ಚಿಂತಕ, ಭಾಷಾಶಾಸ್ತ್ರಜ್ಞ ಲೇಖಕ ಮತ್ತು ನ್ಯಾಯಪಥಕ್ಕೆ ಹಲವು ಲೇಖನಗಳನ್ನು ಬರೆದಿರುವ ಪ್ರೊ. ಜಿ.ಎನ್ ದೇವಿಯವರೊಂದಿಗಿನ ಈ ಸಂದರ್ಶನ ಮಲೆಯಾಳಂನ ಖ್ಯಾತ ಪತ್ರಿಕೆ ಮಾತೃಭೂಮಿಯ ಆಗಸ್ಟ್ 1, 2021ರ ಭಾನುವಾರದ ಪುರವಣಿಯಲ್ಲಿ ಪ್ರಕಟವಾಯಿತು. ಸಂದರ್ಶನ ಮಾಡಿರುವ ವಿನೋದ್ ಕೃಷ್ಣನ್ ಕಲ್ಲಿಕೋಟೆಯ ಸೆಂಟರ್ ಫಾರ್ ರಿಸರ್ಚ್ ಅಂಡ್ ಎಜುಕೇಷನ್‌ನಲ್ಲಿ ಫೆಲೋ ಆಗಿದ್ದಾರೆ. ಮೈಸೂರು ಹಾಗೂ ದೆಹಲಿ ವಿವಿಗಳಲ್ಲಿ ಮಾನವಶಾಸ್ತ್ರ ಅಧ್ಯಯನ ಮಾಡಿದ ವಿನೋದ್ ಬಳಿಕ ಡೆನ್ಮಾರ್ಕ್ ಮತ್ತು ವಿಯಟ್ನಾಂಗಳಲ್ಲಿ ಅಧ್ಯಯನ ಮಾಡಿದ್ದರು. ಕಳೆದ ಮೂರು ದಶಕಗಳಿಂದ ದಕ್ಷಿಣ ಏಷ್ಯಾದ ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತು ಅಧ್ಯಯನ ಮತ್ತು ಕೆಲಸ ಮಾಡುತ್ತಿದ್ದಾರೆ.

ವಿನೋದ್ ಕೃಷ್ಣನ್: ನಿಮ್ಮ ಆರಂಭದ ಅಧ್ಯಯನ, ಬರವಣಿಗೆ ಎಲ್ಲ ಸಾಹಿತ್ಯದ ವಿಷಯಗಳೇ. ಈ ಹಂತದಲ್ಲಿ ಭಾಷಾ ಶಾಸ್ತ್ರದ ಮೇಲೆ ಗಮನ ಹರಿಸಲು ಏನು ಕಾರಣ?

ಜಿ.ಎನ್. ದೇವಿ: ತನ್ನ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿ ನಮ್ಮ ಯೋಚನೆಗಳನ್ನು ಶಬ್ದ ಮುಖೇನ ಪುನರ್‌ಸೃಷ್ಟಿ ಮಾಡುವ ಮನುಷ್ಯನ ಶಕ್ತಿ ಬಗ್ಗೆ ನನಗೆ ಸದಾ ವಿಸ್ಮಯವಿತ್ತು. ಈ ಸದ್ದೇನಿದೆ, ಅದು ಮೆದುಳಿನಲ್ಲಿ ಅತ್ಯಂತ ಸಂಕೀರ್ಣಪ್ರಕ್ರಿಯೆ ಮೂಲಕ ಭಾಷೆಯಾಗಿ ರೂಪಾಂತರಗೊಳ್ಳುತ್ತೆ. ನಮ್ಮ ಮೆದುಳಿನಲ್ಲಿ ಭಾಷೆಯಾಗಿ ದಾಖಲೆಗೊಂಡ ಒಂದು ಸದ್ದು ವರ್ಷಗಟ್ಟಲೆ ಮತ್ತು ಅದರ ಬಳಿಕವೂ ಮನುಷ್ಯರ ನೆನಪಿನಲ್ಲಿ ಉಳಿದಿರುತ್ತೆ ಎಂಬುದೇ ಒಂದು ಪವಾಡ. ನಮ್ಮ ಮೆದುಳಿನ ಸುಮಾರು 850 ಕೋಟಿ ನ್ಯೂರಾನ್‌ಗಳು ಈ ಕೆಲಸದಲ್ಲಿ ನಿರತವಾಗಿರುತ್ತವೆ ಅಂತ ವಿಜ್ಞಾನಿಗಳು ಹೇಳುತ್ತಾರೆ.

