Homeಪುಸ್ತಕ ವಿಮರ್ಶೆಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ ...

ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ …

- Advertisement -
- Advertisement -

ಕಾಕತಾಳೀಯವೆಂಬಂತೆ 2020ರ ಸಾಲಿನಲ್ಲಿ ಕನ್ನಡದಲ್ಲಿ ಬಂದಿರುವ ಎರಡು ಆತ್ಮಕಥೆಗಳಲ್ಲೂ ಕಾಗೆಯ ಪ್ರಸ್ತಾಪವಿದೆ. ಡಾ. ಪುರುಷೋತ್ತಮ ಬಿಳಿಮಲೆಯವರು ತಮ್ಮ ಆತ್ಮಕಥೆಗೆ ’ಕಾಗೆ ಮುಟ್ಟಿದ ನೀರು’ ಎಂದು ಕರೆದಿದ್ದಾರೆ. ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರ ’ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಆತ್ಮಕಥನದ ಆರಂಭವೇ ಕಾಗೆ ಪ್ರಸ್ತಾಪದೊಂದಿಗೆ. ಮೂಡ್ನಾಕೂಡು ತಾಯಿ, ಅವರ ಅಂಗಳದ ಒಂಟಿ ತೆಂಗಿನ ಮರದ ಗರಿಯ ಮೇಲೆ ಕುಳಿತ ಕಾಗೆಯೊಂದು ’ಕಾಕಾ’ ಎಂದು ಕರೆದಾಗಲೇ ಅವರ ಮನೆಗೆ ಬೆಳಕಾಗುವುದು. ಮೂಡ್ನಾಕೂಡು ತಾಯಿ ಅದನ್ನು ಗತಿಸಿದ ತನ್ನ ತಾಯಿಯೇ ಬಂದು ಎಚ್ಚರಿಸುತ್ತಿದ್ದಾಳೆಂದು ಭಾವಿಸಿ ಕೈ ಮುಗಿಯುತ್ತಿದ್ದರೆಂದು ಅವರು ನೆನಪಿಸಿಕೊಳ್ಳುತ್ತಾರೆ. ಗಮನಾರ್ಹವೆಂದರೆ ಈ ಇಬ್ಬರೂ ತಳ ಸಮುದಾಯದಿಂದ ಬಂದವರು.

ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಶೀರ್ಷಿಕೆ ಒಂದು ಸಾಂಕೇತಿಕ. ನಮ್ಮಲ್ಲಿ ಬಹುಮಂದಿ ಶಿಷ್ಟ ಜನರು ಕಪ್ಪಗಿರುವ ಪ್ರಾಣಿ, ಪಕ್ಷಿ, ವಸ್ತು ಎಲ್ಲವನ್ನೂ ಅಪಶಕುನವೆಂದು ಭಾವಿಸುವರು. ಕಾಗೆ, ಗೂಗೆ, ನರಿ, ಬೆಕ್ಕು ಮುಂತಾಗಿ ಯಾವ ಪಕ್ಷಿ ಪ್ರಾಣಿಯಾಗಲಿ ಶುಭವೂ ಅಲ್ಲ, ಅಶುಭವೂ ಅಲ್ಲದಿದ್ದರೂ, ಅವುಗಳ ತಲೆಗೆ ಇವೆಲ್ಲವನ್ನೂ ಕಟ್ಟಲಾಗಿದೆ. ಕಾಗೆ ಜನಪದ ಕತೆಗಳಲ್ಲಿ ಪರಿವರ್ತನೆಯ ಹಾಗೂ ಬದಲಾವಣೆಯ ರೂಪಕ. ಬೆಳಗಿನ ಹರಿಕಾರ. ಹಲವು ಬುಡಕಟ್ಟು ಜನ ತಮ್ಮ ಮೂಲವನ್ನು ಕಾಗೆ, ಗೂಗೆ, ಬೆಕ್ಕು ಮುಂತಾದ ಪ್ರಾಣಿಪಕ್ಷಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಒಂದಗುಳ ಕಂಡರೆ ’ಕಾಕಾ’ ಎಂದು ಕರೆವ ಕಾಗೆಯ ಬಂಧುಜನರ ಪ್ರೀತಿ ಅಪಾರ. ತನ್ನ ಮರಿಯಂತೆಯೇ ಕೋಗಿಲೆಯ ಮರಿಗೂ ಗುಟುಕು ಕೊಡುವ ವಾತ್ಸಲ್ಯಮಯಿ. ಹಿರಿಯರಿಗೆ ದಿವಸದ ದಿನ ಹಾಕಿದ ಕೂಳನ್ನು ಮುಟ್ಟಿ ಅವರನ್ನು ಸ್ವರ್ಗಕ್ಕೇರಿಸುವ ನಿಚ್ಚಣಿಕೆ. ಗಡಿಗೆಯ ತಳದ ನೀರು ಎಟಕದಿರುವಾಗ ಅದರಲ್ಲಿ ಕಲ್ಲು ಹಾಕಿ ನೀರು ಕುಡಿವ ಬುದ್ಧಿವಂತ ಪಕ್ಷಿ.


