Homeಕರ್ನಾಟಕ"12ನೇ ಶತಮಾನದ ಕಲ್ಯಾಣವನ್ನು ಕತೆಗಳಲ್ಲಾದರೂ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿದ್ದೇನೆ"; ಕತೆಗಾರ ಅಮರೇಶ್ ನುಗಡೋಣಿ ಸಂದರ್ಶನ

“12ನೇ ಶತಮಾನದ ಕಲ್ಯಾಣವನ್ನು ಕತೆಗಳಲ್ಲಾದರೂ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿದ್ದೇನೆ”; ಕತೆಗಾರ ಅಮರೇಶ್ ನುಗಡೋಣಿ ಸಂದರ್ಶನ

- Advertisement -
- Advertisement -

ಕನ್ನಡದ ಹೆಸರಾಂತ ಕತೆಗಾರರು ಮತ್ತು ಲೇಖಕರಾದ ಅಮರೇಶ್ ನುಗಡೋಣಿ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನವರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಳೆದ 30 ವರ್ಷಗಳಿಂದ ಕನ್ನಡ ಪ್ರಾಧ್ಯಾಪಕರಾಗಿದ್ದರು. ಈಚೆಗಷ್ಟೇ ವಿಶ್ವವಿದ್ಯಾಲಯದ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಆದರೆ ಬರೆಯುವ ಪ್ರವೃತ್ತಿಯಿಂದ ನಿವೃತ್ತರಲ್ಲ; ನುಗಡೋಣಿಯವರು ಕನ್ನಡದ ವಿಶಿಷ್ಟ ಕತೆಗಾರರು; ಅವರು ’ಮಣ್ಣು ಸೇರಿತು ಬೀಜ’ ಕಥಾಸಂಕಲನದ ಮೂಲಕ ಕನ್ನಡ ಕಥಾಲೋಕವನ್ನು ಪ್ರವೇಶಿಸಿದರು. ಇಲ್ಲಿಯವರೆಗೆ ’ತಮಂಧದ ಕೇಡು’, ’ಒಡಲ ಹಂಗು’, ’ಸವಾರಿ’, ’ಚುಕ್ಕಿ ಮದುವೆ ಪ್ರಸಂಗ’, ಹಾಗೂ ’ದಡ ಸೇರಿಸು ತಂದೆ’ ಎಂಬ ಕಥಾ ಸಂಕಲನಗಳು ಪ್ರಕಟವಾಗಿವೆ. ಇತ್ತೀಚೆಗೆ ಅವರ ’ದಂದುಗ’ ಮತ್ತು ’ಗೌರಿಯರು’ ಎಂಬ ಕಾದಂಬರಿಗಳು ಕೂಡ ಬಂದಿವೆ. ಈ ಹಿನ್ನೆಲೆಯಲ್ಲಿ ನುಗಡೋಣಿ ಅವರನ್ನು ಸುಭಾಷ್ ರಾಜಮಾನೆಯವರು ಸಂದರ್ಶಿಸಿದ್ದಾರೆ.

ಸುಭಾಷ್ ರಾಜಮಾನೆ: ಬರೆದರೆ ಸಣ್ಣ ಕಥೆಗಳನ್ನೇ ಬರೆಯಬೇಕು ಹಾಗೂ ಕತೆಯೇ ನಿಮ್ಮ ಅತ್ಯುತ್ತಮ ಸೃಜನಶೀಲ ಅಭಿವ್ಯಕ್ತಿ ಅಂತ ನೀವು ಕಂಡುಕೊಂಡಿದ್ದು ಹೇಗೆ?

ಅಮರೇಶ್ ನುಗಡೋಣಿ: ಈ ಪ್ರಶ್ನೆಗೆ ಉತ್ತರ ಸ್ವಲ್ಪ ಕಷ್ಟ. ನಾನು ಕತೆ ಬರಿಬೇಕು ಅಥವಾ ಸಾಹಿತ್ಯದ ಯಾವುದೋ ಒಂದು ಪ್ರಕಾರದಲ್ಲಿ ಬರಿಬೇಕು ಅನ್ನುವ ಕನಸು ಕಂಡಿರಲಿಲ್ಲ. ಅಂತಹ ವಾತಾವರಣ ಕೂಡ ನಮ್ಮಲ್ಲಿ ಇರಲಿಲ್ಲ. ನಾನು ಚಿಕ್ಕ ಹಳ್ಳಿಯಲ್ಲಿ ಮತ್ತು ವ್ಯವಸಾಯದ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ನಮ್ಮ ಮನೆಯಲ್ಲಿ ಸಣ್ಣ ಮಟ್ಟದ ಓದಿದ್ದರೂ ಸಾಹಿತ್ಯ ಲೋಕದಲ್ಲಿ ಯಾರೂ ಇರಲಿಲ್ಲ. ಸಾಹಿತ್ಯ ಓದುವ ವಾತಾವರಣವು ಇರಲಿಲ್ಲ.

ಪ್ರಶ್ನೆ: ನಿಮ್ಮನ್ನು ಕತೆಗಾರನನ್ನಾಗಿ ರೂಪಿಸಿದ ವಾತಾವರಣ ಹೇಗಿತ್ತು?

ನುಗಡೋಣಿ: ನಮ್ಮೂರಲ್ಲಿ ಸ್ಕೂಲು ಇರಲಿಲ್ಲ. ಬಸವನಬಾಗೇವಾಡಿಯಲ್ಲಿ ನಾನು ಒಂದನೇ ಕ್ಲಾಸು ಓದಿದ್ದು. ಏಳನೇ ಕ್ಲಾಸು ಪಾಸಾದ ಮೇಲೆ ಎಂಟನೇ ಕ್ಲಾಸು ಓದೋಕೆ ಹೈಸ್ಕೂಲು ಬೇರೆ ಊರಲ್ಲಿ ಇತ್ತು. ನಮ್ಮೂರಿಂದ ಅಲ್ಲಿಗೆ ಹೋಗೋಕೆ ಆಗಲಿಲ್ಲ. ಹೋಗ್ಬೇಕು ಅನ್ನೋವಷ್ಟರಲ್ಲಿ ಆಗಲೇ ಇಲ್ಲ. ಆಗ ಒಂದು ವರ್ಷ ಖಾಲಿ ಕೂತಿದ್ನಲ್ವ, ಅವಾಗ ಕೂಡ ನನಗೆ ಓದುವುದಕ್ಕೆ ಮನೆಯಲ್ಲಿ ಪುಸ್ತಕಗಳು ಇರಲಿಲ್ಲ. ಅಂತದ್ರಲ್ಲಿ ನಮ್ಮೂರಲ್ಲಿ ಅಧ್ಯಾತ್ಮ ಜೀವಿಯೊಬ್ಬರು ತಮ್ಮಪಾಡಿಗೆ ತಾವು ಪುಸ್ತಕಗಳನ್ನು ಓದುತ್ತಿದ್ದರು. ನನ್ ಹತ್ರ ಕೆಲವು ಪುಸ್ತಕ ಇವೆ. ಕೊಡ್ತೀನಿ ಓದ್ತೀ ಅಂತ ಕೇಳಿದ್ರು. ಕೊಡ್ರಿ ಅಂದೆ ನಾನು. ಅವರು ಕೆಲವು ಪುಸ್ತಕಗಳನ್ನು ತಂದು ಕೊಟ್ರು. ಅವು ಅರವಿಂದ, ರಾಮಕೃಷ್ಣ ಪರಮಹಂಸ ಮತ್ತ ವಿವೇಕಾನಂದರ ಪುಸ್ತಕಗಳಾಗಿದ್ದವು. ಅವುಗಳಲ್ಲಿ ಒಂದು ಹರಿದು
ಹೋಗಿರುವ ಪುಸ್ತಕ ’ಕಾನೂರು ಸುಬ್ಬಮ ಹೆಗ್ಗಡಿತಿ’ ಅಂತ ಇತ್ತು. ಅದರ ಮ್ಯಾಲಿನ ಹೆಸರು ಕುವೆಂಪು ಅಂದ್ರೆ ಏನು ಅಂತ ಗೊತ್ತಿರಲಿಲ್ಲ. ಆ ದಿನಗಳಲ್ಲಿ ಸುಮ್ಮನೆ ಓದಿದೆ. ಓದಿದ ಮೇಲೆ ನನಗೆ ನಮ್ಮೂರಲ್ಲೇ ಇಂತಹ ಜೀವನ ವಿಧಾನ ಇದೆ. ಅದ್ರೆ ಪರಿಸರ ಮಾತ್ರ ಬೇರೆ. ನಮ್ಮದು ಗಿಡ ಮರಗಳಿಲ್ಲದ ಹಳ್ಳಕೊಳ್ಳಗಳಿಲ್ಲದ ಬಯಲುಸೀಮೆ. ಆದ್ರೆ ಕುವೆಂಪು ಅವರ ಕಾದಂಬರಿಯನ್ನು ಎರಡು ಸಲ ಓದಿದ ಮೇಲೆ ಇವುಗಳನ್ನು ಯಾಕೆ ನಾನೂ ಬರೀಬಾರದು ಅಂತ ನನ್ನ ಮನಸ್ಸಿನಲ್ಲಿ ಪ್ರಥಮವಾಗಿ ಹುಟ್ಟಿದ್ದು.

