ್ಲಿ ನಡೆದ ಅವಾಂತರಗಳು ಒಂದೊಂದಾಗಿ ಹೊರಬರುತ್ತಿವೆ. ಇದನ್ನು, ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಹಾಗೂ ಖ್ಯಾತ ಫ್ಯಾಕ್ಟ್ ಚೆಕ್ಕರ್ ಮೊಹಮ್ಮದ್ ಝುಬೈರ್ ಅವರು ಹಲವು ಸಾಕ್ಷ್ಯಗಳನ್ನು ಮುಂದಿಡುವ ಮೂಲಕ ನಿರಂತರವಾಗಿ ಬಯಲಿಗೆಳೆಯುತ್ತಿದ್ದಾರೆ.
ಝುಬೈರ್ ಕಳೆದ ಒಂದು ವಾರದಿಂದ ಹಲವು ಪ್ರಕರಣಗಳನ್ನು ಮುಂದಿಟ್ಟು ಪ್ರಶ್ನೆಗಳನ್ನು ಕೇಳಿದರೂ, ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರಿಂದ ಒಂದೇ ಒಂದು ಪ್ರತಿಕ್ರಿಯೆ ಬಂದಿಲ್ಲ. ತಪ್ಪಾಗಿದೆ ಎಂಬ ಸಮರ್ಥನೆಯಾಗಲಿ, ಅಥವಾ ಝುಬೈರ್ ಆರೋಪಗಳು ಸುಳ್ಳು ಎಂಬ ವಿರೋಧವಾಗಲಿ ಅನ್ಬುಕುಮಾರ್ ಕಡೆಯಿಂದ ಬಂದಿಲ್ಲ. ಹಾಗಾಗಿ, ‘ಮೌನಂ ಸಮ್ಮತಿ ಲಕ್ಷಣಂ’ ಎಂಬ ಮಾತಿನಂತೆ, ಝುಬೈರ್ ಮಾಡಿರುವ ಆರೋಪಗಳೆಲ್ಲ ನಿಜ ಎಂದು ಚುನಾವಣಾ ಆಯೋಗ ಒಪ್ಪಿಕೊಂಡಿದೆಯೇ? ಎಂಬ ಪ್ರಶ್ನೆ ಮೂಡಿದೆ.
ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಝುಬೈರ್ ಮಾಡಿರುವ ಆರೋಪಗಳನ್ನು ಒಂದೊಂದಾಗಿ ಕೆಳಗೆ ವಿವರಿಸಲಾಗಿದೆ…
- ಬಿಜೆಪಿ ಸದಸ್ಯನಿಗೆ ಎರಡು ರಾಜ್ಯಗಳಲ್ಲಿ ವೋಟ್
ಎಸ್ಐಆರ್ ಬಳಿಕವೂ, ಬಿಜೆಪಿ ಸದಸ್ಯ ಉದಯ್ ಕುಮಾರ್ ಹಾಗೂ ಅವರ ಪತ್ನಿ ಬಿಂದು ಕುಮಾರಿ ಎಂಬವರ ಹೆಸರುಗಳು ಕರ್ನಾಟಕ ಮತ್ತು ಬಿಹಾರ ಎರಡೂ ರಾಜ್ಯಗಳ ಮತದಾರರ ಪಟ್ಟಿಗಳಲ್ಲಿ ಮುಂದುವರಿದಿವೆ ಎಂಬುದು ಝುಬೈರ್ ಮಾಡಿದ ಮೊದಲ ಆರೋಪವಾಗಿದೆ.
ಅ.27ರಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಝುಬೈರ್ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ದೀರ್ಘಕಾಲದಿಂದ ವಾಸವಿದ್ದು, ಇಲ್ಲಿಯೇ ಮತ ಚಲಾಯಿಸುತ್ತಿರುವ ಉದಯ್ ಕುಮಾರ್ ಅವರು ಬಿಹಾರದ ನವಾಡಾ ಜಿಲ್ಲೆಯ ಸ್ವಗ್ರಾಮದಲ್ಲಿಯೂ ಮತದಾರರಾಗಿ ನೋಂದಣಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಉದಯ್ ಕುಮಾರ್ ಅವರ ಹೆಸರು EPIC ಸಂಖ್ಯೆ SOH4526935ರೊಂದಿಗೆ ದಾಖಲಾಗಿದ್ದು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮತದಾರರೆಂದು ನಮೂದಿಸಲಾಗಿದೆ. ಬಿಬಿಎಂಪಿ ಉತ್ತರ ಜಿಲ್ಲೆಯ ವ್ಯಾಪ್ತಿಯ ಆಲ್ವಿನ್ ಪಬ್ಲಿಕ್ ಸ್ಕೂಲ್ ಅವರ ಮತಗಟ್ಟೆಯಾಗಿದೆ ಎಂದು ಝುಬೈರ್ ಹಂಚಿಕೊಂಡ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ, ಬಿಹಾರದ ನವಾಡಾ ಜಿಲ್ಲೆಯ ಹಿಸ್ಸುವಾ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲೂ ಉದಯ್ ಕುಮಾರ್ ಅವರ ಹೆಸರಿದ್ದು, EPIC ಸಂಖ್ಯೆ UAO0928291 ಎಂದು ದಾಖಲಾಗಿದೆ. ಬೆರೌಟಾ ಪಶ್ಚಿಮ ಭಾಗದ ಉತ್ಕ್ರಮಿತ ಮಧ್ಯ ವಿದ್ಯಾಲಯ ಅವರ ಮತಗಟ್ಟೆಯಾಗಿ ನಮೂದಿಸಲಾಗಿದೆ.