ಇದನ್ನೂ ಓದಿ: ಪುಸ್ತಕ ವಿಮರ್ಶೆ: ಬುದ್ಧನೆಡೆಗೆ ಮರಳಿ ಹಾರುವ ಮೂಡ್ನಾಕೂಡು ಚಿನ್ನಸ್ವಾಮಿಯವರ ನೆನಪಿನ ಹಕ್ಕಿ

ಇನ್ನು ತನ್ನ ಸಂತತಿಯ ವಿನಾಶಕ್ಕೆ ಕಾರಣವಾಗುತ್ತಿದ್ದ ಕಾಳಿಂಗ ಸರ್ಪವನ್ನು ರಾಜಭಟರಿಂದ ಕೊಲ್ಲಿಸಿದ ಪಂಚತಂತ್ರದ ಕತೆ ಯಾರಿಗೆ ತಾನೆ ಗೊತ್ತಿಲ್ಲ? ಮುಂದೆ ಸಂಭವಿಸುವ ಅಪಾಯವನ್ನು ಮೊದಲೆ ಗ್ರಹಿಸಿ ಸೂಚನೆ ಕೊಡುವ ’ಇಂಟಲಿಜೆನ್ಸ್’ ದಳ ಕಾಗೆಯ ಬಳಗ. ನಾನು ಕಂಡಂತೆ ನಮ್ಮೂರು ಮೊದಲುಗೊಂಡು ಅಮೆರಿಕದ ನ್ಯೂಯಾರ್ಕಿನ ’ಲಿಬರ್ಟಿ ಸ್ಟ್ಯಾಚು’ ಆವರಣದಲ್ಲೂ, ಅಂದರೆ ಬಹುತೇಕ ಎಲ್ಲ ದೇಶಗಳಲ್ಲೂ ಕಾಗೆಗಳ ಸಂತತಿ ಉಂಟು. ಇದನ್ನು ಅಂತರರಾಷ್ಟ್ರೀಯ ಪಕ್ಷಿ ಎಂದು ಕರೆಯಬಹುದು. ರಾಮಾಯಣದಲ್ಲಿ ಶ್ರೀರಾಮನು ಈ ಕಾಕಾಸುರನ ಒಂದು ಕಣ್ಣನ್ನು ಊನ ಮಾಡಿದನು ಎಂದು ಹೇಳಿರುವುದು ಅಸಂಭವ. ಯಾಕೆಂದರೆ ಒಂದು ಕ್ರೌಂಚ ಪಕ್ಷಿಯ ಸಾವಿಗೆ ಶೋಕಿಸಿ ಅದೇ ಸ್ಥಾಯಿಯಲ್ಲೇ ಶ್ರೀರಾಮಾಯಣದಂತಹ ಮಹಾಗಾನವನ್ನು ಹಾಡಿದ ವಾಲ್ಮೀಕಿ ಋಷಿ ತನ್ನ ಕಾವ್ಯ ನಾಯಕನಿಂದ ಈ ಪಕ್ಷಿಯ ಕಣ್ಣಿಗೆ ಬಾಣ ಬಿಡಿಸಿರಲಾರ. ಇದು ಪ್ರಕ್ಷಿಪ್ತ.

ಇನ್ನು ಜೀವಜಲ ನೀರಿನ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ’ಕಾಗೆ ಮುಟ್ಟಿದ ನೀರು’ ಎಂಬ ಶೀರ್ಷಿಕೆ ಏಕೆಂದರೆ ಕರಿಮಲೆಯ ಕಾಡಿನ ಬುಡಕಟ್ಟೊಂದರ ಬಡ ಕುಟುಂಬದಲ್ಲಿ ಹುಟ್ಟಿದ ಈ ಹುಡುಗನನ್ನು ಅಲ್ಲಿಗೆ 6 ಕಿ.ಮೀ. ದೂರದ ’ಕೂತ್ಕುಂಜ’ ಎಂಬ ಶಾಲೆಗೆ ಸೇರಿಸಲಾಗಿತ್ತು. ಇವರಿದ್ದ ಬಂಟಮಲೆಯ ’ವಾಟೆಕಜೆ’ಯ ಮನೆಗೂ ಸ್ಕೂಲಿಗೂ ನಡುವೆ ಕಿರು ತೊರೆಯೊಂದು ಹರಿಯುತ್ತದೆ. ಅಪ್ಪ ಶೇಷಪ್ಪ ಗೌಡರು ಯಕ್ಷಗಾನದ ಅರ್ಥಧಾರಿಯಾಗಿ ಹೋಗಿದ್ದ ದಿನಗಳಲ್ಲಿ ಅಮ್ಮ ಗೌರಮ್ಮನೇ ಈ ಚೋಟುದ್ದದ ಹುಡುಗನನ್ನು ’ನೆಲದಿಂದ ಕಾಲನ್ನು ಬಿಡಬೇಡ’ ಎಂದು ಹೇಳುತ್ತಾ ಹೊಳೆ ದಾಟಿಸುತ್ತಿದ್ದರು. ಒಂದು ದಿನ 4 ಗಂಟೆಗೆ ಶಾಲೆ ಮುಗಿದ ಮೇಲೆ ಆ ಬಾಲಕ ಕಿರು ಹೊಳೆಯ ಹತ್ತಿರ ಬಂದ. ಆದರೆ ಏನಾಯ್ತೊ? ಅಮ್ಮ ಬಂದಿರಲಿಲ್ಲ. ಎಷ್ಟು ಕಾದರೂ ಅಮ್ಮನ ಸುಳಿವಿಲ್ಲ. ಕತ್ತಲು ಕವಿಯಿತು. ಹಿಂದೆ ಹೋಗಲು ದಾರಿ ಕಾಣದು; ಮುಂದೆ ಹೋಗಲು ಹೊಳೆ ಬಿಡದು. ಹತ್ತಿರದಲ್ಲಿ ಒಂದು ದೈತ್ಯಾಕಾರದ ಮರ. ಅದರ ಬುಡದ ಪೊಟರೆಯಲ್ಲಿ ಅವನು ಭಯ-ಚಳಯಿಂದ ನಡುಗುತ್ತ ಅವಿತು ಕುಳಿತ. ಹೊದ್ದಗೊರಬಿನ ಮೇಲೆ ಬೀಳ್ವ ಮಳೆ ಹನಿ, ಹೊಳೆಯ ಮೊರೆತ ಬಿಟ್ಟರೆ ಬೇರೆ ಸದ್ದಿಲ್ಲ. ಕಾರ್ಗತ್ತಲು. ಮತ್ತೇನೂ ಇರಲಿಲ್ಲ.

