Homeರಾಜಕೀಯಗುತ್ತಿಗೆ ನೌಕರಿಯೆಂಬುದು ಜೀತವಲ್ಲ...., ಆದರೆ.....

ಗುತ್ತಿಗೆ ನೌಕರಿಯೆಂಬುದು ಜೀತವಲ್ಲ…., ಆದರೆ…..

- Advertisement -
- Advertisement -

ಜೀತ ಪದ್ಧತಿಯನ್ನು ಕಾಯಿದೆಯೊಂದರ ಮೂಲಕ 1976ರಲ್ಲಿ ಇನ್ನೊಮ್ಮೆ ಈ ದೇಶದಲ್ಲಿ ನಿಷೇಧಿಸಲಾಯಿತು. ವಿಪರ್ಯಾಸವೆಂದರೆ, ಇಡೀ ದೇಶದಲ್ಲಿ ತುರ್ತು ಸ್ಥಿತಿಯನ್ನು ಹೇರಿದ್ದ ಸಂದರ್ಭದಲ್ಲಿ ಇದು ಅಸ್ತಿತ್ವಕ್ಕೆ ಬಂದಿತು. ಇನ್ನೊಮ್ಮೆ ನಿಷೇಧ ಎಂದು ಹೇಳಿದ್ದೇಕೆಂದರೆ, ಸಂವಿಧಾನದ ಕಲಂ 23(1) ಬಲವಂತದ ದುಡಿಮೆಯನ್ನು ನಿಷೇಧಿಸಿಯಾಗಿತ್ತು. ಆದರೂ, ಮತ್ತೊಂದು ಕಾಯ್ದೆಯ ಅಗತ್ಯ ತಲೆದೋರಿತು. ಈಗೀಗ ಗುತ್ತಿಗೆ ಪದ್ಧತಿಯೆಂಬುದು ಜೀತ ಪದ್ಧತಿಯಂತೆ ಎಂದು ಭಾಷಣಗಳಲ್ಲಿ ಹೇಳುವುದನ್ನು ಕೇಳುತ್ತಿರುತ್ತೇವೆ. ಆದರೆ, ಜೀತ ಪದ್ಧತಿಯೆಂದರೆ ಅದರ ವ್ಯಾಖ್ಯಾನದಲ್ಲಿ ಏನೇನು ಬರುತ್ತದೋ ಅದು ಗುತ್ತಿಗೆ ಪದ್ಧತಿಗೆ ಅನ್ವಯವಾಗುವುದಿಲ್ಲ. ಸಾಲವನ್ನು ತೆಗೆದುಕೊಂಡಿದ್ದಕ್ಕೆ, ಇಷ್ಟವಿಲ್ಲದಿದ್ದರೂ ಅದನ್ನು ತೀರಿಸುವ ಕಾರಣಕ್ಕಾಗಿ ಮಾಡುವ ಬಲವಂತದ ದುಡಿಮೆಯೇ ಜೀತ.
ಗುತ್ತಿಗೆ ಪದ್ಧತಿಯಲ್ಲಿ ಸರ್ಕಾರದ ಇಲಾಖೆ ಅಥವಾ ಖಾಸಗಿ ವ್ಯಕ್ತಿ ಯಾ ಕಂಪೆನಿಯು ಖಾಯಂ ಅಲ್ಲದ ರೀತಿಯಲ್ಲಿ ನೇರವಾಗಿ ಅಥವಾ ಗುತ್ತಿಗೆದಾರರೊಬ್ಬರ ಮೂಲಕ ನೇಮಿಸಿಕೊಳ್ಳಲಾಗುತ್ತದೆ. ಇಲ್ಲಿ ಯಾವ ಬಲವಂತವೂ ಇಲ್ಲ. ಹಾಗೆ ನೋಡಿದರೆ, ಸದರಿ ಗುತ್ತಿಗೆ ನೌಕರರು ಅಥವಾ ಕಾರ್ಮಿಕರು ತಾವೇ ಹೋಗಿ ಸೇರಿಕೊಂಡಿರುತ್ತಾರೆ. ಇಂತಹ ನೌಕರಿಯನ್ನು ಜೀತ ಎಂದು ಕರೆಯುವುದು ಸರಿಯೇ? ಹೌದು ಜೀತ ಪದ್ಧತಿಯ ಮೂಲವ್ಯಾಖ್ಯಾನವನ್ನು ತಾಂತ್ರಿಕವಾಗಿ ಇಟ್ಟುಕೊಂಡು ನೋಡಿದರೆ, ಗುತ್ತಿಗೆ ಪದ್ಧತಿಯನ್ನು ಜೀತ ಎನ್ನಲಾಗದು. ಆದರೆ, ಈ ರೀತಿ ಬಳಸುತ್ತಿರುವುದಕ್ಕೆ ಕಾರಣವಿದೆ.
