Homeಅಂಕಣಗಳುಪತ್ರಕರ್ತರೇ ಕಳ್ಳ ಜ್ಯೋತಿಷಿಗಳಾದಾಗ!

ಪತ್ರಕರ್ತರೇ ಕಳ್ಳ ಜ್ಯೋತಿಷಿಗಳಾದಾಗ!

- Advertisement -
- Advertisement -

ಮೂಢನಂಬಿಕೆಗಳೆಂದರೆ ಸಿಡಿಯುತ್ತಿದ್ದ ‘ಮುಂಗಾರು’ ಪತ್ರಿಕೆ ಬಿಟ್ಟ ಮೇಲೆ ನಾನು ಕೆಲವು ಸಂಜೆ ಪತ್ರಿಕೆಗಳಲ್ಲೂ ಕೆಲಸ ಮಾಡಿದ್ದೆ. ಇವೆಲ್ಲವೂ ದಿನ ಭವಿಷ್ಯ ಪ್ರಕಟಿಸುತ್ತಿದ್ದವು. ಆದರೆ, ಲೇವಡಿಯ ಹೊರತು ನಾವೇನೂ ಮಾಡುವಂತಿರಲಿಲ್ಲ!
ಈ ಭವಿಷ್ಯಗಳು ಹಿಂದೆ ಹವಾಮಾನ ಇಲಾಖೆಯ ಭವಿಷ್ಯಗಳಂತೆ ಇರುತ್ತಿದ್ದವು- ‘ರಾಜ್ಯದ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆ’. ಒಂದೆರಡು ಹಳ್ಳಿಗಳಲ್ಲಿ ನಾಲ್ಕು ಹನಿ ಬಿದ್ದರೂ ಭವಿಷ್ಯ ನಿಜವಾಗುತ್ತದೆ!
ಮನೆಯಲ್ಲಿ ಮನಸ್ತಾಪ, ಹೆಂಡತಿ ಜೊತೆ ಜಗಳ, ಹಣದ ಮುಗ್ಗಟ್ಟು, ಸಹೋದ್ಯೋಗಿಗಳಿಂದ ಕಿರುಕುಳ, ಮೇಲಧಿಕಾರಿಗಳಿಂದ ದಬ್ಬಾಳಿಕೆ, ಸಾಲಗಾರರಿಂದ ತೊಂದರೆ ಇತ್ಯಾದಿಗಳೂ, ಲಾಟರಿಯಲ್ಲಿ ಅದೃಷ್ಟ, ಮಕ್ಕಳಿಂದ ಮನಸ್ಸಿಗೆ ಉಲ್ಲಾಸ, ಸದ್ಯವೇ ಭಡ್ತಿ ಯೋಗ ಇತ್ಯಾದಿಗಳೂ ಇರುತ್ತಿದ್ದವು! ನಾವು ತಮಾಷೆಗೆ ಮಿತ್ರನಿಂದ ಪುತ್ರಭಾಗ್ಯ ಇತ್ಯಾದಿಯಾಗಿ ಲೇವಡಿಯನ್ನೂ ಮಾಡುತ್ತಿದ್ದೆವು. ಇವೆಲ್ಲಾ ಪ್ರತಿಯೊಬ್ಬರ ಜೀವನದಲ್ಲಿ ಸಾಮಾನ್ಯವಾಗಿರುವುದರಿಂದ ಓದುಗರಿಗೆ ಹೇಗೋ ಒಂದೊಂದು ರೀತಿಯಲ್ಲಿ ಹೊಂದಾಣಿಕೆಯಾಗುತ್ತಿದ್ದವು.
ಒಂದು ಪತ್ರಿಕೆಯಲ್ಲಿ ಒಬ್ಬರು ಜ್ಯೋತಿಷಿ ವಾರಕ್ಕೊಮ್ಮೆ ಬಂದು ಇಡೀ ವಾರದ ಭವಿಷ್ಯ ಬರೆದು ತಂದುಕೊಟ್ಟು ಹೋಗುತ್ತಿದ್ದರು! ಸುಮ್ಮನೇ ಹೋಗುತ್ತಿರಲಿಲ್ಲ- ಜ್ಯೋತಿಷ್ಯದ ಬಗ್ಗೆ ಕೊರೆದೇ ಹೋಗುತ್ತಿದ್ದರು! ಇದರಿಂದ ಈ ಮಹಾನ್ ಬುರುಡೆ ಶಾಸ್ತ್ರದ ನನ್ನ ಜ್ಞಾನ ಅಪಾರ ಅಭಿವೃದ್ಧಿಯಾಯಿತು!
