ಕೇಂದ್ರದ ಕ್ಷೇತ್ರ ಪುನರ್‌ವಿಂಗಡಣೆ (Delimitation) ಮಸೂದೆಗೆ ಬೆಂಬಲ ನೀಡಲು ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ನಿರ್ಧರಿಸಿದೆ. ಶನಿವಾರ (ನ.28) ಚೆನ್ನೈನಲ್ಲಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸದರ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಅಂಗೀಕರಿಸಲಾಗಿದೆ.
“ನ್ಯಾಯಯುತ ಕ್ಷೇತ್ರ ಪುನರ್‌ವಿಂಗಡಣೆ ಬೇಡಿಕೆಗಳನ್ನು ಒಳಗೊಂಡಿರುವ ಮಸೂದೆಯನ್ನು ಡಿಎಂಕೆ ಬೆಂಬಲಿಸುತ್ತದೆ. ಕಳೆದ ಏಪ್ರಿಲ್‌ನಲ್ಲಿ ನಾವು ಯಾವ ಎರಡು ಬೇಡಿಕೆಗಳಿಗಾಗಿ ಮಸೂದೆಯನ್ನು ವಿರೋಧಿಸಿದ್ದೆವೋ, ಅವುಗಳನ್ನು ಹೊಸ ಮಸೂದೆಯಲ್ಲಿ ಲಿಖಿತ ರೂಪದಲ್ಲಿ ಸೇರಿಸಲಾಗಿದೆ. ಇದು 2024ರಿಂದ ಡಿಎಂಕೆ ನಡೆಸಿದ ನಿರಂತರ ಹೋರಾಟಗಳಿಗೆ ಸಿಕ್ಕ ಜಯ. ತಮಿಳುನಾಡು ಸೇರಿದಂತೆ ಎಲ್ಲಾ ದಕ್ಷಿಣದ ರಾಜ್ಯಗಳಿಗೆ ಸಂದ ಜಯ. 1971ರ ಜನಸಂಖ್ಯೆಯ ಆಧಾರದ ಮೇಲೆ ಎಲ್ಲಾ ರಾಜ್ಯಗಳ ಕ್ಷೇತ್ರಗಳಲ್ಲಿ ಶೇ. 50ರಷ್ಟು ಹೆಚ್ಚಳಕ್ಕೆ ಅವಕಾಶ ನೀಡುವ ಈ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯನ್ನು ನಾವು ಕೈಬಿಟ್ಟರೆ ಏನಾಗಬಹುದು ಎಂಬುದರ ಬಗ್ಗೆ ಭಾವನಾತ್ಮಕವಾಗದೆ ಶಾಂತವಾಗಿ ಯೋಚಿಸಬೇಕು. ಈ ಎಲ್ಲಾ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಪ್ರಾಯೋಗಿಕವಾಗಿ ಕಾರ್ಯಸಾಧ್ಯವಾದ ಮತ್ತು ನಮಗೆ ಪ್ರಯೋಜನಕಾರಿಯಾದ ಈ ಸ್ವರೂಪದ ಕ್ಷೇತ್ರ ಪುನರ್‌ವಿಂಗಡಣೆಯ್ನು ಬೆಂಬಲಿಸಲು ಇಂದು ನಡೆದ ಡಿಎಂಕೆ ಸಂಸದರ ಸಭೆಯಲ್ಲಿ ನಿರ್ಧರಿಸಲಾಗಿದೆ” ಎಂದು ಸ್ಟಾಲಿನ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಆದರೆ, ಸಂಸತ್ತಿನಲ್ಲಿ ಪ್ರಸ್ತಾವಿತ ಮಸೂದೆಯನ್ನು ಬೆಂಬಲಿಸುವುದು ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳ ಹಿತದೃಷ್ಟಿಯಿಂದ ಉತ್ತಮ ಎಂದು ಬಿಜೆಪಿ ಡಿಎಂಕೆ ಪಕ್ಷಕ್ಕೆ ತಿಳಿಸಿತ್ತು ಎನ್ನಲಾಗಿದೆ.