ಮೊಟ್ಟಮೊದಲನೆಯದಾಗಿ, ಯಾರಿಗಾದರೂ ದುಡಿಮೆ ಮಾಡಲು ಹಲವು ಅವಕಾಶಗಳು ಇರುವುದೇ ಆದಲ್ಲಿ ಯಾರೂ ಸಾಲ ತೆಗೆದುಕೊಂಡು ಜೀತಕ್ಕೆ ಬೀಳಲು ಹೋಗುವುದಿಲ್ಲ. ಜೀತದ ಮೂಲ ಇರುವುದೇ ಅಲ್ಲಿ. ಹಾಗೆ ನೋಡಿದರೆ 1976ರಲ್ಲಿ ಕಾಯ್ದೆ ಬಂತು ಎನ್ನುವ ಕಾರಣಕ್ಕೆ ಜೀತ ಪದ್ಧತಿ ನಿಂತು ಹೋಗಲಿಲ್ಲ. ಗೌರಿಬಿದನೂರು ತಾಲೂಕಿನಲ್ಲಿ 1984ರಲ್ಲಿ ನಡೆದ ಒಂದು ಸತ್ಯಶೋಧನೆಯು ಒಂದೇ ಹಳ್ಳಿಯಲ್ಲಿ ಸುಮಾರು 200 ಜನ ಜೀತಗಾರರು ಇರುವುದನ್ನು ಪತ್ತೆ ಹಚ್ಚಿತು. ನಿಧಾನಕ್ಕೆ ಜೀತ ಪದ್ಧತಿಯು ಕಡಿಮೆಯಾಗಲು, ಹಳ್ಳಿಯಿಂದ ನಗರಗಳಿಗೆ ಹೆಚ್ಚೆಚ್ಚು ಜನರು ವಲಸೆ ಹೋಗಲಾರಂಭಿಸಿದ್ದು, ಕೃಷಿ ಕೂಲಿದರವು ಹೆಚ್ಚಾದದ್ದು, ಕೂಲಿ ಮಾಡುವವರಿಗೇ ಬೇಡಿಕೆ ಹೆಚ್ಚಾದದ್ದು ಕಾರಣವೇ ಹೊರತು ಕಾಯ್ದೆಯಲ್ಲ. ಹಾಗೆಂದು ಸಾಂಪ್ರದಾಯಿಕ ಜೀತ ಪದ್ಧತಿ ಇಂದು ಅಸ್ತಿತ್ವದಲ್ಲೇ ಇಲ್ಲ ಎಂದೇನೂ ಹೇಳಲಾಗದು. ಬಹುಮಟ್ಟಿಗೆ ಕಡಿಮೆಯಾಗಿದೆ.
ಭಾರತದಲ್ಲಿ ಜಾತಿಪದ್ಧತಿಯು ಹೇಗೆ ತನ್ನ ಸ್ವರೂಪವನ್ನು ಬದಲಿಸಿಕೊಂಡು ಅಸ್ತಿತ್ವವನ್ನು ಇನ್ನೂ ಢಾಳಾಗಿ ಮುಂದುವರೆಸಿದೆಯೋ, ಹಾಗೆಯೇ ಜೀತ ಪದ್ಧತಿಯೂ ಅಸ್ತಿತ್ವನ್ನು ಮುಂದುವರೆಸಿಕೊಂಡಿದೆ. ಸ್ವರೂಪ ಬದಲಿಸಿದೆ ಅಷ್ಟೇ. ಒಂದು ಹಸೀ ರೂಪವನ್ನು ಈ ರೀತಿ ಮುಂದಿಟ್ಟರೆ ಅರ್ಥವಾಗಬಹುದು. ಆಂಧ್ರದ ನೆಲ್ಲೂರು, ಕಡಪಾ, ಚಿತ್ತೂರು ಜಿಲ್ಲೆಗಳಲ್ಲಿ ರೆಡ್ಡಿ ಭೂಮಾಲೀಕರ ಕುಟುಂಬಗಳಲ್ಲಿ ಅಲ್ಲಿನ ಮಾದಿಗ ಸಮುದಾಯಕ್ಕೆ ಸೇರಿದ ಭೂರಹಿತರು ಜೀತ ಮಾಡುತ್ತಿದ್ದರು. ನಿಧಾನಕ್ಕೆ ಅಲ್ಲಿನ ಶೋಷಣೆಯನ್ನು ತಾಳಲಾರದೇ ಬೇರೆ ಬೇರೆ ಕಡೆಗೆ ವಲಸೆ ಹೋದಂತೆ ಬೆಂಗಳೂರಿಗೂ ವಲಸೆ ಬಂದರು. ಹಾಗೆ ಬಂದವರಲ್ಲಿ ಗಣನೀಯ ಭಾಗ ಬಿಬಿಎಂಪಿಯಲ್ಲಿ ಗುತ್ತಿಗೆ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿದರು. 