ಒಂದು ಸಲ ಅವರು ಬರಬೇಕಾದ ದಿನ ಬರಲಿಲ್ಲ. ಏನು ಮಾಡುವುದು ಎಂದು ಉಪಸಂಪಾದಕನಿಗೆ ತಲೆಬಿಸಿ! ‘ತಲೆಬಿಸಿ ಎಂತಕ್ಕೆ? ಹಿಂದಿನದ್ದೇ ಒಂದು ಹಾಕು!’ ಎಂದೆ ನಾನು. ಇದು ಓದುಗರಿಗೆ ಮೋಸ ಎಂದು ನನಗೆ ಅನಿಸಲಿಲ್ಲ! ಮೊದಲೇ ಸುಳ್ಳು! ಆ ಸುಳ್ಳಿನಲ್ಲಿ ಮತ್ತೆ ಮೋಸ ಎಂತದ್ದು!? ಅವರು ಮರುದಿನವೂ ಬರಲಿಲ್ಲ! ಈ ಪರಿಪಾಠ ಮುಂದುವರಿಯಿತು. ಕೆಲವು ದಿನಗಳ ನಂತರ ಅತಂಕದಿಂದಲೇ ಬಂದರು- ಬರೆಯುವ ಅವಕಾಶ ತಪ್ಪಿ ಹೋಯಿತೆ ಎಂದು. ಯಾಕೆಂದರೆ, ಪತ್ರಿಕೆಯಲ್ಲಿ ಪ್ರತೀದಿನ ಹೆಸರು ಪ್ರಕಟವಾಗುತ್ತಿದ್ದುದರಿಂದ ಅವರಿಗೆ ಉಚಿತ ಜಾಹೀರಾತು! ಇದರಿಂದ ಕುರಿಗಳ- ಕ್ಷಮಿಸಿ, ಗಿರಾಕಿಗಳ ಸಂಖ್ಯೆ ಹೆಚ್ಚುತ್ತಿತ್ತು!.
ಬಂದವರೇ, ”ನನಗೆ ಹುಷಾರಿರಲಿಲ್ಲ ಮಾರಾಯ್ರೆ! ಮಲೇರಿಯಾ! ನನ್ನ ಬದಲು ಭವಿಷ್ಯ ಯಾರು ಬರೆಯುತ್ತಿದ್ದುದು?” ಎಂದು ಕೇಳಿದರು. ಪಾಪ! ಎಲ್ಲರ ಸಮಸ್ಯೆಗಳನ್ನು ಮುಂಚಿತವಾಗಿ ಹೇಳುವ ಅವರಿಗೆ ತನಗೆ ಮಲೇರಿಯಾ ಬರಲಿದೆ ಎಂದು ಗೊತ್ತಿರಲಿಲ್ಲ! ಗೊತ್ತಿದ್ದರೆ ಮುಂಚಿತವಾಗಿ ಒಂದು ತಿಂಗಳದ್ದು ಬರೆದುಕೊಟ್ಟು ಹೋಗುತ್ತಿರಲಿಲ್ಲವೆ!?
ನಮ್ಮ ಸಂಪಾದಕರು ಸ್ವತಃ ಈ ಜ್ಯೋತಿಷ್ಯದ ಹುಚ್ಚನಾಗಿದ್ದರೂ ಮಹಾ ಕಿಡಿಗೇಡಿ!- (ಈಗ ಅವರಿಲ್ಲ!; ಅವರ ಆತ್ಮಕ್ಕೆ ಶಾಂತಿ ಸಿಗಲಿ!) ಯಾರೋ ಪ್ರಸಿದ್ಧ ಜ್ಯೋತಿಷಿಯ ಹೆಸರು ಹೇಳಿ ಬುರುಡೆಬಿಟ್ಟರು!
“ಹೋ! ಹೌದೆ? ನೋಡುವಾಗಲೇ ಅಂದಾಜಾಯಿತು- ಯಾರೋ ದೊಡ್ಡಜನ ಬರೆದದ್ದು ಅಂತ! ಸರೀಯಾಗಿತ್ತು!” ಎಂದು ಒತ್ತಿಹೇಳಿ, ಮುಂದಿನ ವಾರದ ಭವಿಷ್ಯ ಕೊಟ್ಟು ಹೋದರು. ಒಂದು ವೇಳೆ ಸಂಪಾದಕರು ಯಾವುದೋ ಕಾಂಜಿಪೀಂಜಿ ಹೆಸರು ಹೇಳಿರುತ್ತಿದ್ದರೆ, “ಛೇ! ಏನೇನೂ ಸರಿಯಿರಲಿಲ್ಲ!! ಮೂರನೇ ಮನೆಯಲ್ಲಿ ಕುಜ ಇರುವಾಗ….” ಎಂದೆಲ್ಲಾ ಕೊರೆಯುತ್ತಿದ್ದರು.