ಭಾಷೆ ಬಗ್ಗೆ ನನಗಿರುವ ಪ್ರೀತಿ ಕಾಕತಾಳೀಯ. ನನ್ನ ಪೂರ್ವಜರು ಮಹಾರಾಷ್ಟ್ರದಲ್ಲಿ ಬದುಕುತ್ತಿದ್ದ ಗುಜರಾತಿಗಳು. ನಿಜ ಹೇಳಬೇಕೆಂದರೆ ನನಗೆ ನನ್ನ ಮಾತೃಭಾಷೆ ಗುಜರಾತಿಯಾಗಲೀ, ಮರಾಠಿಯಾಗಲೀ, ಇಂಗ್ಲಿಷಾಗಲೀ ಸುಲಭ ಅನ್ನಿಸಲಿಲ್ಲ. ವಿದ್ಯಾರ್ಥಿಯಾಗಿದ್ದಾಗ ಈ ಭಾಷೆಗಳ ಬಗ್ಗೆ ನನಗೆ ವಿಶೇಷ ಒಲವೂ ಇರಲಿಲ್ಲ. ಈ ಕಾರಣಕ್ಕೇ ನಾನು ಡಿಗ್ರಿ ವಿದ್ಯಾಭ್ಯಾಸ ಬಿಟ್ಟು ಗೋವಾದ ಗಣಿಯೊಂದರಲ್ಲಿ ಸಣ್ಣ ವಯಸ್ಸಲ್ಲೇ ದುಡಿದೆ. ಡೆಂಪೋ ಕಂಪೆನಿಯಲ್ಲಿ ಕೆಲಸ ಮಾಡುವಾಗ ಅಲ್ಲಿನ ಹಳ್ಳಿಯೊಂದರ ಲೈಬ್ರರಿಯಲ್ಲಿ ಪರ್ಲ್ ಎಸ್. ಬಕ್ ಅವರ ’ಗುಡ್ ಅರ್ಥ್’- ಕಾದಂಬರಿ ಕೈಗೆ ಸಿಕ್ಕಿತು. ಬಿಡುವಿನ ವೇಳೆಯಲ್ಲಿ ಬೇರೇನೂ ಕೆಲಸ ಇಲ್ಲದ್ದರಿಂದ ಆ ಕಾದಂಬರಿ ಓದಲು ಯತ್ನಿಸಿದೆ. ನನ್ನ ಸೀಮಿತ ಇಂಗ್ಲಿಷ್ ಜ್ಞಾನದ ಹಿನ್ನೆಲೆಯಲ್ಲಿ ಅದೊಂದು ದೊಡ್ಡ ಸಾಹಸವೇ. ಆದರೆ ನನಗೆ ಅಚ್ಚರಿ ಆಗಿದ್ದು ನಾನದನ್ನು ಸಲೀಸಾಗಿ ಅರ್ಥಮಾಡಿಕೊಂಡ ಬಗೆ. ಇನ್ನಷ್ಟು ಪುಸ್ತಕಗಳನ್ನು ಓದಲು ಇದು ಸ್ಫ್ಪೂರ್ತಿ ನೀಡಿತು. ಒಂದು ಕಾಲದಲ್ಲಿ ಕಷ್ಟ ಎನ್ನಿಸಿದ್ದ ಭಾಷೆಗಳನ್ನೆಲ್ಲಾ ಕರಗತ ಮಾಡಿಕೊಳ್ಳಲು ಯತ್ನಿಸಿದೆ. ಮುಖ್ಯವಾಗಿ ಗುಜರಾತಿ, ಮರಾಠಿ ಮತ್ತು ಇಂಗ್ಲಿಷ್. ಆಮೇಲೆ ಗಣಿ ಕೆಲಸ ಬಿಟ್ಟು ಓದು ಮುಂದುವರಿಸಿದೆ. ಇಂಗ್ಲಿಷ್, ಮರಾಠಿ, ಗುಜರಾತಿಗಳಲ್ಲಿ ಬರೆಯಲು ಶುರುಮಾಡಿದೆ. ತರುವಾಯ ಸಾಹಿತ್ಯದ ಆಸಕ್ತಿ ನಶಿಸಿ ಅದು ಭಾಷೆಗಳ ಮೇಲೆ ಹೊರಳಿತು.

ವಿನೋದ್ ಕೃಷ್ಣನ್: ನೀವು ಆರಂಭಿಸಿದ the Peoples Linguistic Survey ಬಗ್ಗೆ ಸ್ವಲ್ಪ ಹೇಳಿ.

ಜಿ.ಎನ್. ದೇವಿ: 1961ರ ಜನಗಣತಿ ಪ್ರಕಾರ ದೇಶದಲ್ಲಿ ಮಾತೃ ಭಾಷೆಯೆಂದು ಪರಿಗಣಿಸಲಾದ 1652 ಭಾಷೆಗಳಿದ್ದವು. ಆಡುಭಾಷೆಗಳನ್ನು ಇವು ಒಳಗೊಂಡಿರಲಿಲ್ಲ. ಇವೆಲ್ಲಾ ತಮ್ಮದೇ ವ್ಯಾಕರಣ ರಚನೆಗಳನ್ನೊಳಗೊಂಡ ಭಾಷೆಗಳು. ಆದರೆ 2011ರ ಜನಗಣತಿ ವೇಳೆಗೆ ಈ ಸಂಖ್ಯೆ 234ಕ್ಕೆ ಇಳಿದಿತ್ತು. ಕಳೆದ ಐವತ್ತು ವರ್ಷಗಳಲ್ಲಿ ಈ ದೇಶದಲ್ಲಿ ಉಳಿದ 1418 ಭಾಷೆಗಳು ನಶಿಸಿಹೋಗಿವೆ ಎಂದು ನಾವು ಭಾವಿಸಬೇಕಿಲ್ಲ. 1961ರ ಜನಗಣತಿಯ ಭಾಷಾ ನಿರ್ವಚನ ಬದಲಾಗಿ 10 ಸಾವಿರ ಮಂದಿಗಿಂತ ಹೆಚ್ಚು ಮಾತಾಡುವ ಭಾಷೆಯನ್ನಷ್ಟೇ ಮಾತೃ ಭಾಷೆಯೆಂದು ಪರಿಗಣಿಸುವ ಕ್ರಮ ಶುರುವಾಯಿತು. ನಮ್ಮ ಗಣತಿ ಪ್ರಕಾರ 2010-12ರಲ್ಲೂ 780 ಭಾಷೆಗಳು ಮಾತೃ ಭಾಷೆಯಾಗಿ ಉಳಿದುಕೊಂಡಿವೆ. 2011ರ ಜನಗಣತಿಯಲ್ಲಿ ಬಳಸಲಾದ ’ಎಷ್ಟು ಜನ ಬಳಸುತ್ತಾರೆ’ ಎಂಬ ಮಾನದಂಡ ನಾವು ಬಳಸಿಲ್ಲ. ನಾವು 1961ರ ಜನಗಣತಿಯನ್ನು
ಆಧಾರವಾಗಿ ಬಳಸಿದೆವು. ಅದರ ಪ್ರಕಾರ 2011ರಲ್ಲಿ 800 ಮಾತೃ ಭಾಷೆಗಳು ನಶಿಸಿಹೋಗಿವೆ. ಆದರೆ ನಮ್ಮ ಗಣತಿ ಪ್ರಕಾರ 300 ಭಾಷೆಗಳು ನಶಿಸಿಹೋಗಿವೆ. 2011ರ ನಮ್ಮ ಸರ್ವೆ ಮುಖ್ಯವಾಗಿ ಆದಿವಾಸಿ ಮತ್ತು ಅಲೆಮಾರಿ ಜನಾಂಗಗಳ ಭಾಷೆಯ ಮೇಲೆ ಲಕ್ಷ್ಯ ವಹಿಸಿತ್ತು. ಈ ಸರ್ವೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಗಮನಿಸಿತು.

ಉದಾ: ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ 15 ಹಳ್ಳಿಗಳ ಸುಮಾರು 15 ಸಾವಿರ ಮಂದಿ ನಿಹಾಲಿ ಭಾಷೆಯನ್ನು ಮಾತೃ ಭಾಷೆಯೆಂದು ಪರಿಗಣಿಸುತ್ತಾರೆ. ವಿಸ್ಮಯದ ಸಂಗತಿ ಎಂದರೆ ಈ ನಿಹಾಲಿ ಭಾಷೆ ಜಗತ್ತಿನ ಯಾವ ಭಾಷೆಯ ಜೊತೆಗೂ ಸಂರಚನಾತ್ಮಕ ಸಂಬಂಧ ಹೊಂದಿಲ್ಲ ಎಂಬ ಅಂಶ. ಪ್ರಾಯಶಃ ಅವರು ಉಳಿದ ಸಂಸ್ಕೃತಿಗಳಿಂದ ಪ್ರತ್ಯೇಕವಾಗಿಯೇ ಇದ್ದರು ಅನ್ನಿಸುತ್ತೆ. ಇನ್ನೊಂದು ಉದಾಹರಣೆ, ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಒಂದು ಸಾವಿರ ಜನ ಪೋರ್ಚುಗೀಸ್ ಮಾತಾಡುವವರಿದ್ದಾರೆ. ಇವರಲ್ಲಿ ಹೆಚ್ಚಿನವರು ಅನಕ್ಷರಸ್ಥರು. ಈ ಸ್ಥಳೀಯ ಪೋರ್ಚುಗೀಸ್ ಭಾಷೆಯನ್ನು ನೋಲಿಂಗ್ ಎಂದು ಕರೆಯುತ್ತಾರೆ. ಇವರು ದೇವನಾಗರಿ ಲಿಪಿ ಬಳಸುತ್ತಾರೆ. ಈ ಸರ್ವೆ ಕಂಡುಕೊಂಡಿದ್ದೇನೆಂದರೆ ಅತಿ ಕಡಿಮೆ ಜನಸಂಖ್ಯೆ ಇರುವ ಅರುಣಾಚಲ ಪ್ರದೇಶದಲ್ಲಿ ದೇಶದಲ್ಲೇ ಅತಿ ಹೆಚ್ಚು ಭಾಷಾ ವೈವಿಧ್ಯತೆ ಇದೆ.

ವಿನೋದ್ ಕೃಷ್ಣನ್: ಭಾಷೆ ನಶಿಸಿ ಹೋಗುವುದು, ಅದರಲ್ಲೂ ಕಡಿಮೆಸಂಖ್ಯೆಯ ಸಮುದಾಯಗಳ ಭಾಷೆ ಮಾಯವಾಗುವುದು ಸಹಜ ಗತಿ ಎಂದು ಭಾವಿಸಬಹುದೇ?