’ಮರದ ಬುಡದಲ್ಲಿ ಗೊರಬಿಯೊಳಗೆ ಮುದುರಿಕೊಂಡು ಬಿದ್ದಿದ್ದ ನನ್ನನ್ನು ಯಾರೋ ಅಲ್ಲಾಡಿಸಿದಾಗಲಷ್ಟೇ ಎಚ್ಚರ. ಕಣ್ಣು ಬಿಟ್ಟಾಗ ಬಾಚಿ ತಬ್ಬಿಕೊಂಡಿದ್ದ ಅಮ್ಮ ಕಂಡರು. ರಾತ್ರಿ ಕಾಣೆಯಾಗಿದ್ದ ಬೆಳಕು ಮರದೆಡೆಗಳಿಂದ ನೆಲಕ್ಕಿಳಿದು ಅಮ್ಮನ ಕಣ್ಣೀರನ್ನು ಕಿರುತೊರೆಗೆ ಜೋಡಿಸಿದಂತೆ ಭಾಸವಾಯಿತು. ಅಮ್ಮ ಮೆಲ್ಲನೆ ಕೈ ಹಿಡಿದೆಬ್ಬಿಸಿ, ಹೊಳೆ ದಾಟಿಸಿ ಮನೆ ಕಡೆ ನಡೆದರು. ನಾನು ಕೇಳಿದೆ ’ನಿನ್ನೆ ರಾತ್ರಿ ಹೊಳೆ ದಾಟಿಸಲು ಯಾಕೆ ಬರಲಿಲ್ಲ?’ ಅಮ್ಮ ಹೇಳಿದರು ’ನಿನ್ನೆ ಸಾಯಂಕಾಲ ನನ್ನನ್ನು ಕಾಗೆ ಮುಟ್ಟಿತ್ತು. ಮುಟ್ಟಿನ ರಕ್ತ ಮೈಮೇಲಿರುವಾಗ ಕಾಡಲ್ಲಿ ನಡೆದರೆ, ಕರಿಮಲೆಯ ಕಾಲೆ-ಪಿಶಾಚಿಗಳಲ್ಲಾ ಮೈಗೆ ಸೇರಿಕೊಂಡು, ದೇಹದ ರಕ್ತವನ್ನೆಲ್ಲಾ ಹೀರಿ ಸಾಯಿಸಿ ಬಿಡುತ್ತವೆ. ಹಾಗಾಗಿ ಬಾರದೇ ಹೋದೆ. ನೀನು ಕೂತ್ಕುಂಜ ಅಜ್ಜಿ ಮನೆಗೆ ಹಿಂದಿರುಗಿ ಹೋಗಿರುವಿಯೆಂದು ಭಾವಿಸಿದೆ’ (ಪುಟ.37) ಎಂದರು.

ಕಾಗೆ ಮುಟ್ಟಿದರೆ ದೋಷ ಎಂಬ ಕಾರಣದಿಂದ ಬಿಳಿಮಲೆಯ ಅಮ್ಮ ಅಂದು ಹೊಳೆ ದಾಟಿಸಲು ಬಾರದೆ ಹೋದರು. ಹೀಗೆ ಕಾಗೆ ಮುಟ್ಟಿದರೆ ಕೆಟ್ಟದ್ದು ಎಂಬ ಮೌಢ್ಯ ಜನರಲ್ಲಿ ಬೇರೂರಿಬಿಟ್ಟಿದೆ. ಇದಾಗಿ ಆರು ದಶಕಗಳು ಕಳೆದವು. ಆ ನೆನಪು ಮಾತ್ರ ಬಿಳಿಮಲೆಯವರ ನೆನಪಿನಿಂದ ಅಳಿಯದೆ ಅಚ್ಚೊತ್ತಿದೆ. ಅದನ್ನೇ ಒಂದು ಸವಾಲು ಎಂಬಂತೆ ಬಗೆದು ತಮ್ಮ ಆತ್ಮಕತೆಗೆ ’ಕಾಗೆ ಮುಟ್ಟಿದ ನೀರು’ ಎಂದು ಕರೆದಿರುತ್ತಾರೆ. ಹೊಳೆ ದಾಟುವಾಗ ’ನೆಲದಿಂದ ಕಾಲನ್ನು ಬಿಡಬೇಡ’ ಎಂದು ಅಮ್ಮ ಹೇಳಿದ ಅಂದಿನ ಮಾತನ್ನು ತನ್ನ ಬದುಕಿನುದ್ದಕ್ಕೂ ಎಂದೂ ಮರೆಯದಿರುವ ’ಮಾತೃ ವಾಕ್ಯ ಪರಿಪಾಲಕ ಪುರುಷೋತ್ತಮ’ ಇವರು. ಹೀಗೆ ಬಾಲ್ಯದಲ್ಲಿ ಕಾಡು ಮತ್ತು ಕಿರುಹೊಳೆಯನ್ನು ದಾಟಿದ್ದು ಅವರು ಬದುಕಿನ ಕಷ್ಟಗಳ ಹೊಳೆ ದಾಟಲು ಊರುಗೋಲಾಯಿತು. ಇದೇ ಆತ್ಮಚರಿತ್ರೆಯ ಕೇಂದ್ರ ಬಿಂದು.

