ವಿರೋಧ ಪಕ್ಷದ ನಾಯಕರು (ವಿಶೇಷವಾಗಿ ಕಾಂಗ್ರೆಸ್ ನಾಯಕರು), ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿಗಳ (Influencers) ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಟೆಕ್ ದೈತ್ಯ ‘ಮೆಟಾ’ (Meta) ವಿರುದ್ಧ ದೇಶವ್ಯಾಪಿ ವಿಶಿಷ್ಟ ಮತ್ತು ತೀವ್ರ ಪ್ರತಿಭಟನಾ ಅಭಿಯಾನವನ್ನು ಆರಂಭಿಸಿದೆ.
‘ಮಾರ್ಕ್ ಬಿಜೆಪಿಬರ್ಗ್’ ಬ್ಯಾನರ್ ಅಭಿಯಾನ :
ದೆಹಲಿಯ ಐಟಿಒ ಸೇರಿದಂತೆ ದೇಶದ ಪ್ರಮುಖ ನಗರಗಳ ಪಾದಚಾರಿ ಮೇಲ್ಸೇತುವೆಗಳ ಮೇಲೆ ಈಗಾಗಲೇ ಯುವ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಬ್ಯಾನರ್‌ಗಳನ್ನು ಅಳವಡಿಸಿದ್ದು, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರನ್ನು ವ್ಯಂಗ್ಯವಾಗಿ ‘ಮಾರ್ಕ್ ಬಿಜೆಪಿಬರ್ಗ್ – ಮೆಟಾ ಬಿಜೆಪಿ ಕಾ ಬೇಟಾ’ ಎಂಬ ಘೋಷವಾಕ್ಯಗಳನ್ನು ಈ ಬ್ಯಾನರ್‌ಗಳಲ್ಲಿ ಮುದ್ರಿಸಲಾಗಿದೆ.
ಮೆಟಾ ಕಚೇರಿಗಳಿಗೆ ಮುತ್ತಿಗೆ:
ಶುಕ್ರವಾರ (ನ.20) ಹೈದರಾಬಾದ್, ಮುಂಬೈ ಮತ್ತು ಗುರುಗ್ರಾಮದಲ್ಲಿರುವ ಮೆಟಾ ಕಚೇರಿಗಳಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಮುಂಬೈ ಕಚೇರಿಯ ಗೋಡೆಗಳ ಮೇಲೆ ‘ಮೆಟಾ ಆರ್‌ಎಸ್‌ಎಸ್ ಕಾ ಬೇಟಾ’ ಎಂದು ಬರೆಯಲಾಗಿದ್ದು, ಗುರುಗ್ರಾಮ ಕಚೇರಿಯ ಬಾಗಿಲುಗಳಿಗೆ ಕಾರ್ಯಕರ್ತರು ಬೀಗ ಜಡಿದಿದ್ದಾರೆ. ಹೈದರಾಬಾದ್‌ನ ಗಚ್ಚಿಬೌಲಿ ಕಚೇರಿಯ ಆವರಣದಲ್ಲಿಯೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ರಾಷ್ಟ್ರೀಯ ಉಸ್ತುವಾರಿ ಮನೀಶ್ ಶರ್ಮಾ ಸೇರಿದಂತೆ ತಮ್ಮ ಹಲವು ನಾಯಕರ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಗಳನ್ನು ಮೆಟಾ ಅಮಾನತುಗೊಳಿಸಿರುವುದು ಯುವ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿಯಲು ಕಾರಣವಾಗಿದೆ.
7 ದಿನಗಳ ಗಡುವು :
ವಿರೋಧ ಪಕ್ಷದ ನಾಯಕರು ಮತ್ತು ಸ್ವತಂತ್ರ ಧ್ವನಿಗಳ ಖಾತೆಗಳ ಮೇಲಿನ ನಿರ್ಬಂಧಗಳನ್ನು ಹಿಂಪಡೆಯಲು ಯುವ ಕಾಂಗ್ರೆಸ್ ಮೆಟಾ ಸಂಸ್ಥೆಗೆ 7 ದಿನಗಳ ಗಡುವು ನೀಡಿದೆ. “ಮೆಟಾ ಸಂಸ್ಥೆಯು ಬಿಜೆಪಿಯ ಆದೇಶಗಳ ಬದಲಾಗಿ ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ನ್ಯಾಯಾಲಯ, ಬೀದಿಗಳು ಮತ್ತು ಕಚೇರಿಗಳ ಮುಂದೆ ಹೋರಾಟವನ್ನು ತೀವ್ರಗೊಳಿಸಲಾಗುವುದು” ಎಂದು ಸಂಘಟನೆ ಎಚ್ಚರಿಸಿದೆ.