ಉದಯ್ ಕುಮಾರ್ ಅವರ ಪತ್ನಿ ಬಿಂದು ಕುಮಾರಿ ಅವರ ಹೆಸರೂ ಇದೇ ರೀತಿಯಲ್ಲಿ ಎರಡು ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಕಾಣಿಸುತ್ತಿದೆ ಎಂದು ಝುಬೈರ್ ತಿಳಿಸಿದ್ದಾರೆ. ಎರಡೂ ದಾಖಲೆಗಳಲ್ಲಿರುವ ಭಾವಚಿತ್ರಗಳು ಒಂದೇ ವ್ಯಕ್ತಿಗೆ ಸೇರಿದವು ಎಂದು ಆರೋಪಿಸಲಾಗಿದ್ದು, ತಂದೆಯ ಹೆಸರಿನಲ್ಲಿ ವ್ಯತ್ಯಾಸ ಹಾಗೂ ವಯಸ್ಸಿನಲ್ಲಿ ಕೆಲವು ವರ್ಷಗಳ ಅಂತರವಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರಿನ ಆಲ್ವಿನ್ ಪಬ್ಲಿಕ್ ಸ್ಕೂಲ್ ಬಳಿ ಉದಯ್ ಕುಮಾರ್ ಮತ ಚಲಾಯಿಸಿರುವ ಚಿತ್ರಗಳು ಹಾಗೂ ಬಳಿಕ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನವಾಡಾದ ಮತಗಟ್ಟೆಯಲ್ಲಿ ಮತ ಚಲಾಯಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಅವರದೇ ಪೋಸ್ಟ್ ಗಳಲ್ಲಿ ಕಂಡುಬಂದಿವೆ ಎಂದು ಹೇಳಲಾಗಿದೆ.
ಈ ಕುರಿತು ಝುಬೈರ್ ಅವರು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ನವಾಡಾ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗವನ್ನು ಟ್ಯಾಗ್ ಮಾಡಿ, ಒಬ್ಬ ವ್ಯಕ್ತಿ ಎರಡು EPIC ಕಾರ್ಡ್ಗಳನ್ನು ಹೊಂದಲು ಹಾಗೂ ಎರಡು ರಾಜ್ಯಗಳಲ್ಲಿ ಮತ ಚಲಾಯಿಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಉದಯ್ ಕುಮಾರ್ ಅವರು ಕರ್ನಾಟಕ ಮತ್ತು ಬಿಹಾರ ಎರಡೂ ಕಡೆ ಮತ ಚಲಾಯಿಸಿದ್ದ ಬಗ್ಗೆ 2025ರ ನವೆಂಬರ್ 12ರಂದು ಝುಬೈರ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಬಿಹಾರದ ವಿಧಾನಸಭೆ ಚುನಾವಣೆಯ ಮತದಾನ 2025ರ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆದಿತ್ತು. ನವೆಂಬರ್ 14ರಂದು ಫಲಿತಾಂಶ ಪ್ರಕಟಗೊಂಡಿತ್ತು. ಈ ಚುನಾವಣೆಯಲ್ಲಿ ಉದಯ್ ಕುಮಾರ್ ಬಿಹಾರದಲ್ಲಿ ಮತ ಚಲಾಯಿಸಿದ್ದರು. ಅದಕ್ಕೂ ಮುನ್ನ 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮತ ಚಲಾಯಿಸಿದ್ದರು ಎಂದು ಝುಬೈರ್ ಹೇಳಿದ್ದರು.
