ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ತನಗೆ ಝೀರೋ ಟ್ರಾಫಿಕ್ ಬೇಡವೆಂದು ಜನತೆಯ ಪ್ರಶಂಸೆಗೆ ಪಾತ್ರವಾಗಿದ್ದರು. ಆ ಬಳಿಕ ಯಾವುದೋ ಒಂದು ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ತನ್ನನ್ನು ತಾನು Common Man (CM) ಎಂದು ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಅದು ಗಿಮಿಕ್ಕೋ, ಇನ್ನೇನೋ ಎನ್ನಿ.. ಆದರೂ ಅವರ ಮಾತಿಗೆ ಅವರ ಅಧಿಕಾರಾವಧಿ ಮುಗಿಯುವವರೆಗೆ ಬದ್ಧರಾಗಿದ್ದರೆ ಅವರು ಆ ವಿಷಯದಲ್ಲಿ ಗೌರವಾರ್ಹರಾಗಿಯೇ ಉಳಿಯುತ್ತಾರೆ.
ನಮ್ಮ ದೇಶದಲ್ಲಿ ಮಾತ್ರ ಆಡಳಿತದಲ್ಲಿರುವವರು More equal than the common man. ಕೆನಡಾ, ಉರುಗ್ವೆ, ಲ್ಯಾಟಿನ್ ಅಮೆರಿಕಾದ ಅನೇಕ ದೇಶಗಳಲ್ಲಿ ಅಲ್ಲಿನ ಅಧ್ಯಕ್ಷರು, ಪ್ರಧಾನಿಗಳು ಕಾಮನ್ ಮ್ಯಾನ್‌ನಂತೆಯೇ ಜೀವಿಸುತ್ತಾರೆ. ಉರುಗ್ವೆ ದೇಶದ ಅಧ್ಯಕ್ಷರಾಗಿದ್ದ ಹೊಸೈ ಮುಕ್ಸಿಕ ತನ್ನ ತೋಟದಲ್ಲಿ ಸ್ವಯಂ ದುಡಿಯುತ್ತಿದ್ದರು. ತನ್ನ ಕಾರನ್ನು ತಾನೇ ಚಲಾಯಿಸುತ್ತಾ ಅಧ್ಯಕ್ಷರ ಕಚೇರಿಗೆ ಯಾವುದೇ ಬೆಂಗಾವಲು ವಾಹನವಿಲ್ಲದೇ ಹೋಗುತ್ತಿದ್ದರು. ಅವರೆಲ್ಲರ ಪ್ರಕಾರ ಝೀರೋ ಟ್ರಾಫಿಕ್, ಹತ್ತಾರು ಬೆಂಗಾವಲು ವಾಹನ, ಕೈಗೊಂದು ಕಾಲಿಗೊಂದು ಆಳು ಎಂದರೆ ಅದು ನ್ಯಾಶನಲ್ ವೇಸ್ಟ್.. ಅದು ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ ಕೂಡಾ.
ಝೀರೋ ಟ್ರಾಫಿಕನ್ನು, (ನ)ಗಣ್ಯ ವ್ಯಕ್ತಿ ಭೇಟಿ ಕೊಡುವ ಊರಿಗೆ ಬೀಗ ಹಾಕುವುದನ್ನು ಜನರು ತಮ್ಮ ಬೇಡಿಕೆ ಈಡೇರಿಕೆಗಾಗಿ, ತಮ್ಮ ಅಸಮಾಧಾನ ತೋರ್ಪಡಿಕೆಗಾಗಿ ಪ್ರತಿಭಟಿಸುವ ಕಾರಣ ಮುಂದಿಟ್ಟು ಸಮರ್ಥಿಸುತ್ತಾರೆ. ಅಧಿಕಾರದಲ್ಲಿ ಕೂತವ ಟೀಕೆ, ಪ್ರತಿಭಟನೆಗಳನ್ನು ಎದುರಿಸಲು ಸದಾ ತಯಾರಿರಬೇಕು. ಯಾಕೆಂದರೆ ಅವರು ನಮ್ಮಿಂದ ಆಯ್ಕೆಗೊಂಡವರು. ನಮ್ಮ ಹಕ್ಕುಗಳನ್ನು ಕೇಳುವ, ಅದಕ್ಕಾಗಿ ಪ್ರತಿಭಟಿಸುವ ಹಕ್ಕು ನಮಗೆ ನಮ್ಮ ಸಂವಿಧಾನವೇ ಕೊಟ್ಟಿದೆ. ಪ್ರತಿಭಟನೆಗಳನ್ನು ದಮನಿಸುವುದು ಪ್ರಜಾತಂತ್ರಕ್ಕೆಸಗುವ ಅಪಚಾರ.
ಇರಲಿ ವಿಷಯಕ್ಕೆ ಬರುತ್ತೇನೆ.