ಮೆಟಾ ಮತ್ತು ಬಿಜೆಪಿ ಪ್ರತಿಕ್ರಿಯೆ :
ಯುವ ಕಾಂಗ್ರೆಸ್ ಆರೋಪಕ್ಕೆ, ಭಾರತದ ಸ್ಥಳೀಯ ಕಾನೂನುಗಳು ಮತ್ತು ನಿಯಮಗಳಿಗೆ ಅನುಸಾರವಾಗಿ ಮಾತ್ರ ತಾನು ಕಂಟೆಂಟ್‌ಗಳನ್ನು ನಿರ್ಬಂಧಿಸುವುದಾಗಿ ಮೆಟಾ ಸಂಸ್ಥೆ ಸಮಜಾಯಿಸಿ ನೀಡಿದೆ. ಮತ್ತೊಂದೆಡೆ, ಮೆಟಾ ಕಚೇರಿಗಳ ಮೇಲಿನ ದಾಳಿ ಮತ್ತು ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಇದು ಕಾಂಗ್ರೆಸ್‌ನ ದುಂಡಾವರ್ತನೆ ಎಂದು ಟೀಕಿಸಿದೆ.
‘6 ತಿಂಗಳಲ್ಲಿ ಭಾರತದಲ್ಲಿ 54 ಲಕ್ಷ ಪೋಸ್ಟ್ ಮತ್ತು ಖಾತೆಗಳಿಗೆ ನಿರ್ಬಂಧ:
“ಬಿಜೆಪಿಯ ಆದೇಶದ ಮೇರೆಗೆ ಕೇವಲ 6 ತಿಂಗಳಲ್ಲಿ ಭಾರತದಲ್ಲಿ 54 ಲಕ್ಷ ಪೋಸ್ಟ್‌ಗಳು ಮತ್ತು ಖಾತೆಗಳನ್ನು ನಿರ್ಬಂಧಿಸಲಾಗಿದೆ. ಅಂದರೆ ಪ್ರತಿದಿನ ಸುಮಾರು 30,000! ಇದು ನಮ್ಮ ಆರೋಪವಲ್ಲ; ರಾಯಿಟರ್ಸ್ ವರದಿ ಮಾಡಿರುವಂತೆ ಇದು ಮೆಟಾ ಸಂಸ್ಥೆಯ ಸ್ವಂತ ಅಂಕಿಅಂಶವಾಗಿದೆ. ಆದರೂ ನಾವು ಮೆಟಾ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದ್ದಕ್ಕೆ ಬಿಜೆಪಿ ಕೋಪಗೊಂಡಿದೆಯೇ? 😂 ಮೆಟಾ ಬಾಗಿಲಿಗೆ ಹೋಗದೆ ನಾವು ಇನ್ನೆಲ್ಲಿಗೆ ಹೋಗಬೇಕು? ಸುಮ್ಮನೆ ಕೂತ್ಕೊಳ್ಳಿ ಜೋಕರ್‌ಗಳೇ” ಎಂದು ಯುವ ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
“ನಾವು ಪ್ರತಿಭಟಿಸಿದ್ದು ಮೆಟಾ ಕಚೇರಿಯ ಮುಂದೆ, ಬಿಜೆಪಿಗೆ ಏಕೆ ನೋವಾಗುತ್ತಿದೆ? ನಾವು ಆಕಸ್ಮಿಕವಾಗಿ ಪೋಷಕ ಕಂಪನಿಯ ಬಾಗಿಲನ್ನೇ ತಟ್ಟಿದ್ದೇವೆಯೇ? ನೀವು ಇದನ್ನು ಗೂಂಡಾಗಿರಿ ಎನ್ನುತ್ತೀರಿ, ಆದರೆ ನಾವು ಇದನ್ನು ನಮ್ಮ ಸಾಂವಿಧಾನಿಕ ಹಕ್ಕುಗಳ ರಕ್ಷಣೆ ಎನ್ನುತ್ತೇವೆ. ನಾವು ಮೆಟಾ ವಿರುದ್ಧ ಬರುತ್ತಿದ್ದೇವೆ, ಮತ್ತು ನಿಮ್ಮ ವಿರುದ್ಧವೂ ಬರುತ್ತಿದ್ದೇವೆ. ಭಾರತದಲ್ಲಿ ಯಾರು ಮಾತನಾಡಬೇಕು ಎಂಬುದನ್ನು ಯಾವುದೇ ಬಿಜೆಪಿ ಬೆಂಬಲಿತ ಅಲ್ಗಾರಿದಮ್ ಆಗಲಿ ಅಥವಾ ಯಾವುದೇ ಬಹುರಾಷ್ಟ್ರೀಯ ದೈತ್ಯ ಕಂಪನಿಯಾಗಲಿ ನಿರ್ಧರಿಸಲು ಸಾಧ್ಯವಿಲ್ಲ. ನಾವು ಗಾಂಧಿಯವರ ಮಾರ್ಗದಲ್ಲಿ, ಭಗತ್ ಸಿಂಗ್ ಅವರ ಧೈರ್ಯದೊಂದಿಗೆ ಹೋರಾಡುತ್ತೇವೆ. ಇದು ಭಾರತ; ಬಿಜೆಪಿಯ ಡಿಜಿಟಲ್ ವಸಾಹತು ಅಲ್ಲ. 7 ದಿನಗಳು, ಬಿಜೆಪಿಯ ಮಗನೇ (BJP ka BETA). ಸಮಯ ಮೀರುತ್ತಿದೆ” ಯುವ ಕಾಂಗ್ರೆಸ್ ಬಿಜೆಪಿ ಮತ್ತು ಮೆಟಾಗೆ ತಿರುಗೇಟು ಕೊಟ್ಟಿದೆ.
