Homeಮುಖಪುಟಕೃಷಿ ಮಸೂದೆಗಳು ಹೇಳುವುದೇನು..?: ವಿರೋಧಕ್ಕೆ ಕಾರಣಗಳೇನು..?

ಕೃಷಿ ಮಸೂದೆಗಳು ಹೇಳುವುದೇನು..?: ವಿರೋಧಕ್ಕೆ ಕಾರಣಗಳೇನು..?

ಹೊಸ ಕೃಷಿ ಮಸೂದೆಗಳು ರೈತರನ್ನು, ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಶಕ್ತಿಗಳ ಸೆರೆಯಾಗುವಂತೆ ಮಾಡುತ್ತವೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.

- Advertisement -
- Advertisement -

ಸಂಸತ್ತಿನಲ್ಲಿ ಅಂಗೀಕಾರವಾಗಿರುವ ಮೂರು ಕೃಷಿ ಸುಗ್ರೀವಾಜ್ಞೆಗಳ ವಿರುದ್ಧ ಪಂಜಾಬ್, ಹರಿಯಾಣ, ತೆಲಂಗಾಣ ಸೇರಿ ದೇಶದ ಹಲವೆಡೆ ಕಳೆದೊಂದು ವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಇಂದು ಪಂಜಾಬ್‌ನಲ್ಲಿ ರೈತರೊಬ್ಬರು ವಿಷ ಸೇವಿಸಿ ಮೃತಪಟ್ಟಿದ್ದಾರೆ.

ಹೊಸ ಮಸೂದೆಗಳು ರೈತರನ್ನು, ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಶಕ್ತಿಗಳ ಸೆರೆಯಾಗುವಂತೆ ಮಾಡುತ್ತಿವೆ ಎಂದು ಆರೋಪಿಸುತ್ತಿದ್ದಾರೆ. ಪಂಜಾಬ್‌ನಲ್ಲಿ ಕಿಸಾನ್ ಮಜ್ದೂರ್‌ ಸಂಘರ್ಷ್ ಸಂಘಟನೆ ಸೆಪ್ಟೆಂಬರ್ 24 ರಿಂದ ಸೆಪ್ಟೆಂಬರ್ 26 ರವರೆಗೆ ರಾಜ್ಯಾದ್ಯಂತ ‘ರೈಲ್ ರೋಕೊ’ ಆಂದೋಲನಕ್ಕೆ ಕರೆ ನೀಡಿದೆ. ಇತರ ರೈತ ಸಂಘಟನೆಗಳು ಸೆಪ್ಟೆಂಬರ್ 25ಕ್ಕೆ ಪಂಜಾಬ್ ಬಂದ್‌ಗೆ ಕರೆ ನೀಡಿವೆ.

ಸೆಪ್ಟಂಬರ್ 21ರಿಂದ ಕರ್ನಾಟಕ ರಾಜ್ಯ ಸರ್ಕಾರವು ವಿಧಾನಸೌಧದಲ್ಲಿ ಅಧಿವೇಶನ ನಡೆಸಲು ಮುಂದಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿರುವ ದಲಿತ, ಕಾರ್ಮಿಕ, ರೈತ ಸಂಘಟನೆಗಳೆಲ್ಲಾ ಒಟ್ಟಾಗಿ ಐಕ್ಯ ಹೋರಾಟ ನಡೆಸಬೇಕೆಂದು ಕರೆ ನೀಡಿವೆ. ಅಧಿವೇಶನ ನಡೆಯುವ ಪ್ರತಿದಿನವೂ ತಮ್ಮ ಪ್ರತಿಭಟನೆಯನ್ನು ಕೈಗೊಂಡು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಿವೆ. ತುರ್ತಾಗಿ ಹಿಂಪಡೆಯಲೇಬೇಕಾದ ಮತ್ತು ಸುಗ್ರೀವಾಜ್ಞೆ ತಂದು ಜಾರಿಗೊಳಿಸಲು ಹೊರಟಿರುವ ಕೆಲವು ಕಾಯ್ದೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಮಸೂದೆ ವಿರೋಧಿಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ: ಪ್ರಧಾನಿ ಮೋದಿ

