ಚೆನ್ನೈ: ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಗೆ ಡಿಎಂಕೆ ಅಧಿಕೃತ ಬೆಂಬಲ ಘೋಷಿಸಿದ ಬೆನ್ನಲ್ಲೇ, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಮತ್ತು ಆ ಪಕ್ಷದ ವಿರುದ್ಧ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ತೀವ್ರ ವಾಗ್ದಾಳಿ ನಡೆಸಿದೆ. ಸೈದ್ಧಾಂತಿಕ ನಿಲುವುಗಳು, ಒಕ್ಕೂಟ ವ್ಯವಸ್ಥೆಯ ಪ್ರಶ್ನೆಗಳು ಮತ್ತು ಐತಿಹಾಸಿಕ ನಿರ್ಧಾರಗಳನ್ನು ಮುಂದಿಟ್ಟುಕೊಂಡು ಟಿವಿಕೆ ಸರಣಿ ಪೋಸ್ಟ್ಗಳ ಮೂಲಕ ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡಿದೆ.
‘ಸಾವರ್ಕರ್ 2.0′ ಮತ್ತು ‘ಸನ್-ಧನಂ’ ವ್ಯಂಗ್ಯ
ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನೀಡುವ ಡಿಎಂಕೆ ನಿರ್ಧಾರವನ್ನು ಟೀಕಿಸಿರುವ ಟಿವಿಕೆ, ಎಂ.ಕೆ. ಸ್ಟಾಲಿನ್ ಅವರು ಆರ್ಎಸ್ಎಸ್ ಸಮವಸ್ತ್ರ ಧರಿಸಿ ಕುರ್ಚಿಯಲ್ಲಿ ಕುಳಿತಿರುವಂತೆ ಕಾಣುವ ಎಐ (AI) ಆಧಾರಿತ ಚಿತ್ರವನ್ನು ಹಂಚಿಕೊಂಡು, “ಸ್ಟಾಲಿನ್ ಅಲ್ಲ, ಸಾವರ್ಕರ್ 2.0″ ಎಂದು ಬರೆದಿದೆ. ಇದರ ಬೆನ್ನಲ್ಲೇ “ಸನಾತನಂ ಅಲ್ಲ… ‘ಸನ್-ದಾನಂ’ (Son-Dhanam)” ಎಂಬ ಪೋಸ್ಟ್ ಹಂಚುವ ಮೂಲಕ, ಸೈದ್ಧಾಂತಿಕ ಹೋರಾಟದ ನೆಪದಲ್ಲಿ ಕುಟುಂಬ ರಾಜಕಾರಣ ಮತ್ತು ಸ್ವಾರ್ಥ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲಾಗುತ್ತಿದೆ ಎಂದು ಟಿವಿಕೆ ಆರೋಪಿಸಿದೆ.
2025ರ ಜಂಟಿ ಕ್ರಿಯಾ ಸಮಿತಿ ಸಭೆಯ ನೆನಪು
ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಉಂಟಾಗುವ ಪರಿಣಾಮಗಳ ಕುರಿತು 2025ರ ಮಾರ್ಚ್ 22ರಂದು ಚೆನ್ನೈನಲ್ಲಿ ನಡೆದ ವಿವಿಧ ರಾಜ್ಯಗಳ ಪಕ್ಷಗಳ ಪ್ರತಿನಿಧಿಗಳ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಡಿಎಂಕೆ ನಾಯಕರು ನೀಡಿದ್ದ ಹೇಳಿಕೆಗಳನ್ನು ಟಿವಿಕೆ ತನ್ನ ಪೋಸ್ಟ್ನಲ್ಲಿ ಉಲ್ಲೇಖಿಸಿದೆ. “ಜನಸಂಖ್ಯೆ ಆಧಾರಿತ ಮರುವಿಂಗಡಣೆಯಿಂದ ದಕ್ಷಿಣ ಭಾರತದ ಪ್ರಾತಿನಿಧ್ಯ ಶೇ. 30ರಿಂದ ಶೇ. 24ಕ್ಕೆ ಇಳಿಯುತ್ತದೆ; ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಮಧ್ಯಪ್ರದೇಶಕ್ಕೆ 150 ಹೆಚ್ಚುವರಿ ಸ್ಥಾನಗಳು ದೊರೆತರೆ, ಏಳು ದಕ್ಷಿಣದ ರಾಜ್ಯಗಳಿಗೆ 65 ಸ್ಥಾನಗಳು ಮಾತ್ರ ಸಿಗುತ್ತವೆ. ಇದರಿಂದ ಕೃಷಿ, ಕೈಗಾರಿಕೆ, ಉದ್ಯೋಗ ಮತ್ತು ಪ್ರಾದೇಶಿಕ ಅಭಿವೃದ್ಧಿಯ ರಾಷ್ಟ್ರೀಯ ನೀತಿಗಳನ್ನು ಕೆಲವೇ ರಾಜ್ಯಗಳು ನಿರ್ಧರಿಸುವ ಅಪಾಯವಿದೆ ಹಾಗೂ ಇದು ಒಕ್ಕೂಟ ವ್ಯವಸ್ಥೆಗೆ ನೇರ ಬೆದರಿಕೆ” ಎಂದು ಅಂದು ಡಿಎಂಕೆ ಎಚ್ಚರಿಸಿತ್ತು ಎಂಬುದನ್ನು ಟಿವಿಕೆ ನೆನಪಿಸಿದೆ. ಈಗ ಮಸೂದೆಯನ್ನು ಬೆಂಬಲಿಸುವ ಮುನ್ನ ಆ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಕ್ಕಿದೆಯೇ ಮತ್ತು ತಮಿಳುನಾಡು ಹಾಗೂ ನೆರೆಯ ರಾಜ್ಯಗಳಿಗೆ ಆಗುತ್ತಿದ್ದ ಅನ್ಯಾಯ ನಿವಾರಣೆಯಾಗಿದೆಯೇ ಎಂದು ಟಿವಿಕೆ ಪ್ರಶ್ನಿಸಿದೆ.