ನಂತರ ನಾನು ಸೇರಿದ ಸಂಜೆ ಪತ್ರಿಕೆ ಮಾಲಕರು ಪಕ್ಕಾ ವ್ಯಾಪಾರಿ. ಪತ್ರಿಕೆ ಅರಂಭವಾಗುವ ಮೊದಲೇ ಸೇರಿದ್ದ ನಾನು ಭವಿಷ್ಯ ಬೇಡವೆಂದರೂ ಕೇಳಲಿಲ್ಲ! ‘ಹೇ! ನಿಮಗೆ ಗೊತ್ತಿಲ್ಲ! ಅದಕ್ಕೇ ಓದುಗರಿದ್ದಾರೆ. ಭವಿಷ್ಯ ಬೇಕೇಬೇಕು. ದಿನ ಭವಿಷ್ಯದ ಜೊತೆಗೆ ವಾರಭವಿಷ್ಯವೂ ಬೇಕು’ ಎಂದರು. ಸರಿ ಡೆಸ್ಕಿನಲ್ಲೇ ಒಂದಷ್ಟು ಭವಿಷ್ಯ ಬರೆಯಲಾಯಿತು! ಅದನ್ನು ಡಿಟಿಪಿಯವರ ಕೈಗೆ ಒಪ್ಪಿಸಲಾಯಿತು! ಅವರೇ ಲಾಟರಿ ತೆಗೆದಂತೆ ತಿರುಗಿಸಿ ತಿರುಗಿಸಿ, ಒಂದೊಂದು ರಾಶಿಗೆ ಒಂದೊಂದು ಹಾಕುತ್ತಿದ್ದರು! ಇದರಲ್ಲಿ ಮೋಸವೇನೂ ಇಲ್ಲ! ಭವಿಷ್ಯ ಎಂದರೆ ‘ಅದೃಷ್ಟದ ಆಟ’ವಲ್ಲವೆ!!? ಗಿಣಿಶಾಸ್ತ್ರದಂತೆ ಗಿಣಿಯ ಬದಲು ಮನುಷ್ಯರು ಚೀಟಿ ಹೆಕ್ಕಿದಂತೆ ಆಯಿತಷ್ಟೇ!
ಇದನ್ನು ಓದಿದ ಮೇಲೆ, ನೀವೂ ನಿಮ್ಮ ಪತ್ರಿಕೆಗಳಲ್ಲಿ ಬರುವ ದಿನಭವಿಷ್ಯ ತಪ್ಪದೇ ಓದಿ ಮಾರ್ಗದರ್ಶನ ಪಡೆಯಿರಿ!
ಇದನ್ನು ಬರೆಯಲು ಕಾರಣವೆಂದರೆ, ಈ ರೀತಿ ಮಾಡದ ಪತ್ರಿಕೆಗಳೇ ಕಡಿಮೆ ಎಂದು ಹಳೆಯ ಪತ್ರಕರ್ತರನ್ನು ಕೇಳಿದರೆ ಸಾಕ್ಷಿ ಹೇಳುತ್ತಾರೆ. ನಾವು ಹಿಂದೆ ಮಾಡಿದ್ದು, ಮಹಾ ಅನೈತಿಕ ಅನಿಸಿದರೂ ಮಹಾ ಮೋಸವೆಂದು ನನಗನಿಸಿಲ್ಲ! ಇದರಿಂದ ನಮಗೇನೂ ಲಾಭವಿರಲಿಲ್ಲ! ಆದರೀಗ ಮಹಾಮೋಸಗಾರರ ಕದೀಮ ದಂಡೇ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಲ್ಲಿ ವಕ್ಕರಿಸಿ ವಿಜ್ಞಾನದ ಕಪಾಳಕ್ಕೆ ಹೊಡೆಯುವಂತಹ ಸಂಶೋಧನೆಗಳನ್ನು ಯಾವುದೇ ನಾಚಿಕೆ ಅಥವಾ ಹಿಂಜರಿಕೆ ಇಲ್ಲದೇ ಬೊಗಳುತ್ತವೆ.