10 ವರ್ಷಗಳ ಹಿಂದೆ ಈ ಪೌರಕಾರ್ಮಿಕರನ್ನು ಗುತ್ತಿಗೆಗೆ ಹಿಡಿದಿದ್ದ 35 ಜನ ಗುತ್ತಿಗೆದಾರರಲ್ಲಿ 31 ಜನ ಆಂಧ್ರದ ಇವೇ ಜಿಲ್ಲೆಗಳ ರೆಡ್ಡಿಗಳಾಗಿದ್ದರು ಮತ್ತು ಅವರಲ್ಲಿ ಮುಕ್ಕಾಲು ಭಾಗ ಗುತ್ತಿಗೆದಾರರು 3 ಕುಟುಂಬಗಳಿಗೆ ಸೇರಿದವರಾಗಿದ್ದರು. ಸದರಿ ಗುತ್ತಿಗೆ ಪೌರಕಾರ್ಮಿಕರ ಸ್ಥಿತಿ (ಇದೇ ಗುತ್ತಿಗೆದಾರರ ಬಳಿ ಸಾಲ ಪಡೆದಿರಲಿಲ್ಲ ಎಂಬುದನ್ನು ಬಿಟ್ಟರೆ) ಜೀತಗಾರರಿಗಿಂತ ಬಹಳ ಹೆಚ್ಚೇನೂ ಇರಲಿಲ್ಲ. ಸ್ವರೂಪದಲ್ಲಿ ವ್ಯತ್ಯಾಸವಿತ್ತು.
ಸರ್ಕಾರೀ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಲ್ಲಿ 5 ಸಾವಿರ ರೂ.ಗಳಿಂದ 30 ಸಾವಿರ ರೂ.ಗಳವರೆಗೆ ಸಂಬಳ ಪಡೆಯುವವರು ಇದ್ದಾರೆ. ಆದರೆ, ಎಲ್ಲರೂ ಕೆಲಸದ ಅಭದ್ರತೆಯಲ್ಲಿ ಇದ್ದಾರೆ. ಸಂವಿಧಾನ, ಗುತ್ತಿಗೆ ಕಾರ್ಮಿಕ ಕಾನೂನು, ಸುಪ್ರೀಂಕೋರ್ಟಿನ ತೀರ್ಪುಗಳ ಹೊರತಾಗಿಯೂ ಖಾಯಂ ನೌಕರರಿಗೂ ಇವರಿಗೂ ಅಸಮಾನವಾದ ವೇತನವಿದೆ. ಕೆಲಸದ ಅವಧಿಯ ನಿಯಮ ಅಥವಾ ಹೆಚ್ಚುವರಿ ಕೆಲಸಕ್ಕೆ ಓಟಿಯ ನಿಯಮ ಇವರಿಗೆ ಅನ್ವಯಿಸುವುದಿಲ್ಲ, ಹಲವು ವಿಧದ ತಾರತಮ್ಯ ಮತ್ತು ಶೋಷಣೆಗಳಿಗೆ ಗುರಿಯಾಗುತ್ತಾರೆ, ಯಾವಾಗ ಬೇಕೆಂದರೂ ಇವರನ್ನು ಕೆಲಸದಿಂದ ತೆಗೆದುಹಾಕಬಹುದು. ಜೀತದ ಸ್ವರೂಪ ಬದಲಾಗಿದೆ ಅಷ್ಟೇ.
ಇದರ ಲಕ್ಷಣಗಳು ಅರ್ಥವಾಗಬೇಕೆಂದರೆ, ಕೆಳಗಿನ ಕೆಲವು ಮಾತುಗಳನ್ನು ನಿಮ್ಮ ಮುಂದಿಡಬೇಕು.
‘ನಾನು 18 ವರ್ಷದಿಂದ ಅದೇ ಡಿಪಾರ್ಟ್‍ಮೆಂಟಲ್ಲಿ ಕೆಲಸ ಮಾಡಿದ್ದೀನಲ್ಲಾ ಸಾರ್, ಎಂಥೆಂಥ ರಿಸ್ಕ್ ಫೇಸ್ ಮಾಡಿದ್ದೀವಿ ಗೊತ್ತಾ ಸಾರ್? ಬರೀ 400 ರೂ ಕೊಡ್ತಿದ್ರು ಸಾರ್ ಅವಾಗ. ಈಗ 10000. ಯಾವ ಟೈಮಲ್ಲಿ ಸಾಹೇಬ್ರು ಗಾಡಿ ತೆಗೆಯಪ್ಪಾ ಅಂದ್ರೆ ಗಾಡಿ ಹತ್ತೋದೇ. ನಮ್ದು ಎಕ್ಸೈಸ್ ಇಲಾಖೆಯಾದ್ರಿಂದ ಕೆಲ್ವು ಸಾರಿ ರೈಡ್‍ಗೆ ಹೋಗುವಾಗ ಭಾರೀ ಸಮಸ್ಯೆ ಇರ್ತಿತ್ತು. ಮರಕ್ಕೆ ಕಟ್ಟಿರೋ ಮಡಕೇನಾ ಇಳಿಯೋಕೆ ನಮ್ಗೇ ಹೇಳ್ತಿದ್ರು. ರಾತ್ರಿ ಮನೆಗೆ ಎಷ್ಟು ಹೊತ್ತಿಗೆ ಹೋಗ್ತೀವಿ ಅನ್ನೋ ಗ್ಯಾರಂಟಿಯೇ ಇಲ್ಲ. ಈಗ ನಿಮ್ಮ ಜಾಗಕ್ಕೆ ಪರ್ಮನೆಂಟ್‍ನವ್ರು ಬರ್ತಾರೆ. ನೀವು ಜಾಗ ಖಾಲಿ ಮಾಡ್ಬೇಕು ಅಂತ ಹೇಳ್ತಾರಲ್ಲಾ.. ನಮ್ಗೆ ಹೇಗಾಗ್ಬೇಕು ಹೇಳಿ ಸಾರ್?’ ಮಡಿಕೇರಿಯ ಅಬಕಾರಿ ಇಲಾಖೆಯ ಸುರೇಶ್.
‘ನನಗೆ ಗಂಡ ಸಹಾ ಇಲ್ಲ. ನನ್ನಿಬ್ರು ಮಕ್ಳನ್ನ ಸ್ಕೂಲಿಗ್ ಕಳ್ಸಿ, ಮನೇ ಕೆಲ್ಸಾನೂ ಮುಗ್ಸಿ ಆಫೀಸ್ಗೂ ಬರ್ತಿದ್ದೆ. ಬರೀ 8,000 ರೂ.ನಲ್ಲಿ ಮನೆ ನಿಭಾಯಿಸ್ಕೊಂಡ್ ಹೋಗ್ತಿದ್ದೆ. ಇನ್ಮುಂದೆ ಒಳಗುತ್ತಿಗೆ ಇಲ್ಲ, ಕಂಟ್ರಾಕ್ಟರ್‍ಗೆ ಕೊಡ್ತೀವಿ ಅಂತಿದ್ದಾರೆ. ಆ ಏಜೆನ್ಸಿಯೋರು 1,500 ರೂ ಹಿಡ್ಕೊಂಡ್ ನಮ್‍ಗೆ 6,500 ರೂ ಕೊಡ್ತೀನಿ ಅಂದ್ರೆ ನಾನು ಏನ್ಮಾಡ್ಲಿ ಸಾರ್? ಬಾಡ್ಗೆ ಹೆಂಗ್ ಕಟ್ಲಿ? ನಮ್ಮುನ್ ತೆಗ್ದೇಬಿಟ್ರೆ ಏನ್ಮಾಡೋದು ಸಾರ್? ಇಷ್ಟ್ ವರ್ಷ ನಮ್ನ ದುಡಿಸ್ಕೊಂಡ್ರಲ್ಲಾ ಅದಕ್ಕೆ ಕನಿಷ್ಟ ಮಾನವೀಯತೆ ಬೇಡ್ವಾ?’ ಉತ್ತರ ಕರ್ನಾಟಕದ ಜಿಲ್ಲೆಯೊಂದರ ಆರೋಗ್ಯ ಇಲಾಖೆಯ ಗ್ರೂಪ್ ಡಿ ನೌಕರರಾದ ಯಶೋದ.
‘ರಾತ್ರಿ 7 ಗಂಟೆ ತನ್ಕಾ ಇರೋಕೆ ನಿನಗೆ ಆಗ್‍ದಿದ್ರೆ ಬಿಟ್ಬಿಡು ಅಂದಿದ್ರು ಅವಾಗ ನಮ್ ಸಾಹೇಬ್ರು. ಮನೇಲಿ ಏನೇನೋ ಮಾತ್ ಕೇಳ್ಬೇಕಿತ್ತು. ಆದ್ರೂ ಬಿಡ್‍ದೇ ಕಚ್ಕಂಡು ದುಡ್‍ದಿದ್ಕೇ ಇವಾಗ ಬೇಡ ಅಂತಾವ್ರಲ್ಲಾ ಸಾರ್. ದಿನಾ ನಮ್ ಪಿಪಿ (ಅಭಿಯೋಜನಾ ಇಲಾಖೆ – ನ್ಯಾಯಾಲಯಗಳಲ್ಲಿ ಕೆಲ್ಸಾ ಮಾಡುವ ಗೃಹ ಇಲಾಖೆಯ ಅಧೀನದಲ್ಲಿ ಬರುವ ಇಲಾಖೆಯಲ್ಲಿ) ಸಾವ್ರ ಸಾವ್ರ ಎಣಿಸ್ಕೊಂಡ್ ಹೋಗ್ತಾರೆ. ನಮಗೆ 