ಪ್ರಶ್ನೆ: ನೀವು ಮೊದಲು ಓದಿದ ಸಾಹಿತ್ಯ ಕೃತಿಯೆಂದರೆ ಕುವೆಂಪು ಕಾದಂಬರಿಯೇ?

ನುಗಡೋಣಿ: ಹೌದು. ಆಮೇಲೆ ನಮ್ಮ ಮನೆಯ ಹಳೆಯ ಅಟ್ಟದಲ್ಲಿ ರಾಜಶೇಖರ ನೀರಮಾನ್ವಿಯವರ ’ಹಂಗಿನರಮನೆ’ ಪುಸ್ತಕ ಬಿದ್ದಿತ್ತು. ಅದನ್ನು ತೆಗೆದು ಓದಿದೆ. ನನಗೆ ಬಹಳ ಪ್ರೇರಣೆ ನೀಡಿದ ಪುಸ್ತಕ ಅದು. ಅದಾದಮೇಲೆ ಶಾಂತರಸರು ನನಗೆ ಮೇಷ್ಟ್ರು. ಅವರ ’ಬಡೆಸಾಬು ಪುರಾಣ’ ಆಗಷ್ಟೇ ಪ್ರಕಟ ಆಗಿತ್ತು. ನಾನು ಪಿಯುಸಿ ವಿದ್ಯಾರ್ಥಿ ಆಗಿದ್ದಾಗ ನನಗೆ ಪ್ರಿಯ ವಿದ್ಯಾರ್ಥಿ ಅಂತ ಬರೆದು ಕೊಟ್ಟಿದ್ರು.

ಪ್ರಶ್ನೆ: ನಿಮಗೆ ಕಥೆಗಳನ್ನು ಬರೆಯಬೇಕು ಅನ್ನಿಸಿದಾಗ ನಿಮ್ಮ ಕಣ್ಮುಂದೆ ಇದ್ದವರು ಶಾಂತರಸರು ಮತ್ತು ರಾಜಶೇಖರ ನೀರಮಾನ್ವಿಯವರೇ?

ನುಗಡೋಣಿ: ಎಂ.ಎ. ಓದುವಾಗ ಮಾಸ್ತಿ ಅವರ ಸಣ್ಣ ಕಥೆಗಳು ಟೆಕ್ಸ್ಟ್ ಆಗಿತ್ತು. ಬಿ.ಎ.ನಲ್ಲೇ ಮಾಸ್ತಿಯವರ ಕಥೆಗಳನ್ನ ಕೃಷ್ಣಮೂರ್ತಿ ಕಿತ್ತೂರ್ ಮಾಷ್ಟ್ರು ಪಾಠ ಮಾಡುತ್ತಿದ್ದರು. ಒಂದು ಸಲ ಪಾಠ ಮುಗಿಸಿದಮೇಲೆ ಈ ಕಥೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದ್ರು. ಅವಾಗ ನಾಲ್ಕೈದು ವಾಕ್ಯಗಳನ್ನು ಹೇಳಿದೆ. ನಿನ್ನ ಗ್ರಹಿಕೆ ಚೆನ್ನಾಗಿದೆ. ನಾಳೆ ನೀನೇ ಇನ್ನೊಂದು ಕಥೆಯನ್ನು ಓದಿ ಅದರ ಬಗ್ಗೆ ಮಾತಾಡು ಅಂತ ಹೇಳಿದ್ರು. ಹತ್ತು ನಿಮಿಷ ಮಾತಾಡಿದೆ. ಆಗ ಅವರು ಹತ್ತು ಕಥೆಗಳನ್ನು ನೀನೇ ಮಾಡು ಅಂದ್ರು. ಎಲ್ಲೆಲ್ಲಿ ತಪ್ಪಿರುತ್ತೆ ಅಲ್ಲಿ ತಿದ್ದುತೀನಿ ಅಂತ ಹೇಳಿ ಆ ಕಥೆಗಳನ್ನ ಅವರು ನನ್ನಿಂದ ಪಾಠ ಮಾಡಿಸಿದ್ರು. ಕಾದಂಬರಿ ಅನ್ನುವ ಪತ್ರಿಕೆಯಲ್ಲಿ ಒಂದಿಪ್ಪತ್ತು ಕಾದಂಬರಿಗಳನ್ನು ಓದಿದ ಮತ್ತು ಇಪ್ಪತ್ತು ಇಪ್ಪತೈದು ಕಥೆಗಳನ್ನು ಓದಿದ ಬಂಡವಾಳ ಬಿಟ್ರೆ ನನಗೆ ಸಾಹಿತ್ಯದ ಬೇರೆ ಯಾವುದೇ ಓದು ಇರಲಿಲ್ಲ. ಸಾಹಿತ್ಯ ಲೋಕದ ಅಥವಾ ಸಾಹಿತಿಗಳ ಪರಿಚಯವೂ ಇದ್ದರಲಿಲ್ಲ.

ಪ್ರಶ್ನೆ: ಹಾಗಾದರೆ ಒಳ್ಳೆಯ ಕಥೆಗಳನ್ನು ಬರೆಯಬಲ್ಲೆ ಅನ್ನುವಂತಹ ಆತ್ಮವಿಶ್ವಾಸ ನಿಮ್ಮಲ್ಲಿ ಮೂಡಿದ್ದು ಹೇಗೆ?

ನುಗಡೋಣಿ: ನಮ್ಮ ಊರಿನಲ್ಲೇ ಬೇಕಾದಷ್ಟು ಕಥೆಗಳಿದ್ದವು. ಅಕ್ಷರದಲ್ಲಿ ತರಬೇಕಲ್ವ. ಫಿಕ್ಷನ್‌ನಲ್ಲಿ ಬರಿಬೇಕಲ್ವಾ ಅನ್ನಿಸಿ ಬರೆಯೋಕ್ಕೆ ಪ್ರಾಕ್ಟಿಸ್ ಮಾಡಿದಾಗ ಒಂದೆರಡು ಪುಟ ಬರೆಯೋಕೆ ಎರಡು-ಮೂರು ದಿನ ಹಿಡಿಯುತ್ತಿತ್ತು. ಒಂದೊಂದು ಸಂಭಾಷಣೆ ಬರಿಬೇಕಾದ್ರು ಯೋಚನೆ ಮಾಡ್ತಿದ್ದೆ. ಹಿಂಗಾಗಿ ದೀರ್ಘವಾದ ಕಾದಂಬರಿಗಳನ್ನ ಬರಿಯುವುದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು ಅನ್ನಿಸಿಬಿಡ್ತು. ಅವಾಗ ಕಥೆ ಬರಿಬಹುದಲ್ಲ ಅಂತ ಯೋಚನೆ ಮಾಡ್ದೆ. ಅದಕ್ಕಾಗಿ ತಿಂಗಳುಗಟ್ಟಲೇ ಹತ್ತು ಪುಟ ಬರಿತ್ತಿದ್ದೆ. ಮತ್ತೆ ತಿಂಗಳುಗಟ್ಟಲೇ ಆ ಕಥೆಯನ್ನು ತಿದ್ದುತ್ತಿದ್ದೆ. ನನಗೆ ಪತ್ರಿಕೆಗೆ ಕಳುಹಿಸಬೇಕು ಅನ್ನುವ ಬಗ್ಗೆ ಏನೂ ಗೊತ್ತಿರಲಿಲ್ಲ. ’ಪ್ರಜಾವಾಣಿ’ ಪತ್ರಿಕೆ ಇದೆ ಅಂತ ಗೊತ್ತಾಗಿದ್ದೆ ನಾನು ಬಿ.ಎ.ಗೆ ಬಂದಾಗ.