ಮೂಢನಂಬಿಕೆಗಳನ್ನು ನಿವಾರಿಸಬೇಕಾದ ಮಾಧ್ಯಮಗಳೇ ಅವುಗಳಿಗೆ ಪ್ರೋತ್ಸಾಹ ನೀಡಿ ಧನಲಾಭ ಮಾಡಿಕೊಳ್ಳುತ್ತಿವೆ. ಪತ್ರಿಕೆಗಳಲ್ಲಿ ಕೇವಲ ದಿನ, ವಾರ ಭವಿಷ್ಯಗಳೇ ಅಲ್ಲದೆ, ಮಹಾನ್ ಸಂಶೋಧನಾ ಲೇಖನಗಳೂ ಬರುತ್ತಿವೆ! ಪ್ರಳಯವಾಗುತ್ತದೆ ಎಂದು ಸಾವಿರಾರು ಜನರನ್ನು ಹೆದರಿಸಿದ ದಂಡಪಿಂಡ ಇಂದಿಗೂ ತನ್ನ ಬ್ರಹ್ಮಾಂಡ ಹೊಟ್ಟೆಯನ್ನು ಹೊತ್ತುಕೊಂಡು ಒದರುತ್ತಾ ಹೊಟ್ಟೆಹೊರೆದುಕೊಳ್ಳುತ್ತಿದ್ದಾನೆ!
ಕೇವಲ ಉದಾಹರಣೆಗಾಗಿ ಕೆಲವು ಪ್ರಸಿದ್ಧ ಪತ್ರಿಕೆಗಳಲ್ಲಿ ಬಂದ ಲೇಖನಗಳಿಂದಲೇ ನಾನು ಪಡೆದುಕೊಂಡ ಜ್ಞಾನವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
“ಕೆಲವರಿಗೆ ಎಷ್ಟು ಹುಡುಕಾಡಿದರೂ ಸರಿಯಾದ ಸಂಗಾತಿ ಸಿಗದೆ ಇರುವುದರಿಂದ ಮದುವೆ ವಿಳಂಬವಾಗಿರುತ್ತದೆ. ಇದಕ್ಕೆ ಜ್ಯೋತಿಷ್ಯದ ಪ್ರಕಾರ ಪಿತೃದೋಷ ಅಥವಾ ಸರ್ಪದೋಷವೆಂದು ಕರೆಯಲಾಗುತ್ತದೆ. ಆದರೆ ಈ ದೋಷಗಳನ್ನು ನಿವಾರಣೆ ಮಾಡಲು ಆಧ್ಯಾತ್ಮಿಕ ಪರಿಹಾರಗಳು ಇವೆ! ಇದನ್ನು ಪಾಲಿಸಿಕೊಂಡು ಹೋದರೆ ಮುಂದೆ ಸಂಗಾತಿ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ!” ಇದು ಜೋಯಿಸರುಗಳ ಒಂದು ಸಾಮಾನ್ಯ ಬುರುಡೆ. ಪರಿಹಾರ ಇದೆ! ಲಾಭ ಗ್ಯಾರಂಟಿ- ಜೋಯಿಸರಿಗೆ!
ಎಂತಹ ವಿಚಿತ್ರ ನೋಡಿ! ‘ನನ್ನ ತಂಗಿಗೊಂದು ಗಂಡು ಕೊಡಿ’ ಎಂಬ ನಾಟಕವನ್ನೇ ಪಿ.ಲಂಕೇಶರು ಬರೆದಿದ್ದಾರೆ! ಬಹುತೇಕ ಜನರಿಗೆ ಈ ಸಮಸ್ಯೆ ಇದೆ! ಜಾತಿ, ಉಪಜಾತಿ, ಕುಲ, ಜಾತಕ, ನಕ್ಷತ್ರ, ಐಶ್ವರ್ಯ, ಅಂತಸ್ತು, ರೂಪ, ಬಣ್ಣ, ಗುಣ, ಎತ್ತರ, ವಿದ್ಯೆ…ಮಣ್ಣು ಮಸಣ ಎಂದು ಹೆಣಗಾಡುವುದರಿಂದ ಈ ಸಮಸ್ಯೆ ಉಂಟಾಗುವುದಿಲ್ಲ! ಇದಕ್ಕೆ ಪಿತೃದೋಷ, ಶನಿದೋಷ, ನಾಗದೋಷಗಳೇ ಕಾರಣ!