6 ತಿಂಗ್ಳಿಂದ್ ಸಂಬ್ಳಾ ಇಲ್ವಲ್ಲಾ. ತಗೊಳಮ್ಮಾ ನೀನು 100 ರೂ. ಇಟ್ಕೋ ಅಂತ ಕೊಟ್ರೆ ನಮ್ ಜೀವ್ನ ನಡೆಸ್ತೀವಲ್ಲಾ? ಇದು ಸರೀನಾ? ನಾವೆಲ್ಲಾ ಸೇರಿ ಒಂದು ಸಂಘ ಮಾಡ್ಕೊಂಡು ಒಬ್ರುನ್ನ ಅಧ್ಯಕ್ಷರನ್ನ ಮಾಡ್ಕೊಂಡ್ವಿ. ಅವ್ರು 5 ತಿಂಗಳಿಂದ ಸಂಬಳ ಕೊಡದೇ, ನಮ್ ಕಷ್ಟಾನೂ ಕೇಳದ ಅಮಾನವೀಯ ನಿರ್ದೇಶಕರು ಅಂತ ಒಂದು ವಾಟ್ಸಾಪ್ ಮೆಸೇಜ್ ಕಳಿಸಿದ್ರು ಅಂತ ಅವ್ರನ್ನೇ ಕೆಲಸದಿಂದ ತೆಗೆದಿದ್ದಾರೆ’ – ಹಾಸನ ಜಿಲ್ಲೆಯ ಅಭಿಯೋಜನಾ ಇಲಾಖೆಯ ಸುಮಿತ್ರಾ.
‘ಆರೋಗ್ಯ ಇಲಾಖೆಯ ಎನ್‍ಎಚ್‍ಎಂ ವಿಭಾಗದ ನಮ್ ಡೀಡಿ (ಉಪನಿರ್ದೇಶಕರು) ನೀವಲ್ಲದಿದ್ದರೆ ನಿಮ್ಮಂಥೋರು ಬೇಕಾದಷ್ಟು ಜನ ಬರ್ತಾರೆ, 5 ಸಾವ್ರ ಕೊಟ್ರೆ ಸಾಕು. ನಾವು ಕೆಲ್ಸಕ್ಕೆ ಸೇರ್ಕೊಂಡಾಗ 3,500 ರೂ.ಗೆ ದುಡಿದಿದ್ವಿ ಗೊತ್ತಾ ಅಂತಾರೆ. ಅವ್ರು ಕೆಲಸಕ್ಕೆ ಸೇರ್ಕೊಂಡಿದ್ದು 25 ವರ್ಷದ್ ಹಿಂದೆ ಸಾರ್. ಇವತ್ತು 75 ಸಾವಿರ ಸಂಬಳಾನೇ ತಗೋತಾರೆ. ನಮ್ಮನ್ನ 5 ಸಾವಿರಕ್ ಕೆಲ್ಸಾ ಮಾಡಿ ಅನ್ನೋಕೆ ಅವ್ರಿಗೆ ಮನ್ಸ್ ಹೇಗ್ಬರುತ್ತೆ ಹೇಳಿ.’ – ಬಾಗಲಕೋಟೆ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರಾದ ರಾಘವೇಂದ್ರ.
‘ಅವತ್ತೊಂದು ದಿನ ಸಂಜೆ 4 ಗಂಟೆಗೆ ನನ್ನನ್ನು ಕರೆದ್ರು ಸಾರ್. ಇವತ್ತು ಮನೆಗೆ ಹೋಗೋಕೆ ಮುಂಚೆ ನನ್ನನ್ನು ಕಂಡು ಹೋಗಬೇಕು ಎಂದು ಹೇಳಿದರು. 5.30ಕ್ಕೆ ಹೋಗಿ ಭೇಟಿಯಾದೆ. ಇವತ್ತಿಂದ ನೀನು ಕೆಲಸಕ್ಕೆ ಬರುವುದು ಬೇಡ ಎಂದು ‘ರಿಲೀವಿಂಗ್ ಆರ್ಡರ್’ ಕೊಟ್ಟರು. 12 ವರ್ಷ ಅದೇ ಕಚೇರಿಯಲ್ಲಿ ಕೆಲಸ ಮಾಡಿದ್ದೆ ಸಾರ್. ಒಂಥರಾ ಅದು ನನ್ನ ಎರಡನೆಯ ಮನೆಯಾಗಿತ್ತು. ಯಾವ ಮುನ್ಸೂಚನೆಯೂ ಇಲ್ಲದೇ ಈ ರೀತಿ ಹೇಳಿದ್ರು. ಒಂದು ಕಡೆ ನಾಳೆಯಿಂದ ಏನಪ್ಪಾ ಅಂತ ಚಿಂತೆ. ಇನ್ನೊಂದು ಕಡೆ ಈ ಥರವೂ ಮಾಡಬಹುದಾ ಎಂಬ ಆಘಾತ. ಇವತ್ತಿಗೂ ಅದನ್ನು ನೆನೆಸಿಕೊಂಡ್ರೆ ಒಂಥರಾ ಆಗುತ್ತೆ.’ – ಪಶುಪಾಲನಾ ಇಲಾಖೆಯ ಮಲ್ಲಯ್ಯ.