’ವಿದ್ಯೆ ಇಲ್ಲದ ಜಾತಕದ ಮಗು ಹುಟ್ಟಿದ್ದು ಮಾತ್ರವಲ್ಲ ಶಾಲೆಗೆ ಹೋದದ್ದೂ’ ಒಂದು ಪವಾಡವೆ! ಇವರು ಬಂಟಮಲೆಯ ಒಂಟಿ ಕುಗ್ರಾಮದಲ್ಲಿ ಹುಟ್ಟಿ ಕೂತ್ಕುಂಜ, ಪಂಜೆ ಹೈಸ್ಕೂಲು, ಪುತ್ತೂರಿನಲ್ಲಿ ಪದವಿವರೆಗೆ ಕಲಿತು, ಮದ್ರಾಸಿನಲ್ಲಿ ಕನ್ನಡ ಎಂ.ಎ. ಮಾಡಿದ್ದೊಂದು ಹರಸಾಹಸವೇ ಸರಿ. ಇಲ್ಲಿಗೆ ಈ ಪುರುಷೋತ್ತಮನ ಬದುಕಿನ ಬಾಲಕಾಂಡ ಒಂದು ದಡ ಮುಟ್ಟುತ್ತದೆ. 1979ರಲ್ಲಿ ಸೂಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಐದು ವರ್ಷ ಕನ್ನಡ ಮೇಷ್ಟ್ರಾಗಿದ್ದು ಮಂಗಳೂರು ವಿ.ವಿ.ಯಲ್ಲಿ ಡಾಕ್ಟರೇಟ್ ಮಾಡಿ, 1984ರಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಉಪನ್ಯಾಸಕನಾಗಿ ಸೇರಿದರು. ಇದು ಕರ್ನಾಟಕದಲ್ಲಿ ಚಳುವಳಿಗಳ ಬಿರುಸಿನ ಕಾಲ. ರೈತ ಸಂಘ, ದಲಿತ ಸಂಘರ್ಷ ಸಮಿತಿ, ದಲಿತ-ಬಂಡಾಯ ಚಳುವಳಿಗಳು ರಾಜ್ಯಾದ್ಯಂತ ನೆಲಮೂಲಕ್ಕಿಳಿಸಿ ಬೇರು ಚಿಗುರೊಡೆದು ಸುಳಿ ತೆಗೆದು ಬೆಳೆಯುತ್ತಿದ್ದವು.

ಎಲ್ಲಿ ನೋಡಿದರೂ ’ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಸಾಮಾಜಿಕ ನ್ಯಾಯ, ವೈಜ್ಞಾನಿಕ ಬುದ್ಧಿ, ವೈಚಾರಿಕ ಪ್ರಜ್ಞೆ ಪಸರಿಸುತ್ತಿತ್ತು. ಬ್ರಾಹ್ಮಣಿಕೆಯ ವಿರುದ್ಧ ಜಾತಿ ವಿನಾಶದ ಕಿಡಿಗಳು ಹಾರುತ್ತಿದ್ದವು. ’ಜನರ ನೋವಿಗೆ ಮಿಡಿವ ಖಡ್ಗವಾಗಲಿ ಕಾವ್ಯ; ಬಂದೂಕಿನ ನಳಿಗೆಯಲಿ ಗುಬ್ಬಿ ಗೂಡು ಕಟ್ಟಲಿ’ ಎಂಬ ದಲಿತ-ಬಂಡಾಯ ಕಾವ್ಯಕಹಳೆ ಮಾರ್ದನಿಸುತ್ತಿತ್ತು. ಕರಾವಳಿ ಸೀಮೆಯಲ್ಲಿ ಕಡಲ ಮೊರೆತದೊಂದಿಗೆ ಈ ಚಳುವಳಿಗಳ ಮೊರೆತವೂ ಸೇರಿ ಯುವ ಜನರಲ್ಲಿ ವಿಚಾರಕ್ರಾಂತಿಯ ಭೋರ್ಗರೆತ ದಡ ಬಡಿಯುತ್ತಿತ್ತು. ಮಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರೂ ವಿದ್ಯಾರ್ಥಿಗಳೂ ಬೆರಗಾಗಿ ಈ ತುಡಿತಕ್ಕೆ ಬಡಿತಕ್ಕೆ ಒಳಗಾದರು. ನಾಡಿನಾದ್ಯಂತ ಹೊಸ ದಿಗಂತದ ಗಾಳಿ ಬೀಸತೊಡಗಿತು. ಪುರುಷೋತ್ತಮ ಬಿಳಿಮಲೆಯವರೂ ಇವುಗಳ ಸೆಳೆತಕ್ಕೆ ಸಿಕ್ಕಿದರು. ಪತ್ರಿಕೆಗಳಿಗೆ ಬರೆದರು, ಕರೆದ ಕಡೆ ನಿಂತು ಭಾಷಣ ಮಾಡಿದರು. ಒಟ್ಟಾರೆ ಪ್ರಗತಿಪರ ಸಂಘಟನೆಗಳೊಂದಿಗೆ ಒಂದಾಗಿ ದುಡಿದರು. ಕರಾವಳಿಯ ವಿಶೇಷ ತಾಳಮದ್ದಲೆ-ಯಕ್ಷಗಾನ, ಗುತ್ತಿನಾಟ, ಭೂತಾರಾಧನೆ ಮುಂತಾದವುಗಳ ಸಂಶೋಧನೆ ಮಾಡುತ್ತ ಶಿವರಾಮ ಕಾರಂತರ ಪರಂಪರೆಯನ್ನು ಮುಂದೆ ದಾಟಿಸಿದರು. ಮೂಕಜ್ಜಿಯ ಕನಸಿಗೆ ಸಾಕಾರ ಕೊಡುತ್ತ ಭಾಷ್ಯಕಾರರಾದರು.

