ತನ್ನ ಖಾತೆ ಮತ್ತು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ಗೆ ಕೋರಿದ್ದಾರೆ ಎಂದು ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ (ಐಎಫ್‌ಎಫ್) ಮಂಗಳವಾರ (ನ.3) ತಿಳಿಸಿದೆ.
ಐಎಫ್‌ಎಫ್ ಭಾರತದಲ್ಲಿ ಆನ್‌ಲೈನ್ ಸ್ವಾತಂತ್ರ್ಯ, ಡಿಜಿಟಲ್ ಹಕ್ಕುಗಳು, ಗೌಪ್ಯತೆ ಮತ್ತು ತಾಂತ್ರಿಕ ನಾವೀನ್ಯತೆಗಳನ್ನು ರಕ್ಷಿಸಲು ಕೆಲಸ ಮಾಡುವ ಒಂದು ಪ್ರಮುಖ ಲಾಭರಹಿತ ಸಂಸ್ಥೆಯಾಗಿದೆ.
ದೆಹಲಿ ಪೊಲೀಸರು ಮಾಡಿರುವ ಮನವಿಯನ್ನು ಹಿಂಪಡೆಯದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ಐಎಫ್‌ಎಫ್ ಎಚ್ಚರಿಸಿದೆ.
ಐಎಫ್‌ಎಫ್ ಪ್ರಕಾರ, ದೆಹಲಿ ಪೊಲೀಸರು ಎಕ್ಸ್‌ಗೆ ನೀಡಿದ ಎರಡು ‘ಕಾನೂನುಬಾಹಿರ ಕಂಟೆಂಟ್ ವರದಿ’ಗಳಲ್ಲಿ (Illegal Content Reports) ಸಾಫ್ಟ್‌ವೇರ್ ಫ್ರೀಡಮ್ ಲಾ ಸೆಂಟರ್, ಇಂಡಿಯಾ (ಎಸ್‌ಎಫ್‌ಎಲ್‌ಸಿ) ಮತ್ತು ಜಿಯೋ ಬ್ಲಾಕ್ಡ್ ಇಂಡಿಯಾ (GeoBlocked India) ಸಂಸ್ಥೆಗಳ ಖಾತೆಗಳ ವಿರುದ್ಧ, ಹಾಗೂ ಇತರ ಹಲವು ಬಳಕೆದಾರರ ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
“ನಾವು ಪೋಸ್ಟ್‌ಗಳನ್ನು ಅಳಿಸುವುದಿಲ್ಲ. ದೆಹಲಿ ಪೊಲೀಸರು ನೋಟಿಸ್‌ಗಳನ್ನು ಹಿಂಪಡೆಯದಿದ್ದರೆ, ನಾವು ಅವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ” ಎಂದು ಎಐಫ್‌ಎಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ವರದಿಗಳ ಪ್ರಕಾರ, ಅಕ್ಟೋಬರ್ 29, 2026 ರಂದು ಐಎಫ್‌ಎಫ್, ಎಸ್‌ಎಫ್‌ಎಲ್‌ಸಿ ಮತ್ತು ಜಿಯೋ ಬ್ಲಾಕ್ಡ್ ಇಂಡಿಯಾ ಸಂಸ್ಥೆಗಳಿಗೆ ಆರ್‌ಎಸ್ಎಸ್ ಹೆಸರಿನಲ್ಲಿ ಎರಡು ಪುಟಗಳ ಕಾನೂನು ನೋಟಿಸ್ ಬಂದಿತ್ತು. ಸರ್ಕಾರವು ಜಾಲತಾಣಗಳಲ್ಲಿ ವಿಧಿಸುವ ಸೆನ್ಸಾರ್‌ಶಿಪ್ ಮತ್ತು ಕಂಟೆಂಟ್ ಬ್ಲಾಕಿಂಗ್ ಆದೇಶಗಳನ್ನು ಡಾಕ್ಯುಮೆಂಟ್ ಮಾಡುವುದನ್ನು ಹಾಗೂ ಟೀಕಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆ ನೋಟಿಸ್‌ನಲ್ಲಿ ಒತ್ತಾಯಿಸಲಾಗಿತ್ತು.
ಆದರೆ, ಆರ್‌ಎಸ್ಎಸ್‌ನ ಕೆಲವು ಪದಾಧಿಕಾರಿಗಳು ಈ ನೋಟಿಸ್ ಅಧಿಕೃತವಲ್ಲ (ನಕಲಿ) ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದರು. ಐಎಫ್‌ಎಫ್ ಸಂಸ್ಥೆಯು ಈ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿ, ಅದನ್ನು ಆರ್‌ಎಸ್ಎಸ್ ಅಧಿಕೃತ ವಿಳಾಸಕ್ಕೆ ಕಳುಹಿಸಿಕೊಟ್ಟಿತ್ತಲ್ಲದೆ, ಪಾರದರ್ಶಕತೆಗಾಗಿ ನೋಟಿಸ್ ಹಾಗೂ ತಾವು ನೀಡಿದ ಉತ್ತರವನ್ನು ಅಕ್ಟೋಬರ್ 30ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು.