ಇಷ್ಟೆಲ್ಲಾ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಇದು ರೈತರ ಅನುಕೂಲಕ್ಕಾಗಿ ಎಂದುಕೊಂಡು ಕಾನೂನನ್ನು ಜಾರಿಗೆ ಬಂದಿದೆ. ಮಧ್ಯವರ್ತಿಗಳಿಂದ ರೈತರನ್ನು ರಕ್ಷಿಸುತ್ತದೆ ಎನ್ನುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ  ಮಸೂದೆಗಳ ಅಂಗೀಕಾರಕ್ಕೆ ಸಂತಸ ವ್ಯಕ್ತಪಡಿಸಿದ್ದು, ಮಸೂದೆ ವಿರೋಧಿಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ವಿಪಕ್ಷಗಳ ಮೇಲೆ ಕಿಡಿ ಕಾರಿದ್ದಾರೆ.

ಕೃಷಿ ಮಸೂದೆಗಳು ಹೇಳುವುದೇನು..?

1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ

ಸರ್ಕಾರ ಈ ಸುಗ್ರೀವಾಜ್ಞೆಯನ್ನು ’ಒಂದು ರಾಷ್ಟ್ರ, ಒಂದು ಮಾರುಕಟ್ಟೆ’ ಭಾಗವಾಗಿ ಮುಂದಿಡುತ್ತಿದೆ. ರೈತ ತಾನು ಬೆಳೆದ ಬೆಳೆಗಳನ್ನು ಯಾವುದೇ ವ್ಯಾಪಾರಿಗಳಿಗೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ನಿರ್ದಿಷ್ಟ ಪ್ರದೇಶದ ಎಪಿಎಂಸಿಯಲ್ಲಿ ಕಡ್ಡಾಯವಾಗಿ ಮಾರಾಟ ಮಾಡಬೇಕಿರುವುದಿಲ್ಲ.

2. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020

ಈ ಸುಗ್ರೀವಾಜ್ಞೆಯಡಿಯಲ್ಲಿ, ರೈತ ತಾನು ಬೆಳೆದ ಬೆಳೆಗೆ ತಾನೇ ನಿಗದಿಪಡಿಸಿದ ಬೆಲೆ ಆಧಾರದ ಮೇಲೆ ಬೆಳೆಗಳನ್ನು ಮಾರಾಟ ಮಾಡುವ ಒಪ್ಪಂದ. ಕೃಷಿ ವ್ಯವಹಾರ ಸಂಸ್ಥೆಗಳು, ಸಂಸ್ಕರಣ ಘಟಕಗಳು, ಸಗಟು ವ್ಯಾಪಾರಿಗಳು, ರಫ್ತುದಾರರ ಜೊತೆ ಭವಿಷ್ಯದ ಕೃಷಿ ಉತ್ಪನ್ನಗಳನ್ನು ಪರಸ್ಪರ ಒಪ್ಪಿದ ಸಂಭಾವನೆ  ಬೆಲೆಯಲ್ಲಿ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳುವುದು. ಇದು ರೈತನ ಅಪಾಯವನ್ನು ಕಡಿಮೆ  ಮಾಡುತ್ತದೆ ಎಂದು ಮಸೂದೆ ಹೇಳುತ್ತದೆ.

3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ

ಈ ಮೊದಲು ದಲ್ಲಾಳಿ ಮತ್ತು ಉದ್ಯಮಿಗಳು ಬೆಳೆಗಳನ್ನು ಕೈಗೆಟುಕುವ ದರದಲ್ಲಿ ರೈತರಿಂದ ಖರೀದಿಸಿ, ಸಂಗ್ರಹಿಸಿ, ನಂತರ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರು. ಇದನ್ನು ತಪ್ಪಿಸಲು ಸರ್ಕಾರ 1955 ರಲ್ಲಿ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಆದರೆ, ಈಗ ಈ ಕಾಯ್ದೆಗೆ ತಿದ್ದುಪಡಿ ತಂದು, ಹೊಸ ತಿದ್ದುಪಡಿಯಡಿಯಲ್ಲಿ ಕೃಷಿ ಉತ್ಪನ್ನಗಳಾದ ಸಿರಿಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಖಾದ್ಯ ತೈಲಗಳು ಮತ್ತು ಆಲೂಗಡ್ಡೆಗಳನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ಪನ್ಶೇಂದ್ರ ಗ್ರಾಮದ ದಲಿತರ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯ

ರೈತ ಸಂಘಟನೆಗಳು ಮಸೂದೆ ವಿರೋಧಿಸಲು ಕಾರಣವೇನು..?