“ಹೊಸ ಕರಡು ಮಸೂದೆಯ ಪ್ರಕಾರ, ದೇಶದ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ. 50 ರಷ್ಟು ಹೆಚ್ಚಿಸಲು (ಅಂದರೆ ಈಗ ಇರುವುದಕ್ಕಿಂತ ಅರ್ಧದಷ್ಟು ಹೆಚ್ಚು ಮಾಡಲು) ಪ್ರಸ್ತಾಪಿಸಲಾಗಿದೆ. ಸಾಮಾನ್ಯವಾಗಿ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಿದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಬಹುದು ಎಂಬ ಆತಂಕವಿದೆ. ಆದರೆ, ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಶೇ. 50ರಷ್ಟು ಸ್ಥಾನಗಳನ್ನು ಹೆಚ್ಚಿಸುವುದು “ಎರಡು ಕೆಟ್ಟ ಆಯ್ಕೆಗಳಲ್ಲಿ ಸ್ವಲ್ಪ ಪರವಾಗಿಲ್ಲ ಎನ್ನಬಹುದಾದ ಆಯ್ಕೆ” (lesser of two evils) ಎಂಬಂತೆ ದಕ್ಷಿಣದ ರಾಜ್ಯಕ್ಕೆ (ತಮಿಳುನಾಡಿಗೆ) ತೋರಿಸಲಾಗಿದೆ” ಎಂದು ಡಿಎಂಕೆ ಪಕ್ಷದ ಮೂಲವೊಂದು ಹೇಳಿರುವುದಾಗಿ thenewsminute.com ವರದಿ ಮಾಡಿದೆ.
ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರ ಪಡೆಯಬೇಕಾದರೆ ಸದನದಲ್ಲಿ ಹಾಜರಿರುವ ಮತ್ತು ಮತ ಹಾಕುವ ಸಂಸದರಲ್ಲಿ ಮೂರನೇ ಎರಡರಷ್ಟು (2/3) ಬಹುಮತ ಸರ್ಕಾರಕ್ಕೆ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಡಿಎಂಕೆ ಪಕ್ಷದ 22 ಸಂಸದರ ಮತಗಳು ಮಸೂದೆ ಅಂಗೀಕಾರವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸಲಿವೆ.
ಸಂಸತ್ತಿನಲ್ಲಿ ಈ ಮಸೂದೆ ಅಂಗೀಕಾರವಾಗದಿದ್ದರೆ, 2027ರ ಜನಗಣತಿಯ ಅಂಕಿಅಂಶಗಳ ಆಧಾರದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ಸರ್ಕಾರ ಡಿಎಂಕೆಗೆ ತಿಳಿಸಿದೆ.
ಇಂತಹ ಕ್ಷೇತ್ರ ಪುನರ್‌ವಿಂಗಡಣೆಗೆ 2002ರ ಸಂವಿಧಾನದ (84ನೇ ತಿದ್ದುಪಡಿ) ಕಾಯ್ದೆಯಿಂದ ಕಾನೂನುಬದ್ಧ ಮಾನ್ಯತೆ ದೊರೆತಿದೆ. ವಿವಿಧ ರಾಜ್ಯಗಳಲ್ಲಿನ ಜನಸಂಖ್ಯಾ ಬೆಳವಣಿಗೆಯ ದರಗಳಲ್ಲಿನ ವ್ಯತ್ಯಾಸದಿಂದ ಉಂಟಾದ ಜನಸಂಖ್ಯಾ ಅಸಮತೋಲನವನ್ನು ಗುರುತಿಸಿ, 84ನೇ ತಿದ್ದುಪಡಿಯು ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆಯನ್ನು 25 ವರ್ಷಗಳ ಅವಧಿಗೆ ತಡೆಹಿಡಿದಿತ್ತು (ಸ್ಥಗಿತಗೊಳಿಸಿತ್ತು). “ದೇಶದ ವಿವಿಧ ಭಾಗಗಳಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ಜನಸಂಖ್ಯಾ ನೀತಿಯ ಕಾರ್ಯತಂತ್ರದ ಭಾಗವಾಗಿ, ರಾಜ್ಯ ಸರ್ಕಾರಗಳು ಜನಸಂಖ್ಯಾ ಸ್ಥಿರೀಕರಣದ ಕಾರ್ಯಸೂಚಿಯನ್ನು ಅನುಸರಿಸಲು ಪ್ರೋತ್ಸಾಹಕ ಕ್ರಮವಾಗಿ ಹೊಸ ಕ್ಷೇತ್ರ ಪುನರ್‌ವಿಂಗಡಣೆಯ ಮೇಲಿನ ಪ್ರಸ್ತುತ ತಡೆಯನ್ನು 2026ರವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ” ಎಂದು ಆ ತಿದ್ದುಪಡಿಯಲ್ಲಿ ಹೇಳಲಾಗಿತ್ತು.