ಇನ್ನೂ ಜೀತದಲ್ಲಿ ಮುಂದುವರೆಯಬೇಕಿರುವ ವ್ಯಕ್ತಿಗಳ ಹೆಸರುಗಳನ್ನು ಬದಲಿಸಲಾಗಿದೆ. ಆದರೆ, ಇಲ್ಲಿ ಯಾವ ಹೆಸರನ್ನು, ಯಾವ ಇಲಾಖೆಯನ್ನು ಬೇಕಾದರೂ ಹಾಕಿಕೊಳ್ಳಬಹುದು. ನಾವು ಅಧಿಕಾರಕ್ಕೆ ಬಂದರೆ, ನಿಮಗೆ ಕೆಲಸದ ಭದ್ರತೆ ಕೊಡುತ್ತೇವೆಂದು ಪೂರ್ಣ ಪುಟದ ಜಾಹೀರಾತು ಕೊಟ್ಟಿದ್ದ ಎಚ್.ಡಿ.ಕುಮಾರಸ್ವಾಮಿಯವರು ಬಂದ ಮೇಲೆ ‘ಅನುದಾನ ಇಲ್ಲ’ ಎಂಬ ಕಾರಣದಿಂದ ಕೆಲಸದಿಂದ ಕಿತ್ತು ಹಾಕಲ್ಪಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
ಇಲಾಖೆಯಲ್ಲಿ ಇಂತಿಷ್ಟು ಗುತ್ತಿಗೆ ನೌಕರರು ಇರಬೇಕೆಂದು ಆದೇಶವಾಗಿರುತ್ತದೆ. ಅಧಿಕಾರಿಗಳು ಗುತ್ತಿಗೆದಾರರು ಶಾಮೀಲಾಗಿ ಅದಕ್ಕಿಂತ ಕಡಿಮೆ ನೌಕರರನ್ನು ತೆಗೆದುಕೊಂಡು ಉಳಿದವರ ವೇತನ ಗುಳುಂ ಆಗುತ್ತದೆ. ಬಿಬಿಎಂಪಿಯಲ್ಲಿ 5 ವರ್ಷಗಳ ಕೆಳಗೆ 18 ಸಾವಿರ ಗುತ್ತಿಗೆ ಪೌರ ಕಾರ್ಮಿಕರಿದ್ದಾರೆಂದು ಹೇಳಲಾಗುತ್ತಿತ್ತು. ಇದ್ದವರನ್ನು ಹೇಗೆ ಲೆಕ್ಕ ಹಾಕಿದರೂ 12 ಸಾವಿರ ಮೀರುತ್ತಿರಲಿಲ್ಲ. ಇದರ ಮೇಲೆ ಅಟೆಂಡೆನ್ಸ್ ಕಟ್ ಮಾಡಿ, ಅದರಲ್ಲೂ ವೇತನ ಕಡಿತ ಮಾಡುತ್ತಾರೆ. ಹಾಲಿ ಪಶುಸಂಗೋಪನಾ ಇಲಾಖೆಯ 1,500 ಗುತ್ತಿಗೆ ನೌಕರರನ್ನು ಎರಡು ಬೇರೆ ಬೇರೆ ಏಜೆನ್ಸಿಗಳ ಹೆಸರಿನಲ್ಲಿ ಗುತ್ತಿಗೆಗೆ ಹಿಡಿದಿರುವ ಒಬ್ಬನೇ ಗುತ್ತಿಗೆದಾರ ವರ್ಷದಲ್ಲಿ ಒಂದು ತಿಂಗಳ ಸಂಬಳ ಹಿಡಿದುಕೊಳ್ಳುತ್ತಾನೆ. ಇವ್ಯಾವನ್ನೂ ಪ್ರಶ್ನಿಸುವ ಹಾಗಿಲ್ಲ. ಕೇಳಿದರೆ ಕೆಲಸ ಕಳೆದುಕೊಳ್ಳಬೇಕು. ಸಿಕ್ಕಿ ಹಾಕಿಕೊಳ್ಳುವ ಸಂದರ್ಭ ಬಂದರೆ, ಅದು ತಾನಲ್ಲ; ಬಹುಶಃ ತನ್ನ ಸಂಸ್ಥೆಯ ಕೆಳಗಿನ ಸಿಬ್ಬಂದಿ ಹಾಗೆ ಮಾಡಿರಬಹುದು. ಇಂಥದ್ರಲ್ಲೆಲ್ಲಾ ಪಾಲು ಪಡೆದುಕೊಳ್ಳುವ ಅಧಿಕಾರಿಗಳ ಬಳಿಗೇ ಹೋಗಿ ಯಾವ ದೂರು ನೀಡೋದು.
