ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಮಧ್ಯವರ್ತಿಗಳಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರಿಗೆ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನಾಯಕ ಅಶುತೋಷ್ ರಾಂಕಾ ಅವರು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ಈ ಆರೋಪಗಳನ್ನು ಹಿಂಪಡೆದು ಬೇಷರತ್ ಸಾರ್ವಜನಿಕ ಕ್ಷಮೆಯಾಚಿಸಬೇಕು ಮತ್ತು 3 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಅವರು ನೋಟಿಸ್ನಲ್ಲಿ ಆಗ್ರಹಿಸಿದ್ದಾರೆ.
ನವೆಂಬರ್ 3ರಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಜಿತೇಂದ್ರ ಸಿಂಗ್, ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರು ಅಮೆರಿಕದಿಂದ ಮತ್ತು ಅಶುತೋಷ್ ರಾಂಕಾ ಅವರು ಪಾಕಿಸ್ತಾನದಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ವಿರುದ್ಧ ನಡೆಯುತ್ತಿರುವ ಅಭಿಯಾನಕ್ಕೆ ಪಾಕಿಸ್ತಾನದ ರಾಜಕಾರಣಿಗಳು ಸೇರಿದಂತೆ ಭಾರತ ವಿರೋಧಿ ಸಂಘಟನೆಗಳು ಮತ್ತು ವಿದೇಶಿ ಅನುದಾನಿತ ಗುಂಪುಗಳು ಹಣಕಾಸಿನ ನೆರವು ನೀಡುತ್ತಿವೆ ಎಂದು ದೂರಿದ್ದರು.
ಅಶುತೋಷ್ ರಾಂಕಾ ತಿರುಗೇಟು :
ಈ ಕುರಿತು ಶುಕ್ರವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಂಕಾ, ತಮ್ಮ ಪ್ರಾಮಾಣಿಕತೆ ಮತ್ತು ದೇಶಭಕ್ತಿಯನ್ನು ಪ್ರಶ್ನಿಸುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ.
ತಾನು ಕಠಿಣ ಪರಿಶ್ರಮದಿಂದ ಕಾನ್ಪುರದ ಐಐಟಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪ್ರವೇಶ ಪಡೆದಿದ್ದಾಗಿ ತಿಳಿಸಿರುವ ಅವರು, ಲಂಡನ್ನ ಐಷಾರಾಮಿ ಜೀವನ ಹಾಗೂ ಮೆಕಿನ್ಸೆ ಸಂಸ್ಥೆಯ ಕೈತುಂಬಾ ಸಂಬಳದ ಕೆಲಸವನ್ನು ತೊರೆದು ದೇಶಕ್ಕಾಗಿ ಮರಳಿದ್ದಾಗಿ ಹೇಳಿದ್ದಾರೆ. ಮೆಕಿನ್ಸೆ, ಗಾವಿ ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗಿನ ತಮ್ಮ ವೃತ್ತಿಪರ ವ್ಯವಹಾರಗಳು ಪಾರದರ್ಶಕವಾಗಿದ್ದು, ಭಾರತದ ತೆರಿಗೆ ಮತ್ತು ಲೆಕ್ಕಪತ್ರ ಕಾನೂನುಗಳಿಗೆ ಬದ್ಧವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಜೆಪಿ ಕಾನೂನು ಘಟಕವು ವಕೀಲ ಅಭಿಕ್ ಚಿಮ್ನಿ ಅವರ ಮೂಲಕ ಸಚಿವರಿಗೆ ನೋಟಿಸ್ ಜಾರಿ ಮಾಡಿದೆ. ಹಣ ನೀಡಿದ್ದಾರೆ ಎನ್ನಲಾದ ಪಾಕಿಸ್ತಾನಿ ರಾಜಕಾರಣಿಗಳ ಹೆಸರು, ಮೊತ್ತ, ದಿನಾಂಕ, ಬ್ಯಾಂಕ್ ವಹಿವಾಟು ಮತ್ತು ಪೂರಕ ದಾಖಲೆಗಳನ್ನು ಬಹಿರಂಗಪಡಿಸುವಂತೆ ನೋಟಿಸ್ನಲ್ಲಿ ಸವಾಲು ಹಾಕಲಾಗಿದೆ.
ಮಾನನಷ್ಟ ಪರಿಹಾರವಾಗಿ ಕೇಳಿರುವ 3 ಕೋಟಿ ರೂಪಾಯಿ ಮೊತ್ತವನ್ನು ಭಾರತದಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ದತ್ತಿ ಸಂಸ್ಥೆಯೊಂದಕ್ಕೆ ದೇಣಿಗೆಯಾಗಿ ನೀಡುವುದಾಗಿ ರಾಂಕಾ ತಿಳಿಸಿದ್ದಾರೆ.