2026ರ ನಂತರ ನಡೆಯುವ ಮೊದಲ ಜನಗಣತಿಯ ಅಂಕಿಅಂಶಗಳ ಪ್ರಕಾರ ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್‌ವಿಂಗಡಣೆಯನ್ನು ನಡೆಸಲು ಅದು (84ನೇ ತಿದ್ದುಪಡಿ) ಅವಕಾಶ ನೀಡಿದೆ. ಈ ಪ್ರಕ್ರಿಯೆಯನ್ನು ನಡೆಸಲು ಕಾನೂನನ್ನು ಅಂಗೀಕರಿಸಲು ಸಂಸತ್ತಿನಲ್ಲಿ ಕೇವಲ ಸರಳ ಬಹುಮತ (simple majority) ಸಾಕಾಗುತ್ತದೆ ಎಂದು ಸರ್ಕಾರವು ಡಿಎಂಕೆಗೆ ನೆನಪಿಸಿದೆ ಎಂದು ಹೇಳಲಾಗಿದೆ.
ಆದಾಗ್ಯೂ, 2026ರಲ್ಲಿಯೂ ಜನಸಂಖ್ಯಾ ಅಸಮತೋಲನವು ಒಂದು ಪ್ರಮುಖ ಕಳವಳವಾಗಿ ಉಳಿದಿರುವುದರಿಂದ, ದಕ್ಷಿಣ ಭಾರತದ ರಾಜ್ಯಗಳು ಮತ್ತು ಪ್ರಾದೇಶಿಕ ಪಕ್ಷಗಳು ಇಂತಹ ಕ್ಷೇತ್ರ ಪುನರ್‌ವಿಂಗಡಣೆಯನ್ನು ವಿರೋಧಿಸಿವೆ. ಕುಟುಂಬ ಕಲ್ಯಾಣ ಮತ್ತು ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ರಾಜ್ಯಗಳಿಗೆ ಇದು ಶಿಕ್ಷೆಯಾಗಲಿದ್ದು, ಲೋಕಸಭೆಯಲ್ಲಿ ಅವುಗಳ ಸ್ಥಾನಗಳ ಪಾಲನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಅವು ವಾದಿಸಿವೆ. ಮತ್ತೊಂದೆಡೆ, ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಲು ವಿಫಲವಾದ ರಾಜ್ಯಗಳಿಗೆ ಹೆಚ್ಚಿನ ಪಾಲಿನ ಸ್ಥಾನಗಳನ್ನು ನೀಡುವ ಮೂಲಕ ಬಹುಮಾನ ನೀಡಿದಂತಾಗುತ್ತದೆ ಎಂದು ಹೇಳಿದೆ.
ಡಿಎಂಕೆ ಪಕ್ಷವು ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್‌ವಿಂಗಡಣೆಯನ್ನು ತೀವ್ರವಾಗಿ ವಿರೋಧಿಸಿದೆ. ಬದಲಾಗಿ, ಲೋಕಸಭೆಯಲ್ಲಿ ಪ್ರಸ್ತುತ ಶೇ. 7.18 ರಷ್ಟಿರುವ ತಮಿಳುನಾಡಿನ ಸ್ಥಾನಗಳ ಪಾಲಿಗೆ ಯಾವುದೇ ಧಕ್ಕೆಯಾಗದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಅದು ಒತ್ತಾಯಿಸಿದೆ. ಎಲ್ಲಾ ರಾಜ್ಯಗಳ ಸ್ಥಾನಗಳ ಪಾಲಿನಲ್ಲಿ ಶೇ. 50 ರಷ್ಟು ಹೆಚ್ಚಳ ಮಾಡುವುದನ್ನು ಒಂದು ಸ್ವೀಕಾರಾರ್ಹ ಪರ್ಯಾಯ ಮಾರ್ಗವಾಗಿ ರೂಪಿಸಲಾಗಿದೆ.