ಐಎಫ್‌ಎಫ್ ಈ ವಿಷಯವನ್ನು ಬಹಿರಂಗಪಡಿಸುತ್ತಿದ್ದಂತೆ, ದೆಹಲಿ ಪೊಲೀಸರ ಕ್ರೈಮ್ ವಿಭಾಗದ ವಿಶೇಷ ಕಮಿಷನರ್ ಅವರು ಎಕ್ಸ್ ಸಂಸ್ಥೆಗೆ ಕಾನೂನುಬಾಹಿರ ಕಂಟೆಂಟ್ ವರದಿ (Illegal Content Report) ಸಲ್ಲಿಕೆ ಮಾಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023 ರ ಸೆಕ್ಷನ್ 356 ರ ಅಡಿಯಲ್ಲಿ ಈ ಪೋಸ್ಟ್‌ಗಳು ಆರ್‌ಎಸ್ಎಸ್ ವಿರುದ್ಧ ಅಪಪ್ರಚಾರ ಅಥವಾ ನಿಂದನೆ (Defamation) ಆಗಿವೆ ಎಂದು ಪೊಲೀಸರು ವಾದಿಸಿದ್ದಾರೆ.
ದೆಹಲಿ ಪೊಲೀಸರು ಕಳುಹಿಸಿದ ನೋಟಿಸ್‌ಗಳಲ್ಲಿ ಐಎಫ್‌ಎಫ್, ಎಸ್‌ಎಫ್‌ಎಲ್‌ಸಿ, ಮತ್ತು ಜಿಯೋ ಬ್ಲಾಕ್ಡ್ ಇಂಡಿಯಾ ಸಂಸ್ಥೆಗಳ ಸಂಪೂರ್ಣ ಎಕ್ಸ್ ಖಾತೆಗಳನ್ನು ಹಾಗೂ ಅವರು ಮಾಡಿದ್ದ ಸುಮಾರು 37 ಪೋಸ್ಟ್‌ಗಳನ್ನು ಭಾರತದಲ್ಲಿ ಸಂಪೂರ್ಣವಾಗಿ ತೆಗೆದುಹಾಕಲು/ಬ್ಲಾಕ್ ಮಾಡಲು ಕೋರಿದ್ದಾರೆ.
ಐಎಫ್‌ಎಫ್ ಆಕ್ಷೇಪಣೆ ಮತ್ತು ವಾದ
ದೆಹಲಿ ಪೊಲೀಸ್ ಇಲಾಖೆಯು ಅಧಿಕೃತವೇ ಅಲ್ಲದ ಒಂದು ಖಾಸಗಿ ಕಾನೂನು ನೋಟಿಸ್ ಅನ್ನು ಜಾರಿಗೊಳಿಸುವ ಏಜೆನ್ಸಿಯಂತೆ ವರ್ತಿಸುತ್ತಿದೆ ಎಂದು ಐಎಫ್‌ಎಫ್ ಗಂಭೀರ ಆರೋಪ ಮಾಡಿದೆ. ಭಾರತದಲ್ಲಿ ಯಾವೆಲ್ಲಾ ವೆಬ್‌ಸೈಟ್ ಅಥವಾ ಪೋಸ್ಟ್‌ಗಳನ್ನು ಸರ್ಕಾರ ನಿರ್ಬಂಧಿಸುತ್ತದೆ ಎಂಬ ಸಾರ್ವಜನಿಕ ದಾಖಲೆಯನ್ನು ಇಡುತ್ತಿರುವ ಸಂಸ್ಥೆಗಳನ್ನೇ ಮುಚ್ಚಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದೆ.
ಕ್ರಿಮಿನಲ್ ನಿಂದನೆ ಎಂಬುದು ಪೊಲೀಸರು ನೇರವಾಗಿ ಹಸ್ತಕ್ಷೇಪ ಮಾಡಲಾಗದ ಮತ್ತು ಜಾಮೀನು ಸಿಗುವ ಅಪರಾಧವಾಗಿದೆ. ಸಂತ್ರಸ್ತ ವ್ಯಕ್ತಿ ನ್ಯಾಯಾಲಯಕ್ಕೆ ನೇರವಾಗಿ ದೂರು ನೀಡಿದಾಗ ಮಾತ್ರ ಕೋರ್ಟ್ ಇದರ ವಿರುದ್ಧ ಕ್ರಮ ಜರುಗಿಸಬಹುದು. ಹೀಗಿರುವಾಗ ಪೊಲೀಸರು ನೇರವಾಗಿ ಖಾತೆ ನಿರ್ಬಂಧಿಸಲು ನೋಟಿಸ್ ನೀಡಿರುವುದು ಕಾನೂನುಬಾಹಿರ ಎಂದು ಐಎಫ್‌ಎಫ್ ಹೇಳಿದೆ.
ಐಎಫ್‌ಎಫ್ ತನ್ನ ಹೇಳಿಕೆಯಲ್ಲಿ, ದೆಹಲಿ ಪೊಲೀಸರು ಈ ನೋಟಿಸ್‌ಗಳನ್ನು ಹಿಂಪಡೆಯದಿದ್ದರೆ ಇದರ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದೆ.