ನಾನು ಎಂ.ಎ. ಮುಗಿಸಿದ ಮೇಲೆ ಬರೆದ ಮೊದಲು ಕತೆಯೇ ’ಮಣ್ಣು ಸೇರಿತು ಬೀಜ’. ಆದನ್ನ ಶಾಂತರಸ ಅವರಿಗೆ ಓದಲು ಕೊಟ್ಟೆ. ನನ್ನ ಅಕ್ಷರಗಳು ಅಷ್ಟೊಂದು ಸುಂದರವಾಗಿರಲಿಲ್ಲ. ಅವರು ಓದಿ ಚೆನ್ನಾಗಿ ಬರೀತಿ ಅಂದ್ರು. ಅದೇ ವಾರ ಬೇರೆ ಯಾವುದೋ ಕಾರ್ಯಕ್ರಮಕ್ಕೆ ಚಂದ್ರಶೇಖರ್ ಪಾಟೀಲರು ಬಂದಿದ್ರು. ಶಾಂತರಸರು ನನ್ನನ್ನ ಚಂಪಾ ಅವರಿಗೆ ಪರಿಚಯ ಮಾಡಿಸಿದ್ರು. ನನ್ನ ಮೊದಲ ಕತೆ ಒಂದೆರಡು ತಿಂಗಳಾದ ಮೇಲೆ ’ಸಂಕ್ರಮಣ’ದಲ್ಲಿ ಬಂತು. ಚಂಪಾ ಅವರು ನನಗೆ ’ಸಂಕ್ರಮಣ’ಕ್ಕೆ ಚಂದಾದಾರನಾಗು ಅಂದ್ರು ಮತ್ತು ನನ್ನ ಓದುವ ಗೆಳೆಯರನ್ನೆಲ್ಲ ಚಂದಾ ಮಾಡಿಸು ಅಂದ್ರು. ನಾನೇನ್ ಮಾಡಿದೆ ಅಂದ್ರ ಊರಿಗೆ ಹೋಗಿ, ಅಲ್ಲಿ ಓದಿರುವ ಹತ್ತು ಹನ್ನೆರಡು ರೈತರಿಂದ ಆಜೀವಾ ಚಂದಾ ಮಾಡಿಸಿಕೊಟ್ಟೆ. ಆ ಕತೆ ಬಂದ ಸಂಚಿಕೆಯನ್ನ ಅವರೆಲ್ಲ ಓದಿದ್ರು.

ಪ್ರಶ್ನೆ: ಆಗ ಓದುಗರ ಪ್ರತಿಕ್ರಿಯೆ ಹೇಗಿತ್ತು?

ನುಗಡೋಣಿ: ನಮ್ಮೂರಲ್ಲಿ ಬಸವಣ್ಣದೇವರ ಗುಡಿಯಾಗ ನನ್ನ ಪ್ರಕಟಿತ ಕಥೆಯನ್ನ ಒಬ್ಬ ಓದೋದು ಮತ್ತು ಹತ್ತು ಮಂದಿ ಕೇಳದು. ಕೇಳಿದ್ಮೇಲೆ ಏನಾಗ್ಬಿಡ್ತು. ನಮ್ದ ಯಾಕ್ ಬರ್‍ದಾನು ಅಂತ ಶುರು ಮಾಡಿಬಿಟ್ಟರು. ಇದು ನಮ್ಮೂರ್‍ದೆ ಕತೆ, ಎಲ್ಲ ಜೀವಂತ ಪಾತ್ರಗಳು, ಜೀವಂತ ಓಣಿಗಳು, ಜೀವಂತ ಮನುಷ್ಯರು. ಅವರು ಮಾಡಿದ ಹಾದರ, ಅವರು ಮಾಡಿದ ಬೇರೆ ಕೆಲಸ ಎಲ್ಲಾ ಬರೆದಿದ್ದೆ. ಪಾಪ ಅವರಿಗೆ ನೋವಾಗುತ್ತಲ್ಲ ಎಂದು ಮನಸ್ಸಿಗೆ ತಟ್ಟಿತು. ಶಾಂತರಸರಿಗೆ ಇದನ್ನೆಲ್ಲ ಹೇಳಿದೆ. ಇಲ್ಲಪ ಹೆಸರನ್ನೆಲ್ಲ ಬದಲಿ ಮಾಡಬೇಕು. ನಿನ್ನ ಊರೆಸರು ಇದ್ರೆ ನಡೆಯುತ್ತೆ. ಅವರು ಹೇಳಿದಂಗೆ ಎರಡನೆ ಕತೆ ಬರಿಯೋ ಕಾಲಕ್ಕ ಮೊದಲಿಗೆ ನಿಜವಾದ ಪಾತ್ರದ ಹೆಸರು ಇಟ್ರೆ ಕಥೆ ಸರಾಗವಾಗಿ ಬರೆಯಕ್ಕ ಆಗ್ತಾ ಇತ್ತು. ಕೃತಕ ಹೆಸರು ಇಡೋದರಿಂದ ನನಗೆ ಬರೆಯೋಕೆ ಬರುತ್ತಿರಲಿಲ್ಲ. ಇದೊಂದು ಸಮಸ್ಯೆ ಆಗ್ಬಿಡ್ತು.

ಆಗ ಶಾಂತರಸರು ಏನ್ ಹೇಳಿದ್ರು ಮೊದಲು ಅವರದ್ದೇ ಹೆಸರಿಟ್ಟು ಕಥೆ ಬರಿ. ಆಮೇಲೆ ಪಾತ್ರದ ಹೆಸರು ಚೇಂಜ್ ಮಾಡು. ಆ ಟೆಕ್ನಿಕ್ ಸಕ್ಸೆಸ್ ಆಯ್ತು. ನನ್ನ ಎರಡನೇ ಕತೆಯನ್ನೂ ಶಾಂತರಸರೆ ಓದಿ ’ತರಂಗ’ ಪತ್ರಿಕೆಗೆ ಕಳುಹಿಸಿದ್ರು. ಅದು ಒಬ್ಬ ಹಜಾಮ ಹುಡುಗನ ಕತೆ. ಅದನ್ನು ಊರೋರು ಓದಿಬಿಟ್ರು. ಯಾರನ್ನು ಕುರಿತು ಬರೆದಿದ್ದೆನೋ ಅವರ ಮಗ ’ತರಂಗ’ವನ್ನ ತನ್ನ ಲುಂಗಿಯಲ್ಲಿ ಇಟ್ಟುಕೊಂಡು ಬಂದ. ನಮ್ಮಪ್ಪನ್ನ ಬರೆದು ಬಿಟ್ಟಿದ್ದಿರ ಅಂತಂದ. ಆದರೆ ಏನ್ ಆಯ್ತು ಅಂದೆ. ಅದರಲ್ಲಿ ಮಿಸ್ಟೇಕು ಆಗಿದೆ ಅಂದ. ನಮ್ಮಪ್ಪಗೆ ಇನ್ನೊಂದು ಹೆಣ್ಣಿನ ಸಂಬಂಧ ಇರೋದು ಬರೆದಿದ್ದೀರಿ. ಮತ್ತೆ ನಾವು ಯಾರೂ ಮಾಂಸ ತಿನ್ನಲ್ಲ ಸಾರ್. ಆದರೆ ಮಾಂಸ ತಿಂತಿವಿ ಅಂತ ಬರೆದುಬಿಟ್ಟಿದ್ದೀರಿ ಅಂತ ಪ್ರಶ್ನಿಸಿದ. ಅವನು ಪೆನ್ಸಿಲ್ ತಗೊಂಡು ಬಂದಿದ್ದ. ಈ ’ತರಂಗ’ದಲ್ಲಿ ನಮ್ಮಪ್ಪಂಗೆ ಇನ್ನೊಂದು ಸಂಬಂಧ ಐತೆ ಅಂದೀರಲ್ರಿ ಅದನ್ನು ಕಾಟ್ ಹಾಕ್ರಿ ಅಂದ. ಅವನ ಮುಂದೆ ಕಾಟ್ ಹಾಕ್ದೆ. (ನಗು) ಈ ತರ ಆದಮೇಲೆ ಸ್ವಲ್ಪ ನಾನು ಸಾಹಿತ್ಯ ಹೆಂಗೆ ಬರೀಬೇಕು ಅಂತ ಅಲ್ಲಿ ಇಲ್ಲಿ ತಿಳಿದುಕೊಂಡು ಬೇರೆ ಬಗೆಯಲ್ಲಿ ಕಲ್ಪನೆಯನ್ನು ಸೇರಿಸಿ ಬರಿಯೋಕೆ ಶುರು ಮಾಡಿದೆ.