ಇದನ್ನೂ ಓದಿ: ಗಂಗಾವತಿ: ಮಾದಿಗ ಸಮುದಾಯದ ಮೇಲೆ ಹಲ್ಲೆ ಪ್ರಕರಣ- ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದ ಹೋರಾಟಗಾರರು
ಇಂದು ನಮ್ಮ ಪಕ್ಕದೂರು ಕೊಣಾಜೆಯಲ್ಲಿರುವ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಆಗಮಿಸಿದ್ದಾರೆ. ಅದಕ್ಕಾಗಿ ಇಡೀ ಕೊಣಾಜೆಗೆ ಪೋಲೀಸರು ಬೇಲಿ ಹಾಕಿದ್ದಾರೆ. ನನ್ನೂರು ಪಜೀರಿಗೆ ಹೋಗಬೇಕೆಂದರೆ ನಮಗೆ ಸುಲಭ ಮಾರ್ಗ ಯುನಿವರ್ಸಿಟಿ ಕ್ಯಾಂಪಸ್‌ನ ಮಧ್ಯೆ ಹಾದು ಹೋಗುವ ರಸ್ತೆ. ಇಂದು ಬೆಳಗ್ಗೆ ಬಂದ್ ಮಾಡಿದ ಆ ರಸ್ತೆಯನ್ನು ಈ ಬರಹ ಬರೆಯುತ್ತಿರುವವರೆಗೂ ತೆರೆಯಲಾಗಿಲ್ಲ. ಯಾಕೆಂದರೆ ಅಶ್ವಥ್ ನಾರಾಯಣ್ ಯುನಿವರ್ಸಿಟಿಯಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದಾರೆ. ಕಾರ್ಯಕ್ರಮ ಯಾವತ್ತೋ ಮುಗಿದಾಗಿದೆ. ಆದರೆ ಅವರು ಯುನಿವರ್ಸಿಟಿಯ ಗೆಸ್ಟ್ ಹೌಸ್‌ನಲ್ಲಿ ಮೀಟಿಂಗ್‌ನಲ್ಲಿದ್ದಾರೆ ಎಂಬ ಕಾರಣ ನೀಡಿ ಇನ್ನೂ ಊರಿನ ಬೀಗ ತೆರೆದಿಲ್ಲ.
ಇದರಿಂದಾಗಿ ನಾವು ಪಜೀರಿಗರು ಮೂರು ಕಿಲೋಮೀಟರ್ ಸುತ್ತಿ ಬಳಸಿ ನಮ್ಮೂರಿಗೆ ಹೋಗಬೇಕು. ಇನ್ನು ಕೊಣಾಜೆಯ ಮತ್ತು ಯುನಿವರ್ಸಿಟಿಯ ಸುತ್ತ ಮುತ್ತಲಿರುವ ಹಳ್ಳಿಗರಿಗೆ ಇಂದು ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಊರಿಂದ ಹೊರ ಹೋಗದಂತೆ ಪೋಲೀಸರು ತಡೆಯುತ್ತಿದ್ದಾರೆ. ಹೊರಗಡೆ ಕೆಲಸಕ್ಕೆ ಹೋದವರು ಮಧ್ಯಾಹ್ನ ತಮ್ಮ ಕೆಲಸ ಮುಗಿಸಿ ಬಂದಿದ್ದರೆ ಅವರು ಅವರ ಮನೆಗೂ ಹೋಗುವಂತಿಲ್ಲ.. ಇದೆಂತಹ ನ್ಯಾಯ ಸ್ವಾಮೀ…? ಅಸೈಗೋಳಿಯಲ್ಲಿ ಇಳಿದು ಆಟೋದಲ್ಲಿ ಹೋಗಲೂ ಅಲ್ಲಿನ ಜನರಿಗೆ ಪೋಲೀಸರು ಬಿಡುತ್ತಿಲ್ಲ. ಇಲ್ಲಿಗೇ ಮುಗಿಯಲಿಲ್ಲ.. ಇನ್ನು ಆ ಮಾರ್ಗವಾಗಿ ಹರೇಕಳ, ಪಾವೂರು, ಇನೋಳಿ, ಮಲಾರ್, ಗ್ರಾಮಚಾವಡಿ ಮುಂತಾದ ಊರುಗಳಿಗೆ ಹೋಗುವ ಬಸ್‌ಗಳು ಮೂರು ಕಿಲೋ ಮೀಟರ್ ಸುತ್ತು ಹೊಡೆದು ನಡುಪದವು ಕ್ರಾಸ್, ಕಂಬಳಪದವು, ಪಜೀರು ದಾರಿಯಾಗಿ ಹೋಗಬೇಕು. ಸ್ವಂತ ವಾಹನವಿರುವವರು, ಬಸ್ಸಲ್ಲಿ ಹೋಗುವವರು ಹೇಗೂ ಸುತ್ತಿ ಬಳಸಿ ಹೋಗುತ್ತಾರೆ.
ಆದರೆ, ಪೋಲೀಸರು ಬೀಗ ಹಾಕಿದ ಊರಿನ ವೃದ್ಧರು, ರೋಗಿಗಳು ನಡೆದುಕೊಂಡೇ ಹೋಗಬೇಕು.. ಆಕಸ್ಮಾತ್ ಯಾರಾದರೂ, ಗರ್ಬಿಣಿಯರನ್ನು, ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಬೇಕಾದರೆ ಅವರನ್ನು ಹೊತ್ತುಕೊಂಡೇ ಹೋಗಬೇಕಷ್ಟೇ..?