’ಮಂಗಳೂರು ನಮ್ಮದು, ನಮ್ಮದೀ ಊರು’ ಎಂದು ಕರಾವಳಿಯ ಜಾನಪದ ಕಲೆ ಯಕ್ಷಗಾನವನ್ನು ಮೈದುಂಬಿಸಿಕೊಂಡು ಆಡಿ, ಹಾಡಿ, ಬರೆಯುತ್ತ ಬಿಳಿಮಲೆ ಬೆಳೆಯುತ್ತಿರುವ ಇಂತಪ್ಪ ಕಾಲಕ್ಕೆ, ಅತ್ತ ಹಾಳು ಹಂಪೆಯ ’ಬಂಡೆಗಲ್ಲುಗಳ’ ನಡುವೆ ’ಹಂಪಿ ಕನ್ನಡ ವಿಶ್ವವಿದ್ಯಾಲಯ’ ಆರಂಭವಾಯಿತು. ಸಂಗ್ಯಾ ಬಾಳ್ಯಾ, ಜೈಸಿದನಾಯಕ, ಹೇಳತೇನ ಕೇಳ, ಶಿಖರ ಸೂರ್ಯ ಮುಂತಾದ ಕೃತಿಗಳ ಕರ್ತೃ ಜಾನಪದ ವಿದ್ವಾಂಸ ಡಾ. ಚಂದ್ರಶೇಖರ ಕಂಬಾರರು ಅದರ ಉಪಕುಲಪತಿಗಳು. ಅವರು ಡಾ. ಬಿಳಿಮಲೆಗೆ ’ನಿಮ್ಮಂಥವರು ಇಲ್ಲಿ ಕೆಲಸ ಮಾಡಲು ಬರಬೇಕು’ ಎಂದು ಆಹ್ವಾನಿಸಿದರು. ನಾಡಿನ ಅನೇಕ ಸೃಜನಶೀಲ ಪ್ರತಿಭೆಗಳು ಅಲ್ಲಿ ನೆರೆಯಲಾರಂಭಿಸಿದರು. ಕಂಬಾರರ ಕರೆಗೆ ಓಗೊಟ್ಟು ಬಿಳಿಮಲೆ 1992ರಲ್ಲಿ ಅಲ್ಲಿಗೆ ಹೋದರು. ಇಲ್ಲಿಂದ ಆರಂಭ ಈ ಪುರುಷೋತ್ತಮನ ಸಾಹಸದ ಕಿಷ್ಕಿಂಧಾಕಾಂಡ.