ಭಾರತೀಯ ಕಿಸಾನ್ ಯೂನಿಯನ್ ಸಂಘದ ಪ್ರಕಾರ, ಈ ಮಸೂದೆಗಳಿಂದ ರೈತರು ಕಂಪನಿಗಳಿಗೆ ಸೆರೆಯಾಗುವ ಅಪಾಯವಿದೆ. ಕಾನೂನು ನಿಯಂತ್ರಣ, ಉಚಿತ ಮಾರುಕಟ್ಟೆ, ಸಂಗ್ರಹಣೆ, ಆಮದು-ರಫ್ತು, ರೈತರ ಹಿತದೃಷ್ಟಿಯಿಂದ ಮಾಡಿಲ್ಲ ಎಂದಿದೆ. ವಿಶ್ವ ವಾಣಿಜ್ಯ ಸಂಸ್ಥೆಯ ನೀತಿಗಳಿಂದಾಗಿಯೂ ಈ ದೇಶದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. 1943-44ರಲ್ಲಿ ಬಂಗಾಳದ ಬರಗಾಲದ ಸಮಯದಲ್ಲಿ, ಈಸ್ಟ್ ಇಂಡಿಯಾ ಕಂಪನಿಯು ಆಹಾರ ಧಾನ್ಯಗಳನ್ನು ಸಂಗ್ರಹಿಸಿಟ್ಟಿದ್ದರಿಂದ 40 ಲಕ್ಷ ಜನರು ಹಸಿವಿನಿಂದ ಸಾವನ್ನಪ್ಪಿದರು ಎಂದಿದೆ.

PC:Times Now

ಜೊತೆಗೆ, ಶಾಂತಕುಮಾರ್, ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವುದು ಈ ಸುಗ್ರೀವಾಜ್ಞೆಗಳ ಹಿಂದಿನ ಉದ್ದೇಶ ಎಂದು ರೈತ ಮುಖಂಡರು ಆರೋಪಿಸುತ್ತಾರೆ. ಈ ಸಮಿತಿ 2015ರಲ್ಲಿ ವರದಿ ಸಲ್ಲಿಸಿದ್ದು, ಆಹಾರ ಸಂರಕ್ಷಣೆಯ ಜವಾಬ್ದಾರಿ ಹೊಂದಿರುವ ಭಾರತದ ಆಹಾರ ನಿಗಮ (FCI) ತನ್ನ ಜವಾಬ್ದಾರಿಯನ್ನು ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಒಡಿಶಾ ಮತ್ತು ಆಂಧ್ರಪ್ರದೇಶ ಸರ್ಕಾರಗಳಿಗೆ ನೀಡಬೇಕು ಎಂದು ಹೇಳಿದೆ. ಈ ಮೂಲಕ ಕೇಂದ್ರ ಸರ್ಕಾರ ಆಹಾರ ಸಂಸ್ಕರಣೆ ಮತ್ತು ಖರೀದಿಯಿಂದ ದೂರ ಉಳಿಯಲು ಪ್ರಯತ್ನಿಸುತ್ತದೆ.

ಕೃಷಿ ಮಸೂದೆಗಳ ಕುರಿತು ತಜ್ಞರ ಅಭಿಪ್ರಾಯವೇನು..?

