ಮೈಸೂರು ವಿವಿಯಲ್ಲೊಂದು `ವೇಮುಲ’ ಪ್ರಕರಣ

ಕಳೆದ ನಾಲ್ಕು ವರ್ಷಗಳಿಂದ ದೇಶದ ಹಲವಾರು ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳ ಧ್ವನಿಯನ್ನು ಮೊಟಕುಗೊಳಿಸುವ ಸಂಚಿನಿಂದ ಸುದ್ದಿಯಾಗುತ್ತಲೇ ಇವೆ. ಬಲಪಂಥೀಯ ಮತೀಯವಾದ ಮತ್ತು ಜಾತಿವಾದಕ್ಕೆ ವಿವಿಗಳು ಬಲಿಯಾಗುತ್ತಿವೆ. ಜಾತಿ-ಧರ್ಮವನ್ನು ಆಧಾರವಾಗಿಟ್ಟುಕೊಂಡು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆದರೆ, ಮೈಸೂರು ವಿಶ್ವವಿದ್ಯಾಲಯವು ರೋಹಿತ್ ವೇಮುಲ ಪ್ರಕರಣವನ್ನು ನೆನಪಿಸುವಂತಹ ಪ್ರಕರಣವೊಂದಕ್ಕೆ ಸಾಕ್ಷಿಯಾಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ.
ಹಾಗೆಂದು ಮೈಸೂರು ಅಥವಾ ಬೆಂಗಳೂರಿನಂತಹ ವಿಶ್ವವಿದ್ಯಾಲಯಗಳಲ್ಲಿ ದಲಿತ ವಿದ್ಯಾರ್ಥಿಗಳು ಅಥವಾ ಅಧ್ಯಾಪಕರು ದನಿಯಿಲ್ಲದವರೇನೂ ಅಲ್ಲ. ಮಾನಸ ಗಂಗೋತ್ರಿಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟವು ಕಳೆದ 25 ವರ್ಷಗಳಿಂದ ವಿವಿಯೊಳಗೆ ವಿದ್ಯಾರ್ಥಿಗಳ ಪರವಾದ ಹೋರಾಟಗಳನ್ನು ಮಾಡುತ್ತಾ ಬಂದಿದೆ. 2013ರಲ್ಲಿ ಇತಿಹಾಸ ವಿಭಾಗಕ್ಕೆ ಎಂ.ಎ. ಪದವಿಗಾಗಿ ಪ್ರವೇಶ ಪಡೆದ ಮಹೇಶ್ ಸೋಸಲೆ ಎಂಬ ವಿದ್ಯಾರ್ಥಿ ವಿವಿ ಆಡಳಿತದ ಅಕ್ರಮ ಆಡಳಿತ, ಭ್ರಷ್ಟಾಚಾರ, ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧದ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮಹೇಶ್ ಕಳೆದ ವರ್ಷ ದಲಿತ ವಿದ್ಯಾರ್ಥಿ ಒಕ್ಕೂಟದ ಗೌರವಾಧ್ಯಕ್ಷನಾಗಿ ಆಯ್ಕೆಯಾಗಿದ್ದರು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗುತ್ತಿರುವ ಅನಾನುಕೂಲಗಳು ಮತ್ತು ವಿವಿಯ ಲೋಪಗಳನ್ನು ಪ್ರಶ್ನಿಸಿದ್ದರು. ಈತ ಎಂ.ಎ ಅಂತಿಮ ಪರೀಕ್ಷೆಯಲ್ಲಿ ಚಿನ್ನದ ಪದಕವನ್ನೂ ಪಡೆದು ತನ್ನ ಮುಡಿಗೇರಿಸಿಕೊಂಡಿದ್ದರು.