ಮಂಗಳೂರು ಬಿಡುವಾಗಲೇ ಕೆಲವು ಗೆಳೆಯರು ’ಕಂಬಾರರನ್ನು ನಂಬಬೇಡ’ ಎಂದದ್ದುಂಟು. ಆದರೆ ಅವರೆಂದ ಮಾತು, ಹೋದ 3-4 ವರ್ಷಗಳಲ್ಲೇ ಬಿಳಿಮಲೆಯವರ ಅನುಭವಕ್ಕೆ ಬಂತು. ’ಜೈಸಿದ ನಾಯಕ’ ನಾಟಕದಲ್ಲಿ ಜಡ ವ್ಯವಸ್ಥೆಯನ್ನು ವಿರೋಧಿಸಿ ಕ್ರಾಂತಿ ಮಾಡಿ ಅಧಿಕಾರದ ಗದ್ದುಗೆ ಏರಿದ ನಾಯಕನು ಕೆಲವೇ ದಿನಗಳಲ್ಲಿ ಆ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ತಾನೂ ಅದೇ ವ್ಯವಸ್ಥೆಯ ಭಾಗವಾಗಿ ಕ್ರೌರ್ಯಕ್ಕೆ ಇಳಿಯುವುದು ಅನಿವಾರ್ಯವಾಗಿ ಬಿಡುತ್ತದೆ. ಕುಲಪತಿ ಕಂಬಾರರ ನಿಜ ಜೀವನದಲ್ಲೂ ಈ ಬಗೆಯ ದ್ವಿದಳ ವ್ಯಕ್ತಿತ್ವ ಇಣುಕಿ ಬಿಡುತ್ತದೆ. ಹಿತ್ತಾಳೆ ಕಿವಿಯ ಅವರು ವಂದಿ ಮಾಗಧರ ಮಾತು ಕೇಳಿ ಪ್ರಾಮಾಣಿಕವಾಗಿಯೂ ನಿಷ್ಠೆಯಿಂದಲೂ ಕೆಲಸ ಮಾಡುತ್ತಿದ್ದ ಕೆಲವು ಸಹೋದ್ಯೋಗಿಗಳನ್ನು ಅವಜ್ಞೆಯಿಂದ ಕಾಣಲು ಪ್ರಾರಂಭಿಸುತ್ತಾರೆ. ’ಅನುಮಾನಂ ಪೆದ್ದ ರೋಗಂ’. ಇದನ್ನು ಮನಗಂಡು ಆತ್ಮ ಪ್ರತ್ಯಯವುಳ್ಳ ಕೆಲವು ವಿದ್ವಾಂಸರು ಜಾಗ ಖಾಲಿ ಮಾಡಿ ಬಿಡುತ್ತಾರೆ. ಕತ್ತೆ ದುಡಿಯುವಂತೆ ದುಡಿಯುತ್ತಿದ್ದ ಬಿಳಿಮಲೆಯ ಮೇಲೂ ಭ್ರಷ್ಟಾಚಾರದ ಹುತ್ತಕಟ್ಟಲಾರಂಭಿಸಿತು. ’ಮರ್‍ಯಾದಾಪುರುಷೋತ್ತಮ’ನಾದ ಇವರೂ ಅಲ್ಲಿಂದ ಜಾಗ ಖಾಲಿ ಮಾಡಲು ಹವಣಿಸುತ್ತಾರೆ. ಆದರೆ ಹಿಂದಿನ ವಿ.ವಿ.ಗೆ ರಾಜೀನಾಮೆ ಕೊಟ್ಟು ಬಂದಿದ್ದ ಕಾರಣ, ಮುಂದೇನು ಎಂಬ ಕವಲು ದಾರಿಯಲ್ಲಿ ಇವರು ನಿಲ್ಲುವಂತಾಗುತ್ತದೆ. ಹೀಗಿರುತ್ತ ಒಮ್ಮೆ ಬೆಂಗಳೂರಿನಲ್ಲಿ ನನಗೆ ಸಿಕ್ಕಿದ್ದ ಇವರು ’ಇಲ್ಲಿ ಎಲ್ಲಾದರೂ ಒಂದು ಮೇಷ್ಟ್ರು ಕೆಲಸ ಸಿಕ್ಕಿದರೂ ಬಿಟ್ಟು ಬಂದು ಬಿಡುತ್ತೇನೆ’ ಎಂದದ್ದುಂಟು.

ಬಾಲ್ಯದಲ್ಲಿ ವಾಟೆಕಜೆ ಗೂಡಿನ ಮನೆಯಲ್ಲಿ ಎಳೆಯ ಹುಡುಗನನ್ನು ಅವರ ಅಮ್ಮ ಒಳಗೆ ಬಿಟ್ಟು ಬಾಗಿಲು ಮುಚ್ಚಿ ಕಾಡಿನ ಕೆಲಸಕ್ಕೆ ಹೋಗುತ್ತಿದ್ದರು.

ಒಳಗೆ ಕತ್ತಲಾದ ಕೂಡಲೆ ಸಂದುಗೊಂದಿನಿಂದ ಇಲಿಗಳು ನುಗ್ಗಿ ಮೈಮೇಲೆ ಹಾರುತ್ತಿದ್ದವು. ಅವುಗಳ ಓಡಾಟವನ್ನು ಕಂಡು ದಿಗಿಲಾದರೂ ಹುಡುಗ ಖುಷಿ ಪಡುತ್ತಿದ್ದನಂತೆ; ಹಿಡಿಯಲು ಪ್ರಯತ್ನಿಸುತ್ತಿದ್ದನಂತೆ. ಆದರೆ ಅವು ಎಂದೂ ಇವನನ್ನು ಪರಿಗಣಿಸಲೇ ಇಲ್ಲ (ಪುಟ 25) ಎಂದು ಬರೆಯುತ್ತಾರೆ. ಎಳೆಯಂದಿನ ಇಂಥ ಪ್ರತಿಕೂಲ ಸನ್ನಿವೇಶವೇ ಹಂಪಿಯಲ್ಲೂ ಉದ್ಭವವಾಯಿತು. ಹಾಗೂಹೀಗೂ ಹಂಪಿಯಲ್ಲಿ ಆರು ವರ್ಷ ಕಳೆದರು.