ಜಿ.ಎನ್. ದೇವಿ: ನಿಜ, ಭಾಷೆ ಸಾವನ್ನಪ್ಪಬಹುದು. ಅದನ್ನು ಸಹಜ ಎಂದು ಕರೆಯುವ ಬದಲು ಸಾಮಾಜಿಕ ಕಾರಣಗಳಿಗೆ ಎಂದು ಕರೆಯುವುದು ಉಚಿತ. ಭಾಷೆಗಳು ಜೀವಿಗಳ ತರಹ ನಿಶ್ಯೇಷವಾಗುವುದಿಲ್ಲ. ಜೀವ ಪ್ರಬೇಧಗಳು ಪ್ರಾಕೃತಿಕ ಕಾರಣಗಳಿಂದ ನಾಶವಾಗುತ್ತವೆ. ಭಾಷೆ ಹಾಗಲ್ಲ. ಅದು ಸಾಂಸ್ಕೃತಿಕ ಮತ್ತು ಸಾಮಾಜಿಕ
ಒತ್ತಡಗಳ ಕಾರಣದಿಂದ ಜರುಗುತ್ತದೆ. ಆದ್ದರಿಂದ ಅದು ಕೆಲವು ಸಾಂಸ್ಕೃತಿಕ ನೆಲೆಗಳಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಬಲ್ಲುದು. ಉದಾ: ದೇವರ ಜೊತೆ ಸಂವಾದಿಸುವ ಭಾಷೆ ಅಥವಾ ಆಚರಣೆಗಳು. ಅವು ಈ ಆಚರಣೆ/ನಂಬಿಕೆಯ ವಲಯದಲ್ಲಿ ಉಳಿದುಕೊಳ್ಳಬಹುದು. ಆದರೆ ಅವು ಆ ಕ್ಷೇತ್ರದಲ್ಲಿ ಮಾತ್ರ ಸಂಗತ. ಆದರೆ ಸಂಪೂರ್ಣ ಭಿನ್ನವಾಗಿ ಮತ್ತು ಹೊಸದಾಗಿ ರೂಪುಗೊಂಡ ಭಾಷೆಯೊಂದನ್ನು ನಿತ್ಯಜೀವನದಲ್ಲಿ ಬಳಸಲಾಗುತ್ತಿದೆ. ಆದಿವಾಸಿ ಸಮುದಾಯಗಳಲ್ಲೂ ಈ ಪ್ರಕ್ರಿಯೆ ಕಾಣಿಸುತ್ತಿದೆ. ಇಂದು ಹಲವಾರು ಆದಿವಾಸಿ ಸಮುದಾಯಗಳಲ್ಲಿ ದೇಸೀ ಭಾಷೆಗಳನ್ನು ಸಶಕ್ತಗೊಳಿಸುವ ಪ್ರಯತ್ನ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿದೆ. ಅಲ್ಲಿನ ಶಿಕ್ಷಿತರು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಕರಾವಳಿ ಪ್ರದೇಶದ ಸಮುದಾಯಗಳ ಭಾಷೆಗಳೇ ಹೆಚ್ಚು ಅಪಾಯಕ್ಕೊಳಗಾಗಿವೆ. ಬೇರೆ ಸಂಸ್ಕೃತಿ ಮತ್ತು ಕೈಗಾರಿಕೀಕರಣ ಒಳನುಗ್ಗಿರುವ ಕಾರಣ ಅವರು ಹೊರಹೋಗುವ ಒತ್ತಡ ನಿರ್ಮಾಣವಾಗಿದೆ. ಈ ರೀತಿ ಸ್ಥಳಾಂತರಗೊಂಡ ಸಮಾಜಗಳಲ್ಲೇ ಭಾಷೆ ಸಾಯುವ ಸಾಧ್ಯತೆ ಹೆಚ್ಚು

ವಿನೋದ್ ಕೃಷ್ಣನ್: ಲಿಪಿ ಇಲ್ಲದಿರುವುದು ಭಾಷೆಯ ವಿನಾಶಕ್ಕೆ ಕಾರಣವಾಗುತ್ತಾ?

ಜಿ.ಎನ್. ದೇವಿ: ಈ ಗ್ರಹಿಕೆ ಪೂರಾ ನಿಜವಲ್ಲ. ಜಗತ್ತಿನಲ್ಲಿ ಇಂದು ಪ್ರಾಧಾನ್ಯತೆ ಪಡೆದಿರುವ ಹಲವಾರು ಭಾಷೆಗಳು ತಮ್ಮದೇ ಆದ ಲಿಪಿ ಅಭಿವೃದ್ಧಿಪಡಿಸಲಿಲ್ಲ. ಇಂಗ್ಲಿಷ್, ಸ್ಪಾನಿಶ್, ಫ್ರೆಂಚ್ ಭಾಷೆಗಳು ತಮ್ಮದೇ ಆದ ಲಿಪಿ ಅಭಿವೃದ್ಧಿಪಡಿಸಲಿಲ್ಲ. ಇವು ಲ್ಯಾಟಿನ್‌ನ ಅಕ್ಷರಗಳನ್ನು ಕಡ ತೆಗೆದುಕೊಂಡವು. ಹಿಂದಿಯೂ ಸ್ವಂತ ಲಿಪಿ ಇಲ್ಲದ ಭಾಷೆ. ಹಿಂದಿ ಬಳಸುವುದು ದೇವನಾಗರಿ ಲಿಪಿ. ಮರಾಠರು ಮೋಡಿ ಲಿಪಿಯನ್ನು ಬಳಸಿದರು. ಇದು ದೇವನಾಗರಿಗಿಂತ ಸಂಪೂರ್ಣ ಭಿನ್ನ. ಈ ಲಿಪಿ ಬಲ್ಲವರು ಮಹಾರಾಷ್ಟ್ರದಲ್ಲಿ ಇನ್ನೂ ಇದ್ದಾರೆ. ರಾಜಸ್ತಾನದ ಮೇವಾರಿ ಭಾಷೆ ಹಿಂದಿಗಿಂತ ಭಿನ್ನ ಭಾಷೆ. ಮೊದಲು ಅದಕ್ಕೆ ಅದರದ್ದೇ ಆದ ಲಿಪಿ ಇತ್ತು. ಇಂದು ದೇವನಾಗರಿಯನ್ನು ಬಳಸಲಾಗುತ್ತಿದೆ. ಭಾಷೆ ಮತ್ತು ಲಿಪಿಯ ಸಂಬಂಧ ಸಾಂಸ್ಕೃತಿಕವಾದದ್ದು. ಭಾಷೆಗಳು ಯಾವುದೇ ಲಿಪಿಯನ್ನು ಹೊಂದಬಹುದು.