ಇಷ್ಟರ ಮೇಲೆ ಇನ್ನೂ ಒಂದು ದುರಂತವಿದೆ. ಈ ರೀತಿಯ ಗುತ್ತಿಗೆ ಕೆಲಸಕ್ಕೂ ಗುತ್ತಿಗೆದಾರರಿಗೆ ಅಥವಾ ಅಧಿಕಾರಿಗಳಿಗೆ ಲಂಚ ಕೊಡಬೇಕಾಗುತ್ತದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದ ಗೋದಾಮುಗಳಲ್ಲಿ ಬಾಕ್ಸ್ ಲೋಡಿಂಗ್, ಅನ್‍ಲೋಡಿಂಗ್ ಮಾಡುವ ಹಮಾಲಿ ಕೆಲಸಗಾರರು ಕನಿಷ್ಠ ಅರ್ಧದಷ್ಟು ಗೋದಾಮುಗಳ ಮ್ಯಾನೇಜರ್‍ಗಳಿಗೆ 10ರಿಂದ 20 ಪರ್ಸೆಂಟ್ ಕಮಿಷನ್ ಕೊಡಬೇಕು, ತಮ್ಮ ಕೂಲಿಯಲ್ಲಿ. ಆಸ್ಪತ್ರೆಗಳಲ್ಲಿ ಕ್ಲೀನಿಂಗ್ ಕೆಲಸ ಅಥವಾ ಸೆಕ್ಯುರಿಟಿ ಕೆಲಸಕ್ಕೆ ಸೇರುವವರ ಬಳಿ 20,000 ರೂ. ಲಂಚ ತೆಗೆದುಕೊಂಡಿದ್ದ ಗುತ್ತಿಗೆದಾರನನ್ನು ಮಂಡ್ಯ ಜಿಲ್ಲೆಯ ವೈದ್ಯಾಧಿಕಾರಿಯೊಬ್ಬರು ಹಿಡಿದು ಹಾಕಿದರು. ಅಂತಿಮವಾಗಿ ಆ ವೈದ್ಯಾಧಿಕಾರಿಯೇ ವರ್ಗಾವಣೆ ಆಗುವಲ್ಲಿಗೆ ಪ್ರಕರಣ ಬಂದು ನಿಂತಿತು.
ಇಂತಹ ಪದ್ಧತಿಯನ್ನು ಜೀತವಲ್ಲದೇ ಇನ್ನಾವ ಹೆಸರಿನಲ್ಲಿ ಕರೆಯಬಹುದೋ ಗೊತ್ತಿಲ್ಲ. ಬಹುಶಃ ಕರ್ನಾಟಕ ರಾಜ್ಯವೊಂದರಲ್ಲಿ ಇದು ನೂರಾರು ಕೋಟಿ ರೂ. ವ್ಯವಹಾರ. ಇದನ್ನು ಇಂಚಿಂಚಾಗಿ ಸರಿ ಮಾಡುತ್ತೇವೆಂದು ಹೊರಟರೆ ಸೆಂಟಿಮೀಟರ್‍ನಷ್ಟೂ ಬದಲಿಸಲಾಗದು; ಮೂಲಕ್ಕೇ ಕೈ ಹಾಕಬೇಕೆಂದು ‘ಕರ್ನಾಟಕ ರಾಜ್ಯ ಸರ್ಕಾರಿ ಗುತ್ತಿಗೆ ನೌಕರರ ಮಹಾಒಕ್ಕೂಟ’ ಹೊರಟಿದೆ. ಆರೋಗ್ಯ ಇಲಾಖೆಯ ನೌಕರರು ಒಂದೇ ವೇದಿಕೆಯಡಿ ಬಂದು ಅಖಿಲ ಭಾರತ ಮಟ್ಟದಲ್ಲಿ ಆಂದೋಲನ ರೂಪಿಸಲು ಸಜ್ಜಾಗುತ್ತಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಆ ನಿಟ್ಟಿನಲ್ಲಿ ನಡೆಯಲಿರುವ ಆಂದೋಲನದ ಜೊತೆಗೆ ನಮ್ಮ ಗೌರಿಯ ಪತ್ರಿಕೆ ‘ನ್ಯಾಯಪಥ’ವೂ ಕೈ ಜೋಡಿಸಲಿದೆ.