ಹೀಗಿರುತ್ತ, 1998ರಲ್ಲಿ ದೆಹಲಿಯ ’ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್’ ಎಂಬ ವಿದೇಶಿ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತು. ಹಂಪಿಗೆ ವಿದಾಯ ಹೇಳಿ ದೆಹಲಿಗೆ ಹೊರಟರು. ಅದರಲ್ಲಿ 16 ವರ್ಷಗಳ ಕಾಲ ದುಡಿದು ಆ ಸಂಸ್ಥೆಯನ್ನು ಕಟ್ಟಿದರು. ವಿದೇಶಗಳಲ್ಲಿ ಕನ್ನಡ ಜಾನಪದ ಸೊಗಡಿನ ವಕ್ತಾರನಾಗಿ ಸಾಂಸ್ಕೃತಿಕ ರಾಯಭಾರಿಯಾಗಿ ಓಡಾಡಿದರು. ಹೋದಲ್ಲಿ ಬಂದಲ್ಲಿ ಕರಾವಳಿಯ ಯಕ್ಷಕಲೆ ಯಕ್ಷಗಾನದ ಬಗ್ಗೆ ಪ್ರಾತ್ಯಕ್ಷಿಕೆ, ಪ್ರಚಾರೋಪನ್ಯಾಸಗಳನ್ನು ಏರ್ಪಡಿಸಿದರು. ಹೀಗೆ ಬಂಟಮಲೆಯ ಈ ಬಂಟ ಮಂಗಳೂರನ್ನು ಹಿಂದಕ್ಕೆ ಬಿಟ್ಟು, ರಾಜ್ಯ, ರಾಷ್ಟ್ರದ ಗಡಿ ದಾಟಿ ಜಾನಪದ ವಿದ್ವಾಂಸನಾಗಿ ಅಮೆರಿಕ, ಜಪಾನ್, ಇಸ್ರೇಲ್ ಮುಂತಾದ ದೇಶ ವಿದೇಶಗಳನ್ನು ದಣಿವರಿಯದೆ, ಆಶೆ ಕನಸನ್ನು ಹೊತ್ತು ಸುತ್ತಿದರು. ದಿನೇಶ್ ಅಮೀನ್ ಮಟ್ಟು ಹೇಳುವಂತೆ ಬಿಳಿಮಲೆ ಪಯಣ ಎಂದರೆ ’ಟೂರಿಸ್ಟ್ ಗೈಡ್ ಇದ್ದಂತೆ. ಇವರೊಂದು ಜಂಗಮ ಜಾನಪದ ವಿಶ್ವವಿದ್ಯಾಲಯ.

ಇವರ ಮುಂಗಾಣ್ಕೆ ಜೆ.ಎನ್.ಯುನಲ್ಲಿ ಕನ್ನಡದ ಪೀಠವನ್ನು ಸುಸ್ಥಿರಗೊಳಿಸಿತು. ಹಾಗೂ ಜಪಾನ್ ಮುಂತಾದ ದೇಶಗಳಲ್ಲಿ ಕನ್ನಡ ಯಕ್ಷಗಾನ ಬಯಲಾಟಕ್ಕೆ ವಿಶೇಷ ಮಾನ್ಯತೆ ತಂದಿತು. ಆದರೂ ಕೆಲವು ಅಸೂಯಾಪರರು ಬಿಳಿಮಲೆಯನ್ನು ’ಅಮೆರಿಕನ್ ಏಜೆಂಟ್’ ಎಂದು ಮರೆಯಲ್ಲಿ ಗೊಣಗಿದ್ದುಂಟು. ಬಾಲ್ಯದಲ್ಲಿ ಕಾಡಿನ ಪ್ರಾಣಿಗಳನ್ನು ಎದುರಿಸಿ ಬೆಳೆದ ಇವರಿಗೆ ಕಾಂಕ್ರೀಟ್ ಕಾಡಿನ ’ವನ್ಯಮೃಗ’ಗಳನ್ನು ಎದುರಿಸುವ ಧೈರ್ಯ ತಾನಾಗಿಯೆ ಬಂದಿರಬೇಕು. ಬಡತನವನ್ನು ಉಂಡು ಮಲಗಿದವರಿಗೆ ಸುಖದ ಸುಪ್ಪತ್ತಿಗೆಯಲ್ಲಿ ಮಲಗಿದರೆ ನಿದ್ದೆ ಹತ್ತದು. ವರನಟ ಡಾ. ರಾಜ್‌ಕುಮಾರ್ ಸದಾ ನೆಲದ ಮೇಲೆ ಒಂದು ಚಾಪೆ ಹಾಸಿ ರಗ್ಗು ಹೊದ್ದು ನಿರಾಳ ನಿದ್ರಿಸುತ್ತಿದ್ದರಂತೆ. ಬಿಳಿಮಲೆಯವರು ಸಹ ವಿದೇಶೀ ಹೈಟೆಕ್ ಹೋಟೆಲ್ ’ಗಿಲ್ಪಗಳ’ ಮೇಲೆ ನಿದ್ದೆಬಾರದೆ ನೆಲಕ್ಕೆ ರಗ್ಗು ಹಾಸಿ ನಿದ್ದೆ ಹೋಗುತ್ತಿದ್ದೆನೆಂದು ಹೇಳಿಕೊಂಡಿದ್ದಾರೆ. ಸರಳಜೀವನ ಉನ್ನತ ಚಿಂತನ ಇರುವವಂಥವರ ನಡೆ ಇದು.