ಸೈದ್ಧಾಂತಿಕ ಸ್ಥಿರತೆ ಮತ್ತು ಐತಿಹಾಸಿಕ ವಿರೋಧಾಭಾಸಗಳ ಆರೋಪ
ಅಧಿಕಾರದಲ್ಲಿದ್ದಾಗ ಒಂದು ನಿಲುವು ಮತ್ತು ಅಧಿಕಾರ ಕಳೆದುಕೊಂಡಾಗ ಮತ್ತೊಂದು ನಿಲುವು ತಳೆಯುವುದು ಡಿಎಂಕೆ ರಾಜಕಾರಣದ ಶೈಲಿಯಾಗಿದೆ ಎಂದು ಟಿವಿಕೆ ಟೀಕಿಸಿದೆ. “ಕಪ್ಪು ಬಾವುಟ ಹಾರಿಸಿ, ಮಸೂದೆ ಪ್ರತಿ ಸುಟ್ಟು ಪ್ರತಿಭಟಿಸಿದ್ದವರು ಈಗ ಅದೇ ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿರುವ ಟಿವಿಕೆ, 1969ರ ಅಣೆಕಟ್ಟು ನಿರ್ಮಾಣ, 1974ರ ಕಚ್ಚತೀವು ಹಸ್ತಾಂತರ ಮತ್ತು ಕಾವೇರಿ ವಿಚಾರದಲ್ಲಿ ಡಿಎಂಕೆ ನಡೆದುಕೊಂಡ ರೀತಿಯನ್ನೂ ತನ್ನ ಪೋಸ್ಟ್ನಲ್ಲಿ ಪ್ರಸ್ತಾಪಿಸಿದೆ. ಜೊತೆಗೆ 1999ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಇತಿಹಾಸವನ್ನು ಕೆದಕಿರುವ ಟಿವಿಕೆ, ತಮಿಳುನಾಡಿನ ಜನತೆ ಮತ್ತು ಅಲ್ಪಸಂಖ್ಯಾತ ಸಮುದಾಯವನ್ನು ವಂಚಿಸಲಾಗಿದೆ ಎಂದು ಆರೋಪಿಸಿದೆ.
ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಚರ್ಚೆಗೆ ಹೊಸ ತಿರುವು
ಒಕ್ಕೂಟ ವ್ಯವಸ್ಥೆಯ ರಕ್ಷಣೆ, ಕ್ಷೇತ್ರ ಪುನರ್ವಿಂಗಡಣೆಯ ನಿಯಮಗಳು ಹಾಗೂ ಮಹಿಳಾ ಮೀಸಲಾತಿ ಜಾರಿಯ ನಡುವೆ ನಡೆಯುತ್ತಿರುವ ಈ ಸಂಕೀರ್ಣ ರಾಜಕೀಯ ಚರ್ಚೆಯಲ್ಲಿ, ಡಿಎಂಕೆಯ ನಡೆ ಮತ್ತು ಟಿವಿಕೆಯ ಆಕ್ರಮಣಕಾರಿ ಪ್ರತಿ-ವಾದ ತಮಿಳುನಾಡು ರಾಜಕಾರಣದಲ್ಲಿ ತೀವ್ರ ವಾಗ್ವಾದಕ್ಕೆ ನಾಂದಿ ಹಾಡಿದೆ. ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದ ವೇಳೆ ಈ ವಿಚಾರ ಮತ್ತಷ್ಟು ಚರ್ಚೆಯಾಗುವ ಸಾಧ್ಯತೆ ಇದೆ.