ಪ್ರಶ್ನೆ: ನಿಮ್ಮ ಮೊದಲ ಕಥಾ ಸಂಕಲನ ’ಮಣ್ಣು ಸೇರಿತು ಬೀಜ’ 1991ರಲ್ಲಿ ಪ್ರಕಟವಾಯಿತಲ್ಲವೆ? ಇದು ನಿಮ್ಮನ್ನು ಕನ್ನಡದ ಮಹತ್ವದ ಕತೆಗಾರನನ್ನಾಗಿಸಿತು. ಆಗಲೇ ನೀವು ಹಂಪಿ ವಿಶ್ವವಿದ್ಯಾನಿಲಯಕ್ಕೆ ಪ್ರಾಧ್ಯಾಪಕರಾಗಿ ಕೂಡ ಆಗಿ ಸೇರಿಕೊಂಡ್ರಿ. ಆಗ ಕನ್ನಡ ವಿಮರ್ಶಾಲೋಕ ನಿಮ್ಮ ಕತೆಗಳನ್ನು ಹೇಗೆ ನೋಡಿತು?

ನುಗಡೋಣಿ: ಹೌದು. 1992ಕ್ಕೆ ನಾನು ಹಂಪಿ ಯೂನಿವರ್ಸಿಟಿಗೆ ಬಂದೆ. ಅದು ಪ್ರಕಟ ಆಗಿದ್ದೂ ಒಂದು ದೊಡ್ಡ ಕಥೆ. ಅದುವರೆಗೆ ಒಟ್ಟು 9 ಕಥೆಗಳನ್ನು ಬರೆದಿದ್ದೆ. ಅವುಗಳ ಮೊದಲ ಓದುಗರು ಎಸ್.ಜಿ. ಸ್ವಾಮಿ, ಶಾಂತರಸರು ಮತ್ತು ಇತರ ಗೆಳೆಯರು.

ನಾನು ಕೆಲವು ಸಾಹಿತಿಗಳಿಗೆ ಕಳುಹಿಸಿದೆ. ಆಗ ದಲಿತ ಬಂಡಾಯ ಸಮಯದಲ್ಲಿ ಕೆಲವರು ಈ ಕಥೆಗಳು ವಿಶೇಷವಾಗಿವೆ ಅಂದ್ರು. ಎಚ್.ಎಸ್. ರಾಘವೇಂದ್ರರಾವ್, ಇಂಧೂದರ ಹೊನ್ನಾಪುರ, ಕೆ.ವಿ. ನಾರಾಯಣ, ಓ.ಎಲ್. ನಾಗಭೂಷಣಸ್ವಾಮಿ- ಬಂಡಾಯದ ಕಥೆಗಳನ್ನ ಮೀರಿರುವ ಒಂದು ಸೂಕ್ಷ್ಮತೆ ಮತ್ತು ಕಲಾತ್ಮಕತೆ ನನ್ನ ಕತೆಗಳಲ್ಲಿವೆ ಅಂದದ್ದು ನೆನಪಿದೆ. ಅವರು ಬರೆಯುವ ವಿಮರ್ಶೆ ನನಗೆ ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ಯಾಕೆಂದರೆ ನಾನು ಹೆಚ್ಚು ಓದಿರಲಿಲ್ಲ. ನನ್ನ ಕತೆಗೆ ಬರುವ ವಿಮರ್ಶೆಯನ್ನು ತಿಳಿಯುವುದಕ್ಕಾದರೂ ವಿಮರ್ಶೆ ಓದಬೇಕು ಅನ್ನಿಸಿತು. ಅದಕ್ಕಾಗಿ ನಾನು ಎಲ್ಲರ ಜೊತೆ ಚರ್ಚೆ ಮಾಡುವುದು ಮತ್ತು ವಿಮರ್ಶೆ ಓದುವುದನ್ನು ರೂಢಿಸಿಕೊಂಡೆ. ’ಮಣ್ಣು ಸೇರಿತು ಬೀಜ’ಕ್ಕೆ 6 ಪ್ರಶಸ್ತಿಗಳು ಬಂದವು. ಎಲ್ಲೆ ಹೋದಲ್ಲಿ ನಿನ್ನ ಕಥೆಗಳು ಫ್ರೆಶ್ ಆಗಿವೆ ಅಂತ ಹೇಳ್ತಿದ್ರು. ಫ್ರೆಶ್ ಅನ್ನೊ ಪದದ ಅರ್ಥ ಗೊತ್ತಾಗುತ್ತಿರಲಿಲ್ಲ ಅವಾಗ. ಅಮೇಲೆ ಒಂದೊಂದು ಕಥೆ ಬರೆದಾಗಲೂ ಶ್ರೀನಿವಾಸರಾಜು, ಎಚ್.ಎಸ್.ಆರ್, ಕೆ.ವಿ.ಎನ್. ಅವರು ಬರೀತಾ ಹೋಗಿ ಅಂತ ನನಗೆ ಧೈರ್ಯ ಹೇಳುತ್ತಿದ್ದರು.

ಪ್ರಶ್ನೆ: ನಿಮ್ಮ ಬಹುತೇಕ ಎಲ್ಲ ಕಥೆಗಳು ಗ್ರಾಮೀಣ ಜಗತ್ತಿನಲ್ಲಿ ಆಗುತ್ತಿರುವ ಸ್ಥಿತ್ಯಂತರಗಳನ್ನು ಹಿಡಿದಿಡುತ್ತವೆ. ಉತ್ತರ ಕರ್ನಾಟಕದ ಭೂಮಾಲಿಕ ವ್ಯವಸ್ಥೆಯ ಕ್ರೌರ್ಯ ಮತ್ತು ಹಿಂಸೆಯ ಬೇರೆ ಬೇರೆ ಮುಖಗಳು ನಿಮ್ಮ ಕಥೆಗಳಲ್ಲಿ ಎದ್ದು ಕಾಣಿಸುವ ಸಾಮಾನ್ಯ ಸಂಗತಿಗಳಾಗಿರುತ್ತವೆ…

ನುಗಡೋಣಿ: ಬೇಸಿಕ್ಕಾಗಿ ನಾನು ಅಪ್ಪರ್ ಕ್ಲಾಸ್‌ನವನು ಮತ್ತು ಸ್ವಲ್ಪ ಜಮೀನು ಇತ್ತು. ಭೂಮಾಲಿಕ ಅಂತ ಹೇಳಿದ್ರು ಒಪ್ಪುತ್ತದೆ. ಆದರೆ ಉತ್ತರ ಕರ್ನಾಟಕದ ಭೂಮಾಲಿಕರೆಲ್ಲ ಶ್ರೀಮಂತರು ಅಂತ ನಾನು ಹೇಳೋಲ್ಲ. ಯಾಕಂದರೆ ’ಎಪ್ಪತ್ತು ಕೂರಿಗೆ ಭೂಮಿ ಇದ್ದರೂ ಒಪ್ಪತ್ತಿಗೆ ಊಟ’ ಇಲ್ಲ ಎನ್ನುವ ಗಾದೆ ಅಲ್ಲಿತ್ತು. ಎಲ್ಲರೂ ಸಾಮಾನ್ಯರೇ. ಆದರೆ ಭೂಮಿ ಜಾಸ್ತಿ ಇತ್ತು. ಆದರೆ ಅವರೆಲ್ಲ ಅಸ್ಪೃಶ್ಯತೆಯನ್ನ ಆಚರಿಸ್ತಿದ್ರು.