– ಮುತ್ತುರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾಜಿ ರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ ಹಿಂದೆ ಇಡಿ ಒತ್ತಡ : ತನ್ನ ಹೊಸ ಪುಸ್ತಕದಲ್ಲಿ ಸಂಜಯ್ ರಾವುತ್ ಆರೋಪ

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಮೋದಿ ಸರ್ಕಾರದ ವಿರುದ್ಧ ಕೈಗೊಂಡ ಸ್ವತಂತ್ರ ರಾಜಕೀಯ ನಡೆಗಳಿಗೆ ಪ್ರತಿಯಾಗಿ, ಜಾರಿ ನಿರ್ದೇಶನಾಲಯದ (ಇಡಿ) ಒತ್ತಡಕ್ಕೆ ಮಣಿದು 2025ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು...

ಯುಎನ್‌ಐ ಮಾಧ್ಯಮ ಕಚೇರಿಗೆ ಬೀಗ : ಪೊಲೀಸರ ವರ್ತನೆಗೆ ಪತ್ರಿಕಾ ಸಂಘಗಳು, ವಿಪಕ್ಷ ನಾಯಕರಿಂದ ತೀವ್ರ ಖಂಡನೆ

ಶುಕ್ರವಾರ (ಮಾ.20) ರಾತ್ರಿ ದೆಹಲಿ ಪೊಲೀಸರು ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್‌ಐ) ಸುದ್ದಿ ಸಂಸ್ಥೆಯ ಕಚೇರಿಗೆ ಬೀಗ ಜಡಿದ ರೀತಿಗೆ ಪತ್ರಕರ್ತರ ಸಂಘಗಳು ಮತ್ತು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ದೆಹಲಿಯ...

ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್: ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್

ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರ ತೀವ್ರ ವಿರೋಧದ ನಡುವೆಯೂ ಕೃಷಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್ ಅವರ...

ಕೇರಳ ವಿಧಾನಸಭೆ ಚುನಾವಣೆ : ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಕೇಸ್!

ಏಪ್ರಿಲ್ 9ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಗೆ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ. ಸುರೇಂದ್ರನ್ ಮೇಲೆ ಬರೋಬ್ಬರಿ 242 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಈ ಮಾಹಿತಿ ಶನಿವಾರ...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಆರು ಮಂದಿ ಶಾಸಕರನ್ನು ಅಮಾನತುಗೊಳಿಸಿದ ಬಿಜೆಡಿ

ಮಾರ್ಚ್ 16ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಮಂದಿ ಶಾಸಕರನ್ನು ಒಡಿಶಾದ ಬಿಜು ಜನತಾದಳ (ಬಿಜೆಡಿ) ಅಮಾನತುಗೊಳಿಸಿದೆ ಎಂದು ವರದಿಯಾಗಿದೆ. ಒಟ್ಟು 8 ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ....

ಆಸ್ಕರ್ ನಾಮನಿರ್ದೇಶಿತ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರ ಪ್ರದರ್ಶನಕ್ಕೆ ಭಾರತದಲ್ಲಿ ನಿರ್ಬಂಧ!

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ಳನ್ನು ಇಸ್ರೇಲಿ ಸೈನಿಕರು ಸುಮಾರು 300 ಸುತ್ತು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿರುವ ಕಥೆಯನ್ನು ಹೇಳುವ, 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರದ ಪ್ರದರ್ಶನಕ್ಕೆ...

ವೈದ್ಯೆ ವಂದನಾ ದಾಸ್ ಹತ್ಯೆ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ನ್ಯಾಯಾಲಯ

ಕೊಲ್ಲಂ: ಆಸ್ಪತ್ರೆಯಲ್ಲಿ ನಡೆದ ಡಾ. ವಂದನಾ ದಾಸ್ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿ ಜಿ. ಸಂದೀಪ್ ಗೆ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಆರೋಪಿಗೆ ಮರಣದಂಡನೆ ವಿಧಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ...

ಕಾಂಗ್ರೆಸ್, ರಾಹುಲ್ ಗಾಂಧಿ ಬಿಜೆಪಿಯ ಬಿ-ಟೀಮ್: ಕೇರಳ ಸಿಎಂ ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿದ್ದಾರೆ.   ಕೇಂದ್ರೀಯ ಸಂಸ್ಥೆಗಳು ಕೇರಳ...

‘ಬಿಜೆಪಿ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ, ಕೊನೆಯವರೆಗೂ ಹೋರಾಡುತ್ತೇವೆ’; ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮತದಾರರ ಪಟ್ಟಿಯ ಪರಿಷ್ಕರಣೆಯ ಮೂಲಕ ಜನರ "ಮತದಾನದ ಹಕ್ಕನ್ನು ಕಸಿದುಕೊಳ್ಳಲು" ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.  "ಮೋದಿ ಜಿ...

ಏಳು ವರ್ಷಗಳ ನಂತರ ಯುಎಪಿಎ ಪ್ರಕರಣದಲ್ಲಿ ಇಬ್ಬರು ಕಾಶ್ಮೀರಿ ಯುವಕರನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯ

ಏಳು ವರ್ಷಗಳಿಗೂ ಹೆಚ್ಚು ಕಾಲದ ನಂತರ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಲ್ಪಟ್ಟ ಇಬ್ಬರು ಕಾಶ್ಮೀರಿ ಯುವಕರನ್ನು ಗುರುವಾರ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಮತ್ತು ದೆಹಲಿ ಪೊಲೀಸರು...