ಇದಕ್ಕೆ ಪರಿಹಾರ ನೋಡಿ! “ಹಾಲು, ಮೊಸರು, ಎಳನೀರು, ಹೂ, ಜೇನುತುಪ್ಪ, ಕಬ್ಬಿನ ಹಾಲು ಇತ್ಯಾದಿಯಿಂದ ಶಿವನ ಲಿಂಗಕ್ಕೆ ಅಭಿಷೇಕ ಮಾಡಬೇಕು.” (ಇದನ್ನೇ ಮಕ್ಕಳಿಗಾಗಲೀ, ಹಸಿದವರಿಗಾಗಲೀ ಕೊಟ್ಟರೆ ಫಲವಿಲ್ಲ!)
ಸೋಮವಾರ ಅಥವಾ ಶನಿವಾರದಂದೇ ಈ ಕಾರ್ಯಗಳನ್ನು ಮಾಡಬೇಕು. (ಬೇರೆ ದಿನಗಳಲ್ಲಿ ಇವುಗಳನ್ನು ಸೇವಿಸುವುದಿಲ್ಲ ಎಂದು ಟೈಮ್‍ಟೇಬಲ್ ಹಾಕಿರುವ ದೇವರು ಅದನ್ನು ಸೀಕ್ರೆಟಾಗಿ ಈ ಜೋಯಿಸರಿಗೆ ತಿಳಿಸಿರುತ್ತಾನೆ!)
“ಪಿತೃದೋಷ ಅಥವಾ ಶಿಕ್ಷೆಯನ್ನು ನಿವಾರಣೆ ಮಾಡುವ ಸಲುವಾಗಿ ಶನಿದೇವರನ್ನು ಒಲಿಸಿಕೊಳ್ಳಲು ಹನುಮಂತನಿಗೆ ಹರಕೆ ಒಪ್ಪಿಸಬೇಕು! ಅಥವಾ ಓಂ ಶಂ ಶನೈಶ್ಚರಾಯ ನಮಃ ಮಂತ್ರವನ್ನು ಪಠಿಸಬೇಕು.” ಇದೆಂತಹ ಲಾಜಿಕ್ ಎಂದು ಅರ್ಥವಾಗುವುದಿಲ್ಲ. ಈಗ ಬೆಂಗಳೂರು ಮತ್ತಿತರ ನಗರಗಳಲ್ಲಿ ಶನಿದೇವರು ಜೀಪು ರಥದಲ್ಲಿ ಪ್ರದಕ್ಷಿಣೆ ಬಂದು ಕಲೆಕ್ಷನ್ ಮಾಡುವುದರಿಂದ ಮತ್ತು ಹಳ್ಳಿಹಳ್ಳಿಗಳಲ್ಲಿ ಸಾಮೂಹಿಕ ಶನಿಪೂಜೆಗಳು ನಡೆಯುತ್ತಿರುವುದರಿಂದ ಆತನ ವಿಷಯದಲ್ಲಿ ಹನುಮಂತನಿಗೇನು ಕೆಲಸ? ಇದು ಅನ್‍ಫೇರ್ ಟ್ರೇಡ್ ಪ್ರ್ಯಾಕ್ಟೀಸ್ ಆಗುವುದಿಲ್ಲವೇ!?
ಇದೇ ರೀತಿಯಲ್ಲಿ ಪಿತೃದೋಷ, ಶನಿದೋಷ, ನಾಗದೋಷ, ಗ್ರಹದೋಷಗಳಿಂದ ನಿಮಗೆ ಆಗುವ ಅನಾಹುತಗಳನ್ನೂ, ಅದರಿಂದ ಜೋಯಿಸರಿಗೆ ಆಗುವ ಲಾಭಗಳನ್ನು ಮುಂದೆ ನೋಡೋಣ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ಮೋದಿ ಎಂಬ ರಾವಣನನ್ನು ಕೆಳಗಿಳಿಸಲು ವಾನರ ಸೇನೆ ಬಂದಿದೆ”: ದೆಹಲಿಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಾಗ್ದಾಳಿ!