ಕೆಳ ವರ್ಗದವರು ದುಡಿಯೋಕೆ ಸುಮಾರು ಜನ ನಮ್ಮ ಜಮೀನಿಗೆ ಕೆಲಸಕ್ಕೆ ಬರ್ತಿದ್ರು. ಅಸ್ಪೃಶ್ಯರು, ದಲಿತರು ಮತ್ತು ಶೂದ್ರರ ಜೊತೆ ನಾನು ಕೆಲಸ ಮಾಡುತ್ತಿದ್ದೆ. ಅವರ ಕಷ್ಟನಷ್ಟಗಳು ನನಗೆ ಗೊತ್ತಿದ್ದವು. ಅವರದ್ದು ಎಂತಹ ಜೀವನ ಪ್ರೀತಿ ಅಂತ ನನಗೆ ಕರಗತ ಆಯ್ತು. ಅಷ್ಟರೊಳಗೆ ನನಗೊಂದು ಸಾಹಿತ್ಯದ್ದು ಪ್ರಜ್ಞೆ ಇತ್ತಲ್ಲ, ಅದನ್ನ ಇಟ್ಟುಕೊಂಡು ಅನುಭವ ಲೋಕ ಕಟ್ಟತೊಡಗಿದೆ. ಪಾತ್ರಗಳು ಗ್ರಾಮೀಣದವೇ. ಆದರೆ ವಿಚಾರ ಇತ್ತಲ್ಲ ಅದು ಜಾಗತೀಕರಣದ್ದು. ಅದರ ಕಷ್ಟನಷ್ಟಗಳು ತಿಳಿದಿತ್ತು. ಯಾಕೆಂದರೆ ಕನ್ನಡ ಯುನಿವರ್ಸಿಟಿಯಲ್ಲಿ ಚರ್ಚೆ ಮಾಡುತ್ತಿದ್ದ ಪರಿಸರದಿಂದ ಅದು ದಕ್ಕಿತ್ತು. ಪಾತ್ರಗಳು ಅವೇ ಆಗಿದ್ದವು. ಅದರ ಒಳಗಿನ ಹೂರಣವನ್ನ ಜಾಗತೀಕರಣದ ಸಮಸ್ಯಾತ್ಮಕವಾದ ಸಂಗತಿಗಳ ದೃಷ್ಟಿಯಿಂದ ನೋಡಿದೆ.

ಒಂದೊಂದೆ ಕಥೆಯಲ್ಲಿ ವೈಚಾರಿಕವಾಗಿ ಜಾಗತೀಕರಣದ ಕಷ್ಟಗಳು ಅಂದರೆ ಎಲ್ಲಿ ಫೇಲ್ಯೂರ್ ಆಗ್ತಾ ಇದೆ ಅನ್ನೋದನ್ನ ಶೋಧ ಮಾಡಿದೆ. ಹಾಗಾಗಿ ಎರಡು ಅಂಶಗಳನ್ನ ನೀವು ಗುರುತಿಸಿರುತ್ತಿರಿ. ಒಂದು-ಪರಿಸರ ಗ್ರಾಮೀಣ ಮತ್ತು ಎರಡು-ವ್ಯಕ್ತಿಗಳು ಕೂಡ ಗ್ರಾಮೀಣದವರೇ. ಅದರ ಒಳಗಿನ ಹೂರಣ ಮಾತ್ರ ಜಾಗತೀಕರಣದ ಇವತ್ತಿನ ಸಮಯದಲ್ಲಿ ಹಳ್ಳಿಗಳಲ್ಲಿ ಏನು ಆಗ್ತಾ ಇದೆ ಮತ್ತು ವ್ಯಕ್ತಿಗಳು ಏನ್ ಆಗ್ತಾ ಇದಾರೆ. ಭೂಮಿ ಏನ್ ಆಗ್ತಾ ಇದೆ ಅನ್ನೋದರ ಬಗ್ಗೆ ಅದರಲ್ಲಿ ಮೂಡಿಸುವುದಕ್ಕೆ ನಾನು ಪ್ರಯತ್ನ ಪಟ್ಟಿದ್ದೀನಿ. ಇದರಿಂದ ಏಕಕಾಲಕ್ಕೆ ಅವು ಹಳ್ಳಿಯನ್ನು ಮೀರಿದ ವಿಚಾರಗಳನ್ನು ಹೇಳುತ್ತವೆ ಅಂತ ಒಂದು ವಿಮರ್ಶೆ ಇತ್ತು.

ಪ್ರಶ್ನೆ: ಆಧುನಿಕತೆ ಮತ್ತು ಜಾಗತೀಕರಣದ ಅಕ್ರಮಣಶೀಲತೆಯಿಂದ ಹಳ್ಳಿಗಳ ಮೇಲೆ ಆಗುತ್ತಿರುವ ಪರಿಣಾಮಗಳ ಅವುಗಳ ಬಗ್ಗೆ ಕನ್ನಡದಲ್ಲಿ ಹೆಚ್ಚು ಕತೆಗಳನ್ನು ಬರೆದವರು ನೀವು. ಈ ಹಿನ್ನೆಲೆಯಲ್ಲಿ ನೀವು ಜಾಗತೀಕರಣ ಮತ್ತು ಆಧುನಿಕತೆಯನ್ನು ಚಿತ್ರಿಸುವಾಗ ಹಳೆಯ ತಲೆಮಾರನ್ನು ಬಹಳ ಮಾನವೀಯವಾಗಿ ಚಿತ್ರಿಸುತ್ತೀರಿ. ಆದರೆ ಹೊಸ ತಲೆಮಾರಿನ ಪಾತ್ರಗಳು ನಿಮ್ಮ ಕತೆಗಳಲ್ಲಿ ಅಷ್ಟು ಮಾನವೀಯವಾಗಿ ಬರಲ್ಲ…

ನುಗಡೋಣಿ: ನೀವು ಹೇಳಿದ ಅಂಶ ಇದೆ. ನಾನು ಚಿಕ್ಕವನೇ. ಆದರೆ ಅಲ್ಲಿ ದುಡಿಯುವ ವರ್ಗ ನನಗಿಂತ 30-40 ವರ್ಷ ದೊಡ್ಡವರು. ನಾನು ಅವರೆಲ್ಲರ ಜೊತೆ ಒಡನಾಡಿರುವುದರಿಂದ ಅವರ ಬದುಕು ನನ್ನ ಮೇಲೆ ಇನ್‌ಫ್ಲುಯೆನ್ಸ್ ಆಗಿದೆ. ಅಂದ್ರೆ ಮಕ್ಕಳಿರಲಿ, ಮೊಮ್ಮಕ್ಕಳಿರಲಿ ಅಥವಾ ಊರಿನವರು ಯಾರೇ ಇರಲಿ, ಕೂಡಿ ಕೆಲಸ ಮಾಡುವ, ಕೂಡಿ ಉಣ್ಣುವ, ಕೂಡಿ ಬಾಳುವ ಒಂದು ಚಿತ್ರಣ ನನ್ನ ಕಥೆಗಳಲ್ಲಿ ಬಂದಿದ್ರೆ ಅದು ನನ್ನ ಊರಿನಿಂದ ನಾನು ಕಂಡುಕೊಂಡ ಹಳೆ ತಲೆಮಾರಿನವರಿಂದ. ನನ್ನ ವಾರಿಗೆಯ ಹುಡುಗರು ಓದೋದಕ್ಕೆ ಹಳ್ಳಿಯಿಂದ ಹೊರಗೆ ಹೋಗುತ್ತಿದ್ದರು. ಇವರು ಯಾವುದೇ ಕಾರಣಕ್ಕೂ ಈ ದೊಡ್ಡವರಿಗೆ ಸ್ಪಂದಿಸುತ್ತಿರಲಿಲ್ಲ. ವಿರೋಧಗಳನ್ನು ವ್ಯಕ್ತ ಮಾಡುತ್ತಿದ್ದರು. ಹಿರಿಯರು, ಅನಕ್ಷರಸ್ಥರು ಅನ್ನೋದರಿಂದು ಅವರ ಬದುಕಿನ ಜ್ಞಾನವನ್ನು ಇವರಿಗೆ ಅರಿತುಕೊಳ್ಳುವ ಸಾಮರ್ಥ್ಯವಿಲ್ಲದೆ ಒಳ ಜಗಳಗಳು ಶುರುವಾಗುತ್ತಿದ್ದವು. ಮನೆಗಳನ್ನು ಬಿಟ್ಟು ಹೋಗೋದು ಮತ್ತು ಹಿರಿಯರ ಮಾತುಗಳನ್ನು ಕೇಳದೆ ಇರೋದು ಇವೆಲ್ಲಾ ನಡೆಯುತ್ತಿದ್ದವು.