ಉದಯ್ ಕುಮಾರ್ ಬಿಹಾರದಲ್ಲಿ ಮತ ಚಲಾಯಿಸಿದ್ದ ವೇಳೆ ಅಲ್ಲಿ ಎಸ್ಐಆರ್ ನಡೆದಿತ್ತು. ಎಸ್ಐಆರ್ ಬಳಿಕ ಪ್ರಕಟಗೊಂಡ ಮತದಾರರ ಪಟ್ಟಿ ಅನುಸಾರ ಚುನಾವಣೆ ನಡೆದಿತ್ತು. ಈಗ ಕರ್ನಾಟಕದಲ್ಲೂ ಎಸ್ಐಆರ್ ನಡೆದಿದೆ. ಅಂದರೆ, ಎರಡೂ ರಾಜ್ಯಗಳಲ್ಲಿ ಎಸ್ಐಆರ್ ಮುಗಿದಿದೆ. ಚುನಾವಣಾ ಆಯೋಗದ ಪ್ರಕಾರ ಮತದಾರರ ಪಟ್ಟಿ ಶುದ್ದವಾಗಿದೆ. ಹೀಗಿರುವಾಗ, ಉದಯ್ ಕುಮಾರ್ ಹೆಸರು ಎರಡು ಕಡೆ ಕಂಡು ಬಂದಿರುವುದು ಹೇಗೆ? ಎಂಬ ಪ್ರಶ್ನೆ ಮೂಡಿದೆ.
ಹಾಗಾದರೆ, ಎಸ್ಐಆರ್ ಸರಿಯಾಗಿ ನಡೆದಿಲ್ಲವೇ? ಇಲ್ಲ, ಉದ್ದೇಶಪೂರ್ವಕವಾಗಿ ಎರಡೂ ಕಡೆ ಬಿಜೆಪಿ ಮತವನ್ನು ಉಳಿಸಲಾಗಿದೆಯೇ? ಅಥವಾ ಉದಯ್ ಕುಮಾರ್ ಎಂಬ ಇಬ್ಬರು ಮತದಾರರ ಬೇರೆ ಬೇರೆ ವ್ಯಕ್ತಿಗಳೇ? ಇವೆಲ್ಲದಕ್ಕೂ ಚುನಾವಣಾ ಆಯೋಗವೇ ಸ್ಪಷ್ಟ ಉತ್ತರ ನೀಡಬೇಕಿದೆ. - ಒಬ್ಬ ವ್ಯಕ್ತಿ, ನಾಲ್ಕು ಫಾರಂ-6, ನಾಲ್ಕು ವೋಟರ್ ಐಡಿ
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿಷೇಕ್ ಕೆ.ಎನ್ ಎಂಬ ಮತದಾರರನಿಗೆ ಚುನಾವಣಾ ಆಯೋಗ ನಾಲ್ಕು ವೋಟರ್ ಐಡಿಗಳನ್ನು ನೀಡಿರುವ ಮತ್ತೊಂದು ಪ್ರಕರಣವನ್ನು ಝುಬೈರ್ ಬಯಲು ಮಾಡಿದ್ದಾರೆ.
ನವೆಂಬರ್ 2ರಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಝುಬೈರ್, ಕರಡು ಮತದಾರರ ಪಟ್ಟಿ ಪ್ರಕಟಗೊಂಡಾಗ ಅಭಿಷೇಕ್ ಅವರ ಹೆಸರು ಅದರಲ್ಲಿ ಇರಲಿಲ್ಲ. ಹಾಗಾಗಿ, ಅವರು ಒಂದೇ ದಿನ ನಾಲ್ಕು ಬಾರಿ ಫಾರಂ-6 ಅರ್ಜಿ ಸಲ್ಲಿಸಿದ್ದರು. ಈಗ ಅವರ ಹೆಸರಿನಲ್ಲಿ ನಾಲ್ಕು ಎಪಿಕ್ ನಂಬರ್ಗಳಿವೆ ಎಂದು ಝುಬೈರ್ ಹೇಳಿಕೊಂಡಿದ್ದಾರೆ.
“ಒಂದೇ ವ್ಯಕ್ತಿಯಿಂದ ಸಲ್ಲಿಕೆಯಾದ ಅನೇಕ ಅರ್ಜಿಗಳನ್ನು ಗುರುತಿಸಲು ಯಾವುದೇ ವ್ಯವಸ್ಥೆ ಇಲ್ಲವೇ? ಈ ನಾಲ್ಕೂ ಅರ್ಜಿಗಳು ಹೇಗೆ ಪತ್ತೆಯಾಗದೆ ಉಳಿದವು ಮತ್ತು ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರತ್ಯೇಕ ಮತದಾರ ಗುರುತಿನ ಚೀಟಿಗಳ (Voter ID) ಸೃಷ್ಟಿಗೆ ಹೇಗೆ ಕಾರಣವಾದವು? ನಕಲಿ ನಮೂದುಗಳನ್ನು (duplicate entries) ತೆಗೆದುಹಾಕಬೇಕಿದ್ದ ಪ್ರಕ್ರಿಯೆಯು, ಅದಕ್ಕೆ ಬದಲಾಗಿ ಇನ್ನೂ ಹೆಚ್ಚಿನ ನಕಲಿ ನಮೂದುಗಳನ್ನು ಸೃಷ್ಟಿಸಲು ಹೇಗೆ ಕಾರಣವಾಯಿತು? ಇದಕ್ಕೆ ಯಾರು ಹೊಣೆ?” ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ಪ್ರಶ್ನಿಸಿದ್ದಾರೆ. - vfg