ತನ್ನನ್ನು ತಾನು ಕಾಮನ್ ಮ್ಯಾನ್ ಎಂದು ಘೋಷಿಸಿದ, ಝೀರೋ ಟ್ರಾಫಿಕ್ ಬೇಡವೆಂದ ಮುಖ್ಯಮಂತ್ರಿ ತನ್ನ ಕೈ ಕೆಳಗಿನ ಮಂತ್ರಿಯ ಈ ಘನಂದಾರಿ ಕೆಲಸಕ್ಕೇನೆನ್ನುತ್ತಾರೆ…? ನಮ್ಮೂರಲ್ಲಿ ನಾನು ಹುಟ್ಟಿದಂದಿನಿಂದಲೂ ಯುನಿವರ್ಸಿಟಿ ಇರುವುದರಿಂದ ನಮ್ಮೂರಿಗೆ ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯಪಾಲರು ಬರುವುದು ಸಾಮಾನ್ಯ. ನಾನು ನನ್ನ ಈವರೆಗಿನ ಬದುಕಲ್ಲಿ ಯಾವೊಬ್ಬ ಮಂತ್ರಿಯಾಗಲೀ, ಮುಖ್ಯಮಂತ್ರಿಯಾಗಲೀ, ರಾಜ್ಯಪಾಲನಾಗಲೀ ಊರಿಗೆ ಬೀಗ ಹಾಕಿಸಿದ್ದನ್ನು ನೋಡಿಲ್ಲ. ಯುನಿವರ್ಸಿಟಿ ಕ್ಯಾಂಪಸ್ ಒಳಗಡೆ ಈ ಹಿಂದೆಯೂ ಮಂತ್ರಿಗಳು ಬಂದಾಗ ವಿದ್ಯಾರ್ಥಿಗಳು ತಮ್ಮ ಬೇಡಿಕೆ ಮುಂದಿಟ್ಟು ಪ್ರತಿಭಟಿಸಿದ್ದಾರೆ. ಇಂದು ಕ್ಯಾಂಪಸ್ ಫ್ರಂಟ್‌ನ ಹುಡುಗರು ಪ್ರತಿಭಟಿಸಿದ್ದು ಮೊದಲಲ್ಲ. ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿ ಕೂತವನು ಪ್ರತಿಭಟನಾಕಾರರ ಅಹವಾಲು ಆಲಿಸಬೇಕೇ ಹೊರತು ಹೇಡಿಯಂತೆ ಊರಿಗೆ ಬೀಗ ಹಾಕುವುದಲ್ಲ.
ಹಿಂದೆಲ್ಲಾ ಗಣ್ಯ ವ್ಯಕ್ತಿಗಳು ಕ್ಯಾಂಪಸ್‌ಗೆ ಬರುವುದಕ್ಕಿಂತ ಐದು ನಿಮಿಷ ಮುಂಚೆ ವಾಹನಗಳನ್ನು ತಡೆಯುತ್ತಿದ್ದರು.. ಈ ರೀತಿ ಊರಿಗೇ ಬೀಗ ಹಾಕಿದ ಮೊದಲ ಮಂತ್ರಿ ನಮ್ಮ ಸನ್ಮಾನ್ಯ ಅಶ್ವಥ್ ನಾರಾಯಣರೊಬ್ಬರೇ.. ಇದನ್ನು ಹೀಗೇ ಮುಂದುವರಿಯಲು ಬಿಟ್ಟರೆ ಇನ್ನು ಈ ಪರಿಪಾಠವನ್ನು ಎಲ್ಲರೂ ಮುಂದುವರಿಸುತ್ತಾರೆ.
–ಇಸ್ಮತ್ ಪಜೀರ್
ಇದನ್ನೂ ಓದಿ: ಬೆಳಗಾವಿ: ಪಾಲಿಕೆ ಚುನಾವಣೆಗೆ ಉಚಿತ ಶವಸಂಸ್ಕಾರದ ಭರವಸೆ ನೀಡಿದ ಬಿಜೆಪಿ!



Ismat avaraddu gimic ..Rahul Gandhi madodella gimic Alva ..elladaralli tappu hudko nimmanthavre deshakke marak..hogu Taliban gimic nodhogu
ನಮ್ಮ ಶಾಸಕರು, ಮಂತ್ರಿಗಳು ರಾಜಮಹಾರಾಜರನ್ನು ಮೀರಿಸುವಂತೆ ದರ್ಬಾರು ನಡೆಸುತ್ತಿದ್ದಾರೆ. ಇದನ್ನು ಮುಸ್ಲಿಮರು ವಿರೋದಿಸಿದರೆ, ಅವರು ತಾಲಿಬಾನ್! ಈ ರೀತಿಯ ಮೂರ್ಕರ ಬೋಪರಾಕಿನಿಂದ ಈ ದೇಶ ಇಂದು ಅದೋಗತಿಗೆ ಇಳಿದಿದೆ.