ರಾಜಸ್ಥಾನದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ (ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್) ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಪ್ರತಿಪಕ್ಷ ಕಾಂಗ್ರೆಸ್ ಭರ್ಜರಿ ಮೇಲುಗೈ ಸಾಧಿಸಿದೆ. ಈ ಫಲಿತಾಂಶವು ರಾಜ್ಯದ ಆಡಳಿತಾರೂಢ ಬಿಜೆಪಿಗೆ ದೊಡ್ಡ ಮಟ್ಟದ ಹಿನ್ನಡೆಯನ್ನುಂಟುಮಾಡಿದೆ.
ರಾಜ್ಯ ಚುನಾವಣಾ ಆಯೋಗದ (ಎಸ್ಇಸಿ) ಅಂಕಿಅಂಶಗಳ ಪ್ರಕಾರ, ಮತ ಎಣಿಕೆ ನಡೆದ 37 ಜಿಲ್ಲೆಗಳಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆದಿದೆ.
ಪಂಚಾಯತ್ ಸಮಿತಿ ಸ್ಥಾನಗಳ ಪೈಕಿ ಕಾಂಗ್ರೆಸ್ 3,701ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಜೆಪಿ 2,181 ಸ್ಥಾನಗಳಿಗೆ ಸೀಮಿತವಾಗಿದೆ. ಉಳಿದ ಸ್ಥಾನಗಳಲ್ಲಿ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್ಎಲ್ಪಿ), ಭಾರತ ಆದಿವಾಸಿ ಪಕ್ಷ (ಬಿಎಪಿ) ಹಾಗೂ ಪಕ್ಷೇತರ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಜಿಲ್ಲಾ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ತನ್ನ ಮುನ್ನಡೆ ಕಾಯ್ದುಕೊಂಡಿದ್ದು, 599 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿ 301 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. 37 ಜಿಲ್ಲೆಗಳ ಪೈಕಿ 27 ಜಿಲ್ಲಾ ಪರಿಷತ್ಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದರೆ, ಬಿಜೆಪಿ ಕೇವಲ 6 ಜಿಲ್ಲೆಗಳಲ್ಲಿ ಬಹುಮತ ಗಳಿಸಿದೆ.
ಅಕ್ಟೋಬರ್ 22, 28 ಹಾಗೂ ನವೆಂಬರ್ 3 ಮತ್ತು 14ರಂದು ಒಟ್ಟು ನಾಲ್ಕು ಹಂತಗಳಲ್ಲಿ ಈ ಚುನಾವಣೆಗಳಿಗೆ ಮತದಾನ ನಡೆದಿತ್ತು. ಇನ್ನು ನಾಲ್ಕು ಜಿಲ್ಲೆಗಳ (ಕೋಟಾ, ಬರಾನ್, ಶ್ರೀ ಗಂಗಾನಗರ ಮತ್ತು ಕರೌಲಿ) ಮತ ಎಣಿಕೆಯು ಡಿಸೆಂಬರ್ 17ರಂದು ನಡೆಯಲಿದೆ. ವಿಶೇಷವೆಂದರೆ, ಈ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿಶೇಷ ತೀವ್ರ ಪರಿಷ್ಕರಣೆಗೂ (ಎಸ್ಐಆರ್) ಮುನ್ನ ಇದ್ದ ಮತದಾರರ ಪಟ್ಟಿಯನ್ನು ಆಧಾರವಾಗಿ ಬಳಸಿತ್ತು.
ಫಲಿತಾಂಶದ ಕುರಿತು ಹರ್ಷ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಅಶೋಕ್ ಗೆಹ್ಲೋಟ್ ಅವರು, “ರಾಜ್ಯದ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಕ್ಕೆ ಗ್ರಾಮೀಣ ಮತದಾರರು ತಕ್ಕ ಪಾಠ ಕಲಿಸಿದ್ದಾರೆ” ಎಂದು ಬಣ್ಣಿಸಿದ್ದಾರೆ. ಮತ್ತೊಂದೆಡೆ, ಜನಾದೇಶವನ್ನು ಒಪ್ಪಿಕೊಂಡಿರುವ ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ಅವರು, ಪಕ್ಷಕ್ಕೆ ಹಿನ್ನಡೆಯಾಗಿರುವ ಕ್ಷೇತ್ರಗಳ ಕುರಿತು ಆತ್ಮಾವಲೋಕನ ನಡೆಸುವುದಾಗಿ ತಿಳಿಸಿದ್ದಾರೆ.
ಎಸ್ಐಆರ್ ಪೂರ್ವದ ಮತದಾರರ ಪಟ್ಟಿ ಬಳಕೆ, ಡಿಲೀಟ್ ಆದವರು ಪ್ರತ್ಯಕ್ಷ !
ರಾಜಸ್ಥಾನದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಸ್ಐಆರ್ ಬಳಿಕ ಪ್ರಕಟಗೊಂಡ ಮತದಾರರ ಪಟ್ಟಿಯನ್ನು ಬಳಸಿಲ್ಲ. ಈ ವಿಚಾರವನ್ನು ರಾಜ್ಯದ ಚುನಾವಣಾ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ.
ರಾಜಸ್ಥಾನ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ರಾಜೇಶ್ ವರ್ಮಾ ಮತ್ತು ಮುಖ್ಯ ಚುನಾವಣಾ ಅಧಿಕಾರಿ ನವೀನ್ ಮಹಾಜನ್ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 2025ರ ಜನವರಿ 1ರವರೆಗೆ ಪರಿಷ್ಕೃತಗೊಂಡಿದ್ದ ಚುನಾವಣಾ ಆಯೋಗದ ಎಸ್ಐಆರ್-ಪೂರ್ವ ಮತದಾರರ ಪಟ್ಟಿಯನ್ನು ಆಧಾರವಾಗಿ ಬಳಸಲಾಗಿದೆ ಎಂದು ತಿಳಿಸಿರುವುದು ವರದಿಯಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣಾ ಪೂರ್ವಸಿದ್ಧತೆಗಳು ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಆರಂಭವಾಗಿದ್ದರಿಂದ ಮತ್ತು ರಾಜ್ಯ ಚುನಾವಣಾ ಆಯೋಗವು ಸಾಂಪ್ರದಾಯಿಕವಾಗಿ ವಾರ್ಷಿಕ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ಎಸ್ಆರ್) ಪಟ್ಟಿಯನ್ನು ಅವಲಂಬಿಸುವುದರಿಂದ ಈ ಪಟ್ಟಿಯನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಅಂತಿಮ ಎಸ್ಐಆರ್ ಪಟ್ಟಿಗಿಂತ (5.15 ಕೋಟಿ ಮತದಾರರು) ರಾಜ್ಯ ಚುನಾವಣಾ ಆಯೋಗದ ಸ್ಥಳೀಯ ಸಂಸ್ಥೆಗಳ ಪಟ್ಟಿಯಲ್ಲಿ (5.45 ಕೋಟಿ ಮತದಾರರು) ಸುಮಾರು 30 ಲಕ್ಷ ಹೆಚ್ಚು ಮತದಾರರ ಹೆಸರುಗಳು ಇರುವುದು ವರದಿಯಾಗಿದೆ. (ಅಲ್ಲದೆ, ಎಸ್ಐಆರ್ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಕೈಬಿಡಲಾಗಿದ್ದ 1.82 ಲಕ್ಷ ಮಂದಿಯ ಹೆಸರುಗಳು ಪಂಚಾಯತ್ ಪಟ್ಟಿಯಲ್ಲಿ ಉಳಿದುಕೊಂಡಿರುವ ಬಗ್ಗೆಯೂ ವರದಿಗಳು ಪ್ರಕಟವಾಗಿವೆ).
ಎಸ್ಐಆರ್ ಪೂರ್ವದ ಮತದಾರರ ಪಟ್ಟಿ, ಬಿಜೆಪಿಗೆ ಸೋಲು
ರಾಜಸ್ಥಾನ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿರುವುದು ಮತ್ತು ಬಿಜೆಪಿಗೆ ಹಿನ್ನಡೆಯಾಗಿರುವುದು ದೇಶದಾದ್ಯಂತ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಎಸ್ಐಆರ್ ಪೂರ್ವದ ಮತಪಟ್ಟಿ ಬಳಸಿರುವುದು.
ದೇಶದಲ್ಲಿ ಎಸ್ಐಆರ್ ವಿರುದ್ಧದ ಹೋರಾಟಗಾರರ ಪ್ರಮುಖ ಆರೋಪವೆಂದರೆ, ಎಸ್ಐಆರ್ ಮೂಲಕ ಬಿಜೆಪಿ ವಿರೋಧಿ ಮತದಾರರ ಹೆಸರುಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿ ಡಿಲೀಟ್ ಮಾಡಲಾಗುತ್ತಿದೆ ಎಂಬುವುದಾಗಿದೆ.