ಒಂದು ಕಾಲದಲ್ಲಿ ಕನ್ನಡವೂ ತುಳು ಲಿಪಿಯನ್ನು ಬಳಸಿತ್ತು. ಆದರೆ ಇಂದು ತುಳು ಭಾಷೆ ಕನ್ನಡ ಲಿಪಿಯನ್ನು ಬಳಸುತ್ತಿದೆ. ಮೂಲ ತುಳು ಲಿಪಿ ಇಂದು ಉಪಯೋಗದಲ್ಲಿಲ್ಲ. ಭಾಷೆ ಮತ್ತು ಲಿಪಿಗಳ ಮಧ್ಯೆ ತಿಕ್ಕಾಟದ ಚರಿತ್ರೆಯೂ ಇದೆ. ಸ್ವಾತಂತ್ರ್ಯದವರೆಗೂ ಸಿಂಧಿ ಭಾಷೆ ಪರ್ಶಿಯನ್ ಲಿಪಿ ಬಳಸುತ್ತಿತ್ತು. ಆದರೆ ಈಗ ಅದು ದೇವನಾಗರಿ ಬಳಸುತ್ತಿದೆ. ವ್ಯಾಪಾರಿ ಚಟುವಟಿಕೆಗಳು ಧಾರಾಳ ಇದ್ದ ಸಮುದಾಯಗಳಲ್ಲಿ ಬಳಕೆಯ ಭಾಷೆಗೆ ಲಿಪಿ ತೀರಾ ಅವಶ್ಯವಿತ್ತು. ವ್ಯಾಪಾರದ ದಾಖಲೆ ಇಡುವುದಕ್ಕೆ ಲಿಖಿತ ದಾಖಲೆ ತೀರಾ ಮುಖ್ಯ. ಲಿಪಿ ಬಗ್ಗೆ ಮಾತಾಡುವಾಗ ಇದನ್ನೂ ಹೇಳಬೇಕಾಗಿದೆ, ಏನೆಂದರೆ ಕೈಬರಹದ ಕೌಶಲ್ಯ ಇನ್ನೈವತ್ತು ವರ್ಷಗಳೂ ಬಾಳದು ಅನ್ನಿಸುತ್ತಿದೆ. ಮಾತನ್ನು ಪಠ್ಯವಾಗಿ ಪರಿವರ್ತಿಸುವ ತಂತ್ರಜ್ಞಾನ ಈಗಲೇ ಲಭ್ಯವಿದೆ. ಇನ್ನು ಐವತ್ತು ವರ್ಷಗಳಲ್ಲಿ ಇದು ಸಾರ್ವತ್ರಿಕವಾಗಲಿದೆ. ಕೈಬರಹದ ಜಮಾನಾ ಅದರ ಕೊನೆ ದಿನಗಳನ್ನು ಎಣಿಸುತ್ತಿದೆ ಅನ್ನಿಸುತ್ತೆ.

ವಿನೋದ್ ಕೃಷ್ಣನ್: ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಮಹಿಳೆಯರೇ ಮಾತಾಡುವ ಭಾಷೆಗಳಿವೆ ಎಂದು ಭಾಷಾ ಶಾಸ್ತ್ರಜ್ಞರು ಗಮನಿಸಿದ್ದಾರೆ. ಭಾರತದಲ್ಲಿ ನೀವು ಅಂಥಾ ಭಾಷೆಗಳನ್ನು ಗಮನಿಸಿದ್ದೀರಾ?

ಜಿ.ಎನ್. ದೇವಿ: ಮಹಿಳೆಯರೇ ಮಾತಾಡುವ ಭಾಷೆಗಳು ಭಾರತದಲ್ಲೂ ಇವೆ. ಉದಾ: ಕರ್ನಾಟಕದ ಗುಲ್ಬರ್ಗಾ ಮತ್ತು ಮಹಾರಾಷ್ಟ್ರದ ಶೋಲಾಪುರದಲ್ಲಿ ಜನಪ್ರಿಯವಾಗಿರುವ ದಖ್ಖನಿ ಭಾಷೆಯಲ್ಲಿ ಮಹಿಳೆಯರು ಮತ್ತು ಪುರುಷರು ಮಾತಾಡುವ ಭಾಷೆಯಲ್ಲಿ ವ್ಯತ್ಯಾಸಗಳಿವೆ. ಪರಸ್ಪರ ಅರ್ಥವಾದರೂ ಅವರ ಪದಜಾಲದಲ್ಲಿ ವ್ಯತ್ಯಾಸಗಳಿವೆ. ತಮಿಳುನಾಡಿನಲ್ಲಿ ಮರಾಠರ ಪುಟ್ಟ ಸಮುದಾಯವಿದೆ. ಅಲ್ಲಿ ಮಹಿಳೆಯರು ಪರಸ್ಪರ ಮರಾಠಿಯಲ್ಲಿ ಮಾತಾಡಿದರೆ ಪುರುಷರು ತಮಿಳು ಬಳಸುತ್ತಾರೆ. ಇದು ಅನುಕೂಲಕ್ಕೆ ಸಂಬಂಧಿಸಿದ್ದು ಕೂಡಾ. ಮಹಿಳೆಯರಿಗಿಂತ ಪುರುಷರು ಹೊರ ಜಗತ್ತಿನ ಜೊತೆ ಹೆಚ್ಚು ಸಂಪರ್ಕ ಇಟ್ಟುಕೊಂಡಿರುವ ಕಾರಣ ಅವರು ತಮಿಳು ಬಳಸುತ್ತಾರೆ. ಭಾಷೆಯ ಈ ಸಂಕೀರ್ಣತೆಯ ಬಗ್ಗೆ ಯು.ಆರ್ ಅನಂತಮೂರ್ತಿಯವರು ಬರೆದಿದ್ದಾರೆ. ಮಹಿಳೆಯರು ಬಳಸುವ ಭಾಷೆಯನ್ನು ಅವರು ’ಹಿತ್ತಲ ಭಾಷೆ’ ಎಂದು ಕರೆಯುತ್ತಾರೆ.