“ನಾವು ಮೋದಿಜಿಯವರನ್ನು ಚರ್ಚೆಗೆ ಆಹ್ವಾನಿಸಿದರೆ ನಿಮಗೇನು ಸಮಸ್ಯೆ? ಭಾರತದ ಯುವಕರು ಏನು ಮಾತನಾಡಬೇಕು ಮತ್ತು ತಮ್ಮ ಅಭಿಪ್ರಾಯಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದನ್ನು ಈಗ ವಿದೇಶಿ ಕಂಪನಿಯೊಂದು ನಿರ್ಧರಿಸುತ್ತದೆಯೇ?” ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಪ್ರಶ್ನಿಸಿದ್ದಾರೆ.
“ನಾವು ಹೈದರಾಬಾದ್‌ನಲ್ಲಿ ಮಾತ್ರವಲ್ಲದೆ, ಗುರುಗ್ರಾಮ, ದೆಹಲಿ ಮತ್ತು ಮುಂಬೈಯಲ್ಲೂ ಮೆಟಾ ವಿರುದ್ಧ ಪ್ರತಿಭಟಿಸಿದ್ದೇವೆ. ಕಳೆದ ಕೆಲವು ಸಮಯದಿಂದ, ಭಾರತದಲ್ಲಿ ಯಾರು ಏನು ಹೇಳಬಹುದು ಎಂಬುದನ್ನು ಮೆಟಾ ನಿರ್ಧರಿಸುತ್ತಿದೆ. ಒಂದು ವಿದೇಶಿ ಕಂಪನಿಯು ಭಾರತದಲ್ಲಿ ವ್ಯವಹಾರ ನಡೆಸಲು ಮತ್ತು ಇಲ್ಲಿನ ಯುವಜನರಿಂದ ಹಣ ಗಳಿಸಲು ಬಯಸಿದರೆ, ಅದು ದೇಶದ ಕಾನೂನುಗಳು ಮತ್ತು ಸಂವಿಧಾನದ ಚೌಕಟ್ಟಿನೊಳಗೆಯೇ ಕಾರ್ಯನಿರ್ವಹಿಸಬೇಕು” ಎಂದು ಚಿಬ್ ಹೇಳಿದ್ದಾರೆ.
ಪ್ರತಿಭಟನೆ ಬಳಿಕ ಕೆಲ ಖಾತೆಗಳ ಮರುಸ್ಥಾಪನೆ :
ಯುವ ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟಿಸಲು ಪ್ರಾರಂಭಿಸಿದ ಬಳಿಕ ಮೆಟಾ ಕೆಲ ಖಾತೆಗಳನ್ನು ಮರುಸ್ಥಾಪಿಸಿದೆ ಎಂದು ವರದಿಯಾಗಿದೆ. ಈ ಕುರಿತು ಭಾನುವಾರ (ನ.22) ಪೋಸ್ಟ್ ಹಾಕಿರುವ ಯುವ ಕಾಂಗ್ರೆಸ್, ನೀವು ಕೆಲ ಖಾತೆಗಳನ್ನು ಮರುಸ್ಥಾಪಿಸಿದರೆ ನಾವು ಸುಮ್ಮನೆ ಕೂರುವುದಿಲ್ಲ. ಎಲ್ಲಾ ಖಾತೆಗಳನ್ನು ಮತ್ತು ಪೋಸ್ಟ್‌ಗಳನ್ನು ಮರುಸ್ಥಾಪಿಸಲು ನಿಮಗೆ ಇನ್ನು 6 ದಿನಗಳು ಬಾಕಿ ಇದೆ” ಎಂದು ಎಚ್ಚರಿಕೆ ಕೊಟ್ಟಿದೆ.