ಕೆ.ಪಿ. ಸುರೇಶ್: ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ತಜ್ಞ ಕೆ.ಪಿ. ಸುರೇಶ್ ನಾನುಗೌರಿ.ಕಾಂ ಜೊತೆ ಮಾತನಾಡಿ, ಈ ಕಾಯ್ದೆಗಳು ಸಂಪೂರ್ಣವಾಗಿ ಕಾರ್ಪೋರೇಟ್ ಕಂಪನಿಗಳ ಪರವಾಗಿವೆ. ಎಪಿಎಂಸಿ ಜೊತೆಗಿನ ಸಂಬಂಧವನ್ನು ಕತ್ತರಿಸಿ, ಕಂಪನಿಗಳ ಕೈಕೆಳಗಿರುವಂತೆ ಮಾಡುತ್ತವೆ. ಈ ಮಸೂದೆಗಳ ದುಷ್ಪರಿಣಾಮ ತಕ್ಷಣಕ್ಕೆ ತಿಳಿಯುವುದಿಲ್ಲ. ಆದರೆ ಮಲೆನಾಡು ಭಾಗದಲ್ಲಿ ಕಾಫೀ, ವೆನಿಲ್ಲಾ, ಕೋಕೋ ಬೆಳೆಗಾರರು ಅನುಭವಿಸುತ್ತಿರುವ ಸ್ಥಿತಿಯೇ ಇನ್ನೆರಡು ವರ್ಷಗಳಲ್ಲಿ ಬರಲಿದೆ. ಕೊರೊನಾ ನಡುವೆ ಇಷ್ಟು ಬೇಗ ಕಾಯ್ದೆ ತರುವ ಅಗತ್ಯವೇನಿತ್ತು..? ಕಾರ್ಪೊರೇಟ್ ಕಂಪನಿಗಳ ಜೊತೆಗಿನ ಸಂಬಂಧ ಉತ್ತಮಗೊಳಿಸಿಕೊಳ್ಳಲು ಸರ್ಕಾರಗಳು ಇಂತಹ ಮಸೂದೆಗಳನ್ನು ಜಾರಿಗೊಳಿಸುತ್ತಿವೆ ಎನ್ನುತ್ತಾರೆ.

ಪ್ರಕಾಶ್ ಕಮ್ಮರಡಿ:  ಈ ಕೃಷಿ ಸುಗ್ರೀವಾಜ್ಞೆಗಳು, ಪರ ವಿರೋಧದ ಪ್ರಶ್ನೆ ಉದ್ಭವಿಸುವ ಅವಕಾಶವೇ ಇಲ್ಲದಂತೆ ಮಾಡಿವೆ. ಕೊರೊನಾ ವೈರಸ್ ಸಂಕಷ್ಟದ ಜೊತೆಗೆ ಸುಗ್ರೀವಾಜ್ಞೆಗಳ ಮೂಲಕ ಮಸೂದೆ ಜಾರಿಗೊಳಿಸುವ ಅಗತ್ಯವೆನಿದೆ..? ಎಂದು ಪ್ರಶ್ನೆಸುತ್ತಾರೆ ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ

ಮುಂದುವರಿದು, ರೈತರ ಬೆಳೆಗೆ ಬೆಂಬಲ ಬೆಲೆ, ಎಪಿಎಂಸಿ ಸುಧಾರಣೆ, ಎನ್.ಎಸ್.ಸ್ವಾಮಿನಾಥನ್ ವರದಿ ಜಾರಿ, ಮಾರುಕಟ್ಟೆ ಸಧೃಡ  ಈ ಎಲ್ಲ ಸಮಸ್ಯೆಗಳಿಗೆಸರ್ಕಾರ ಪರಿಹಾರ ನೀಡದೆ, ಒಮ್ಮೆಲೆ ಚರ್ಚೆಗೆ ಅವಕಾಶವೇ ನೀಡದೆ ಸುಗ್ರಿವಾಜ್ಞೆ ತರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಚರ್ಚೆಯೇ ಮಾಡದೇ ರೈತರ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಸರಿ. ಅಡಳಿತ ಪಕ್ಷ, ವಿರೋಧ ಪಕ್ಷ ಎಲ್ಲರೂ ಕೂಡ ಕೃಷಿಯನ್ನು ಖಾಸಗೀಕರಣ ಮಾಡಲು ಆಸಕ್ತರಾಗಿದ್ದಾರೆ.  ಹೀಗಾಗಿ ನಾವು ಬೆಂಗಳೂರಿನಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ ಪ್ರಕಾಶ್ ಕಮ್ಮರಡಿ.

ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಅನ್ನು ಲೋಕಸಭೆಯಲ್ಲಿ ಗುರುವಾರ (ಸೆ.17) ಅಂಗೀಕರಿಸಲಾಯಿತು. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಯನ್ನು ಸೆಪ್ಟೆಂಬರ್ 13 ರಂದು ಅಂಗೀಕರಿಸಲಾಗಿದೆ.


ಇದನ್ನೂ ಓದಿ: ಲಾಕ್‌ಡೌನ್‌ನಿಂದ ರೈತರಿಗೆ ಸಮಸ್ಯೆ: ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡ ರೈತ ಹೋರಾಟಗಾರರು & ಕೃಷಿ ತಜ್ಞರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...