- ಎರಡು ಫಾರಂ-6 ಹಾಕಿದ ವ್ಯಕ್ತಿಗೆ 5 ವೋಟರ್ ಐಡಿ
ನಾಲ್ಕು ಫಾರಂ-6 ಅರ್ಜಿಗಳನ್ನು ಹಾಕಿದ ವ್ಯಕ್ತಿಗೆ ನಾಲ್ಕು ವೋಟರ್ ಐಡಿಗಳನ್ನು ನೀಡಿದಂತೆಯೇ..ಎರಡು ಫಾರಂ-6 ಅರ್ಜಿಗಳನ್ನು ಹಾಕಿದ ವ್ಯಕ್ತಿಗೆ ಚುನಾವಣಾ ಆಯೋಗ ಬರೋಬ್ಬರಿ 5 ವೋಟರ್ ಐಡಿಗಳನ್ನು ನೀಡಿದೆ ಎಂಬ ಮತ್ತೊಂದು ಆರೋಪವನ್ನು ಝುಬೈರ್ ಮಾಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂತೋಷ್ ಕುಮಾರ್ ಎಂಬ ಮತದಾರರ ಎರಡು ಫಾರಂ-6 ಸಲ್ಲಿಸಿದ್ದರು. ಅವರಿಗೆ ಚುನಾವಣಾ ಆಯೋಗ 5 ವೋಟರ್ ಐಡಿಗಳನ್ನು ನೀಡಿದೆ ಎಂದು ಝುಬೈರ್ ಹೇಳಿದ್ದಾರೆ. ಎರಡು ಕೊಂಡರೆ ಆಫರ್ನಲ್ಲಿ 5 ವೋಟರ್ ಐಡಿ ಪಡೆಯಿರಿ ಎಂದು ವ್ಯಂಗ್ಯವಾಡಿದ್ದಾರೆ.
“ಎಸ್ಐಆರ್ ಬಳಿಕ ಕರ್ನಾಟಕದ ಕರಡು ಮತದಾರರ ಪಟ್ಟಿ ಪ್ರಕಟಗೊಂಡಾಗ ಸಂತೋಷ್ ಕುಮಾರ್ ಅವರ ಹೆಸರು ಅದರಲ್ಲಿ ಇರಲಿಲ್ಲ. ಹಾಗಾಗಿ, ಅವರು ಹೊಸದಾಗಿ ನೋಂದಾಯಿಸಿಕೊಳ್ಳಲು ಎರಡು ಫಾರಂ-6 ಹಾಕಿದ್ದರು. ಆದರೆ ನಮ್ಮ ಮುಖ್ಯ ಚುನಾವಣಾಧಿಕಾರಿಯವರ ಕಚೇರಿ ಎಷ್ಟು ಉದಾರಿಯಾಗಿದೆಯೆಂದರೆ, ಅವರಿಗೆ ಐದು ಬೇರೆ ಬೇರೆ ವೋಟರ್ ಐಡಿಗಳನ್ನು ನೀಡಿದ್ದಾರೆ. ಅಂದರೆ, ಒಬ್ಬ ವ್ಯಕ್ತಿ ಎರಡು ಬಾರಿ ಅರ್ಜಿ ಸಲ್ಲಿಸಿದರೆ, ಚುನಾವಣಾ ಆಯೋಗವು ಅವರಿಗೆ ಐದು ವೋಟರ್ ಐಡಿಗಳನ್ನು ನೀಡಿದೆ” ಎಂದು ಝುಬೈರ್ ವಿವರಿಸಿದ್ದಾರೆ.
ಇಂತಹ ಡೂಪ್ಲಿಕೇಟ್ ಅರ್ಜಿಗಳು ಹೇಗೆ ಪರಿಶೀಲನೆಯಿಂದ ತಪ್ಪಿಸಿಕೊಂಡು ಅಂತಿಮ ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ವೋಟರ್ ಐಡಿಗಳು ಸೃಷ್ಟಿಯಾಗಲು ಕಾರಣವಾಗುತ್ತಿವೆ ಎಂದು ಝುಬೈರ್ ಪ್ರಶ್ನಿಸಿದ್ದು, ಕರ್ನಾಟಕದಾದ್ಯಂತ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ಸಾವಿರಾರು ಪ್ರಕರಣಗಳು ಪತ್ತೆಯಾಗಬಹುದು ಎಂದು ನಾನು ಶಂಕಿಸುತ್ತೇನೆ ಎಂದಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ 1,00,000ಕ್ಕೂ ಹೆಚ್ಚು ಮತಗಳನ್ನು ಅಕ್ರಮವಾಗಿ ತಿರುಚಲಾಗಿದೆ ಎಂದು ಆರೋಪಿಸಿದ್ದು ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂದು ಝುಬೈರ್ ನೆನಪಿಸಿದ್ದಾರೆ. - ಮತದಾರರ ಪಟ್ಟಿಯಲ್ಲಿ ವಿಚಿತ್ರ ಹೆಸರುಗಳು
ಅಂತಿಮ ಮತದಾರರ ಪಟ್ಟಿಯಲ್ಲಿ ವಿಚಿತ್ರ ಹೆಸರುಗಳು ಕಾಣಿಸಿಕೊಂಡ ಬಗ್ಗೆ ನವೆಂಬರ್ 2ರಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.