ದೇಶದಲ್ಲಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೂಲಕ ಸದ್ದಿಲ್ಲದೆ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲ್ಲಾಡಿಸಲಾಗುತ್ತಿದೆ ಎಂಬ ಆರೋಪಗಳ ನಡುವೆ, ರಾಜಧಾನಿ ನವದೆಹಲಿ ಬೃಹತ್ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಯಿತು. 'ಇಂಡಿಯಾ' (INDIA) ಒಕ್ಕೂಟ...

ಕರ್ನಾಟಕ SIR | ಎರಡು ಫಾರಂ-6 ಹಾಕಿದ ವ್ಯಕ್ತಿಗೆ 5 ವೋಟರ್ ಐಡಿ ನೀಡಿದ ಚು. ಆಯೋಗ!

ವಿಶೇಷ ತೀವ್ರ ಪರಿಷ್ಕರಣೆಯ ಬಳಿಕ ಕರ್ನಾಟಕದ ಮತದಾರರ ಪಟ್ಟಿ ಶುದ್ದವಾಗಿದೆ. ಅನರ್ಹ ಮತದಾರರ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಒ) ಅನ್ಬುಕುಮಾರ್ ಪ್ರತಿಪಾದಿಸುತ್ತಿದ್ದಾರೆ. ಆದರೆ, ಅಕ್ಟೋಬರ್ 27ರಂದು ಅಂತಿಮ...

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್: ವಿಡಿಯೋ ಅಪ್‌ಲೋಡ್‌ಗೆ ಬಳಸಿದ ಫೋನ್ ಕುಮಾರಸ್ವಾಮಿ ದೆಹಲಿ ನಿವಾಸದಲ್ಲಿ ಹಸ್ತಾಂತರ: ಬೆಂಗಳೂರು ಪೊಲೀಸ್ ಆಯುಕ್ತರ ಮಾಹಿತಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಂತೆ ವೈರಲ್ ಆಗಿದ್ದ ವಿವಾದಾತ್ಮಕ ‘ಸ್ಟಿಂಗ್ ಆಪರೇಷನ್’ ವಿಡಿಯೊವನ್ನು ಅಪ್‌ಲೋಡ್ ಮಾಡಲು ಬಳಸಿದ್ದ ಮೊಬೈಲ್ ಫೋನ್ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನವದೆಹಲಿಯ ಅಧಿಕೃತ ನಿವಾಸದಲ್ಲಿ...

‘ಗ್ಯಾನೇಶ್ ಕುಮಾರ್ ನಂತರ ನಿಮ್ಮ ಸರದಿ’: ಮತಗಳ್ಳತನಕ್ಕೆ ಮೋದಿ, ಅಮಿತ್ ಶಾ ಕೂಡ ಕಾನೂನು ಕ್ರಮ ಎದುರಿಸಬೇಕಾಗುತ್ತದೆ; ರಾಹುಲ್ ಗಾಂಧಿ ಎಚ್ಚರಿಕೆ

ನವದೆಹಲಿ: ಮತಗಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ನಂತರ...