’ದೇವರು ಮತ್ತು ದೇವ ಮಾನವರು’ ಎಂಬ ಭಾಗ ಬಿಳಿಮಲೆಯ ವಿಚಾರಧಾರೆ ಏನೆಂಬುದನ್ನು ಸ್ಪಷ್ಟಪಡಿಸುತ್ತದೆ. ಈ ನೆಲೆಯಲ್ಲಿ ಬಿಳಿಮಲೆ ಶಿವರಾಮಕಾರಂತ ಹಾಗೂ ಕುವೆಂಪು ಅವರ ವಾರಸುದಾರರು. ಇವರು ಎಳವೆಯಿಂದಲೂ ಇಲ್ಲಿಯವರೆಗೆ ಈ ಜಾತಿ, ಮತ, ದೇವರು ಧರ್ಮ, ಭೂತ, ಪಿಶಾಚಿ, ಜ್ಯೋತಿಷ್ಯ, ಪಂಚಾಂಗ, ಜಾತಕ, ಮಾಟ, ಮಂತ್ರ, ಬ್ರಹ್ಮ ರಾಕ್ಷಸ, ಪುನರ್ಜನ್ಮ ಮುಂತಾದವುಗಳಲ್ಲಿ ನಂಬಿಕೆ ಇಟ್ಟವರಲ್ಲ. ಇವೆಲ್ಲವೂ ಪರಾವಲಂಬಿ ಪುರೋಹಿತವರ್ಗ ಹುಟ್ಟುಹಾಕಿದ ಮಹಾನ್ ಮೌಢ್ಯಗಳು ಎಂಬುದು ಇವರ ಖಚಿತ ನಿಲುವು. ಉದರ ನಿಮಿತ್ತ ಬಹುಕೃತ ವೇಷ ಧರಿಸುವ ಜರತಾರಿ ಜಗದ್ಗುರುಗಳಲ್ಲಿ ಇವರಿಗೆ ಕಿಂಚಿತ್ತೂ ನಂಬಿಕೆ ಇಲ್ಲ. ಪೆದ್ದುಪೆದ್ದಾಗಿ ಅವರು ಮಾತಾಡುವುದನ್ನು ನೋಡಿ ನನಗೆ ನಗೆ ಬರುತ್ತದೆ ಎನ್ನುತ್ತಾರೆ. ಅದೆಲ್ಲಾ ಅಮಾಯಕ ಜನಕೋಟಿಯನ್ನು ವಂಚಿಸುವ ವಿಧಾನ. ಕುವೆಂಪು ಅವರ ’ಮನುಜ ಮತ ವಿಶ್ವ ಪಥ’ ಇವರ ಆದರ್ಶ.

ಡಾ. ಪುರುಷೋತ್ತಮ ಬಿಳಿಮಲೆಯವರ ಖಾಸಗಿ ಜೀವನದ ಬಗ್ಗೆ ಒಂದಿಷ್ಟು; ಕುವೆಂಪು ’ಕರಿಸಿದ್ದ’ ಎಂಬ ಕಥನ ಕವನದಲ್ಲಿ ನಿರ್ವಚಿಸಿರುವಂತೆ, ’ಒಬ್ಬೊಬ್ಬ ಗಂಡನಲಿ ಶ್ರೀರಾಮನಡಗಿಹನು; ಒಬ್ಬೊಬ್ಬ ಹೆಂಡತಿಯ ಎದೆಯೊಳಿರುವಳು ಸೀತೆ’ ಎಂಬ ಮಾತಿಗೆ ಭಾಷ್ಯ ಬರೆದಂತಿದೆ ಬಿಳಿಮಲೆ ಮತ್ತು ಶೋಭನಾ, ಇವರ ದಾಂಪತ್ಯ. ಯಮಧರ್ಮನಿಂದ ’ಸತ್ಯವಾಹನ’ನನ್ನು ’ಸಾವಿತ್ರಿ’ ಉಳಿಸಿಕೊಂಡಳು ಎಂಬುದು ಪುರಾಣ ಕತೆ. ಆದರೆ ಯೌವ್ವನದಲ್ಲಿ ಬಿಳಿಮಲೆಗೆ ಹೃದಯವನ್ನು ಕೊಟ್ಟ ಶೋಭನಾ, ಬಿಳಿಮಲೆಯವರ ’ಕಿಡ್ನಿ ಫೇಲ್’ ಆದಾಗ ತನ್ನ ಒಂದು ಕಿಡ್ನಿಯನ್ನೇ ಕೊಟ್ಟು ಗಂಡನನ್ನು ಉಳಿಸಿಕೊಂಡಿರುತ್ತಾರೆ. ಆತ್ಮಚರಿತ್ರೆಯ ’ಕಿಡ್ನಿ ಕಸಿ’ ಭಾಗವನ್ನು ಓದಿದ ಯಾರಿಗಾದರೂ ’ಇಂತಪ್ಪವರುಂ ವಳರೇ’ ಎಂದು ಕಣ್ಣು ಒದ್ದೆಯಾಗದೆ ಇರದು. ಜಾಗತಿಕ ಪ್ರೇಮ ಕಥಾ ಸಾಹಿತ್ಯದಲ್ಲಿ ’ಕಾಗೆ ಮುಟ್ಟಿದ ನೀರು’ ಆತ್ಮಕತೆಗೆ ಒಂದು ವಿಶಿಷ್ಟ ಸ್ಥಾನ ಉಂಟು.

ಕೊರೊನಾ ವೈರಸ್ಸಿಗಿಂತಲೂ ಭಯಂಕರವಾದ ಜಾತಿ ವೈರಸ್ಸಿನ ಈ ಕಾಲಘಟ್ಟದಲ್ಲಿ ’ಕಾಗೆ ಮುಟ್ಟಿದ ನೀರು’ ಆತ್ಮಕತೆಯನ್ನು ಬರೆದ ಪುರುಷೋತ್ತಮ ಬಿಳಿಮಲೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇಂಥ ಒಂದು ಕೃತಿಯನ್ನು ಪ್ರಕಟಿಸಿದ ಅಹರ್ನಿಶಿ ಪ್ರಕಾಶನದ ಅಕ್ಷತಾ ಅವರಿಗೂ ಸಹ ಸವಿ ನೆನಪುಗಳು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಅವರ ಪುಸ್ತಕಗಳಲ್ಲಿ ಕೆಲವು.


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...