“XXX” ಅಥವಾ “??????K” ಎಂದು ಕಾಣಿಸಿಕೊಳ್ಳುವ ಹೆಸರುಗಳಿಂದ ಹಿಡಿದು, ಸಂಬಂಧಿಕರ ಹೆಸರುಗಳು ಕಾಣೆಯಾಗಿರುವುದು, ಕೇವಲ ಒಂದೇ ಅಕ್ಷರಗಳನ್ನು ಒಳಗೊಂಡಿರುವ ಎಂಟ್ರಿಗಳು, ಇಮೇಲ್ ಐಡಿಗಳು ಅಥವಾ “…” ನಂತಹ ಚಿಹ್ನೆಗಳನ್ನು ಹೊಂದಿರುವ ಎಂಟ್ರಿಗಳವರೆಗೆ—ಬೆಂಗಳೂರಿನ ಅಂತಿಮ ಮತದಾರರ ಪಟ್ಟಿಯು ತಪ್ಪುಗಳಿಂದ ತುಂಬಿಹೋಗಿದೆ. ಕೇವಲ ಈ ಪಟ್ಟಿಯಲ್ಲಿಯೇ ಕನಿಷ್ಠ 1,000 ಎಂಟ್ರಿಗಳಲ್ಲಿ ಇಂತಹ ವ್ಯತ್ಯಾಸಗಳನ್ನು ಗುರುತಿಸಿದ್ದೇವೆ ಪತ್ರಿಕೆ ಹೇಳಿದೆ.
ಈ ಕುರಿತು ರಾಜ್ಯ ಮುಖ್ಯ ಚುನಾವಣಾ ಆಧಿಕಾರಿಯನ್ನು ಪ್ರಶ್ನಿಸಿರುವ ಝುಬೈರ್, “ವೆರಿಫೈಡ್ ಅಂತಿಮ ಮತದಾರರ ಪಟ್ಟಿ ಹೀಗಿರುತ್ತದೆಯೇ? ಇಂತಹ ಎಂಟ್ರಿಗಳು ನಿಮ್ಮ ಪರಿಶೀಲನೆಯನ್ನು ದಾಟಿ ಹೇಗೆ ಬಂದವು? ಈ ಸ್ಪಷ್ಟ ಅಸಮರ್ಥತೆಗೆ ಯಾರು ಹೊಣೆಗಾರರು? ಎಂದು ಕೇಳಿದ್ದಾರೆ. - ಬದುಕಿರುವ ಮತದಾರರನ್ನು ಕೊಂದ ಚುನಾವಣಾ ಆಯೋಗ
ಬದುಕಿರುವ ಮತದಾರರೊಬ್ಬರನ್ನು ಚುನಾವಣಾ ಆಯೋಗ ಯಾವುದೇ ಪರಿಶೀಲನೆ ನಡೆಸದೆ ಸತ್ತೋಗಿದ್ದಾರೆ ಎಂದು ಗುರುತಿಸಿರುವ ಕರ್ನಾಟಕ ಎಸ್ಐಆರ್ನ ಮತ್ತೊಂದು ಮಹತ್ವದ ಅವಾಂತರವನ್ನು ಝುಬೈರ್ ಬಯಲಿಗೆಳೆದಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಅರ್ಚನಾ ಎಂಬ 27 ವರ್ಷದ ಮತದಾರೆ ಮರಣ ಹೊಂದಿದ್ದಾರೆ ಎಂದು ಗುರುತಿಸಿ ಅವರ ಹೆಸರನ್ನು ಎಎಸ್ಡಿಡಿಒ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ, ಅರ್ಚನಾ ಬದುಕಿದ್ದಾರೆ, ಅವರು ಫಾರಂ-6 ಹಾಕಿದ್ದರು. ಈಗ ಅವರ ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿ ಇದೆ ಎಂದು ಝುಬೈರ್ ಮಾಹಿತಿ ಹಂಚಿಕೊಂಡಿದ್ದಾರೆ.
ಮುಂದುವರಿದು, ಝುಬೈರ್ ಈ ಕೆಳಗಿನ ಪ್ರಶ್ನೆಗಳನ್ನು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಕೇಳಿದ್ದಾರೆ
1. ಮತದಾರರು ಸತ್ತೋಗಿದ್ದಾರೆ ಎಂದು ತೀರ್ಮಾನಿಸುವ ಮುನ್ನ ನೀವು ಅವರ ಮರಣ ಪ್ರಮಾಣ ಪತ್ರ ಪಡೆದಿದ್ದೀರಾ? ಅದನ್ನು ಪರಿಶೀಲಿಸಿದ್ದೀರಾ?