ಎಸ್ಐಆರ್ ಮೂಲಕ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಮತದಾರರ ಹೆಸರುಗಳನ್ನು ವಿವಿಧ ಕಾರಣಗಳನ್ನು ನೀಡಿ ಡಿಲೀಟ್ ಮಾಡುವ ಮೂಲಕ ಬಿಜೆಪಿ ಗೆಲುವಿಗೆ ಚುನಾವಣಾ ಆಯೋಗ ಸಹಾಯ ಮಾಡುತ್ತಿದೆ ಎಂಬ ಆರೋಪವನ್ನು ಎಸ್ಐಆರ್ ವಿರೋಧಿಗಳು ಮಾಡಿಕೊಂಡು ಬರುತ್ತಿದ್ದಾರೆ. ಪಶ್ಚಿಮ ಬಂಗಾಳದಂತೆ ವಿವಿಧ ರಾಜ್ಯಗಳಲ್ಲಿ ಎಸ್ಐಆರ್ ಮೂಲಕ ಲಕ್ಷಾಂತರ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟು ಚುನಾವಣೆ ನಡೆಸಿ, ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪವಿದೆ.
ಇದಕ್ಕೆ ಪುಷ್ಠಿ ನೀಡುವಂತೆ ರಾಜಸ್ಥಾನದ ಪಂಚಾಯತ್ ಚುನಾವಣೆಗೆ ಎಸ್ಐಆರ್ ಪೂರ್ವದ ಮತದಾರರ ಪಟ್ಟಿ ಬಳಸಿದಾಗ, ಎಸ್ಐಆರ್ನಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದ ಸುಮಾರು 30 ಲಕ್ಷ ಮಂದಿ ಪ್ರತ್ಯಕ್ಷಗೊಂಡಿದ್ದ ಬಗ್ಗೆ ವರದಿಯಾಗಿತ್ತು.
ಈಗ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವುದು ಸಾಧಿಸಿರುವುದು ಮತ್ತು ಆಡಳಿತರೂಢ ಬಿಜೆಪಿಗೆ ಸೋಲಾಗಿರುವುದು ಎಸ್ಐಆರ್ ವಿರೋಧಿ ಹೋರಾಟಗಾರರ ಆರೋಪಗಳನ್ನು ಇನ್ನಷ್ಟು ಪುಷ್ಠೀಕರಿಸಿವೆ. ಒಂದು ವೇಳೆ ಎಸ್ಐಆರ್ ಬಳಿಕದ ಮತದಾರರ ಪಟ್ಟಿ ಬಳಸಿದ್ದರೆ ಬಿಜೆಪಿ ಗೆಲ್ಲುತ್ತಿತ್ತೆ? ಎಂಬ ಪ್ರಶ್ನೆ ಮೂಡಿದೆ.
ಕರ್ನಾಟಕದಲ್ಲೂ ಹಳೆಯ ಬಳಸುತ್ತಾ ಆಯೋಗ?
ಬಿಜೆಪಿ ಆಡಳಿತದ ಯುಪಿ, ರಾಜಸ್ಥಾನ ರಾಜ್ಯಗಳೇ ಎಸ್ಐಆರ್ ಪೂರ್ವದ ಮತದಾರರ ಪಟ್ಟಿ ಬಳಸಿರುವಾಗ, ಕರ್ನಾಟಕ ಕೂಡ ಎಸ್ಐಆರ್ ಪಟ್ಟಿ ಬಳಸಬಾರದು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಳೆಯ ಮತದಾರರ ಪಟ್ಟಿಯನ್ನೇ ಬಳಸಬೇಕು ಎಂಬ ಆಗ್ರಹವನ್ನು ಹೋರಾಟಗಾರರು ಮಾಡಿದ್ದಾರೆ. ಈ ಸಂಬಂಧ ರಾಜ್ಯದ ಕಾಂಗ್ರೆಸ್ ಸರ್ಕಾರದ ದೃಢ ನಿರ್ಧಾರ ಕೈಗೊಳ್ಳಬೇಕು ಎಂಬ ಆಗ್ರಹ ಮಾಡಿದ್ದಾರೆ.
ಈಗ ರಾಜಸ್ಥಾನ ನದ ಫಲಿತಾಂಶದಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾ? ರಾಜ್ಯ ಚುನಾವಣಾ ಆಯೋಗ ಹಳೆಯ ಪಟ್ಟಿಯನ್ನೇ ಬಳಸುತ್ತಾ ಕಾದು ನೋಡಬೇಕಿದೆ.