‘ಅಗತ್ಯಬಿದ್ದರೆ ನಿಮ್ಮನ್ನು ನೆಲದಿಂದಲೇ ಕಿತ್ತು ಹಾಕುತ್ತೇವೆ’: ಸಿಇಸಿ ಗ್ಯಾನೇಶ್ ಕುಮಾರ್‌ಗೆ ಖರ್ಗೆ ಎಚ್ಚರಿಕೆ; ಹೋರಾಟ ಮುಂದುವರಿಸುವ ಪ್ರತಿಜ್ಞೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆ ಪಡೆಯುವವರೆಗೂ ವಿರೋಧ ಪಕ್ಷಗಳ ಹೋರಾಟ ನಿಲ್ಲುವುದಿಲ್ಲ. ಅಗತ್ಯ ಬಿದ್ದರೆ ನಿಮ್ಮನ್ನು ನೆಲದಿಂದಲೇ ಕಿತ್ತು ಹಾಕುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ...

ಕನ್ನಾಟ್ ಪ್ಲೇಸ್‌ನಲ್ಲಿ ಬಿಜೆಪಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದೆ; ವ್ಯಾಪಾರಿಗಳಿಗೆ ನಷ್ಟ ಉಂಟುಮಾಡುತ್ತಿದೆ: ರಾಹುಲ್ ಗಾಂಧಿ ಆರೋಪ

ನವದೆಹಲಿ: ಚುನಾವಣಾ ಅಕ್ರಮಗಳು ಮತ್ತು ಮತದಾರರ ಹಕ್ಕುಗಳ ಮೇಲಿನ ದಾಳಿಯ ವಿರುದ್ಧ ಇಂಡಿಯಾ ಬ್ಲಾಕ್ ನಡೆಸುತ್ತಿರುವ ಬೃಹತ್ ‘ಚಲೋ ದಿಲ್ಲಿ’ ಪ್ರತಿಭಟನೆಗೆ ರಾಷ್ಟ್ರ ರಾಜಧಾನಿಯಲ್ಲಿ ಜನಸಾಗರವೇ ಹರಿದುಬಂದಿದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ...

ಸಿಇಸಿ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಬ್ಲಾಕ್ ಪ್ರತಿಭಟನೆ: ಮೋದಿ, ಅಮಿತ್ ಶಾಗೆ ಇದು ಕಠಿಣ ಎಚ್ಚರಿಕೆ; ಕೆ.ಸಿ. ವೇಣುಗೋಪಾಲ್

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಬ್ಲಾಕ್ ಆಯೋಜಿಸಿರುವ ಬೃಹತ್ ಪ್ರತಿಭಟನಾ ರ್ಯಾಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ...

ಇಂಡಿಯಾ ಬ್ಲಾಕ್‌ನ ‘ಚಲೋ ದಿಲ್ಲಿ’ಗೆ ವೇದಿಕೆ ಸಜ್ಜು; ದೆಹಲಿಯಾದ್ಯಂತ ರಾರಾಜಿಸುತ್ತಿರುವ ಪ್ರತಿಭಟನೆಯ ಪೋಸ್ಟರ್‌ಗಳು 

ನವದೆಹಲಿ: ಚುನಾವಣಾ ಅಕ್ರಮಗಳು ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂಡಿಯಾ ಬ್ಲಾಕ್ ಆಯೋಜಿಸಿರುವ...

ನ್ಯಾಯಾಂಗದ ವಿರುದ್ಧ ಟೀಕೆ ಆರೋಪ: ಸಿಜೆಪಿ ವಕ್ತಾರ ಸೌರವ್ ದಾಸ್ ವಿರುದ್ಧ ತನಿಖೆಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಪಿಐಎಲ್

ಚೆನ್ನೈ: ಭಾರತದ ನ್ಯಾಯಾಂಗ, ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ ಇತರ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಕ್ತಾರ ಸೌರವ್ ದಾಸ್...

ಕರ್ನಾಟಕ ಎಸ್‌ಐಆರ್: 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್; 2028ಕ್ಕೆ ಯಾರಿಗೆ ಅಧಿಕಾರ?

ಜನಪರ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ವಿರೋಧ, ಆತಂಕ ಹಾಗೂ ಆರೋಪಗಳ ಹೊರತಾಗಿಯೂ ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿದಿದೆ. 2026ರ ಅಕ್ಟೋಬರ್ 27ರಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಅಂತಿಮ ಮತದಾರರ...