2. ಮರಣ ಹೊಂದಿರುವ ಬಗ್ಗೆ ಜನನ ಮತ್ತು ಮರಣಗಳ ನೋಂದಣಾಧಿಕಾರಿಯ ಮೂಲಕ ದೃಢೀಕರಿಸಲಾಗಿದೆಯೇ?
3. ಬಿಎಲ್ಒ ಅವರು ಆಕೆಯ (ಅರ್ಚನಾ ಅವರ) ನಿವಾಸಕ್ಕೆ ಖುದ್ದಾಗಿ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸಿದ್ದಾರೆಯೇ?
4. ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ನೀಡಿದವರು ಯಾರು?
5. ಈ ವರ್ಗೀಕರಣವನ್ನು (ಮರಣ ಹೊಂದಿದವರು) ಅನುಮೋದಿಸಿದವರು ಯಾರು? ಇದನ್ನು AERO/ERO ಪರಿಶೀಲಿಸಿದ್ದಾರೆಯೇ?
6. ಕರ್ನಾಟಕದಾದ್ಯಂತ ಬೇರೆ ಎಷ್ಟು ಜೀವಂತ ನಾಗರಿಕರನ್ನು ತಪ್ಪಾಗಿ ‘ಮೃತ’ ಎಂದು ಗುರುತಿಸಲಾಗಿದೆ?
‘ಮೃತ’ ಎಂದು ಗುರುತಿಸಲಾದ ಪ್ರತಿಯೊಬ್ಬ ಮತದಾರರ ಬಗ್ಗೆ, ವಿಶೇಷವಾಗಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಬಗ್ಗೆ, ರಾಜ್ಯವ್ಯಾಪಿ ಪರಿಶೀಲನೆ (ಆಡಿಟ್) ನಡೆಸುವ ಅಗತ್ಯವಿದೆ ಎಂದು ಝುಬೈರ್ ಹೇಳಿದ್ದಾರೆ.
ಚುನಾವಣಾ ಆಯೋಗದ ಪ್ರಕ್ರಿಯೆಯು ಒಬ್ಬ ಜೀವಂತ ನಾಗರಿಕರನ್ನು ಮೃತರೆಂದು ಘೋಷಿಸಿರುವ ಕಾರಣಕ್ಕಾಗಿ, ಅವರು ಮತದಾರರ ನೋಂದಣಿಗೆ ಮತ್ತೆ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ಉಂಟಾಗಬಾರದು ಎಂದಿದ್ದಾರೆ.
ಕರ್ನಾಟಕದಲ್ಲಿ ಎಷ್ಟು ಮಂದಿ ಅರ್ಚನಾ ಇದ್ದಾರೆ? ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಜನರಿಗೆ ವಿವರಣೆ ನೀಡಬೇಕಿದೆ ಎಂದು ಹೇಳಿದ್ದಾರೆ.
ಎಎಸ್ಡಿಡಿಒ ಪಟ್ಟಿಯಲ್ಲಿ ಬಿಎಲ್ಒ ಅವರಿಂದ ‘ಮೃತ’ ಎಂದು ಗುರುತಿಸಲ್ಪಟ್ಟ ನೂರಾರು ‘ಅರ್ಚನಾ’ ಹೆಸರಿನ ವ್ಯಕ್ತಿಗಳಿದ್ದಾರೆ; ಇವರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಮತ್ತೆ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ತಪ್ಪುಗಳನ್ನು ನೀವೇ ಸರಿಪಡಿಸಿಕೊಳ್ಳುತ್ತೀರಾ, ಅಥವಾ ಇಂತಹ ವ್ಯಕ್ತಿಗಳನ್ನು ಗುರುತಿಸುವಲ್ಲಿ ನಮ್ಮ ಸಹಾಯ ಬೇಕೇ? ಎಂದು ಝುಬೈರ್ ಕೇಳಿದ್ದಾರೆ. - ಒಬ್ಬರು ವ್ಯಕ್ತಿ, ಐದು ವೋಟರ್ ಐಡಿಗಳು
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜ್ಯೋತಿ ಎನ್ ಎಂಬ ಮತದಾರರೊಬ್ಬರ ಹೆಸರಿನಲ್ಲಿ ಕೂಡ ಐದು ವೋಟರ್ ಐಡಿಗಳು ಇರುವುದನ್ನು ಝುಬೈರ್ ಬಹಿರಂಗಪಡಿಸಿದ್ದಾರೆ.