ವಿನೋದ್ ಕೃಷ್ಣನ್: ನೀವೀಗ ಭಾಷೆಗಳ ಕುರಿತು ಜಾಗತಿಕ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದೀರಿ. ಆ ಬಗ್ಗೆ ವಿವರಿಸುತ್ತೀರಾ?

ಜಿ.ಎನ್. ದೇವಿ: ಜಗತ್ತಿನಾದ್ಯಂತ 6000 ಭಾಷೆಗಳು ಚಾಲ್ತಿಯಲ್ಲಿವೆ. ಸದ್ಯೋ ಭವಿಷ್ಯದಲ್ಲಿ ಅವುಗಳಲ್ಲಿ 4000 ಭಾಷೆಗಳು ನಶಿಸಿ ಹೋಗಲಿವೆ. ಆದ್ದರಿಂದ ವಿಶ್ವದ ಭಾಷೆಗಳ ಸಮಗ್ರ ಅಧ್ಯಯನದ ಪ್ರಯತ್ನ ಮಾಡುತ್ತಿದ್ದೇವೆ. ಈ ಅಪಾಯಕ್ಕೀಡಾಗಲಿರುವ ಭಾಷೆಗಳಲ್ಲಿ ಕನಿಷ್ಠ 10% ಭಾರತೀಯ ಭಾಷೆಗಳು. ಅಂದರೆ ಸುಮಾರು 400-700 ಭಾರತೀಯ ಭಾಷೆಗಳು ಸದ್ಯದಲ್ಲೇ ನಿಶ್ಯೇಷವಾಗಲಿವೆ. ಈಗ ನಾನು ಭಾಷೆಗಳ ಆಯುರ್ಮಾನದ ಬಗ್ಗೆ ಲಕ್ಷ್ಯ ವಹಿಸುತ್ತಿದ್ದೇನೆ. ಒಂದರ್ಥದಲ್ಲಿ ನಾನು ಭಾಷೆಗಳ ಜಾತಕ ತಯಾರಿಸುತ್ತಿದ್ದೇನೆ. ಭಾಷೆಯೆಂಬುದು ಮನುಷ್ಯ ಕೃತ. ಸಮಾಜದ ಶತಮಾನಗಳ ಪ್ರಯತ್ನದ ಮೂಲಕ ಭಾಷೆಗಳು ಸೃಷ್ಟಿಯಾಗಿವೆ. ಭಾಷೆಯೊಂದು ಮಾಯವಾಗುವುದೆಂದರೆ ಒಂದು ಸಂಸ್ಕೃತಿ ಮಾಯವಾಗುವುದೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಭಾಷೆಗಳನ್ನು ಸಾಯಬಿಡುವುದೆಂದರೆ ನಮ್ಮ ಪೂರ್ವಜರಿಗೂ ನಮ್ಮ ಭವಿಷ್ಯದ ತಲೆಮಾರುಗಳಿಗೂ ಮಾಡುವ ದ್ರೋಹ.

ವಿನೋದ್ ಕೃಷ್ಣನ್: ನಿಮ್ಮ ’ಚರಿತ್ರೆ ಪೂರ್ವ ಭಾರತ’ವು ಹಲವಾರು ಶಿಸ್ತುಗಳನ್ನು ಐಕ್ಯಗೊಳಿಸುವ ಪ್ರಯತ್ನ. ನಿಮ್ಮೊಂದಿಗೆ ಬೇರೆ ಯಾರು ಸಂಶೋಧಕರಿದ್ದಾರೆ?

ಜಿ.ಎನ್. ದೇವಿ: ಭಾರತದ ಎರಡು ಸಾವಿರ ವರ್ಷ ಹಿಂದಿನ ಚರಿತ್ರಪೂರ್ವ ಭೂತಕಾಲವನ್ನು ಅರ್ಥಮಾಡಿಕೊಳ್ಳುವುದು ಸಂಕೀರ್ಣ ಪ್ರಯತ್ನ. ಇಂಥಹ ಒಂದು ಸಂಶೋಧನೆಯು ಪ್ರಾಚ್ಯ ಶಾಸ್ತ್ರ, ತಳಿಶಾಸ್ತ್ರ, ಕೃಷಿ ಚರಿತ್ರೆ, ಸಮಾಜ ಶಾಸ್ತ್ರ, ಭಾಷಾ ಶಾಸ್ತ್ರ, ಸಾಗರ ಚರಿತ್ರೆ, ಮನುಷ್ಯನ ಮೆದುಳು ವಿಕಾಸವಾದ ನರ ಶಾಸ್ತ್ರ, ಪ್ರಾಚೀನ ವಲಸೆ, ಜಾಗತಿಕ ಹವಾಮಾನ ಅಧ್ಯಯನಗಳ ಸಾಧ್ಯತೆಗಳನ್ನು ಒಳಗೊಳ್ಳುತ್ತೆ. ಆದ್ದರಿಂದ ಬೇರೆ ಬೇರೆ ಶಿಸ್ತುಗಳ ತಜ್ಞರ ಅಭಿಪ್ರಾಯಗಳನ್ನು ಈ ಅಧ್ಯಯನ ಒಳಗೊಳ್ಳಬೇಕಾಗಿದೆ.