ವಿದ್ಯಾಭ್ಯಾಸದಲ್ಲೂ ಮುಂದಿರುವ ಮಹೇಶ್ ಈ ವರ್ಷ ಇತಿಹಾಸ ವಿಭಾಗದಲ್ಲಿಯೇ ಪಿಹೆಚ್‍ಡಿ ಸ್ಕಾಲರ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಪಿಹೆಚ್‍ಡಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‍ನಲ್ಲಿ ಸೀಟುಕೊಡಬೇಕೆಂಬುದು ವಿವಿಯ ನಿಯಮವೂ ಹೌದು. ಆದರೆ ಮಹೇಶ್‍ನನ್ನು ವಿವಿ ಆಡಳಿತ ಹಾಸ್ಟೆಲ್‍ನಿಂದ ಹೊರಗಿಟ್ಟಿತು. ಮಹೇಶ್ ಸೋಸಲೆ ಹಾಸ್ಟೆಲ್‍ನಲ್ಲಿ ಅಕ್ರಮವಾಗಿ ನೆಲೆಸಿದ್ದು ಶೈಕ್ಷಣಿಕ ವಾತವರಣಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆಂದೂ ಹಾಗೂ ಆಡಳಿತ ವೈಖರಿಯನ್ನು ಪ್ರಶ್ನಿಸುತ್ತಾ ಕಛೇರಿ ಕೆಲಸಕ್ಕೆ ಅಡಚಣೆಯುಂಟುಮಾಡುತ್ತಿದ್ದಾರೆಂದೂ ಆರೋಪಿಸಿ ಮಹೇಶ್‍ನನ್ನು ಕಪ್ಪುಪಟ್ಟಿಗೆ ಸೇರಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಕೋರಿದಲ್ಲಿ ಅವಕಾಶ ಕಲ್ಪಿಸಬಾರದೆಂದು ಆದೇಶವನ್ನೂ ನೀಡಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ಇರುವಾಗ ಈ ವಿದ್ಯಾರ್ಥಿಗೆ ಮಾತ್ರ ಯಾಕೆ ಹೀಗೆ ಎಂದು ನೋಡಿದರೆ ಅಸಲೀ ಸಂಗತಿಗಳು ಬಿಚ್ಚಿಕೊಳ್ಳುತ್ತವೆ. ಮಹೇಶ್ ವಿದ್ಯಾರ್ಥಿ ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನಂತರ ವಿವಿಯ ಭ್ರಷ್ಟಾಚಾರಗಳನ್ನು ಪ್ರಶ್ನಿಸುವುದರಲ್ಲಿ ಮೊದಲಿಗನಾಗಿದ್ದ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವಂತೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಜುಲೈ 10ರಂದು ವಿವಿ ಕಾರ್ಯಸೌಧದ ಎದುರು ಪ್ರತಿಭಟನೆ ಮಾಡಿದ್ದರು. ನಂತರ ಜುಲೈ 17ರಂದು ಡೀನ್ ಆಫೀಸ್ ಮಂಭಾಗ ಎಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿ ಬೃಹತ್ ಪ್ರತಿಭಟನೆಯನ್ನೂ ಸಹ ಮಾಡಿದ್ದಾರೆ.
ಅದಷ್ಟೇ ಅಲ್ಲದೆ ಕಳೆದ ವರ್ಷ ವಿವಿಯ ಆಡಳಿತವು 124 ಬೋಧಕೇತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದರಲ್ಲಿ ಅಕ್ರಮಗಳಾಗಿವೆ ಎಂಬ ಆರೋಪಗಳಿವೆ. ನೇಮಕಾತಿಯ ವೇಳೆಯಲ್ಲಿ ಯಾವುದೇ ನೋಟಿಫಿಕೇಷನ್ ನೀಡಿರಲಿಲ್ಲ ಹಾಗೂ ರೋಸ್ಟರ್ ಕೂಡ ಫಾಲೋ ಮಾಡಿರಲಿಲ್ಲವೆಂಬುದು ಆರೋಪ. ಹಾಗಾಗಿ ಈ ನೇಮಕಾತಿ ಅಕ್ರಮವಾದುದ್ದೆಂದು ರಾಜ್ಯಪಾಲರ ಕಛೇರಿಯಿಂದ ಪರಿಶೀಲನೆ ನಡೆದು ಈ ನೇಮಕಾತಿಯನ್ನು ಕೈ ಬಿಡಬೇಕೆಂದು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಆದೇಶವನ್ನೂ ಸಹ ನೀಡಲಾಗಿತ್ತು. ಒಂದು ತಿಂಗಳಾದರೂ ಆದೇಶವನ್ನು ಜಾರಿಮಾಡದ ವಿವಿಯ ವಿರುದ್ಧ ವಿದ್ಯಾರ್ಥಿ ಒಕ್ಕೂಟವು ಆಗಸ್ಟ್ 10ರಂದು ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯ ನಾಯಕತ್ವವನ್ನು ಮಹೇಶ್ ವಹಿಸಿಕೊಂಡಿದ್ದರು. ಜುಲೈ 17ರಂದು ನಡೆದ ಪ್ರತಿಭಟನೆಯನ್ನು ಆಧಾರವಾಗಿ ಇಟ್ಟುಕೊಂಡು ಡೀನ್ ಪ್ರವೀಣ್ ಅವರು ಆಗಸ್ಟ್ 18ರಂದು ಪೋಲೀಸ್ ಠಾಣೆಯಲ್ಲಿ ಮಹೇಶ್ ವಿರುದ್ಧ ದೂರು ನೀಡಿ ಎಫ್‍ಐಆರ್ ದಾಖಲಿಸಿದ್ದಾರೆ. ಹಾಸ್ಟೆಲ್ ಆಡಳಿತವು ಈತನ ಹಾಸ್ಟೆಲ್ ಪ್ರವೇಶಾತಿಗೆ ಅನುಮತಿ ನಿರಾಕರಿಸಲು ಕೋರಿ ಕುಲಪತಿಗೆ ಪತ್ರ ಬರೆದಿತ್ತು. ಕೋರಿಕೆಗೆ ಸಮ್ಮತಿಸಿರುವ ಕುಲಪತಿ ಕಛೇರಿ ಕೆಲಸಕ್ಕೆ ಅಡಚಣೆ ಮಾಡಿರುವುದರಿಂದ, ಕಪ್ಪುಪಟ್ಟಿಗೆ ಸೇರಿಸಿದ್ದೇವೆ ಮತ್ತು ಆತನಿಗೆ ಪ್ರವೇಶಾತಿಯನ್ನು ನೀಡಬಾರದೆಂದು ಆಗಸ್ಟ್ 14ರಂದು ಲಿಖಿತವಾಗಿ ಅನುಮತಿ ನೀಡಿದೆ ಹಾಗೂ ಈ ವಿಚಾರವಾಗಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದೂ ಸಹ ವಿವಿ ಆಡಳಿತ ಬೆದರಿಕೆ ಹಾಕಿದೆ.
ಆದರೆ, ಮಹೇಶ್‍ನನ್ನು ಕಪ್ಪುಪಟ್ಟಿ ಸೇರಿಸುವುದಾಗಿ ಅಥವಾ ಸೇರಿಸಿರುವುದಾಗಿ ಆತನಿಗೆ ಈವರೆಗೂ ಯಾವುದೇ ನೋಟೀಸ್ ನೀಡಿಲ್ಲ. ಅಲ್ಲದೆ ವಿವಿಯ ಶಿಸ್ತುಪಾಲನಾ ಕಮಿಟಿಯು ಈತನನ್ನು ಇದುವರೆಗೆ ಒಮ್ಮೆಯೂ ವಿಚಾರಣೆಯನ್ನು ಮಾಡಿಲ್ಲ. ತಮ್ಮ ಅಕ್ರಮಗಳ ಬಗೆಗೆ ಪ್ರಶ್ನಿಸುತ್ತಾರೆಂಬ ಒಂದೇ ಒಂದು ಕಾರಣಕ್ಕೆ ಏಕಾಏಕಿ ಹಾಸ್ಟೆಲ್‍ನಿಂದ ಹೊರದಬ್ಬಿದ್ದಾರೆ. ಹಾಸ್ಟೆಲ್ ನಿರಾಕರಣೆಯನ್ನು ಪ್ರಶ್ನಿಸಿ ನನ್ನನ್ನು ಮಾನಸಿಕವಾಗಿ ಹಿಂಸೆಗೆ ಸಿಲುಕಿಸಲು ಕಾರಣವೇನು? ಹಾಗೂ ಪ್ರತಿದಿನ ಊರಿನಿಂದ ಪ್ರಯಾಣ ಮಾಡಿದರೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಮಹೇಶ್ ಇದುವರೆಗೂ 2 ಬಾರಿ ಪತ್ರ ಬರೆದಿದ್ದಾರೆ. ಆದರೆ ಯಾವುದೇ ಪತ್ರಕ್ಕೂ ಕುಲಪತಿಗಳಿಂದ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಕಳೆದ ಎಂಟು ದಿನಗಳಿಂದ ಹಾಸ್ಟೆಲ್‍ನ ಕಾರಿಡಾರ್‍ನಲ್ಲಿ ವಾಸಿಸುತ್ತಿರುವ ಮಹೇಶ್ ಮೌನ ಪ್ರತಿಭಟನೆ ಆರಂಭಿಸಿದ್ದಾರೆ.