ಪ್ರಶ್ನೆ: ಈ ತಲೆಮಾರುಗಳ ಅಂತರ ಹಾಗೂ ಅವುಗಳ ನಡುವಿನ ಸಂಘರ್ಷಗಳನ್ನು ಪ್ರಜ್ಞಾಪೂರ್ವಕವಾಗಿಯೇ ಕತೆಗಳಲ್ಲಿ ತರುತ್ತೀರಿ…

ನುಗಡೋಣಿ: ಹಿರಿಯರ ಪರಂಪರೆ ಮುಂದುವರೆಯಬೇಕು, ಮತ್ತೆ ಹೊಸ ತಲೆಮಾರಿನಲ್ಲಿ, ಹೊಸ ಬದುಕಿನಲ್ಲಿ, ಹೊಸ ಜೀವನಕ್ರಮದಲ್ಲಿ ಈ ಕೂಡಿ ಉಣ್ಣುವ-ಬಾಳುವ ಸಂಬಂಧಗಳನ್ನು ಬೆಳೆಸುವುದಕ್ಕೆ ಯಾಕೆ ಸಾಧ್ಯವಾಗ್ತ ಇಲ್ಲ ಎನ್ನುವ ಪ್ರಶ್ನೆಯನ್ನು ನನ್ನನ್ನು ತುಂಬಾ ಕಾಡಿದೆ. ಅನೇಕ ಕತೆ ಕಾದಂಬರಿಗಳಲ್ಲೂ ನಾನು ಓದಿದ್ದೇನೆ. ಇವೆರಡನ್ನು ಸೇರಿಸಿ ಕಥೆಗಳಲ್ಲಿ ಬರಿಬೇಕು ಅನ್ನುವ ಪ್ರಜ್ಞಾಪೂರ್ವಕ ಚಿತ್ರಣ ಮತ್ತು ಅದರ ಸಂಘರ್ಷಗಳಿವೆ. ಅವರು ಎಲ್ಲಾ ಸೇರಬೇಕು ಎನ್ನುವುದು ನನ್ನ ಗುರಿಯಲ್ಲ. ಯಾಕಾಗಿ ಹೀಗೆ ಆಗ್ತಾ ಇದೆ ಅನ್ನುವುದರ ಸೃಜನಶೀಲ ಶೋಧ ಅನ್ನಿಸುತ್ತೆ. ಇದರ ಕಾರಣಗಳನ್ನು ವೈಚಾರಿಕವಾಗಿ ಕೂತುಕೊಂಡು ಚರ್ಚೆ ಮಾಡುವುದಾಗಲಿ ಅಥವಾ ಅಲೋಚನೆ ಮಾಡುವುದಾಗಲಿ ನನ್ನ ಸಾಮರ್ಥ್ಯಕ್ಕೆ ಮೀರಿದ್ದು.

ಬಟ್ ನನ್ನ ಪಾಡಿಗೆ ನಾನು ಒಂದು ಲೋಕವನ್ನು ಗ್ರಹಿಸುತ್ತೇನೆ. ಅಮೇಲೆ ಅದನ್ನು ಇಮೇಜ್‌ನಲ್ಲಿ ತರ್ತಿನೆ ಹೊರತು ನನಗೆ ಚರ್ಚೆ ಮಾಡೋಕೆ ಆಗ್ತಾ ಇರಲಿಲ್ಲ. ಯಾವುದೇ ಒಂದು ಕತೆ ನನ್ನ ಕಲ್ಪನೆಯಲ್ಲಿ ಈ ಬೆಳೆಯುವ ಲೋಕ ಮತ್ತು ಹೀಗಿರುವ ಲೋಕ ಇವುಗಳನ್ನು ಮುಖಾಮುಖಿ ಮಾಡುವ ಅನೇಕ ಕಥೆಗಳು ತನ್ನಪಾಡಿಗೆ ತಾನು ಬಂದಿದ್ದು ಇದೆ. ಇದರ ಕಷ್ಟನಷ್ಟಗಳು ಏನು ಅನ್ನೋದು ವಿಮರ್ಶಕರು ಹೇಳಬೇಕು.

ಹಳತು ಮತ್ತು ಹೊಸತಿನ ನಡುವೆ ಸಂಘರ್ಷಗಳು ಇದ್ದೇ ಇರುತ್ತವೆ. ನನಗೆ ಯಾವಾಗಲೂ ಬಾಲ್ಯದಲ್ಲಿ ನಮ್ಮ ಅನುಭವಗಳು ಕಣ್ಣಿಗೆ ಒತ್ತಿದ ಚಿತ್ರಗಳಾಗಿ ಅವು ರಕ್ತಗತವಾಗಿರುತ್ತವೆ. ಈ ಹೊಸ ಲೋಕದ ಜೊತೆ ನಾನು ಒಡನಾಟ ಮಾಡಿದ್ರು ಕೂಡ ಹಳೆಯದರಷ್ಟು ಸಾಧ್ಯವಾಗಲ್ಲ. ಇದು ಏನಾದರೂ ತಾತ್ಕಾಲಿಕವಷ್ಟೇ. ಇದನ್ನು ನವ್ಯದವರು ಕತೆಗಳಲ್ಲಿ ಬೇರೆ ಥರ ಬರೆದಿದ್ದಾರೆ. ನಾನು ಅದನ್ನು ಏನು ಮಾಡುತ್ತೀನಿ ಅಂದರೆ ವಿಚಾರಗಳಿಂದ ಮುಂದಕ್ಕೆ ಹೋಗ್ತೇನೆ. ಆದರೆ ಒಂದು ಚಿತ್ರಣ ಕಟ್ಟಿಕೊಡುವುದರಲ್ಲಿ ಹೊಸ ವ್ಯಕ್ತಿಗಳು, ಅಂದ್ರೆ ಆಧುನಿಕ ವ್ಯಕ್ತಿಗಳು, ಆಧುನಿಕ ಲೋಕವನ್ನು ಹಿಡಿದಿಡುವಂತೆ ಮಾಡಲು ನನಗೆ ಇನ್ನೂ ಸಾಧ್ಯ ಆಗ್ತಾ ಇಲ್ಲ…

ಪ್ರಶ್ನೆ: ನಿಮ್ಮ ಕತೆಗಳಲ್ಲಿ ಬರುವ ಹಳೆಯ ತಲೆಮಾರಿನ ವಯಸ್ಸಾದವರ ನೆನಪಿನ ಮೂಲಕ ಕಟ್ಟಿದ ವಿವರಗಳಿರುತ್ತವೆ. ನೀವು ಹೇಳಿದಂತೆ ನಿಮ್ಮ ಬಾಲ್ಯದ ಜೀವನ ಹಳ್ಳಿಯಲ್ಲಿ ಕಳೆದದ್ದು ಮತ್ತು ಅಲ್ಲಿ ನಿಮಗೆ ಹಳೆಯ ತಲೆಮಾರು ಬಹಳ ಆಪ್ತವಾಗಿದ್ದರಿಂದ ಹಾಗೂ ಅದಕ್ಕೊಂದು ನಂಟನ್ನು ನೀವು ಹೊಂದಿದ್ದರಿಂದ ಹೀಗೆ ಆಗ್ತಾ ಇದಿಯಾ?

ನುಗಡೋಣಿ: ಹೌದು. ಅದು ಏನಾಯ್ತು ಅಂದ್ರೆ ನನ್ನ ಶಿಕ್ಷಣದಲ್ಲೇ ಬಹಳ ಗ್ಯಾಪ್ ಇದೆ. ಶಾಲೆ ಬಿಡುವುದು, ಹಳ್ಳಿಯಲ್ಲೇ ಜೀವನ ಮಾಡುವುದು ಮತ್ತೆ ಅಮೇಲೆ ಪಟ್ಟಣಕ್ಕೆ ಹೋಗುವುದೆಲ್ಲ ಇದೆ. ಈಗಿನ ಜನರೇಶನ್ ಜೊತೆ ನನ್ನ ಒಡನಾಟ ಕಮ್ಮಿ ಇದೆ. ನನ್ನ ಮಕ್ಕಳು ಕೂಡ ವಿದೇಶಕ್ಕೆ ಹೋಗಿ ಓದುತ್ತಾ ಇದ್ದಾರೆ. ತಾಂತ್ರಿಕತೆ ಬಗ್ಗೆ ನಾನು ಬಹಳ ಹಿಂದುಳಿದಿದ್ದೇನೆ. ಮನುಷ್ಯನಿಗೆ ಒಂದು ತತ್ವಜ್ಞಾನ ಅಥವಾ ತಾತ್ವಿಕತೆ ಇದೆ. ತಂತ್ರಜ್ಞಾನಕ್ಕೆ ಇದೆಯೇ ಅನ್ನುವ ಪ್ರಶ್ನೆ ಬಗ್ಗೆ ಯೋಚನೆ ಮಾಡ್ತಾ ಇದ್ದೇನೆ. ಅದನ್ನು ಅಲ್ಲೆಗಳೆಯುತ್ತಿಲ್ಲ. ಆ ಲೋಕವನ್ನು ನನ್ನದು ಮಾಡಿಕೊಳ್ಳುವುದಕ್ಕೆ ನನಗೆ ವಯಸ್ಸಾಯ್ತು. ರಿಟೈರ್ಡ್ ಆಗಿಬಿಟ್ಟೆ. ಅಧುನಿಕತೆ ಮತ್ತು ತಂತ್ರಜ್ಞಾನದ ಬಗ್ಗೆ ಇರುವ ನನ್ನ ತಿಳಿವಳಿಕೆಯನ್ನು ಅನುಭವವಾಗಿ ಪರಿವರ್ತಿಸುವುದಕ್ಕೆ ನಾನು ಪ್ರಯತ್ನ ಪಡ್ತಾಯಿದ್ದೀನೆ.