ಕರಡು ಮತದಾರರ ಪಟ್ಟಿಯಲ್ಲಿ ಹೆಸರೇ ಇಲ್ಲದ 50 ವರ್ಷದ ಮಹಿಳೆಯೊಬ್ಬರ ಹೆಸರಿನಲ್ಲಿ, ಈಗ ಬರೋಬ್ಬರಿ 5 ವೋಟರ್ ಐಡಿಗಳಿವೆ. ಜ್ಯೋತಿ ಅವರ ಹೆಸರು ಕರಡು ಪಟ್ಟಿಯಲ್ಲಿ ಇರಲಿಲ್ಲ. ತಮ್ಮ ಹೆಸರನ್ನು ಸೇರಿಸಲು ಅವರು ಫಾರಂ-6 ಮೂಲಕ ಅರ್ಜಿ ಸಲ್ಲಿಸಿದ್ದರು. ಹೀಗೆ ಒಟ್ಟು ಮೂರು ಬಾರಿ ಅರ್ಜಿ ಸಲ್ಲಿಸಿದ್ದರು. ಆದರ, ಮುಖ್ಯ ಚುನಾವಣಾ ಆಯುಕ್ತರು ಎಷ್ಟು ಉದಾರಿಯೆಂದರೆ, ಅವರಿಗೆ (ಜ್ಯೋತಿ ಅವರಿಗೆ) ಹೆಚ್ಚುವರಿಯಾಗಿ ಎರಡು ವೋಟರ್ ಐಡಿಗಳನ್ನು ನೀಡಿದ್ದಾರೆ ಎಂದು ಝುಬೈರ್ ವಿವರಿಸಿದ್ದಾರೆ. - ಶಿಫ್ಪೆಡ್ ಎಂದು ಡಿಲೀಟ್ ಮಾಡಲಾದ ವ್ಯಕ್ತಿಗೆ ಎರಡು ವೋಟರ್ ಐಡಿ
ಬೆಂಗಳೂರಿನ ಮತ್ತೊಬ್ಬ ಮತದಾರರ ರಾಕೇಶ್ ಕುಮಾರ್ ದಾಸ್ ಎಂಬವರ ಹೆಸರನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂದು ವರ್ಗೀಕರಿಸಿ ಕರಡು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿತ್ತು. ಆದರೆ, ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಎರಡು ಬಾರಿ ಕಾಣಿಸಿಕೊಂಡಿದೆ ಎಂದು ಝುಬೈರ್ ಹೇಳಿದ್ದಾರೆ.
ಎಸ್ಐಆರ್ಗೆ ಮುನ್ನ ರಾಕೇಶ್ ಕುಮಾರ್ ದಾಸ್ ಅವರು D2004 ಎಂಬ ವಿಳಾಸದಲ್ಲಿ ಮತದಾರರಾಗಿ ನೋಂದಾಯಿತರಾಗಿದ್ದರು. ಎಸ್ಐಆರ್ ವೇಳೆ ಅವರ ಹೆಸರು ಎಎಸ್ಡಿಡಿಒ ಪಟ್ಟಿಯಲ್ಲಿ ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂದು ಗುರುತಿಸಿ, ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಈಗ ಅಂತಿಮ ಮತದಾರರ ಪಟ್ಟಿಯಲ್ಲಿ, ಅವರ ಹೆಸರಿನಲ್ಲಿ ಎರಡು ಎಂಟ್ರಿಗಳಿವೆ. ಅವೆರಡಕ್ಕೂ ಬೇರೆ ಬೇರೆ ಎಪಿಕ್ ಐಡಿಗಳನ್ನು ನೀಡಲಾಗಿದೆ. ಆದರೆ, ಎರಡರಲ್ಲೂ ಹಿಂದಿನಂತೆಯೇ D2004 ಎಂಬ ಒಂದೇ ಮನೆ ನಂಬರ್ ನಮೂದಿಸಲಾಗಿದೆ. ನಾವು ಪರಿಶೀಲಿಸಿದಂತೆ ಫಾರಂ-6ರ ಮೂಲಕ ಹೊಸದಾಗಿ ಸೇರ್ಪಡೆಗೊಂಡವರ ಪಟ್ಟಿಗಳಲ್ಲಿ ಅವರ ಹೆಸರು ಕಂಡುಬಂದಿಲ್ಲ ಎಂದು ಹೇಳಿರುವ ಝುಬೈರ್, ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂದು ಪರಿಗಣಿಸಿ ಪಟ್ಟಿಯಿಂದ ತೆಗೆದುಹಾಕಲಾದ ಮತದಾರರೊಬ್ಬರು, ಅಂತಿಮ ಪಟ್ಟಿಯಲ್ಲಿ ಒಂದೇ ವಿಳಾಸಕ್ಕೆ ಎರಡು ವಿಭಿನ್ನ ಎಪಿಕ್ ಐಡಿಗಳೊಂದಿಗೆ ಹೇಗೆ ಕಾಣಿಸಿಕೊಂಡರು? ಎಂದು ಪ್ರಶ್ನಿಸಿದ್ದಾರೆ.