university order letter

ಒಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯದಲ್ಲಿ ನಡೆಯುವ ಅಕ್ರಮಗಳು, ಭ್ರಷ್ಟಾಚಾರಗಳು, ಆಡಳಿತ ದೋಷಗಳನ್ನು ಪ್ರಶ್ನಿಸಿದರೆ ಅವರನ್ನು ಎಲ್ಲಾ ಸೌಕರ್ಯಗಳಿಂದ ಹೊರದಬ್ಬುವುದು ಇತ್ತೀಚಿನ ವರ್ಷಗಳಲ್ಲಿ ಸಹಜ ಎನ್ನುವಂತೆ ಆಗಿಹೋಗಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯವೆಂದೇ ಹೆಸರು ಪಡೆದಿರುವ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಮೊಳಗಿಸುತ್ತಿದ್ದ ಪ್ರಜಾತಂತ್ರದ ಧ್ವನಿಯನ್ನು ಹತ್ತಿಕ್ಕಲು ಪಿಎಚ್‍ಡಿ ಸ್ಕಾಲರ್ ಕನ್ಹಯ್ಯ ಕುಮಾರ್‍ನ ಮೇಲೆ ರಾಷ್ಟ್ರದ್ರೋಹಿಯೆಂದು ಬಂಧನದಲ್ಲಿಡಲಾಗಿತ್ತು.
ಆ ಸುದ್ದಿ ಮಾಸುವ ಮೊದಲೇ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ಸಂಘಟನೆ ಕಟ್ಟಿಕೊಂಡು ದಲಿತ ವಿದ್ಯಾರ್ಥಿಗಳ ಪರವಾಗಿ ಹಾಗೂ ವಿವಿಯ ದುರಾಡಳಿತ ವಿರುದ್ಧ ಹೋರಾಟ ಮಾಡುತ್ತಿದ್ದ ರೋಹಿತ್ ವೇಮುಲನ ಮೇಲೆ ಆಡಳಿತವು ಬಿದ್ದಿತು. ಎಬಿವಿಪಿ ಗೂಂಡಾಗಳು ರೂಪಿಸಿದ್ದ ಸಂಚಿಗೆ ಕೈ ಜೋಡಿಸಿದ್ದ ಹೆಚ್‍ಸಿಯುನ ಕುಲಪತಿ ಅಪ್ಪಾರಾವ್ ಮತ್ತು ಕೇಂದ್ರ ಸಚಿವೆ ಸ್ಮøತಿ ಇರಾನಿ ವೇಮುಲನ ಫೆಲೋಶಿಪ್ ಕಡಿತಗೊಳಿಸಿ ವಿದ್ಯಾರ್ಥಿ ನಿಲಯದಿಂದ ಹೊರಹಾಕಿದ್ದರು. ತನ್ನ ಫೆಲೋಶಿಪ್ ಕೇಳಿ ಒತ್ತಾಯಿಸಿ ಹೋರಾಡಿದ ವೇಮುಲ 2016ರ ಜನವರಿ 17ರಂದು ತನಗಾದ ಅನ್ಯಾಯದ ಬಗೆಗೆ ಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇಂತಹ ದೌರ್ಜನ್ಯ ದಬ್ಬಾಳಿಕೆಯ ಪಟ್ಟಿಗೆ ಈಗ ಮೈಸೂರು ವಿವಿಯೂ ಸೇರಿದಂತಾಗಿದೆ. ಇದು ಆಧಿಕಾರದಲ್ಲಿರುವವರ ದುರಾಡಳಿತದ ವಿರುದ್ಧ ವಿದ್ಯಾರ್ಥಿಗಳು ದನಿಯೆತ್ತದಂತೆ ಅವರನ್ನು ನಿಯಂತ್ರಿಸಲು ಸರ್ಕಾರಗಳು ಮತ್ತು ಅಧಿಕಾರಿ ವರ್ಗ ಮಾಡಿರುವ ಹುನ್ನಾರವಾಗಿದೆ. ಮೈಸೂರಿನವರೇ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ಇದೆಲ್ಲಾ ಕೇಳಿಸುತ್ತಿದೆಯೇ?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here