ಪ್ರಶ್ನೆ: ನಿಮ್ಮ ಎರಡನೇ ಸಂಕಲನದ ಶೀರ್ಷಿಕೆ ’ತಮಂಧದ ಕೇಡು’ ಹಾಗೂ ಅನೇಕ ಕಥೆಗಳ ಹೆಸರುಗಳು ಕೂಡ ಶಿವಶರಣರ ವಚನಗಳಿಂದ ಆಯ್ಕೆ ಮಾಡಿಕೊಂಡಿದ್ದೀರಿ. ಅನೇಕ ಬಾರಿ ಪಾತ್ರಗಳು ಕೂಡ ಮಾತಾಡುವಾಗ ವಚನಗಳ ಸಾಲುಗಳನ್ನು ಹೇಳುತ್ತವೆ. ನಿಮ್ಮ ಮೇಲೆ ವಚನಕಾರರ ಮತ್ತು ತತ್ವಪದಕಾರರ ಗಾಢವಾದ ಪ್ರಭಾವಕ್ಕೆ ಕಾರಣಗಳೇನು?

ನುಗಡೋಣಿ: ನಾನು ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕನಾಗಿ ಹೋದ ಮೇಲೆ ಅಲ್ಲಿ ಪಾಠ ಪ್ರವಚನಗಳಿಗಿಂತ ಏನನ್ನಾದರೂ ಯೋಜನೆ ಹಾಕಿ ಬರೆಯಬೇಕಿತ್ತು. ಆ ಕಾಲಕ್ಕೆ ನಾನು ’ಹೈದರಾಬಾದ್ ಕರ್ನಾಟಕ ಹಾಡುಪಾಡು’ ಎಂಬ ಪುಸ್ತಕ ಬರೆದೆ. ಅದಕ್ಕಾಗಿ ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ಅರಿಯಲು ಪ್ರಯತ್ನಿಸಿದೆ. ಅದರ ರಾಜಕೀಯ, ಸಾಮಾಜಿಕ, ಆರ್ಥಿಕ ಸಂಗತಿಗಳ ಬಗ್ಗೆ ಅಭ್ಯಾಸ ಮಾಡಿದೆ. ಅದರ ಎಳೆಗಳನ್ನು ನಾನು ಕಥೆಗಳನ್ನಾಗಿ ಮಾಡಿದೆ.

ತತ್ವಪದಗಳ ಮೇಲೂ ಒಂದು ಪುಸ್ತಕ ಬರೆದೆ. ಅದರ ಕುರಿತು ನಮ್ಮ ಹಿರಿಯರು ಒಂದಿಷ್ಟು ಬರೆದಿದ್ದರು. ಆಗ ಬಂದಿರುವ ತತ್ವಪದಗಳ ಕುರಿತು ಅಧ್ಯಯನ ಮಾಡಿದೆ. ನನಗೆ ಅದರೊಳಗೆ ಇರಬಹುದಾದ ಜೀವನ ತತ್ವವು ನನ್ನ ಜನರಲ್ಲಿ ಕಾಣಿಸುತ್ತಿತ್ತು. ತತ್ವಪದ ಅಥವಾ ವಚನಗಳನ್ನು ಬೌದ್ಧಿಕವಾಗಿ ಓದಿದಾಗ ನಮಗೆ ಅಧ್ಯಯನಕ್ಕೆ ಬೇಕಾದಂತಹ ವೈಜ್ಞಾನಿಕತೆಯನ್ನು ಅವು ತಿಳಿಸಿಕೊಡುತ್ತವೆ. ಲೋಕವನ್ನು ನೋಡುವ ದೃಷ್ಟಿಕೋನ ವಚನಕಾರರಲ್ಲಿ ಭಿನ್ನವಾಗಿದೆ. ಅಲ್ಲಮ, ಅಕ್ಕಮಹಾದೇವಿ, ಬಸವಣ್ಣ-ಇವರ ವಚನಗಳಲ್ಲಿರುವ ಲೋಕದರ್ಶನವನ್ನು ಕತೆಗಳಲ್ಲಿ ಯಾಕೆ ಅಳವಡಿಸಿಕೊಳ್ಳಬಾರದು ಅನ್ನಿಸಿತು. ಯಾಕೆಂದರೆ ಲೋಕವನ್ನು ಹೇಗೆ ನೋಡಬೇಕು ಎಂದು ವಚನಕಾರರು ಮತ್ತು ತತ್ವಪದಕಾರರು ಕಲಿಸುತ್ತಿದ್ದಾರೆ. ವಚನಗಳು ಮತ್ತು ತತ್ವಪದಗಳ ಪ್ರಭಾವವು ನನ್ನ ಕಥೆಗಳಲ್ಲಿ ಅಳವಡಿಸಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟಿದ್ದು ನಿಜ.

ಪ್ರಶ್ನೆ: ಹಳ್ಳಿಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಜಾತಿಗಳ ನಡುವಿನ ತಾರತಮ್ಯವು ಜೀವಂತವಾಗಿದೆ. ಇವುಗಳ ವಿರುದ್ಧ ಆಂದೋಲನ ನಡೆಸಿದ ವಚನ ಮತ್ತ ತತ್ವಪದಗಳು ಅಧ್ಯಯನಕ್ಕೆ ಸೀಮಿತವಾಗಿರುವ ವೈರುಧ್ಯವನ್ನು ಹೇಗೆ ಗ್ರಹಿಸುತ್ತೀರಿ.

ನುಗಡೋಣಿ: ಅವುಗಳನ್ನು ಕಥೆಗಳಲ್ಲಿ ಓದುತ್ತಿದ್ದೆ. ಅವುಗಳ ಬೌದ್ಧಿಕ ಲೋಕ ನನಗೆ ಗೊತ್ತಿರಲಿಲ್ಲ. ಈ ಬೌದ್ಧಿಕ ಲೋಕ ತತ್ವಪದಗಳಲ್ಲಿ ಮತ್ತು ವಚನಗಳಲ್ಲಿದೆ. ನಾವು ಕನ್ನಡ ವಿಶ್ವವಿದ್ಯಾಲಯದಲ್ಲಿ ಅವುಗಳ ಕುರಿತು ಅನೇಕ ಬಗೆಯಲ್ಲಿ ಅರ್ಥೈಸುವುದನ್ನು ಮಾಡುತ್ತಿದ್ದೆವು. ಎಷ್ಟೋ ಸಲ ನನಗೆ ಅನ್ನಿಸಿದ್ದು ಬದುಕಿನಲ್ಲಿ ಇದು ಇದೆಯೋ ಇಲ್ಲವೋ ಅಂತ. ವಚನಗಳಲ್ಲಿ ದೊಡ್ಡ ತಾತ್ವಿಕತೆ ಇದೆ. ಮನುಷ್ಯನ ಜೀವನದಲ್ಲಿ ಇದೆಯಾ ಅಂತ ನಾನು ಕಂಪೇರ್ ಮಾಡುತ್ತಿದ್ದೆ. ಅವರು ವಚನಗಳಲ್ಲಿ ಹೇಳಿದ ಎಲ್ಲ ಮೌಲ್ಯಗಳು ಯಾಕೆ ಕಣ್ಮರೆಯಾಗಿವೆ. ಅದು ವಚನಗಳಲ್ಲಿ ಮಾತ್ರ ಯಾಕೆ ಕೂತಿದೆ. ಬದುಕಿನಲ್ಲಿ ಯಾಕಿಲ್ಲ; ಮಠಗಳು ಏನು ಮಾಡುತ್ತಿವೆ? ನಿಜವಾದ ಲೋಕದಲ್ಲಿ ಯಾಕಿಲ್ಲ? ಅದನ್ನು ಯಾಕೆ ಕತೆಗಳಲ್ಲಿ ತರಬಾರದು ಅನ್ನಿಸಿತು. ಈ ಪ್ರಯೋಗ ಮಾಡಿದ ಪರಿಣಾಮವಾಗಿ ನನ್ನ ಕತೆಗಳಿವೆ.