ಈ ಅಧ್ಯಯನವನ್ನು ಸಂಪೂರ್ಣ ವೈಜ್ಞಾನಿಕ ಚೌಕಟ್ಟಿನೊಳಗೆ ಇಡುವುದು ನನ್ನ ಗುರಿ. ವಿಜ್ಞಾನದ ಸಹಾಯದಿಂದಷ್ಟೇ- ನಾವು ಯಾರು? ಎಲ್ಲಿಂದ ಬಂದೆವು? ಮಾನವರಾಗಿ ನಾವು ಹೇಗೆ ವಿಕಾಸ ಹೊಂದಿದೆವು? ಬೇಟೆ ಮತ್ತು ಆಹಾರ ಸಂಗ್ರಹದಿಂದ ಕೃಷಿಗೆ ಹೇಗೆ ಸಾಗಿದೆವು? ನಗರಗಳನ್ನು ಹೇಗೆ ಕಟ್ಟಿದೆವು? ಪರಂಪರೆ, ಅದರ ಸಮಕಾಲೀನತೆ ಹೇಗೆ ಹೆಣೆದುಕೊಂಡಿತು ಇವೆಲ್ಲ ಪ್ರಶ್ನೆಗಳಿಗೆ ವಿಜ್ಞಾನದ ಸಹಾಯದಿಂದಷ್ಟೇ ನಾವು ಉತ್ತರ ಕಂಡುಕೊಳ್ಳಬಹುದಾಗಿದೆ.

ವಿನೋದ್ ಕೃಷ್ಣನ್: ಭಾರತವನ್ನು ಹೀಗೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಈ ಹಿಂದೆ ಆಗಿತ್ತಾ?

ಜಿ.ಎನ್. ದೇವಿ: ಭಾರತದ ಚರಿತ್ರ ಪೂರ್ವ ಕಾಲದ ಬಗ್ಗೆ ಹತ್ತೊಂಭತ್ತನೇ ಶತಮಾನದ ಉತ್ತರಾರ್ಧದಲ್ಲೇ ಅಧ್ಯಯನ ಶುರುವಾಗಿತ್ತು. ಪ್ರಾಚ್ಯ ಶಾಸ್ತ್ರ ಮತ್ತು ಮಾನವ ಶಾಸ್ತ್ರದ ಹಲವು ಹಂತಗಳ ಅಧ್ಯಯನಗಳು ಇದಕ್ಕೆ ಕಾಣಿಕೆ ನೀಡಿದವು. ಜಗತ್ತಿನಾದ್ಯಂತ ಸಂಶೋಧಕರು ಈ ಕ್ಷೇತ್ರದ ಬಗ್ಗೆ ಆಸಕ್ತಿ ತಳೆದಿದ್ದಾರೆ. ನಮ್ಮ ಚರಿತ್ರೆಗೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳ ಅಧ್ಯಯನದ ಮೂಲಕ ಗಮನಾರ್ಹ ಕೊಡುಗೆ ನೀಡಿದ್ದಾರೆ. ಈ ವಿಷಯದ ಬಗ್ಗೆ ನಡೆದ ಅಧ್ಯಯನದ ಸಂಕಲನಗಳು ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿ ಪ್ರಕಟವಾಗಿವೆ. ಆದರೆ ಕಳೆದೊಂದು ದಶಕದಲ್ಲಿ ತಳಿಶಾಸ್ತ್ರದಲ್ಲಿ ನಡೆದ ಕೆಲಸ ಈ ಕ್ಷೇತ್ರದ ಅಧ್ಯಯನಕ್ಕೆ ಒತ್ತಾಸೆ ನೀಡಿತು. ಭಾರತೀಯ ಸಂಶೋಧಕ ಟೋನಿ ಜೋಸೆಫ್ ಮತ್ತು ಅಮೆರಿಕಾದ ಡೇವಿಡ್ ರೀಶ್ ತಮ್ಮ ಪುಸ್ತಕಗಳ ಮೂಲಕ ಈ ವಿವಿಧ ಕಥನಗಳನ್ನು ಏಕೀಭೂತಗೊಳಿಸುವ ಕೆಲಸ ಮಾಡಿದ್ದಾರೆ. ಕೆಲವು ಪ್ರಕಟಣೆಗಳನ್ನು ಬಿಟ್ಟರೆ ಉಳಿದ ಅಧ್ಯಯನಗಳೆಲ್ಲಾ ವಿಜ್ಞಾನಿಗಳು ಉಳಿದ ವಿಜ್ಞಾನಿಗಳಿಗಾಗಿ ಬರೆದದ್ದೇ ಆಗಿದೆ. ಇಂಥಾ ಸಂಕೀರ್ಣ ವಿಷಯಗಳ ಬಗ್ಗೆ ಅರಿವಿಲ್ಲದವರಿಗೆ, ಇದು ಭಾರತಕ್ಕೆ ಎಷ್ಟು ಮುಖ್ಯ ಎಂಬುದು ಸುಲಭವಾಗಿ ಅರ್ಥವಾಗುತ್ತಿಲ್ಲ. ನಾನು ನಮ್ಮ ಈ ಪ್ರಯತ್ನದ ಮೂಲಕ ಯಾವುದೇ ತರ್ಕ ಮತ್ತು ದೃಷ್ಟಿಕೋನಗಳಲ್ಲಿ ರಾಜಿ ಮಾಡಿಕೊಳ್ಳದೇ ವಿಜ್ಞಾನದ ಬರವಣಿಗೆ ಮತ್ತು ಶಿಕ್ಷಿತ ಓದುಗರ ಮಧ್ಯೆ ಒಂದು ಸೇತುವೆಯಾಗಲು ಯತ್ನಿಸುತ್ತಿದ್ದೇವೆ.

