ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯ ಸಮಯದ ಮಾಲಿನ್ಯವನ್ನು ತಡೆಗಟ್ಟಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ದೀಪಾವಳಿ ಹಬ್ಬಕ್ಕೆ ಮುಂಬೈ ಮಹಾನಗರದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧ ಮಾಡಿ ಆದೇಶಿಸಿದೆ.
ಹೆಚ್ಚುತ್ತಿರುವ ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ, ಮುಂಬೈನಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಿರುವ ಪರಿಣಾಮವಾಗಿ ಎರಡನೇ ಅಲೆ ಶುರುವಾಗುವ ಸಾಧ್ಯತೆ ಇರುವುದರಿಂದ ಬಿಎಂಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ದೀಪಾವಳಿಯನ್ನು ಪಟಾಕಿ ಇಲ್ಲದೆ ಆಚರಿಸಬೇಕೆಂದು ಜನರಿಗೆ ಮನವಿ ಮಾಡಿದೆ.
ಕೆಲವು ರಾಜ್ಯಗಳಲ್ಲಿ ಹಸಿರು ಪಟಾಕಿಗಳನ್ನು ಸಿಡಿಸಲು ಅನುಮತಿ ನೀಡಲಾಗಿದೆ. ಆದರೆ ಮುಂಬೈನಲ್ಲಿ ಹಸಿರು ಪಟಾಕಿಗಳು ಸೇರಿದಂತೆ ಎಲ್ಲಾ ರೀತಿಯ ಕ್ರ್ಯಾಕರ್‌ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜನರು ಸಾರ್ವಜನಿಕ ಸ್ಥಳಗಳಲ್ಲಿ ಕ್ರ್ಯಾಕರ್‌ಗಳನ್ನು ಸಿಡಿಯುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಹಸಿರು ಪಟಾಕಿಗಳು ಎಂದರೇನು..? ಅವು ಮಾಲಿನ್ಯಕಾರಕವಲ್ಲವೇ..?
ಆದರೆ ಸಾರ್ವಜನಿಕರು ತಮ್ಮ ಸಣ್ಣ ಪ್ರದೇಶಗಳಲ್ಲಿ ಸೀಮಿತ ಅವಧಿಗೆ ಅಂದರೆ, ದೀಪಾವಳಿ ಹಬ್ಬದ ದಿನ ಮಾತ್ರ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ 2 ಗಂಟೆಗಳ ಕಾಲ ಫ್ಲವರ್ ಪಾಟ್ಗಳನ್ನ ಮಾತ್ರ ಹಚ್ಚಲು ಅವಕಾಶ ನೀಡಿದೆ.
ಹರಿಯಾಣ ಸರ್ಕಾರ, ದೀಪಾವಳಿ ಮತ್ತು ಗುರುಪುರಬ್‌ನಲ್ಲಿ ಪಟಾಕಿ ಸಿಡಿಸಲು ಮತ್ತು ಮಾರಾಟ ಮಾಡಲು ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ 2 ಗಂಟೆ ಅನುಮತಿ ನೀಡಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಮುನ್ನಾ ದಿನದಂದು ರಾತ್ರಿ 11.55 ರಿಂದ ಮುಂಜಾನೆ 12.30 ರ ನಡುವೆ ಪಟಾಕಿ ಸಿಡಿಸಲು ಅನುಮತಿ ನೀಡಿದೆ.
ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲಿ ಇಂದಿನಿಂದ ನವೆಂಬರ್ 30 ರ ವರೆಗೆ ಎಲ್ಲಾ ಪಟಾಕಿಗಳ ಮಾರಾಟ ಮತ್ತು ಬಳಕೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೋಮವಾರ ಸಂಪೂರ್ಣ ನಿಷೇಧ ಹೇರಿದೆ.
ಗಾಳಿಯ ಗುಣಮಟ್ಟ ಕುಸಿದು, ವಾಯುಮಾಲಿನ್ಯ ಹೆಚ್ಚಾಗಿರುವ, ಕರ್ನಾಟಕವೂ ಸೇರಿದಂತೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪಟಾಕಿ ನಿಷೇಧ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೋಟಿಸ್ ನೀಡಿತ್ತು.