ಪ್ರಶ್ನೆ: ನಿಮ್ಮ ಬಹಳಷ್ಟು ಕಥೆಗಳಲ್ಲಿ ಸ್ವಾಮೀಜಿಗಳು ಇದ್ದೇ ಇರುತ್ತಾರೆ. ಅದರಲ್ಲಿ ಕೂಡ ಹಿರಿಯ ಸ್ವಾಮಿಗಳು ಮತ್ತು ಕಿರಿಯ ಸ್ವಾಮಿಗಳು ಇರುತ್ತಾರೆ. ಇದು ಇತ್ತೀಚಿನ ’ಗೌರಿಯರು’ ಕಾದಂಬರಿಯಲ್ಲಿ ಕೂಡ ಬಂದಿದೆ…

ನುಗಡೋಣಿ: ನಾನು ಲಿಂಗಾಯತ. ಹಳ್ಳಿಗಳಲ್ಲಿ ಲಿಂಗಾಯತರು ಡಾಮಿನೇಟ್ ಆಗಿರುತ್ತಾರೆ. ಮಠಗಳು ಇರುತ್ತವೆ. ಮಠಗಳಿಗೆ ಹೊಂದಿಕೊಂಡು ಜನ ಇರುತ್ತಾರೆ. ಮೊದಲಿನಿಂದಲೂ ಶ್ರಾವಣ ಮಾಸ ಬಂದರೆ ಮಠಕ್ಕೆ ಹೋಗುವುದು, ಹಬ್ಬದ ದಿನಗಳಲ್ಲಿ ಮಠಕ್ಕೆ ಹೋಗುವುದು ಜಾಸ್ತಿ. ಆದರೆ ನಮ್ಮೂರಲ್ಲಿ ಮಠ ಎಲ್ಲಿದೆ ಮತ್ತು ನೀವು ಬರೆಯುವ ತುಂಗಾ ನದಿ ನಿಮ್ಮೂರಲ್ಲಿ ಎಲ್ಲಿದೆ ಅಂತ ರಹಮತ್ ಕೇಳುತ್ತಾರೆ. ಅದಕ್ಕೆ ನಾನು ನಮ್ಮೂರಿಗೆ ತುಂಗಾ ನದಿ ತಂದಿದ್ದೇನೆ ಅಂತ ಹೇಳುತ್ತಿದ್ದೆ. ವಚನಗಳಲ್ಲಿ ಗುರು ಪರಂಪರೆ ಇದೆ. ಇಂದು ಈ ಗುರುಗಳು ಏನಾಗಿದ್ದಾರೆ ಅನ್ನುವುದು ನನ್ನ ಪ್ರಶ್ನೆ. ಐವತ್ತು ವರ್ಷಗಳ ಹಿಂದಿನ ಸ್ವಾಮೀಜಿಗಳು ದಲಿತರ ಬಗ್ಗೆ ಯೋಚನೆ ಮಾಡುತ್ತಿದ್ದರು. ದಲಿತರಿಗೆ ಏನನ್ನಾದರೂ ಕೊಡುವುದು ನಮ್ಮ ಹಿರಿತನವಲ್ಲ. ಅದು ಒಂದು ರೀತಿಯ ದಂಡ. ಅವರನ್ನು ಕರೆದುಕೊಳ್ಳದೇ ದೂರ ಇಟ್ಟ ಪರಿಣಾಮವಾಗಿ ನಾವು ಅವರಿಗೆ ಏನನ್ನಾದರೂ ಕೊಟ್ಟರೆ ನಮ್ಮ ಪಾಪವನ್ನು ಕಳೆದುಕೊಳ್ಳುವುದಕ್ಕಾಗಿ ಕೊಡುತ್ತಿದ್ದೀವಿ ಎಂದು ತಿಳಿಯಬೇಕು ಅನ್ನುವ ಸ್ವಾಮೀಜಿಗಳು ಇದ್ದರು.

ಆದರೆ ಇಂದಿನ ಸ್ವಾಮೀಜಿಗಳು ರಾಜಕೀಯದಲ್ಲಿ ತೊಡಗಿದ್ದಾರೆ. ರಾಜಕೀಯ ಓಲೈಕೆಗಳು ಜಾಸ್ತಿಯಾಗಿವೆ. 12ನೇ ಶತಮಾನದಲ್ಲಿ ಯಾರು ಜಾತಿ ಬೇಡ ಅಂದರೋ, ಅದೇ ಪರಂಪರೆಯವರು 21ನೇ ಶತಮಾನದಲ್ಲಿ ತಮ್ಮ ಜಾತಿಯನ್ನು ವೈಭವೀಕರಿಸುತ್ತಿದ್ದಾರೆ. ವಚನ ಸಾಹಿತ್ಯವನ್ನು ನಂಬುವಂತೆ ಹೇಳುವವರು, ಅದರ ಯಾವ ಮೌಲ್ಯಗಳನ್ನು ಆಚರಿಸುತ್ತಿದ್ದಾರೆ? ಈ ಬೆಳವಣಿಗೆ ಯಾಕಾಯಿತು ಅನ್ನುವುದು ಮುಖ್ಯ ಪ್ರಶ್ನೆಯಾಗಿದೆ. ಇಂಥವುಗಳನ್ನು ಕತೆ ಮಾಡುವುದಕ್ಕೆ ನೋಡುತ್ತಿದ್ದೇನೆ. ಇದು ಎಷ್ಟು ಮುಂದಕ್ಕೆ ಹೋಗಿದೆ ಅಂದ್ರೆ ನಾನು ಮತ್ತೆ ವಾಪಸ್ಸು ಕರೆದುಕೊಂಡು ಬಂದು 12ನೇ ಶತಮಾನದ ಕಲ್ಯಾಣವನ್ನು ಕತೆಗಳಲ್ಲಾದರೂ ಸ್ಥಾಪಿಸುವುದಕ್ಕೆ ಸಾಧ್ಯವಾಗಬಹುದೇನೋ ಅನ್ನುವ ಸಣ್ಣ ಆಶಾಭಾವದಿಂದ ಕಥೆಗಳಲ್ಲಿ ಅನಾವರಣ ಮಾಡಿದ್ದೇನೆ. ಹಾಗಾಗಿ ವಚನ ಸಾಹಿತ್ಯ ಕನ್ನಡ ಜಗತ್ತಿಗೆ ಬಹಳ ದೊಡ್ಡ ಶಕ್ತಿ. ಇಂತಹ ಅನೇಕ ಪ್ರಶ್ನೆಗಳು ನನ್ನನ್ನು ಕಾಡುವುದರಿಂದ ನನ್ನ ಕತೆಗಳಲ್ಲಿ ಊರು-ಕೇರಿ ಒಂದಾಗುವ ಮತ್ತು ಹಳೆಯ-ಹೊಸ ತಲೆಮಾರುಗಳ ಸಂಘರ್ಷಗಳು ಬರುತ್ತವೆ ಅನಿಸುತ್ತದೆ.

(ಇದು ಅಮರೇಶ ನುಗಡೋಣಿ ಅವರ ಜೊತೆಗೆ ಸುಭಾಷ್ ರಾಜಮಾನೆಯವರು ನಡೆಸಿದ ಸುದೀರ್ಘ ಸಂದರ್ಶನದ ಸಂಗ್ರಹ ಭಾಗ. ಇದರ ಪೂರ್ಣ ವಿಡಿಯೋವನ್ನು ನಾನುಗೌರಿ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಲಾಗುವುದು)

ಡಾ. ಸುಭಾಷ್ ರಾಜಮಾನೆ

ಸಂರ್ದಶಕರು: ಡಾ. ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ


ಇದನ್ನೂ ಓದಿ: “ನಾನು ಭಾಷೆಗಳ ಜಾತಕ ಬರೆಯುತ್ತಿದ್ದೇನೆ”; ಪ್ರೊ. ಜಿ.ಎನ್. ದೇವಿಯವರೊಂದಿಗೆ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...