ವಿನೋದ್ ಕೃಷ್ಣನ್: ಆರ್ಯನ್ನರು ಎಂಬ ಒಂದು ಗುಂಪು, ಚರಿತ್ರೆಗೆ ಸಂಬಂಧಿಸಿದಂತೆ ಇರಲೇ ಇಲ್ಲ ಎಂದು ನೀವು ಹೇಳುತ್ತಿದ್ದೀರಿ. ಈ ಆರ್ಯನ್ ಪದ ಹೇಗೆ ಜನಪ್ರಿಯವಾಯಿತು?

ಜಿ.ಎನ್. ದೇವಿ: ಆರ್ಯನ್ನರ ನೆಲೆಸುವಿಕೆ ಎಂಬ ಸಿದ್ಧಾಂತ 19ನೇ ಶತಮಾನದ ಕೊನೆಯಲ್ಲಿ ಪ್ರಚಲಿತಕ್ಕೆ ಬಂದಿತು. ಆ ಕಾಲದ ಫ್ರೆಂಚ್ ಮತ್ತು ಜರ್ಮನ್ ಭಾಷಾ ಶಾಸ್ತ್ರಜ್ಞರ ಕೃತಿಗಳ ಮೂಲಕ ಇದು ಚಾಲ್ತಿಗೆ ಬಂದಿತು. ಜರ್ಮನಿಯ ರಾಷ್ಟ್ರವಾದವನ್ನು ಹಿಟ್ಲರ್ ಈ ಸಿದ್ಧಾಂತದ ಬುನಾದಿಯ ಮೇಲೆ ಕಟ್ಟಿದ. ಈ ಆರ್ಯನ್ ಸಿದ್ಧಾಂತವನ್ನು ಚರಿತ್ರಕಾರರು ಮತ್ತು ಭಾಷಾ ಶಾಸ್ತ್ರಜ್ಞರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಸಂಸ್ಕೃತವು ಇಂಡೋ-ಯುರೋಪಿಯನ್ ಮತ್ತು ಇಂಡೋ-ಇರಾನಿಯನ್ ಭಾಷೆಗಳ ಮೂಲಕ ಹುಟ್ಟಿತು ಎಂಬ ಬಗ್ಗೆ ಆಸಕ್ತಿದಾಯಕ ಹೊಸ ಅಧ್ಯಯನಗಳು ಇತ್ತೀಚೆಗೆ ಬಂದಿವೆ. ಇಂಥಾ ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಈ ಆರ್ಯನ್ ಎಂಬುದು ಪಶ್ಚಿಮ ಏಷ್ಯಾ ಹಾಗೂ ವಾಯುವ್ಯ ಭಾರತಕ್ಕೆ ವಲಸೆ ಬಂದ ಜನರಲ್ಲ; ಬದಲಿಗೆ ಕಾಲಾನುಕ್ರಮದಲ್ಲಿ ಈ ಭೌಗೋಳಿಕ ಪ್ರದೇಶದಲ್ಲಿ ವಿಕಾಸಗೊಂಡ ಸಂಸ್ಕೃತಿ. ಈ ಸಂಸ್ಕೃತಿ ಹರಡಲು ಸಾವಿರ ವರ್ಷ ಬೇಕಾಯಿತು.

ವಿನೋದ್ ಕೃಷ್ಣನ್: ಧಾರವಾಡದ ನಿಮ್ಮ ವಾಸ್ತವ್ಯದ ಬಗ್ಗೆ ಹೇಳಿ.

ಜಿ.ಎನ್. ದೇವಿ: ಕಲ್ಬುರ್ಗಿಯವರ ದಾರುಣ ಹತ್ಯೆಯಾದ ಕೆಲವು ತಿಂಗಳುಗಳಲ್ಲಿ ಅಂದರೆ 2016ರಲ್ಲಿ ನಾನು ಧಾರವಾಡಕ್ಕೆ ಬಂದೆ. ಆ ಕಾರಣಕ್ಕೆ ನಾನು ದ್ವೇಷ ರಾಜಕಾರಣದ ವಿರುದ್ಧ ಮತ್ತು ವೈಚಾರಿಕ ದನಿಯನ್ನು ಪ್ರೋತ್ಸಾಹಿಸುವ ಯತ್ನಗಳಲ್ಲಿ ಭಾಗಿಯಾಗುತ್ತಿದ್ದೇನೆ. ಧಾರವಾಡ ಅಸಾಮಾನ್ಯ ಸಂಖ್ಯೆಯ ಸಂಗೀತಕಾರರು, ಬರಹಗಾರರು, ಚಿಂತಕರು, ಬುದ್ಧಿಜೀವಿಗಳ ನೆಲೆವೀಡು. ಪುಟ್ಟ ನಗರವಾದರೂ ಅದರ ಸಿದ್ಧಿಯ ಬಗ್ಗೆ ನನಗೆ ಅಪಾರ ಗೌರವ ಮೆಚ್ಚುಗೆ ಇದೆ.

(ಕನ್ನಡಕ್ಕೆ) ಕೆ.ಪಿ. ಸುರೇಶ್

ವಿನೋದ್ ಕೃಷ್ಣನ್

ಇದನ್ನೂ ಓದಿ : ಕಾರಿಗೆ ಬೆಂಕಿ: ಕೋಮು ಬಣ್ಣ ಹಚ್ಚಿದ ಬಿಜೆಪಿ ಶಾಸಕ ಸತೀಶ್‌ ರೆಡ್ಡಿ – ಪ್ರಕರಣ…

LEAVE A REPLY

Please enter your comment!
Please enter your name here