ಹೋರಾಟಗಾರರ ಆರೋಪಗಳಿಗೆ ಸಾಕ್ಷ್ಯ ಒದಗಿಸಿದ ಝುಬೈರ್ ಪೋಸ್ಟ್
ಝಬೈರ್ ದಾಖಲೆ ಸಹಿತ ಬಹಿರಂಗಪಡಿಸಿರುವ ಇಂತಹ ಪ್ರಕರಣಗಳ ಕುರಿತು ಕರ್ನಾಟಕದ ಎಸ್ಐಆರ್ ವಿರೋಧಿ ಹೋರಾಟಗಾರರು ಆರಂಭದಿಂದಲೂ ಗಮನ ಸೆಳೆದಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಎಸ್ಐಆರ್ ವಿರೋಧಿ ಒಕ್ಕೂಟ ರಾಜ್ಯದ ಸುಮಾರು 73 ಮತಗಟ್ಟೆಗಳಲ್ಲಿ ಸಮೀಕ್ಷೆ ನಡೆಸಿ ಮತದಾನದ ಹಕ್ಕು ಕಳೆದುಕೊಂಡಿರುವ ಅರ್ಹ ಮತದಾರರ ವಿವರಗಳನ್ನು ದಾಖಲೆ ಸಹಿತ ಸಂಗ್ರಹಿಸಿಟ್ಟುಕೊಂಡಿದೆ. ಈ ದಾಖಲೆಗಳನ್ನು ಮುಂದಿಟ್ಟುಕೊಂಡು ಅನೇಕ ಬಾರಿ ಚುನಾವಣಾ ಆಯೋಗಕ್ಕೆ ಪ್ರಶ್ನೆಗಳನ್ನು ಕೇಳಿದೆ.
ಆದರೆ, ಹೋರಾಟಗಾರರು ವ್ಯಕ್ತಪಡಿಸಿದ ಅನುಮಾನಗಳಿಗೆ ಕೆಲವೊಂದು ಬಾರಿ ಸಮಜಾಯಿಸಿಗಳನ್ನು ನೀಡಿದ ಚುನಾವಣಾ ಆಯೋಗ, ಇನ್ನೂ ಕೆಲ ಸಂದರ್ಭಗಳಲ್ಲಿ ಮೌನ ಪಾಲಿಸಿದೆ. ಕರ್ನಾಟಕದಲ್ಲಿ ನಿಯಮ ಮೀರಿ ಬಲ್ಕ್ ಫಾರಂ-7 ಹಾಕಿ ಅರ್ಹ ಮತದಾರರ ಹೆಸರು ಡಿಲೀಟ್ ಮಾಡಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಚುನಾವಣಾ ಆಯೋಗ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ವಿಜಯಪುರದ ಉಚ್ಛಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬೆಳಗಾವಿ ದಕ್ಷಿಣದ ಬಿಜೆಪಿ ಶಾಸಕ ಅಭಯ್ ಪಾಟೀಲ್, ಮತ್ತು ಅನೇಕ ಬಿಜೆಪಿ ಕಾರ್ಯಕರ್ತರು ಫಾರಂ-7 ಹಾಕಿ ಅರ್ಹ ಮತದಾರರ ಹೆಸರು ಡಿಲೀಟ್ ಮಾಡಲು ಯತ್ನಿಸಿರುವುದು ಬಟಾಬಯಲಾಗಿದೆ. ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಈಗ ಝುಬೈರ್ ಮಾಡುತ್ತಿರುವ ಆರೋಪಗಳಿಗಾಗಲಿ, ಇದುವರೆಗೆ ಎಸ್ಐಆರ್ ವಿರೋಧಿ ಒಕ್ಕೂಟದ ನಾಯಕರು ಮಾಡಿರುವ ಆರೋಪಗಳಿಗಾಗಲಿ ಚುನಾವಣಾ ಆಯೋಗ ಸ್ಪಷ್ಟನೆ ಅಥವಾ ವಿರೋಧ ವ್ಯಕ್ತಪಡಿಸದೆ ಮೌನ ಪಾಲಿಸಿರುವುದು ಆಶ್ಚರ್ಯಗೊಳಿಸುತ್ತದೆ. ಎಸ್ಐಆರ್ ಮೂಲಕ ಮತದಾರರ ಪಟ್ಟಿ ಸಂಪೂರ್ಣ ಶುದ್ದವಾಗಿದೆ, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರ ಬಿದ್ದಿಲ್ಲ, ಡಬಲ್ ಎಂಟ್ರಿ, ತಪ್ಪು ತಪ್ಪಾಗಿರುವ ಎಂಟ್ರಿ ಎಲ್ಲವೂ ಸರಿಯಾಗಿದೆ ಎಂದು ಚುನಾವಣಾ ಆಯೋಗ ಹೇಳಿಕೊಂಡು ಬಂದಿತ್ತು. ಹಾಗಾದರೆ, ಇವೆಲ್ಲವೂ ಏನು ಎಂಬುವುದನ್ನು ಚುನಾವಣಾ ಆಯೋಗವೇ ಸ್ಪಷ್ಟಪಡಿಸಬೇಕಿದೆ.


